Posts

Showing posts from May, 2022

355 ಗಝಲ್

ಗಝಲ್ #ಮಿಡಿತಗಳ_ಅರಿಯದ_ಹೃದಯ_ಮನಸುಗಳ_ತೊರೆವುದೇಕೆ  ಮಿಡಿತಗಳ ಅರಿಯದ ಹೃದಯ ಮನಸುಗಳ ತೊರೆವುದೇಕೆ ಹೇಳು? ಎದೆಬಡಿತ ನಿಂತರೂ ಕನಸುಗಳ ತೆರೆವುದೇಕೆ ಹೇಳು? ನನಸಾಗದ ಆಸೆಗಳಲಿ ಜೀವ ಮಿಳಿತವಾದದ್ದೇಕೋ ಕಾಣೆ ಬೇಡವೆಂದು ಹಿಂದೆ ಸರಿದರೂ ಅಭಿಲಾಷೆ ಕರೆವುದೇಕೆ ಹೇಳು? ನಿನ್ನೊಲವ ಸಾಂಗತ್ಯದಲಿ ನೋವುಂಡು ನಿಟ್ಟುಸಿರಿಟ್ಟದ್ದೇ ಬಹಳ ಕೇಳದಾಗಿದೆ ತನುವು ಸದಾ ಪ್ರಿಯ ನಾಮ ಜಪಿಸುವುದೇಕೆ ಹೇಳು? ಆಶಿಸಿರಲಿಲ್ಲ ಎಂದೂ ಬಾಳಿಗೆ ಮುಳ್ಳಾಗಿ ಕಾಡುವುದೆಂದು ಮರೆತೆಲ್ಲ ದುಃಖವನು ನಲಿವಲಿ ಪ್ರೇಮ ಹಿಂದ್ಹಿಂದೆ ಬರುವುದೇಕೆ ಹೇಳು? ಶೈಲಳಾಂತರ್ಯದಲಿ ಮಡುಗಟ್ಟಿದೆ ತೀರದ ಕಣ್ಣೀರ ವ್ಯಥೆಯ ಕಥೆ ಮನ್ನಿಸುತ್ತೆಲ್ಲ, ಅಪ್ಪಿ ಹಾರೈಸುವ ಬಯಕೆ ಕಾಡುವುದೇಕೆ ಹೇಳು?         ಶೈಲಜಾ ರಮೇಶ್

354 Happy mother's day💐💐💐

Image
Happy mother's day💐💐💐             ಅಮ್ಮ” ಎಂಬ ಎರಡಕ್ಷರದಲ್ಲಿ ಅದೆಂಥಾ ಮಾಂತ್ರಕತೆಯಿದೆ! ಆ ಶಬ್ದ ಮಾತ್ರ ಉಳಿದ ಶಬ್ದಗಳಂತೆ ಅಧರದಿಂದ ಹೊರಡದೇ ಹೃದಯದಿಂದ ಹೊರಡುತ್ತದೆ. ಇದು ಅತ್ಯಂತ ಹೆಚ್ಚು ಬಾರಿ ಉಚ್ಛರಿಸಲ್ಪಡುವ ಶಬ್ದವೂ ಹೌದು. ಪುಟ್ಟ ಮಗು ಸಂಪೂರ್ಣವಾಗಿ ಅಮ್ಮನನ್ನು ಆಶ್ರಯಿಸಿರುತ್ತದೆ. ಸಂತೋಷವಾದರೂ, ದುಃಖವಾದರೂ, ಭಯವಾದರೂ, ಬಿದ್ದು ನೋವು ಮಾಡಿಕೊಂಡರೂ ಮಗುವಿನ ಬಾಯಿಂದ ಮೊದಲು ಹೊರಬೀಳುವ ಶಬ್ದ “ಅಮ್ಮಾ.” ಎಂದಾಗಿರುತ್ತದೆ. ಮಗು ಬೆಳೆದು ಎಷ್ಟೇ ದೊಡ್ಡವನಾ/ಳಾದರೂ “ಅಮ್ಮ” ಎಂಬ ಆಪ್ತ ಸಂಬಂಧದಿಂದ ಕಳಚಿಕೊಳ್ಳಲು ಸಾಧ್ಯವೇ ಇಲ್ಲ. ಕ್ರೂರ ಹೃದಯದ ಕಟುಕನಿಗೂ “ಅಮ್ಮ” ಎಂಬ ಪದ ಉಚ್ಛರಿಸುವಾಗ ಮನಸ್ಸು ಆರ್ದ್ರವಾಗುತ್ತದೆ.           ‘ಅಮ್ಮ’. ಎಂತಹ ಕ್ರೂರ ಹೃದಯವನ್ನು ಕೂಡ ಒಂದು ಕ್ಷಣಕ್ಕೆ ಹೂವಾಗಿಸಬಲ್ಲ ಏಕೈಕ ಪದ. ಕೇಳಿದ ತಕ್ಷಣ ಮೊಗದಲ್ಲಿ ಕಿರುನಗು ತರಿಸಬಲ್ಲ ಪದ. ಬುದ್ಧಿ ಬಲಿತಿರದ ಒಂದು ಪುಟ್ಟ ಮಗು ಕೂಡ ಕೇಳಿದ ತಕ್ಷಣ ಸಂತಸದಿ ನಲಿಯುವಂತೆ ಮಾಡುವ ಪದ. ಅದರ ಶಕ್ತಿಯೇ ಅಂತಹುದು. ಆ ವ್ಯಕ್ತಿತ್ವವೇ ಅಂತಹುದು. ಆಕೆ ಮಮತಾಮಯಿ. ಪ್ರೀತಿಯ ಸಾಕಾರಮೂರ್ತಿ.           ನಮ್ಮನ್ನು ಒಂಭತ್ತು ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಇಟ್ಟುಕೊಂಡು ಕಾಪಾಡಿ, ಅಲ್ಲಿಂದ ಹೊರಬರುತ್ತಿದ್ದಂತೆ ತನ್ನ ಮಡಿಲಿನಲ್ಲಿ ಮಲಗಿಸಿ ಎದೆಹಾಲೆಂಬ ಅಮೃತಪಾನ ಮಾಡಿಸುವ ದೇವತೆಗಳ ದೇವತೆ ಅವಳು. ಈ ಜಗತ್ತಿನಲ್ಲಿ ಪರಿಚಯದ ಅವಶ್ಯಕತೆಯ

