Posts

Showing posts from July, 2022

366 ಅನ್ನಕ್ಕಾಗಿ ಅರಸುತ್ತಾ

Image
#ಕವನಸ್ಪರ್ಧೆ #ಶೀರ್ಷಿಕೆ:-- #ಅನ್ನಕ್ಕಾಗಿ_ಅರಸುತ ಬಡತನವೇ ಕೂಪ ಹಸಿವೊಂದು ಶಾಪ ತುತ್ತನ್ನಕ್ಕಾಗಿ ಪ್ರತಿದಿನವೂ ಪರಿತಾಪ ಕಸದ ತೊಟ್ಟಿಯಲಿ ರಸವನ್ನು ಹುಡುಕುತ ಹೊರಟೆವು ನಾವು ಅನ್ನವನು ಅರಸುತ ಚಿಂದಿ ಆಯುವೆವು ತುತ್ತನ್ನಕ್ಕಾಗಿ ನಾವು ಯಾಕಿಟ್ಟನೋ ಭಗವಂತ ಈ ಪರಿ ಹಸಿವು ಕಸವೋ ಅಸಹ್ಯವೋ ಅದರ ಪರಿವಿಲ್ಲ ಹೊಟ್ಟೆ ತುಂಬಿದರೆಂದೇ ಹಬ್ಬ ನಮಗೆಲ್ಲ ಸೂರಿಲ್ಲದ ನಮಗೆ ಕೊಳವೆಯಾಶ್ರಯವು ಮಳೆಗಾಳಿ ಚಳಿಯಲ್ಲೂ ಇದೇ ಆಲಯವೂ ನಾಲ್ಕಾರು ಪಾತ್ರೆ ಪಡಗಗಳೇ ನಮ್ಮಯ ಸ್ವತ್ತು ಕುಳಿತೆವು ಶಪಿಸುತ್ತ ಬಡತನಕೆ ಬೇಸತ್ತು ಬಡತನದ ಕರ್ಮಕ್ಕೆ ಮಕ್ಕಳು ಜಾಸ್ತಿ ಹಸಿವೆ ತಾಳದೆ ಮಾಡುವವನ್ನಕ್ಕೆ ಕುಸ್ತಿ ಹೇಗೆ ಪೊರೆಯಲಿ ತಂದೆ ನಂಬಿದ ಕುಟುಂಬವ ಮಾಡಲಿನ್ನೇನಿಹುದು ಏಳಿ ಚಿಂದಿ ಆಯುವಾ   ಡಾ: B.N. ಶೈಲಜಾ ರಮೇಶ್

