ಭಾವನೆಗಳ ಭಾವಗೀತೆ
********************
ಬರಿದೇ ನೆನಪುಗಳ
ಸುಳಿಯಲ್ಲಿ ಸಿಕ್ಕಿ
ಹುಡುಕಿ ತಡಕಾಡಿ
ಅಕ್ಷರಗಳ ಹೆಕ್ಕಿ
ಮನದೊಳಗಿನ ಭಾವ
ಪದಗಳಲಿ ತುರುಕಿ
ಸುಖದುಃಖಗಳಲೆಯಲಿ
ಮುಳುಗೇಳಿ ತೇಲಿ
ಮನದೊಳಗಿನ ಪ್ರೀತಿಯನು
ಮೊಗೆಮೊಗೆದು ನೀಡಿ
ಸ್ನೇಹ ಕಾರಂಜಿಯ
ರಸಧಾರೆ ಸಿಂಪರಿಸಿ
ನೋವು ನಲಿವುಗಳ
ಅಳೆದಳೆದು ತೂಗಿ
ತೋಚಿದ್ದನ್ನು ಗೀಚುವ
*ಸಂಚಯ ಕವನ ಸಂಕಲನವೇ*
ನನ್ನ ಭಾವನೆಗಳ ಭಾವಗೀತೆ..!!
ಬಯಲುಸೀಮೆಯೆಡೆಗೆ..........
Get link
Facebook
X
Pinterest
Email
Other Apps
ಪ್ರವಾಸ ಕಥನ :---
ಬಯಲುಸೀಮೆಯೆಡೆಗೆ.......
ಪ್ರಾತಃ ಸ್ತುವೇ ಚ ತವ ಶಂಕರೀ ದಿವ್ಯ ಮೂರ್ತಿ
ಕಾದಂಬಕಾನನಗತಾಂ ಕರುಣಾರಸಾರ್ದಾಂ |
ಕಲ್ಯಾಣಧಾಮಮನವನೀರದನೀಲಭಾಸಾಂ
ಪಂಚಾಸ್ಯಯಾನಲಸಿತಾಂ ಪರಮಾರ್ತಿಹಂತ್ರೀಂ ||
ಅಂತ ಪ್ರತೀ ದಿನ ಪಠಿಸುತ್ತಿದ್ದ ಸ್ತೋತ್ರ ಸಾಕ್ಷಾತ್ ಆ ದಿವ್ಯ ದೇವಿಯ ಮುಂದೆಯೇ ನಿಂತು ಹೇಳಿಕೊಳ್ಳುವಾಗ ಆದ ಆನಂದ ಅಷ್ಟಿಷ್ಟಲ್ಲ. ಒಂದು ಕ್ಷಣ ಇದು ಕನಸೇನೋ ಅಂತ ಅನ್ನಿಸಿದ್ದೂ ಸುಳ್ಳಲ್ಲ. ಗರ್ಭಗುಡಿಯಲ್ಲಿ ಅತೀ ಹತ್ತಿರದಲ್ಲಿ ನಿಂತು ಮಾತೆಯ ಅಭಿಷೇಕ, ಅಲಂಕಾರ ಕಣ್ತುಂಬಿಕೊಳ್ಳುತ್ತಾ ಕಣ್ಣೇ ತುಂಬಿ ಬಂದಿತ್ತು..! ಮನಸ್ಸೂ ತುಂಬಿಬಂದಿತ್ತು..! ಸಾರ್ಥಕ್ಯ ಭಾವ ಮೂಡಿ ಆತುಲಿತ ಆನಂದ ಮನೆಮಾಡಿತ್ತು.
ಹಾ..... ಈ ದಿವ್ಯ ದರ್ಶನದ ದಿವ್ಯಾನುಭವಕ್ಕೆ ಕಾರಣ ನನ್ನಕ್ಕ ಅನ್ನಪೂರ್ಣ.😊
ಬರೀ ಪೀಠಿಕೇನೆ ಆಯ್ತು ಯಾವ ದೇವಿ ಅಂತ ಹೇಳಲಿಲ್ಲ ಅಂತ ಕೇಳ್ತಿದ್ದೀರಾ..? ಅದೇ.... ನಮ್ಮ ತಂದೆಯವರ ಮನೆಯ ಮನೆದೇವತೆ..! ನಮ್ಮನ್ನಷ್ಟೇ ಅಲ್ಲ, ಇಡೀ ಜಗತ್ತನ್ನೇ ಕಾಪಾಡುವ ದೇವಿ..!! ಅಮ್ಮಾ... ಅಂದವರಿಗೆ ತಾಯಿ..!, ಭಕ್ತರ ಭವ ಬಂಧನವನ್ನು ಕಳೆವ ದೇವಿ..!, ಶಿಷ್ಟರ ರಕ್ಷಕಿ..! ದುಷ್ಟರ ಶಿಕ್ಷಕಿ..! ಹಸಿದವರಿಗೆ ಅನ್ನ ನೀಡುವ ಅನ್ನಪೂರ್ಣೆ..!! ರಕ್ಕಸರನ್ನು ಸೆದೆಬಡಿದ ಚಾಮುಂಡಿ..!! ಬರೀ ನಾಡನ್ನಷ್ಟೇ ಅಲ್ಲ ಕಾಡನ್ನೂ ರಕ್ಷಿಸುವ ಮಾತೆ..!!!!!
ಗೊತ್ತಾಯ್ತಾ ಯಾವ ದೇವಿ ಅಂತ..? ಅದೇ ರೀ ನಮ್ಮ ಬನಶಂಕರಿ..!! ಅದೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚೋಳಚಗುಡ್ಡದಲ್ಲಿ ನೆಲೆನಿಂತ ಶಾಕಂಬರಿ ದೇವಿ..!!
ಬಾದಾಮಿ ಬನಶಂಕರಿ ನನ್ನ ತಂದೆ ಮನೆಯ ಮನೆದೇವರಾದರೂ... ಅಲ್ಲಿಗೆ ಹೋಗುತ್ತಿದ್ದುದು ತೀರಾ ಅಪರೂಪಕ್ಕೆ. ಅಜ್ಜ ಮುತ್ತಜ್ಜರ ಕಾಲದಲ್ಲಂತೂ ಬನಶಂಕರಿ ಯಾತ್ರೆ ಅಂದ್ರೆ ಕಾಶೀಯಾತ್ರೆ ಮಾಡಿದಷ್ಟು ಕಠಿಣ..!! ದೂರದ ಕಾಡಿನ ಆ ಪ್ರದೇಶಕ್ಕೆ ಆಗಂತೂ ಹೆಚ್ಚಿನ ಬಸ್ ವ್ಯವಸ್ಥೆಗಳಿರಲಿಲ್ಲ, ನಡೆದೇ ಓಡಾಡುತ್ತಿದ್ದ ಆ ಕಾಲದಲ್ಲಿ , ಗಟ್ಟಿಗರು ತಮ್ಮ ಜೀವಿತದಲ್ಲಿ ಒಮ್ಮೆ ದರ್ಶನ ಮಾಡಿದರೆ ಅದೇ ಹೆಚ್ಚು... ಹಾಗಾಗಿ ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಹೆಚ್ಚು ಹೋಗುತ್ತಿದ್ದುದು. ಚಿಕ್ಕಂದಿನಲ್ಲಿ ಒಂದೆರಡು ಬಾರಿಯಷ್ಟೇ ಹೋಗಿಬಂದದ್ದು ಬಿಟ್ಟರೆ , ಈಗ ಎಲ್ಲ ಸೌಕರ್ಯ - ಸೌಲಭ್ಯ ಗಳಿದ್ದೂ ಸಹ ನಾವೂ ಹೋಗಿರಲೇ ಇಲ್ಲ. ಅಕ್ಕ ಸುಮಾರು ಬಾರಿ ಹೋಗಿ ಬರೋಣ ಅಂತ ಹೇಳ್ತಿದ್ದರೂ ಏಕೋ ಕಾಲವೇ ಕೂಡಿ ಬಂದಿರಲಿಲ್ಲ. ಕಳೆದವಾರ 24, 25, 26 ನೇ ತಾರೀಖಿನಂದು ಮೂರು ದಿನಗಳ ರಜೆಯಲ್ಲಿ ಬಾದಾಮಿಗೆ ಹೋಗಿ ಬರೋಣ ಅಂತ ಅಕ್ಕನ ಆಗ್ರಹ, ಷಷ್ಠಿ, ರಥಸಪ್ತಮಿ ಹಬ್ಬ ಇರುವಾಗ ಹೇಗೆ ಹೋಗೋದು, ಅದೂ ಅಲ್ಲದೆ ನಮ್ಮೂರ ರಥ ಸಪ್ತಮಿ ಜಾತ್ರೆ ಬಿಟ್ಟು ಹೋಗೋಕ್ಕಾಗುತ್ತಾ ಅಂತ ಯಜಮಾನರ ವಾದ.! ಇವರಿಬ್ಬರ ಮದ್ಯೆ ನಾನು ನುಜ್ಜುಗುಜ್ಜು..😔
ಎಲ್ಲಿಗೆ ಕರೆದ್ರೂ ಬರಲ್ಲ, ನಿನಗೊಬ್ಬಳಿಗೆ ಸಂಸಾರ ಇರೋದು, ಯಾರಿಗೂ ಇರದ ಆಫೀಸ್ ಕೆಲ್ಸ ನಿನ್ನ ಗಂಡ ಮಗನಿಗೆ ಮಾತ್ರ ಇರೋದು... ಇಲ್ಲೇ ಇರು... ನಾವಂತೂ ಹೋಗ್ತಾ ಇದ್ದೀವಿ ಅಂತ ಅಕ್ಕ ಖಾರವಾಗಿ ಫೋನಲ್ಲೇ ಬೈದದ್ದೂ ಆಯ್ತು. ಈ ನಡುವೆಯಂತೂ ಅಕ್ಕ ಭಾವ ತಿಂಗಳಿಗೊಮ್ಮೆ ಅಲ್ಲಿಲ್ಲಿ ಟ್ರಿಪ್ ಹೋದಾಗಲೆಲ್ಲ ನಮ್ಮನ್ನು ಕರೆದೂ ಕರೆದೂ ಸುಸ್ತಾಗಿ ತಾವೇ ಹೋಗಿಬರ್ತಿದ್ರು, ಆಗೆಲ್ಲ ನಾವು ಹೋಗಲಾಗಲಿಲ್ಲವಲ್ಲ ಅಂತ ನನಗೆ ಒಳಗೊಳಗೇ ಬೇಸರ, ಯಜಮಾನರಿಗೆ ವರ್ಕ್ ಪ್ರೆಶರ್ ಜೊತೆಗೆ ನಾನೂ ಪ್ರೆಶರ್ ಕೊಡಬಾರದು ಅಂತ ಸುಮ್ಮನಿರ್ತಿದ್ದೆ. ಈ ಸರ್ತಿ ಯಾಕೋ ತುಂಬಾನೇ ಬೇಜಾರಾಯ್ತು, ಹೋಗಿ ಬರೋಣ ರೀ, ಅಪ್ಪನ ಮನೆ ದೇವ್ರು ನೋಡಿದ ನೆನಪಿಲ್ಲ, ಎಲ್ಲಾ ಮಸುಕು ಮಸುಕು, ಪಕ್ಕದಲ್ಲೇ ಐಹೊಳೆ ಪಟ್ಟದಕಲ್ಲು ಎಲ್ಲ ಇದೆ ಹೋಗಿ ಬರೋಣ ಅಂತ ಗೋಗರೆದಿದ್ದೆ, ಯಾವುದಕ್ಕೂ ಸಂಜೆ ಹೇಳ್ತೀನಿ ಅಂತ ಹೇಳಿ ಆಫೀಸ್ ಗೆ ಹೊರಟರು.
ಸಂಜೆ ಶುಭ ಸುದ್ಧಿಯೇ ಹೇಳ್ಲಿ ಅಂತ ದೇವರಿಗೆ ಬೇಡಿಕೊಂಡೇ, ಬಂದ ತಕ್ಷಣ ಅಕ್ಕ ಎರಡು ಸಾರಿ ಫೋನ್ ಮಾಡಿದ್ರು... ಏನ್ ಹೇಳ್ಲಿ ಅಕ್ಕಂಗೆ ಅಂದದ್ದಕ್ಕೆ, ಕೈ ಕಾಲು ಮುಖ ತೊಳಿಲಿಕ್ಕಾದ್ರೂ ಬಿಡು ಮಾರಾಯ್ತಿ ಅಂತ ಸೀರಿಯಸ್ ಆಗಿ ಹೇಳ್ದಾಗ... ಮೋಸ್ಟ್ಲಿ ಆಗಲ್ಲ ಅಂತ ಹೇಳ್ತಾರೆ ಅನ್ನಿಸಿ ಒಳಗೊಳಗೇ ಅಳು ಬಂತು. ಇನ್ನು ಕೇಳಬಾರ್ದು ಅಂತ ಡಿಸೈಡ್ ಮಾಡಿ ಮೌನವಾಗಿ ರಾತ್ರಿ ಊಟಕ್ಕೆ ಪ್ರಿಪೇರ್ ಮಾಡತೊಡಗಿದೆ. ಊಟಕ್ಕೆ ಕುಳಿತವರು... ಶನಿವಾರ ಆಗಲ್ಲ.. ಭಾನುವಾರ ಸೋಮವಾರ ಆದ್ರೆ ಹೋಗಬಹುದು.... ಏನ್ ಹೇಳ್ತೀಯಾ ಅಂತ ಹೇಳ್ದಾಗ ಒಳಗೊಳಗೇ ಖುಷಿಯಾದ್ರೂ ತೋರಿಸಿಕೊಳ್ಳದೆ.... ಅಯ್ಯೋ ಬೇಡ ಬಿಡಿ, ತುಂಬಾ ಕಷ್ಟ ಪಟ್ಕೊಂಡು ಹೋಗೋದೇನೂ ಬೇಡ, ದೇವರು ಅಲ್ಲೇ ಇರುತ್ತೆ... ನೀ ಬರಲೇಬೇಕು ಅಂತ ಕರೆಸ್ಕೊಂಡಾಗ ಹೊದ್ರಾಯ್ತು ಅಂತ ಬಿಗುಮಾನ ತೋರಿಸಿದೆ.
ಮುಂದುವರೆಯುವುದು.......
ಭಾಗ :-- 2
ಬೆಂಗಳೂರಿನಿಂದ ಬಾದಾಮಿಗೆ ಸುಮಾರು 12 ಗಂಟೆಗಳ ಪ್ರಯಾಣ. ನಾವೇನೋ ಹೊರಡೋಕ್ಕೆ ಮನಸ್ಸು ಮಾಡಿದೆವಾದರೂ ಹೋಗೋದು ಹೇಗೆ..? ಅನ್ನುವ ಪ್ರಶ್ನೆ... ಮಗ, ನನ್ನನ್ನ ಮಾತ್ರ ಕರೀಬೇಡಿ ಅಮ್ಮ.... ನಾನು ಬರೊಕ್ಕಾಗಲ್ಲ, ನನ್ನ ಟಾರ್ಗೆಟ್ ಕಂಪ್ಲೀಟ್ ಆಗಿಲ್ಲ, ನಾನು ರಜ ತೊಗೋಳ್ಳೋಕ್ಕಾಗಲ್ಲ ಅಂತ ಜಾರಿಕೊಂಡ. ಇನ್ನು ಅಕ್ಕನ ಮಗ ನಿತಿನ್ ನ ಕರೆಯೋಕ್ಕೆ ಆಗಲ್ಲ... ಸಣ್ಣ ಮಕ್ಕಳ ತಂದೆ ಅವನು, ನಮ್ಮನೆಯವರು ಲಾಂಗ್ ಜರ್ನಿ ಅಂದ್ರೆ ಡ್ರೈವ್ ಮಾಡೋಕ್ಕೆ ಹೆದ್ರುತ್ತಾರೆ, ಸ್ಮರಣ್ ಡ್ರೈವರ್ ವ್ಯವಸ್ಥೆ ಮಾಡ್ತೀನಿ ಅಂದ್ರೂ.... ಅಕ್ಕ, 12 ಗಂಟೆ ಒಂದೇ ಸಮನೆ ಕೂಡೋಕ್ಕೆ ಕಷ್ಟ ಆಗುತ್ತೆ, ಟ್ರೇನ್ ಬುಕ್ ಮಾಡಿ ಅಂತ ಹೇಳಿದ್ದಕ್ಕೆ, ಈಕಡೆ ಸ್ಮರಣ್.... ಆಕಡೆ ನಿತಿನ್ ಇಬ್ಬರೂ ಟ್ರೈ ಮಾಡಿದ್ರಾದ್ರೂ...... ತಿಂಗಳಿಗೆ ಮುಂಚೆಯೇ ಬುಕ್ ಮಾಡಿದರೂ ಟಿಕೆಟ್ ಸಿಗೋದಕ್ಕೆ ಕಷ್ಟ ಆಗಿರುವಾಗ ಬರೀ ಎರಡು ದಿನ ಇರುವಾಗ ಟಿಕೆಟ್ ಸಿಗುತ್ತಾ..? ಕೊನೆಗೆ ಸ್ಲೀಪರ್ ಕೋಚ್ ಬಸ್ಸಲ್ಲಿ ಹೋಗೋದು ಅಂತ ನಿರ್ಧಾರ ಆಗಿ ಟಿಕೆಟ್ ಬುಕ್ ಮಾಡಿಸಿದ್ದಾಯ್ತು. ಶನಿವಾರ ರಾತ್ರಿ 8 ಗಂಟೆಗೆ ಬಾದಾಮಿಗೆ ಹೊರಡುವ ksrtc ಬಸ್ ನಲ್ಲಿ ಹೊರಡುವುದೆಂದು ನಿರ್ಧಾರವಾಯ್ತು.
ಜನವರಿ 24ರ ಶನಿವಾರ, ಆದಿನ ಸುಬ್ರಮಣ್ಯ ಷಷ್ಠಿ ಇದ್ದ ಕಾರಣ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಾಮಿಗೆ ಅಭಿಷೇಕ ಹಾಗೂ ಪೂಜೆಗೆ ಕೊಟ್ಟಿದ್ದೇವಾದ್ದರಿಂದ ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಮಾಘಮಾಸದ ಬೆಳಗ್ಗಿನ ಪೂಜೆಯನ್ನು, ವಿಶೇಷವಾಗಿ ಸುಬ್ರಮಣ್ಯ ಸ್ವಾಮಿಯನ್ನು ಪೂಜಿಸಿ ದೇವಸ್ಥಾನಕ್ಕೆ ಹೊರಟೆವು. ಸುಬ್ರಹ್ಮಣ್ಯ ಸ್ವಾಮಿಯ ವಿಶೇಷ ಪೂಜೆಯನ್ನು ಕಣ್ತುಂಬಿಕೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಮನೆಗೆ ಬಂದೆವು. ಷಷ್ಠಿ ಉಪವಾಸವಾದ್ದರಿಂದ ಯಜಮಾನ್ರು ಲಘು ಉಪಹಾರ ಸ್ವೀಕರಿಸಿ ಆಫೀಸ್ಗೆ ಹೊರಟರು, ಸಂಜೆ 4 ಕ್ಕೆಲ್ಲಾ ಬರ್ತೀನಿ, ಲಗೇಜ್ ಎಲ್ಲ ರೆಡಿಮಾಟ್ಟಿರು, ನೀನೂ ರೆಡಿಯಾಗಿರು, ಈ ಟ್ರಾಫಿಕ್ ನಲ್ಲಿ ಮೆಜೆಸ್ಟಿಕ್ ಹೋಗೊಕ್ಕೆ ಮಿನಿಮಮ್ 2 ಅವರ್ಸ್ ಆದ್ರೂ ಬೇಕು, ಬಿ ರೆಡಿ ಅಂತ ಹೇಳೋದನ್ನ ಮರೀಲಿಲ್ಲ.
ಮನೆಯ ಅಳಿದುಳಿದ ಕೆಲಸಗಳನ್ನೆಲ್ಲ ಮುಗಿಸಿ, ಬಟ್ಟೆಯನ್ನೂ ಒಗೆದಿಟ್ಟು, ನಮ್ಮಿಬ್ಬರ ಲಗೇಜನ್ನು ಸಿದ್ಧ ಪಡಿಸುವಷ್ಟರಲ್ಲಿ ಅದಾಗಲೇ ಮಧ್ಯಾಹ್ನ 3 ಗಂಟೆ. ಬರೀ ಎರಡು ದಿನದ ಟ್ರಿಪ್ ಆಗಿದ್ದರಿಂದ ಹೆಚ್ಚೇನೂ ಬಾರೀ ಲಗೇಜಲ್ಲ. ಉಡುವುದು, ಹೊದೆಯುವುದು, ಅಂತೇಳಿ ಇಬ್ಬರಿಂದ 2 ಬ್ಯಾಗ್ ಅಷ್ಟೇ ಆಗಿದ್ದು. ರಾತ್ರಿಗೆ ಸ್ಮರಣ್ ಗೆ ಏನಾದ್ರೂ ಉಪಹಾರ ಮಾಡಿಡಬೇಕು ಅಂತ ಚಪಾತಿ ಪಲ್ಯ ಮಾಡಿಡುವಷ್ಟರಲ್ಲಿ ರಮೇಶ್ ಬಂದೇ ಬಿಟ್ರು. ರಾತ್ರಿಗೆ ರಮೇಶ್ ಗೆ ಒಂದೆರಡು ಚಪಾತಿ ಪಲ್ಯ ಬಾಕ್ಸ್ಗೆ ಹಾಕಿಟ್ಕೊಂಡೇ. ನಾನು ಇಡೀ ದಿನ ಉಪವಾಸ ಮಾಡುವ ಇರಾದೆಯಿದ್ದರೂ ... ಯಜಮಾನರ ಒತ್ತಾಯಕ್ಕೆ ಮಣಿದು, ಹಾಗೆಯೇ ಬೆಳಗಿನಿಂದ ಬಿಡುವಿಲ್ಲದೆ ಹೆಚ್ಚು ಕೆಲಸ ಮಾಡಿದ್ದಕ್ಕೋ ಏನೋ ಹೊಟ್ಟೆಯೂ ಹಸಿಯುತ್ತಿತ್ತಾದ್ರಿಂದ ನಾನೂ ಎರಡು ಚಪಾತಿ ತಿಂದೇ. ಬೇಗ ಬೇಗ ರೆಡಿಯಾಗಿ ಹೊರಡುವಷ್ಟರಲ್ಲಿ ಅದಾಗಲೇ 5 ಗಂಟೆ, ಸ್ಮರಣ್ ಬುಕ್ ಮಾಡಿದ್ದ ಕ್ಯಾಬಲ್ಲಿ ನಾನೂ, ನನ್ನ ಯಜಮಾನ್ರು ಹೊರಟೆವು.
5 : 15 ಗಂಟೆಗೆ ಹೊರಟರೂ ಆ ಸಂಜೆಯ ಹೆವಿ ಟ್ರಾಫಿಕ್ ನಲ್ಲಿ ಮೆಜೆಸ್ಟಿಕ್ ತಲುಪಲು ಸುಮಾರು ಎರಡೂವರೆ ಗಂಟೆ ತೆಗೆದುಕೊಂಡಿತು.ಅಷ್ಟೊತ್ತಿಗಾಗಲೇ ಅಕ್ಕ ಎರಡು ಬಾರಿ ಎಲ್ಲಿದ್ದೀರಾ ಅಂತ ಕೇಳೋಕ್ಕೆ ಕಾಲ್ ಮಾಡಿದ್ರು. ಅಂತೂ ಇಂತೂ ಮೆಜೆಸ್ಟಿಕ್ ksrtc ಬಸ್ಟಾಪ್ ನ 1 ನೇ ಟರ್ಮಿನಲ್ ನ 15 ನೇ ಪ್ಲಾಟ್ಫಾರ್ಮ್ ಗೆ ಬರುವಷ್ಟರಲ್ಲಿ ಏಳೂವರೆ ದಾಟಿತ್ತು, ಅಕ್ಕ ಭಾವ 7 ಗಂಟೆಗೇ ಬಂದಿದ್ದರಂತೆ. ಕುಶಲೋಪರಿ ವಿಚಾರಿಸಿ ಅದೂ ಇದೂ ಮಾತಾಡುವಷ್ಟರಲ್ಲಿ ನಾವು ಹೋಗಬೇಕಾಗಿದ್ದ ಬೆಂಗಳೂರು ಬಾದಾಮಿ ಸ್ಲೀಪರ್ ಕೋಚ್ ಬಸ್ ಬಂದೇ ಬಿಟ್ಟಿತು.
ಮುಂದುವರೆಯುವುದು.....
#ಭಾಗ :---3
ಎಲ್ಲಾ ಪ್ರಕಾರದ ಬಸ್ಗಳು, ಅಂದ್ರೆ.... ಕೆಂಪು ಬಸ್, ಎಕ್ಸ್ಪ್ರೆಸ್, ಸೆಟಲ್ ಗಾಡಿ, ರಾಜಹಂಸ, ಐರಾವತ ಮುಂತಾದ ಎಲ್ಲ ಬಸ್ ಗಳಲ್ಲಿ ಓಡಾಡಿದ್ದೇವಾದರೂ... ಸ್ಲೀಪರ್ ಕೋಚ್ ಬಸ್ ನಲ್ಲಿ ಪ್ರಯಾಣಿಸಿರಲಿಲ್ಲ, ತುಂಬಾ ಸರ್ತಿ ಈ ಬಸ್ಸಲ್ಲಿ ಪ್ರಯಾಣಿಸಬೇಕು ಅಂದುಕೊಂಡಿದ್ದೆವಾದರೂ ಅವಕಾಶ ಕೂಡಿ ಬಂದಿರಲಿಲ್ಲ. ಅದೂ ಅಲ್ಲದೆ ಸ್ಮರಣ್ ಅದಕ್ಕೆ ಅವಕಾಶವೂ ಕೊಡುತ್ತಿರಲಿಲ್ಲ. ನಮ್ಮ ಫ್ಯಾಮಿಲಿ ಎಲ್ಲಾದರೂ ಟ್ರಿಪ್ ಹೊರಟಾಗ ನಮ್ಮ ಕಾರಿನಲ್ಲೇ ಹೋಗುತ್ತಿದ್ದುದು.2012 ರಿಂದ ಬಸ್ನಲ್ಲಿ ಓಡಾಡಿದ್ದೇ ಇಲ್ಲ, ಒಂದು ವೇಳೆ ಸ್ಮರಣ್ ಗೆ ರಜೆ ಇದ್ದಿದ್ದರೆ ಈಗ ಸಹ ಬಸ್ಸಲ್ಲಿ ಹೋಗೋಕ್ಕೆ ಬಿಡ್ತಿರ್ಲಿಲ್ಲ. ರಜೆ ಇಲ್ಲದ ಕಾರಣ ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸುವ ಅವಕಾಶ..!!!
ರಾತ್ರಿಯಾದರೆ ರೋಡಿಗಿಳಿವ ಸ್ಲೀಪರ್ ಬಸ್ ಅಂದ್ರೆ ಏನೋ ಕುತೂಹಲ ಇತ್ತು, ಇದರಲ್ಲಿ ಪ್ರಯಾಣ ಹೇಗಿರಬಹುದು..? ಬೆಡ್ ಯಾವರೀತಿ ಇರಬಹುದು, ಕಂಫರ್ಟ್ ಇರುತ್ತಾ...? ಏನೇನು ಫೆಸಿಲಿಟಿ ಇರುತ್ತೆ,..? ಒಮ್ಮೆಯಾದರೂ ಹೋಗಬೇಕು ಅಂತ... ನಾನು ರಮೇಶ್ ಈ ತರಹದ ಬಸ್ಸನ್ನು ನೋಡಿದಾಗಲೆಲ್ಲ ಮಾತಾಡ್ಕೋತಿದ್ವಿ. ಆ ದಿನ ಬಂದೇಬಿಟ್ಟಿತ್ತು..!!😊
ಅಕ್ಕ ಭಾವನವರಿಗೆ ಲೋವರ್ ಬರ್ತ್, ನಮ್ಮಿಬ್ಬರಿಗೆ ಅಪ್ಪರ್ ಬರ್ತ್ ಬುಕ್ ಆಗಿತ್ತು, ಖುಷಿಯಿಂದ ಹತ್ತಿ ಕುಳಿತೆವು. ಟ್ರೇನ್ ನಲ್ಲಿರುವಂತೆ ತಲೆಗೆ ತಾಕುವ ಹಾಗಿರಲಿಲ್ಲ. ಆರಾಮಾದಾಯಕ ಸ್ಪೇಸ್, ಲಗೇಜ್ ಇಡಲು ಶೆಲ್ಫ್, ಕುಶನ್ ಬೆಡ್ಸ್, ಚಾರ್ಜಿಂಗ್ ಪಾಯಿಂಟ್ಸ್, ಮಂದ ಬೆಳಕಿನ ಲೈಟ್ಸ್, ಕಿಟಕಿ ಕವರ್ ಮಾಡಲು ಪರದೆಗಳು, ಆರಡಿ ಉದ್ದದ ನಮ್ಮವರೂ ಸಹ ಆರಾಮವಾಗಿ ಮಲಗಬಹುದಾದ ಬೆಡ್..!! ತುಂಬಾನೇ ಖುಷಿಯಾಯ್ತು. 😊 ಹೇಗಿರುತ್ತೋ ಏನೋ... ಬೇಡಾ ಅಂದ್ರು ಬಸ್ನಲ್ಲಿ ಹೋಗ್ತಾ ಇದ್ದೀರಾ, ಡ್ರೈವರ್ ವ್ಯವಸ್ಥೆ ಮಾಡ್ತಿದ್ದೆ ತಾನೇ, ಈ ದೊಡ್ಡಮ್ಮಂಗೆ ಅಷ್ಟೊತ್ತು ಕೂತ್ಕೋಳ್ಳೋಕ್ಕಾಗಲ್ಲ ಅಂದ್ರೆ ಯಾಕೆ ಹೋಗ್ಬೇಕು..? ಅಂತ ಗೊಣಗುತ್ತಲ್ಲೇ ಕಳುಹಿಸಿಕೊಟ್ಟ ಸ್ಮರಣ್ ಗೆ ವಿಡಿಯೋ ಕಾಲ್ ಮಾಡಿ ಸೀಟ್ ವ್ಯವಸ್ಥೆ ತೋರಿಸಿದೆ. Ok ok ಪರವಾಗಿಲ್ಲ, ಹುಷಾರಾಗಿ ಹೋಗ್ಬನ್ನಿ, happy journey ಅಂತ ಹಾರೈಸಿದ. ಪ್ರಕಾಶಣ್ಣ ಕಾಲ್ ಮಾಡಿ ವಿಶ್ ಮಾಡಿದ್ರು, ನಿತಿನ್, ನವೀನ್... ಕೂಡ ಕಾಲ್ ಮಾಡಿ ಬಸ್ ವ್ಯವಸ್ಥೆ ಹೇಗಿದೆ... ಅಂತ ವಿಚಾರಿಸಿ, ಆರಾಮಾಗಿ ಹೋಗಿ ಬನ್ನಿ , ಹುಷಾರು ಅಂತ ಹೇಳಿದರು. ಅಕ್ಕನ ಮೊಮ್ಮೊಕ್ಕಳು ಸುಮೇಧ, ಸಾನಿಧ್ಯ ಕೂಡ ವಿಶ್ ಮಾಡಿದ್ರು, ಕ್ಲೀನಾಗಿರೋ ಒಳ್ಳೊಳ್ಳೆ ಹೋಟೆಲ್ ಗೆ ಹೋಗಿ, ತುಂಬಾ ಚನ್ನಾಗಿರೋ ರೂಮ್ಸ್ ತೊಗೊಳ್ಳಿ, ಎಂಜಾಯ್ ಮಾಡ್ಕೊಂಡು ಬನ್ನಿ ಅಂತ ತಮ್ಮ ಬಾಲಭಾಷೆಯಲ್ಲಿ ಹೇಳಿದಾಗ ಆದ ಆನಂದ ಅಷ್ಟಿಷ್ಟಲ್ಲ..😊
ಸರಿಯಾಗಿ 8 :10ಕ್ಕೆ ಬಸ್ ಮೂವ್ ಆಯ್ತು. ಏನೋ ಒಂಥರಾ ಖುಷಿ. ಬನಶಂಕರಿ ಯನ್ನು ನೋಡುವ ತವಕ ಒಂದು ಕಡೆಯಾದರೆ,... ಸ್ಲೀಪರ್ ಕೋಚ್ ಬಸ್ ಪ್ರಯಾಣದ ಮುದ ಒಂದು ಕಡೆ. ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತೆ. ಮಾಮೂಲಿ ಬಸ್ ಗಳಿಗಿಂತ ಹೆಚ್ಚು ಎತ್ತರದ ಬಸ್, ಅದೂ ಅಲ್ಲದೆ ನಮ್ಮದು ಅಪ್ಪರ್ ಸೀಟ್ ಆದ್ರಿಂದ... ಕೆಳಮಟ್ಟದಲ್ಲಿ ಅಷ್ಟಾಗಿ ಕಾಣಿಸುತ್ತಿರಲಿಲ್ಲ . ಸೆಖೆ ಅನ್ನಿಸಿತು ಅಂತ ಕಿಟಕಿಯ ಗ್ಲಾಸ್ ಸರಿಸಿದೆ. ಬೆಂಗಳೂರಿನ ರಸ್ತೆ ಬದಿಯ ಮರಗಳ ಕೊಂಬೆಗಳು ತೆರೆದ ಕಿಟಕಿಯಿಂದ ಒಳಗೆ ತಗುಲುವ ತರಹ ಇದ್ದವು, ತಕ್ಷಣ ರಮೇಶ್ ಕಿಟಕಿ ಕ್ಲೋಸ್ ಮಾಡಿ ಕೇವಲ ಒಂದಿಂಚಷ್ಟು ಮಾತ್ರವೇ ಓಪನ್ ಮಾಡಿದರು.
ಕೆಳಗಿನಿಂದ ಅಕ್ಕ ಊಟಕ್ಕೆ ಚಪಾತಿ ತಂದಿದ್ದೀನಿ ತೊಗೊಳಿ ಅಂತ ಪ್ಲೇಟ್ ಗೆ ಹಾಕಿ ಕೊಟ್ಟರು, ಅಯ್ಯೋ ಬೇಡ ಅಕ್ಕಾ ನಾನು ತಿನ್ನಲ್ಲ, ರಮೇಶ್ ಗೆ ಅಂತ ನಾನೂ ಚಪಾತಿನೇ ತಂದಿದ್ದೀನಿ ಅಂತ ನಿರಾಕರಿಸಿದೆ. ಮೂವರೂ ಚಪಾತಿ ತಿಂದು ಮಲಗಿದರು. ನನಗೆ ಏಕೋ ನಿದ್ದೆ ಬರಲೊಲ್ಲದು. ಹೊರಗೆ ನೋಡುತ್ತಾ ಕುಳಿತೆ, ಫ್ಲೈ ಓವರ್, ಮರಗಳ ಕೊಂಬೆಗಳು ಬಿಟ್ಟರೆ ಬೇರೇನೋ ಕಾಣುತ್ತಿರಲಿಲ್ಲ. ಸಿಟಿ ವಲಯ ಮುಗಿಯುತ್ತಿದ್ದಂತೆ ಚಳಿ ಎನ್ನಿಸತೊಡಗಿತು. ಸ್ವೇಟರ್ ಧರಿಸಿ ಶಾಲು ಹೊದ್ದು ಮಲಗಿದೆ. ನಿಧಾನವಾಗಿ ನಿದ್ದೆ ಹತ್ತತೊಡಗಿತು. ಬಸ್ ನಲ್ಲಿದ್ದ 25 ಜನರು ಸುಖವಾಗಿ ನಿದ್ರಿಸುತ್ತಿದ್ದರೆ ನಮ್ಮ ಸ್ಲೀಪರ್ ಬಸ್ಸು ಬೀಗುತ್ತಾ.... ತೂಗುತ್ತಾ.....ಒಮ್ಮೊಮ್ಮೆ ಹಂಪ್ಸ್ ನಲ್ಲಿ ಸಾಗುವಾಗ ಎತ್ತಿ ಕುಲುಕುತ್ತಾ ಸಾಗುತ್ತಿತ್ತು.
ಪ್ರತಿದಿನದಂತೆ 3 ಗಂಟೆಗೇ ಎಚ್ಚರವಾಯ್ತು, ಕಿಟಿಕಿಯಿಂದ ಹೊರಗೆ ನೋಡಿದರೆ ಕತ್ತಲೆಯಲ್ಲಿ ಹೊರಗೆ ಏನೂ ಕಾಣಿಸುತ್ತಿರಲಿಲ್ಲ, ಚಳಿ ಇನ್ನೂ ಹೆಚ್ಚು ಅನ್ನಿಸುತ್ತಿತ್ತಾದ್ದರಿಂದ ಇನ್ನೊಂದು ಶಾಲು ಸೇರಿಸಿ ಹೊದ್ದು ಮಲಗಿ ನಿದ್ದೆ ಮಾಡಿದೆ. ಎಲ್ಲರೂ ಮಾತನಾಡುವ ದ್ವನಿ ಕೇಳಿಸಿದ್ದೇ ತಡ ಎಚ್ಚರಾಯ್ತು. ಅದಾಗಲೇ ಸಮಯ ಏಳುಗಂಟೆ. ನಮ್ಮ ಆ ಪಕ್ಕದ ಸೀಟಿನಲ್ಲಿದ್ದವರು ಇಳಿಯುವ ಹಂತದಲ್ಲಿದ್ದರು. ನೀವಿನ್ನೂ 1 ಗಂಟೆ ಪ್ರಯಾಣ ಮಾಡ್ಬೇಕಾಗ್ತದ ರೀ ಅಂತ ಆ ವ್ಯಕ್ತಿ ರಮೇಶ್ ಗೆ ಹೇಳುತ್ತಿದ್ದರು. ನಾವುಗಳು ಎದ್ದು ಸೀಟ್ ಮೇಲೆ ಹಾಸಿದ್ದ ಬೆಡ್ಶೀಟ್, ಹೊದೆದಿದ್ದ ಶಾಲುಗಳನ್ನು ಮಡಿಸಿ ಬ್ಯಾಗಿನಲ್ಲಿಟ್ಟು ತಯಾರಾಗಿ ಕುಳಿತೆವು. ಅಷ್ಟರಲ್ಲಿ ಸ್ಮರಣ್ ಕಾಲ್ ಮಾಡಿ ಎಲ್ಲಿದ್ದೀರಿ.? ಹೇಗಿದ್ದೀರಿ.? ನಿದ್ದೆ ಬಂತಾ.? ಆರಾಮಾಗಿತ್ತಾ.? ಬಾದಾಮಿ ತಲುಪಿದಿರಾ..? ಬಸ್ಟಾಪ್ ನ ಹತ್ತಿರವೇ ಹೋಟೆಲ್ ಇದೆ ರೂಮ್ ಬುಕ್ ಮಾಡ್ಲಾ ಅಂತ ಪ್ರಶ್ನೆಗಳ ಮಳೆ ಸುರಿದ. ಬನಶಂಕರಿ ದೇವಸ್ಥಾನದಲ್ಲಿ ಭಾವನವರ ನೆಂಟರು ಇದ್ದಾರಾದ್ರಿಂದ ಅಲ್ಲೇ ರೂಮ್ ವ್ಯವಸ್ಥೆ ಆಗುತ್ತೆ, ಹೋಟಲ್ ರೂಮ್ ಬೇಡ ಅಂತೇಳಿ ಅದೂ ಇದೂ ಮಾತಾಡುವ ಹೊತ್ತಿಗೆ ಬಾದಾಮಿ ಬಂದೇ ಬಿಟ್ಟಿತು..! ಲಗುಬಗೆಯಿಂದ ನಮ್ಮೆಲ್ಲ ಲಗೇಜ್ಗಳನ್ನು ತೊಗೊಂಡು ಇಳಿದು, ಬನಶಂಕರಿ ದೇವಸ್ಥಾನದ ಕಡೆಗೆ ಆಟೋ ಹಿಡಿದು ಹೊರಟೆವು.
ಮುಂದುವರೆಯುವುದು......
#ಭಾಗ_4
ಬಾದಾಮಿಯಿಂದ ಬನಶಂಕರಿ ದೇವಸ್ಥಾನ ವಿರುವ ಚೋಳಚಗುಡ್ಡಕ್ಕೆ ಆಟೋದಲ್ಲಿ ನಾವೆಲ್ಲರೂ ಹೊರಟೆವು. ಸುಮಾರು.10 - 15 ನಿಮಿಷಗಳ ಪ್ರಯಾಣದ ನಂತರ ಬನಶಂಕರಿಗೆ ಬಂದೆವು, ಆಟೋ ಡ್ರೈವರ್ ಜೊತೆಗೆ ದಾರಿಯುದ್ದಕ್ಕೂ ಭಾವ ಮಾತಾಡಿಕೊಂಡೇ ಬಂದ್ರು. ಸಾರಾಂಶವೇನೆಂದರೆ, ಈಗ ಜಾತ್ರಾ ಸಮಯ, ಸುಮಾರು ಒಂದು ತಿಂಗಳು ಜಾತ್ರೆ ನಡೆಯುತ್ತೆ, ಪುಷ್ಯಮಾಸದ ಹುಣ್ಣಿಮೆಗೆ ರಥೋತ್ಸವ ಆದ್ರೂ ಕೂಡ ಇನ್ನೊಂದು ಹುಣ್ಣಿಮೆ ಬರುವ ತನಕ ಅಂದ್ರೆ ಮಾಘಮಾಸದ ಹುಣ್ಣಿಮೆಯವರೆಗೂ ಜಾತ್ರೆ ಇರುತ್ತೆ, ಈಗ ವಿಪರೀತ ಜನಜಂಗುಳಿ ಇರುತ್ತೆ, ರೂಮ್ಗಳು ಸಿಗೋದು ಕಷ್ಟ ಅಂತ. ಈ ವಿಷ್ಯ ನನಗೆ ನಮ್ಮೂರಲ್ಲೇ ಗೊತ್ತಾಗಿತ್ತು, ನಮ್ಮನೆಗೆ ನೀರು ಸಪ್ಲೆ ಮಾಡುವ ಹುಡುಗ, ಹೇಳಿದ್ದ, ಈಗ ಯಾಕ್ ಹೋಗಾಕ್ಹತ್ತೀರಕ್ಕ, ಭಾಳ ರಷ್ ಇರ್ತದ, ದೇವ್ರನ್ನ ನೋಡಾಕಾ ಅರ್ಧ ದಿನ ಕ್ಯೂನಾಗ ನಿಲ್ಬೇಕಾಗ್ತದ್ರೀ ಅಂತ ಹೇಳಿದ್ದ. ಅವನ ಊರು ಬಾದಾಮಿಗೆ 8 km ದೂರವಂತೆ, ಟಿಕೆಟ್ ಎಲ್ಲ ಬುಕ್ ಆಗಿತ್ತಾದ್ರಿಂದ, ಹೇಗಿದ್ರೂ ಸಹ ನೋಡಿಬಿಡೋಣ ಅಂತ ಬಂದದ್ದಾಯ್ತು, ಇನ್ನು ದೇವಿ ಹೇಗೆ ನಡೆಸಿದ್ರೆ ಹಾಗೇ ನಡೆಯೋದು.
ಜಾತ್ರೆಯ ಸಮಯವಾದ್ದರಿಂದ ಎಲ್ಲೆಡೆಯೂ ಹೆಚ್ಚಿನ ಅಂಗಡಿಗಳು, ಪೂಜಾಸಾಮಗ್ರಿಗಳ ಅಂಗಡಿ, ಬೀದಿ ಬದಿಯಲ್ಲಿ ಮಾಡುವ ಹಾಗೂ ಮಾರುವ ತಿನಿಸುಗಳು, ಸಣ್ಣ ಸಣ್ಣ ಹೋಟೆಲ್ಗಳು, ಆಟಿಕೆಗಳ ಅಂಗಡಿ, ಸಣ್ಣ ಸಣ್ಣ ಗುಡಾರಗಳು, ಜೊತೆಗೆ ಬೀದಿ ನಾಟಕದ ವೇದಿಕೆಗಳು, ನಾಟಕಗಳ ಬ್ಯಾನರ್ಗಳ ಪೋಸ್ಟರ್ ಕಾಣಸಿಕ್ಕವು. ಇವುಗಳನ್ನೆಲ್ಲ ದಾಟಿ ದೇವಾಲಯದ ಮುಂದೆ ಬಂದ್ವಿ. ಒಂದ್ಹೆಜ್ಜೆಯೂ ಮುಂದಿಡಲಾರದಂತೆ ಪೂಜಾ ಸಾಮಗ್ರಿಗಳ ಅಂಗಡಿದಾರರು, ಬರ್ರೀ ಪೂಜಾ ಸಾಮಗ್ರಿ ತೊಗೋರೀ, ಉಡಿ ತುಂಬಕ್ಕ ತೊಗೋರೀ, ಚಪ್ಲಿ ಇಲ್ಲಾ ಬಿಡ್ರಿ, ಬಂಡಾರ ತೊಗೋರೀ ಅಂತ ಜೋತು ಬಿದ್ರು. ನಮಗೆ ಮೊದಲು ರೂಮ್ ವ್ಯವಸ್ಥೆ ಆಗಬೇಕಿತ್ತು, ಆ ನಂತರ ಪ್ರೇಷಪ್ ಆಗಿ ದೇವಸ್ಥಾನಕ್ಕೆ ಹೋಗುವಾಗ ತೊಗೊಳೋಣ ಅಂತ ಯಾರ ಮಾತಿಗೂ ಕಿವಿಗೊಡದೆ ದೇವಾಲಯದ ಕಾರ್ಯಾಲಯಕ್ಕೆ ಬಂದೆವು. ಅಲ್ಲೋ ರೂಮ್ ಬುಕಿಂಗ್ ಗೆ ಸಾಲುಗಟ್ಟಿ ನಿಂತಿದ್ದಾರೆ ಜನ. ಒಳಗೆ ಮೆನೇಜರ್ ರೂಮ್ ಖಾಲಿ ಇಲ್ಲ, ಸಾರಿ... ಅಂತ ಹೇಳ್ತಾ ಇದ್ದಾರೆ. ಏನು ಮಾಡೋದು ಅನ್ನುವ ಯೋಚನೆ ಶುರುವಾಯಿತು.
ಭಾವ ಆಫೀಸ್ ಒಳಹೊಕ್ಕು, ದೇವಸ್ಥಾನದಲ್ಲಿರುವ ತಮ್ಮ ನೆಂಟರ ಬಗ್ಗೆ ಹೇಳಿ, ಅವರಿಗೆ ಫೋನ್ ಮಾಡಿ, ಮೆನೇಜರ್ ಹತ್ತಿರ ಮಾತನಾಡಿಸಿ... ಏನೇನೋ ಕಸರತ್ತು ಮಾಡ್ತಾ ಇದ್ರು. ಆದ್ರೂ... ರೂಮ್ ಖಾಲಿ ಇಲ್ಲ ಸರ್, ಖಾಲಿ ಆದ್ಮೇಲೆ ಕೊಡ್ತೀನಿ, ವೈಟ್ ಮಾಡಿ ಅಂತ ನಮ್ಮನ್ನ ಅಲ್ಲೇ ಕೂರಿಸಿಕೊಂಡರು. ಸ್ವಲ್ಪ ಸಮಯ ಬಿಟ್ಟು, ದೇವಸ್ಥಾನದಲಿ ವಿಶೇಷ ಪೂಜೆಯ ರೆಸಿಫ್ಟ್ ತನ್ನಿ ಸರ್. ಆ ನಂತರವೇ ರೂಮ್ ಸಿಗುತ್ತೆ ಅಂತ ಹೇಳಿದಾಕ್ಷಣ ರಮೇಶ್ ಮತ್ತು ನಾನು ದೇವಸ್ಥಾನಕ್ಕೆ ಓದಿದೆವು. ಅಲ್ಲೋ ಹನುಮಂತನ ಬಾಲದಷ್ಟು ಕ್ಯೂ...!! ಅಂತೂ ಇಂತೂ ನಾಳಿನ ದಿನದ ದೇವರ ವಿಶೇಷ ಅಭಿಷೇಕ , ಪೂಜೆಯ 2 ಪೂಜಾ ಚೀಟಿಯನ್ನು ತಂದ ಅರ್ಧಗಂಟೆಯ ಮೇಲೆ, ಇಬ್ಬರಿಗೂ ಸೇರಿ ಒಂದೇ ರೂಮ್ ಕೊಟ್ಟರು. ನಮಗಿಂತ ಮುಂಚಿನಿಂದ ಕಾಯುತ್ತಿದ್ದ ಮಂದಿಯೆಲ್ಲ... ನಾವು ಬೆಳಿಗ್ಗೆ 5 ಗಂಟೆಯಿಂದ ಕಾಯ್ತಾ ಇದ್ದೀವಿ ನಮಗೆ ರೂಮ್ ಕೊಡಲಿಲ್ಲ, ನೋಡಿ ನಿಮ್ಗೆ ಸಿಗ್ತು... ಅಂತ ಬೇಸರಿಸಿಕೊಂಡರು. ಅವರಿಗೆಲ್ಲ ರಮೇಶ್, ನೋಡಿ.... ವಿಶೇಷ ಪೂಜೆಯ ರಸೀತಿ ತಂದ್ರೆ ರೂಮ್ ಕೊಡ್ತಾರೆ, ಅಲ್ಲದೆ ನಾವು ಮೂರ್ನಾಲ್ಕು ದಿನದ ಮುಂದೆಯೇ ಬುಕ್ ಮಾಡಿದ್ದೆವು ಹಾಗಾಗಿ ಸಿಗ್ತು, ನಿಮಗೂ ಸಿಗುತ್ತೆ ಬೇಸರ ಮಾಡ್ಕೋಬೇಡಿ ಅಂತ ಸಮಾಧಾನ ಮಾಡಿದರು.
ಚೊಕ್ಕವಾಗಿದ್ದ 2 ಬೆಡ್ಗಳ ರೂಮ್ ಅದು, ಬಿಸಿ ನೀರಿನ ವ್ಯವಸ್ಥೆ ಇರಲಿಲ್ಲ, ಕಾರಣ ಜಾತ್ರಾ ಸಮಯದಲ್ಲಿ ಬಿಸಿನೀರಿನ ವ್ಯವಸ್ಥೆ ಇರುವುದಿಲ್ಲವಂತೆ, ಹೇಗೋ ಎಲ್ಲರೂ ಸ್ನಾನ ಮುಗಿಸಿ ರೆಡಿಯಾಗುವ ಹೊತ್ತಿಗೆ ಸಮಯ 11:30. ಅವತ್ತು ರಥಸಪ್ತಮಿ, ಮನೆಯಲ್ಲೇ ಇದ್ದಿದ್ರೆ.... ಬೆಳಗಿನ ಜಾವಕ್ಕೇ ಎಲ್ಲ ಕೆಲಸ, ಸ್ನಾನ ಮುಗಿಸಿ... ನೈವೇದ್ಯ ರೆಡಿ ಮಾಡಿಟ್ಟು ಸೂರ್ಯೋದಯಕ್ಕೆ ಸರಿಯಾಗಿ ಜಗಚ್ಚಕ್ಷುವಾದ ಸೂರ್ಯ ಭಗವಾನರ ಪೂಜೆ ಮಾಡ್ತಾ ಇದ್ದೆವು. ಇವತ್ತು ಗಂಟೆ 11 ಆದರೂ ಸ್ನಾನವಿಲ್ಲ ಅಂತ ಬೇಜಾರಂತೂ ಆಗಿತ್ತು, ಆದ್ರೆ ಈಗ ನನ್ನಪ್ಪನ ಮನೆ ದೇವತೆ ತಾಯಿ ಬನಶಂಕರಿ ದೇವಿಯ ದರ್ಶನಕ್ಕೆ ಹೋಗ್ತಾ ಇದ್ದೀವಿ ಅನ್ನೋ ಖುಷಿ ಎಲ್ಲಾ ಬೇಸರವನ್ನೂ ಮರೆಸಿಬಿಟ್ಟಿತ್ತು. ಭಕ್ತಿ ಭಾವವನ್ನು ಹೊತ್ತು ಮಾತೆಯ ದರ್ಶನಕ್ಕೆ ದೇವಸ್ಥಾನದ ಕಡೆಗೆ ಹೊರಟೆವು....
ಮುಂದುವರೆಯುವುದು.......
#ಭಾಗ_5
ಬಾದಾಮಿ ಬನಶಂಕರಿ ದೇವಸ್ಥಾನದ ಒಳಗೆ ಬಂದಾಗಲೇ ಗೊತ್ತಾದದ್ದು, ಅಲ್ಲಿ ಸೇರಿರುವ ಜನ ಸಂಖ್ಯೆಯ ಬಗ್ಗೆ..!! ಹೆಜ್ಜೆ ಮುಂದೆ ಇಡಲಾರದಷ್ಟು ಜನ, ಸ್ಪೆಷಲ್ ದರ್ಶನದ ಕ್ಯೂ ಯಾವ್ದೋ, ಧರ್ಮದರ್ಶನದ ಕ್ಯೂ ಯಾವ್ದೋ, ಸ್ಪೆಷಲ್ ಸರ್ಶನಕ್ಕೆ ಟಿಕೆಟ್ ಪಡೆವ ಕ್ಯೂ ಯಾವ್ದೋ ಗೊತ್ತೇ ಆಗದಷ್ಟು ಲೇನ್. ಯಾರನ್ನ ಕೇಳಿದರೂ ಮಾಹಿತಿ ಇಲ್ಲ, ಗೊತ್ತಿಲ್ರೀ, ಎಲ್ರೂ ನಿಂತಾರ, ಅದ್ಕೇ ನಿಂತೀವರೀ ಅಂತ ಹೇಳ್ತಾರೆ, ದೇವಸ್ಥಾನದ ಪ್ರಾಕಾರ ಪೂರ್ತಿ ಒಂದು ಬಾರಿ ಸುತ್ತಿ , ಕ್ಯೂ ಮಧ್ಯೆ ನಿಂತವರನ್ನು ಮಾತಾಡಿಸಿ ಮಾಹಿತಿ ಪಡೆದು, ಸ್ಪೆಷಲ್ ದರ್ಶನಕ್ಕೆ ಟಿಕೆಟ್ ಪಡೆಯಲು ಸಾಲಿನಲ್ಲಿ ನಿಂತೆವು, ಒಬ್ಬರಿಗೆ ಒಂದೇ ಟಿಕೆಟ್ ಅಂತ ಸಿಬ್ಬಂದಿ ಹೇಳಿದ್ದಕ್ಕೋ ಏನೋ ದರ್ಶನದ ಕ್ಯೂಗಿಂತ ಟಿಕೆಟ್ ಗಾಗಿ ನಿಂತ ಕ್ಯೂ ದೊಡ್ಡದಿತ್ತು. ದೇವಸ್ಥಾನದ ಒಳ ಬರುವವರು, ಹೊರ ಹೋಗುವವರು, ಹೆಜ್ಜೆ ನಮಸ್ಕಾರ ಹಾಕುವವರು, ಎಲ್ಲರೂ ಟಿಕೆಟ್ ಗಾಗಿ ನಿಂತ ಕ್ಯೂ ಮದ್ಯೆಯೇ ಹೋಗಬೇಕಿತ್ತು. ಜಾಗ ಬಿಡ್ರೀ... ಅಡ್ಡ ನಿಂತೀರಲ್ರೀ.. ಅಂತ ಗೊಣಗುತ್ತಾ ಮದ್ಯೆ ಮಧ್ಯೆ ತೂರಿ ಜನ ಹೋಗ್ತಾಯಿದ್ರು, ಯಾಕೋ ವ್ಯವಸ್ಥೆ ಸರಿ ಇಲ್ಲ ಅನ್ನಿಸಿತು. ಭಾವ ಮುಂದೆ ನುಗ್ಗಿ ಸಿಬ್ಬಂದಿಗೆ ಪರಿಸ್ಥಿತಿ ಅರ್ಥಮಾಡಿಸಲು ಪ್ರಯತ್ನ ಪಟ್ಟರಾದರೂ... ವ್ಯರ್ಥವಾಯ್ತು. ಕೊನೆಗೆ 12 ಗಂಟೆಗೆ ಟಿಕೆಟ್ ಕೊಡುವುದನ್ನೂ ಸಹ ಬಂದ್ ಮಾಡಿದರು. ಅಷ್ಟು ಹೊತ್ತು ಸಾಲಿನಲ್ಲಿ ನಿಂತಿದ್ದೂ ವ್ಯರ್ಥವಾಯ್ತು. ಕೊನೆಗೆ ಧರ್ಮ ದರ್ಶನದ ಸರತಿಯಲ್ಲೇ ನಿಲ್ಲಲು ಆಕಡೆಗೆ ತೆರಳಿದೆವು.
ಮಧ್ಯಾಹ್ನ 12 ಆಯ್ತು, ಏನಾದ್ರೂ ತಿಂಡಿ ತಿನ್ಕೊಂಡು ಬಂದು ದರ್ಶನಕ್ಕೆ ನಿಲ್ಲೋದಾ... ಅಂತ ಭಾವ _ ರಮೇಶ್ ಅಂದದ್ದಕ್ಕೆ, ನಾನು ಅಕ್ಕ ಇಬ್ಬರೂ ಬೇಡ... ಏನೇನೋ ತಿಂದು ದರ್ಶನ ಮಾಡೋದು ಬೇಡ, ಈರುಳ್ಳಿ ಬೆಳ್ಳುಳ್ಳಿ ಇಲ್ಲದೆ ಹೋಟೆಲ್ನಲ್ಲಿ ಯಾವ ತಿಂಡಿಯೂ ಇರೋಲ್ಲ, ದರ್ಶನಕ್ಕೆ ಅಂಥವನ್ನೆಲ್ಲ ತಿಂದು ಹೋಗೋದಾ..? ಬೇಡ ಅಂದೆವು, ಅಲ್ಲದೆ ದೇವಸ್ಥಾನಕ್ಕೆ ಬರುವಾಗ ಹೋಟೆಲ್ ಮುಂದೆಯೇ ಬರಬೇಕು, ಒಳಗೇ ಹೋಗಲಾರದಂತಿದ್ದ ಅಲ್ಲಿನ ರಶ್ ನೋಡಿ ಬಂದಿದ್ದೇವಾದ್ದರಿಂದ... ಅಲ್ಲಿಯೂ ಕೂಡ 1 ಗಂಟೆ ಕಾಯಲೇ ಬೇಕು, ಅಷ್ಟರಲ್ಲಿ ದರ್ಶನವೇ ಆಗಬಹುದು ಅಂತ ಸರತಿಯಲ್ಲಿ ನಿಂತೆವು.
ಅಕ್ಕನ ಬ್ಯಾಗ್ನಲ್ಲಿದ್ದ ಎಳ್ಳು ಕಡಲೆಯ ಪ್ಯಾಕೆಟ್, ಕೋಡುಬಳೆ, ಒಗ್ಗರಣೆ ಮಂಡಕ್ಕಿ ತಿಂದು ನೀರು ಕುಡಿದು ಸರತಿ ಸಾಲಿನಲ್ಲಿ ನಿಂತೆವು. ಉದ್ದದ ಒಂದೇ ಸಾಲಿದ್ದಿದ್ದರೆ ಬಹುಶಃ ಮೂರ್ನಾಲ್ಕು ಕಿಲೋಮೀಟರ್ ಉದ್ದ ಇರ್ತಿತ್ತೋ ಏನೋ, ಅಷ್ಟರಮಟ್ಟಿಗೆ ದೊಡ್ಡ ಸಾಲು, ಇನ್ನು ಸ್ಪೆಷಲ್ ದರ್ಶನದ ಕ್ಯೂ ... ಇದಕ್ಕಿಂತ ಜಾಸ್ತಿನೇ ಇತ್ತು ಅಂತ ಅಲ್ಲಿ ನಿಂತವರೆಲ್ಲ ಮಾತಾಡ್ತಾ ಇದ್ರು. ಅಲ್ಲೇ ಸುತ್ತಿ ಸುತ್ತಿ , ಮೇಲೆ ಹತ್ತಿ, ಕೆಳಕ್ಕೆ ಇಳಿದು ಸಾಗಿದರೂ ದಾರಿ ಸವೆಯುತ್ತಲೇ ಇಲ್ಲ. ಬಿಸಿಲು ಬಾರದಂತೆ ಮೇಲ್ಛಾವಣಿ ಇದ್ದರೂ ಅಷ್ಟು ಜನರ ಮಧ್ಯೆ ತುಂಬಾ ಸೆಕೆ ಅನಿಸುತ್ತಿತ್ತು. ಲೇನ್ ಗಳ ಮಧ್ಯೆ ಕೂರುವ ವ್ಯವಸ್ಥೆ ಕೂಡ ಇರಲಿಲ್ಲ, ವಯಸ್ಸಾದವರು ಮಕ್ಕಳು ಪಾಪ ತುಂಬಾ ಬಳಲಿ ಹೋದರು. ಎಷ್ಯೋ ಜನ ಕಂಬಿಗಳ ಮೇಲೆ ಹತ್ತಿ ಇಳಿದು ವಾಪಸ್ ಹೋಗಿಬಿಟ್ಟರು.
