Posts

Showing posts from October, 2021

350 ಅಕ್ಷರ ಮಾಂತ್ರಿಕ

Image
#ಕನ್ನಡ_ರಾಜ್ಯೋತ್ಸವದ_ಅಂಗವಾಗಿ #ನುಡಿನಮನ #ಅಕ್ಷರ_ಮಾಂತ್ರಿಕ ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿತೊಂದು ಅಪ್ರತಿಮ ಪ್ರತಿಭೆ.! ಅನೇಕ ಏಳುಬೀಳುಗಳ ಕಂಡು ತಾನಾಗೇ ಹೊಳೆಯಿತು ಸ್ವಯಂಪ್ರಭೆ..! ಬರೀ ಮಾತನ್ನೇ ಬಂಡವಾಳ ವಾಗಿಟ್ಟು ಮೆಲ್ಲ ಮೆಲ್ಲನೇ ಬೆಳೆಯಿತೊಂದು ಹೆಮ್ಮರ.! ಹರಿತ ಲೇಖನಿಯಲಿ ಅಕ್ಷರವ ಬೆಸೆದು ಚುರುಕು ಮುಟ್ಟಿಸಿದ ಜಾದೂಗಾರ..! ಹಾಯ್, ಹಾಯ್ಬೆಂಗಳೂರು ಎನ್ನುತ್ತಲೇ ಭೂಗತ ಲೋಕವ ತೆರೆದಿಟ್ಟ ಜಾಣತನ..! ಕಾರ್ಗಿಲ್ ಕದನವ ನೇರ ಚಿತ್ರಿಸಿದ ಗಟ್ಟಿಗುಂಡಿಗೆಯ ಎಂಟೆದೆ ಭಂಟನ ದಿಟ್ಟತನ..! ಓ ಮನಸೇ ಇಂದ ಖಾಸ್ ಬಾತ್ ವರೆಗೆ ಬೃಹತ್ ಓದುಗರ ಸೆಳೆದ ತಾಂತ್ರಿಕ..! ವಿಭಿನ್ನ ಸಾಹಿತ್ಯದಲಿ ಜನಮನಗೆದ್ದ ಪತ್ರಿಕಾಲೋಕದ ಅಕ್ಷರ ಮಾಂತ್ರಿಕ..!         ಡಾ: B.N. ಶೈಲಜಾ ರಮೇಶ್

349 ಹಚ್ಚೋಣ ಬನ್ನಿ ಕರುನಾಡ ದೀಪ

Image
ಎಲ್ಲರಿಗೂ ನಮಸ್ಕಾರಗಳು🙏🙏 ಸಮಸ್ತ ಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐 #ಚಿತ್ರ_ಕಾವ್ಯ_ಸ್ಪರ್ಧೆ #ಹಚ್ಚ_ಬನ್ನಿ_ಕರುನಾಡ_ದೀಪವ ಹಚ್ಚೋಣ ಬನ್ನಿ ಕರುನಾಡ ದೀಪ ತೊಡೆಯಲೆಲ್ಲ ದ್ವೇಷಾಸೂಯೆಯ ಪಾಪ ಬೆಳಗಲಿ ಎಲ್ಲೆಲ್ಲೂ ಕನ್ನಡಮ್ಮನ ಕೀರ್ತಿ.! ಹರಡಲವಳ ಹೆಸರು ಈ ದೇಶದ ಭರ್ತಿ..!! ಹಚ್ಚಿ ಪ್ರಣತಿ ಕಸ್ತೂರಿ ತೈಲವನೆರೆದು ದೈದೀಪ್ಯಮಾನದಲುರಿಯಲಿ ಮೆರೆದು ಬೆಳಗಲಿ ಜ್ಞಾನ; ಅಜ್ಞಾನ ತಮ ಕಳೆದು..! ತೊಲಗಲೆಲ್ಲರ ಪಾಪಗಳು ಉರಿದುರಿದು ಉರಿದು..!! ಕನ್ನಡ ನಾಡಿದು ದೇವಮಂದಿರದಂತೆ ಪೊರೆವ ತಾಯಿ ಭುವನೇಶ್ವರಿಯಂತೆ ಕಾವಳೆಮ್ಮನು ತನ್ನ ಮಡಿಲ ತೆಕ್ಕೆಯಲಿರಿಸಿ..! ಧೀಮಂತ ಸಂಸ್ಕೃತಿಯ ಜ್ಞಾನದಮೃತವ ಕುಡಿಸಿ..!! ಎನಿತು ಸುಂದರ ಈ ಕರುನಾಡ ಮಂದಿರವು ಜೀವಂತ ನೆಲೆ ಆ ನಿತ್ಯ ಹರಿದ್ವರ್ಣವೂ ಜೀವಸೆಲೆಗಿಹುದು ಜೀವನದಿ ಕಾವೇರಿ..! ಹೊಳೆಯುತಿದೆ ಶಿಲ್ಪಕಲೆ ವೈಭವದ ಸಿರಿ..!!      ಡಾ: B.N. ಶೈಲಜಾ ರಮೇಶ್

310 ಪರಿಸರ

Image
#ಪರಿಸರ ಸ್ವರ್ಗವೇ ಧರೆಗಿಳಿದಂತೆ.! ಈ ಭವ್ಯ ಪ್ರಕೃತಿ ಮಾತೇ ನದಿ ನದ ನೆಲ ಜಲ ಸುಂದರ ರಸಋಷಿಯ ಕಾವ್ಯವೀ ಪರಿಸರ.! ಎಲ್ಲೆಲ್ಲಿ ನೋಡಲಿ ಹಸಿರು.! ಪರಿಸರ ನಮ್ಮೆಲ್ಲರ ಉಸಿರು ಬಾನೆತ್ತರಕ್ಕೆ ಚಾಚಿದ ತರುಗಳು.! ಸ್ವಚ್ಛಂದ ಹಾರುವ ಖಗಗಳು.! ಸುತ್ತಲೂ ಗಗನಚುಂಬಿ ಪರ್ವತ.! ತಣ್ಣನೆ ಬೀಸುವ ಮಂದಮಾರುತ ಅದ್ಭುತವೀ ಸೃಷ್ಟಿಯ ಸೊಬಗು ನಿಸರ್ಗ ದೇವತೆಗಿದು ಮೆರುಗು.! ರಕ್ಷಿಸಬೇಕಿದೆ ಹಾಳುಗೆಡವದೇ ಕಾಪಿಡುವ ಹೊಣೆ ನಮ್ಮದೇ.! ಸ್ವಚ್ಛವಿದ್ದರೇ ತಾನೇ ಪರಿಸರ.! ನೆಮ್ಮದಿಯ ಬದುಕಿಗೆ ಆಧಾರ.!         ಶೈಲಜಾ ರಮೇಶ್

317 ಶಿವಸ್ತುತಿ

Image
ಚಿತ್ರದೊಂದಿಗೆ ಶಿವಸ್ತುತಿ🙏 ಭಸ್ಮವಿಲೇಪಿತ ಚಂದ್ರಮುಕುಟ ಹರ ತ್ರಿಶೂಲ ಢಮರುಗಧಾರಿ ಸದಾಶಿವ ಬಿಲ್ವದಳಪ್ರಿಯ ಜಟಾಜೂಟಧರ ನಾಗಾಭರಣ ಗೌರೀಪ್ರಿಯ ವಲ್ಲಭ ಓಂಕಾರ ಪ್ರಣವ ಮಂತ್ರದಿ ಧ್ಯಾನಿಪೆ ನಿನ್ನನು ಕಾಯೋ ಎಮ್ಮನು ಗಂಗಾಧರ ಶಿವ          ಶೈಲೂ.....