365 ಏಕೆ ಹೀಗಾಯ್ತು..?..😔

ಏಕೆ ಹೀಗಾಯ್ತು..?..😔 ******************** ಎಲ್ಲಿ ಹೋದವೋ ಕಾಣೆ ಮನದ ಭಾವಗಳ ಸಾರ ಬರಡಾದ ಭಾವನೆಯಲಿ ಮನವು ಭಾರ ಭಾರ ಸಮಯಕ್ಕೊದಗುತ್ತಿದ್ದವು ಪದಪುಂಜಗಳು ಸಪೂರ ಇಂದೆಲ್ಲಿಗ್ಹೋದವೋ ಕಾಣೆ ದೂರ ಬಹು ದೂರ ಎಷ್ಟು ತಡಕಿ ಹುಡುಕಿದರೂ ಬರುತ್ತಿಲ್ಲ  ಒಂದಕ್ಷರ ಮಾಡುತ್ತಿದೆ ಯಾಕೋ ಕಾವ್ಯಕೆ ಪದಗಳು ಮುಷ್ಕರ ಇನ್ನೂ ಏನನ್ನೂ ಬರೆಯದ ಖಾಲಿಯಿರುವ ಹಾಳೆಯಲಿ ಬರೆಯಲಿ ನಾ ಹೇಗೆ ಬತ್ತಿಹೋದ ಪದಗಳಲ್ಲಿ ಮಾತನ್ನೇ ಸಾಲಾಗಿಸಿ ಬರೆಯಲು ಹೊರಟಾಗಲೂ ಭಾವನೆಗಳ  ಸೌಧವೇ ಆದಂತಿದೆ  ಮುರುಕಲು ಬರೆವ ಪದಗಳಿಗೆ ಅರ್ಥವೇ ಇಲ್ಲದಂತಾಗಲು ಬರೆಯಲಿ  ನಾ ಹೇಗೆ ಹೊಸಪದಗಳ ಸಾಲು ಹೇಗೆ ಬರೆದರೂ ಪದಗಳ ಒಳಾರ್ಥವೇ ಕವಿತೆಯ ಜೀವ ಭಾವ ತುಂಬಿದ ಪದಗಳೇ ಕವಿಮನದ  ಭಾವ ಮನದಲ್ಲಿರುವುದನ್ನೆಲ್ಲಾ  ಬರೆಯಲಾಗದು ಭಾವಾರ್ಥ ಕೆಟ್ಟರೆ  ಕವಿತೆ  ಸಾಯುವುದು ಅನ್ನಿಸಿದ್ದನ್ನೆಲ್ಲಾ ಬರೆಯಲು ಹೊರಟ  ನಾನು  ಮರುಳೇ?? ಬರೆವ ಮನಸ ಕಾಡಿ ಕಾಡಿಸಿತ್ತು  ನನ್ನ  ನೆರಳೇ ಕಂಡ ಕನಸನ್ನೆಲ್ಲ ಕವಿತೆಯಲ್ಲಿ  ತುಂಬುವನೆಂಬ  ಆಸೆ ಬರೆಯಲಾರದೆ ಕುಳಿತೆ ಆಯಿತು ಏಕೋ ನಿರಾಸೆ....        ಶೈಲೂ......

364 ಆಧುನಿಕ ವಚನ

#ಆಧುನಿಕ_ವಚನ #ಶೀರ್ಷಿಕೆ #ನಿಷ್ಕಾಮ ಜೀವನವಿದು   ಮೂರು   ದಿನದ    ಬಾಳು ಅವನಕರೆ ಬಂದಾಕ್ಷಣ ತೆರಳಬೇಕು ಕೇಳು ಇದ್ದಾಗಲೇ ಗಳಿಸಿಬಿಡೆಲ್ಲರ ಪ್ರೀತಿ ವಾತ್ಸಲ್ಯ ಸಹಬಾಳ್ವೆಯಲಿ ತುಂಬಿದೆ ಜೀವನದ ಮೌಲ್ಯ ಸಕಲಜೀವಿಗಳಲ್ಲಿರಲಿ ನಿಷ್ಕಾಮಪ್ರೇಮದ ಧಾರಾ ಪ್ರೇಮದಿಂದೆಲ್ಲರ ಗೆಲ್ಲಬಹುದೆಂದ ಶ್ರೀಶೈಲನಾಥೇಶ್ವರ          ಶೈಲೂ....

363 ಮರೆಯಲಾದೀತೆ...??