ನಮ್ಮ ಅಜ್ಜ _ಮುತ್ತಜ್ಜರ ಕಾಲದಲ್ಲಿ ಬನಶಂಕರಿಗೆ ಬರಲು ವ್ಯವಸ್ಥೆಯೇ ಇರಲಿಲ್ಲವಂತೆ, ಕಾಡಿನ ಪ್ರದೇಶ, ಹೋಗಲು ಭಯಂಕರ ಕಷ್ಟ ಅಂತ ನನ್ನಪ್ಪನ ಅಜ್ಜ ಮುತ್ತಜ್ಜ ಹೇಳ್ತಿದ್ರಂತೆ, ಜೀವಿತದಲ್ಲಿ ಒಂದು ಬಾರಿ ಬನಶಂಕರಿಗೆ ಬಂದ್ರೆ ಅದೇ ಹೆಚ್ಚು, ತುಂಬಾ ಕಷ್ಟ ಬನಶಂಕರಿ ಯಾತ್ರೆ ಅಂತ ಅಪ್ಪ ಹೇಳ್ತಿದ್ರು, ಬಹುಶಃ ಅಪ್ಪ ಕೂಡ ಒಂದೆರಡು ಬಾರಿಯಷ್ಟೇ ಇಲ್ಲಿಗೆ ಬಂದಿರಬಹುದು... ಅದೂ ಅಣ್ಣಂದಿರು ದೊಡ್ಡವರಾದಮೇಲೆ... !! ಈಗ ಎಲ್ಲ ತೆರದ ವ್ಯವಸ್ಥೆಯ ಇದೆ, ಈಗಂತೂ ಇದು ಕಾಡು ಅಲ್ಲವೇ ಅಲ್ಲ... ನಾವುಗಳು ಇಷ್ಟು ಆರಾಮವಾಗಿ ಬಂದ್ವಿ, ಆದರೆ ದರ್ಶನಕ್ಕೆ ಇಷ್ಟು ಕಷ್ಟ..!!! ತುಂಬಾ ಕಷ್ಟ ಬನಶಂಕರಿ ಯಾತ್ರೆ ಅಂತ ಅಪ್ಪ ಹೇಳಿದ್ದು ನೆನಪಿಗೆ ಬಂತು. ಇಷ್ಟು ಕಷ್ಟವೇ ತಾಯಿ ನಿನ್ನ ದರ್ಶನ ಪಡೆಯಲು ಅಂತ ಮನದಲ್ಲೇ ದೇವಿಯನ್ನು ಕೇಳಿದೆ. ಜಾತ್ರೆಯ ಸಮಯದಲ್ಲಿ ಬಂದ್ರೆ ರಶ್ ಇಲ್ದೇ ಇರುತ್ತಾ.? ಅದಕ್ಕೆ ದೇವಿನ ಬೈಕೊಂಡ್ರೆ ಆಗುತ್ತಾ.? ಅಂತ ರಮೇಶ್ ನನ್ನ ಮನಸ್ಸನ್ನು ಓದಿದವರಂತೆ ಹೇಳಿದ್ದು ಕೇಳಿ ಆಶ್ಚರ್ಯ ಆಯ್ತು.. 29 ವರ್ಷದಿಂದ ಜೊತೇಲಿದ್ದೀನಮ್ಮ... ನಿನ್ನ ಮುಖದ ಏರಿಳಿದದಲ್ಲೇ ನಿನ್ನ ಮನಸ್ಸಿನಲ್ಲಿ ಏನು ಓಡ್ತಾ ಇದೆ ಅಂತ ಅರ್ಥಮಾಡ್ಕೋತೀನಿ ಅಂದಾಗ ಹೆಮ್ಮೆಯೆನಿಸಿ ಕಣ್ಣು ಒದ್ದೆಯಾಯ್ತು.
ಅಂತೂ ಇಂತೂ... 12 ಗಂಟೆಗೆ ಕ್ಯೂನಲ್ಲಿ ನಿಂತಿದ್ದಕ್ಕೆ ಮಧ್ಯಾಹ್ನ 3 :15 ಗಂಟೆಗೆ ಗರ್ಭಗುಡಿಯ ಮುಂಬಾಗದ ಮುಖಮಂಟಪಕ್ಕೆ ಎಂಟರ್ ಆದ್ವಿ, ಇನ್ನೈದು ನಿಮಿಷದಲ್ಲಿ ದೇವಿಯ ಮುಂದೆ ಇರ್ತೀವಿ ಅನ್ನೋ ವಿಷಯವೇ ರೋಮಾಂಚನ ತರುತ್ತಿತ್ತು. ಇಲ್ಲಿವರೆಗೂ ಬರಲು ಅಡೆತಡೆಗಳು ಬಂದವು, ಆ ಜನಜಂಗುಳಿಯ ದೆಸೆಯಿಂದಲೋ, ಆ ಬಿಸಿಲು ಸೆಖೆಗೋ, ನಿನ್ನೆಯಿಂದ ಉಪವಾಸವಿದ್ದಿದ್ದಕ್ಕೋ ... ಅಲ್ಲಿಯ ಅವ್ಯವಸ್ಥೆ ಬಗ್ಗೆ ಬೇಸರಗೊಂಡಿದ್ದಕ್ಕೋ... ಏನೋ ಸರತಿ ಸಾಲಿನ ಮದ್ಯದಲ್ಲಿದ್ದಾಗ ಕಣ್ಣು ಕಟ್ಟಲಿಟ್ಟು ತಲೆ ಸುತ್ತಿ ಬಂದು ಬೀಳುವ ಹಂತದಲ್ಲಿದ್ದೆ. ಪಾಪ ರಮೇಶ್... ಅಕ್ಕ, ಭಾವ ಗಾಬರಿಗೊಂಡು... ಗಾಳಿ ಬೀಸಿ, ನೀರು ಕುಡಿಸಿ, ಆರೈಕೆ ಮಾಡಿದ ಫಲದಿಂದ ಚೇತರಿಕೆ ಕಂಡು ಈಗ ದೇವರ ಮುಂದೆ ನಿಂತಿದ್ದೀನಿ, ನನಗೆ ಹೀಗಾಯ್ತಲ್ಲ ಅಂತ ಅಕ್ಕ ಕೂಡ ತುಂಬಾ ಗಾಬರಿಗೊಂಡು ಅವರ ಹೆಲ್ತ್ ಕೂಡ ಅಪ್ಸೆಟ್ ಆಯ್ತು.... ಆದರೂ ದೇವಿಯ ದಯೆಯಿಂದ ಎಲ್ಲವನ್ನೂ ದಾಟಿ ಈಗ ಅವಳ ಮುಂದೆ ನಿಂತಿದ್ದೀವಿ... ಜನ್ಮ ಸಾರ್ಥಕವಾಯ್ತು ಅನ್ನುವ ಭಾವ ಮೂಡಿತು.
ಮುಂದುವರೆಯುವುದು.....
#ಭಾಗ_6
ತಾಯಿ ಬನಶಂಕರಿ ದೇವಿ ಮುಂದೆ ನಿಂತಾಗ, ಆದ ಖುಷಿಯನ್ನು ಹೇಳತೀರದು, ಕಣ್ಣಿಂದ ತಂತಾನೇ ಆನಂದಾಶ್ರು ಸುರಿಯತೊಡಗಿತು. ಮಾತೆಯ ದಿವ್ಯ ಮೂರ್ತಿಯನ್ನು ಕಣ್ತುಂಬಿಕೊಂಡಾಕ್ಷಣ ಇದುವರೆಗೂ ಆದ ತೊಂದರೆಯೆಲ್ಲ ಶೂನ್ಯವೆನಿಸಿತು. ಹೆಚ್ಚು ಹೊತ್ತು ನಿಲ್ಲಲೂ ಬಿಡದೆ ಮುಂದಕ್ಕ ಹೊಗ್ರೀ... ಹಿಂದ ಬಾಳ ಮಂದಿ ಅದಾರ.. ಅಂತ ಹೇಳ್ತಿದ್ರು ಅಲ್ಲಿನ ಸಿಬ್ಬಂದಿ, ಹೌದು ಸಂಜೆಯಾದರೂ ಕರಗದ ಆ ಸರತಿ ಸಾಲಿನಲ್ಲಿನ ಎಲ್ಲ ಜನಗಳಿಗೂ ದರ್ಶನದ ಭಾಗ್ಯ ಬೇಕು, ಸಂಜೆ ಮತ್ತೆ ದರ್ಶನಕ್ಕೆ ಬರ್ತೀವಲ್ಲ ಅಂದ್ಕೊಂಡು ಹೊರಕ್ಕೆ ಬಂದೆವು. ಮತ್ತೆ ಸಾಲಿನಲ್ಲಿ ನಿಂತು ತೀರ್ಥ ಸೇವಿಸಿ, ಬೇಡಿದವರಿಗೆ ಕೈಲಾದಷ್ಟು ಕಾಣಿಕೆ ಕೊಟ್ಟು ದೇವಾಲಯದಿಂದ ಹೊರಬರುವಷ್ಟರಲ್ಲಿ ಅದಾಗಲೇ ಸಂಜೆ 4 ರ ಆಸುಪಾಸು.
ಎಲ್ಲರೂ ತುಂಬಾನೇ ಹಸಿದಿದ್ದೆವು. ಸುಮಾರು 4 ಗಂಟೆಗಳ ಕಾಲ ನಿಂತೂ ನಿಂತು ತುಂಬಾನೇ ಸುಸ್ತಾಗಿತ್ತು. ಉಪವಾಸವಿದ್ದು ಅಭ್ಯಾಸವಿದ್ದ ನನಗೇ ಈ ಪರಿ ಸುಸ್ತಾಗ್ತಿದೆ ಅಂದ್ರೆ ಇನ್ನುಳಿದ ಮೂವರ ಕಥೆ ಏನು ಅನ್ನಿಸಿ, ಆಗದಿದ್ದರೂ ಸಾವರಿಸಿಕೊಂಡು ಬೇಗಬೇಗ ಹೆಜ್ಜೆ ಹಾಕಿ ಹೋಟೆಲ್ ಬಳಿ ಬಂದರೆ, ಒಳಗೆ ಹೋಗಲೂ ಆಗದಷ್ಟು ರಶ್, ಬಹುಶಃ ದರ್ಶನ ಮುಗಿಸಿ ಹೊರಬಂದವರೆಲ್ಲ ಹೋಟೆಲ್ಗೆ ನುಗ್ಗಿರಬೇಕು, ಇಲ್ಲಿ ಕಾಯಲು ಸಾಧ್ಯವಿಲ್ಲ ಅನ್ನಿಸಿ ಇನ್ನೊಂದು ಹೋಟೆಲ್ ಹುಡುಕಿ ಹೊರಟೆವು. ಅಲ್ಲಿಯೂ ಇಲ್ಲಿಗಿಂತ ಇನ್ನೂ ಹೆಚ್ಚಿನ ಜನಸಂದಣಿ. ಕೊನೆಗೆ ರಮೇಶ್, ಮೊದಲು ಎಳನೀರು ಕುಡಿಯೋಣ ಬನ್ನಿ ಅಂತ ಎಲ್ಲರಿಗೂ ಎಳನೀರು ಕೊಡಿಸಿದರು. ಎಳನೀರು ಹಾಗೂ ಅದರೊಳಗಿನ ದೋಸೆಕಾಯಿಯನ್ನು ತಿಂದಮೇಲೆ ಉಸಿರು ಬಂದಹಾಗಾಯ್ತು.
ಊಟಕ್ಕಾಗಿ ಅಲ್ಲಿನ ಲೋಕಲ್ ಜನಗಳನ್ನ ವಿಚಾರಿಸಿದ್ದಕ್ಕೆ...ಬುಟ್ಟಿಗಳಲ್ಲಿ ಜೋಳದರೊಟ್ಟಿ ಮಾರುವವರು, ಹಾಗೂ ತೀರಾ ಸಣ್ಣ ಸಣ್ಣ ಖಾನಾವಳಿ ಬಿಟ್ಟರೆ ಇಲ್ಲಿ ದೊಡ್ಡದು ಅಂತ ಎರಡೇ ಹೋಟೆಲ್ ಇರೋದು ಅಂತ ಗೊತ್ತಾಯ್ತು. ಅವೆರಡರಲ್ಲೂ ವಿಪರೀತ ಜನಗಳು..!! ದೇವಸ್ಥಾನದಲ್ಲಿ ಬೇರೆ ದಿನಗಳಲ್ಲಿ ಊಟಕ್ಕೆ ಹಾಕ್ತಾರಂತೆ, ಆದ್ರೆ ಜಾತ್ರಾ ಸಮಯದಲ್ಲಿ ಇಲ್ಲವಂತೆ, ಜಾತ್ರೆಗೆ ಬರುವ ಹತ್ತಾರು ಸಾವಿರ ಮಂದಿಗೆ ಊಟ ಒದಗಿಸಲು ಅವರಿಗೂ ಕಷ್ಟವೇ ಸರಿ, ಹಾಗಾಗಿ ಬನಶಂಕರಿಗೆ ಬಂದ ಎಲ್ಲ ಜನರ ಹಸಿವೆ ನೀಗಿಸಲು ಇರುವ ಬೆರಳೆಣಿಕೆಯ ಹೋಟೆಲ್ಗಳು ಹರಸಾಹಸ ಪಡುತ್ತಿದ್ದವು. ಕೊನೆಗೆ ಎಳನೀರು ಮಾರುವವ ಹೇಳಿದ್ರು ಅಂತ ಒಂದೆರಡು ಫರ್ಲಾಂಗ್ ನಡೆದು ಯಾವುದೋ ಸಣ್ಣ ಹೋಟೆಲ್ ಗೆ ಬಂದೆವು, ಅಲ್ಲಿಯೂ ಸಹ ರಶ್..! ಮುಂದೆ ನಡೆಯಲು ಸಾಧ್ಯವಿಲ್ಲವೆನಿಸಿ, ಎಷ್ಟೊತ್ತಾದರೂ ಸರಿ ಇಲ್ಲಿಯೇ ತಿನ್ನೋಣ ಅಂತ ಅಲ್ಲೇ ಕುಳಿತುಬಿಟ್ಟೆವು.
ಅದಾಗಲೇ ಸಂಜೆ 5 :30 ರ ಸಮಯ, ಈಗ ನಮ್ಮ ಊಟದ ಸರದಿ ಬಂತು, ಎಲ್ಲ ಖಾಲಿ ಅಂತ ಇದ್ದಿದ್ದುದ್ದನ್ನೇ ಬಡಿಸಿದರು, ನಾವು ತಿಂದ ಚಪಾತಿ ಪಲ್ಯ, ಅನ್ನ ಸಾರು ಅಮೃತ ಸಮಾನ ಅನ್ನಿಸಿಬಿಡ್ತು. ಅನ್ನದ ಬೆಲೆ ಹಸಿದಾಗಲೇ ಗೊತ್ತಾಗೋದು..!! ತುಂಬಾ ಹಸಿದಿದ್ದರಿಂದಲೋ... ನಿನ್ನೆಯಿಂದ ಉಪವಾಸವಿದ್ದಿದ್ದಕ್ಕೆ ಸುಸ್ತಿನಿಂದಲೋ ಏನೋ ನನಗೆ ತಿನ್ನಲೂ ಆಗುತ್ತಿಲ್ಲ... ಆದರೂ ಆ ಸಮಯಕ್ಕೆ ಸಿಕ್ಕ ಆ ಅಮೃತಾನ್ನವನ್ನು ಕಣ್ಣಿಗೊತ್ತಿಕೊಂಡು ತಿಂದು ಮುಗಿಸಿದೆ. ಒಂದತ್ತು ನಿಮಿಷ ಸುಧಾರಿಸಿಕೊಂಡು ನಿಧಾನವಾಗಿ ನಡೆದು ನಾವಿಳಿದುಕೊಂಡಿದ್ದ ರೂಮ್ ಗೆ ಬಂದು ವಿಶ್ರಮಿಸಿಕೊಳ್ಳಲು ಮಲಗಿದೆವು.
ಸಂಜೆ 7 ರ ಸಮಯ.... ಸಂಜೆ ದರ್ಶನಕ್ಕೆ ಹೋಗೋಣ ಎದ್ದೇಳು ಶೈಲು ಅಂತ ನನ್ನನು ರಮೇಶ್ ಎಬ್ಬಿಸುತ್ತಿದ್ದರೂ.. ಏಕೋ ಏಳಲೇ ಆಗುತ್ತಿಲ್ಲ...ಬೆಳಿಗ್ಗೆ ಮಾಡಿದ್ದ ತಣ್ಣೀರಿನ ಸ್ನಾನಕ್ಕೋ... ಆ ವಿಪರೀತ ಜನಜಂಗುಳಿಯ ಧೂಳಿನ ಘಾಟಿಗೋ ತುಂಬಾ ಶೀತವಾಗಿಬಿಟ್ಟಿತ್ತು, ಜೊತೆಗೆ ತಲೆಯೂ ನೋಯುತ್ತಿತ್ತಾದ ಕಾರಣ, ಜೊತೆಗೆ ಬೆಳಿಗ್ಗೆ 5: 30ಕ್ಕೆ ನಡೆಯುವ ವಿಶೇಷ ಅಭಿಷೇಕ ಪೂಜೆಗೆ ಹೋಗಬೇಕಿತ್ತಾದ ಕಾರಣ, ನೀವೇ ಹೋಗಿಬನ್ನಿ, ನಾನು ರೆಸ್ಟ್ ಮಾಡ್ತೀನಿ ಅಂತ ಹೇಳಿದೆ, ಅಕ್ಕ ಕೂಡ ನನ್ನೊಟ್ಟಿಗೆ ಉಳಿದುಕೊಂಡರು. ರಮೇಶ್ ಹಾಗೂ ಭಾವ ಇಬ್ಬರೂ ದರ್ಶನಕ್ಕೆ ಹೋದವರು ಅರ್ಧಗಂಟೆಗೆಲ್ಲ ವಾಪಸ್ ಬಂದು, ಗರ್ಭಗುಡಿಗೇ ಹೋಗಿ ತುಂಬಾನೇ ಚನ್ನಾಗಿ ದರ್ಶನ ಮಾಡಿ ಬಂದೆವು, ಅಷ್ಟಾಗಿ ರಶ್ ಇರಲಿಲ್ಲ.... ನೀವೂ ಬರಬಹುದಿತ್ತು ಅಂದಾಗ, ಚಂದದ ದರ್ಶನದ ಭಾಗ್ಯ ಕಳೆದುಕೊಂಡೆವಲ್ಲ ಅಂತ ಬೇಸರ ಆಯ್ತು.
ಮುಂದುವರೆಯುವುದು.......
#ಭಾಗ_7
ಬೆಳಿಗ್ಗೆ 5ಕ್ಕೆಲ್ಲ ನಾನು ಅಕ್ಕ ರೆಡಿಯಾಗಿ, ರಮೇಶ್ ಹಾಗೂ ಭಾವನವರನ್ನು ಎಬ್ಬಿಸಿ ನಾವೀಗ ದೇವಸ್ಥಾನಕ್ಕೆ ಹೋಗ್ತಿದ್ದೀವಿ, ನೀವುಗಳು ಸ್ನಾನ ಸಂಧ್ಯಾವಂದನೆ ಮುಗಿಸಿ ಬೇಗ ಬನ್ನಿ ಅಂತೇಳಿ, ದೇವಿಗೆ ಬೆಳಗಿನ ಸಮಯದಲ್ಲಿ ಮಾಡುವ ಏಕಾದಶ ರುದ್ರಾಭಿಷೇಕವನ್ನು ಕಣ್ತುಂಬಿ ಕೊಳ್ಳಲು ಹೊರಟೆವು. ನಾವಿಳಿದುಕೊಂಡಿದ್ದ ರೂಮ್ ನಿಂದ ಸರಿಯಾಗಿ ಎದುರಿಗಿರುವ ದೇವಾಲಯದ ಬಲಗಡೆಗೆ ಇರುವ ಗೇಟ್ ನಿಂದ ದೇವಸ್ಥಾನ ಹೊಕ್ಕೆವು. ಆ ದ್ವಾರದ ಎರಡೂ ಕಡೆ ವಿಶಾಲವಾದ ಹಜಾರಗಳು, ಆ ಜಾಗದ ತುಂಬೆಲ್ಲಾ ನೂರಾರು ಜನ ಯಾತ್ರಿಗಳು ಮಲಗಿದ್ದರು. ಅಲ್ಲಿಂದ ಒಂದೈದು ಮೆಟ್ಟಿಲು ಕೆಳಗಿಳಿದರೆ ದೇವಸ್ಥಾನದ ವಿಶಾಲವಾದ ಪ್ರಾಂಗಣ ಸಿಗುತ್ತೆ. ಹಜಾರಕ್ಕೆ ಹೊಂದಿಕೊಂಡಂತಿರುವ ಆ ಪ್ರಾಂಗಣದಲ್ಲೂ ಸಹ ಯಾತ್ರಿಗಳು ಮಲಗಿದ್ದರು.
ವಿಶಾಲವಾದ ಹಜಾರಗಳು, ಮುಖ್ಯ ದೇವಾಲಯದ ಸುತ್ತಲೂ ದೊಡ್ಡದಾದ ಪ್ರಾಂಗಣ. ದೇವಸ್ಥಾನದ ಎಡ ಭಾಗಕ್ಕೆ ಗಣೇಶ, ಸುಬ್ರಹ್ಮಣ್ಯ, ಶಿವನ ಪುಟ್ಟ ಗುಡಿಗಳು ಇವೆ. ಈ ದೇವಾಲಯವನ್ನು ಮೂಲತಃ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿತ್ತು ನಂತರ ನವೀಕರಿಸಿ ಪುನರ್ನಿರ್ಮಿಸಲಾದ ರಚನೆಯು ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿದೆ.(ಜೊತೆಗೆ ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವೂ ಇದೆ) ದೇವಾಲಯವು ಎಲ್ಲಾ ಕಡೆಗಳಲ್ಲಿ ಎತ್ತರದ ಗೋಡೆಯಿಂದ ಸುತ್ತುವರೆದಿದೆ. ಮುಖ್ಯ ಆವರಣದಲ್ಲಿ ಮುಂಭಾಗದ ಪೋರ್ಟಿಕೊ - ಮುಖ ಮಂಟಪ, ಪ್ರವೇಶ ವೇದಿಕೆ - ಅರ್ಧ ಮಂಟಪ, ಮತ್ತು ದೇವಿ ಬನಶಂಕರೀ ನೆಲೆಸಿರುವ ಗರ್ಭಗೃಹ - ಸೇರಿವೆ, ಗರ್ಭಗೃಹದ ಮೇಲ್ಭಾಗದಲ್ಲಿ ವಿಮಾನ ಗೋಪುರವಿದೆ. ಇಲ್ಲಿನ ದೇವಿಯು ತನ್ನ ಸಿಂಹಿಣಿಯ ಮೇಲೆ ಕುಳಿತು, ತನ್ನ ಪಾದಗಳ ಬಳಿ ಮಲಗಿರುವ ರಾಕ್ಷಸನನ್ನು ಕೊಲ್ಲುತ್ತಿರುವ ದೃಶ್ಯವಿದೆ. ದೇವಾಲಯವು ಚೌಕಾಕಾರದ ಮಂಟಪವನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ, ಪ್ರವೇಶ ದ್ವಾರದ ಮೇಲೆ ಎತ್ತರದ ಗೋಪುರವಿದ್ದು, ಅದರ ಮೇಲೆ ಅನೇಕ ದೇವ ದೇವತೆಗಳ ಶಿಲ್ಪಗಳಿವೆ. ಅನೇಕ ಪೌರಾಣಿಕ ಪಾತ್ರಗಳನ್ನೂ ಕೆತ್ತಲಾಗಿದೆ.
ದೇವಾಲಯದ ಮುಂಭಾಗದಲ್ಲಿ ಪ್ರವೇಶದ್ವಾರದಲ್ಲಿ 360 ಅಡಿ (109.7 ಮೀ) ಚದರ ಅಗಲದ ಪುಷ್ಕರಣಿ ಇದೆ, ಇದನ್ನು ಹರಿದ್ರ ತೀರ್ಥ ಎಂದು ಕರೆಯಲಾಗುತ್ತದೆ, ಇದನ್ನು ಮೊದಲು ಹರಿಶ್ಚಂದ್ರ ತೀರ್ಥ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ. ಈ. ಕೊಳವು ಮೂರು ಬದಿಗಳಲ್ಲಿ ಕಲ್ಲಿನ ಮಂಟಪಗಳಿಂದ ಆವೃತವಾಗಿದೆ. ಇದು ಅತ್ಯಂತ ಪವಿತ್ರ ತೀರ್ಥ ಎನ್ನುತ್ತಾರೆ, ದೇವಿಯ ತೆಪ್ಪೋತ್ಸವವನ್ನು ಇಲ್ಲಿಯೇ ಮಾಡುತ್ತಾರಂತೆ. ಕೊಳದ ಪಶ್ಚಿಮ ದಂಡೆಯಲ್ಲಿ ಮತ್ತು ಪ್ರವೇಶದ್ವಾರದಲ್ಲಿ ದೀಪ ಗೋಪುರಗಳು ( ದೀಪ ಸ್ತಂಭಗಳು ) ಇವೆ. . ಕೊಳದ ದಂಡೆಯಲ್ಲಿರುವ ಗೋಪುರವು ಅಸಾಮಾನ್ಯ ಕಾವಲು ಗೋಪುರವಾಗಿದ್ದು, ಇದು "ಹಿಂದೂ ಮತ್ತು ಇಸ್ಲಾಮಿಕ್ ಶೈಲಿಯ ವಿಜಯನಗರ ವಾಸ್ತು ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ ". ಇದನ್ನು ವಿಜಯ ಗೋಪುರ ಎಂದು ಕರೆಯಲಾಗುತ್ತದೆ.
ನಿನ್ನೆ ದೇವಸ್ಥಾನದಲ್ಲಿ ಈ ಯಾವ ಅಂಶವನ್ನೂ ಗಮನಿಸಲಾಗಿರಲಿಲ್ಲ, ಕಾರಣ .... ಹೆಜ್ಜೆಯೇ ಇಡಲಾರದಷ್ಟು ಸಂಪೂರ್ಣ ಜನಸಂದಣಿ. ಈಗ ಬೆಳಗಿನ ಜಾವದ 5 ಗಂಟೆಯ ಸಮಯದಲ್ಲಿ , ಶಾಂತ ವಾತಾವರಣದಲ್ಲಿ ಕೂಲಂಕಷವಾಗಿ ಗಮನಿಸಿದೆ. ಸ್ಪೆಷಲ್ ಪೂಜೆಯ ರಸೀತಿ ಪಡೆದವರು ಮಾತ್ರವೇ ಅಲ್ಲಿದ್ದದ್ದು. ಜೊತೆಗೆ ಹರಿದ್ರಾತೀರ್ಥದಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿಯೇ ಹೆಜ್ಜೆ ನಮಸ್ಕಾರ ಹಾಕುವವರೂ ಇದ್ದರು. ಅದಾಗಲೇ ಬೆಳಗಿನ 5.30 ಸಮಯ ಅಭಿಷೇಕಕ್ಕೆ ಕೊಟ್ಟವರೆಲ್ಲ ಒಬ್ಬೊಬ್ಬರಾಗಿ ಬರತೊಡಗಿದರು, ನಮ್ಮೆಲ್ಲರ ಗದ್ದಲಕ್ಕೋ, ಅಥವಾ ಏಳುವ ಸಮಯವಾಗಿದ್ದಕ್ಕೋ ದೇವಸ್ಥಾನದಲ್ಲಿ ಮಲಗಿದ್ದವರೆಲ್ಲಾ ಒಬ್ಬೊಬ್ಬರಾಗಿ ಎದ್ದರು.
ಜನ ಜಾಸ್ತಿ ಆದಷ್ಟೂ ಸ್ವಚ್ಛತೆ ಕಡಿಮೆ ಆಗುತ್ತೆ, ಅಲ್ಲಿ ಆದದ್ದೂ ಕೂಡ ಹಾಗೆಯೇ. ನಮ್ಮ ಜನಕ್ಕೂ ಸ್ವಲ್ಪವೂ ಸೆನ್ಸ್ ಇಲ್ಲಕಂಡ್ರೀ. ಅದು ದೇವಸ್ಥಾನ..!! ತಾಯಿ ಮಡಿಲ್ಲಲ್ಲಿ ಮಗುವಿನಂತೆ ಮಲಗಿ ನಿದ್ರಿಸಿದ ಮೇಲೆ, ನಾವಿರುವ ಆ ಪವಿತ್ರ ಪರಿಸರವನ್ನು ಶುದ್ಧವಾಗಿ ಇಡುವ ಮನಸ್ಥಿತಿಯೇ ಇಲ್ಲ.... ಛೇ ಅನಿಸಿತು. ಆದರೆ ಸ್ವಚ್ಛತೆ ಪಕ್ಕಕ್ಕಿಟ್ಟು ನೋಡಿದರೆ ದೇವಸ್ಥಾನ ತುಂಬಾನೇ ಚನ್ನಾಗಿದೆ, ಉತ್ತರ ಕರ್ನಾಟಕದ ಶಕ್ತಿ ಪೀಠಗಳಲ್ಲಿ ಈ ದೇವಾಲಯ ಅತ್ಯಂತ ಹೆಸರುವಾಸಿ. ಜೊತೆಗೆ ತಿಂಗಳ ಕಾಲ ನಡೆಯುವ ಜಾತ್ರೆ ಕೂಡ ಅತ್ಯಂತ ವಿಶೇಷವೇ..!! ಕರ್ನಾಟಕದಾದ್ಯಂತ ಮತ್ತು ನೆರೆಯ ರಾಜ್ಯವಾದ ಮಹಾರಾಷ್ಟ್ರದಿಂದ ಯಾತ್ರಿಕರು ಜಾತ್ರೆಯ ಹಬ್ಬವನ್ನು ಆಚರಿಸಲು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಮದುವೆ ಮತ್ತು ಕೃಷಿ ಉಪಕರಣಗಳನ್ನು ಖರೀದಿಸಲು ಈ ಸಮಯವನ್ನು ಶುಭವೆಂದು ಪರಿಗಣಿಸುತ್ತಾರೆ
ತಮ್ಮ ನೆಚ್ಚಿನ ದೇವರನ್ನು ಪೂಜಿಸಲು ಮಾತ್ರವಲ್ಲದೆ ಮೋಜು ಮಸ್ತಿ ಮತ್ತು ಉಲ್ಲಾಸಕ್ಕಾಗಿಯೂ ಈ ಸ್ಥಳಕ್ಕೆ ಬರುವ ಬಹುಪಾಲು ಗ್ರಾಮೀಣ ಸಮುದಾಯವನ್ನು ರಂಜಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು (ಸಂಗೀತ, ನಾಟಕ ಮತ್ತು ಸರ್ಕಸ್) ನಡೆಯುತ್ತವೆ. ಇದು ಇಲ್ಲಿ ವಿವಿಧ ಸಮುದಾಯಗಳ ಜನರ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಸಂಕೇತಿಸುತ್ತದೆ. ಒಟ್ಟಿನಲ್ಲಿ ಇಲ್ಲಿ ಭಕ್ತಿ ಮಾತ್ರವಲ್ಲದೆ, ಕಲೆಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಇವೆಲ್ಲವನ್ನೂ ಚಿಂತಿಸುತ್ತಾ ದೇವಾಲಯಕ್ಕೆ ಪ್ರದಕ್ಷಿಣೆ ಮಾಡತೊಡಗಿದೆ. ಬೆಳಗಿನ 6 ಗಂಟೆ ಸಮಯ ಅಭಿಷೇಕಕ್ಕೆ ಕೊಟ್ಟವರನ್ನೆಲ್ಲ ದೇವಾಲಯದ ಒಳಕ್ಕೆ ಬಿಡತೊಡಗಿದರು, ಅಷ್ಟೋತ್ರಿಗೆ ರಮೇಶ್ ಹಾಗೂ ಭಾವ ಕೂಡ ರೆಡಿಯಾಗಿ ಬಂದರಾದರೂ ಅವರನ್ನು ದೇವಾಲಯದ ಒಳಗೆ ಬಿಡಲಿಲ್ಲ, ಒಂದು ರಸೀತಿಗೆ ಒಬ್ಬರಿಗೆ ಮಾತ್ರ ಪ್ರವೇಶವಂತೆ, ನಾವಿಬ್ವರೂ ನಿನ್ನೆ ತುಂಬಾ.ಚನ್ನಾಗಿ ದರ್ಶನ ಮಾಡಿದ್ವಿ, ಈಗ ನೀವಿಬ್ಬರೂ ಹೋಗಿ ಅಂತ ನಮ್ಮನ್ನ ಕಳುಹಿಸಿ, ಅವರು ಪ್ರದಕ್ಷಿಣೆ ಮಾಡತೊಡಗಿದರು.
ಮುಂದುವರೆಯುವುದು......
#ಭಾಗ_8
ಬೆಳಿಗ್ಗೆ ಸರಿಯಾಗಿ 6 ಗಂಟೆಗೆ ಏಕಾದಶ ರುದ್ರಾ ಭಿಷೇಕದ ಸೇವಾಕರ್ತರನ್ನು ದೇವಸ್ಥಾನದ ಗರ್ಭಗುಡಿಯ ಒಳಗೆ ಬಿಟ್ಟರು. ಒಳಗೆ ಬಿಡುವ ಮೊದಲು ದೇವಿಗೆ ಉಡಿತುಂಬಲು ಸೇವಾಕರ್ತರು ತಂದಿದ್ದ ಸೀರೆಗಳನ್ನು ಕೇಳಿ ತೊಗೊಂಡರು, ಬಹುಷಃ ಅಭಿಷೇಕದ ನಂತರ ದೇವಿಗೆ ಉಡಿಸಲು ಇರಬಹುದು ಅಂದ್ಕೊಂಡೆ. ಒಳಗೆ ಆಡಿಯಿಟ್ಟಾಕ್ಷಣ ಮೈ ಜುಮ್ಮ್ಮೆಂದಿತು. ಕರಿಶಿಲೆಯಲ್ಲಿ ನಿರಾಭರಣವಾಗಿ ಕಂಗೊಳಿಸುತ್ತಿದ್ದ ದೇವಿಯ ಮೂಲ ವಿಗ್ರಹದೆದುರು ನಿಂತಿದ್ದೇವೆ. ಐದು ಅಡಿ ಎತ್ತರದ ಬನಶಂಕರಿ ದೇವಿ ಕಪ್ಪು ಶಿಲೆಯಲ್ಲಿ ಸಿಂಹ ರೂಪಿಣಿಯಾಗಿ ಮೂಡಿದ್ದಾಳೆ. ದೇವಿಗೆ ಅಷ್ಟಭುಜಗಳಿವೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಮತ್ತು ಲಿಪ್ತಿ ಹಾಗೂ ಎಡಗೈಯಲ್ಲಿ ಡಮರು, ಡಾಲು, ರುಂಡ ಮತ್ತು ಅಮೃತ ಪಾತ್ರೆಗಳಿವೆ. ತಾಯಿಯ ಬಲಗೈಯು ಸುಜ್ಞಾನದ ಸಂಕೇತವಾದರೆ ಎಡಗೈಯು ಶೌರ್ಯದ ಸಂಕೇತವಂತೆ. . ಈ ದೇವಿ ತ್ರಿನೇತ್ರೆ. ತಾಯಿಯ ಕಾಲಿನಡಿಯಲ್ಲಿ ರಾಕ್ಷಸನ ಮುಂಡವಿದೆ. ದೇವಿಯ ಈ ದಿವ್ಯ ರೂಪವನ್ನು, ಅದೂ ಅಷ್ಟು ಹತ್ತಿರದಿಂದ... ಕೇವಲ ನಾಲ್ಕೈದು ಅಡಿಗಳ ಅಂತರದಲ್ಲಿ ನಿಂತು ಕಣ್ತುಂಬಿಸಿಕೊಳ್ಳುವ ಆನಂದವಿದೆಯಲ್ಲ.... ಅದನ್ನು ಮಾತಿನಲ್ಲಿ ವರ್ಣಿಸಲಾಗದು...!!!
ಅಲ್ಲಿ ಸೇರಿದ್ದ ಭಕ್ತರಿಗೆಲ್ಲ ಸಂಕಲ್ಪ ಮಾಡಿಸಿ ಅಭಿಷೇಕ ಮಾಡಲು ಶುರು ಮಾಡಿದರು, ದೇವಳದ ಪುರೋಹಿತ ವರ್ಗದಿಂದ ವೇದಘೋಷದ ನಡುವೆ... ಉಳಿದ ಅರ್ಚಕರಿಂದ ಕ್ಷೀರ, ದಧಿ, ಘೃತ, ಮಧು, ಶರ್ಕರದಿಂದ ಸಾಂಗೋಪಾಗವಾಗಿ ಪಂಚಾಮೃತ ಅಭಿಷೇಕ ನೆರವೇರಿಸಿದರು. ನಂತರ ಎಳನೀರಿನ ಅಭಿಷೇಕ, ಹರಿದ್ರಾ ಕುಂಕುಮದಿಂದ ಅಭಿಷೇಕ, ಬಾಳೆಹಣ್ಣು, ಹಾಗೂ ಇನ್ನಿತರ ಡ್ರೈಫ್ರೂಟ್ಸ್ ನಿಂದ ಅಭಿಷೇಕ ಮುಗಿಸಿದ ನಂತರ ಏಕಾದಶ ರುದ್ರಭಿಷೇಕ ಮಾಡಿದರು. ಒಂದೊಂದು ಅಭಿಷೇಕದ ನಂತರವೂ ದೇವಿಗೆ ಮಂಗಳಾರತಿ ನೆರವೇರಿಸಿದರು. ನನಗಂತೂ ಒಂದೊಂದು ಅಭಿಷೇಕದಲ್ಲೂ.. ಒಂದೊಂದು ತೆರನಾಗಿ ತಾಯಿಯ ಅಲೌಕಿಕ ದರ್ಶನವಾಯ್ತು...!! ಬಹುಷಃ ಎಲ್ಲರಿಗೂ ಹಾಗೆಯೇ ಆಗಿರಬೇಕು...!! ಪ್ರತಿದಿನವೂ ಬನಶಂಕರಿ ಸ್ತೋತ್ರವನ್ನು ಪಾರಾಯಣ ಮಾಡುತ್ತಿದ್ದ ನನಗೆ, ಅಲ್ಲಿ ಮನದಲ್ಲೇ ಸೋತ್ರ ಪಠಿಸೋಣ ಅಂದ್ರೆ ಒಂದಕ್ಷರವೂ ನೆನಪಿಗೆ ಬರುತ್ತಿಲ್ಲ..!! ದೇವಿಯ ಅ ದಿವ್ಯ, ಭವ್ಯ ದರ್ಶನದೆದುರು ಪಠನೆ ಏನೇನೂ ಅಲ್ಲ, ಸದ್ಯಕ್ಕೆ ಎದುರಿಗಿರುವ ಅಲೌಕಿಕ ದಿವ್ಯ ತೇಜಸ್ಸನ್ನು ಕಣ್ತುಂಬಿಕೋ ಅಂತ ಬುದ್ಧಿ ಮನಸ್ಸಿಗೆ ಹೇಳಿರಬೇಕು.. ಹಾಗಾಗಿ ಯಾವುದೂ ನೆನಪಿಗೆ ಬರಲೊಲ್ಲದು... ಮನಸ್ಸಿನ ಹಾಗೂ ಕಣ್ಣಿನ ತುಂಬೆಲ್ಲ ಆ ದೇವಿಯೇ ತುಂಬಿಕೊಂಡು ಬಿಟ್ಟಳು.
ನಮ್ಮ ಭಾರತ ದೇಶದಲ್ಲಿರುವ ಶಕ್ತಿ ದೇವತೆಯ ಪ್ರಮುಖ ಪೀಠಗಳಲ್ಲಿ ಬನಶಂಕರಿ ಕ್ಷೇತ್ರವೂ ಒಂದು. ಬನಶಂಕರಿ ದೇವಿ ಚಾಲುಕ್ಯರ ಕುಲದೇವತೆ. ಬನಶಂಕರಿ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದು ಎನ್ನುತ್ತಾರೆ, . ಹಳೆಯ ಬನಶಂಕರಿ ದೇವಾಲಯದ ಗರ್ಭ ಗೃಹವು ಮಣ್ಣಿನಲ್ಲಿ ಹೂತು ಹೋಗಿದೆಯಂತೆ . ಈ ಪೀಠದಲ್ಲಿ ಪರಶುರಾಮ ಅನಗಳ ಎಂಬುವವರ ಹೆಸರು ಸಹ ಇದೆಯಂತೆ. ಸಾವಿರಾರು ವರ್ಷಗಳ ಇತಿಹಾಸವಿರುವ ಬನಶಂಕರಿ ಇಲ್ಲಿ ಅವತರಿಸಿರುವುದರ ಹಿಂದೆ ಒಂದು ರೋಚಕ ಕಥೆಯಿದೆ. ಅದೇನೆಂದರೆ.....
ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಲ್ಲಿ ಉಲ್ಲೇಖಿಸಿದಂತೆ, ದುರ್ಗಾಮಾಸುರ ಎಂಬ ರಾಕ್ಷಸ ಇಲ್ಲಿನ ಜನರನ್ನು ನಿರಂತರವಾಗಿ ಕಿರುಕುಳ ಮಾಡುತ್ತಿದ್ದನಂತೆ, ಆ ದುರ್ಗಾಮಾಸುರನಿಂದ ರಕ್ಷಿಸಲು ದೇವತೆಗಳು ಯಜ್ಞದ ಮೂಲಕ ಶಿವನಿಗೆ ಮನವಿ ಸಲ್ಲಿಸಿ ಬೇಡಿಕೊಂಡರಂತೆ, ದೇವತೆಗಳ ಪ್ರಾರ್ಥನೆಗೆ ಉತ್ತರಿಸಿದ ಭಗವಂತ, ಜನರಿಗೆ ಸಹಾಯ ಮಾಡಲು ಶಿವನು ತನ್ನ ಪತ್ನಿಯಾದ ಪಾರ್ವತಿ ದೇವಿಯ ಇನ್ನೊಂದು ರೂಪವಾದ ಶಾಕಂಬರಿ ದೇವತೆಯನ್ನು ವಿನಂತಿಸಿದ ನಂತರ, ಯಜ್ಞದ ಅಗ್ನಿಯ ಮೂಲಕ ದೇವಿ ಪಾರ್ವತಿಯು ಶಾಕಂಬರಿ ರೂಪದಲ್ಲಿ ಕಾಣಿಸಿಕೊಂಡಳoತೆ. ನಂತರ ಭೀಕರ ಯುದ್ಧಾನಂತರ ದೇವಿಯು ರಾಕ್ಷಸನನ್ನು ಕೊಂದು ಆ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಿದಳು. ಅಂದಿನಿಂದ ಇಲ್ಲಿ ಬನಶಂಕರಿ ದೇವಿಯು ನೆಲೆ ನಿಂತಳು. ದೇವಾಲಯದ ಸುತ್ತಲಿನ ಕಾಡುಗಳಲ್ಲಿ ತೆಂಗಿನಕಾಯಿ, ಬಾಳೆ ಮತ್ತು ವೀಳ್ಯದ ಎಲೆ ಗಿಡ ಮರಗಳಷ್ಟೇ ಇತ್ತಂತೆ. ತೀವ್ರ ಬರಗಾಲದ ಸಮಯದಲ್ಲಿ, ದೇವಿಯು ಜನರು ಜೀವಿಸಲು ತರಕಾರಿಗಳು ಮತ್ತು ಆಹಾರಧಾನ್ಯಗಳನ್ನು ಒದಗಿಸಿದಳಾದ ಕಾರಣ, ದೇವಿಗೆ ಶಾಕಂಬರಿ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ.
ಮುಂದುವರೆಯುವುದು.......
#ಭಾಗ _9
ಶಿವನ ಪತ್ನಿ ಪಾರ್ವತಿಯ ಮತ್ತೊಂದು ರೂಪವಾದ ಬನಶಂಕರಿ ಅಥವಾ ಶಾಕಂಬರಿ ದೇವಿಗೆ ಸಾಂಗೋಪಾoಗವಾಗಿ ಪಂಚಾಮೃತ ಹಾಗೂ ರುದ್ರಾಭಿಷೇಕದ ನಂತರ, ಅರ್ಚಕರು ಅಲಂಕಾರ ಶುರುಮಾಡಿದರು. ಮೊದಲೇ ಭಕ್ತರು ತಂದಿದ್ದ ಸೀರೆಗಳನ್ನು ತೆಗೆದುಕೊಂಡು, ದೇವಿಗೆ ಉಡಿಸಲು ನೆರಿಗೆ ತೆಗೆದು ರೆಡಿ ಮಾಡಿಟ್ಟುಕೊಂಡಿದ್ದರು. ಮದ್ಯೆ ಸಂಗೀತ ಸೇವೆ ದೇವಿಗೆ ನಡೆಯಲಿ... ಯಾರಾದರೂ ಹಾಡಿ ಎಂದರು, ಅರ್ಚಕರ ಪರಿಚಯದ(ಬಹುಶಃ ಮನೆಯವರೇ ಇರಬೇಕೇನೋ) ನಾಲ್ಕೈದು ಮಂದಿ ಹೆಂಗಸರು ಸುಶ್ರಾವ್ಯವಾಗಿ ಹಾಡಲು ಶುರುಮಾಡಿದರು. ಗೊತ್ತಿರುವ ಹಾಡುಗಳೇ ಆದ್ದರಿಂದ ನಾನೂ ಜೊತೆಗೆ ಅಕ್ಕ ದನಿಗೂಡಿಸಿದೆವು. ಅರ್ಚಕರ ಒಂದು ತಂಡ ದೇವಿಗೆ ಸೀರೆ ಉಡಿಸಲು ತೊಡಗಿದರೆ... ಇನ್ನೊಂದು ತಂಡ, ದೇವಿಯ ಮುಖ ಕಮಲಕ್ಕೆ ಅಲಂಕಾರ ಮಾಡತೊಡಗಿದರು. ಭಕ್ತರು ತಂದ ಸೀರೆಗಳು ಸುಮಾರು 25ರ ಮೇಲಿತ್ತು, ಪ್ರತಿಯೊಂದು ಸೀರೆಯನ್ನು ಅದೆಷ್ಟು ಅಚ್ಚುಕಟ್ಟಾಗಿ ಉಡಿಸಿದರೆಂದರೆ..... ಕೊನೆಗೆ ನೋಡಿದರೆ ದೇವಿ ಉಟ್ಟಿರುವುದು ಒಂದೇ ಸೀರೆಯೇನೋ ಅನ್ನುವಂತಿತ್ತು..!! ಪ್ರಭಾವಳಿಯಿಂದ ಮೊದಲ್ಗೊಂಡು... ಒಂದರ ಮೇಲೊಂದರಂತೆ ಸೀರೆ ಉಡಿಸುತ್ತಿದ್ದರೆ... ನೋಡಲೆರಡು ಕಣ್ಣು ಸಾಲದು ಅನ್ನಿಸುತ್ತೆ..!! ಯಾವ ಬ್ಯುಟಿಶಿಯನ್ ಗೂ ಕಡಿಮೆಯಿಲ್ಲದಂತೆ ಅಷ್ಟೂ ಸೀರೆಗಳಿಂದ ಬನಶಂಕರಿ ಮಾತೆಗೆ ಅಲಂಕರಿಸಿತು ಆ ಅರ್ಚಕರ ತಂಡ..!!
ಸೀರೆಯುಡಿಸುವ ಅರ್ಚಕರ ಅದ್ಭುತ ಕೈಚಳಕ ಒಂದು ಕಡೆಯಾದರೆ.... ಹೂವಿನಿಂದ ಅಲಂಕರಿಸುವ ವೈಖರಿ ಮತ್ತಷ್ಟು ಚಂದ, ಭಕ್ತರು ತಂದಿದ್ದ ಹಾರಗಳ ಜೊತೆಗೆ, ಮತ್ತಷ್ಟು ವಿವಿಧ ಹೂಗಳ ದೊಡ್ಡದೊಡ್ಡ ಹಾರಗಳು ದೇವಿಯನ್ನು ಅಲಂಕರಿಸಿದವು..! ಎಲ್ಲೋ... ಯಾರೋ... ಬೆಳೆದಿದ್ದ ಹೂಗಳು ದೇವಿಯ ಮುಡಿಯೇರಿ ಸಾರ್ಥಕತೆ ಪಡೆದವು. ಒಂದಾದ ಮೇಲೊಂದರಂತೆ ಬಣ್ಣ ಬಣ್ಣದ ಹೂಗಳನ್ನು, ಎಷ್ಟೆಷ್ಟು ಪ್ರಮಾಣದಲ್ಲಿ ಹೇಗೆ ಅಲಂಕರಿಸಬೇಕು ಅನ್ನುವ ಕುಶಲತೆ ಆ ಅರ್ಚಕರಿಗೆ ಬನಶಂಕರಿಯೇ ನೀಡಿರಬೇಕು..!! ನಾನಂತೂ ಮೈಮರೆತು ನಿಂತುಬಿಟ್ಟೆ..! ಒಂದೆಡೆ ಲಯಬದ್ದ ಸುಶ್ರಾವ್ಯವಾದ ಹಾಡುಗಾರಿಕೆ, ಮತ್ತೊಂದೆಡೆ ... ದೇವಿ ಪತ್ಯಕ್ಷಳಾಗಿಬಿಟ್ಟಳೇನೋ ಅನ್ನುವಂತೆ ಕಂಗೊಳಿಸುವ ದಿವ್ಯ ಮೂರ್ತಿ..!! ನಿಜಕ್ಕೂ ಸ್ವರ್ಗವೇ ಧರೆಗಿಳಿದಿತ್ತು..!!
ಸೀರೆಯುಡಿಸಿದ್ದು ಒಂದು ಅದ್ಭುತ.! ಹೂವಿನಲಂಕಾರ ಮತ್ತೊಂದು ಅದ್ಭುತವಾದರೆ ಆ ದೇವಿಯ ಮುಖಾಲಂಕಾರ ಮಾಡುವ ಅರ್ಚಕರ ಕಲಾಕಾರಿಕೆ ಮತ್ತೂ ಮತ್ತೂ ಅದ್ಭುತ..!! ಮೊದಲೇ ಅಪ್ರತಿಮ ಸೌಂದರ್ಯ ಆ ಪುತ್ಥಳಿಯ ಮುಖಾರವಿಂದ..!! ಚಂದನ ಮಿಶ್ರಿತ ಹರಿಷಿನವನ್ನು ಸಂಪೂರ್ಣ ಹಣೆಗೆ ಲೇಪಿಸಿ, ಅದರ ಮೇಲೆ ಕುಂಕುಮದ ಚಿತ್ತಾರವನ್ನು ಅಚ್ಚುಕಟ್ಟಾಗಿ ಬಿಡಿಸಿದರು. ಕಣ್ಣುಗಳಿಗೆ ಕಾಡಿಗೆ ಹಚ್ಚಿ, ಹುಬ್ಬುಗಳಿಗೂ ಒಪ್ಪವಾಗಿ ಕಾಡಿಗೆ ತೀಡಿದರು. ಭ್ರೂಮಧ್ಯದಲ್ಲಿ ಕಸ್ತೂರಿ ತಿಲಕವಿಟ್ಟು, ಅದರ ಮೇಲೆ ಆಭರಣ ತಿಲಕವನ್ನಿಟ್ಟರು. ಕೆನ್ನೆಗೆ ಹರಿಷಿನ ಹಚ್ಚಿ, ಸುಗಂಧ ದ್ರವ್ಯವನ್ನು ಪೂಸಿ, ಅಲಂಕರಿಸಿದ ಆ ವೈಭವವನ್ನು ನೋಡಲು ಕಣ್ಣುಗಳು ಸಾಲವು..!! ಸುಮಾರು 30 ಮಂದಿ ನಿಲ್ಲಬಹುದಾದ ಆ ಗರ್ಭಗುಡಿಯಲ್ಲಿ , ಅಭಿಷೇಕದ ಸೇವಾಕರ್ತರೆಲ್ಲರೂ ಸ್ವಲ್ಪವೂ ಅಲುಗಾಡದೆ ನಿಂತು , ದೇವಿಗೆ ಅಲಂಕರಿಸುವ ಆ ಪರಿಯನ್ನು ಮಂತ್ರಮುಗ್ಧರಾಗಿ ನೋಡುತ್ತಿದ್ದೆವು.
ಅಲೌಕಿಕ ವಾತಾವರಣ ಸೃಷ್ಠಿಯಾಗಿತ್ತು ಅಲ್ಲಿ, ಪುಟ್ಟ ಮುದ್ದು ಮಗುವಿಗೆ ಅಲಂಕರಿಸುವಂತೆ ಅಷ್ಟೇ ಶ್ರದ್ಧೆಯಿಂದ ಅಲಂಕರಿಸುತ್ತಿದ್ದ ಆ ಅರ್ಚಕರನ್ನು ನೋಡಿಯೇ ಗೌರವ ಮೂಡುತ್ತಿತ್ತು..!! ಇನ್ನು ಆ ದೇವಿಯಾದರೋ ... ಅವರ ಭಕ್ತಿಪೂರ್ವಕ ಸೇವೆಗೆ ತನ್ನನ್ನೇ ಒಪ್ಪಿಸಿಕೊಂಡು ಸುಮ್ಮನೆ ಕುಳಿತುಬಿಟ್ಟಂತನಿಸುತ್ತಿತ್ತು..!! ಪ್ರತೀದಿನ ನಡೆಯುವ ಈ ಅಲಂಕಾರ ಸೇವೆಗೆ ಕಾಯ್ದು ಕುಳಿತಂತಿತ್ತು . ಒಂದೊಂದು ಅಲಂಕಾರಕ್ಕೂ ಅರಳುತ್ತಿದ್ದ ದೇವಿಯ ಆ ದಿವ್ಯ ಮುಖಕಮಲವನ್ನು ನೋಡುತ್ತಾ ನೋಡುತ್ತಾ ನನಗoತೂ ಹಾಡುತ್ತಿದ್ದ ಹಾಡು ಮರೆತೇ ಹೋಗಿ... ಹಾಡುವುದನ್ನೇ ನಿಲ್ಲಿಸಿಬಿಟ್ಟೆ.
ಬೀಗ ಹಾಕಿಟ್ಟಿದ್ದ ದೇವಿಯ ಆಭರಣಗಳ ಪೆಟ್ಟಿಗೆ ತೆಗೆದು, ಮೊದಲಿಗೆ ಕರ್ಣಾಭರಣ, ಕೊರಳಿಗೆ ವಿಧವಿಧದ ಹೊನ್ನಿನ ಏಳೆಂಟು ಹಾರಗಳು, ಪವಿತ್ರವಾದ ಮಾಂಗಲ್ಯ ಸರ ಧರಿಸಿದರು, ಮೂಗುತಿ ವಜ್ರದ್ದಿರಬಹುದೇನೋ ..ತುಂಬಾನೇ ಹೊಳೆಯುತ್ತಿತ್ತು, ಅದನ್ನೂ ಒಪ್ಪವಾಗಿ ದೇವಿಗಿಟ್ಟರು, ಕಳೆಗಟ್ಟಿದ ಆ ಮೊಗದಿಂದ ಇನ್ನೇನು ನಗು ಮೂಡಿಯೇಬಿಟ್ಟಿತು ಅನ್ನುವಂತಿತ್ತು..!! ತಲೆಗೆ ಕಿರೀಟ, ಬಾಹುಗಳಿಗೆ.. ಆಯುಧಗಳನ್ನೂ ಕೆತ್ತಲ್ಪಟ್ಟ ಬೆಳ್ಳಿಯ ಹೊದಿಕೆ, ದೇವಿಯ ವಾಹನವಾದ ಸಿಂಹಕ್ಕೂ ಬೆಳ್ಳಿಯ ಮುಖವಾಡ ಈ ಎಲ್ಲ ಬಗೆಯ ಆಭರಣಗಳನ್ನು ತೊಡಿಸಿ, ಎಲ್ಲ ರೀತಿಯ ಅಲಂಕಾರವನ್ನೂ ಮುಗಿಸಿ ಕೊನೆಗೆ ಹರಳುಗಳಿಂದ ಜೋಡಿಸಲ್ಪಟ್ಟ ಚಿನ್ನದ ಕಣ್ಣುಗಳನ್ನು ದೇವಿಯ ನೇತ್ರಗಳಿಗೆ ಅಲಂಕರಿಸಿದ್ದೇ ತಡ... ಒಂದು ರೀತಿಯ ಅಲೌಕಿಕ ತೇಜಸ್ಸು ಇಡೀ ಗರ್ಭಗುಡಿಯನ್ನೇ ಆವರಿಸಿಬಿಟ್ಟಿತು..!! ಆ ಕ್ಷಣಕ್ಕೆ ಸಾಕ್ಷಿಯಾದ ನಾವುಗಳೇ ಧನ್ಯರು ಅನ್ನುವ ಧನ್ಯತಾಭಾವ ಮೂಡಿ ಕಣ್ಣು ಹನಿಗೂಡಿತು..!
ಮುಂದುವರೆಯುವುದು.....
#ಭಾಗ_10
ಬನಶಂಕರಿ ದೇವಿಯ ಅಭೂತಪೂರ್ವ ಅಲಂಕಾರವನ್ನು, ದೇವಿಯ ಅಪ್ರತಿಮ ಅಲೌಕಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ... ಸುಮಧುರವಾಗಿ ಹಾಡುವವರ ಜೊತೆಗೂಡಿ ದನಿ ಸೇರಿಸುತ್ತಾ... ದೇವಿಗೆ ಅರ್ಪಿಸುವ ಷೋಡಶೋಪಚಾರಗಳ ವಿಧಿವಿಧಾನಗಳನ್ನು ಆನಂದಿಸುತ್ತಾ ನಿಂತ ನಮಗೆ ಸಮಯ ಸರಿದದ್ದು ಅರಿವಾಗಲೇ ಇಲ್ಲ . ಅದಾಗಲೇ ಬೆಳಗಿನ 8 ಗಂಟೆ ..! ಬೆಳಗಿನ ಜಾವ 5:30ಕ್ಕೆ ಸರತಿಯಲ್ಲಿ ನಿಂತು, 6 ಕ್ಕೆ ದೇವಸ್ಥಾನದ ಗರ್ಭಗುಡಿಗೆ ಬಂದು ಆಲ್ಲಿ ನಿಂತೇ ಎಲ್ಲವನ್ನೂ ಆನಂದಿಸುತ್ತಿದ್ದೆವು. ಗರ್ಭಗುಡಿಯಲ್ಲಿ ಎಲ್ಲ ವಯೋಮಾನದ ಭಕ್ತರೂ ಇದ್ದರು, ಸುಮಾರು 2 ಗಂಟೆ ಚಲಿಸದೆ ... ಅಲುಗಾಡಲೂ ಸ್ಥಳವಿಲ್ಲದ ಜಾಗದಲ್ಲಿ ನಿಲ್ಲುವುದು ಸಾಮಾನ್ಯದ ಮಾತಲ್ಲ.... ಆದರೆ , ದೇವಿಯ ಮುಂದೆ ತನ್ಮಯರಾಗಿ ನಿಂತಿದ್ದ ನಮಗೆ ಯಾವ ನೋವೂ ... ಆಯಾಸವೂ ಕಾಣಲಿಲ್ಲ..! ಇದು ದೇವಿಯ ಕೃಪೆಯಲ್ಲದೆ ಮತ್ತೇನು..?
