354 Happy mother's day💐💐💐

Happy mother's day💐💐💐

            ಅಮ್ಮ” ಎಂಬ ಎರಡಕ್ಷರದಲ್ಲಿ ಅದೆಂಥಾ ಮಾಂತ್ರಕತೆಯಿದೆ! ಆ ಶಬ್ದ ಮಾತ್ರ ಉಳಿದ ಶಬ್ದಗಳಂತೆ ಅಧರದಿಂದ ಹೊರಡದೇ ಹೃದಯದಿಂದ ಹೊರಡುತ್ತದೆ. ಇದು ಅತ್ಯಂತ ಹೆಚ್ಚು ಬಾರಿ ಉಚ್ಛರಿಸಲ್ಪಡುವ ಶಬ್ದವೂ ಹೌದು. ಪುಟ್ಟ ಮಗು ಸಂಪೂರ್ಣವಾಗಿ ಅಮ್ಮನನ್ನು ಆಶ್ರಯಿಸಿರುತ್ತದೆ. ಸಂತೋಷವಾದರೂ, ದುಃಖವಾದರೂ, ಭಯವಾದರೂ, ಬಿದ್ದು ನೋವು ಮಾಡಿಕೊಂಡರೂ ಮಗುವಿನ ಬಾಯಿಂದ ಮೊದಲು ಹೊರಬೀಳುವ ಶಬ್ದ “ಅಮ್ಮಾ.” ಎಂದಾಗಿರುತ್ತದೆ. ಮಗು ಬೆಳೆದು ಎಷ್ಟೇ ದೊಡ್ಡವನಾ/ಳಾದರೂ “ಅಮ್ಮ” ಎಂಬ ಆಪ್ತ ಸಂಬಂಧದಿಂದ ಕಳಚಿಕೊಳ್ಳಲು ಸಾಧ್ಯವೇ ಇಲ್ಲ. ಕ್ರೂರ ಹೃದಯದ ಕಟುಕನಿಗೂ “ಅಮ್ಮ” ಎಂಬ ಪದ ಉಚ್ಛರಿಸುವಾಗ ಮನಸ್ಸು ಆರ್ದ್ರವಾಗುತ್ತದೆ.

          ‘ಅಮ್ಮ’. ಎಂತಹ ಕ್ರೂರ ಹೃದಯವನ್ನು ಕೂಡ ಒಂದು ಕ್ಷಣಕ್ಕೆ ಹೂವಾಗಿಸಬಲ್ಲ ಏಕೈಕ ಪದ. ಕೇಳಿದ ತಕ್ಷಣ ಮೊಗದಲ್ಲಿ ಕಿರುನಗು ತರಿಸಬಲ್ಲ ಪದ. ಬುದ್ಧಿ ಬಲಿತಿರದ ಒಂದು ಪುಟ್ಟ ಮಗು ಕೂಡ ಕೇಳಿದ ತಕ್ಷಣ ಸಂತಸದಿ ನಲಿಯುವಂತೆ ಮಾಡುವ ಪದ. ಅದರ ಶಕ್ತಿಯೇ ಅಂತಹುದು. ಆ ವ್ಯಕ್ತಿತ್ವವೇ ಅಂತಹುದು. ಆಕೆ ಮಮತಾಮಯಿ. ಪ್ರೀತಿಯ ಸಾಕಾರಮೂರ್ತಿ.

          ನಮ್ಮನ್ನು ಒಂಭತ್ತು ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಇಟ್ಟುಕೊಂಡು ಕಾಪಾಡಿ, ಅಲ್ಲಿಂದ ಹೊರಬರುತ್ತಿದ್ದಂತೆ ತನ್ನ ಮಡಿಲಿನಲ್ಲಿ ಮಲಗಿಸಿ ಎದೆಹಾಲೆಂಬ ಅಮೃತಪಾನ ಮಾಡಿಸುವ ದೇವತೆಗಳ ದೇವತೆ ಅವಳು. ಈ ಜಗತ್ತಿನಲ್ಲಿ ಪರಿಚಯದ ಅವಶ್ಯಕತೆಯಿರದ ಏಕೈಕ ಸಂಬಂಧ ಎಂದರೆ ತಾಯಿ-ಮಗುವಿನ ಸಂಬಂಧ. ಅವಳ ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಬಹುಷಃ ಯಾವ ಭಾಷೆಯಲ್ಲೂ ಸಾಧ್ಯವಾಗದು. ಪ್ರತಿಫಲಾಪೇಕ್ಷೆ ಇಲ್ಲದೇ ತನ್ನಿಂದ ಸಾಧ್ಯವಾಗುವುದೆಲ್ಲವನ್ನೂ ತನ್ನ ಮಗುವಿಗೆ ಧಾರೆಯೆರೆಯುವವಳು ತಾಯಿ. ಮಗುವಿನ ಪುಟ್ಟ ಪುಟ್ಟ ಹೆಜ್ಜೆಗಳ ಜೊತೆ ಹೆಜ್ಜೆ ಹಾಕುತ್ತ ಹಾಕುತ್ತ ತಾನೆ ಮಗುವಾಗುವ ಮುಗ್ಧ ಮನಸು ತಾಯಿಯದು. ಆಕೆಯ ವ್ಯಕ್ತಿತ್ವ ಅಂತಹುದು-ಇಂತಹುದು ಎಂದು ಹೇಳಹೊರಟರೆ ಅದು ಹುಚ್ಚುತನವಾದೀತು. ಏಕೆಂದರೆ ಆಕೆಯದು ಪರಿಪೂರ್ಣ ವ್ಯಕ್ತಿತ್ವ. ಅದನ್ನು ವಿವರಿಸಲು ಸಹ ಶಕ್ಯವಿಲ್ಲದ ಅಪರಿಪೂರ್ಣತೆ ನನ್ನದು.