Image
ಮರೆಯಲಾದೀತೆ...?? ******************* ನಿನ್ಹೆಸರೇ ನನ್ನುಸಿರಾಗಿರುವಾಗ ನಿನ್ನ ಸವಿ ನಾಮ ಮನದಲಿ ಅನುರಣಿಸುತ್ತಿರುವಾಗ ನಿನ್ನ ಮರೆಯುವ ಮಾತೆಲ್ಲಿ  ಕೃಷ್ಣಾ... ನಿತ್ಯವೂ  ನಿನ್ನದೇ ಧ್ಯಾನ ಮನದಲ್ಲಿ ನಿನ್ನನುಸಂಧಾನ ಕಣ್ಣೆವೆಯ ಮುಚ್ಚಿದರೆ ನಿನ್ನ ಪ್ರತಿಬಿಂಬ ಕಣಕಣದಲೂ  ಆವರಿಸಿದೆ ನಿನದೇ ಬಿಂಬ..!! ನಿನ್ನೊಲವಿನ ಲೇ  ಧ್ಯಾನ ಮನಸು ನಿನ್ನಲೇ ಲೀನ ಕ್ಷಣ ಕ್ಷಣವೂ ನಿನ್ನದೇ ಸ್ಮರಣೆ ನಿನ್ನೊಲವಿನ ನೆನಪಲ್ಲೇ ರಾತ್ರಿ ಜಾಗರಣೆ..!! ಬೀಸು ಗಾಳಿಯ ರವದಿ ನಿನ್ನಾಗಮನದ ನಿರೀಕ್ಷೆ ತರಗೆಲೆಯ .ಸದ್ಧಿನಲೂ ನಿನ್ನದೇ  ಪ್ರತೀಕ್ಷೆ..!! ಅಣುರೇಣು ತೃಣ ಕಾಷ್ಠದಲೂ ನೀನಿರುವೆ ನೀನಿರುವ ಪ್ರತಿ ನಡೆಯ ನಾ ಹೇಗೆ  ಮರೆವೆ..??        ಶೈಲೂ.......

362 ಗಾದೆ ವಿಸ್ತರಣೆ

ವಿಷಯ ಗಾದೆ ವಿಸ್ತರಣೆ #ಗಾದೆ #ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ #ಪೀಠಿಕೆ         "ವೇದ ಸುಳ್ಳಾದರೂ ಗಾದೆ ಸುಳ್ಳಾಗದು " ಎಂಬುದು ಅತೀ ಜನಜನಿತ ಗಾದೆ. ಗಾದೆಯು ಅನುಭವದ ಸಾರಾಮೃತ. ಎಂದೆಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಅರ್ಥಪೂರ್ಣ ವಾಕ್ಯಗಳು ಇವು. #ವಿವರಣೆ....       #ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ...         ಈ ಗಾದೆಯು ಪ್ರಸ್ತುತ ಕಾಲಮಾನಕ್ಕೆ ಅತೀ ತಕ್ಕುದಾಗಿದೆ.            ವಿಷಮ ಪರಿಸ್ಥಿತಿಯಲ್ಲಿ.... ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಸಂದರ್ಭ ಬಂದಾಗ ನಾಜೂಕಾದ ಮಾತಿನಿಂದ ಪರಿಸ್ಥಿತಿಯನ್ನು ತಹಬಂದಿಗೆ ತರಬಹುದು. ಸಂಘರ್ಷದ ಮಾತುಗಳಿಲ್ಲದೆ ವೈರಿಗಳನ್ನೂ ಕೂಡ ಜಗಳವಿಲ್ಲದೆ ಸಮಾಧಾನದಿಂದ ನಿಭಾಯಿಸಬಹುದು.        ಊಟದ  ಮಹತ್ವ ಅರಿತವರು, ಅತಿಯಾದ ಅನಾರೋಗ್ಯಕರ ಆಹಾರ ಸೇವಿಸದೇ,ತಮ್ಮ ತಮ್ಮ ಆರೋಗ್ಯಕ್ಕೆ ತಕ್ಕಂಥ ಆಹಾರ ಸೇವನೆಯಿಂದ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಬಹುದು. #ಉಪಸಂಹಾರ...     ಇದರಿಂದ ತಿಳಿಯಬೇಕಾದದ್ದು,  ಯಾರೊಡನೆ ಯಾವರೀತಿಯಲ್ಲಿ ವ್ಯವಹರಿಸಿದರೆ ಉತ್ತಮ.  ಹಾಗೂ ಋತುಗನುಗುಣವಾದ, ಹಿತಮಿತವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅತೀ ಸಾಮಾನ್ಯ ಮಾತುಗಳಿಂದಲೇ ಅಸಾಮಾನ್ಯ ಅರ್ಥದ ಗಾದೆಗಳ ಮೂಲಕ ನಮ್ಮ ಜನಪದರು ತಿಳಿಸಿದ್ದಾರೆ.        ಶೈಲಜಾ ರಮೇಶ್

