ಅಪ್ಪ.... ಒಂದು ನೆನಪು
#ಅಪ್ಪ
#ಒಂದು_ನೆನಪು
ಅಬ್ಬಾ..... ಎಷ್ಟು ಮೆಣಸಿನಕಾಯಿ ಹಾಕಿದ್ದೀಯಮ್ಮ, ಉರಿಗಾರ.... ತಿನ್ನೋಕಾಗುತ್ತಾ ಇದನ್ನ, ನೀ ಏನು ಮಾಡಬೇಡ ಅಂತ ನಾ ಹೇಳಿದ್ದೆ ತಾನೇ.? ಯಾಕೆ ಮಾಡೋಕ್ಕೆ ಹೋದೆ.? ನೋಡು.... ನಿನ್ ಕಣ್ಣಲ್ಲಿ ಹೇಗೆ ನೀರ್ ಸುರೀತಾ ಇದೆ, ಇನ್ನು ನಾಲಿಗೆ ಎಷ್ಟು ಉರೀತಿರಬಹುದು ಅಂತ ಕರುಣೆ, ಪ್ರೀತಿ, ವಾತ್ಸಲ್ಯಭರಿತ ಕೋಪದಿಂದ ಅಪ್ಪ ನನ್ನನ್ನು ಬೈತಾ ಬೈತಾನೇ ಬಾಯಿಗೆ ಚಿಟಕಿ ಉಪ್ಪು ಹಾಕಿ, ನೀರು ಕುಡಿಸಿದರು. ತಣ್ಣಗಿದ್ದ ಹಾಲಿಗೆ ಎರಡು ಸ್ಪೂನ್ ಸಕ್ಕರೆ ಹಾಕಿ ನನಗೊಂದು ಲೋಟ ಕೊಟ್ಟು... ತಾನೂ ಕುಡಿದರು. ಅಮ್ಮ ಮಾಡಿಟ್ಟಿದ್ದ ರವೇಉಂಡೆ ಕೊಟ್ಟು ತಾನೂ ಒಂದು ತಿಂದರು. ಇಷ್ಟಾದರೂ ಖಾರದ ಉರಿ ಕಡಿಮೆ ಆಗಲಿಲ್ಲ, ಬರೀ ಒಂದೇ ತುತ್ತನ್ನ ತಿಂದಿದ್ದಕ್ಕೆ ಇಷ್ಟು ತಾಳದ ಉರಿ.... ಇನ್ನೇನಾದ್ರೂ ಬಡಿಸಿಕೊಂಡದ್ದಷ್ಟೂ ತಿಂದಿದ್ದರೆ ಗತಿಯೇನು.? ನನಗೇನೋ ಖಾರ ತಿಂದು ಅಭ್ಯಾಸವಿದೆ... ಆದರೂ ನನಗೇ ತಾಳಲಾರದಷ್ಟು ಖಾರ.. ಇನ್ನು ನಿನ್ನ ಪಾಡೇನು ಮಗು ಅಂತ ಅತ್ತೇ ಬಿಟ್ಟರು ಅಪ್ಪ..!😢
ನಾನೇನು ಚಿಕ್ಕ ಮಗುವೇನಾಗಿರಲಿಲ್ಲ.. 15 _16 ರ ಆಸುಪಾಸು, P U C ಪರೀಕ್ಷೆ ಬರೆದಿದ್ದೆ, ಆದರೂ ಒಂದು ಚಿಕ್ಕಾಸಿನ ಕೆಲಸ ಮಾಡಿ ಗೊತ್ತಿರಲಿಲ್ಲ, ಹಳ್ಳಿಯಲ್ಲಿ ನನ್ನ ಓರಿಗೆಯವರೆಲ್ಲ ಕೆಲಸದಲ್ಲಿ ಎಕ್ಸ್ಪರ್ಟ್ಸ್ ಆಗಿದ್ರು, ಅಡುಗೆಯಿಂದ ಹಿಡಿದು... ಎಲ್ಲ ಮನೆಗೆಲಸವನ್ನೂ ಬಲ್ಲವರಾಗಿದ್ದರು, ಜೊತೆಗೆ ರಜಾದಿನಗಳಲ್ಲಿ ಹಸುಗಳನ್ನು ಮೇಯಿಸುವುದು, ಅವುಗಳಿಗೆ ಹುಲ್ಲನ್ನು ಕೊಯ್ದು ತರುವುದು, ಕೊಟ್ಟಿಗೆ ಶುದ್ಧಗೊಳಿಸುವುದು ಎಲ್ಲವನ್ನೂ ಮಾಡುತ್ತಿದ್ದರು. ನಾನೋ.... ಅಮ್ಮ ಮಾಡಿದ ತರಾವರಿ ರುಚಿಕಟ್ಟಾದ ತಿಂಡಿ ತಿನ್ಕೊಂಡು... ಓದ್ಕೊಂಡು, ತೋಚಿದ್ದನ್ನ ಗೀಚ್ಕೊಂಡು, ಕಥೆ - ಸಣ್ಣ ನಾಟಕ ಅಂತ ಬರ್ಕೊಂಡು, ಕಸೂತಿ ಹಾಕ್ಕೊಂಡು, ಚಿತ್ರ ಬಿಡಿಸ್ಕೊಂಡು, ತರಾವರಿ ಗೆಜ್ಜೆವಸ್ತ್ರ ಮಾಡ್ಕೊಂಡು, ದೊಡ್ಡದೊಡ್ಡ ಗ್ರಂಥಗಳನ್ನ ಓದ್ಕೊಂಡು, ಅಕ್ಕಿ ರಾಗಿ ಕ್ಲೀನ್ ಮಾಡ್ಕೊದಕ್ಕೆ ಬರ್ತಾ ಇದ್ದ ಕೆಲಸದವರನ್ನ ಕೀಟಲೆ ಮಾಡ್ಕೊಂಡು ಕಾಲ ಕಳೀತಿದ್ದೆ. ಅಮ್ಮನೂ ಒಂದೂ ಕೆಲಸ ಮಾಡೋಕ್ಕೆ ಹೇಳ್ತಿರ್ಲಿಲ್ಲ, ಒಂದ್ವೇಳೆ ಹೇಳಿದ್ರೂ ಅಪ್ಪ ಮಾಡೋಕ್ಕೆ ಬಿಡ್ತಾ ಇರ್ಲಿಲ್ಲ.
