351, ನಾ ಹಾರುವ ಹಕ್ಕಿಯಾಗಿದ್ದರೆ.?************************

ನಾ ಹಾರುವ ಹಕ್ಕಿಯಾಗಿದ್ದರೆ.?
************************

ಬಾನಲ್ಲಿ ಹಾರಾಡುವ 
ಹಕ್ಕಿ ನಾನಾಗಿದ್ದರೆ
ಆಹಾ ಅದೆಷ್ಟು ಚಂದವಿರುತಿತ್ತು
ಬೀಗಿಸುತ್ತಾ ಕೊಕ್ಕು
ಹಾರಿಸುತ್ತಾ ರೆಕ್ಕೆ
ಭೂಮಂಡಲವನ್ನೆಲ್ಲ ಸುತ್ತಬಹುದಿತ್ತು

ಹಾಗೇ ತೇಲುತ್ತ ತೇಲುತ್ತ
ಗಗನಡೆದೆಗೆ ಹಾರುತ್ತ
ಬೆಳ್ಮುಗಿಲಮೇಲೆ ಕೂರಬಹುದತ್ತು
ಕಟ್ಟಿದ್ದ ಕಾರ್ಮುಗಿಲ
ಕೊಕ್ಕಿನಿಂದ ಕುಕ್ಕುತ್ತಾ
ಧರೆಯೆಡೆಗೆ ಮಳೆಯ ಸುರಿಸಬಹುದಿತ್ತು

ಖಗವಾಗಿ ಗೆಲುವಾಗಿ
ದೇವಲೋಕದೆಡೆಹೋಗಿ
ಮಾಧವನನ್ನೊಮ್ಮೆ ನೋಡಬಹುದಿತ್ತು
ಮೃದುವಾಗಿ ತಲೆಬಾಗಿ
ಭಕ್ತಿಯಿಂದ ಬೇಡಿ
ಹೆಗಲಮೇಲವನ ಮೆರೆಸಬಹುದಿತ್ತು

ಕಪ್ಪಾದರೇನಂತೆ
ಕೋಗಿಲೆ ನಾನಾಗಿ
ಇಂಪಾಗಿ ಹಾಡನ್ನ ಹಾಡಬಹುದಿತ್ತು
ಹಸಿರುಡುಗೆಯನ್ನುಟ್ಟು
ಕೆಂಪು ಕೊಕ್ಕಲಿ ಕುಕ್ಕಿ
ರುಚಿಯಾದ ಹಣ್ಣನ್ನು ಸವಿಯಬಹುದಿತ್ತು

ಬಣ್ಣಬಣ್ಣದ ಗರಿಯ
ಹೊತ್ತ ನವಿಲಾಗಿದ್ದರೆ
ಕೃಷ್ಣನ ಮುಡಿಯೇರಿ ನಲಿಯಬಹುದಿತ್ತು
ಆಡುತ್ತ ಕುಣಿಯುತ್ತ
ಮನವನ್ನು ತಣಿಸುತ್ತ
ನನ್ನವನೋಡನಾಟ ಸವಿಯಬಹುದಿತ್ತು

ಸ್ವಚ್ಛ ಬಿಳಿಯ ಪುಕ್ಕ
ಹೊತ್ತ ಹಂಸನಾನಾಗಿದ್ದರೆ
ಪ್ರೇಮಿಗಳ ಪತ್ರ ತಲುಪಿಸಬಹುದಿತ್ತು
ಸ್ವಚ್ಛ ಹಾಲಿನೊಳಗೆ
ಬೆರೆತ ನೀರನ್ನೊಮ್ಮೆ
ಹಂಸಕ್ಷೀರನ್ಯಾಯ ತೋರಬಹುದಿತ್ತು

            ಶೈಲೂ....

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