361 ಸಿಂಕೇನ್ ಕಾವ್ಯ

#ಸಿಂಕೇನ್_ಕಾವ್ಯಸ್ಪರ್ಧೆ #ಅಮ್ಮ ಅಮ್ಮ ಮಮತಾಮಯಿ ಕರುಣಾಪೂರ್ಣೆ ಅಮೃತವುಣಿಸಿ ಬಿಗಿದಪ್ಪಿ ಕಾಯುವಳು ಮಗುವ ಮುದ್ದಿಸಿ ಲಾಲಿ ಹಾಡುವಳು ಜನನಿ..! #ಗುರು ಗುರು ಜ್ಞಾನವಾರಿಧಿ ಕರುಣಾಕರ ಅಕ್ಷರವಿತ್ತು ಕಲಿಸಿ ಕಾಯುವರು ಕೈಹಿಡಿದು ತಿದ್ದಿ ಬರೆಸಿ ಬೋಧಿಸುವ ಜ್ಞಾನದಾತ..! #ಅಣ್ಣ ಅಣ್ಣ ಪಿತೃಸಮಾನ ಸನ್ಮಿತ್ರ ಪ್ರೀತಿಯಿತ್ತು ಆದರಿಸಿ ಪೋಷಿಸುವನು ತವರಿನ ಸಿರಿಗೆ ಅರ್ಥವಿತ್ತು ಬೆಳಕಾದವ ಹಿರಿಯಣ್ಣ..!         #ಶೈಲೂ

360 ನನ್ನೆದೆಯಲಿ_ಅವಳ_ನಗುವೇ_ಹಾಡಾಯಿತು

Image
#ಜಡೇಕವನ #ಶೀರ್ಷಿಕೆ #ನನ್ನೆದೆಯಲಿ_ಅವಳ_ನಗುವೇ_ಹಾಡಾಯಿತು ದೇವತೆಯಂತವಳು ಗಗನದಿಂದಿಳಿದ ಅಪ್ಸರೆ ಅಪ್ಸರೆಯಂತ ಚೆಲುವವಳದು ನಾನವಳ ಕೈಸೆರೆ ಕೈಸರೆಯಾದೆನವಳ ಪ್ರೇಮವಾರಿಧಿಯಲ್ಲಿ ಮಿಂದು ಮಿಂದೆದ್ದೆ ಖುಷಿಯಲ್ಲಿ ನನ್ನವಳೇ ಪ್ರೇಮದ ಸಿಂಧು ಸಿಂಧೂರ ಹೊಳೆಯುತಿದೆ ಅವಳ ಹಣೆಯನ್ನು ಬೆಳಗಿ ಬೆಳಗ ಬಂದವಳವಳು ಬದುಕ ಆ ನನ್ನ ಹುಡುಗಿ ಹುಡುಗಿಯವಳು ನನ್ನ ಮನದನ್ನೇ ಬೇಲೂರ ಬಾಲೆ ಬಾಲೆ ಹದಿನಾರರ ತರುಣಿ ಮೊಗದೇ ಮುಂಗುರುಳ ಮಾಲೆ ಮಾಲೆ ಹಾಕಲಿದೆ ಕೊರಳಿಗೆ ಹಿರಿಯರೊಪ್ಪಿಗೆ ಪಡೆದು ಪಡೆದೆನವಳ ಸಂಗ ಅವಳ ಅದಮ್ಯ ಪ್ರೀತಿಗೆ ಮಣಿದು ಮಣಿದೆ ಅವಳ ಸೊಗಸಾದ ಮುಖಾರವಿಂದಕೆ ಅರವಿಂದದಂತೆಯೇ ಸೊಬಗು ಅರಳಿ ನಗುವ ನಯನಕೆ ನಯನಗಳೆರಡು ಸೆಳೆದೆಳೆದು ಮಾಡಿವೆ ಮೋಡಿ ಮೋಡಿ ನಗುವೆಸೆದು ನನ್ನೆಡೆಗೆ ಕಾಡುತಿಹಳು ನೋಡಿ ನೋಡಿ, ನನ್ನವಳ ಪ್ರೇಮಕೆ ವೇದಿಕೆ ನನ್ನೆದೆಯಾಯ್ತು ನನ್ನೆದೆಯಲಿ ಅವಳ ಸೆಳೆವ ನಗುವೇ ಹಾಡಾಯಿತು..!       ಶೈಲಜಾ ರಮೇಶ್