353ಅಮ್ಮ

Image
ಎಲ್ಲಾ ಅಮ್ಮಂದಿರಿಗೂ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು💐💐💐 #ಅಮ್ಮ ಅಮ್ಮ ಎಂಬ ಬೃಹತ್ ಆಲದ ಮರದಡಿಯಲ್ಲಿ ನಾನೊಂದು ಪುಟ್ಟ ಚಿಗುರು ಕ್ಷಣಕ್ಷಣವೂ ಕಾಪಿಡುವ ಆ ನಿಸ್ವಾರ್ಥ ಮೂರ್ತಿಗೆ ದೇವನಿಟ್ಟ ಅಮ್ಮಾ ಎಂಬ ಹೆಸರು ಅದೆಷ್ಟು ಕಷ್ಟಗಳ ಸಹಿಸಿ ದಹಿಸಿ ಹೋಗುತ್ತಿದ್ದರೂ ನಗುವೇ ಅವಳ ಬಂಡವಾಳ ಕ್ಷಣಕ್ಷಣವೂ ಬೇಸತ್ತು ಬಳಲಿ ಬೆಂಡಾದರೂ ಅರಿಯಲಿಲ್ಲವಳ ಅಂತರಾಳ ತಾನುಂಡಳೋ ಇಲ್ಲವೋ ಮನೆ ಮಂದಿಯ ಹಸಿವೆ ನೀಗಿಸುವ ಅಮ್ಮ ಅನ್ನಪೂರ್ಣೆ ನೂರು ನೋವಿತ್ತವರನೂ ಕ್ಷಮಿಸಿ ಆದರಿಸುವ ಅಮ್ಮ ದೈವದಂತವಳು ಸದಾಪೂರ್ಣೆ ಕರುಳಕುಡಿಯ ಕಾಪಿಡಲು ಉತ್ತಮ ವ್ಯಕ್ತಿತ್ವ ರೂಪಿಸಲು ಅಮ್ಮನೇ ಮುಖ್ಯ ಪಾತ್ರಧಾರಿಣಿ ಮೊದಲ ಗುರುವಾಗಿ ಕಲಿಸಿ ಅಕ್ಕರಗಳ ತಿದ್ದಿತೀಡಿ ಬೆಳೆಸಿ ಎತ್ತೆತ್ತರಕ್ಕೆ ಬೆಳೆಯಲಿವಳು ಸೂತ್ರಧಾರಿಣಿ ಪದಗಳುಂಟೆ ಬಣ್ಣಿಸಲವಳ ಅದಾವ ಪದಗಳಿಗೂ ನಿಲುಕದ ಅಮ್ಮನದು ನಿಜದಿ ಮೇರು ವ್ಯಕ್ತಿತ್ವ ಬರೀ ದೇವತೆಯಲ್ಲವಳು ಆ ದೇವರಿಗಿಂತಲೂ ಮಿಗಿಲು ವರ್ಣನೆಗೂ ನಿಲುಕದವಳ ಶುದ್ಧ ಮಾತೃತ್ವ      ಡಾ: B.N.ಶೈಲಜಾ ರಮೇಶ್