      ‘ಅಮ್ಮ’ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? ” ಎಂಬ ಸಾಲಿನಂತೆ, ನೀವು ನೂರು ದೇವರುಗಳನ್ನು ನೂರು ರೀತಿ ಬೇಡಿಕೊಳ್ಳುವ ಬದಲು, ವಿಧವಿಧದ ಹರಕೆ ಹೊತ್ತು ದೇವಸ್ಥಾನಗಳಲ್ಲಿ ಉರುಳು ಸೇವೆ ಮಾಡುವ ಬದಲು, ‘ಅಮ್ಮ’ ಎಂದು ಒಮ್ಮೆ ಮನಸ್ಪೂರ್ವಕವಾಗಿ ಕರೆದರೆ ಅದರಷ್ಟು ಪುಣ್ಯ ಇನ್ಯಾವುದೂ ಇಲ್ಲ. ಆಕೆಗೊಂದಿಷ್ಟು ಪ್ರೀತಿ ತೋರಿಸಿದರೆ ಸಾಕು ಎಲ್ಲ ದೇವರುಗಳ ಆಶೀರ್ವಾದವೂ ಒಮ್ಮೆಲೇ ನಮ್ಮದಾಗುವುದು. ನಾವು ಹೇಳದೇ ನಮ್ಮ ಎಲ್ಲ ಆಸೆಗಳನ್ನು ಪೂರೈಸುವ ಒಬ್ಬಳೇ ದೇವರು ಎಂದರೆ ಅದು ತಾಯಿ. ಈ ಸಮಯದಲ್ಲಿ ತಾಯಿಯ ಬಗೆಗಿನ ಇನ್ನೊಂದು ಸಾಲು ನೆನಪಾಗುತ್ತಿದೆ; “ಬ್ರಹ್ಮ, ವಿಷ್ಣು, ಶಿವ ಎದೆ ಹಾಲು ಕುಡಿದರು. ತಾಯಿ ನೀನೆ ದೈವ ಎಂದು ಕೈಯ ಮುಗಿದರು”. ತಾಯಿಯ ಶ್ರೇಷ್ಠತೆಯನ್ನು ಬಿಂಬಿಸಲು ಬಳಸಿಕೊಂಡ ಅತಿ ಸುಂದರವಾದ ಸಾಲುಗಳವು. ನಾವೆಲ್ಲ ರಾಶಿಗಟ್ಟಲೆ ಬೇಡಿಕೆಗಳನ್ನು ಯಾರ ಮುಂದಿಡುತ್ತೇವೋ, ಆ ಹರಿ ಹರ ಬ್ರಹ್ಮರಿಗೂ ಎದೆಹಾಲು ಕುಡಿಸಿದ ಒಬ್ಬ ತಾಯಿ ಇದ್ದಾಳೆ; ಆ ತಾಯಿಗೆ ತ್ರಿಮೂರ್ತಿಗಳೂ ತಲೆಬಾಗುತ್ತಾರಂತೆ. ಅಂದಮೇಲೆ ಆ ವ್ಯಕ್ತಿತ್ವದ ಎತ್ತರದ ಎದುರು ನಾವೆಲ್ಲರೂ ಅದೆಷ್ಟು ಕುಬ್ಜರು ಎಂಬುದನ್ನು ಅರಿಯಬಹುದು. ಆಕೆ ತಾಳ್ಮೆಯ ಭೌತಿಕರೂಪ. ಪುಟ್ಟ ಮಗುವಾಗಿರುವಾಗ ತನ್ನ ಪುಟ್ಟ ಕಾಲ್ಗಳಿಂದ ಮಡಿಲನ್ನು ತುಳಿಯುವ ಮಗುವನ್ನು ತಾಳ್ಮೆಯಿಂದ ಸಹಿಸಿ ಮುದ್ದಾಡುವ ತಾಯಿ ಅದೇ ಮಗು ಬೆಳೆದು ದೊಡ್ಡದಾಗಿ ತನ್ನನ್ನು ತಿರಸ್ಕರಿಸಿ ತನ್ನ ಮಾತುಗಳಿಂದ ತುಳಿದು ಮನೆಯಿಂದ ಹೊರಹಾಕಿದರೂ ಅದನ್ನು ಕೂಡ ಅಷ್ಟೇ ತಾಳ್ಮೆಯಿಂದ ಸಹಿಸಿ ತನ್ನ ಕರುಳ ಕುಡಿಗೆ ಒಳಿತನ್ನೇ ಹಾರೈಸುತ್ತಾಳೆ. ಬೇರೆ ಯಾವುದಾದರೂ ವ್ಯಕ್ತಿ ಅಥವಾ ಸಂಬಂಧದಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? ಖಂಡಿತ ಇಲ್ಲ.