359 #ಅನವರತ_ಪೊರೆಯೆಮ್ಮ_ಅಂಜನೀಪುತ್ರ

Image
#ಭಕ್ತಿ_ಗೀತೆ #ಅನವರತ_ಪೊರೆಯೆಮ್ಮ_ಅಂಜನೀಪುತ್ರ ಅನವರತ  ಪೊರೆಯೆಮ್ಮ ಅಂಜನೀಪುತ್ರ ನಿರುತ  ನಿನ್ನನೇ  ನೆನೆವೆ  ಸರಸಿಜ  ನೇತ್ರ ಕರುಣಿಸು  ಶ್ರೀರಾಮ  ನಾಮದಲಿ ಭಕುತಿ ಸಕಲ ಕಾರ್ಯಗಳಲ್ಲಿ ಬೆರೆಸು ನಿನ್ನ ಶಕುತಿ ಉದಯರವಿಯ ಹಣ್ಣೆಂದು ಭ್ರಮಿಸಿದನೆ ತಿನ್ನಲು  ಆಗಸಕೆ  ಚಂಗನೆ  ನೆಗೆದವನೆ ಬಾಲ್ಯಕಾಲದಲೇ ನಿನಗೆ ಅದೆಂತಹ ಶಕ್ತಿ ಕಾರಣವೇ ಆರಾಧ್ಯ ದೈವದಲ್ಲಿನ  ಭಕ್ತಿ ಅಮಿತಪರಾಕ್ರಮಿ ಸಾಗರವ ಲಂಘಿಸಿದ ಧೀರ ಲಂಕಿಣಿಯ ಮಣಿಸಿ ಲಂಕೆಯ ಸುಟ್ಟ ಕಪಿವೀರ ಸಂಜೀವಿನಿ ಪರ್ವತವನೆತ್ತಿ ತಂದ ಪರಾಕ್ರಮಿ ದೈನ್ಯತೆಯೇ ಮೂರ್ತಿವೆತ್ತ ಸಕಲಜನ ಪ್ರೇಮಿ ಆಜಾನುಬಾಹು ಹನುಮ ಅಮಿತಬಲತೇಜ ಬಿತ್ತಿದೆ ಎಲ್ಲೆಡೆ ಶ್ರೀರಾಮ ನಾಮದ ಬೀಜ ಬುದ್ಧಿರ್ಬಲಕೆ ನಿನಗೆ ಸರಿಸಮರು ಉಂಟೇನು ವಾಕ್ಪಟುತ್ವಕೆ ಹೆಸರು ಈ ಶ್ರೀರಾಮನ ಭಂಟನು          ಶೈಲಜಾ ರಮೇಶ್

