169. ನೀನಿಟ್ಟ ಹೆಜ್ಜೆ
ನೀನಿಟ್ಟ ಹೆಜ್ಜೆ *********** ಮನದ ಬಾಂದಳಕೆ ನೀನಿಟ್ಟ ಹೆಜ್ಜೆ ಎಳೆಗರುವ ನೊಸಲಿನಲಿ ಉಲಿದಂತೆ ಗೆಜ್ಜೆ || ನೀ ಸುಳಿದ ಆ ಘಳಿಗೆ ನೆರೆಬಂತು ಹೊಳೆಗೆ ಹಸಿರು ಮೇಳೈಸಿತ್ತು ಪೂರ ಧರೆಗೆ. || ಸುಳಿದಂತೆ ತಂಪಾದ ನವಿರು ಗಾಳಿ ಸೆಳೆದೆಳೆದಡಗಿಸಿದಂತೆ ಕೆನ್ನೆಯ ಸುಳಿ. || ತಂಪಾದ ಭೂಗರ್ಭದಿ ಎಳೆಗರಿಕೆ ಮೊಳೆತಂತೆ ಸಂಜೆ ಸೂರ್ಯನ ಹೊಂಬೆಳಕ ಹೊಳಪಂತೆ || ಹೊನ್ನಾಗಿತ್ತು ಮಣ್ಣು ಹಬ್ಬಿತ್ತು ತರುಲತೆ ಎದೆಯ ಹೊತ್ತಿಗೆಯ ತುಂಬೆಲ್ಲ ನಿನ್ನದೇ ಕಥೆ || ಜಡವಾಗಿದ್ದ ಬದುಕಲ್ಲಿ ಬಿರಿದಂತೆ ಹೂವು ಮರೆಯಾಗಿತ್ತು ಎಲ್ಲ ಜೀವಜೀವದ ನೋವು || ಶೈಲೂ......