334 ಕಲೆಗಾರ

ಕಲೆಗಾರ
********

ಚತುರ ಕಲೆಗಾರ ನೀ
ಸುಂದರ ಕಲಾಕಾರ
ವರ್ಣಿಸಲಸದಳ  ನಿನ್ನ
ಕುಂಚದ ಕಲೆಯ
ಬಾನಲ್ಲಿ ತುಂಬಿ ನೀಲಿರಂಗು
ಬೆಳ್ಮುಗಿಲ ಸಾಲುಗಳ ತೇಲಿಬಿಟ್ಟೆ
ತಾರೆ ಚಂದ್ರಮರ ಮೊಗಕೆ
ಬೆಳ್ಳಿರಂಗು ಹಚ್ಚಿಬಿಟ್ಟೆ
ಬಂಗಾರದೋಕುಳಿಯ
ಸೂರ್ಯನಿಗೆ ಎರಚಿ ಹೊಂಬೆಳಕಲಿ
ಜಗವನಲಂಕರಿಸಿದ ನೀ
ಚೆಲುವ ಜಾದೂಗಾರ
ಗಿಡಮರಗಳಿಗೆ ಹಸಿರುಡುಗೆಯು
ಉಡಿಸಿ, ತರತರದ ಬಣ್ಣಗಳ
ಕುಸುಮಗಳ ಉಡಿತುಂಬಿ
ಸ್ವಾದಿಷ್ಟ ಹಣ್ಣುಗಳ ಸಂತಾನವಿತ್ತ
ನೀ  ಮಾಯಗಾರ
ಹಾಡುವ ಹಕ್ಕಿಯ ಧನಿಗೆ
ಮೋಹಕರಾಗದ ಇಂಪಿತ್ತು
ಹಾರುವ ಬಣ್ಣದ  ಚಿಟ್ಟೆಗೆ
ಮಧುಹೀರುವ  ಮನವಿತ್ತು
ಕುಣಿಯುವ ನವಿಲಿಗೆ
ಮೋಹಕ ಚೆಲುವಿತ್ತು
ನಿಸರ್ಗದ ಚೆಲುವಿಕೆಗೆ ಜೀವವಿತ್ತ
ನೀ ಸೃಜನಶೀಲ ಸೃಷ್ಟಿ ಕಾರ
ಹರಿವ ನದಿಗೆ ಜೀವವಿತ್ತು
ನಡೆವ ಹಾದಿಗೆ ಹಸಿರನಿತ್ತು
ಜಲಚರಗಳ ಒಡಲೊಳಿತ್ತು
ಮುತ್ತು ರತ್ನ ಪಚ್ಚೆ ಹವಳ
ಗರ್ಭದಲ್ಲಿ ಅಡಗಿಸಿಟ್ಟು
ಜಗದ ಉಳಿವಿಗೆ ಜೀವಾಮೃತವ
ಆಸರೆಯಿತ್ತ ಭಾಗ್ಯಧಾತ
ನೀ ಜಗಕಿತ್ತ  ಬಳುವಳಿಗೆ
ಬಿಡಿಸಿಟ್ಟ ಬಣ್ಣದ ಚಿತ್ತಾರಕೆ
ಮೋಹಕ ರಮ್ಯ ವಿಲಾಸಕೆ
ಬೆರಗು ಮೂಡಿದೆ ನನ್ನಲಿ
ಕಲೆಯ ಬಲೆಯ ಸೃಜಿಸಿದ
ವರಶಿಲ್ಪಿ ನಿನಗಿದೋ ನನ್ನ ನಮನ..!

          ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