358 ನ್ಯಾನೋ ಕಥೆ

#ನ್ಯಾನೊಕಥೆ #ವಿಷಯ #ದೊಡ್ಡಸ್ತಿಕೆ ರೇಖಾಳ ಗಂಡ ಸರ್ಕಾರಿ ನೌಕರ, ಒಳ್ಳೆ ಸಂಬಳ, ಜೊತೆಗೆ ಗಿಂಬಳ, ಹಾಗಾಗಿ ಒಳ್ಳೇ ಜೀವನ ನಡೆಸ್ತಾಯಿದ್ರು. ಹಾಗಾಗಿ ರೇಖಾಗೆ ಜಾಸ್ತಿ ಜಂಬ, ದೊಡ್ಡಸ್ತಿಕೆ. ತನ್ನ ಮೈದುನ ಸಾಧಾರಣ ಉದ್ಯೋಗ, ಸಾಧಾರಣ ಸಂಬಳದಲ್ಲಿ ಜೀವನ ನಡೆಸುತ್ತಿದ್ದುದೇ ಕಷ್ಟದಲ್ಲಿ, ಅವನ ಹೆಂಡತಿ ಇದ್ದುದರಲ್ಲೇ ಅಚ್ಚುಕಟ್ಟಾಗಿ ಜೀವನ ನಡೆಸುತ್ತಿದ್ದರೂ, ಸಮಯ ಸಿಕ್ಕಾಗಲೆಲ್ಲ ರೇಖಾಳ ಹೀಯಾಳಿಕೆ ಮಾತು ಕೇಳಿ ನೊಂದಿದ್ದಳು. ಒಬ್ಬರ ದುಡಿತ, ಬಡವರನ್ನಾಗಿಸಿಟ್ಟಿದೆ ತಾನೂ ದುಡಿದರೆ ಸರಿಹೋದೀತು ಎಂದು ಟೈಲರಿಂಗ್ ಕೆಲಸ ಮಾಡಹತ್ತಿ, ಒಳ್ಳೇ ಹೆಸರು, ದುಡ್ಡು ಮಾಡಿ ರೇಖಾಳ ಸರಿಸಮಕ್ಕೆ ಅಲ್ಲದಿದ್ದರೂ ಮೊದಲಿಗಿಂತ ನೆಮ್ಮದಿ ಜೀವನ ನಡೆಸುತ್ತಿರುವಾಗಲೇ, ಲಂಚ ಸ್ವೀಕಾರದ ಆರೋಪದಡಿ ಬಂದಿಯಾದ ರೇಖಾಳ ಗಂಡ. ಇದ್ದುದ್ದನ್ನೆಲ್ಲಾ ರೈಡ್ ಮಾಡಿ ಜೀವನಕ್ಕೂ ಕಷ್ಟ ಆದಾಗ ಅವಳ ಕೈ ಹಿಡಿದದ್ದು, ರೇಖಾಳ ಮೈದುನನ ಹೆಂಡತಿ. ಈ ಘಟನೆಯಿಂದ ರೇಖಾಳ ದೊಡ್ಡಸ್ತಿಕೆ ಮಣ್ಣುಪಾಲಾಯ್ತು        ಶೈಲಜಾ ರಮೇಶ್

358 ಹಾಯ್ಕು ಗಳು

#ಹಾಯ್ಕ #ಬೆಳದಿಂಗಳು #೧ ನಿನ್ನ ನಗುವೇ ನಲ್ಲ ಮನ ತಣಿಸೋ ಬೆಳದಿಂಗಳು #೨  ಬೆಳದಿಂಗಳು ನಕ್ಕಾಗ, ಸಾಗರಿಯ  ಉತ್ಕರ್ಷಣವು #೩ ಹುಣ್ಣಿಮೆ ಚಂದ್ರ ಬೆಳದಿಂಗಳ ಜಾಲ ಬೀಸಿ ಸೆಳೆವ    ಶೈಲಜಾ ರಮೇಶ್