        ಅಮ್ಮ ಎಂದರೆ ದೇವರು ಎನ್ನುತ್ತಾರೆ. ಅದು ಸುಲಭವಾಗಿ ಸಿಗುವ ಹೋಲಿಕೆ ಕೂಡ. ಆದರೆ ಅಮ್ಮನನ್ನು ನಾನು ದೇವರಿಗೆ ಹೋಲಿಸುವುದಿಲ್ಲ. ಏಕೆಂದರೆ, ಬೇಕೆಂದಾಗ ದೇವರು ನಮ್ಮ ಕೈಗೆ ಸಿಗುವುದಿಲ್ಲ. ಅಮ್ಮ ಹಾಗಲ್ಲ – ನನ್ನ ಕಷ್ಟಸುಖಗಳಿಗೆ ಜೊತೆಯಾಗಿ ಸದಾ ನನ್ನೊಂದಿಗೆ ಇರುತ್ತಾಳೆ. ಆದ್ದರಿಂದ ಅಮ್ಮ ‘ನನ್ನ ಆಪ್ತಗೆಳತಿ’ ಎಂದು ಹೇಳಿಕೊಳ್ಳುತ್ತೇನೆ.   ಯಾರೊಂದಿಗೂ ಹೇಳಿಕೊಳ್ಳಲಾಗದ ವಿಷಯವನ್ನು ಅಮ್ಮನ ಹತ್ರ ಹೇಳಿ ಮನಸ್ಸನ್ನ ಹಗುರಾಗಿಸಿಕೊಳ್ತೀನಿ...ಅಮ್ಮನನ್ನ ಮನಸ್ಸಿನ ನೋವಿನ ಮುಲಾಮು...ಅದೆಷ್ಟೇ..ಜಟಿಲ ಸಮಸ್ಯೆಯನ್ನೂ ಕ್ಷಣಾರ್ಧದಲ್ಲಿ ಪರಿಹರಿಸುವ ನನ್ನಮ್ಮ ನಿಜಕ್ಕೂ ದೇವತೆಯೇ.

          83 ರ ಇಳಿ ವಯಸ್ಸಿನಲ್ಲೂ... ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದರೂ ಇಂದಿಗೂ ಉತ್ಸಾಹದ ಚಿಲುಮೆ ನನ್ನಮ್ಮ... ಈಗಲೂ.ಕಲಿಕೆಯಲ್ಲಿ ಅದೆಷ್ಟು ಆಸ್ಥೆ...ಯಾವುದೇ ವಿಚಾರವನ್ನೂ ಆಮೂಲಾಗ್ರವಾಗಿ ಕಲಿಯಬೇಕೆನ್ನುವ ನನ್ನಮ್ಮ...ಕಲಿಯುವವರಿಗೆ ಸ್ಫೂರ್ತಿ.  ಕಷ್ಟಗಳ ಸರಮಾಲೆಯಲ್ಲೇ ನಲುಗಿ ಹೋಗಿದ್ದರೂ...ಯಾವುದನ್ನೂ ತೋರಗೊಡದೆ.. ನಿತ್ಯ ನಳನಳಿಸುವ  ನನ್ನಮ್ಮ ಎಂದಿಗೂ ಬಾಡದ ಹೂವು... ಆ ಹೂವ ಸೌಗಂಧವ  ಅಘ್ರಾಣಿಸುತ್ತಾ ಬೆಳೆದ ನಾನು ನಿಜಕ್ಕೂ ಧನ್ಯೇ🙏
       ಡಾ:B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