321 ರುಬಾಯಿ

Image
#ರುಬಾಯಿ #ಚೈತ್ರದ_ಚಿಗುರು 1).  ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿ0ದೆತ್ತ ಸಂಬಂಧ ಕೋಕಿಲ ಹೇಳೆಲೆ ಚೈತ್ರದ ಚಿಗುರು ತಂದಿದೆ ಮನಕಾನಂದ ಕೊರಳೆತ್ತಿ ಇಂಪಾಗಿ ಕುಹೂ ಕುಹೂ ಹಾಡೆಲೆ 2). ನಿಸರ್ಗದ ಬದಲಾವಣೆ ತಂದಿದೆ ಹರುಷ ಋತುಮಾನದ ಚಿತಾವಣೆಯಿದು ಪ್ರತಿ ನಿಮಿಷ ಈ ಚೈತ್ರ ತಂದ ಚಿಗುರಲೆನೋ ಸಂಭ್ರಮ ಕೈಬೀಸಿ ಕರೆತಂದಿದೆ ಸಡಗರದ ನವ ವರುಷ     ಶೈಲಜಾ ರಮೇಶ್

323 ಹೀಗೇಕೆ ನಮ್ಮ ಬದುಕು

Image
#ಕಥನ_ಕವನಸ್ಪರ್ಧೆ #ಹೀಗೇಕೆ_ನಮ್ಮ_ಬದುಕು? ಹೀಗೇಕೆ ನಮ್ಮ ಬದುಕು ತಿನ್ನಲಿಲ್ಲ ಹೊಟ್ಟೆ ತುಂಬ ಅನ್ನ ಉಡಲೂ ಇಲ್ಲವಲ್ಲ ಮೈತುಂಬ ಬಟ್ಟೆ ನಮ್ಮ ಪಾಪವೇನಿಹುದು ಇಲ್ಲಿ ನಾವೇಕಾದೆವು ಬಡವರು? ಇರಲೊಂದು ಸೂರಿಲ್ಲ ನಮ್ಮದೆನಿಸುವ ಸ್ಥಳವಿಲ್ಲ ಕೊಳವೆಗಳೇ ನಮ್ಮ ಅರಮನೆ ಹರುಕುಮುರುಕಿನ ಹೊದಿಕೆ ನಾವೇಕಾದೆವು ಬಡವರು? ಬೇಡಿ ತಿನ್ನುವ ಕರ್ಮ ಆಯ್ಕೆಗಳೇನಿದೆ ನಮಗಿಲ್ಲಿ ಕೈನೀಡಿ ಕೊಟ್ಟದ್ದಷ್ಟೇ ಪರಮಾನ್ನ ಕೇಳುವರಾರಿಲ್ಲ ಸುಖದುಃಖ ನಾವೇಕಾದೆವು ಬಡವರು? ಆಟಪಾಠಗಲಿಲ್ಲ ಎಮಗೆ ಶಾಲೆಯಂತೂ ಕನ್ನಡಿಯ ಗಂಟು ವಿದ್ಯೆಎಂಬುದು ಹಣವುಳ್ಳವರಿಗೆ ಮಾತ್ರ ಇನ್ನೆಲ್ಲಿಯದು ಅಕ್ಷರದ ಜ್ಞಾನ.? ನಾವೇಕಾದೆವು ಬಡವರು          ಶೈಲಜಾ ರಮೇಶ್

324 ನಮ್ಮ ಊರು ನಮ್ಮ ಹೆಮ್ಮೆ

Image
#ನಮ್ಮ_ಊರು_ನಮ್ಮ ಹೆಮ್ಮೆ ನಮ್ಮ ಊರು ಬೆಂಗಳೂರು ವಿವಿಧತೆಗಳ ತವರೂರು ಪ್ರಪಂಚದ ನಾನಾ ತಾಣಗಳ ಜನಜಂಗುಳಿಗುಂಟಿಲ್ಲಿ ನೆಲೆ ಕೆಂಪೇಗೌಡರ ಬೆಂದಕಾಳೂರು ಕರ್ನಾಟಕದ ರಾಜಧಾನಿ ನನ್ನ ತವರು ಸಿಲಿಕಾನ್ ಸಿಟಿಎಂಬ ಹೆಸರು ತಂತ್ರಜ್ಞಾನದಲ್ಲಿ ಮೇರು ನಗರ ದೇವತೆಯಿಲ್ಲಿ ಅಣ್ಣಮ್ಮ ಜನತೆಯ ಸದಾ ಕಾಪಿಡುವಳಮ್ಮ ಅವಳ ಜೊತೆಗಿದೆ ಸಕಲ ದೇವಗಣ ನಿರಂತರ ರಕ್ಷಣೆಯಲ್ಲೇ ಮನ ಹಳ್ಳಿಯ ಸೊಗಡಿನ ಜಾತ್ರೆಯಿದೆ ಬಸವನ ಕಡಲೆಕಾಯಿ ಪರಿಷೆ ಬೃಹತ್ ಬಸವನ ಜೊತೆ ಗಣಪ ನಂಬಿಬಂದವರನ್ನೆಲ್ಲ ರಕ್ಷಿಪ ಸಂಕ್ರಾಂತಿಯ ಬೆರಗಿಗಿಲ್ಲಿ ಸಾಕ್ಷಿ ಗವಿ ಗಂಗಾಧರೇಶ್ವರ ದೇಗುಲ ಸ್ವಾಮಿ, ಭಕ್ತನ ಪ್ರೀತಿಗಿಲ್ಲಿ ಸಾಕ್ಷಿ ರಾಮಾನಂಜನೆಯ ಗುಡ್ಡ ವಿಶಾಲ ಉದ್ಯಾನದ ಜೀವಂತಿಕೆ ವಿಖ್ಯಾತ ಲಾಲ್ಬಾಗ್ ಕಬ್ಬನ್ಪಾರ್ಕ್ ವ್ಯಾಪಾರೋದ್ಯಮಕೇ ಹೆಸರು ಸಾಂಸ್ಕೃತಿಕತೆಗೂ  ಉಸಿರು ಇಲ್ಲಿ ಇಲ್ಲವೆಂಬುದೇ ಇಲ್ಲ ಪ್ರೀತಿಗೂ ಸೈ ದ್ವೇಷಕ್ಕೂ ಜೈ ಆಚಾರ ವಿಚಾರಕ್ಕಿದೆ ತಾವು ಅನೈತಿಕತೆ ಅನಾಚಾರದ ಟಾವು ವಿಸ್ಮಯದ ಭ್ರಮಾಲೋಕ ವಿಳಾಸ ಜೀವನಕೆ ನಾಕ ಜೊತೆಗಿದೆ ವಿವಿಧ ಪ್ರಾಂತ್ಯಗಳ ಹೆಸರಾಂತ ಬಗೆಬಗೆಯ ನಳಪಾಕ ಜಗವ ಸುತ್ತದಿದ್ದರೂ ಸರಿ ಇಲ್ಲೇ ಇದೆ ಸರ್ವ ಜಗದ ಸಿರಿ ಇದು ನನ್ನ ಮೆಚ್ಚಿನ ತವರೂರು ನನ್ನ ಹೆಮ್ಮೆಯ ಬೆಂಗಳೂರು    ಶೈಲಜಾ ರಮೇಶ್