ಮೂರು ಮಕ್ಕಳ ನಂತರ ಸುಮಾರು ವರ್ಷಕ್ಕೆ ನಾನು ಹುಟ್ಟಿದ್ದು, ನನ್ನ ಹಿರಿಯಣ್ಣನಿಗೂ ನನಗೂ ಸುಮಾರು 20 ವರ್ಷಗಳ ಅಂತರ, ನನಗಿಂತ ಮೊದಲು ಹುಟ್ಟಿದ ಅಕ್ಕನಿಗೂ ನನಗೂ ಸರಿಯಾಗಿ 10 ವರ್ಷಗಳ ಅಂತರ, ಹಾಗಾಗಿ ಚಿಕ್ಕವಳಾದ ನಾನಂದ್ರೆ ಮನೆಯವರೆಲ್ಲರಿಗೂ ಅಚ್ಚುಮೆಚ್ಚು, ಇಷ್ಟು ದೊಡ್ಡವಳಾದ್ರೂ ಇನ್ನೂ ಮಗು ಅಂತಲೇ ಟ್ರೀಟ್ ಮಾಡ್ತಿದ್ದದ್ದು, ಹಾಗಾಗಿ ಸ್ವಲ್ಪ ಕೊಬ್ಬು ಹೆಚ್ಚೇ ಇತ್ತು ನನಗೆ. ಅಲ್ಲದೆ ಕೆಲಸ ಮಾಡುವ ಸಂದರ್ಭವೇ ಒದಗಿ ಬಂದಿರಲಿಲ್ಲ. ಅಮ್ಮ, ಅಕ್ಕ, ಅತ್ತಿಗೆ, ಜೊತೆಗೆ ಮನೆಯ ಆಳುಮಕ್ಕಳು ಕೆಲಸ ಮಾಡ್ತಿದ್ದಿದ್ರಿಂದ... ನನಗೆ ಕೆಲಸವೇ ಇರ್ತಿರ್ಲಿಲ್ಲ. ನಾನು ಕೆಲಸ ಮಾಡಿದ್ದು ಅಂದ್ರೆ ನನ್ನಕ್ಕನ ದೊಡ್ಡ ಮಗ ಸೋನು(ನವೀನ್) ಹುಟ್ಟಿದ ಮೇಲೆ..! ಅವನಿಗಾಗಿ ಕೈಯಲ್ಲೇ ಪುಟ್ಟ ಪುಟ್ಟ ಬಟ್ಟೆ ಹೊಲೆಯೋದು, ಅವನನ್ನು ಎತ್ತಿಕೊಳ್ಳೇದು, ಅಮ್ಮ ಸ್ನಾನ ಮಾಡಿಸಿಕೊಟ್ಟರೆ, ಅವನಿಗೆ ಡ್ರೆಸ್ ಮಾಡೋದು, ಸ್ವಲ್ಪ ದೊಡ್ಡವನಾದ್ಮೇಲೆ ಅವನಿಗೆ ತಿನ್ನಿಸೋದು, ಎತ್ತಿ ಆಡಿಸೋದು, ಅಮ್ಮನಿಗೆ ಚಿಕ್ಕ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡೋದು... ಹೀಗೆ.... ಬಾರೀ ಕೆಲಸಗಳನ್ನ ಮಾಡ್ತಿದ್ದೆ😜
ಹೀಗಿದ್ದ..... ನಾನು, ಅವತ್ತು ಅಡುಗೆ ಮಾಡ್ಲಿಕ್ಕೆ ಕಾರಣ ಇದೆ, ಅಕ್ಕನಿಗೆ ಮದುವೆ ಆಗಿತ್ತು, ಅಕ್ಕ ಮೂರ್ನಾಲ್ಕು ತಿಂಗಳ ಪ್ರೆಗ್ನೆoಟ್, ದೊಡ್ಡಣ್ಣ ಪ್ರಕಾಶಣ್ಣನಿಗೆ ಮದುವೆಯಾಗಿ 5 ವರ್ಷವಾಗಿದ್ದರೂ ಇನ್ನೂ ಮಕ್ಕಳಾಗಿರಲಿಲ್ಲ, ಹಾಗಾಗಿ ಅತ್ಗಿಗೆಗೆ DMC ಮಾಡ್ಸೋಕ್ಕೆ ಬೆಂಗಳೂರಿಗೆ ಅಣ್ಣನ ಮನೆಗೆ ಹೋಗಿದ್ರು, ಆಗ ಮನೆಯಲ್ಲಿ ನಾನು ಅಪ್ಪ ಇಬ್ಬರೇ... ಅಪ್ಪ ಪ್ರತೀದಿನ ತಾವೇ ಅಡುಗೆ ತಿಂಡಿ ಮಾಡ್ತಾ ಇದ್ರು.. ನಾನು ಅಪ್ಪನಿಗೆ ಬಲವಂತದಿಂದ ಚಿಕ್ಕಪುಟ್ಟ ಸಹಾಯ ಮಾಡ್ತಿದ್ದೆ. ಅಂದು ಅಪ್ಪ ಹೊರಗೆ ಹೋಗಿದ್ದವರು ಇನ್ನೂ ಬಂದಿರಲಿಲ್ಲ.. ಅಡುಗೆ ಇನ್ನೂ ಮಾಡಿರಲಿಲ್ಲ, ಅಪ್ಪ ಹೊರಗೆ ಹೋಗುವಾಗಲೇ ಸ್ವಲ್ಪ ಲೇಟಾಗಬಹುದು ಅಮ್ಮು, ಬಂದು ಅಡುಗೆ ಮಾಡ್ತೀನಿ, ಹಸಿವಾದ್ರೆ ತಿಂಡಿಗಳಿದೆಯಲ್ಲ ತಿಂದ್ಕೊ ಅಂತ ಹೇಳೇ ಹೋಗಿದ್ರು.
ಅಪ್ಪನ ದಿನಚರಿ ದೊಡ್ಡದು...! ಬೆಳಗ್ಗೆ 5 :30ಕ್ಕೆ ಎದ್ದು ನಿತ್ಯಕರ್ಮಗಳನ್ನ ಮುಗಿಸಿ, ಹಸುವಿನಿಂದ ಹಾಲು ಕರೆದು, ಕಾಫಿ ಕುಡಿದು, ಒಂದು ರೌಂಡ್ ಹೊಲಗದ್ದೆ ತೋಟಗಳ ಕಡೆ ಅಡ್ಡಾಡಿ, ಕೈಯಲ್ಲಿ ತೆಂಗಿನಕಾಯೋ.. ಬಾಳೆಕಾಯೋ... ಹೊಲದಲ್ಲಿ ಬೆಳೆದಿದ್ದ ಏನಾದ್ರೂ ತರಕಾರಿಯೋ ಹಿಡಿದು 7 .30 ರ ಹೊತ್ತಿಗೆ ಮನೆಗೆ ಬಂದು, ಸ್ನಾನ - ಸಂಧ್ಯಾವಂದನೆ, ಪೂಜೆ ಮುಗಿಸಿ ಮತ್ತೆ ಆಳುಮಕ್ಕಳಿಗೆ ಹೊಲದ ಕೆಲಸ ಮಾಡಲು ಕರೆಯಲಿಕ್ಕೆ ಹೋದರೋ, ಜ್ಯೋತಿಷಿಯಾದ್ದರಿಂದ ಬಂದವರಿಗೆ ಶಾಸ್ತ್ರ ಹೇಳಲಿಕ್ಕೋ ಕುಳಿತರೋ 10 ಗಂಟೆಯಾದರೂ ಒಳಗೆ ಬರುತ್ತಿರಲಿಲ್ಲ, ಒಮ್ಮೊಮ್ಮೆ ಮಕ್ಕಳಿಗೆ ಯಂತ್ರ ಮಂತ್ರ ಹಾಕಲು ಹೊರಗೇನಾದ್ರೂ ಹೋದ್ರೆ ಆಗಲೂ ಲೇಟೆ.... ಅಂತೂ ತಿಂಡಿ ತಿನ್ನುವ ಹೊತ್ತಿಗೆ ಹತ್ತೂವರೆಯೋ ಹನ್ನೊಂದೋ ಆಗುತ್ತಿತ್ತು. ನಂತರ ಹೊಲಗದ್ದೆಯ ಕೆಲಸಗಳತ್ತ ಗಮನ. ಕೆಲಸಕ್ಕೆ ಆಳು ಮಕ್ಕಳು ಹೆಚ್ಚಿದ್ದರೆ, ಅವರಿಗೆ ಊಟದ ವ್ಯವಸ್ಧೆಗೆ ಅಮ್ಮನಿಗೆ ಸಹಾಯ ಮಾಡುತ್ತಿದ್ದರು. 50 ರ ಮೇಲ್ಪಟ್ಟು ಮುದ್ದೆಗಳು, ಕಡಿಮೆ ಅಂದ್ರೂ 5 ಸೇರಕ್ಕಿ ಅನ್ನ, ಒಂದು ದೊಡ್ಡ ಕೊಳಗದ ತುಂಬಾ ಗಟ್ಟಿ ಹುಳಿ, ಒಂದು ದೊಡ್ಡ ಕೊಡ ಮಜ್ಜಿಗೆ, ಎರಡು ಕುಡಿಯುವ ನೀರಿನ ಕೊಡ, ಇವಿಷ್ಟೂ ವಾರಕ್ಕೆ ನಾಲ್ಕು ದಿನವಾದರೂ ಹೊಲಗದ್ದೆಗೆ ಆಳುಮಕ್ಕಳಿಗೆ ತೊಗೊಂಡು ಹೋಗಬೇಕಾಗಿತ್ತು. ಕೆಲಸಕ್ಕೆ.