ದೇವಿಗೆ ನೈವೇದ್ಯದ ಸಮಯವಾದ್ದರಿಂದ ಗರ್ಭಗುಡಿಯಲ್ಲಿದ್ದ ನಮ್ಮನ್ನೆಲ್ಲ, ಹೊರಗೆ ಕಳುಹಿಸಿದರಾದರೂ ಐದೇ ನಿಮಿಷಕ್ಕೆ ... ಮಂಗಳಾರತಿಗೆ ಮತ್ತೆ ಗರ್ಭಗುಡಿಯ ಒಳ ಹೊಕ್ಕೆವು. ಮೊದಲಿಗೆ ಏಕಾರತಿ, ಕರ್ಪೂರದ ಆರತಿ, ಪಂಚಾರತಿ ಮೊದಲ್ಗೊಂಡು... ಎಲ್ಲ ಬಗೆಯ ಆರತಿ ನಡೆಯಿತು. ಆರತಿ ದೇವಿಯ ಮುಖದ ಬಳಿ ಬಂದಾಗ ..... ಒಂದು ಮಂದಹಾಸ ದೇವಿಯ ಮುಖದಲ್ಲಿ ಮೂಡುತ್ತಲ್ಲ... ಅಬ್ಬಾ...!!!! ಅದನ್ನು ಪದಗಳಲ್ಲಿ ವರ್ಣಿಸಲಾಗದು..!! ಒಂದೊಂದು ಬಾರಿಗೂ ಒಂದೊಂದು ಬಗೆಯ ರೂಪ ಕಾಣಿಸಿತು. !! ಒಮ್ಮೆ ಗಾಂಭೀರ್ಯ.! ಒಮ್ಮೆ ತೇಜಸ್ಸು..! ಒಮ್ಮೆ ಮಂದಹಾಸ..! ಒಮ್ಮೆ ಪೂರ್ಣ ನಗುಮುಖ..! ಮಗದೊಮ್ಮೆ ಮಗುವಿನಂಥ ತುಂಟನಗು...!!! ನನಗೆ ಮೈ ಜುಮ್ಮೆನ್ನುತ್ತಿತ್ತು..!! ತಾಯಿಯ ಆವಿರ್ಭಾವ ಆ ಸಮಯದಲ್ಲಿ ಪೂರ್ಣವಾಗಿದ್ದಿರಬಹುದು ...!! ಸುತ್ತಮುತ್ತೆಲ್ಲ ಒಂದು ರೀತಿಯ ತೇಜಸ್ಸು ಆವರಿಸಿತ್ತು..!! ಎಲ್ಕರಿಗೂ ಯಾವ ಅನುಭವವಾಯ್ತೋ ಗೊತ್ತಿಲ್ಲ ನನಗಂತೂ ಯಾವುದೋ ಲೋಕದಲ್ಲಿದ್ದಂತನಿಸುತ್ತಿತ್ತು..! ಪ್ರಜ್ಞೆಯೇ ಇಲ್ಲದಂತೆ ನಿಂತಿದ್ದೆ..! ಮಂಗಳಾರತಿ ಮುಖದ ಬಳಿಗೆ ಬಂದಾಗಲೇ... ಆ ಬಿಸಿಗೆ ಎಚ್ಚೆತ್ತೆ..!!
ದೇವಿಗೆ ಛತ್ರಚಾಮರ ಸೇವೆ, ಪುರಾಣ ಶ್ರವಣ, ಪಂಚಾಂಗ ಶ್ರವಣ, ವೇದೋಕ್ತ ಮಂತ್ರಪಠಣ, ಸಂಗೀತ ಸೇವೆ, ಪುನಃಪೂಜೆ ಎಲ್ಲವೂ ಸಾಂಗೋಪಾಂಗವಾಗಿ ತುಂಬಾ ಶ್ರದ್ಧೆಯಿಂದ, ಭಕ್ತಿಯಿಂದ, ನಿಷ್ಠೆಯಿಂದ ನೆರವೇರಿಸಿದರು ಅರ್ಚಕರು..! ಈ ಅರ್ಚಕ ವೃಂದಕ್ಕೆ ಅದೆಷ್ಟು ಪುಣ್ಯವೋ ಅನ್ನಿಸಿತು, ಬಹುಶಃ ಅವರಿಗೆ ಪುನರ್ಜನ್ಮ ಇರುವುದಿಲ್ಲವೇನೋ..! ದೇವಿ ತನ್ನ ಪದಕಮಲದಲ್ಲೇ ಆಶ್ರಯ ಕೊಡಬಹುದು..! ಮಂಗಳಾರತಿ ತೆಗೆದುಕೊಂಡು, ನಿಂತಲ್ಲೇ ನಮಸ್ಕರಿಸಿ ಹೊರಬಂದು ತೀರ್ಥ ಪ್ರಸಾದ ಸ್ವೀಕರಿಸಿ, ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಹೊರಬರುವಷ್ಟರಲ್ಲಿ... ರಮೇಶ್ ಹಾಗೂ ಭಾವ ದೇವಿಯ ದರ್ಶನಕ್ಕೆ ಸರತಿಸಾಲಿನಲ್ಲಿ ನಿಂತಿದ್ದರು. ನೀವುಗಳು ರೂಮ್ಗೆ ಹೋಗಿ ರೆಸ್ಟ್ ಮಾಡಿ ನಾವು ದರ್ಶನ ಮುಗಿಸಿ ಬರ್ತೀವಿ ಅಂತೇಳಿ ದೇವಸ್ಥಾನದ ಒಳಹೊಕ್ಕರು, ನಾನು ಅಕ್ಕ ರೂಮ್ಗೆ ಬಂದು, ನಮ್ಮ ಲಗೇಜ್ ಪ್ಯಾಕ್ ಮಾಡಿಟ್ಟು ಕೂರುವಷ್ಟರಲ್ಲಿ ಗಂಟೆ 9 ಆಗಿತ್ತು. ದರ್ಶನ ಮುಗಿಸಿ ಭಾವ ರಮೇಶ್ ಕೂಡ ಬಂದರು.
ದೇವಿಯ ಅಭೂತಪೂರ್ವ ದರ್ಶನದಿಂದ ಮನಸ್ಸು ತುಂಬಿತ್ತಾದರೂ ಹೊಟ್ಟೆ ಹಸಿಯುತ್ತಿತ್ತು. ನಾಲ್ಕೂ ಜನ ಹೋಟೆಲ್ ಅರಸಿ ಹೊರಟೆವು, ಹೋಟೆಲ್ ಚಾಲುಕ್ಯ ನಿನ್ನೆಯ ತರಹವೇ ತುಂಬಿ ತುಳುಕುತ್ತಿತ್ತು, ಹೆಜ್ಜೆಯಿರಿಸಲೂ ಸ್ಥಳವಿರಲಿಲ್ಲ. ಮತ್ತೊಂದು ಹೋಟೆಲ್ ಸ್ಥಿತಿ ಕೂಡ ಅದೇ ಆಗಿತ್ತಾದರೂ... ಇನ್ನೊಂದು ಹೋಟೆಲ್ ಹುಡುಕಿಕೊಂಡು ಹೋಗುವ ತಾಳ್ಮೆ ಇರಲಿಲ್ಲವಾದ್ದರಿಂದ ಒಂದರ್ಧಗಂಟೆ ಕಾಯ್ದು ತಿಂಡಿ ತಿಂದೇ ಹೊರಬಂದೆವು. ಮುಂದಿನ ಪ್ಲೇಸ್ ಕಡೆಗೆ ಹೊರಡಲು ದಾರಿಯಲ್ಲಿ ಸಿಕ್ಕ ಆಟೋದವರ ಜೊತೆ ಮಾತನಾಡಿ .. ರೂಮ್ಗೆ ಬಂದು ಲಗೇಜ್ ತೆಗೆದುಕೊಂಡು ಹೊರಟೆವು.
ಮುಂದುವರೆಯುವುದು.....
#ಭಾಗ_11
ಬಾದಾಮಿ ಬನಶಂಕರಿಯ ಮಹೋನ್ನತ ದರ್ಶನವನ್ನು ಪಡೆದು, ಹೋಟೆಲ್ನಲ್ಲಿ ತಿಂಡಿತಿಂದು, ನಾವಿಳಿದುಕೊಂಡಿದ್ದ ರೂಮ್ ಚೆಕ್ ಔಟ್ ಮಾಡಿ, ಆಟೋ ಹಿಡಿದು, ಐಹೊಳೆ ಪಟ್ಟದಕಲ್ಲಿನತ್ತ ಹೊರಟೆವು. ನಮ್ಮ ಆಟೋ ದೇವಸ್ಥಾನದ ಮುಂದೆಯೇ ಸಾಗಿತು, ಇಳಿದು ಮತ್ತೊಮ್ಮೆ ಮುಖ್ಯದ್ವಾರದಿಂದಲೇ ದೇವಿಗೆ ನಮಸ್ಕರಿಸಿ ನಮ್ಮ ಪ್ರಯಾಣ ಮುಂದುವರೆಸಿದೆವು. ಬಾದಾಮಿಯಿಂದ ಸುಮಾರು 30 -40 ಕಿಲೋಮೀಟರ್ ದೂರದಲ್ಲಿ ಐತಿಹಾಸಿಕ ಸ್ಥಳಗಳಾದ ಐಹೊಳೆ ಪಟ್ಟದಕಲ್ಲು ಭಗ್ನ ವೈಭವಕ್ಕೆ ಸಾಕ್ಷಿಯಾಗಿ ನೆಲೆನಿಂತಿದೆ. ಬನಶಂಕರಿಯಿಂದ ಹೊರಟ ನಮಗೆ ಕಚ್ಚಾರೋಡಿನ ಸ್ವಾಗತ ಸಿಕ್ಕಿತು. ರಸ್ತೆ ವಿಶಾಲವಾಗಿದ್ದರೂ ಡಾಂಬರೀಕರಣ ಅರ್ಧಂಬರ್ಧವಾಗಿ, ರಸ್ತೆಗೆ ಹಾಕಿರುವ ಕಲ್ಲುಗಳೆಲ್ಲ ಕಿತ್ತು ಓಡಾಡಲು ಕಷ್ಟವೆನಿಸುತ್ತಿತ್ತು. ಇನ್ನು ಆಟೋದಲ್ಲಂತೂ ಪ್ರಯಾಣ ಪ್ರಯಾಸವೇ ಸರಿ. ಆದರೂ ರಸ್ತೆಯ ಇಕ್ಕೆಲದಲ್ಲಿ ಹಸಿರಾದ ಹೊಲಗಳು ಕಂಗೊಳಿಸುತ್ತಿದ್ದವು, ಎತ್ತ ನೋಡಿದರೂ ಕಬ್ಬು, ಕಡಲೆ, ಕಡಲೆಕಾಯಿ, ಜೋಳ, ಹತ್ತಿ, ಗೋಧಿಯ ಹೊಲಗಳು ಕಣ್ಣಿಗೆ ತಂಪನ್ನು ಉಂಟುಮಾಡುತ್ತಿದ್ದವು. ಹತ್ತಿರದಲ್ಲೇ ಹರಿಯುವ ನದಿಯಾದ ಮಲಪ್ರಭಾ ಸುತ್ತಮತ್ತೆಲ್ಲ ಹಸಿರನ್ನು ಹರಡಿದ್ದಳು.
ಸುತ್ತಲಿನ ಹಸಿರನ್ನು ಕಣ್ತುಂಬಿಕೊಳ್ಳುತ್ತಾ ಸುಮಾರು 30 ಕಿಲೋಮೀಟರ್ ಸಾಗಿದ ಮೇಲೆ ಸಿಕ್ಕಿದ್ದು ಪಟ್ಟದಕಲ್ಲು, ಆಟೋ ಡ್ರೈವರ್ ಮೊದಲು ... ಐಹೊಳೆ ನೋಡಿ ಬರೋಣ ಅಂತ ಮುಂದೆ ಸಾಗಿದ, ಸುಮಾರು 8 - 10 ಕಿಲೋಮೀಟರ್ ನಂತರ ಐಹೊಳೆ ಸಿಕ್ಕಿತು, ದೇವಾಲಯದ ಸಂಕೀರ್ಣ ತಲುಪುವ ಮೊದಲೇ... ಅಂದ್ರೆ , ಐಹೊಳೆ ಊರು ಶುರುವಾದಾಗಿನಿಂದಲೇ ಅನೇಕ ದೇವಾಲಯಗಳೋ... ಸ್ಮಾರಕಗಳೋ... ಏನೋ ಸಿಗುತ್ತಾವಾದರೂ.... ಅವೆಲ್ಲಾ ಮನೆಗಳ ಮಧ್ಯದಲ್ಲಿರುವುದರಿಂದಲೋ, ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗಿಯೋ... ದನಕರುಗಳನ್ನು ಕಟ್ಟುವ ತಾಣವಾಗಿದೆ, ಆ...ಬೃಹತ್ ಕಲ್ಲಿನ ಜಗುಲಿಗಳು ಧಾನ್ಯಗಳನ್ನು, ಬಟ್ಟೆಗಳನ್ನು ಒಣಗಿಸುವ ಸ್ಥಳಗಳಾಗಿ ಮಾರ್ಪಟ್ಟಿದೆ, ಚಾಲುಕ್ಯ ರಾಜರ ಶ್ರಮ ಹೀಗೆ ವ್ಯರ್ಥವಾಯ್ತಲ್ಲ ಅಂತ ತುಂಬಾ ನೋವಾಯ್ತು. ಒಂದೆರಡನ್ನ ನೋಡಿ ಹೀಗಂತೀರಲ್ರೀ ಅಕ್ಕಾರ.... ಇಂಥಾವ್ ನೂರಾರ್ ಅದಾವ... ಸುಮ್ಮ ಬರ್ರೀ ಅಂದ ನಮ್ಮ ಆಟೋ ಡ್ರೈವರ್.
ಐಹೊಳೆ ಊರಿನ ಮಧ್ಯಭಾಗದಲ್ಲಿ ವಾಸ್ತುಶಿಲ್ಪದ ಆಗರವಾಗಿರುವ ಐತಿಹಾಸಿಕ ದೇವಾಲಯ ಗುಚ್ಛವಿದೆ. ಅಲ್ಲಿಗೆ ಟಿಕೆಟ್ ಪಡೆದು ಒಳಹೋಗಬೇಕು, ಸುತ್ತಲೂ ವಿಶಾಲವಾಗಿ ಪಾರ್ಕ್ ಮಾಡಿದ್ದಾರೆ, ಆ ಪರಿಸರ ಕ್ಲೀನಾಗಿದೆ, ಅಲ್ಲಿನ ಶಿಲ್ಪಕಲೆಯ ಗತವೈಭವ ವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ದೇಶವಿದೇಶಗಳಿಂದ ಬರ್ತಾರೆ ಅಂದ್ರೆ ಅಲ್ಲಿನ ಐತಿಹಾಸಿಕ ಮಹತ್ವದ ಎಷ್ಟೆoದು ಅರಿವಾಗುತ್ತೆ. ಮರಳುಗಲ್ಲಲ್ಲಿ ಕೆತ್ತಲಾದ ಶಿಲ್ಪಕಲೆಯ ವೈಭವನ್ನು ಆನಂದಿಸಲು ನಾವುಗಳು ಎಂಟ್ರಿ ಟಿಕೆಟ್ ಪಡೆದು ಒಳಹೊಕ್ಕೆವು. ಆಳೆತ್ತರದ ಜಗುಲಿಗಳ ಮೇಲೆ ಕೆತ್ತಲಾದ ಬೃಹತ್ ದೇಗುಲಗಳ ಆ ಅಂದವನ್ನು ನೋಡಿಯೇ ಅನುಭವಿಸಬೇಕು. ಆದರೆ ಅಲ್ಲಿರುವ ಭಗ್ನಗೊಂಡ ಮುಕ್ಕಾದ ವಿಗ್ರಹಗಳನ್ನು ನೋಡಿದರೆ ಯಾರಿಗೇ ಆಗಲಿ ಕಣ್ಣು ಹನಿಗೂಡುತ್ತದೆ. ಆ ಅಂದವನ್ನು ವಿರೂಪಗೊಳಿಸಿ ದೇಗುಲದೊಳಗಿನ ವಿಗ್ರಹಗಳನ್ನು ಭಗ್ನಗೊಳಿಸಿ ವಿಕೃತ ಮನಸ್ಥಿತಿಯನ್ನು ಮೆರೆದ ಪಾಪಿಗಳನ್ನು ನೆನೆದು ಯಾರದೇ ಮನಸ್ಸು ಕ್ರೋದಗೊಳ್ಳದೆ ಇರಲ್ಲ.
ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ದಡದಲ್ಲಿರುವ ಐಹೊಳೆ (ಪ್ರಾಚೀನ ಹೆಸರು ಆರ್ಯಪುರ), ಚಾಲುಕ್ಯರ ವಾಸ್ತುಶಿಲ್ಪದ ತವರೂರು ಮತ್ತು ಭಾರತೀಯ ದೇವಸ್ಥಾನ ವಾಸ್ತುಶಿಲ್ಪದ ತೊಟ್ಟಿಲು ಎಂದು ಪ್ರಸಿದ್ಧವಾಗಿದೆ. ಐಹೊಳೆಯು ಬಾದಾಮಿ ಚಾಲುಕ್ಯರ (6-8 ನೇ ಶತಮಾನ) ಮೊದಲ ರಾಜಧಾನಿಯಾಗಿತ್ತು, ನಂತರ ಇದು ಶೈಕ್ಷಣಿಕ ಮತ್ತು ಕಲಾತ್ಮಕ ಕೇಂದ್ರವಾಗಿತ್ತು. ಐಹೊಳೆಯು ಇತಿಹಾಸ, ಪುರಾತತ್ವ, ವಾಸ್ತುಶಿಲ್ಪ, ಪರಂಪರೆ ಮತ್ತು ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ. .ಇಲ್ಲಿ 4 ರಿಂದ 12 ನೇ ಶತಮಾನದವರೆಗಿನ 120ಕ್ಕೂ ಹೆಚ್ಚು ಹಿಂದೂ, ಜೈನ ಮತ್ತು ಬೌದ್ಧ ದೇವಾಲಯಗಳಿವೆ. ದುರ್ಗಾ ದೇವಾಲಯ, ಲಾಡ್ಖಾನ್ ದೇವಾಲಯ ಮತ್ತು ಹುಚ್ಚಿಮಲ್ಲಿಗುಡಿ ಮುಖ್ಯ ಆಕರ್ಷಣೆಗಳಾಗಿವೆ. . ಇಲ್ಲಿರುವ ದುರ್ಗಾ ದೇವಾಲಯದ ಕಾಂಪ್ಲೆಕ್ಸ್ ಆರ್ಟ್ ಗ್ಯಾಲರಿ ಮತ್ತು ಪುರಾತತ್ವ ವಸ್ತುಸಂಗ್ರಹಾಲಯವನ್ನು ಹೊಂದಿದ್ದು ಇಲ್ಲಿ ಉತ್ಖನನ ಮಾಡಲಾದ ಸೊಗಸಾದ ಪ್ರಾಚೀನ ವಸ್ತುಗಳ ಸಂಗ್ರಹವನ್ನು ವೀಕ್ಷಿಸಬಹುದು. ಇಲ್ಲಿನ ಲಾಡ್ ಖಾನ್ ದೇವಾಲಯದಲ್ಲಿ ಹಿಂದೂ ಧರ್ಮದ ಶೈವ, ವೈಷ್ಣವ ಮತ್ತು ದುರ್ಗಾ ಪ್ರತಿಮೆಗಳಿದ್ದು ಪೂಜಿಸಲ್ಪಡುತ್ತವೆ. ಇಲ್ಲಿನ ದೇವಾಲಯಗಳು ದ್ರಾವಿಡ ಮತ್ತು ನಾಗರ ಶೈಲಿಗಳ ಆರಂಭಿಕ ಪ್ರಯೋಗಗಳoತೆ ಕಂಡುಬರುತ್ತದೆ. ಐಹೊಳೆಯು ಸುಂದರವಾದ ಮರಳುಗಲ್ಲಿನ ಶಿಲ್ಪಗಳು ಮತ್ತು ಕೆತ್ತನೆಗಳಿಗೆ ಜಗತ್ಪ್ರಸಿದ್ಧವಾಗಿದೆ.
ಮುಂದುವರೆಯುವುದು......
#ಭಾಗ_12
ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿತ್ತು. ಇಲ್ಲಿನ ದೇವಾಲಯಗಳು ಹಾಗೂ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವು. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು "ಅಧಿಷ್ಠಾನ". ಅಂದರೆ ಚಾಲುಕ್ಯರ ಆಡಳಿತದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ' ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿ ಐಹೊಳೆಯಾಯಿತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಐಹೊಳೆಗೆ ಭಾರತೀಯ ಇತಿಹಾಸದಲ್ಲಿ ತುಂಬ ಮಹತ್ವದ ಸ್ಥಾನವಿದೆ. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. 6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದದ್ದನ್ನು ಕಾಣುತ್ತೇವೆ.
ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು, ಬರುಬರುತ್ತ ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಆ ಕಾಲದಲ್ಲಿ ಇಲ್ಲಿ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ .... ಪೌರಾಣಿಕವಾಗಿಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಲ್ಲಿ ತೊಳೆದಾಗ ಇಡೀ ನದಿ ನೀರೆ ಕೆಂಪಾಯ್ತತಂತೆ. ಇದನ್ನು ಕಂಡು ಊರಿನ ಮಹಿಳೆಯರು 'ಅಯ್ಯಯ್ಯೋ ಹೊಳಿ' ಎಂದು ಉದ್ಗರಿಸಿದ್ದೇ ಮುಂದೆ ಬರುಬರುತ್ತ ಐಹೊಳೆಯಾಯ್ತೆಂಬ ಪೌರಾಣಿಕ ಐತಿಹ್ಯಗಳೂ ಈ ಊರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ.
ಕ್ರಿ.ಪೂ. 6 - 7 ನೇ ಶತಮಾನದಲ್ಲಿ ಅಂದರೆ 'ಕಬ್ಬಿಣದ ಯುಗ'ದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿನ ಮರಳು ಕಲ್ಲಿನಿಂದ ಮತ್ತು ಕತ್ತರಿಸಿದ ದೊಡ್ಡ ದೊಡ್ಡ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. 6ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದಾಗಿದೆಯಂತೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.
ವಾಸ್ತುಶಿಲ್ಪ ವಿಷಯಕ್ಕೆ ಬಂದರೆ, ಇಲ್ಲಿ ಸುಮಾರು 120 ದೇವಾಲಯ ಹಾಗು 4 ಗುಹಾಲಯಗಳನ್ನು ಕಾಣಬಹುದು. ಇವನ್ನೆಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದರ ವಾಸ್ತು ಭಿನ್ನವಾಗಿವೆ. ಇವನ್ನು ಸ್ಥಳೀಯವಾಗಿ ಸಿಗುವ ಕೆಂಪು ಮರಳು ಶಿಲೆಯಲ್ಲಿ ನಿರ್ಮಿಸಿದ್ದರಿಂದ ಅನೇಕ ದೇವಾಲಯಗಳು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿವೆ. ಅಲ್ಲದೇ ಮುಸ್ಲಿಂ ದಾಳಿಯಿಂದ ಹಾಗು ಜನರಲ್ಲಿರುವ ಇತಿಹಾಸ ಪ್ರಜ್ಷೆಯ ಕೊರತೆಯಿಂದ ಮತ್ತು ನಿಧಿಯ ಆಶೆಯಿಂದಲೂ ಅನೇಕ ದೇವಾಲಯಗಳು ಹಾಳಾಗಿವೆ. ಹಾಗೂ ಇಲ್ಲಿ ಅನೇಕ ಜನರು ಈ ಕಟ್ಟಡಗಳನ್ನು ನೋಡಲು ಬಂದಾಗಲೂ ಶಿಲೆಗಳನ್ನು ಮುಟ್ಟಿ ಹಾಳಾಗಿವೆ ಎಂದು ಹೇಳುತ್ತಾರೆ, ಕಾರಣ ಶಿಲ್ಪಗಳು ಮರಳು ಗಲ್ಲಿನಿಂದ ಕೆತ್ತಿರುವುದರಿಂದ, ಗಟ್ಟಿಮುಟ್ಟಾದ ಕಲ್ಲು ಅಲ್ಲವಾದ್ದರಿಂದ, ಹೆಚ್ಚೆಚ್ಚು ಮುಟ್ಟುತ್ತಿದ್ದರೆ ಕಾಲಾಂತರದಲ್ಲಿ ಪದರುಪದರಾಗಿ ಬಿದ್ದು ಹಾಳಾಗಿರುವ ಸಾಧ್ಯತೆ ಹೆಚ್ಚು.
ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಹೆಚ್ಚು ಕಂಡು ಬರುತ್ತದೆ. ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ ೨೨ ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಾಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ. ಇಲ್ಲಿನ ದೇವಾಲಯಗಳ ವಿಚಿತ್ರ ಹೆಸರುಗಳಿಗೆ ಐತಿಹಾಸಿಕವಾಗಿ ಯಾವ ಸಮರ್ಥನೆಯೂ ಸಿಗುವುದಿಲ್ಲ. ಬಹುಶ: ಬ್ರಿಟಿಷರ ಕಾಲದಲ್ಲಿ ಸರ್ವೇ ಮಾಡಲು ಪ್ರಾರಂಭಿಸಿದಾಗ ಆಯಾ ದೇವಾಲಯಗಳಲ್ಲಿ ಆಗ ವಾಸವಾಗಿದ್ದ ವ್ಯಕ್ತಿಗಳಿಂದ ಇಂಥ ಹೆಸರುಗಳು ಬಂದಿರುವ ಸಾಧ್ಯತೆಯೇ ಹೆಚ್ಚು.
ಮುಂದುವರೆಯುವುದು.....
#ಭಾಗ_13
#ಐಹೊಳೆ
ದೇವಸ್ಥಾನಗಳು ಹಾಗೂ ವಾಸ್ತು ನಿರ್ಮಾಣದ ತೊಟ್ಟಿಲಾದ ಐಹೊಳೆಯಲ್ಲಿ ಅನೇಕ ದೇವಾಲಯವಿದ್ದು, ಅವುಗಳಲ್ಲಿ ದುರ್ಗಾ ದೇವಾಲಯ ಅತ್ಯಂತ ಪ್ರಮುಖವಾದದ್ದು. ಇದು ಮೂಲತ: ಸೂರ್ಯದೇವಾಲಯವಾಗಿದ್ದು,
ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ. 2ನೇ ವಿಕ್ರಮಾದಿತ್ಯನಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದನಂತೆ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರವಿಶೇಷತೆ. ಇದರ ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯಸಂಸತ್ ಭವನವನ್ನು ನೆನಪಿಸುತ್ತದೆ. .ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.
ಲಾಡ್ ಖಾನ್ ದೇವಾಲಯ: ಇದು 5ನೇ ಶತಮಾನದಷ್ಟು ಹಳೆಯದಾದ, ಚಪ್ಪಟೆ ಛಾವಣಿಯ ಸರಳ ವಿನ್ಯಾಸದ ದೇವಾಲಯವಾಗಿದೆ. ಈ ಹೆಸರು ದೇವಾಲಯಕ್ಕೆ ಹೇಗೆ ಬಂತು ಅನ್ನುವ ವಿವರವನ್ನು ಅಲ್ಲಿನ ಬೋರ್ಡ್ ಮೇಲೆ ಬರೆದಿದ್ದಾರಾದರೂ ನಾನು ಓದಲಾಗಲಿಲ್ಲ.
ಹುಚ್ಚಿಮಲ್ಲಿಗುಡಿ: ಮಲಪ್ರಭಾ ನದಿ ದಂಡೆಯಲ್ಲಿದ್ದು, ಶಿವ, ವಿಷ್ಣು ಮತ್ತು ಬ್ರಹ್ಮನ ಗುಡಿಗಳನ್ನು ಹೊಂದಿದೆ. ಇದು ಕ್ರಿ. ಶ 7ನೇ ಶತಮಾನದ್ದಂತೆ.
ರಾವಣ ಫಾಡಿ ಗುಹೆ: ಇದು ಆರಂಭಿಕ ಚಾಲುಕ್ಯರ ಕಲಾಕೌಶಲ್ಯವನ್ನು ತೋರುವ ಸುಂದರ ಕೆತ್ತನೆಗಳನ್ನು ಹೊಂದಿರುವ ಶಿವನ ಗುಹ ದೇವಾಲಯವಾಗಿದೆ.
ಮೇಗುಟಿ ಜೈನ ದೇವಾಲಯ: ಬೆಟ್ಟದ ಮೇಲಿರುವ ಈ ದೇವಾಲಯವು ಇಮ್ಮಡಿ ಪುಲಕೇಶಿ ಆಳ್ವಿಕೆಯ ಶಾಸನವನ್ನು (634 CE) ಹೊಂದಿದೆ.
ಕೊಂಟಿ ದೇವಾಲಯ ಸಂಕೀರ್ಣ: ಸುಂದರವಾದ ಕೆತ್ತಿದ ಛಾವಣಿಗಳನ್ನು ಹೊಂದಿರುವ ಸಣ್ಣ ದೇವಾಲಯಗಳ ಗುಂಪಾಗಿದೆ.