325 ಶಾರದ

Image
#ಶಾರದ ವೀಣಾಪಾಣಿಯಿವಳು ಬ್ರಹ್ಮನ ರಾಣಿ ಅಕ್ಷಮಾಲಾ ಪುಸ್ತಕ ವೀಣಾಧಾರಿಣಿ ವಿದ್ಯೆಯಿತ್ತು ಪಾಲಿಸೆ ವಿದ್ಯಾದಾಯಿನಿ ಸಕಲರ ಪೊರೆಯಮ್ಮ ಬುದ್ಧಿಶಿರೋಮಣಿ ಶುಭ್ರವಸ್ತ್ರಾನ್ವಿತೆ  ಶುಭ್ರರೂಪಧರೆ ಶ್ವೇತಕಮಲದಲಿ ವಾಸಿಪ ಮಧುರೆ ಹಂಸವಾಹಿನಿ ಮಾತೇ ಕಾಮಿತದಾಯಿನಿ ನೀಡಮ್ಮ ಶುಭಮತಿ ವಿದ್ಯಾಪ್ರದಾಯಿನಿ ಸಿದ್ಧಿ ಶಿರೋಮಣಿ ಬುದ್ಧಿಪ್ರಕಾಶಿನಿ ತ್ರೈಲೋಕ್ಯ ಪೂಜಿತೇ ಪ್ರಸನ್ನ ವದನೆ ಜಯತು ಸರಸ್ವತಿ ಸುರಸ ಅಮೃತವಾಣಿ ಸದ್ಭುದ್ಧಿ ನೀಡಮ್ಮ ವರವಿದ್ಯಾಭೂಷಿಣಿ          ಶೈಲೂ.....

297 ಸಂಸಾರನೌಕೆ

#ಸಂಸಾರನೌಕೆ ಬಂಡಿಯ ತೆರನಂತೆ ಈ ಬದುಕು ಎಳೆವರಲಿ ತಾಳ್ಮೆ ಸಮರಸವಿರಬೇಕು ನೊಗಕ್ಕೆ ಕಟ್ಟಿದ ಎತ್ತುಗಳಂತೆ ಸತಿಪತಿ ಸರಾಗ ನಡೆಸೆ ಬದುಕು ಹೂವಿನ ರೀತಿ ಬದುಕೊಂದು ಅನಂತ ವಿಶಾಲ ಶರಧಿ ಸಂಸಾರ ನೌಕೆಗೆ ದಾಂಪತ್ಯವೇ ಪರಿಧಿ ಕಷ್ಟ -  ಸುಖದ  ಏರಿಳಿತಗಳು  ಸಹಜ ಮುಳುಗದಂತೆ ನಡೆಸಬೇಕು ಮನುಜ ಎರಡು ಶುಭ್ರ ಮನಸುಗಳ ಶುಭ ವೇದಿಕೆ ಸಂಸಾರ  ಬಂಧನದಲ್ಲಿ ಈ  ಬಾಳ  ನೌಕೆ ಸುಖದುಃಖಗಳ ಭಾರಿ ಅಲೆಗಳಿಗ್ಹೆದರದೆ ಸುಖದ ತರಂಗ ಪ್ರವಹಿಸುತ್ತಿರಲಿ ಮನದೆ ನಂಬಿಕೆ ಮೇಲೆಯೇ ನಿಂತಿಹುದು ಬಾಳು ಸುಖದಾಂಪತ್ಯದಲಿ ಸವಿಯಿಹುದು ಕೇಳು ತಾಳ್ಮೆ ಸಹನೆಯೇ ಸುಖಸಂಸಾರದ ಗುಟ್ಟು ನಗುತ್ತಿರಬೇಕು  ನೋವುಗಳ  ಅವಿತಿಟ್ಟು             ಶೈಲಜಾ ರಮೇಶ್

348 ಆಧುನಿಕ ವಚನ

Image
#ಆಧುನಿಕ_ವಚನ #ಶೀರ್ಷಿಕೆ #ಸಂತೆ_ಒಳಗೆ_ಚಿಂತೆ_ಬೇಡ ಸಲ್ಲದ ಆಲೋಚನೆಗಳು ಮನದಲಿದ್ದರೆ ಚಿಂತೆಯಾಗದಿದ್ದೀತೇ.? ಚಿಂತೆಗಳ ಕದನದಲಿ ಭುಗಿಲೆದ್ದ ಭಾವಗಳು ಸಿಡಿಯದಿದ್ದೀತೆ.? ಚಿಂತೆಯ ಸಂತೆಯೊಳಗೇ ಬೇಯುತ ದೈವವ ಕಡೆಗಣಿಸಿಬಿಟ್ಟರೆ ಮೆಚ್ಚನಾ ನಮ್ಮ ಶ್ರೀಶೈಲನಾಥೇಶ್ವರ..!!    ಡಾ: B.N. ಶೈಲಜಾ ರಮೇಶ್

347 ಚುಟುಕುಗಳು

Image
#ಚುಟುಕು_ಸ್ಪರ್ಧೆ #ರವಿ_ಮನಸು ಜಗಕೆ  ನೀಡಿ  ಹೊನ್ನ ಬೆಳಕು ಕಳೆವನವನು   ತಮದ   ಕೊಳಕು.! ಚೈತನ್ಯವನಿತ್ತು  ಜನ  ಮನಕೆ ಉತ್ತೇಜಿಸುವುದು  ರವಿ  ಬಯಕೆ.! #ಕವಿ_ಕನಸು ರವಿಗೂ ಮುಟ್ಟಲಾಗದ್ದನ್ನು ಕವಿಗೆ ಕಾಣುವ ಹಂಬಲ.! ಸೃಷ್ಟಿ ಸೊಬಗು ವರ್ಣಿಸಲು ಕವಿಗೆ ಪದಗಳ ಬೆಂಬಲ..!          ಶೈಲಜಾ ರಮೇಶ್