352 ಜಗಜ್ಯೋತಿ ಬಸವೇಶ್ವರ

Image
ಜಗಜ್ಯೋತಿ ಬಸವೇಶ್ವರ ********************* ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸ ದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರು ದಯೆಯಲಿಹುದು ಧರ್ಮ ಕರುಣೆಯದರ ಮರ್ಮ ಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢ ಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿ ಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿ ಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರ ಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆ ಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿ ಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿ ಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹ ಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹ ದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲ ಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರ ನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿ ಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣ ಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣ ದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯ              ಶೈಲೂ......

351, ನಾ ಹಾರುವ ಹಕ್ಕಿಯಾಗಿದ್ದರೆ.?************************

Image
ನಾ ಹಾರುವ ಹಕ್ಕಿಯಾಗಿದ್ದರೆ.? ************************ ಬಾನಲ್ಲಿ ಹಾರಾಡುವ  ಹಕ್ಕಿ ನಾನಾಗಿದ್ದರೆ ಆಹಾ ಅದೆಷ್ಟು ಚಂದವಿರುತಿತ್ತು ಬೀಗಿಸುತ್ತಾ ಕೊಕ್ಕು ಹಾರಿಸುತ್ತಾ ರೆಕ್ಕೆ ಭೂಮಂಡಲವನ್ನೆಲ್ಲ ಸುತ್ತಬಹುದಿತ್ತು ಹಾಗೇ ತೇಲುತ್ತ ತೇಲುತ್ತ ಗಗನಡೆದೆಗೆ ಹಾರುತ್ತ ಬೆಳ್ಮುಗಿಲಮೇಲೆ ಕೂರಬಹುದತ್ತು ಕಟ್ಟಿದ್ದ ಕಾರ್ಮುಗಿಲ ಕೊಕ್ಕಿನಿಂದ ಕುಕ್ಕುತ್ತಾ ಧರೆಯೆಡೆಗೆ ಮಳೆಯ ಸುರಿಸಬಹುದಿತ್ತು ಖಗವಾಗಿ ಗೆಲುವಾಗಿ ದೇವಲೋಕದೆಡೆಹೋಗಿ ಮಾಧವನನ್ನೊಮ್ಮೆ ನೋಡಬಹುದಿತ್ತು ಮೃದುವಾಗಿ ತಲೆಬಾಗಿ ಭಕ್ತಿಯಿಂದ ಬೇಡಿ ಹೆಗಲಮೇಲವನ ಮೆರೆಸಬಹುದಿತ್ತು ಕಪ್ಪಾದರೇನಂತೆ ಕೋಗಿಲೆ ನಾನಾಗಿ ಇಂಪಾಗಿ ಹಾಡನ್ನ ಹಾಡಬಹುದಿತ್ತು ಹಸಿರುಡುಗೆಯನ್ನುಟ್ಟು ಕೆಂಪು ಕೊಕ್ಕಲಿ ಕುಕ್ಕಿ ರುಚಿಯಾದ ಹಣ್ಣನ್ನು ಸವಿಯಬಹುದಿತ್ತು ಬಣ್ಣಬಣ್ಣದ ಗರಿಯ ಹೊತ್ತ ನವಿಲಾಗಿದ್ದರೆ ಕೃಷ್ಣನ ಮುಡಿಯೇರಿ ನಲಿಯಬಹುದಿತ್ತು ಆಡುತ್ತ ಕುಣಿಯುತ್ತ ಮನವನ್ನು ತಣಿಸುತ್ತ ನನ್ನವನೋಡನಾಟ ಸವಿಯಬಹುದಿತ್ತು ಸ್ವಚ್ಛ ಬಿಳಿಯ ಪುಕ್ಕ ಹೊತ್ತ ಹಂಸನಾನಾಗಿದ್ದರೆ ಪ್ರೇಮಿಗಳ ಪತ್ರ ತಲುಪಿಸಬಹುದಿತ್ತು ಸ್ವಚ್ಛ ಹಾಲಿನೊಳಗೆ ಬೆರೆತ ನೀರನ್ನೊಮ್ಮೆ ಹಂಸಕ್ಷೀರನ್ಯಾಯ ತೋರಬಹುದಿತ್ತು             ಶೈಲೂ....