ನೋಡುತ್ತಾ ನಿಂತರೆ ದಿನವೇ ಸಾಲದಷ್ಟು ದೇವಾಲಯಗಳು ಅಲ್ಲಿವೆಯಾದರೂ... ಕೆಲವು ಭಗ್ನ ಅವಶೇಷಗಳು, ಕೆಲವು ನಿರ್ಲಕ್ಷ ದಿಂದ ಹಾಳಾಗಿರುವ ದೇಗುಲಗಳು...! ಇಂಥ ಭವ್ಯವಾದ ಶಿಲ್ಪಕಲೆ ಹೊಂದಿರುವ ನಾಡು ನಮ್ಮದು ಎಂದು ಹೆಮ್ಮೆಯಾದರೂ.... ಅವುಗಳ ವಿರೂಪ ನೋಡಿ ಹೊಟ್ಟೆ ಉರಿಯದೆ ಇರಲ್ಲ.... ಅದರಲ್ಲೂ ಅದೆಷ್ಟು ಗಣಪನ ಮೂರ್ತಿಗಳು ವಿರೂಪಗೊಂಡಿವೆಯೆಂದರೆ... ಹೇಳಲಸಾಧ್ಯ.. 😔 ಅದೆಷ್ಟು ಸವಿ ನೆನಪಿಗೆ ಸಾಕ್ಷಿಯಾಗಿ ಆ ದೇಗುಲಗಳನ್ನು ಕಟ್ಟಿಸಿದ್ದರೋ,... ಅದೆಷ್ಟು ವಿಜಯೋತ್ಸವದ ನೆನಪಿಗಾಗಿ ಅ ಭವ್ಯ ಶಿಲ್ಪಕಲೆ ಮೂಡಿತ್ತೋ.... ಅದೆಷ್ಟು ಜನರ ಶ್ರಮ ತ್ಯಾಗ ಅದರಲ್ಲಿತ್ತೋ..... ಆ ಸುಂದರವಾದ ಕಲೆ ಅನಾವರಣಗೊಳ್ಳಲು ಅದೆಷ್ಟು ಸಮಯ ಹಿಡಿದಿತ್ತೋ... ಇವೆಲ್ಲವನ್ನೂ ನೆನೆದಾಗ ಕಣ್ಣಿಂದ ನೀರು ತಾನೇ ಠಾಣಾಗಿ ಹರಿದಿತ್ತು. ಕುಂಬಾರನಿಗೆ ವರ್ಷ - ದೊಣ್ಣೆಗೆ ನಿಮಿಷ ಅಂದಹಾಗೆ ದುರುಳರ ಧಾಳಿಗೆ ಸಿಕ್ಕು ಭಗ್ನವಾಗಿ ನಿಂತಿವೆ..!😔 ಆದರೂ.. ಇಂದಿಗೂ, ಶತ ಶತಮಾನಗಳ ನಮ್ಮ ಭವ್ಯ ವಾಸ್ತುಶಿಲ್ಪ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿವೆ..!!
ಅದಾಗಲೇ ಮಧ್ಯಾಹ್ನ 1ರ ಆಸುಪಾಸು, ಸಣ್ಣಗೆ ಹಸಿವಾಗಿತ್ತಾರೂ ಊಟ ಮಾಡುವ ಮನಸ್ಸಾಗಲಿಲ್ಲ, ತಣ್ಣನೆ ಕಬ್ಬಿನ ಹಾಲನ್ನು ಕುಡಿದು ಆಟೋ ಹತ್ತಿ ಪಟ್ಟದಕಲ್ಲಿನೆಡೆಗೆ ಹೊರಟೆವು. ದಾರಿಯಲ್ಲಿ ಅಕ್ಕನ ಬ್ಯಾಗಿನಲ್ಲಿದ್ದ ಕುರುಕು ತಿಂಡಿಗಳನ್ನು ತಿನ್ನಲು ಮಾತ್ರ ಮರೆಯಲಿಲ್ಲ. ಐಹೊಳೆಯಿಂದ 8 -10 ಕಿ. ಮೀ ಗಳ ದೂರ ಪಟ್ಟದಕಲ್ಲಿಗೆ. ಕಚ್ಚಾರಸ್ತೆಯಲ್ಲಿ ಸುಮಾರು 35 ನಿಮಿಷಗಳ ಪ್ರಯಾಣ. ಸುಮಾರು ಮದ್ಯಾಹ್ನ 2 ಗಂಟೆಯ ಹೊತ್ತಿಗೆ ಪಟ್ಟದಕಲ್ಲು ಗೇ ಬಂದು ಎಂಟ್ರಿ ಟಿಕೆಟ್ ಪಡೆದು ಒಳ ಹೊಕ್ಕೆವು. ಪಟ್ಟದಕಲ್ಲಿನ ದೇವಾಲಯಗಳ ಸಂಕೀರ್ಣ ಐಹೊಳೆಗಿಂತ ತುಂಬಾನೇ ದೊಡ್ಡದು. ಸಣ್ಣ ಸಣ್ಣ ಗುಡಿಗಳಿಂದ ಹಿಡಿದು ಬೃಹತ್ ದೇವಾಲಯಗಳ ಬೃಹತ್ ಸಂಕೀರ್ಣ ಅದು.
ಮುಂದುವರೆಯುವುದು......
#ಭಾಗ_14
#ಪಟ್ಟದಕಲ್ಲು
ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ದಂಡೆಯಲ್ಲಿರುವ ಪಟ್ಟದಕಲ್ಲು, 7-8ನೇ ಶತಮಾನದ ಬಾದಾಮಿ ಚಾಲುಕ್ಯರ ರಾಜಧಾನಿ ಮತ್ತು ಪಟ್ಟಾಭಿಷೇಕದ ಕೇಂದ್ರವಾಗಿತ್ತು
UNESCO ವಿಶ್ವ ಪರಂಪರೆಯ ತಾಣವಾದ ಇದು, ದ್ರಾವಿಡ (ದಕ್ಷಿಣ) ಮತ್ತು ಆರ್ಯ (ಉತ್ತರ) ಶೈಲಿಯ ದೇವಾಲಯಗಳ ಸಮ್ಮಿಶ್ರಣಕ್ಕೆ ಪ್ರಸಿದ್ಧವಾಗಿದೆ. ವಿರೂಪಾಕ್ಷ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಇದು ಚಾಲುಕ್ಯರ ಕಲಾ ನೈಪುಣ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಪಟ್ಟದಕಲ್ಲು ಎಂದರೆ ಪಟ್ಟಾಭಿಷೇಕ ನಡೆಯುವ ಕಲ್ಲು (Place of Coronation). ಚಾಲುಕ್ಯ ದೊರೆಗಳು ಇಲ್ಲಿನ ಉತ್ತರವಾಹಿನಿ ನದಿಯಲ್ಲಿ ಸ್ನಾನ ಮಾಡಿ, ಪಟ್ಟಾಭಿಷಿಕ್ತರಾಗುತ್ತಿದ್ದರು.
ದಕ್ಷಿಣ ಭಾರತದ ಇತಿಹಾಸದಲ್ಲಿ ಕೃಷ್ಣಾ ನದಿಯ ಉಪನದಿಯಾದ ಮಲಪ್ರಭಾ ನದಿಯು ಪರ್ವತಗಳು ಮತ್ತು ಬಯಲು ಪ್ರದೇಶಗಳಿಂದ ಸುತ್ತುವರೆದಿದ್ದು, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಪೂರ್ವಕ್ಕೆ ಹರಿಯುತ್ತದೆ. ಪಟ್ಟದಕಲ್ಲು ತಲುಪುವ ಮೊದಲು ಕೇವಲ ಒಂದು ಕಿಲೋಮೀಟರ್ ದೂರದಿಂದ ದಕ್ಷಿಣದಿಂದ ಉತ್ತರಕ್ಕೆ ಹರಿಯಲು ಪ್ರಾರಂಭಿಸುತ್ತದೆ. ನಮ್ಮ ನಂಬಿಕೆಯ ಪ್ರಕಾರ, ಉತ್ತರ ದಿಕ್ಕಿನಲ್ಲಿ ಹರಿಯುವ ನದಿಯನ್ನು ಉತ್ತರವಾಹಿನಿ ಗಂಗಾ ಎಂದೂ ಕರೆಯುತ್ತಾರೆ ಉತ್ತರ ದಿಕ್ಕಿಗೆ ಹರಿಯುವ ನದಿಯನ್ನು ದೇವನದಿಯಾದ ಗಂಗಾಮಾತೆಗೆ ಹೋಲಿಸುತ್ತಾರಾದ ಕಾರಣ... ಆ ಸ್ಥಳದಲ್ಲಿ ಪಟ್ಟಾಭಿಷಿಕ್ತರಾಗುವುದು ಶ್ರೇಷ್ಠ ಎಂದು ಚಾಲುಕ್ಯ ರಾಜರ ಅಭಿಪ್ರಾಯವಿದ್ದಿರಬೇಕು.!
8ನೇ ಶತಮಾನದಲ್ಲಿ ಇದು ಕಲೆ, ಶಿಲ್ಪಕಲೆ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು. ಚಾಲುಕ್ಯರ ರಾಣಿಯರು ಮತ್ತು ರಾಜರು (ವಿಶೇಷವಾಗಿ ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ) ದಕ್ಷಿಣ ಭಾರತದ ಪಲ್ಲವರ ಮೇಲೆ ವಿಜಯ ಸಾಧಿಸಿದ ನೆನಪಿಗಾಗಿ ಇಲ್ಲಿ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನು ನಿರ್ಮಿಸಿದರು. ಇಲ್ಲಿ ಹತ್ತು ಪ್ರಮುಖ ದೇವಾಲಯಗಳಿದ್ದು, ಉತ್ತರ ಮತ್ತು ದಕ್ಷಿಣ ಶೈಲಿಗಳ ಸಮ್ಮಿಳನವನ್ನು ಹೊಂದಿರುವ ಅತ್ಯಂತ ಅತ್ಯಾಧುನಿಕ ದೇವಾಲಯಗಳು ಪಾಪನಾಥ ಮತ್ತು ವಿರೂಪಾಕ್ಷ ದೇವಾಲಯಗಳಲ್ಲಿ ಕಂಡುಬರುತ್ತವೆ .ವಿರೂಪಾಕ್ಷ ದೇವಾಲಯ ದ್ರಾವಿಡ ಶೈಲಿಯಲ್ಲಿ ಮತ್ತು ಪಾಪನಾಥ ದೇವಾಲಯ ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ವಿರೂಪಾಕ್ಷ ದೇವಾಲಯದಲ್ಲಿ ಇಂದಿಗೂ ಸಹ ಪೂಜಾಕಾರ್ಯಗಳಲ್ಲಿ ಸಕ್ರಿಯವಾಗಿದೆ. ಈ ಸ್ಥಳವು ಕೇವಲ ಹಿಂದೂ ದೇವಾಲಯಗಳಲ್ಲದೆ, ಒಂದು ಜೈನ ಬಸದಿಯನ್ನೂ ಹೊಂದಿದೆ. ಪಟ್ಟದಕಲ್ಲನ್ನು ಚಾಲುಕ್ಯ ರಾಜರ ನಂತರ, ರಾಷ್ಟ್ರಕೂಟರು ಮತ್ತು ಕಲ್ಯಾಣಿಯ ಪಶ್ಚಿಮ ಚಾಲುಕ್ಯರು ಈ ಪ್ರದೇಶವನ್ನು ಆಳಿದರು.
ಯುನೆಸ್ಕೋ ಪಟ್ಟದಕಲ್ಲನ್ನು "ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪದ ಸಾಮರಸ್ಯದ ಮಿಶ್ರಣ" ಮತ್ತು ಅದರ ಉತ್ತುಂಗದಲ್ಲಿ "ಸಾರಸಂಪರ್ಕ ಕಲೆ"ಯ ವಿವರಣೆ ಎಂದು ಬಣ್ಣಿಸಿದೆ. ಇಲ್ಲಿನ ದೇವಾಲಯಗಳು ಸಾಮಾನ್ಯವಾಗಿ ಶಿವನಿಗೆ ಸಮರ್ಪಿತವಾಗಿವೆ, ಅದರ ಜೊತೆಗೆ ವೈಷ್ಣವ, ಶಕ್ತಿ, ಧರ್ಮಶಾಸ್ತ್ರ ಮತ್ತು ದಂತಕಥೆಗಳ ಅಂಶಗಳು ಸಹ ಕಾಣಿಸಿಕೊಂಡಿವೆ.ಇಲ್ಲಿನ ದೇವಾಲಯಗಳಲ್ಲಿನ ಅಲಂಕಾರಗಳು ಪುರಾಣ ಪರಿಕಲ್ಪನೆಗಳನ್ನು ಪ್ರದರ್ಶಿಸುತ್ತವೆ, ರಾಮಾಯಣ , ಮಹಾಭಾರತ , ಭಾಗವತ ಪುರಾಣದ ಕಥೆಗಳನ್ನು ಚಿತ್ರಿಸಿವೆ. , ಜೊತೆಗೆ ಪಂಚತಂತ್ರ ಮತ್ತು ಕಿರಾತಾರ್ಜುನಿಯದಂತಹ ಇತರ ಗ್ರಂಥಗಳ ಅಂಶಗಳನ್ನು ಚಿತ್ರಿಸುತ್ತವೆ . ಇದರ ಜೊತೆಗೆ ಜೈನ ದೇವಾಲಯವು ಸಹ ಇದೆ.
ಇದನ್ನೆಲ್ಲ ನೋಡ್ತಾ ಇದ್ರೆ ಒಂದು ದಿನವಾದರೂ ಸಾಲದು, ಅದ್ಭುತ ಶಿಲ್ಪಕಲೆಯ ಅದ್ಬುತ ವಿನ್ಯಾಸಗಳು ಮರಳುಗಲ್ಲಿನ ಮೇಲೆ ಅಚ್ಚುಕಟ್ಟಾಗಿ ಮೂಡಿಬಂದಿವೆ. ಪ್ರವಾಸಿಗಳ ಗದ್ದಲ ಬಿಟ್ಟರೆ... ಶಾಂತ ವಾತಾವರಣವಿದೆ ಅಲ್ಲಿ. ನೂರಾರು ಶಿವನ ಸಣ್ಣ ಸಣ್ಣ ಗುಡಿಗಳು ಇವೆಯಾದರೂ... ಒಂದಕ್ಕೆ ಸೂರಿದ್ದರೆ ಒಂದಕ್ಕೆ ಗೋಡೆಯೇ ಇಲ್ಲ..!! ಒಂದರಲ್ಲಿ ಲಿಂಗವಿದ್ದರೆ, ಮತ್ತೊಂದರಲ್ಲಿ ಭಗ್ನ ಮೂರ್ತಿ..!! ಗುಡಿಯ ಮುಂದಿನ ನಂದಿಗಳದ್ದೂ ಸಹ ವಿಕೃತ ರೂಪವಾಗಿದೆ..!! ಅದಾವ ಸವಿನೆನಪಿಗೋಸ್ಕರ, ಅದಾವ ವಿಜಯೋತ್ಸವಕ್ಕೊಸ್ಕರ ಆ ಅದ್ಭುತ ಕಲೆ ಮೂಡಿತ್ತೋ ಇಂದು ಅವೆಲ್ಲವೂ ಭಗ್ನವಾಗಿ ನಿಂತಿವೆ..!! ನಮ್ಮ ರಾಜರ, ಅವರ ಆಡಳಿತದ, ಅವರ ಕಲಾರಾಧನೆಯ, ಅದ್ಭುತ ಶಿಲ್ಪಿಗಳ ಹಾಗೂ ಈ ಶಿಲ್ಪಗಳ ಬಗ್ಗೆ ಅದೆಷ್ಟು ಹೆಮ್ಮೆ ಮೂಡುವುದೋ ಅಷ್ಟೇ ದುಃಖದಿಂದ ಕಣ್ಣೀರೂ ಸುರಿಯುತ್ತದೆ..!
ಮುಂದುವರೆಯುವುದು......
#ಭಾಗ_15
UNESCO ವಿಶ್ವ ಪರಂಪರೆಯ ತಾಣವಾದ, ಶಿಲ್ಪಕಲೆ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾದ, ಪಟ್ಟದಕಲ್ಲು ಎಂಬ ಅದ್ಬುತ ಸ್ಥಳವನ್ನು ವೀಕ್ಷಿಸಿ, ಸಂತೋಷ ಹಾಗೂ ದುಃಖದಿಂದ ಕಣ್ತುಂಬಿಕೊಂಡು ಹೊರಬಂದಾಗ ಹೊಟ್ಟೆ ಹಸಿದಿತ್ತು, ಊಟದ ಸಮಯವೂ ಮೀರಿತ್ತು, ಅಲ್ಲಿನ ಸಣ್ಣ ಸಣ್ಣ ಹೋಟೆಲ್ಗೆಳೂ ಜನರಿಂದ ತುಂಬಿ ತುಳುಕುತ್ತಿತ್ತು. ಅಲ್ಲಿ ಊಟಕ್ಕೆ ನಿಂತರೆ ಕನಿಷ್ಠ ಒಂದು ಗಂಟೆಯದರೂ ಬೇಕಿತ್ತು, ಅಷ್ಟು ಕಾಯುವ ಮನಸ್ಸಿರಲಿಲ್ಲವಾದ ಕಾರಣ ಮತ್ತೊಮ್ಮೆ ಕಬ್ಬಿನ ಹಾಲನ್ನು ಕುಡಿದು ಅಲ್ಲಿಂದ ಮುಂದೆ ಹೊರಟೆವು.
ಭಾರತದ ದಕ್ಷಿಣ ಕಾಶಿಯಂದೇ ಪ್ರಸಿದ್ಧವಾಗಿರುವ ಪಟ್ಟದಕಲ್ಲಿನಿಂದ 5, 6 ಕಿ. ಮೀ ಹಾಗೂ ಬಾದಾಮಿಯಿಂದ 14ಕಿಮೀ ದೂರ ಕ್ರಮಿಸಿದರೆ ‘ಮಹಾಕೂಟ’ ಸಿಗುತ್ತದೆ. ಪ್ರಾಚೀನ ದೇವಾಲಯಗಳ ಕೂಟವೇ ‘ಮಹಾಕೂಟ’. ಇಲ್ಲಿ ನಿರ್ಮಿತವಾದ ಸುಂದರ, ಹಸಿರಿನಿಂದ ಕೂಡಿದ ಬೆಟ್ಟಗಳ ಮಧ್ಯೆ ಗುಡಿಗಳ ಗುಂಪು ಇದೆ. ಜಲ ಹಾಗೂ ವನಸಿರಿಗಳಿಂದ ಕೂಡಿದ ಈ ಕ್ಷೇತ್ರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಾನಾ ದೇವರಗಳು ಒಂದೇ ಆವರಣದಲ್ಲಿ ಮೇಳೈಸಿದ್ದು, ಆವರಣದಾಚೆಗೂ ಒಂದೆರಡು ಗುಡಿಗಳಿವೆ. ಹಸಿರು ಹಾಗೂ ಬೆಟ್ಟಗಳ ಮಧ್ಯೆ ಇರುವ ಮಹಾಕೂಟ ಈ ಭಾಗದ ಜನರಿಗೆ ‘ದಕ್ಷಿಣ ಕಾಶಿ’ಯಾಗಿದೆ. ಕೋಟಿ ಲಿಂಗಗಳಾಗಲು ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ ‘ಕಾಶಿ’ಯಾಗುವ ಅವಕಾಶ ಕಳೆದುಕೊಂಡಿತು ಎಂದು ಹೇಳಲಾಗುತ್ತಿದೆ. ನಾನಾ ಲಿಂಗಗಳ ಕೂಟವಾದ ಇದು ‘ಮಹಾಕೂಟ’ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಕಲ್ಯಾಣಿ ‘ವಿಷ್ಣು ಪುಷ್ಕರಣಿ’ ಎಂದು ಹೆಸರುವಾಸಿಯಾಗಿದೆ. ಶಿವ, ವಿಷ್ಣು, ಗೌರಿ, ಸರಸ್ವತಿ, ವೀರಭದ್ರ, ಇನ್ನಿತರ ದೇವತೆಗಳ ಅಪೂರ್ವ ಶಿಲ್ಪಕಲೆ ನೋಡುಗರನ್ನು ಮೂಕವಿಸ್ಮಯ ಮಾಡುವಂತಿದೆ.
ಕ್ರಿ ಶ 602ರಲ್ಲಿ ಚಾಳುಕ್ಯರ ಮಂಗಳೇಶನು ತನ್ನ ಯುದ್ಧ-ವಿಜಯಗಳ ನೆನಪಿಗಾಗಿ ಇಲ್ಲಿ ಅನೇಕ ಶಿವಲಿಂಗಗಳ ದೇವಾಲಯಗಳನ್ನು ಕಟ್ಟಿಸಿದ್ದಾನೆ. ಮಹಾಕೂಟೇಶ್ವರ ದೇವಾಲಯದ ಮುಂದೆ ಚಾಳುಕ್ಯರಾಜ ಮಂಗಲೀಶನ ಶಾಸನವುಳ್ಳ ಅಷ್ಟಕೋನದ ಶಿಲಾಸ್ತಂಭವಿತ್ತoತೆ, ಇದು ಈಗ ವಿಜಯಪುರದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿದೆಯಂತೆ. ಮಂಗಲೀಶ ಕಳಚುರಿ ಮುಂತಾದವರನ್ನು ಗೆದ್ದು ಯುದ್ಧದಲ್ಲಿ ಸಂಗ್ರಹವಾದ ಐಶ್ವರ್ಯವನ್ನು ಚಕ್ರವರ್ತಿಯಾಗಿದ್ದ ತನ್ನ ಅಣ್ಣನಿಗೆ ಶಕವರ್ಷ 524ರಲ್ಲಿ ಅರ್ಪಿಸಿದನೆಂದು ಶಾಸನದಲ್ಲಿದೆಯಂತೆ. ಆದ್ದರಿಂದ ಈ ದೇವಾಲಯ 6ನೆಯ ಶತಮಾನದ್ದೆಂದು ಹೇಳಬಹುದು.. ಇಲ್ಲಿರುವ ಹಲವು ಶೈವದೇವಾಲಯಗಳಿಂದ ಇದೊಂದು ಪ್ರಸಿದ್ಧ ಶೈವ ಧರ್ಮದ ಕೇಂದ್ರವಾಗಿದ್ದಿರಬೇಕೆಂದು ಊಹಿಸಿಬಹುದಾಗಿದೆ.. ಮಂಗಲೇಶನ ಶಾಸನವೊಂದರಲ್ಲಿ ಇಲ್ಲಿಯ ದೇವರನ್ನು ಮಕುಟೇಶ್ವರನಾಥ ಎಂದು ಹೇಳಲಾಗಿದೆಯಂತೆ. ಅದೇ ‘ಮಹಾಕುಟೇಶ್ವರ’ ವಾಗಿ ಕರೆಯಲ್ಪಟ್ಟಿದೆ. ಕ್ರಮೇಣ ಈ ಹೆಸರಿನಿಂದಾಗಿ ಈ ಕ್ಷೇತ್ರಕ್ಕೆ ‘ಮಹಾಕೂಟ’ ಎಂದು ಹೆಸರು ಬಂದಿತು ಎಂದು ಹೇಳುತ್ತಾರೆ.
ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ ಕಾಣುತ್ತವೆ.ಈ ದೇವಾಲಯ 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಅರ್ಚಕರ ಅನಿಸಿಕೆ ..... ದೇವಾಲಯದ ಸುತ್ತ ಅಗಸ್ತ್ತ್ಯೆಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ. ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ...!! ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ.
ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಮಧ್ಯೆ. ಒಂದು ಪುಷ್ಕರಣಿ ಮತ್ತು ಅದರ ಸುತ್ತಲೂ ಸಣ್ಣ ಸಣ್ಣ ದೇವಾಲಯಗಳಿವೆ. ಶಿವಭಕ್ತರಿಗೆ ಇಂದಿಗೂ ಇದೊಂದು ಪುಣ್ಯಸ್ಥಳವಾಗಿದ್ದು 'ದಕ್ಷಿಣಕಾಶಿ' ಎಂದೇ ಪ್ರಸಿದ್ಧವಾಗಿದೆ. ಅನೇಕ ಶಿವಾಲಯಗಳ ಸಮುಚ್ಚಯವಾಗಿರುವುದರಿಂದ ಇದಕ್ಕೆ 'ಮಹಾಕೂಟ' ಎಂದು ಹೆಸರು ಬಂದಿದೆಎಂದೂ ಹೇಳಬಹುದು . ನಾವುಗಳೂ ಮಹಾಕೂಟೇಶ್ವರನ ದರ್ಶನ ಮುಗಿಸಿ, ಕಾಣಿಕೆ ಅರ್ಪಿಸಿ ಹೊರಬಂದು ಅಲ್ಲೇ ಮಣ್ಣಿನ ಕುಡಿಕೆಗಳಲ್ಲಿ ಮಾರುತ್ತಿದ್ದ ಮೊಸರನ್ನು ಕುಡಿದು ಬಾದಾಮಿ ಕಡೆಗೆ ಹೊರಟೆವು.
ಮುಂದುವರೆಯುವುದು......
#ಭಾಗ:--16
ದಕ್ಷಿಣ ಕಾಶಿಯೆಂದೇ ಪ್ರಖ್ಯಾತವಾಗಿರುವ ಮಹಾಕೂಟದಿಂದ ಸುಮಾರು 14 km ದೂರದಲ್ಲಿ ಬಾದಾಮಿಯಿದೆ. ಸಣ್ಣ ಪುಟ್ಟ ರಸ್ತೆ ದಾಟಿ ಹೈವೇಗೆ ಬಂದು ಒಂದರ್ಧಗಂಟೆಗೆ ಬಾದಾಮಿ ತಲುಪಿದೆವು. ಹೊಟ್ಟೆ ತುಂಬಾ ಹಸಿಯುತ್ತಿತ್ತು, ಆಟೋ ಡ್ರೈವರ್... ನಿಮಗ ನಮ್ ಕಡಿ ಖನಾವಳಿಯೆಲ್ಲ ಸೂಟ್ ಆಗೋದಿಲ್ಲ, ಬರ್ರೀ ಒಳ್ಳೆ ಹೋಟೆಲ್ ಗೆ ಕರ್ಕೊಂಡ್ ಹೋಗ್ತೀನಿ ಅಂತ .. ಬಾದಾಮಿಯ ಮೈನ್ ರೋಡ್ ನಲ್ಲೇ ಇರುವ ಉಡುಪಿ ರೆಸ್ಟೋರೆಂಟಿಗೆ ಕರೆದೊಯ್ದ, ನೀನೂ ಬಾ ತಮ್ಮ ಏನಾರ ತಿನ್ನು ಅಂತ ರಮೇಶ್ ಕರೆದರಾದರೂ... ಇಲ್ರೀ... ಮುಂಜಾನೆ ತಿಂದ್ರೆ ಇನ್ನ ರಾತ್ರಿಗೇ ಊಟ ಮಾಡೋದು ..ನನಗ ಬ್ಯಾಡ್ರಿ, ನೀವ್ ತಿನ್ಕೋಬನ್ರೀ ಅಂತೇಳಿ ಹೋಟೆಲ್ ಗೆ ಬರಲೇ ಇಲ್ಲ. ಊಟದ ಸಮಯ ಮೀರಿತ್ತಾದ್ದರಿಂದ ಒಂದೊಂದು ದೋಸೆ ತಿಂದು ಕಾಫಿ ಕುಡಿದು ಹೊರಬಂದೆವು.
ಒಂದೈದು ನಿಮಿಷಗಳ ಪ್ರಯಾಣದ ನಂತರ ಜಗದ್ಪ್ರಸಿದ್ದ ಬಾದಾಮಿ ಗುಹೆಗಳ ಹತ್ತಿರ ಕರೆತಂದ ನಮ್ಮ ಆಟೋ ಡ್ರೈವರ್. ಮುಂದೆ ತಲೆಯೇತ್ತಿ ನೋಡುವಂತಹ ಬೃಹತ್ ಮರಳುಗಲ್ಲಿನ ಬಂಡೆಗಳ ಗುಂಪು, ಸೂರ್ಯಾಸ್ತದ ಆ ಸಮಯದಲ್ಲಿ ಕೆಂಪು ಹಳದಿಕಲ್ಲಿನ ಆ ಬಂಡೆಗಳು ಚಿನ್ನದ ಗೋಪುರದಂತೆ ಹೊಳೆಯುತ್ತಿತ್ತು.!! ಅದರಲ್ಲಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಜನ ಅಲ್ಲಿ ಗಿಜಿಗುಡುತ್ತಿದ್ದರು.!! ದೂರದ ಪಾಶ್ಚಿಮಾತ್ಯ ದೇಶಗಳಿಂದೆಲ್ಲ ಬಂದ ಜನರಿದ್ದರು... ಅಲ್ಲಿ ಹೋದ ನಮಗೆಲ್ಲ ಕುತೂಹಲ..! ಆದರೆ ಅಲ್ಲಿನ ಜನರಿಗೆ ಹಿತ್ತಲಗಿಡ ಮದ್ದಲ್ಲ ಅನ್ನುವ ಭಾವನೆ..! ದಿನವೂ ಕಣ್ಮುಂದೆಯೇ ಕಾಣುವ ಅವರಿಗೆ ಅದು ಅತೀ ಸಾಮಾನ್ಯ ಅನಿಸುವುದು ಸಹಜ ಕೂಡಾ.... ಆದರೆ ಅ ರಸ್ತೆಯ ಸ್ಥಿತಿಗತಿ ನೋಡಿ ಬೇಸರವಾಯ್ತು. ರಸ್ತೆ ವಿಶಾಲವಾಗಿದ್ರೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ರಸ್ತೆಯ ಬದಿಗೆ ಇರುವುದು ಸ್ಲಮ್ ತರಹ ಏರಿಯಾ... ಅಲ್ಲೇ ಕುರಿ ಮೇಕೆಗಳನ್ನು ಕಟ್ಟಿರುವುದು.... ಅಲ್ಲೇ ಪಾತ್ರೆ ತೊಳೆಯುವುದು, ಅಲ್ಲೇ ಬಟ್ಟೆ ಒಗೆಯುವುದು, ಅಲ್ಲೇ ತಮ್ಮ ವಾಹನಗಳನ್ನು ತೊಳೆಯುವುದು.... ಆ ನೀರೇಲ್ಲಾ ರಸ್ತೆಯ ಮೇಲೆ ಹರಿಯುವುದು...!! ವಿದೇಶೀಯರೆಲ್ಲ ಮುಖ ಕಿವುಚಿಕೊಂಡು ಓಡಾಡುತ್ತಿದ್ದರೆ ಬೇಜಾರೆನಿಸಿತು. 😔 ಯಾರಿಗೂ ಏನೂ ಹೇಳಲಾಗದು, ನಮ್ಮ ಪ್ರಸಿದ್ಧ ಸ್ಥಳದ ಘನತೆ ನಾವೇ ಎತ್ತಿ ಹಿಡಿಯಬೇಕು ಅನ್ನುವ ಅರಿವು ಎಲ್ಲರಿಗೂ ಇರಬೇಕು.