357 #ಕಲಿಯುವ_ಬನ್ನಿ_ಮಕ್ಕಳೇ

Image
#ಚಿತ್ರಕಾವ್ಯ_ಸ್ಪರ್ಧೆ #ಕಲಿಯುವ_ಬನ್ನಿ_ಮಕ್ಕಳೇ ನಿಸರ್ಗದಂಗಳದಿ ಪಾಠ ಪ್ರವಚನ ಗುರುಕುಲ ಪದ್ಧತಿಯ ಅಭಿಯಾನ..! ಇಲ್ಲಿ ಕನ್ನಡ ಕಲಿಕೆಗೆ ಒತ್ತು ಹೆಚ್ಚು ಕಲಿಸುವ ಗುರುಗಳೆಲ್ಲರಿಗೂ ಅಚ್ಚುಮೆಚ್ಚು..! ಸ್ವಚ್ಛ ಪ್ರಕೃತಿಯ ಮಡಿಲಲ್ಲಿ ಪಾಠ ಕಲಿಕೆ ಮುಗಿದ ನಂತರವೇ  ಆಟ..! ಆಟಕ್ಕೂ ಪಾಠಕ್ಕೂ ಸಮಾನ ಅನುನಯ ಕಲಿಕೆಯಿಂದಲೇ ಶ್ರೇಷ್ಠವ್ಯಕ್ತಿ ಉದಯ..! ವಿದ್ಯೆಯೆಂದಿಗೂ ಕದಿಯಲಾಗದ ಐಶ್ವರ್ಯ ಕಲಿತಷ್ಟೂ ಮುಗಿಯದ ಸವಿ ಮಾಧುರ್ಯ.! ಆಪತ್ಕಾಲದಲಿ ನೆರವಾಗುವ ಬಂಧು ಜ್ಞಾನವಿಜ್ಞಾನವ ಉದ್ದೀಪಿಸುವ ಸಿಂಧು..! ಆಡಿ ಹಾಡಿ ನಲಿಯುತ ಕಲಿವ ವಿದ್ಯೆಯು ಮರೆಯದೆಂದಿಗೂ ವಿದ್ಯೆಯಿತ್ತ ಸ್ಪೂರ್ತಿಯು.! ಬನ್ನಿ ಕಂದಮ್ಮಗಳೇ ಶ್ರದ್ಧೆಯಿಂದ ಕಲಿಯುವ ಶ್ರೇಷ್ಠರೆನಿಸಿ ಭವ್ಯ ಭಾರತವ ಬೆಳಗುವಾ..!           ಶೈಲಜಾ ರಮೇಶ್

356 ತಿಳಿಯುವ ಬಾ

#ಶಿಶುಗೀತೆ #ತಿಳಿಯುವಾ_ಬಾ ಹೇ ಚಿನ್ನು ನೋಡು ಬಾ ಆಕಾಶ ಅದೇನಲ್ಲಿ ಮಿನುಗುತಿಹ ಪ್ರಕಾಶ.? ಉರಿಯುತಿದೆ ಅಲ್ಲಿ ಕೆಂಡದುಂಡೆ.! ಉರಿದರೂ ಅದು ಕಪ್ಪಾಗಿಲ್ಲ ನೋಡೇ.! ಬಣ್ಣವೇನೋ ಚಂದ ಆ ಕೆಂಪು ಕೆಂಪು ಬರಬರುತ್ತಾ ಹೇಗಾಗುತ್ತೆ ತಂಪುತಂಪು.? ಉರಿದುರಿದು ಮಾಯವಾಯ್ತು ಸಂಜೆಗೆ ಕೆಂಪಗಿದ್ದದ್ದು ರಾತ್ರಿ ಹೇಗಾಯ್ತು ಬೆಳ್ಳಗೆ.? ಬೆಳಕಲ್ಲಿ ರವಿಯಂತೆ ರಾತ್ರಿ ಚಂದ್ರ ಬೆಳಕೀವವನೊಬ್ಬ, ಇನ್ನೊಬ್ಬ ಬಾನಲಾಂದ್ರ.! ಒಂದೇ ಆಕಾಶ..ಆಳುವವರೇಕಿಬ್ಬರು.? ಈ ಕತ್ತಲಬೆಳಕಾಟಕೆ ನಾನಾದೆ ಬೆಬ್ಬರು..! ಇದೆಂಥಾ ಕೌತುಕ....! ಅಲ್ಲವೇನು.? ಸವಿವರ ಅರಿತುಕೊಳ್ಳಬೇಕಿದೆ ನಾನು ತಿಳಿಯಬೇಕೆಂದರೆ ಓದಬೇಕು ವಿಜ್ಞಾನ ಬಾ.. ಓದಿ ಅರಿಯುವಾ ಸುಜ್ಞಾನ..!           ಶೈಲೂ.....