Posts

Showing posts with the label ಕನಸಲ್ಲಿ ಕಂಡೆ 100

100..ಕನಸಲ್ಲಿ ಕಂಡೆ

Image
ಕನಸಲ್ಲಿ ಕಂಡೆ ಕನಸಿನೂರಲಿ ನಾ ನಿನ್ನ ಕಂಡೆ ಅಚ್ಚಾಯ್ತು ಎದೆಯೊಳಗೆ ನಿನ್ನ ರೂಪ ನಸುನಕ್ಕ ಮುಖದೊಳಗೆ ಬಾಳ ದಾರಿಯ ಕಂಡೆ ತೋರಿಸಿತ್ತು ಹಿಡಿದಂತೆ ದಾರಿದೀಪ.. ದಾರಿ ಸಾಗುತ ಬಂದೆ ನಡೆದು ಮುಂದೆ ಮುಂದೆ ಹಿಂತಿರುಗಿ ನೋಡಿದರೆ ಬರೀ ನನ್ನ ನೆರಳು ಮಾಯವಾಗಿದ್ದೆ ನೀನು ಎತ್ತ ಹೋದದ್ದೋ ಕಾಣೆ ಹೆದರಿ ನಡುಗಿದ್ದೆ ಆ ಇರುಳು.. ದೂರದಲ್ಲೆಲ್ಲೋ ಕೇಳಿದಂತಿತ್ತು ಸುಮಧುರ ಕಂಠದೊಳಗೆ ನನ್ನ ಹೆಸರು ಆಲಿಸುತ್ತ ನಾ ನಿಂತೆ ಭಾವವಿಗ್ರಹದಂತೆ ಕೆನ್ನೆ ಸವರಿದಂತಿತ್ತು ಆ ಬಿಸಿಯುಸಿರು.. ನೂರು ಸೂರ್ಯರ ಕಾಂತಿ ಒಮ್ಮೆಗೇ ನುಗ್ಗಿತ್ತು ಕಾಂತಿ ಭರಿಸಲಾರದೆ ಕಣ್ಣು ಮುಚ್ಚಿ ಮಧುರರಾಗವ ಹಾಡಿ ಕುಣಿದು ನರ್ತಿಸುತ್ತಿತ್ತು ಒಲವ ಬಿತ್ತಿದ್ದ ನಿನ್ನ ಮನವ ಮೆಚ್ಚಿ.. ಎಲ್ಲೋ ತೇಲಿದಂತಿತ್ತು ತೂಗಿದಂತಿತ್ತು ಎತ್ತೆತ್ತರೆತ್ತರಕೆ ಹಗುರಾಗಿ ಹಾರಿ ಕೈಗೆ ಸಿಕ್ಕಂತೆ ಚಂದ್ರಮ ಭಾಸವಾಗಿತ್ತು ಮನಕೆ ಸಂತಸದಿ ಕಣ್ಬಿಟ್ಟು  ನೋಡಿದರೆ ಬಾಲ ರವಿಕಿರಣ ಬಂದಿತ್ತು ಕಿಟಕಿಯಿಂದ ತೂರಿ.. ಇದು ಕನಸು ಎಂದರಿವಾಗುವಷ್ಟರಲ್ಲೇ ಅಚ್ಚಾಗಿ ಬಿಟ್ಟಿತ್ತು  ಮನದೊಳಗೆ ಆ ನಸುನಗೆಯ ಮೋಡಿ ಹುಡುಕುತ್ತಿದ್ದೇನೆ ದಿನವೂ ಜಗಜಾತ್ರೆಯಲಿ ಸಿಗಬಹುದು ನೀನು ಎಂದಾದರೊಂದುದಿನ ಎಂಬಾಸೆಯಲಿ ಕೂಡಿ            ಶೈಲೂ......