346 ಹೊಂಬಿಸಿಲು

Image
#ಕವನಸ್ಪರ್ಧೆ #ಹೊಂಬಿಸಿಲು ಉದಯಿಸಿದನಿದೋ ನೋಡು ಭಾಸ್ಕರ ಹೊಂಬಿಸಿಲನು ಚೆಲ್ಲಿ..! ಬಾನಂಗಳದಲಿ ಹೊನ್ನಿನೆಳೆಯ ಚಿತ್ತಾರ ಎಳೆದನವ ರಂಗವಲ್ಲಿ..! ಹೊಂಬಿಸಿಲ ಬಿಸಿ ಸ್ಪರ್ಶಕೆ ನೀಗಿತು ಜಗದ ಜಡ ಚೇತನ..! ಲಗುಬಗೆಯಲಿ ಮಿಂಚಿ ಸುಳಿದಾಡಿತು ಜಗದ ಜನಜೀವನ..! ಕವಿದ ಕತ್ತಲ ಅಜ್ಞಾನ ಎಲ್ಲ ಜಡತ್ವ ಮೆಲ್ಲಮೆಲ್ಲ ಸರಿಯಿತು..! ಉತ್ತೇಜಿಸುವುದು ಹೊಂಬಿಸಿಲ ತತ್ವ ಚರಾಚರ ಜಗ ಹೊಳೆಯಿತು..!              ಶೈಲಜಾ ರಮೇಶ್

345 ಚಿತ್ರ ಕವನ ( ಮಸನದಲ್ಲಿ ಮಮತೆ)

Image
#ಮಸಣದಲ್ಲಿ_ಮಮತೆ (ಈ ಚಿತ್ರಕ್ಕೆ, ಹಾಗೂ ಶೀರ್ಷಿಕೆಗೆ ಈ ಕವನ ಎಷ್ಟರ ಮಟ್ಟಿಗೆ ಹೊಂದುತ್ತೋ ಗೊತ್ತಿಲ್ಲ... ಆದರೆ ಈ ಚಿತ್ರ ನೋಡಿದಾಕ್ಷಣ ನನ್ನ ಮನದಲ್ಲಿ ಮೂಡಿದ ಸಾಲುಗಳಿವು😊 ) ಬದುಕಯಾತ್ರೆ ಮುಗಿದಾಕ್ಷಣ ಮರಣ ಶಯ್ಯೆ ಸನ್ನಿಹಿತ..! ಕೊರಗಿ ನಲುಗಿ ಬದುಕುವುದಕ್ಕಿಂತ ಮರಣವೇ ಬಲು ಹಿತ..! ಹುಟ್ಟು ನಮ್ಮ ಕೈಯಲ್ಲೇನಿಲ್ಲ ಸಾವೂ ಕೂಡ ಅವನಧೀನ..! ಎಷ್ಟೇ ಬಾಳಿ ಬದುಕಿದರೂ ಕೊನೆಗೆ ಖಂಡಿತ ಪರಾಧೀನ..! ಹುಟ್ಟಿದ್ದೆಲ್ಲಾ ಸಾಯಲೇಬೇಕು ಬೇಡವೆಂದರೂ ಪುನರಪಿ ಜನನ..! ಹುಟ್ಟಿದ ಮೇಲೆ ಹೆಸರುಗಳಿಸಬೇಕು, ಮತ್ತದೇ ಪುನರಪಿ ಮರಣ..! ಸಾವಿನಾಚೆಗೇನಿಹುದು ನಿಗೂಢ ಸತ್ತವರೆಲ್ಲ ಹೋದರೆಲ್ಲಿ?..! ತನ್ನೊಡಲಲ್ಲೇ ಅಡಗಿಸಿಹುದು ಬ್ರಹ್ಮಾಂಡ ಸತ್ತವರಾತ್ಮಕೆ ಬೆಳಕು ಚೆಲ್ಲಿ.! ದೇಹಕ್ಕಷ್ಟೇ ಮರಣ ಸಂಸ್ಕಾರ ಆತ್ಮವಿಹುದು ನಿತ್ಯ ಸತ್ಯ ನಿರಂತರ..! ಹಳೆಉಡುಪು ಬದಲಿಸಿದಂತೆ ಮತ್ತೊಂದು ದೇಹದಿ ಆತ್ಮಸಂಚಾರ..! ಹುಟ್ಟುಸಾವು ಸೃಷ್ಠಿಯ ನಿರಂತರ ಪ್ರಕ್ರಿಯೆ ಮಾಗಿದ ದೇಹ ಮಣ್ಣಾಗಬೇಕು..! ಬದುಕಿದ್ದಾಗ ಸತ್ಯಮಾರ್ಗದಲ್ಲಿದ್ದು ಸಾವಿನಾಚೆಗೂ ಹೆಸರುಳಿಸಬೇಕು..!      ಡಾ: B.N. ಶೈಲಜಾ ರಮೇಶ್

344 ಆಧುನಿಕ ವಚನ

Image
#ಆಧುನಿಕ_ವಚನ #ಶೀರ್ಷಿಕೆ  #ಹುಲಿತೊಗಲಿನ_ಮಾಯೆ ಸುತ್ತೆಲ್ಲ ಕಳ್ಳರು ಖೂಳ ಖದೀಮರು ಸಭ್ಯರಂತೆ ನಟಿಸುವ ವ್ಯಾಘ್ರನಂಥವರು ಸುಳ್ಳಲ್ಲೇ ಮನೆಕಟ್ಟಿ ಮೆಟ್ಟಿ ನಿಲ್ಲುವವರು ಸಮತ್ವಕೆ ಬೆಲೆಕೊಡದೆ ಬಡಿದು ತಿನ್ನುವರು ಸುಲಿಗೆಕೋರರಿವರು ಮಹಾನ್ ವಂಚಕರು ಸ್ವಾರ್ಥದಾಸೆಗೆ ಕಾಡನೂ ಕೊಳ್ಳೆಹೊಡೆವವರು ಸಿಹಿಮಾತಲೇ ಸೆಳೆವ ನಯವಂಚಕರಿರಲು ಸತ್ಯಧರ್ಮಕೆ ರಕ್ಷಕರಾರಯ್ಯ ಶ್ರೀಶೈಲನಾಥೇಶ್ವರ..!         ಡಾ : B.N ಶೈಲಜಾ ರಮೇಶ್