ಪ್ರವೇಶಕ್ಕೆ ನಿಗದಿಪಡಿಸಿದ ಹಣವನ್ನು ಪಾವತಿ ಮಾಡಿ ನಾವುಗಳು ಒಳಹೊಕ್ಕೆವು. ಬೃಹತ್ ಬಂಡೆಗಳನ್ನು ಕೊರೆದು ನಿರ್ಮಿಸಲಾದ ಗುಹಾಂತರ ದೇಗುಲಗಳ ಅ ವೈಭವವನ್ನು ನೋಡಿಯೇ ಅನುಭವಿಸಬೇಕು. ಪದರುಪದರಾಗಿರುವ ಕಲ್ಲುಗಳನ್ನು ಒಂದರಮೇಲೊಂದು ಪೇರಿಸಿಟ್ಟಂತೆ ಕಾಣುವ ಅ ಬಂಡೆಗಳ ಮದ್ಯದಲ್ಲಿ ಕೊರೆದ ಆ ಗುಹಾಂತರ ದೇವಾಲಯಗಳಿಗೆ ಐತಿಹಾಸಿಕ ಹಿನ್ನೆಲೆಯಿದೆ. ಹಿಂದೆ ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯನ್ನು ವಾತಾಪಿ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಗುಹಾ ದೇವಾಲಯಗಳು ಮತ್ತು ಇತರ ಸ್ಮಾರಕಗಳನ್ನು ಕ್ರಿ.ಶ 6 ಮತ್ತು 8 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಚಾಲುಕ್ಯರು ಜಾರಿಗೆ ತಂದ ವಾಸ್ತುಶಿಲ್ಪ ಶೈಲಿಯು ಉತ್ತರ ಭಾರತದ ‘ನಾಗರ’ ಮತ್ತು ದಕ್ಷಿಣದ ‘ದ್ರಾವಿಡ’ ಶೈಲಿಗಳ ಅಪೂರ್ವ ಸಂಗಮವಾಗಿದ್ದು, ಇದನ್ನು ‘ವೇಸರ’ ಶೈಲಿ ಎಂದು ಗುರುತಿಸಲಾಗುತ್ತದೆ. ಇದೇ ಶೈಲಿಯಲ್ಲಿ ನಿರ್ಮಿಸಲಾದ ಬಾದಾಮಿ ಗುಹೆ ದೇವಾಲಯದ ಸಂಕೀರ್ಣವು ಜೈನ ದೇವಾಲಯ ಮತ್ತು ಮೂರು ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ. ಬಾದಾಮಿಯಲ್ಲಿನ ಗುಹೆಗಳ ಮೇಲೆ ಶಿವ, ಭಗವಾನ್ ವಿಷ್ಣು ಮತ್ತು ಶಿವನ ತಾಂಡವ ನೃತ್ಯದ ಶಿಲ್ಪಕಲೆಗಳನ್ನು ನೋಡಬಹುದು.
ಬಾದಾಮಿಯ ಪ್ರತಿ ಮಣ್ಣಿನ ಕಣದಲ್ಲೂ ಇತಿಹಾಸ ಮತ್ತು ಪುರಾಣಗಳ ಮಿಶ್ರಣವಿದೆ. ಪುರಾಣ ದಂತಕಥೆಯ ಪ್ರಕಾರ, ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ಬಲಿಷ್ಠ ರಾಕ್ಷಸ ಸಹೋದರರು ಅತಿಥಿಗಳನ್ನು ಉಪಾಯದಿಂದ ಕೊಂದು ತಿನ್ನುತ್ತಿದ್ದರು. ಅಗಸ್ತ್ಯ ಮುನಿಗಳು ತಮ್ಮ ತಪೋಬಲದಿಂದ ವಾತಾಪಿಯನ್ನು ಜೀರ್ಣಿಸಿಕೊಂಡು ಈ ರಾಕ್ಷಸ ಸಂಕುಲವನ್ನು ಸಂಹರಿಸಿದ ಪುಣ್ಯಭೂಮಿ ಇದು ಎಂಬುದು ಜನಪದರ ನಂಬಿಕೆ. ಇನ್ನು ಐತಿಹಾಸಿಕವಾಗಿ ನೋಡುವುದಾದರೆ ಕ್ರಿ.ಶ. 543ರಲ್ಲಿ ಒಂದನೇ ಪುಲಕೇಶಿಯು ಇಲ್ಲಿನ ಕೆಂಪು ಮರಳುಗಲ್ಲಿನ ಬೆಟ್ಟಗಳ ನೈಸರ್ಗಿಕ ರಕ್ಷಣೆಯನ್ನು ಅರಿತು ಬಲಿಷ್ಠವಾದ ಕೋಟೆಯನ್ನು ನಿರ್ಮಿಸಿ ಬಾದಾಮಿಯನ್ನು ತನ್ನ ಸಾಮ್ರಾಜ್ಯದ ಕೇಂದ್ರವನ್ನಾಗಿ ಮಾಡಿದನು. ಇಲ್ಲಿನ ಬೆಟ್ಟದ ಶಿಲೆಗಳು ಬಲಿತ ಬಾದಾಮಿ ಹಣ್ಣಿನ ಬಣ್ಣವನ್ನೇ ಹೋಲುವ ಕಾರಣ ಇದಕ್ಕೆ ‘ಬಾದಾಮಿ’ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ಬೆಟ್ಟದ ತುದಿಯಲ್ಲಿರುವ ಕೋಟೆಯನ್ನು ಏರುತ್ತಿದ್ದರೆ, ಅಂದು ಚಾಲುಕ್ಯರು ಎಂತಹ ಶತ್ರುಗಳನ್ನೂ ಮೆಟ್ಟಿ ನಿಲ್ಲುವ ರಕ್ಷಣಾ ತಂತ್ರಜ್ಞಾನವನ್ನು ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಇದು ಕೇವಲ ಯುದ್ಧೋತ್ಸಾಹಿಗಳ ನೆಲೆಯಾಗಿರದೆ, ಇಡೀ ದಕ್ಷಿಣ ಪಥವನ್ನು ಆಳಿದ ಇಮ್ಮಡಿ ಪುಲಕೇಶಿಯಂತಹ ಧೀಮಂತ ರಾಜರ ಸಾಹಸಗಾಥೆಗಳಿಗೆ ಸಾಕ್ಷಿಯಾಗಿದೆ.
ಮುಂದುವರೆಯುವುದು.....
✍️ಡಾ: B. N. ಶೈಲಜಾ ರಮೇಶ್
#ಭಾಗ_17
ಭಾರತದ ಸಾಂಸ್ಕೃತಿಕ ನಕ್ಷೆಯಲ್ಲಿ ಕರ್ನಾಟಕದ ಕೊಡುಗೆ ಕೇವಲ ವಿಸ್ತಾರವಾದ ಭೂಪ್ರದೇಶಕ್ಕೆ, ಹಾಗೂ ಬೆಟ್ಟಗುಡ್ಡಗಳಿಂದಾವೃತವಾದ ಮಲೆನಾಡಿಗಷ್ಟೇ ಸೀಮಿತವಾಗಿಲ್ಲ. ಅದು ಕಲ್ಲಿನಲ್ಲಿ ಅರಳಿದ ಕಲೆ ಮತ್ತು ದಾರ್ಶನಿಕ ಸಿದ್ಧಾಂತಗಳ ನೆಲೆಬೀಡು. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ಮಡಿಲಲ್ಲಿರುವ ಬಾದಾಮಿ, ಭಾರತೀಯ ವಾಸ್ತುಶಿಲ್ಪದ ವಿಕಾಸದ ಹಾದಿಯನ್ನು ಸಾರುವ ಮಹಾನ್ ವಿದ್ಯಾಪೀಠದಂತೆ ಭಾಸವಾಗುತ್ತದೆ. ಸುಮಾರು 1,500ಕ್ಕೂ ಹೆಚ್ಚು ಗುಹಾಂತರ ವಾಸ್ತುಶಿಲ್ಪಗಳ ತವರೂರು ಭಾರತ..!! ಬಿಹಾರದ ಬರಾಬರ್ ಗುಹೆಗಳಿಂದ ಹಿಡಿದು ಮಹಾರಾಷ್ಟ್ರದ ಅಜಂತಾ-ಎಲ್ಲೋರದವರೆಗೆ ಹರಡಿರುವ ಈ ಕಲಾ ಪರಂಪರೆಯಲ್ಲಿ, ನಮ್ಮ ಕರ್ನಾಟಕದ ಬಾದಾಮಿಯು ವಿಶಿಷ್ಟ ಸ್ಥಾನವನ್ನು ಪಡೆದಿದೆ.
ಬೃಹತ್ ಬಂಡೆಗಳಲ್ಲಿ ಕೊರೆದ ಇಲ್ಲಿನ ಪ್ರತಿ ಗುಹೆಯೂ ಸುಸಜ್ಜಿತವಾದ ‘ಮುಖ ಮಂಟಪ’, ‘ಅರ್ಧ ಮಂಟಪ’ ಮತ್ತು ಪ್ರಶಾಂತವಾದ ಗರ್ಭಗೃಹಗಳನ್ನು ಹೊಂದಿವೆ. ಕೆಳಭಾಗದಲ್ಲಿರುವ ಮೊದಲನೇ ಗುಹೆಯು ಶೈವ ಧರ್ಮಕ್ಕೆ ಅರ್ಪಿತವಾಗಿದ್ದು, ಇಲ್ಲಿನ 18 ಬಾಹುಗಳ ನಟರಾಜನ ಶಿಲ್ಪವು ತುಂಬಾನೇ ವಿಶಿಷ್ಟವಾಗಿದೆ, ಹಾಗೆಯೇ ವಿಶ್ವದ ಅನೇಕ ಕಲಾಪ್ರೇಮಿಗಳನ್ನು ಸೆಳೆಯುವಲ್ಲಿ ಗೆದ್ದಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಭರತನಾಟ್ಯದ ಅನೇಕ ವಿಭಿನ್ನ ಭಂಗಿಗಳನ್ನು ಸಂಯೋಜಿಸಿ ಕಡೆದಿರುವ ಆ ಅದ್ಭುತ ಶಿಲ್ಪವನ್ನು ಅವಲೋಕಿಸಿದರೆ.... ಅಂದಿನ ಶಿಲ್ಪಿಗಳ ನೃತ್ಯಶಾಸ್ತ್ರದ ಅಪಾರ ಜ್ಞಾನದ ಅರಿವಾಗುತ್ತದೆ. ಇದರೊಂದಿಗೆ ಹರಿಹರ, ಅರ್ಧನಾರೀಶ್ವರ ಮತ್ತು ಮಹಿಷಾಸುರಮರ್ಧಿನಿಯ ಕೆತ್ತನೆಗಳು ಇಲ್ಲಿನ ವೈಭವವನ್ನು ಹೆಚ್ಚಿಸಿವೆ. ಮುಖಮಂಟಪದ ಮೇಲ್ಛಾವಣಿಯಲ್ಲಿ ಕೆತ್ತಲಾಗಿರುವ ನಾಗರಾಜನ ಶಿಲ್ಪವು ಕಲ್ಲು ಹೂವಿನಂತೆ ಅರಳಿದ ಚಾಲುಕ್ಯ ಕಲೆಗಾರಿಕೆಯ ಶೃಂಗವಾಗಿದೆ.
ಅದ್ಭುತ ಶಿಲ್ಪಕಲೆಯನ್ನು ಆನಂದಿಸುತ್ತಾ ಮುಂದೆ ಸಾಗಿದಾಗ ಸಿಗುವ ಎರಡನೇ ಮತ್ತು ಮೂರನೇ ಗುಹೆಗಳು ವೈಷ್ಣವ ಧರ್ಮದ ಮೇಲಿನ ಚಾಲುಕ್ಯರ ಅಪಾರ ಶ್ರದ್ಧೆಯನ್ನು ಬಿಂಬಿಸುತ್ತವೆ. ಎರಡನೇ ಗುಹೆಯಲ್ಲಿ ವಿಷ್ಣುವು ‘ತ್ರಿವಿಕ್ರಮ’ ರೂಪದಲ್ಲಿ ಇಡೀ ಬ್ರಹ್ಮಾಂಡವನ್ನೇ ಅಳೆಯುತ್ತಿರುವ ದೃಶ್ಯ ಮತ್ತು ಭೂದೇವಿಯನ್ನು ರಕ್ಷಿಸುತ್ತಿರುವ ‘ವರಾಹ’ನ ಭವ್ಯ ಮೂರ್ತಿಗಳು ಮನೋಜ್ಞವಾಗಿವೆ. ಮೂರನೇ ಗುಹೆಯು ಎಲ್ಲಕ್ಕಿಂತ ದೊಡ್ಡದು ಮತ್ತು ಅತ್ಯಂತ ಸುಂದರವಾದ ಕೆತ್ತನೆಗಳಿಂದ ಕೂಡಿದೆ. ಕ್ರಿ.ಶ. 578ರಲ್ಲಿ ಮಂಗಳೇಶ ರಾಜನ ಕಾಲದಲ್ಲಿ ನಿರ್ಮಿತವಾದ ಈ ಗುಹೆಯಲ್ಲಿ ವೈಕುಂಠ ವಿಷ್ಣು, ನರಸಿಂಹ ಮತ್ತು ಆದಿಶೇಷನ ಮೇಲೆ ಕುಳಿತಿರುವ ವಿಷ್ಣುವಿನ ಶಿಲ್ಪಗಳು ಕಲ್ಲಿನಲ್ಲಿ ಅರಳಿದ ಜೀವಂತ ರೂಪಗಳಂತೆ ಕಾಣುತ್ತವೆ. ಇಲ್ಲಿನ ಮೇಲ್ಛಾವಣಿಯ ಫಲಕಗಳಲ್ಲಿ ಕುಬೇರ, ಇಂದ್ರ ಮತ್ತು ಸಮುದ್ರ ಮಂಥನದಂತಹ ಪುರಾಣ ಕಥೆಗಳು ಕಲಾತ್ಮಕವಾಗಿ ಚಿತ್ರಿತವಾಗಿವೆ.
ನಾಲ್ಕನೇ ಗುಹೆಯು ಜೈನ ಧರ್ಮಕ್ಕೆ ಸಂಬಂಧಿಸಿದ್ದಾಗಿದ್ದು, ಮಹಾವೀರ ಮತ್ತು ಪಾರ್ಶ್ವನಾಥರ ಶಾಂತಿಯುತ ಪ್ರತಿಮೆಗಳು ಯಾರದೇ ಮನಸ್ಸಿನ ಅರಿವನ್ನು ಜಾಗೃತಗೊಳಿಸುವ ಅದ್ಭುತ ಶಿಲ್ಪಗಳಾಗಿವೆ. ಇಲ್ಲಿನ ಕಂಬಗಳ ಮೇಲೆ 12ನೇ ಶತಮಾನದ ಕನ್ನಡ ಶಾಸನಗಳಿದ್ದು, ಇದು ಈ ಸ್ಥಳದ ನಿರಂತರ ಮಹತ್ವವನ್ನು ಸಾರುತ್ತದೆ. ಎರಡು ಬೃಹದಾಕಾರದ ಬಂಡೆಗಳ ನಡುವಿನ ಸಣ್ಣ ಜಾಗದಲ್ಲಿ ಒಂದು ಅದ್ಭುತವಾದ ದೇವಾಲಯವಿದೆ. ಅಷ್ಟು ಸಣ್ಣ ಜಾಗದಲ್ಲೇ ತಿರುತಿರುಗಿ ನೋಡುವಂತೆ ಮಾಡುವ ಆ ದೇವಾಲಯವನ್ನು ಕಟ್ಟಿದ ಶಿಲ್ಪಿಗಳಿಗೆ ಒಂದು ದೊಡ್ಡ ನಮನ 🙏 ಶಿಲೆಯಲ್ಲಿ ಅರಳಿದ ಆ ಕಲೆಯನ್ನು ನೋಡಿ ನಮ್ಮ ಮನಸ್ಸೂ ಹೂವಿನಂತೆ ಅರಳಿತ್ತು, ನಮ್ಮ ನಾಡಿನ ಈ ಅದ್ಭುತ ಶಿಲ್ಪಕಲೆಯ ಬಗ್ಗೆ ಹೆಮ್ಮೆ ಮೂಡಿತು.
ಮುಂದುವರೆಯುವುದು.......
#ಭಾಗ_18
ಬಾದಾಮಿಯ ಗುಹಾಂತರ ದೇವಾಲಯಗಳ ದರ್ಶನ ಮಾಡಿ, ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು, ಅಲ್ಲಿರುವ ಅಸಂಖ್ಯ ಮಂಗಗಳ ಮಂಗಾಟವನ್ನು ಆನಂದಿಸುತ್ತಾ ನಿಂತ ನಮಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಇನ್ನೂ ನೋಡುವ ಸ್ಥಳಗಳು ಇವೆಯಾದರೂ ನಾವು ಬೆಂಗಳೂರಿಗೆ ಹೊರಡುವ ಬಸ್ ಇದ್ದದ್ದು 7 : 30ಕ್ಕೆ, 7 ಗಂಟೆಯ ಹೊತ್ತಿಗೆ ಬಸ್ಟಾಪ್ ಹತ್ತಿರ ಹೋದರಾಯ್ತು ಅಂತ ಅಗಸ್ತ್ಯ ತೀರ್ಥದ ಕಡೆಗೆ ಹೊರಟೆವು. ಗುಹಾಂತರ ದೇವಾಲಯ ಇರುವ ಬೆಟ್ಟದಿಂದಲೇ ಕೆಳಗಡೆ ವಿಸ್ತಾರವಾಗಿ ಹರಡಿಕೊಂಡಿದ್ದ ಅಗಸ್ತ್ಯ ತೀರ್ಥ ಮನೋಹರವಾಗಿ ಕಾಣಿತ್ತಿತ್ತು. ಅಗಸ್ತ್ಯ ತೀರ್ಥದ ಸುತ್ತಲೂ ಇದ್ದ ದೇವಾಲಯಗಳೂ ಕಾಣುತ್ತಿದ್ದವು. ಆ ಸ್ವಚ್ಛ ನೀರಿನಲ್ಲಿ ಆ ಕಡೆಗಿದ್ದ ಬೃಹತ್ ಬಂಡೆಗಳಿದ್ದ ಬೆಟ್ಟದ ಪ್ರತಿಬಿಂಬ ತುಂಬಾನೇ ಮನೋಹರವಾಗಿ ಕಾಣುತ್ತಿತ್ತು.
ಬಾದಾಮಿಯ ಸೌಂದರ್ಯಕ್ಕೆ ಮುಕುಟಪ್ರಾಯವಾದುದು ಅಗಸ್ತ್ಯ ತೀರ್ಥ ಸರೋವರ. ಇದು ಕೇವಲ ಒಂದು ಜಲಮೂಲವಲ್ಲ, ಬದಲಿಗೆ ಚಾಲುಕ್ಯರು ಅಳವಡಿಸಿಕೊಂಡಿದ್ದ ಪ್ರಾಚೀನ ಮಳೆ ನೀರು ಕೊಯ್ಲು ಪದ್ಧತಿಯ ಅತ್ಯುತ್ತಮ ತಾಂತ್ರಿಕ ಮಾದರಿಯಾಗಿದೆ ಅಂತಲೇ ಹೇಳಬಹುದು. ಬೆಟ್ಟದ ಸಾಲುಗಳಿಂದ ಹರಿದು ಬರುವ ಪ್ರತಿಹನಿ ಮಳೆನೀರನ್ನೂ ಕೆರೆಯಲ್ಲಿ ಸಂಗ್ರಹಿಸುವ ಈ ವ್ಯವಸ್ಥೆ ಆಗಿನ ಕಾಲದಲ್ಲೇ ಅದೆಷ್ಟು ವ್ಯವಸ್ಥಿತವಾಗಿ ಮಾಡಿದ್ದಾರೆಂದರೆ.. ಇಂದಿನ ಎಂಜಿನಿಯರ್‌ಗಳಿಗೂ ಕೂಡ ಮಾದರಿಯಾಗಿದೆ ಅಂತಲೇ ಹೇಳಬಹುದು. ಹಾಗೆಯೇ ಆ ಕಾಲದಲ್ಲೂ ಅದೆಷ್ಟು ಉನ್ನತ ಮಟ್ಟದ ತಂತ್ರಜ್ಞಾನವಿತ್ತು ಅನ್ನುವುದರ ಮನವರಿಕೆಯಾಗುತ್ತೆ.
ಕೆರೆಯ ಪೂರ್ವ ದಂಡೆಯ ಮೇಲೆ ನೆಲೆಸಿರುವ ಭೂತನಾಥ ದೇವಾಲಯ ಸಮೂಹವು ಸೂರ್ಯಾಸ್ತದ ಸಮಯದಲ್ಲಿ ಬಂಗಾರದ ಬಣ್ಣಕ್ಕೆ ತಿರುಗಿ ನೀರಿನ ಮೇಲೆ ಪ್ರತಿಫಲಿಸುವ ದೃಶ್ಯವು ದೈವಿಕ ಅನುಭವ ನೀಡುತ್ತದೆ. ಈ ಪರಿಸರದಲ್ಲಿ ಯಲ್ಲಮ್ಮ ದೇವಾಲಯ, ವಿರೂಪಾಕ್ಷ ದೇವಾಲಯ ಮತ್ತು ಮೇಲೆ ಕಾಣುವ ಮಾಲೆಗಿತ್ತಿ ಶಿವಾಲಯಗಳು ಚಾಲುಕ್ಯರ ವಾಸ್ತುಶಿಲ್ಪದ ವಿವಿಧ ವಿಕಾಸದ ಹಂತಗಳನ್ನು ನಮಗೆ ಪರಿಚಯಿಸುತ್ತವೆ. ಅಗಸ್ತ್ಯ ಸರೋವರ ಮತ್ತು ಗುಹಾ ದೇವಾಲಯದ ಬೆರಗುಗೊಳಿಸುವ ಭೂದೃಶ್ಯಗಳು ಮತ್ತು ಮೋಡಿಮಾಡುವ ಹಿನ್ನೆಲೆ, ಈ ಸ್ಮಾರಕಗಳು ಮಹತ್ತರವಾದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ.
ಇವೆಲ್ಲವನ್ನೂ ಅನುಭವಿಸಿ ಆನಂದಿಸುತ್ತಾ ಇರುವಾಗಲೇ ನಮ್ಮ ಆಟೋ ಡ್ರೈವರ್, 7ಗಂಟೆ ಆಗ್ಲಿಕ್ಹತ್ತಾದ್ರೀ, ಲಗೂನ ಬರ್ರೀ ನಿಮ್ಮನ್ನ ಬಸ್ಟಾಪ್ ನಾಗ ಇಳಿಸಿ, ನಾ ಮನೀಗೆ ಹೊಕ್ಕೇನು ಅಂತ ಫೋನ್ ಮಾಡಿದ. ಇನ್ನೂ ನೋಡಲು ಸಾಕಷ್ಟು ಸ್ಥಳಗಳಿತ್ತಾದರೂ.. ನಮಗೂ ಹತ್ತೀ ಇಳಿದು ಸುತ್ತಿ ಸುತ್ತಿ ಆಯಾಸವಾಗಿತ್ತಾದ ಕಾರಣ, ಇನ್ನು ಸಾಕೆನಿಸಿ, ಬೇಗ ಬೇಗ ಆಟೋ ಇರುವಲ್ಲಿಗೆ ಬಂದು ಆಟೋ ಹತ್ತಿ ಕುಳಿತೆವು. ಯಾವ್ದೋ ಸಣ್ಣ ಸಣ್ಣ ಗಲ್ಲಿಗಳಲ್ಲಿ ಸುತ್ತಿ ಕೇವಲ ಐದೇ ನಿಮಿಷಕ್ಕೆ ಬಸ್ಟಾಪ್ ಬಳಿ ತಂದುಬಿಟ್ಟ. ಈಗ ನಾವು ಬೆಂಗಳೂರಿಗೆ ಹೋಗುತ್ತಿರುವ ಬಸ್ ksrtc ಅಲ್ಲದೆ, ಪ್ರೈವೇಟ್ ಕಂಪನಿಯ ac ಸ್ಲೀಪರ್ ಕೋಚ್ ಬಸ್ ಆಗಿದ್ರಿಂದ ksrtc ನಿಲ್ದಾಣದಲ್ಲಿ ಪ್ರವೇಶವಿಲ್ಲದ ಕಾರಣ ಅಲ್ಲೇ ಇನ್ನೊಂದು ಬದಿಯಿದ್ದ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ನಿಲ್ಲುವುದಾಗಿ ಮೆಸೇಜ್ ಬಂತು, ಅಲ್ಲಿಗೆ ಆಟೋದವನೇ ಕರೆದುಕೊಂಡುಬಂದು ಬಿಟ್ಟ. ಬಸ್ ಬರಲು ಇನ್ನೂ ಅರ್ಧ ಗಂಟೆಯಿತ್ತು, ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿದ್ದ ಶಿವನ ದೇವಾಲಯದಲ್ಲಿ ಕುಳಿತೆವು.
ಸಂಜೆಯಷ್ಟೇ ದೋಸೆ ತಿಂದಿದ್ದೇವಾದ ಕಾರಣ ಯಾರಿಗೂ ಬೇರೇನೋ ತಿನ್ನುವ ಮನಸ್ಸಿರಲಿಲ್ಲ. ರಮೇಶ್ ಗೇ ಕಾಫಿ ಬೇಕಿತ್ತು, ಹತ್ತಿರದಲ್ಲಿ ಯಾವುದೇ ಹೋಟೆಲ್ ಇರಲಿಲ್ಲ, ದೂರ ನಡೆದು ಹೋಗಿ ಬರುವ ಉತ್ಸಾಹವಿರಲಿಲ್ಲ,. ಟ್ಯಾಕ್ಸಿ ಸ್ಟ್ಯಾಂಡ್ ನಲ್ಲೆ ಇದ್ದ ನಂದಿನಿ ಪಾರ್ಲರ್ ನಿಂದ ಕೋಲ್ಡ್ ಮಿಲ್ಕ್ ತಂದುಕೊಟ್ರು ರಮೇಶ್, ಅರ್ಧ ಗಂಟೆ ಕಾಯ್ದ ನಂತರ ನಮ್ಮ ಬಸ್ ಬಂದು ನಿಂತಿತು, ಈ ಬಸ್ಸಲ್ಲೂ ಸಹ ಅಕ್ಕಾ _ಭಾವರದ್ದು ಲೋವರ್ ಬರ್ತ್, ನಮ್ಮದು ಅಪ್ಪರ್ ಬರ್ತ್, ಹತ್ತಿ ಲಗೇಜ್ನೆಲ್ಲ ವ್ಯವಸ್ಥಿತವಾಗಿ ಇಟ್ಟು, ಬೆಡ್ ಮೇಲೆ ಬೆಡ್ಶೀಟ್ ಹಾಸಿ ಮಲಗಿದೆವು. ನಾವು ಬೆಂಗಳೂರಿನಿಂದ ಬಾದಾಮಿಗೆ ಬರುವಾಗ ಇದ್ದ ಯಾತ್ರಾ ಉತ್ಸಾಹ ಈಗ ಇರಲಿಲ್ಲ. ಓಡಾಡಿದ ಹಾಗೂ ಸಮಯಕ್ಕೆ ಸರಿಯಾಗಿ ಆಹಾರವಿಲ್ಲದ ಕಾರಣಕ್ಕೋ ಏನೋ ಮಲಗಿದರೆ ಸಾಕು ಅನ್ನಿಸುತ್ತಿತ್ತು. Ac ಯ ತಂಪಿಗೆ ಚಳಿ ಅನ್ನಿಸಿತು ಕೂಡಾ. ಸ್ಮರಣ್ ಅವರ ಅಪ್ಪನ ಹತ್ತಿರ, ಬೆಳಿಗ್ಗೆ ಎಷ್ಟೊತ್ತಿಗೆ ಬರ್ತೀರಿ, ಎಲ್ಲಿ ಇಳ್ಕೊತೀರಿ, ನಾನು ಕರೆದೋಯ್ಯಲು ಬರುವೆ ಅಂತ ಹೇಳ್ತಿದ್ದ, ಯಾವ ಮಾತೂ ನನ್ನ ಕಿವಿಗೆ ಬೀಳಲಿಲ್ಲ, ಅಷ್ಟೊತ್ತಿಗಾಗಲೇ ನನಗೆ ನಿದ್ರಾದೇವಿ ಆವರಿಸಿಬಿಟ್ಟಿದ್ದಳು.
ಬೆಳಿಗ್ಗೆ 5 ಕ್ಕೆಲ್ಲ ನಮ್ಮ್ ಬಸ್ ಬೆಂಗಳೂರಿನ ಸರಹದ್ದಿಗೆ ಆಡಿಯಿಟ್ಟಿತ್ತಾದರೂ ಮೆಜೆಸ್ಟಿಕ್ ತಲುಪಲು ಇನ್ನೂ ಎರಡೂವೆರೆಯಿಂದ ಮೂರುಗಂಟೆಯಾದರೂ ಬೇಕಿತ್ತು. ಅದಾಗಲೇ ಅಷ್ಟೊಂದು ಟ್ರಾಫಿಕ್ ಜಾಮ್ ಇತ್ತು, ರಾಜ್ಯದ ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಬರುವ ಸಾವಿರಾರು ಬಸ್ಸುಗಳು ಅದಾಗಲೇ ಬೆಂಗಳೂರಿನ ರಸ್ತೆಗಿಳಿದು ನಾಮುಂದು ತಾಮುಂದು ಅಂತ ಪೈಪೋಟಿಗಿಳಿದಿದ್ದವು. ನಾವು ಗೊರಗೊಂಟೆಪಾಳ್ಯದಲ್ಲಿಯೇ ಇಳಿಯಲು ನಿರ್ಧರಿಸಿ ಸ್ಮರಣ್ ಗೇ ಕಾಲ್ ಮಾಡಿ ಅಲ್ಲಿಗೇ ಬರಲು ಹೇಳಿದ್ದಾಯ್ತು. ಅಕ್ಕ ಭಾವ ನೇರ ಅವರ ಮನೆಗೇ ಹೇಗುತ್ತೇವೆ .. ಹಾಗಾಗಿ ಮೆಜಿಸ್ಟಿಕ್ ನಲ್ಲೆ ಇಳಿದುಕೊಳ್ತೇವೆ ಅಂದ್ರು. ನಾನು ರಮೇಶ್ ಗೊರಗೊಂಟೆಪಾಳ್ಯದಲ್ಲಿಳಿದು 15 ನಿಮಿಷ ಕಾಯುವಷ್ಟರಲ್ಲಿ ಸ್ಮರಣ್ ಬಂದು ಮೊದಲು ಕೇಳಿದ್ದೆ ಬಸ್ ಕಂಫರ್ಟಬಲ್ ಆಗಿ ಇತ್ತಾ, ಆರಾಮಿದ್ದೀರಾ ಏನೂ ತೊಂದ್ರೆ ಆಗ್ಲಿಲ್ವಾ... ಅಂತ..!! ಮಗನ ಕೇರಿಂಗ್ ಗೇ ಖುಷಿಯಾಯ್ತು 😊 ಯಾತ್ರಾ ವಿಷಯವೇಲ್ಲವನ್ನೂ ಮಾತಾಡ್ತಾ ಮನೆಗೆ ಬರುವಷ್ಟರಲ್ಲಿ ಬೆಳಗಿನ 7 ಗಂಟೆ..!!