ಬಂದಿರುವ ಯಾರಾದರೂ ಒಂದಿಬ್ಬರು ಆಳುಗಳು ಬಂದು ಊಟವನ್ನು ಹೊತ್ತೊಯ್ಯುತ್ತಿದ್ದರಾದರೂ ... ಅಮ್ಮ ಒಂದು ಸಣ್ಣ ಬುತ್ತಿಯನ್ನು ಹೊತ್ತು ಜೊತೆಗೆ ನೀರನ್ನೂ ಹೊತ್ತು ಕೆಲಸಗಳು ನಡೆಯುವಲ್ಲಿಗೆ ಅಪ್ಪನೊಟ್ಟಿಗೆ ಹೋಗುತ್ತಿದ್ದರು. ಅವರಿಗೆಲ್ಲ ಬಡಿಸಿ ತಾವೂ ತಿಂದು .. ಅವರೆ , ಹಲಸಂದಿ, ಇನ್ನೇನಾದರೂ ತರಕಾರಿ ಹೊಲದಲ್ಲಿದ್ದರೆ ತರುತ್ತಿದ್ದರು. ಮಧ್ಯಾಹ್ನ ಸಣ್ಣದೊಂದು ನಿದ್ದೆ... ಯಾರಾದರೂ ಪೃಚ್ಛಕರು ಬಂದ್ರೆ ಒಮ್ಮೊಮ್ಮೆ ಆ ನಿದ್ರೆಗೂ ಕತ್ತರಿ..! ಸಂಜೆ ಕಾಫಿ ಕುಡಿದು ಕೆಲಸದಾಳುಗಳಿಗೂ ಕೊಟ್ಟು.... ಅಲ್ಲಿನ ಆಗುಹೋಗುಗಳನ್ನ ನೋಡಿ 6 ಗಂಟೆಗೆ ಮನಗೆ ಬಂದು ಫ್ರೆಶಪ್ ಆಗಿ, ಕೇಳಲು ಬಂದವರಿಗೆ ಜೋತಿಷ್ಯ ಹೇಳುವುದೋ... ಬಾಲಗ್ರಹ ಯಂತ್ರ ಮಂತ್ರ ಹಾಕುವುದೋ ನಡೆಯುತ್ತಿತ್ತು. ಇವುಗಳು ಇಲ್ಲದಾಗ ಸ್ನೇಹಿತರ ಮನೆಗೆ ಹೋಗಿ ಬರುವುದೋ ನಡೆಯುತ್ತಿತ್ತು.
ಬೇಸಿಗೆ ಕಾಲದಲ್ಲಿ ಹೊಲಗದ್ದೆ ಕೆಲಸಗಳು ಅಷ್ಟಾಗಿ ಇರುತ್ತಿರಲಿಲ್ಲ. ಆದರೆ ಜ್ಯೋತಿಷ್ಯ ಸೇವೆ ನಡೆಯುತ್ತಿತ್ತು. ಅಂದೂ ಹಾಗೆಯೇ... ಊರಿನ ಗೌಡರ ಮನೆಯಲ್ಲಿ ಯಾವುದೋ ಪೂಜೆ ಮಾಡಿಸಲಿಕ್ಕೆ ಹೋಗಿದ್ದರು. ಲೇಟಾಗಬಹುದು, ಹಸಿವಾದರೆ ಅಮ್ಮ ಮಾಡಿಟ್ಟಿರುವ ತಿಂಡಿ ತಿಂದ್ಕೊ .. ನಾ ಬಂದು ಅಡುಗೆ ಮಾಡ್ತೀನಿ ಅಂತ ಹೇಳೇ ಹೋಗಿದ್ದರು. ನಾನೂ ಏನೋ ಬರೀತಾ ಕೂತಿದ್ದೆ, ನಮ್ಮ ಹೊಲದ ಪಕ್ಕದ ಹೊಲದವರಾದ ಸೀತಮ್ಮ ಮನೆಗೆ ಬಂದ್ರು, ಏನಮ್ಮಯ್ಯ ಚನ್ನಾಗಿದ್ದೀಯಾ... ಎಷ್ಟು ದಿನ ಆಯ್ತು.ನಿನ್ನ ನೋಡಿ, ಯಾವಾಗ ಬಂದೆ ಬೆಂಗ್ಳೂರಿಂದ ಅಂತ ಪ್ರಶ್ನೆಗಳ ಸುರಿಮಳೆಯೇ ಸುರಿಸಿದ್ರು.. ಅಮ್ಮಣ್ಣಿ ಎಲ್ಲಿ.? ಐನೋರು ಎಲ್ಲಿ ಅಂತ ಅಪ್ಪ ಅಮ್ಮನನ್ನ ವಿಚಾರಿಸಿದ್ರು( ಹಳ್ಳಿಗಳ ಕಡೆ ಬ್ರಾಹ್ಮಣರ ಹಿರಿಯ ಹೆಂಗಸರನ್ನು ಅಮ್ಮಣ್ಣಿ, ಗಂಡಸರನ್ನು ಐನೋರು ಅಂತ ಕರೀತಿದ್ರು) ಹೀಗೆ ಮಾತಾಡ್ತಾ ಮಾತಾಡ್ತಾ ಏನು ಅಡುಗೆ ಮಾಡಿದ್ದೆ ಅಮ್ಮಯ್ಯ ಅಂತ ಕೇಳಿದ್ದಕ್ಕೆ, ಇಲ್ಲ ಆಂಟಿ... ಅಪ್ಪ ಹೊರಗಡೆ ಹೋಗಿದ್ದಾರೆ, ಅವರು ಬಂದ ಮೇಲೆ ಮಾಡ್ತಾರೆ, ನನಗೆ ಮಾಡೋಕ್ಕೆ ಬರಲ್ಲ ಅಂದೆ.... ಅಷ್ಟoದಿದ್ದೆ ಸಾಕು..... ಅಯ್ಯೋ ನೀನೆಂಥ ಮಗಳು, ಐನೋರ ತಾವ ಮಾಡಿಸ್ಕೊಂಡು ತಿಂತೀಯಾ... ಇಷ್ಟು ದೊಡ್ಡದಾಗಿ ಬೆಳೆದಿದ್ದಿ, ಅಡುಗೆ ಮಾಡಕ್ಬರಲ್ಲ ಅಂದ್ರೆ ಏನರ್ಥ.? ನಾಳೆ ನಿನ್ನ ಕಟ್ಕೊಂಕೊಂಡವ್ನ ಗತಿ ಏನು.? ಅತ್ತೆ ಮನೆಲ್ಲಿ ಅಡುಗೆ ಮಾಡೋಕ್ಕೆ ಬರಲ್ಲ ಅಂದ್ರೆ ಕೂರಿಸಿ ಮಾಡಿ ಹಾಕ್ತಾರಾ.? ಬರೀ ಓದ್ಬುಟ್ರೆ ಆಯ್ತಾ.? ಅಡುಗೆ ಮಾಡೋದೂ ಕಲೀಬೇಕು. ನಮ್ಮನೆಗಳಲ್ಲಿ 10. 11 ವಯಸ್ಸಾಯ್ತು ಅಂದ್ರೆ ಅಡ್ಗೆ ಮನೆಗಾಕ್ತೀವಿ ಹೆಣ್ಮಕ್ಕಳನ್ನ.. ಆಳುಗಳು ಬಂದ್ರೂ ಅವರೇ ಅಡುಗೆ ಮಾಡ್ಬೇಕು, ಹಬ್ಬ ಆದ್ರೂ ಅವರೇ ಮಾಡ್ಬೇಕು, ಸ್ಕೂಲ್ಗೊದ್ರೂ ಅಡುಗೆ ಮಾಡಿಟ್ಟೆ ಹೋಗ್ಬೇಕು. ನಿಮ್ಮನೆಗಳಂಗೆ ಸಾಕಲ್ಲ ನಾವು... ಅದೇನ್ ಬುದ್ದಿ ಕಲ್ಸವ್ರೆ ಅಮ್ಮಣ್ಣಿ ನಿಂಗೆ ಅಂತ ಒಂದು ರಾಶಿ ಮಾತಾಡಿಬಿಟ್ಟು ಹೋದ್ಲು.
ತುಂಬಾ ಬೇಜಾರಾಯ್ತು, ಜೊತೆಗೆ ಅಳುವೂ ಬಂತು. ಹೌದಲ್ವಾ ಅಂತಲೂ ಅನ್ನಿಸ್ತು, ಪಕ್ಕದ ಮನೆಯ ನಾರಾಯಣಪ್ಪನ್ ಮಗಳು ಲಲಿತಾ ನನಗಿಂತ ಚಿಕ್ಕವಳು, ಎಷ್ಟು ಕೆಲ್ಸ ಮಾಡ್ತಾಳೆ, ಎಲ್ಲಾ ಮನೆಗೆಲಸದ ಜೊತೆಗೆ ಅಡುಗೆಯೂ ಮಾಡ್ತಾಳೆ,.ಅವರ ಅಮ್ಮ ಅಪ್ಪಂದು ಹೊರಗಡೆ ಕೆಲಸ ಮಾತ್ರ. ಇನ್ನ ನನ್ನ ಎಲ್ಲಾ ಫ್ಟೆಂಡ್ಸ್ ಕೂಡ ಅಡುಗೆ ಮಾಡ್ತಾರೆ. ಈ ಊರಲ್ಲಿ ನಾನೊಬ್ಬಳೇ ಅನ್ನಿಸುತ್ತೆ ಉಂಡಾಡಿ ಅಂತ ಅನಿಸಿ ನನಗೆ ನನ್ನ ಮೇಲೇ ಬೇಸರ ಬಂತು. ಏನಾದ್ರೂ ಸರಿ ಇವತ್ತು ಅಡುಗೆ ಮಾಡ್ಲೆ ಬೇಕು ಅನಿಸಿ ಕುಕ್ಕರಲ್ಲಿ ಅನ್ನಕ್ಕೆ ಇಟ್ಟೆ, ಸಾರು ಏನ್ಮಾಡೋದು.? ತರಕಾರಿ ಹಾಕಿದ್ರೆ ಅದಕ್ಕೆ ಏನೇನೋ ರುಬ್ಬಿ ಹಾಕ್ಬೇಕು, ಅಷ್ಟೆಲ್ಲ ಗೊತ್ತಿಲ್ಲ , ಸಿಂಪಲ್ ಆಗಿ ಏನಾದ್ರೂ ಮಾಡ್ಬೇಕು...