343 ಒಗಟಿನ ರೂಪದ.ಚುಟುಕು

Image
#ಒಗಟಿನ_ರೂಪದ_ಚುಟುಕು_ಸ್ಪರ್ಧೆ ಹನ್ನೆರಡೂರಿನ ನೆಂಟನಿವನು ಬಾಳಿಗೆ ಭಂಟ ಒಂದೊಂದೇ ಪುಟವನು ಸರಿಸಿ ಮೆಲ್ಲನೆ ಹೊರಟ ನೋವುನಲಿವು ಜೊತೆ ಸುಖದುಃಖಗಳ ಕೊಡುತ ಎಲ್ಲರ ಬಾಳಲಿ ಹಾಸುಹೊಕ್ಕಾಗುತ ಬೆರೆತಾಡುತ ಕಷ್ಟಕೋಟಲೆಗಳ ಸುರಿಮಳೆ ಈ ತನಕ ಸಾಕೆನ್ನುತ ಭರವಸೆಯ ಬೆಳಕಿತ್ತು ಮುಂದೆ, ಹೊರಟ ಹೇಳುತ್ತ ಟಾಟಾ..!!          ಶೈಲಜಾ ರಮೇಶ್

342 ಕವಲೊಡೆದ ಬದುಕು

Image
#ಕವನಸ್ಪರ್ಧೆ #ಕವಲೊಡೆದ_ಬದುಕು ಬದುಕು ಇತ್ತಂದು ಸುಮಧುರ ಸುಂದರ ಪ್ರೀತಿಪ್ರೇಮಗಳ ಬಾಂಧವ್ಯದ ಹಂದರ ಅದೆಲ್ಲಿ ಮೂಡಿತೋ ದಾಂಪತ್ಯದಲ್ಲಿ ಒಡಕು ಅಂದಿನಿಂದಾಯ್ತು ನಮ್ಮದು ಕವಲೊಡೆದ ಬದುಕು..! ಅರೆಕ್ಷಣವೂ ಬಿಟ್ಟಿರಲಾರದಂತ ಪ್ರೇಮ ಬಂಧ ನಮ್ಮಿಬ್ಬರ ನಡುವಲ್ಲಿತ್ತಂದು ಅದೆಂಥ ಚಂದ..! ಬೀಸಿತ್ತೆಲ್ಲಿಂದಲೋ ರಕ್ಕಸ ಬಿರುಗಾಳಿ ಬದುಕಿನ ಆಸೆಗಳಾಯ್ತಿಂದು ಚಲ್ಲಾಪಿಲ್ಲಿ ನಮ್ಮ ಭಾವಗಳ ಬೆಸೆದಿತ್ತು ಅದಮ್ಯ ಪ್ರೀತಿ ಎಂದಿಗೂ ಕಂಡಿರಲಿಲ್ಲ ಬೇರಾಗುವ ಭೀತಿ..! ಹರುಷದ ಹೊನಲಲ್ಲಿ ತೇಲುತ್ತಿತ್ತು ಬದುಕು ಆದರ್ಹೇಗಾಯ್ತಿಂದು ಬದುಕಲ್ಲಿ ಬಿರುಕು..! ಅಂದುಕೊಂಡಂತೆಯೇ ನಡೆಯದು ಜೀವನ ಜೀವನವಿದು ನೋವು ನಲಿವಿನ ಸಮ್ಮಿಲನ..! ಇಂದು ನನ್ನದಾಗಿದೆ ಕವಲೊಡೆದ ಬದುಕು ನಾಳೆ ಕಾಣಬಹುದು ಬದುಕು ಬೆಳಗುವ ಬೆಳಕು..!             ಶೈಲಜಾ ರಮೇಶ್

341, ಜಾನಪದ ಶೈಲಿ ಕವನ

Image
#ಜಾನಪದ_ಶೈಲಿ_ಕವನ #ಶೀರ್ಷಿಕೆ #ಹಳ್ಳಿಯಲ್ಲಿ_ಅರಳಿದ_ಮಲ್ಲೇ ಏನ್ ಚಂದ ಕಾಣ್ತೀ ಹುಸಿ ನಗೆಯ ಗರತಿ ಅಂದಾಕೆ ಒಡತಿಯೇ ನೀನು|| ಓ ಹೆಣ್ಣೇ|| ನೀ ಹಳ್ಯಾಗೆ ಅರಳಿದ ಮಲ್ಲೇ.. ಹುಬ್ಬು ಕಾಮನಬಿಲ್ಲು ಲಜ್ಜೆಯಾ ಕಣ್ಣುಗಳು ಚಂಚಲ ನೋಟವಿಲ್ಲ||ಓ ಹೆಣ್ಣೇ|| ನೀ ಹಳ್ಯಾಗೆ ಅರಳಿದ ಮಲ್ಲೇ.. ನಾಗರ ಜಡೆಯನ್ನ ಎತ್ಕಟ್ಟಿ ತುರುಬನ್ನ ಘಮ್ಮೆನ್ನೋ ಮಲ್ಲಿಗಿ ಮುಡಿದು||ಓ ಹೆಣ್ಣೇ| ನೀ ಹಳ್ಯಾಗೆ ಅರಳಿದ ಮಲ್ಲೇ.. ದುಂಡಾದ ಮುಖದಲ್ಲಿ ಸೇಬಂತಾ ಕದಪಲ್ಲಿ ನಾಚಿಕೆ ಹರಡೈತೆ || ಓ ಹೆಣ್ಣೇ|| ನೀ ಹಳ್ಯಾಗೆ ಅರಳಿದ ಮಲ್ಲೇ.. ದೇವತೆ ಕಳೆ ಐತಿ ಮುಗೀಬೇಕು ಕೈಯೆತ್ತಿ ನೀಯಾರ ಮನೆಯ ದೀಪ || ಓ ಹೆಣ್ಣೇ|| ನೀ ಹಳ್ಯಾಗೆ ಅರಳಿದ ಮಲ್ಲೇ..      ಶೈಲಜಾ ರಮೇಶ್

340 ನಗುತ ನಗುತ ಬಾರೋ

Image
ನಗುತ ನಗುತ ಬಾರೋ ಬೇಗಾ ಎನ್ನ ಮನದ ಗುಡಿಗೆ ಈಗ ನಗುತ ನಗುತ ಬಾರೋ ಬೇಗಾ........ ಯಮುನಾ ನದಿಯ ತೀರದಲ್ಲಿ ಹಾಲು ತುಂಬಿ ಕೊಡಗಳಲ್ಲಿ ಕಾದಿಹಳೂ  ರಾಧೇಯಿಲ್ಲಿ ಬಾರೋ ಬೇಗ  ನಗುವ ಚೆಲ್ಲಿ ಮೂಡಿ  ಮಂದಹಾಸ  ಮನದಿ ಬರುವಿಗಾಗೇ ಕಾದೆ ಮುದದಿ ಇರಲು ಸದಾ ನಿನ್ನ ಸನ್ನಿಧಿ ಸುಖಿಯು ಬಹಳ ನಾನು  ಜಗದಿ ಮುರಳಿ ಲೋಲ ನಗುತ ಬಾರೋ ಎನ್ನ ಮೇಲೆ ಕರುಣೆ ತೋರೋ ಕಾದು ಕುಳಿತ ಪ್ರಕೃತಿ ಯೆಡೆಗೆ ಪರಮ ಪುರುಷ ದಯದಿ  ಬಾರೋ...                    ಶೈಲೂ........