ತುಂಬಾ ದಿನಗಳಿಂದ ಬನಶಂಕರಿಯನ್ನು ನೋಡಬೇಕು ಅನ್ನುವ ಆಸೆ ಇಂದು ಪೂರ್ಣವಾಗಿತ್ತು. ಅಕ್ಕ ಅನ್ನಪೂರ್ಣ ಳ ದೆಸೆಯಿಂದ ದೇವಿಯನ್ನು,... ಜಗಪ್ರಸಿದ್ಧ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲನ್ನು ನೋಡುವ ಭಾಗ್ಯ ಬಂದೊದಗಿತ್ತು...
ಮುಗಿಯಿತು... 🙏🙏
✍️ಡಾ: B. N. ಶೈಲಜಾ ರಮೇಶ್
{ ಬಾದಾಮಿ ಎಂಬುದು ಕೇವಲ ಕಲ್ಲುಗಳ ಗುಂಪಲ್ಲ, ಅದೊಂದು ಕನ್ನಡಿಗರ ವೈಭವದ ಗತಕಾಲದ ಜೀವಂತ ಪ್ರತಿರೂಪ. ಚಾಲುಕ್ಯರು ಕಲ್ಲಿನಲ್ಲಿ ಅರಳಿಸಿದ ಈ ಸಾಂಸ್ಕೃತಿಕ ಮಹಾಕಾವ್ಯವು ಇಂದು ಜಾಗತಿಕ ಮಟ್ಟದ ಪ್ರೇಕ್ಷಣೀಯ ತಾಣವಾಗಿ ಹೊರಹೊಮ್ಮಿದೆ. ಈಗಾಗಲೇ ಪಟ್ಟದಕಲ್ಲು ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿದ್ದು, ಐಹೊಳೆ ಮತ್ತು ಬಾದಾಮಿಯೂ ಶೀಘ್ರದಲ್ಲೇ ಆ ಗೌರವಕ್ಕೆ ಪಾತ್ರವಾಗುವ ಹಾದಿಯಲ್ಲಿವೆ. ಈ ಸ್ಮಾರಕಗಳು ಕೇವಲ ಪ್ರವಾಸೋದ್ಯಮದ ಆಸ್ತಿಯಲ್ಲ, ಅವು ಸೃಜನಶೀಲತೆಯ ಉನ್ನತ ಶಿಖರಗಳು. ಈ ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವುದು ಮತ್ತು ಅಲ್ಲಿನ ಮಹತ್ವವನ್ನು ಇಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ.}
ಬಾದಾಮಿಯ ಶಿಲೆಗಳ ಮೇಲೆ ಬಿದ್ದಿರುವ ಪ್ರತಿಯೊಂದು ಉಳಿಪೆಟ್ಟು ನಮ್ಮ ಸಂಸ್ಕೃತಿಯ ಗಟ್ಟಿತನವನ್ನು ಸಾರುತ್ತಿದೆ. ನೂರು ಪುಸ್ತಕಗಳನ್ನು ಓದಿ ಪಡೆಯಲಾಗದ ಜ್ಞಾನ ಮತ್ತು ಅನುಭವವನ್ನು ಬಾದಾಮಿಯ ಒಂದು ಭೇಟಿಯು ನೀಡುತ್ತದೆ.
ಪ್ರವಾಸ ಎನ್ನುವುದು ಕೇವಲ ಭೌಗೋಳಿಕ ದೂರವನ್ನು ಕ್ರಮಿಸುವುದಲ್ಲ, ಅದು ಕಾಲದ ಚಕ್ರವನ್ನು ಹಿಂದೆ ತಿರುಗಿಸಿ ಇತಿಹಾಸದ ಸುವರ್ಣ ಪುಟಗಳನ್ನು ಪ್ರತ್ಯಕ್ಷವಾಗಿ ಕಾಣುವ ಒಂದು ಅದ್ಭುತ ಅನುಭವ. ಭಾರತದ ಸಾಂಸ್ಕೃತಿಕ ನಕಾಶೆಯಲ್ಲಿ ಕರ್ನಾಟಕದ ಕೊಡುಗೆ ಕೇವಲ ವಿಸ್ತಾರವಾದ ಭೂಪ್ರದೇಶಕ್ಕೆ ಸೀಮಿತವಾಗಿಲ್ಲ; ಅದು ಕಲ್ಲಿನಲ್ಲಿ ಅರಳಿದ ಕಲೆ ಮತ್ತು ದಾರ್ಶನಿಕ ಸಿದ್ಧಾಂತಗಳ ನೆಲೆಬೀಡು. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ಮಡಿಲಲ್ಲಿರುವ ಬಾದಾಮಿ, ಭಾರತೀಯ ವಾಸ್ತುಶಿಲ್ಪದ ವಿಕಾಸದ ಹಾದಿಯನ್ನು ಸಾರುವ ಮಹಾನ್ ವಿದ್ಯಾಪೀಠದಂತೆ ಭಾಸವಾಗುತ್ತದೆ.
ಸುಮಾರು 1,500ಕ್ಕೂ ಹೆಚ್ಚು ಗುಹಾಂತರ ವಾಸ್ತುಶಿಲ್ಪಗಳ ತವರೂರು ಭಾರತ. ಬಿಹಾರದ ಬರಾಬರ್ ಗುಹೆಗಳಿಂದ ಹಿಡಿದು ಮಹಾರಾಷ್ಟ್ರದ ಅಜಂತಾ-ಎಲ್ಲೋರದವರೆಗೆ ಹರಡಿರುವ ಈ ಕಲಾ ಪರಂಪರೆಯಲ್ಲಿ, ಬಾದಾಮಿಯು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕ್ರಿ.ಶ. 6 ರಿಂದ 8ನೇ ಶತಮಾನದವರೆಗೆ ದಕ್ಷಿಣ ಭಾರತದ ಅಧಿಪತಿಗಳಾಗಿದ್ದ ಬಾದಾಮಿ ಚಾಲುಕ್ಯರ ಈ ರಾಜಧಾನಿ, ಅಂದು ‘ವಾತಾಪಿ’ ಎಂಬ ಹೆಸರಿನಿಂದ ಜಗತ್ಪ್ರಸಿದ್ಧವಾಗಿತ್ತು. ಚಾಲುಕ್ಯರು ಜಾರಿಗೆ ತಂದ ವಾಸ್ತುಶಿಲ್ಪ ಶೈಲಿಯು ಉತ್ತರ ಭಾರತದ ‘ನಾಗರ’ ಮತ್ತು ದಕ್ಷಿಣದ ‘ದ್ರಾವಿಡ’ ಶೈಲಿಗಳ ಅಪೂರ್ವ ಸಂಗಮವಾಗಿದ್ದು, ಇದನ್ನು ‘ವೇಸರ’ ಶೈಲಿ ಎಂದು ಗುರುತಿಸಲಾಗುತ್ತದೆ.
ʼಇತ್ತೀಚೆಗೆ ನಾನು ಕೈಗೊಂಡ ಬಾದಾಮಿ ಪ್ರವಾಸವು ಕೇವಲ ಕಣ್ಣಿಗೆ ಹಬ್ಬವಾಗಿರದೆ, ನಮ್ಮ ಪೂರ್ವಜರ ತಾಂತ್ರಿಕ ಶಕ್ತಿ ಮತ್ತು ಅಸಾಧಾರಣ ಸೃಜನಶೀಲತೆಯನ್ನು ಅರಿಯುವ ಒಂದು ವೈಚಾರಿಕ ಯಾತ್ರೆಯಾಗಿ ಬದಲಾಯಿತುʼ.
ಬಾದಾಮಿಯ ಪ್ರತಿ ಮಣ್ಣಿನ ಕಣದಲ್ಲೂ ಇತಿಹಾಸ ಮತ್ತು ಪುರಾಣಗಳ ಮಿಶ್ರಣವಿದೆ. ದಂತಕಥೆಯ ಪ್ರಕಾರ, ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ಬಲಿಷ್ಠ ರಾಕ್ಷಸ ಸಹೋದರರು ಅತಿಥಿಗಳನ್ನು ಉಪಾಯದಿಂದ ಕೊಂದು ತಿನ್ನುತ್ತಿದ್ದರು. ಅಗಸ್ತ್ಯ ಮುನಿಗಳು ತಮ್ಮ ತಪೋಬಲದಿಂದ ವಾತಾಪಿಯನ್ನು ಜೀರ್ಣಿಸಿಕೊಂಡು ಈ ರಾಕ್ಷಸ ಸಂಕುಲವನ್ನು ಸಂಹರಿಸಿದ ಪುಣ್ಯಭೂಮಿ ಇದು ಎಂಬುದು ಜನಪದರ ನಂಬಿಕೆ.
ಐತಿಹಾಸಿಕವಾಗಿ, ಕ್ರಿ.ಶ. 543ರಲ್ಲಿ ಒಂದನೇ ಪುಲಕೇಶಿಯು ಇಲ್ಲಿನ ಕೆಂಪು ಮರಳುಗಲ್ಲಿನ ಬೆಟ್ಟಗಳ ನೈಸರ್ಗಿಕ ರಕ್ಷಣೆಯನ್ನು ಅರಿತು ಬಲಿಷ್ಠವಾದ ಕೋಟೆಯನ್ನು ನಿರ್ಮಿಸಿ ಬಾದಾಮಿಯನ್ನು ತನ್ನ ಸಾಮ್ರಾಜ್ಯದ ಕೇಂದ್ರವನ್ನಾಗಿ ಮಾಡಿದನು. ಇಲ್ಲಿನ ಬೆಟ್ಟದ ಶಿಲೆಗಳು ಬಲಿತ ಬಾದಾಮಿ ಹಣ್ಣಿನ ಬಣ್ಣವನ್ನೇ ಹೋಲುವ ಕಾರಣ ಇದಕ್ಕೆ ‘ಬಾದಾಮಿ’ ಎಂಬ ಹೆಸರು ಬಂದಿದೆ. ಬೆಟ್ಟದ ತುದಿಯಲ್ಲಿರುವ ಕೋಟೆಯನ್ನು ಏರುತ್ತಿದ್ದರೆ, ಅಂದು ಚಾಲುಕ್ಯರು ಎಂತಹ ಶತ್ರುಗಳನ್ನೂ ಮೆಟ್ಟಿ ನಿಲ್ಲುವ ರಕ್ಷಣಾ ತಂತ್ರಜ್ಞಾನವನ್ನು ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಇದು ಕೇವಲ ಯುದ್ಧೋತ್ಸಾಹಿಗಳ ನೆಲೆಯಾಗಿರದೆ, ಇಡೀ ದಕ್ಷಿಣ ಪಥವನ್ನು ಆಳಿದ ಇಮ್ಮಡಿ ಪುಲಕೇಶಿಯಂತಹ ಧೀಮಂತ ರಾಜರ ಸಾಹಸಗಾಥೆಗಳಿಗೆ ಸಾಕ್ಷಿಯಾಗಿದೆ.
ಬಾದಾಮಿಯ ಪ್ರವಾಸದ ಪ್ರಮುಖ ಆಕರ್ಷಣೆಯೇ ಇಲ್ಲಿನ ನಾಲ್ಕು ಅಪ್ರತಿಮ ಗುಹಾಂತರ ದೇವಾಲಯಗಳು. ಈ ಗುಹೆಗಳು ಭಾರತೀಯ ರಾಕ್-ಕಟ್(Rock-cut) ವಾಸ್ತುಶಿಲ್ಪದ ಶ್ರೇಷ್ಠ ಹಂತವನ್ನು ಪ್ರತಿನಿಧಿಸುತ್ತವೆ. ಅಜಂತಾ ಅಥವಾ ಎಲ್ಲೋರದ ಗುಹೆಗಳಿಗಿಂತ ಇವು ಭಿನ್ನವಾಗಿವೆ; ಏಕೆಂದರೆ ಇಲ್ಲಿ ಪ್ರತಿ ಗುಹೆಯೂ ಸುಸಜ್ಜಿತವಾದ ‘ಮುಖ ಮಂಟಪ’, ‘ಅರ್ಧ ಮಂಟಪ’ ಮತ್ತು ಪ್ರಶಾಂತವಾದ ಗರ್ಭಗೃಹಗಳನ್ನು ಹೊಂದಿವೆ. ಕೆಳಭಾಗದಲ್ಲಿರುವ ಮೊದಲನೇ ಗುಹೆಯು ಶೈವ ಧರ್ಮಕ್ಕೆ ಅರ್ಪಿತವಾಗಿದ್ದು, ಇಲ್ಲಿನ 18 ಬಾಹುಗಳ ನಟರಾಜನ ಶಿಲ್ಪವು ವಿಶ್ವದ ಕಲಾಪ್ರೇಮಿಗಳನ್ನು ಸೆಳೆಯುತ್ತದೆ. ಈ ಶಿಲ್ಪವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಆ ಹದಿನೆಂಟು ಕೈಗಳು ಭರತನಾಟ್ಯದ ಒಟ್ಟು 81 ವಿಭಿನ್ನ ಭಂಗಿಗಳನ್ನು ಸಂಯೋಜಿಸುತ್ತವೆ ಎಂಬುದು ಅಂದಿನ ಶಿಲ್ಪಿಗಳ ನೃತ್ಯಶಾಸ್ತ್ರದ ಜ್ಞಾನಕ್ಕೆ ನಿದರ್ಶನ. ಇದರೊಂದಿಗೆ ಹರಿಹರ, ಅರ್ಧನಾರೀಶ್ವರ ಮತ್ತು ಮಹಿಷಾಸುರಮರ್ಧಿನಿಯ ಕೆತ್ತನೆಗಳು ಇಲ್ಲಿನ ವೈಭವವನ್ನು ಹೆಚ್ಚಿಸಿವೆ. ಮುಖಮಂಟಪದ ಮೇಲ್ಛಾವಣಿಯಲ್ಲಿ ಕೆತ್ತಲಾಗಿರುವ ನಾಗರಾಜನ ಶಿಲ್ಪವು ಕಲ್ಲು ಹೂವಿನಂತೆ ಅರಳಿದ ಚಾಲುಕ್ಯ ಕಲೆಗಾರಿಕೆಯ ಶೃಂಗವಾಗಿದೆ.
ಮುಂದೆ ಸಾಗಿದಾಗ ಸಿಗುವ ಎರಡನೇ ಮತ್ತು ಮೂರನೇ ಗುಹೆಗಳು ವೈಷ್ಣವ ಧರ್ಮದ ಮೇಲಿನ ಚಾಲುಕ್ಯರ ಅಪಾರ ಶ್ರದ್ಧೆಯನ್ನು ಬಿಂಬಿಸುತ್ತವೆ. ಎರಡನೇ ಗುಹೆಯಲ್ಲಿ ವಿಷ್ಣುವು ‘ತ್ರಿವಿಕ್ರಮ’ ರೂಪದಲ್ಲಿ ಇಡೀ ಬ್ರಹ್ಮಾಂಡವನ್ನೇ ಅಳೆಯುತ್ತಿರುವ ದೃಶ್ಯ ಮತ್ತು ಭೂದೇವಿಯನ್ನು ರಕ್ಷಿಸುತ್ತಿರುವ ‘ವರಾಹ’ನ ಭವ್ಯ ಮೂರ್ತಿಗಳು ಮನೋಜ್ಞವಾಗಿವೆ. ಆದರೆ, ಮೂರನೇ ಗುಹೆಯು ಎಲ್ಲಕ್ಕಿಂತ ದೊಡ್ಡದು ಮತ್ತು ಅತ್ಯಂತ ಸುಂದರವಾದ ಕೆತ್ತನೆಗಳಿಂದ ಕೂಡಿದೆ.
ಕ್ರಿ.ಶ. 578ರಲ್ಲಿ ಮಂಗಳೇಶ ರಾಜನ ಕಾಲದಲ್ಲಿ ನಿರ್ಮಿತವಾದ ಈ ಗುಹೆಯಲ್ಲಿ ವೈಕುಂಠ ವಿಷ್ಣು, ನರಸಿಂಹ ಮತ್ತು ಆದಿಶೇಷನ ಮೇಲೆ ಕುಳಿತಿರುವ ವಿಷ್ಣುವಿನ ಶಿಲ್ಪಗಳು ಕಲ್ಲಿನಲ್ಲಿ ಅರಳಿದ ಜೀವಂತ ರೂಪಗಳಂತೆ ಕಾಣುತ್ತವೆ. ಇಲ್ಲಿನ ಮೇಲ್ಛಾವಣಿಯ ಫಲಕಗಳಲ್ಲಿ ಕುಬೇರ, ಇಂದ್ರ ಮತ್ತು ಸಮುದ್ರ ಮಂಥನದಂತಹ ಪುರಾಣ ಕಥೆಗಳು ಕಲಾತ್ಮಕವಾಗಿ ಚಿತ್ರಿತವಾಗಿವೆ. ನಾಲ್ಕನೇ ಗುಹೆಯು ಜೈನ ಧರ್ಮಕ್ಕೆ ಸಂಬಂಧಿಸಿದ್ದಾಗಿದ್ದು, ಮಹಾವೀರ ಮತ್ತು ಪಾರ್ಶ್ವನಾಥರ ಶಾಂತಿಯುತ ಪ್ರತಿಮೆಗಳು ನಮ್ಮ ಮನಸ್ಸಿನ ಅರಿವನ್ನು ಜಾಗೃತಗೊಳಿಸುತ್ತವೆ. ಇಲ್ಲಿನ ಕಂಬಗಳ ಮೇಲೆ 12ನೇ ಶತಮಾನದ ಕನ್ನಡ ಶಾಸನಗಳಿದ್ದು, ಇದು ಈ ತಾಣದ ನಿರಂತರ ಮಹತ್ವವನ್ನು ಸಾರುತ್ತದೆ.
ಬಾದಾಮಿಯ ಸೌಂದರ್ಯಕ್ಕೆ ಮುಕುಟಪ್ರಾಯವಾದುದು ಅಗಸ್ತ್ಯ ತೀರ್ಥ ಸರೋವರ. ಇದು ಕೇವಲ ಒಂದು ಜಲಮೂಲವಲ್ಲ, ಬದಲಿಗೆ ಚಾಲುಕ್ಯರು ಅಳವಡಿಸಿಕೊಂಡಿದ್ದ ಪ್ರಾಚೀನ ಮಳೆನೀರು ಕೊಯ್ಲು ಪದ್ಧತಿಯ ಅತ್ಯುತ್ತಮ ತಾಂತ್ರಿಕ ಮಾದರಿಯಾಗಿದೆ. ಬೆಟ್ಟದ ಸಾಲುಗಳಿಂದ ಹರಿದು ಬರುವ ಪ್ರತಿ ಹನಿ ಮಳೆನೀರನ್ನೂ ಕೆರೆಯಲ್ಲಿ ಸಂಗ್ರಹಿಸುವ ಈ ವ್ಯವಸ್ಥೆ ಇಂದಿನ ಎಂಜಿನಿಯರ್‌ಗಳಿಗೂ ಮಾದರಿಯಾಗಿದೆ. ಕೆರೆಯ ಪೂರ್ವ ದಂಡೆಯ ಮೇಲೆ ನೆಲೆಸಿರುವ ಭೂತನಾಥ ದೇವಾಲಯ ಸಮೂಹವು ಸೂರ್ಯಾಸ್ತದ ಸಮಯದಲ್ಲಿ ಬಂಗಾರದ ಬಣ್ಣಕ್ಕೆ ತಿರುಗಿ ನೀರಿನ ಮೇಲೆ ಪ್ರತಿಫಲಿಸುವ ದೃಶ್ಯವು ದೈವಿಕ ಅನುಭವ ನೀಡುತ್ತದೆ. ಈ ಪರಿಸರದಲ್ಲಿ ಯಲ್ಲಮ್ಮ ದೇವಾಲಯ, ವಿರೂಪಾಕ್ಷ ದೇವಾಲಯ ಮತ್ತು ಮೇಲೆ ಕಾಣುವ ಮಾಲೆಗಿತ್ತಿ ಶಿವಾಲಯಗಳು ಚಾಲುಕ್ಯರ ವಾಸ್ತುಶಿಲ್ಪದ ವಿವಿಧ ವಿಕಾಸದ ಹಂತಗಳನ್ನು ನಮಗೆ ಪರಿಚಯಿಸುತ್ತವೆ.
ಪ್ರತಿಯೊಬ್ಬ ಕನ್ನಡಿಗನೂ ತನ್ನ ಅಸ್ಮಿತೆಯನ್ನು ಹುಡುಕಲು ಭೇಟಿ ನೀಡಲೇಬೇಕಾದ ಸ್ಮಾರಕವೆಂದರೆ ‘ಕಪ್ಪೆ ಅರಭಟ್ಟನ ಶಾಸನ’. ಬೆಟ್ಟದ ಮೇಲೆ ಕೆತ್ತಲಾಗಿರುವ ಈ 7ನೇ ಶತಮಾನದ ಶಾಸನವು ಕನ್ನಡ ಸಾಹಿತ್ಯದ ಅತ್ಯಂತ ಹಳೆಯ ‘ತ್ರಿಪದಿ’ ಶಾಸನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್…’ ಎಂಬ ಈ ಸಾಲುಗಳು ಕನ್ನಡಿಗರ ಸೌಜನ್ಯ ಮತ್ತು ಶೌರ್ಯದ ನಡುವಿನ ಅದ್ಭುತ ಸಮತೋಲನವನ್ನು ಸಾರುತ್ತವೆ. ಅಂದು ಕಲ್ಲಿನಲ್ಲಿ ಕೆತ್ತಿದ ಈ ಅಕ್ಷರಗಳು ಇಂದಿಗೂ ಸಮಾಜಕ್ಕೆ ಮಾನವೀಯ ಮೌಲ್ಯಗಳ ದಾರಿದೀಪವಾಗಿವೆ. ಇಲ್ಲಿನ ಪ್ರವಾಸವು ಕೇವಲ ಮೌನ ಶಿಲೆಗಳ ವೀಕ್ಷಣೆಯಲ್ಲ, ಅದು ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗಿನ ಅನುಸಂಧಾನ. ಬಾದಾಮಿಯ ಪ್ರವಾಸವು ಕೇವಲ ಇತಿಹಾಸಕ್ಕೆ ಸೀಮಿತವಾಗಿಲ್ಲ; ಇಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿರುವ ಕಪಿಗಳ ದಂಡು ಪ್ರವಾಸಿಗರನ್ನು ಬೆಂಬತ್ತುತ್ತ ಹರಟೆ ಹೊಡೆಯುವ ರೀತಿ ವಿಶಿಷ್ಟ ಮೋಜನ್ನು ನೀಡುತ್ತದೆ.
ಪ್ರವಾಸದ ಸಾರ್ಥಕತೆ ಪೂರ್ಣಗೊಳ್ಳುವುದು ಇಲ್ಲಿನ ಆಹಾರ ಪದ್ಧತಿಯಲ್ಲಿ. ಉತ್ತರ ಕರ್ನಾಟಕದ ಪ್ರಸಿದ್ಧ ಜೋಳದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ ಪಲ್ಯ ಮತ್ತು ಕಡಕ್ ಆಗಿರುವ ಕೆಂಪು ಚಟ್ನಿ ಪುಡಿಯ ರುಚಿಯನ್ನು ಸವಿಯದಿದ್ದರೆ ಬಾದಾಮಿ ಯಾತ್ರೆ ಅಪೂರ್ಣ. ಬಾದಾಮಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್ ವರೆಗಿನ ಚಳಿಗಾಲದ ಅವಧಿ ಅತ್ಯಂತ ಸೂಕ್ತವಾದುದು. ಈ ಸಮಯದಲ್ಲಿ ಪ್ರಶಾಂತವಾದ ಗಾಳಿ ಮತ್ತು ತಿಳಿಯಾದ ಸೂರ್ಯನ ಬೆಳಕು ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.
ಬಾದಾಮಿ ಎಂಬುದು ಕೇವಲ ಕಲ್ಲುಗಳ ಗುಂಪಲ್ಲ; ಅದು ಕನ್ನಡಿಗರ ವೈಭವದ ಗತಕಾಲದ ಜೀವಂತ ಪ್ರತಿರೂಪ. ಚಾಲುಕ್ಯರು ಕಲ್ಲಿನಲ್ಲಿ ಅರಳಿಸಿದ ಈ ಸಾಂಸ್ಕೃತಿಕ ಮಹಾಕಾವ್ಯವು ಇಂದು ಜಾಗತಿಕ ಮಟ್ಟದ ಪ್ರೇಕ್ಷಣೀಯ ತಾಣವಾಗಿ ಹೊರಹೊಮ್ಮಿದೆ. ಈಗಾಗಲೇ ಪಟ್ಟದಕಲ್ಲು ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿದ್ದು, ಐಹೊಳೆ ಮತ್ತು ಬಾದಾಮಿಯೂ ಶೀಘ್ರದಲ್ಲೇ ಆ ಗೌರವಕ್ಕೆ ಪಾತ್ರವಾಗುವ ಹಾದಿಯಲ್ಲಿವೆ. ಈ ಸ್ಮಾರಕಗಳು ಕೇವಲ ಪ್ರವಾಸೋದ್ಯಮದ ಆಸ್ತಿಯಲ್ಲ, ಅವು ಸೃಜನಶೀಲತೆಯ ಉನ್ನತ ಶಿಖರಗಳು. ಈ ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವುದು ಮತ್ತು ಅಲ್ಲಿನ ಮಹತ್ವವನ್ನು ಇಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ.
#ಚುಟುಕು_ಸ್ಪರ್ಧೆ #ರವಿ_ಮನಸು ಜಗಕೆ ನೀಡಿ ಹೊನ್ನ ಬೆಳಕು ಕಳೆವನವನು ತಮದ ಕೊಳಕು.! ಚೈತನ್ಯವನಿತ್ತು ಜನ ಮನಕೆ ಉತ್ತೇಜಿಸುವುದು ರವಿ ಬಯಕೆ.! #ಕವಿ_ಕನಸು ರವಿಗೂ ಮುಟ್ಟಲಾಗದ್ದನ್ನು ಕವಿಗೆ ಕಾಣುವ ಹಂಬಲ.! ಸೃಷ್ಟಿ ಸೊಬಗು ವರ್ಣಿಸಲು ಕವಿಗೆ ಪದಗಳ ಬೆಂಬಲ..! ಶೈಲಜಾ ರಮೇಶ್
#ಚಿತ್ರಕಾವ್ಯ_ಅಭಿಯಾನ_೩೦ #ನಮೋ_ಸಂತ_ಯಮನೂರೇಶ ಪುರದಾಳದಲುದ್ಭವಿಸಿದ ಪುಣ್ಯಪುರುಷ ಅಪಾರ ಭಕ್ತವೃಂದವ ಗೆದ್ದ ಹೃದಯೇಶ ಸಾವಿರದ ತತ್ವ ಪದಗಳ ಮಹಾಜನಕ ಈತನದು ನಿಜನಾಮ ಯಮನೂರೇಶ.!! ಆಧುನಿಕ ತತ್ವ ಪದಗಳ ಹರಿಕಾರ ಸಾವಿರದ ಹಾಡುಗಳ ಸಂತ ಸರದಾರ ಅದ್ವೈತ ಭಾರ್ಗವನೀತ ಸಾರ್ಥಕ ಜೀವ ಈತನೇ ಯಮನೂರೇಶ ಬಿರಾದಾರ ಟೀಕಾತಾತ್ಪರ್ಯ ರಚಿತ ಟೀಕಾಚಾರ್ಯ ಬರೆದನೆಷ್ಟೋ ಮಹಿಮರ ಜೀವನ ಚಾರಿತ್ರ್ಯ ಅಂಕಿತ ನಾಮವದು ಭೀಮಾಶಂಕರ ಯಮನೂರೇಶ ಶರಣ ಸಂತತಿಯ ಪಾವಿತ್ರ್ಯ ತಿದ್ದಿದರು ತತ್ವಪದದಲೇ ಜಗವ ಸಾಹಿತ್ಯ ಕ್ಷೇತ್ರದಲ್ಲಿ ಕಾಣುತ ಭವವ ಗುರುಗೀತಾಮೃತದಲಿಟ್ಟು ಜೀವನಸಾರ ಭವ್ಯ ಗೊಳಿಸಿದರೆಲ್ಲ ಶರಣರ ಭಾವ ದೇಸಿಮಾತಿನ ಧಾಟಿಯಲೇ ಪದ ಭಂಡಾರ ಕಲಿಸುತೆಲ್ಲರಿಗೆ ತಾನೂ ಕಲಿತ ಗುರುವರ್ಯ ಪದಗಟ್ಟಿನಲೇ ಅಧ್ಯಾತ್ಮ ಬೆರೆಸಿ ರಚಿಸಿದ ಅಗಣಿತ ಸಂತಶರಣ ಮನದ ತಾತ್ಪರ್ಯ ಅಸ್ತಮವಾದರು ಪುರದಾಳದ ರವಿ ಕಣ್ಣೀರಿಟ್ಟಿಹಳು ಅಗಲಿಕೆಗೆ ಭುವಿ ಶಿವನಡಿಯಲಿ ಲೀನವಾದ ಶಿವಾಚಾರ್ಯ ಮತ್ತೊಮ್ಮೆ ಉದ್ಭವಿಸಿ ಬನ್ನಿ ಸಂತ ಕವಿ ಡಾ: B.N.ಶೈಲಜಾ ರಮೇಶ್
Comments
Post a Comment