ಏನ್ ಮಾಡ್ಲಿ ಅಂತ ಯೋಚಿಸುತ್ತಲೇ ಹಿತ್ತಲಿಗೆ ಬಂದೆ. ಬೆಳೆದಿದ್ದ ಟೊಮ್ಯಾಟೋ ಕಾಯಿಗಳು ಕಾಣಿಸ್ತು. ಗೊಂಚಲು ಗೊಂಚಲಾಗಿ ಬೆಳೆದಿದ್ದ ಗೋರಿಕಾಯಿ ಕಾಣಿಸ್ತು. ಅಪ್ಪ ಅವತ್ತೆಂದೋ ಟೊಮ್ಯಾಟೋ ಕಾಯಿ ಗೊಜ್ಜು ಮಾಡಿದ್ದು ನೆನಪಿಗೆ ಬಂತು, ಅದನ್ನೇ ಮಾಡೋಣ ಅಂದ್ಕೊಂಡೆ ಗೋರಿಕಾಯಿ ಪಲ್ಯ ಅಪ್ಪನಿಗೂ ಇಷ್ಟ, ನನಗೂ ಇಷ್ಟ ಅದನ್ನು ಮಾಡೋಣ ಅಂದ್ಕೊಂಡು ಗೋರಿಕಾಯಿ, ಕಾಯಿ ಟೊಮ್ಯಾಟೋ ಕಿತ್ಕೊಂಡೆ. ಮೆಣಸಿನಕಾಯಿ ಗಿಡದ ಸಾಲುಗಳಲ್ಲಿದ್ದ ಒಂದು ಮೆಣಸಿನ ಗಿಡದಲ್ಲಿ ಬೆಳೆದಿದ್ದ ಮೆಣಸಿನಕಾಯಿಗಳು ಇಷ್ಟ ಆಯ್ತು. ಆಕಾಶಕ್ಕೆ ಮುಖ ಮಾಡಿದಂತೆ ಬೆಳೆದಿದ್ದ, ಅತೀ ಪುಟ್ಟ ಪುಟ್ಟ ಕಾಯಿಗಳು ನೋಡೋಕ್ಕಂತೂ ತುಂಬಾ ಚಂದ ಅನ್ನಿಸ್ತು, ಅದು ಜೀರಿಗೆ ಮೆಣಸಂತೆ(ಗಾಂಧಾರಿ ಮೆಣಸು) ಹಿಡಿ ತುಂಬಾ ಕಿತ್ಕೊಂಡು ಬಂದು ಸ್ವಚ್ಛಗೊಳಿಸಿ ಗೊಜ್ಜು ಪಲ್ಯ ಮಾಡಿಯೇ ಬಿಟ್ಟೆ. ಅಪ್ಪ ಅಮ್ಮ ಮಾಡಿದಾಗ ಘಮ್ಮೆನ್ನುವಂತೆಯೇ ನನ್ನ ಅಡುಗೆಯೂ ಚಂದ ಆಯ್ತು.
ಏನೋ ಸಾಧಿಸಿದಂತೆ ಅನ್ನಿಸ್ತು, ಯಾರ ಹೆಲ್ಪ್ ಕೂಡ ಇಲ್ಲದೆಯೇ ಅಡುಗೆ ಮಾಡಿದ್ದೀನಿ, ಸುವಾಸನೆ ಕೂಡ ಇದೆ ಅಂದ್ರೆ ಅಡುಗೆ ಚನ್ನಾಗೇ ಆಗಿದೆ, ಅಪ್ಪ ಬಂದ ತಕ್ಷಣ ಕೂರಿಸಿ ನಾನೇ ಬಡಿಸಬೇಕು, ತಿನ್ನುವಾಗ ಅಪ್ಪನ ರಿಯಾಕ್ಷನ್ ನೋಡಬೇಕು, ತುಂಬಾ ಚೆನ್ನಾಗಿ ಮಾಡಿದ್ದೀಯಾ ಬಂಗಾರಿ ಅಂತ ಅಪ್ಪ ಹೇಳ್ತಾರೆ ಅಂತ ಸಂಭ್ರಮದಿಂದ ಅಪ್ಪ ಬರೋದನ್ನೇ ಕಾಯ್ತಾ ಕೂತ್ಕೊಂಡೆ. ಅಂತೂ ಅಪ್ಪ 2.30 ಗಂಟೆಗೆ ಬಂದ್ರು... ಸಾರಿ ಚಿನ್ನಮ್ಮ... ಲೇಟ್ ಆಯ್ತು, ಹಸಿವಾಗ್ತಾ ಇದೆಯ... ಹತ್ತೇ ನಿಮಿಷ ಬೇಗ ಅಡುಗೆ ಮಾಡಿಬಿಡ್ತೀನಿ ಅಂತೇಳಿ ಬಟ್ಟೆ ಬದಲಾಯಿಸಿ ಕೈಕಾಲು ಮುಖ ತೊಳೆಯಲು ಹೋದ್ರು. ಅಪ್ಪ ಬರುವಷ್ಟರಲ್ಲಿ ತಟ್ಟೆ ಇಟ್ಟು, ನೀರು ಇಟ್ಟು ಮಾಡಿದ ಅಡುಗೆ ತಂದಿಟ್ಟೆ... ಅಪ್ಪನಿಗೆ ಆಶ್ಚರ್ಯ..! ನಿಮ್ ಚಿಕ್ಕಮ್ಮ ತಂದ್ಕೊಟ್ಲೇನಮ್ಮ ಅಂದ್ರು( ನಮ್ಮ ಮನೆ ಪಕ್ಕದಲ್ಲೇ ನಮ್ಮ ಚಿಕ್ಕಪ್ಪನ ಸಂಸಾರ ಇದ್ದದ್ದು). ನಾನೊಬ್ಬಳೇ ಇದ್ದಾಗಲೂ ಒಂದು ತುತ್ತು ಊಟಕ್ಕೆ ಹಾಕದ ಚಿಕ್ಕಮ್ಮ ಇಷ್ಟೆಲ್ಲ ತಂದ್ಕೊಡ್ತಾರಾ..? ನಾನೇ ಮಾಡ್ದೆ ಅಪ್ಪ ಅಂದೆ, ಯಾಕಮ್ಮ ಮಾಡೋಕ್ಕೆ ಹೋದೆ ಅಂತಲೇ ನನ್ನ ತಟ್ಟೆಗೂ ಬಡಿಸಿದ್ರು. ಹಾಕೋದನ್ನೆಲ್ಲಾ ಹಾಕಿಯೇ ಮಾಡಿದ್ರಿಂದ ಘಮಘಮಿಸುತ್ತಿತ್ತು, ಬೆಗಬೇಗ ಕಲೆಸಿ ಒಂದು ತುತ್ತು ಬಾಯಿಗಿಟ್ಟೆ... ಅಬ್ಭಾ....!!!! ನಖಶಿಖಾಂತ ಉರಿ ಹತ್ಕೋತು, ಘಟಗಟಾಂತ ನೀರು ಕೂಡಿದೆ ನೆತ್ತಿ ಹತ್ತಿತು, ಪಾಪ ಅಪ್ಪನಿಗೂ ಖಾರ ಖಾರ ಖಾರ...!!
ಅಬ್ಬಾ..... ಎಷ್ಟು ಮೆಣಸಿನಕಾಯಿ ಹಾಕಿದ್ದೀಯಮ್ಮ, ಉರಿಗಾರ.... ತಿನ್ನೋಕಾಗುತ್ತಾ ಇದನ್ನ, ನೀ ಏನು ಮಾಡಬೇಡ ಅಂತ ನಾ ಹೇಳಿದ್ದೆ ತಾನೇ.? ಯಾಕೆ ಮಾಡೋಕ್ಕೆ ಹೋದೆ.? ನೋಡು.... ಏನಾಯ್ತು ಅಂತ ಬೈಯ್ಯುತ್ತಲೇ ಉಪಚಾರ ಮಾಡಿದ್ರು ಅಪ್ಪ. ಪುಟ್ಟ ಪುಟ್ಟ ಮೆಣಸಿನ ಕಾಯಿ ಒಂದ್ ಹಿಡಿ ಹಾಕ್ದೆ ಅಪ್ಪ.. ಅಷ್ಟೆಲ್ಲ ಮೆಣಸಿನಕಾಯಿ ಸೇರಿಸಿದ್ರೂ 2, 3 ಮೆಣಸಿನಕಾಯಿ ಆಗಲ್ಲ... ಇಷ್ಟು ಖಾರ ಇದೆ ನೋಡಿ ಅಂತ ಮೆಣಸಿನ ಕಾಯಿ ತೋರಿಸ್ದೆ. ಅಯ್ಯೋ ರಾಮ... ಈ ಮೆಣಸಿನಕಾಯಿ ಒಂದ್ ಹಿಡಿ ಹಾಕ್ದ.? ಎರಡೋ ಮೂರೋ ಹಾಕಿದ್ರೂ ಉರಿಗಾರ ಇರುತ್ತೆ.. ಇನ್ ಒಂದ್ ಹಿಡಿ ಅಂದ್ರೆ..!! ಗೊತ್ತಿಲ್ಲದ್ದನ್ನ ಮಾಡಬಾರ್ದು ಅಂತ ಹೇಳಿ ಇಡೀ ದಿನ ಹಾಲು ಅನ್ನ ತಿನ್ನಿಸಿದ್ರು. ಹೊಟ್ಟೆಗಿಳಿದ ಒಂದು ತುತ್ತು ಗೊಜ್ಜನ್ನ ಮೂರ್ನಾಲ್ಕು ದಿನದವರೆಗೂ ಹೊಟ್ಟೆಯಲ್ಲಿ ಭಯಂಕರ ಉರಿ ಹರಡಿಬಿಟ್ಟಿತ್ತು...! ಮೂರ್ನಾಲ್ಕು ದಿನ ಎಳನೀರು, ಹಾಲು, ಮಜ್ಜಿಗೆ, ಸೌತೆಕಾಯಿಯ ಪಥ್ಯ..!! ಜೊತೆಗೆ ಅಮ್ಮ ಬರೋವರೆವಿಗೂ ಅಪ್ಪನದೇ ಅಡುಗೆ..! ಏನೇ ತಿಂದರೂ ಮೊದಲು ಒಂದು ತುತ್ತು ಅಪ್ಪ ತಿಂದು ನನಗೆ ನಂತರ ಬಡಿಸುತ್ತಿದ್ರು. ಏನೇ ತೊಂದರೆ ಆದರೂ ನನ್ನನ್ನು ದಾಟಿಯೇ ನಿನ್ಹತ್ರ ಬರ್ಬೇಕು ಅನ್ನೋರು ಅಪ್ಪ.😔