339 ಇದೇನಿದು ಕೃಷ್ಣ.?

Image
ಹೇ ಕೃಷ್ಣ........ ಎನಿದೇನಿದು ನಿನ್ನೀ ಕಥೆ..... ವ್ಯಥೆ.... ಜಗದೋದ್ಧಾರಕನು ನೀನು ಉದ್ಧರಿಸ ಬಂದೆ ನಮ್ಮೆಲ್ಲರನು ಪೊಡವಿಗೊಡೆಯ  ನೀನು ಆಯ್ದುಕೊಂಡೆಯೇಕೆ ನಿನ್ನ ಹುಟ್ಟಿಗೆ ಕಾರಾಗೃಹವನು ಅನಾಥರಕ್ಷಕನು ನೀನು ತೊರೆದೆಯೇಕೆ  ತಾಯ್ತ0ದೆಯನು ಸರ್ವಜನಪ್ರಿಯ ನೀನು...  ಆದರೂ.. ಅಪ್ರಿಯವಾದೆಯೇಕೆ  ಮಾವನಿಗೆ ನೀನು ಸರ್ವ ರಕ್ಷಕನು ನೀನು...  ಆದರೂ.. ರಕ್ಷಣೆಯಿಲ್ಲವಾಯ್ತೆಕೆ  ನಿನಗೆ? ದುಷ್ಟದಮನನು  ನೀನು ದುಷ್ಟರಿಂದಲೇ  ನಿನಗೆ  ತೊಂದರೆಯಾಯ್ತೆಕೆ? ಜಗತ್ತಿಗೇ  ಉಣಿಸುವ  ಜಗತ್ಪಾಲಕನು ನೀನು ಕುಡಿದೆಯೇಕೆ ಪೂತನಿಯ  ವಿಷಪೂರಿತ  ಹಾಲನ್ನು ಸರ್ವಜನರ ಪ್ರಿಯ ಬಂಧು ನೀನು...    ಆದರೂ... ಪಡೆದೆಯೇಕೆ ದ್ವೇಷಿಸುವ  ಬಾಂಧವರನು ರಾಕ್ಷಸಾಂತಕ ನೀನು....  ನಿಜ... ಹಸಿಗೂಸಾದಾಗಲೇ  ಸಂಹರಿಸಬೇಕಾಯ್ತೇ ರಕ್ಕಸರನು ಜಗವ ಪಾಲಿಪ ಸ್ವಾಮಿ ನೀನು ಆಗಬೇಕಾಯ್ತೆಕೋ ನೀ  ಗೋಪಾಲಕನು ಸಮಸ್ತ್ರರಿಗೆ  ಅನ್ನ ಕೊಡುವ ಅನ್ನ ದಾತನು ನೀನು ಆದರೂ  ಕದ್ದು ತಿಂದೆಯೇಕೆ  ಪಾಲ್ಬೆಣ್ಣೆಯನು ತಿನ್ನಬೇಕಾಯ್ತೆಕೋ ಅಡವಿಯ ಹಣ್ಣುಗಳನ್ನು ಜಗದ ಸೂತ್ರಧಾರನು.ನೀನು ಬಂಧಿಸಿದಳೇಕೆ ಯಶೋಧೆ ಕಟ್ಟಿ ನಿನಗೆ  ಸೂತ್ರವನು ಶೇಷಶಯನನು  ನೀನು, ದ್ವೇಷಿಸಿದನೇಕೆ  ನಿನ್ನ ಕಾಳಿಂಗನು ಸಮಸ್ತ ಸೃಷ್ಟಿಯ ಒಡೆಯನು ನೀನು ಆದರೂ , ಕರೆಯಿಸಿಕೊಂಡೆಯೇಕೆ ಕಳ್ಳ ನೆಂದು ನೀನು ಸಮಸ್ತ ಸಂಕಟ ಪರಿಹಾರಕನು ನೀನು ಆದರೂ .ಅನುಭವಿಸಬೇಕಾಯ್ತೇ ಅನೇಕ ಸಂಕಷ್ಟ ವನು ಸೃಷ್ಟಿಯ ಸಂಚಾಲಕನು ನೀನೆಂದು ತೋರಿಸಲೆಂದೇ ಆದ

338 ಹುಸಿನಗೆಯ ಬೀರಿ

Image
ಕಣ್ರೆಪ್ಪೆ  ಹಾಕದಲೇ ಹುಸಿ ನಗೆಯ ಬೀರಿ ಕುಡಿನೋಟದಿಂದೆನ್ನ ನೋಡದಿರು ಕೃಷ್ಣಾ ನಾಚಿ ನೀರಾಗಿದ್ದೇನೆ ನಾನು ಬೇಡಬೇಡ ವೆಂದರೂ ಎನ್ನಂತರಂಗದ  ಭಾವನೆಗಳು ಉಕ್ಕುಕ್ಕಿ ಬರುತ್ತಿವೆ ಹೇಳಲಾರೆ ನಾ  ಮನದ ಮಾತುಗಳ... ಅಂತರಾತ್ಮ ನೀನು ಎನ್ನಂತರಂಗವನರಿತಿದ್ದರೂ ಈ  ಪರಿ ಕಾಡುವೆಯೇಕೆ ನಿನ್ನೀ  ನೋಟದಾ ಸೆಳೆತ ಮರೆಸುತ್ತಿದೆ ಎಲ್ಲ ಮಾಯಾವಿ  ನೀನು ಜಗತ್ತನ್ನೆಲ್ಲನಿನ್ನಲ್ಲಡಗಿಸಿಕೊಂಡು ಸೃಷ್ಟಿಸಿದ್ದೀಯ  ಏಕಾಂತ ಬೆರೆಸಲಾರೆ ನೋಟಕ್ಕೆ ನೋಟ ಕರಗಿ ಹೋಗಿದ್ದೇನೆ ಲೀನವಾಗಿದ್ದೇನೆ ನಿನ್ನಲ್ಲೇ ನಾನು........                            ಶೈಲೂ...........

337 ಬಂದ ಆನಂದದಿಂದ

Image
ಬಂದ ಆನಂದದಿಂದ ಎನ್ನೊಡೆಯ ಬಂದ ಪರಮಾನಂದ ತಂದ ಶ್ರೀ ಕೃಷ್ಣ ಮುಕುಂದ ಕೊಟ್ಟಿದ್ದನ್ನ ಭಕ್ತಿಯಿಂದ ಪ್ರೀತಿಯಿಂದಲಿ.ತಿಂದ ಆಯಿತು ಮನಕಾನಂದ ಶ್ರೀ ಗೋವಿಂದ ತಂದ ಭಕ್ತಿಯಾ ಬಂಧ ಭಕ್ತಿಯಲೆಯಲಿ ತೇಲಿಸಬಂದ ನಿಜಭಕ್ತಿಗೆ ನಾ ನೊಲಿಯುವೆನೆಂದ ಇಂದು ನಾ  ನಿನ್ನವನೆಂದ ಇಂದಾಯಿತೇನಗೆ  ಅಮಿತಾನಂದ ಶ್ರೀಹರಿ ಗೋವಿಂದ ನಾಮವೇ ಚಂದ ಭಜಿಸುತ್ತಿದ್ದೇನವನ  ಸಂಭ್ರಮದಿಂದ                              ಶೈಲೂ.......

336 ಕೃಷ್ಣಯ್ಯ ಬರುತಾನೆ

Image
ಇಂದೆನ್ನ ಮನೆಗೆ  ಕೃಷ್ಣಯ್ಯ ಬರುತ್ತಾನೆ ನನ್ನೆಲ್ಲ ಭಾಂಧವರೆ ನೋಡಬನ್ನಿ ಹಸುವಿನಾ ನೊರೆಹಾಲು ಹಸನಾದ ಮೊಸರ್ಬೆಣ್ಣೆ ಅವನಿಗಾಗಿ ತಂದಿರುವೆ ಕದ್ದು ತಿನ್ನುತ್ತಾನಂತೆ ನೋಡಬನ್ನಿ ಕೊರಳಲ್ಲಿ ಕೌಸ್ತುಭ ಕೈಯಲ್ಲಿ ಕೊಳಲು ಕಾಲ್ಗೆಜ್ಜೆ ರಿಂಗಣವ  ಕೇಳಬನ್ನಿ ಅಂಬೆಗಾಲಿಡುತ್ತಾ ಮುದ್ದುಗರೆವುತ ಬರುತ್ತಾನೆ ಮುದದಿಂದವನ  ನೋಡಬನ್ನಿ ವನದ ಸೀಬೆಹಣ್ಣು, ಅಡವಿ ಕಾರೇಹಣ್ಣು ಮರದ ನೆರಳೆಹಣ್ಣು ಅವನಿಗಿಷ್ಟವಂತೆ  ಕೇಳಬನ್ನಿ ಅವನಿಗಿಷ್ಟದ್ದೆಲ್ಲ  ಜೋಪಾನಮಾಡಿಟ್ಟಿ ರುವೆ ಈಗ ತಿನ್ನುತ್ತಾನೆ  ನೋಡಬನ್ನಿ ಚಕ್ಕುಲಿ ಮುಚ್ಚೋರೆ  ಕರಿದ ಆವಲಕ್ಕಿಯ  ಮುದದಿಂದ  ಮಾಡಿರುವೆ  ನೋಡಬನ್ನಿ ತರತರದ ಉಂಡೆಗಳು ಜೊತೆಗೆ ಸಿಹಿ ಅವಲಕ್ಕಿ ಕಡೆದು ಮಾಡಿದ ಬೆಣ್ಣೆ  ಭಕ್ತಿಯಲಿ ಮಾಡಿರುವೆ  ನೋಡಬನ್ನಿ ಪುಟ್ಟ ಹೆಜ್ಜೆ ಇಡುತ, ಸದ್ದು ಮಾಡಿ ಮನೆಯಲ್ಲಿ ಮುದ್ದು ಮುಖವ ಸ್ಪಷ್ಟ ತೋರುತ್ತಾನೆ  ನೋಡಬನ್ನಿ ಮುದ್ದುಗರೆವುತ ಪಿಸುನುಡಿಯನಾಡಿ ಕಿವಿಯಲ್ಲಿ ಮಹದಾನಂದ ತರುತ್ತಾನೆ  ಕೇಳಬನ್ನಿ                    ಶೈಲೂ........

335 ಹೆಜ್ಜೆ ನೋಡೋಣ ಬಾರೆ

Image
ಹೆಜ್ಜೆ ನೋಡೋಣ ಬಾರೆ ಗೋಪಾಲ ಕೃಷ್ಣನ  ಪುಟ್ಟ ಹೆಜ್ಜೆ ನೋಡೋಣ ಬಾರೆ ಹೆಜ್ಜೆ ನೋಡೋಣ ಬಾರೆ ಗೆಜ್ಜೆಯ ಕಾಲಿನ, ಯಶೋಧ ನಂದನ ಮೂರ್ಜಗದೊಡೆಯನ.......ಹೆಜ್ಜೆ ನೋಡೋಣ ಬಾರೆ.. ದೇವಕೀಯ ಗರ್ಭದೊಳುದ್ಭವಿಸಿದ  ಹೆಜ್ಜೆ ವಸುದೇವನನಿಂಗ್ರಿಯನುದ್ದರಿಸಿದಾ ಹೆಜ್ಜೆ ಯದುಕುಲವಂಶವನು ಪಾವನಗೈದ ಹೆಜ್ಜೆ ಮಧುರೆಯಾ ಮಣ್ಣಿಗೆ ವರವನಿತ್ತಾ  ಹೆಜ್ಜೆ........ ಪೂತನಿಯ  ವಕ್ಷಸ್ಥಳಕೆ ಗುದ್ದಿದಾ ಹೆಜ್ಜೆ ಕಾಲಿಂಗನಾ  ಗರ್ವ ಮರ್ಧಿಸಿದಾ  ಹೆಜ್ಜೆ ಮಾವ ಕಂಸನ ಕೊಂದು ಜಗವನುದ್ಧರಿಸಿದಾ  ಹೆಜ್ಜೆ ಬೃಂದಾವನದ ಚಂದವ  ಮೆಚ್ಚಿ ಕುಣಿದಾ ಹೆಜ್ಜೆ....... ಬಾಯಿಯಲೇ ಮಾತೆಗೆ  ಜಗವ ತೋರಿದ ಹೆಜ್ಜೆ ಮುದ್ದುಗರೆವುತಲೆ ಅಂಗಳದೊಳಾಡಿದಾ  ಹೆಜ್ಜೆ ಗೋಪಿಯರ ಮನಗೆದ್ದ ಮುದ್ದು ಕೃಷ್ಣನ ಹೆಜ್ಜೆ ಭಕ್ತಿ  ಭಾವಕೆ ಒಲಿದು ಉದ್ಧರಿಸುವಾ  ಹೆಜ್ಜೆ.....  ಹೆಜ್ಜೆ  ನೋಡೋಣ ಬಾರೆ,  ಗೋಪಾಲ ಕೃಷ್ಣನ ಪುಟ್ಟ ಹೆಜ್ಜೆ  ನೋಡೋಣ  ಬಾರೆ..           ಶೈಲೂ......