ಹೀಗೆ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ನನ್ನಪ್ಪ ಆಗಲಿ ಇಂದಿಗೆ ಆರು ವರ್ಷಗಳಾದವು😥 ಎಷ್ಟೇ ವಯಸ್ಸಾದ್ರೂ ಅಪ್ಪ ಅಮ್ಮ ಮಕ್ಕಳಿಗೆ ಬೇಕೇಬೇಕು ಕಣ್ರೀ... ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಅಮ್ಮನ ಆಸರೆ ಇರಲೇ ಬೇಕು. ಅಪ್ಪ ಅಗಲಿದರೂ.. ಅಮ್ಮ ಜೊತೆಗಿದ್ದಾರೆ ಅನ್ನೋ ಧೈರ್ಯ ಕಸಿದು ಆಗಲೇ ಆರು ತಿಂಗಳಾಯ್ತು.. ಇಬ್ಬರನ್ನೂ ಕಳೆದುಕೊಂಡು ಅನಾಥ ಭಾವ ಕಾಡುತ್ತಿದೆ. ಅಪ್ಪನ ಶ್ರಾದ್ಧಕ್ಕೆ ಹುಷಾರಿಲ್ಲದ ಕಾರಣ ಹೋಗಲಾಗಲೇ ಇಲ್ಲ..! ಆಶೀರ್ವದಿಸಲು ಬಂದ ಅಪ್ಪ ನನ್ನನ್ನ ಕಾಣದೆ ಎಷ್ಟು ನೋಡುಕೊಂಡರೊ ಏನೋ..! ನಮಸ್ಕಾರದ ವೇಳೆಗೆ ಅಣ್ಣನ ಮಗ ಫೋನ್ ಮಾಡಿ ಅಲ್ಲಿಂದ್ಲೇ ನಮಸ್ಕಾರ ಮಾಡ್ಬಿಡಿ ಅತ್ತೆ ಅಂದಾಕ್ಷಣ ವಿಪರೀತ ಬಿಕ್ಕಳಿಕೆ ಹತ್ಕೋತು.. ನನ್ನಪ್ಪ ನನ್ನನ್ನ ತುಂಬಾ ನೆನಪಿಸಿಕೊಂಡಿರಬೇಕು ಅನ್ನಿಸಿ ತುಂಬಾನೇ ಅಳು ಬಂತು, ಹುಷಾರಿಲ್ಲದೇ ನನ್ನ ಕಾರ್ಯಕ್ಕೆ ಮುದ್ದಿನ ಮಗಳು ಬಂದಿಲ್ಲ ಅಂತ ಅದೆಷ್ಟು ನೊಂದಿತೋ ಆ ಪುಣ್ಯ ಆತ್ಮ..!!
ಹಾ... ಅಪ್ಪ... ಇವತ್ತು ಕಾಯಿ ಟೊಮ್ಯಾಟೋ ಯಿಂದ ಕಡಿಮೆ ಖಾರ ಹಾಕಿ ತೊವ್ವೆ ಮಾಡಿದ್ದೀನಿ.. ಆದರೆ ಊಟ ಮಾಡಲು ಮನಸ್ಸಿಲ್ಲ.😔 ಅಂದು ನಿಮಗೆ ಆ ಉರಿಗಾರದ ಟೊಮ್ಯಾಟೋ ಕಾಯಿ ಗೊಜ್ಜು ತಿನ್ನಿಸಿದ್ದೇ ನೆನಪಿಗೆ ಬರ್ತಾ ಇದೆ...ಈಗ ನೆನೆದು ಹೊಟ್ಟೆ ಉರೀತಾ ಇದೆ..!! ಅವತ್ತೂ ಕೂಡ ನನಗಾದ ಖಾರದ ಬಗ್ಗೆ ನೊಂದುಕೊಂಡರೇ ಹೊರತು.. ನಿಮಗಾದ ಖಾರದ ಬಗ್ಗೆ ಒಂದು ಮಾತೂ ಆಡಲೇ ಇಲ್ಲ.. ಅದಕ್ಕೇ ಅಲ್ವಾ ಹೇಳೋದು ತಾಯಿ ತಂದೆ ಇಬ್ಬರೂ ಕಣ್ಣಿಗೆ ಕಾಣೋ ದೇವರು ಅಂತ..!
ನೋಡಲು ಸ್ವಲ್ಪ ಕೋಪ ಅನ್ನಿಸಿದರೂ ಹೆಂಗರುಳಿನ ಅಪ್ಪ ನಿಮ್ಮನ್ನು ನೆನೆಸದ ದಿನವೇ ಇಲ್ಲ... ಐ ಲವ್ಯೂ ಪಾ....
ಐ ಮಿಸ್ ಯೂ😔
ನಿಮ್ಮ ಮುದ್ದಿನ
ಶೈಲೂ.......
Comments
Post a Comment