334 ಕಲೆಗಾರ

Image
ಕಲೆಗಾರ ******** ಚತುರ ಕಲೆಗಾರ ನೀ ಸುಂದರ ಕಲಾಕಾರ ವರ್ಣಿಸಲಸದಳ  ನಿನ್ನ ಕುಂಚದ ಕಲೆಯ ಬಾನಲ್ಲಿ ತುಂಬಿ ನೀಲಿರಂಗು ಬೆಳ್ಮುಗಿಲ ಸಾಲುಗಳ ತೇಲಿಬಿಟ್ಟೆ ತಾರೆ ಚಂದ್ರಮರ ಮೊಗಕೆ ಬೆಳ್ಳಿರಂಗು ಹಚ್ಚಿಬಿಟ್ಟೆ ಬಂಗಾರದೋಕುಳಿಯ ಸೂರ್ಯನಿಗೆ ಎರಚಿ ಹೊಂಬೆಳಕಲಿ ಜಗವನಲಂಕರಿಸಿದ ನೀ ಚೆಲುವ ಜಾದೂಗಾರ ಗಿಡಮರಗಳಿಗೆ ಹಸಿರುಡುಗೆಯು ಉಡಿಸಿ, ತರತರದ ಬಣ್ಣಗಳ ಕುಸುಮಗಳ ಉಡಿತುಂಬಿ ಸ್ವಾದಿಷ್ಟ ಹಣ್ಣುಗಳ ಸಂತಾನವಿತ್ತ ನೀ  ಮಾಯಗಾರ ಹಾಡುವ ಹಕ್ಕಿಯ ಧನಿಗೆ ಮೋಹಕರಾಗದ ಇಂಪಿತ್ತು ಹಾರುವ ಬಣ್ಣದ  ಚಿಟ್ಟೆಗೆ ಮಧುಹೀರುವ  ಮನವಿತ್ತು ಕುಣಿಯುವ ನವಿಲಿಗೆ ಮೋಹಕ ಚೆಲುವಿತ್ತು ನಿಸರ್ಗದ ಚೆಲುವಿಕೆಗೆ ಜೀವವಿತ್ತ ನೀ ಸೃಜನಶೀಲ ಸೃಷ್ಟಿ ಕಾರ ಹರಿವ ನದಿಗೆ ಜೀವವಿತ್ತು ನಡೆವ ಹಾದಿಗೆ ಹಸಿರನಿತ್ತು ಜಲಚರಗಳ ಒಡಲೊಳಿತ್ತು ಮುತ್ತು ರತ್ನ ಪಚ್ಚೆ ಹವಳ ಗರ್ಭದಲ್ಲಿ ಅಡಗಿಸಿಟ್ಟು ಜಗದ ಉಳಿವಿಗೆ ಜೀವಾಮೃತವ ಆಸರೆಯಿತ್ತ ಭಾಗ್ಯಧಾತ ನೀ ಜಗಕಿತ್ತ  ಬಳುವಳಿಗೆ ಬಿಡಿಸಿಟ್ಟ ಬಣ್ಣದ ಚಿತ್ತಾರಕೆ ಮೋಹಕ ರಮ್ಯ ವಿಲಾಸಕೆ ಬೆರಗು ಮೂಡಿದೆ ನನ್ನಲಿ ಕಲೆಯ ಬಲೆಯ ಸೃಜಿಸಿದ ವರಶಿಲ್ಪಿ ನಿನಗಿದೋ ನನ್ನ ನಮನ..!           ಶೈಲೂ......

333. ನೋಡು ಬಾ ನಮ್ಮೂರ

#ಸ್ಪರ್ಧೆಗಾಗಿ #ನೋಡು_ಬಾರಾ_ನಮ್ಮೂರ_ಸೊಬಗು ನೋಡು ಬಾ ಗೆಳೆಯ ನಮ್ಮೂರ ವಿವಿಧತೆಗಳ ಸೊಬಗ ತವರೂರ ಪ್ರಪಂಚದ ನಾನಾ ತಾಣಗಳ ಜನಜಂಗುಳಿಗುಂಟಿಲ್ಲಿ ನೆಲೆ ಕೆಂಪೇಗೌಡರ ಬೆಂದಕಾಳೂರು ಕರ್ನಾಟಕದ ರಾಜಧಾನಿ ನನ್ನ ತವರು ಸಿಲಿಕಾನ್ ಸಿಟಿಎಂಬ ಹೆಸರು ತಂತ್ರಜ್ಞಾನದಲ್ಲಿ ಮೇರು ನಗರ ದೇವತೆಯಿಲ್ಲಿ ಅಣ್ಣಮ್ಮ ಜನತೆಯ ಸದಾ ಕಾಪಿಡುವಳಮ್ಮ ಅವಳ ಜೊತೆಗಿದೆ ಸಕಲ ದೇವಗಣ ನಿರಂತರ ರಕ್ಷಣೆಯಲ್ಲೇ ಮನ ಹಳ್ಳಿಯ ಸೊಗಡಿನ ಜಾತ್ರೆಯಿದೆ ಬಸವನ ಕಡಲೆಕಾಯಿ ಪರಿಷೆ ಬೃಹತ್ ಬಸವನ ಜೊತೆ ಗಣಪ ನಂಬಿಬಂದವರನ್ನೆಲ್ಲ ರಕ್ಷಿಪ ಸಂಕ್ರಾಂತಿಯ ಬೆರಗಿಗಿಲ್ಲಿ ಸಾಕ್ಷಿ ಗವಿ ಗಂಗಾಧರೇಶ್ವರ ದೇಗುಲ ಸ್ವಾಮಿ, ಭಕ್ತನ ಪ್ರೀತಿಗಿಲ್ಲಿ ಸಾಕ್ಷಿ ರಾಮಾನಂಜನೆಯ ಗುಡ್ಡ ವಿಶಾಲ ಉದ್ಯಾನದ ಜೀವಂತಿಕೆ ವಿಖ್ಯಾತ ಲಾಲ್ಬಾಗ್ ಕಬ್ಬನ್ಪಾರ್ಕ್ ವ್ಯಾಪಾರೋದ್ಯಮಕೇ ಹೆಸರು ಸಾಂಸ್ಕೃತಿಕತೆಗೂ  ಉಸಿರು ಇಲ್ಲಿ ಇಲ್ಲವೆಂಬುದೇ ಇಲ್ಲ ಪ್ರೀತಿಗೂ ಸೈ ದ್ವೇಷಕ್ಕೂ ಜೈ ಆಚಾರ ವಿಚಾರಕ್ಕಿದೆ ತಾವು ಅನೈತಿಕತೆ ಅನಾಚಾರದ ಟಾವು ವಿಸ್ಮಯದ ಭ್ರಮಾಲೋಕ ವಿಲಾಸ ಜೀವನಕೆ ನಾಕ ಜೊತೆಗಿದೆ ವಿವಿಧ ಪ್ರಾಂತ್ಯಗಳ ಹೆಸರಾಂತ ಬಗೆಬಗೆಯ ನಳಪಾಕ ಜಗವ ಸುತ್ತದಿದ್ದರೂ ಸರಿ ಇಲ್ಲೇ ಇದೆ ಸರ್ವ ಜಗದ ಸಿರಿ ಇದು ನನ್ನ ಮೆಚ್ಚಿನ ತವರೂರು ನನ್ನ ಹೆಮ್ಮೆಯ ಬೆಂಗಳೂರು    ಶೈಲಜಾ ರಮೇಶ್