315 ಲೇಖನ (ಬರಗಾಲದಲಿ ಬರಡಾಯಿತೆ ಬದುಕು ?)

#ಲೇಖನ

#ಬರಗಾಲದಲ್ಲಿ_ಬರಡಾಯಿತೇ_ಬದುಕು

           #ದುರ್ಭಿಕ್ಷದಲ್ಲಿ_ಅಧಿಕಮಾಸ ಅನ್ನೋದು ನಾಳ್ನುಡಿ.  ಮೊದಲೇ... ಮಳೆ ಬೆಳೆ ಇಲ್ಲದೆ, ಊಟಕ್ಕೂ ಇಲ್ಲದೆ ತಲ್ಲಣಿಸಿ ಹೇಗಪ್ಪಾ ಜೀವನ  ಸಾಗಿಸೋದು ಅನ್ನುವ ಪರಿಸ್ಥಿತಿಯಲ್ಲಿ , ಅಧಿಕಮಾಸ ಬೇರೆ ಬಂದ್ರೆ ಹೇಗಿರುತ್ತೆ ಆ ಸಮಯದ ಮನಸ್ಥಿತಿ ಅನ್ನುವ ಅರ್ಥ ಇರಬಹುದು ಈ ನಾಳ್ನುಡಿಗೆ.
        ನಿಜ ಅಲ್ವಾ.?.. ಪ್ರತಿದಿನ ದಿನ ದೂಡೋದೇ ಕಷ್ಟ ಅನ್ನಿಸ್ತಿರುವಾಗ... ಧುತ್ತ0ತ... ಮತ್ತೊಂದು ತಿಂಗಳು ಎದುರು ನಿಂತರೆ.. ಹೇಗಪ್ಪ ನಿಭಾಯಿಸೋದು?      ಆಗ ಈ ಚಿಂತನೆ ತಪ್ಪು ಅನ್ನಿಸಲ್ಲ.  
        ಇನ್ನೊಂದು ರೀತಿ ವಿಶ್ಲೇಷಿಸಿದರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಧಿಕ ಮಾಸಕ್ಕೆ ವಿಶೇಷ ಪ್ರಾಮುಖ್ಯತೆ. ಅಧಿಕಮಾಸದಲ್ಲಿ ಧಾರ್ಮಿಕ ಕಾರ್ಯಗಳು, ದಾನಧರ್ಮಗಳನ್ನ ಮಾಡಿದರೆ ಅಧಿಕಫಲ.  ಜಪತಪ ಹೋಮ ಹವನಗಳನ್ನ ಮಾಡಿದರೆ ದುಪ್ಪಟ್ಟು ಪುಣ್ಯಪ್ರಾಪ್ತಿ ಅಂತ ಹೇಳ್ತಾರೆ ನಮ್ಮ ಹಿರಿಯರು. ಅಲ್ಲದೆ ಇದನ್ನ ಅವರುಗಳು ಚಾಚೂ ತಪ್ಪದೆ ಪಾಲಿಸ್ಕೊಂಡು ಬಂದಿದ್ದಾರೆ ಕೂಡ.. ಮೊದಲೇ ತಿನ್ನೋದಕ್ಕೂ ಇಲ್ಲದೆ ದುರ್ಭಿಕ್ಷ, ಅದರಲ್ಲಿ ಇಂತಹ ಅಧಿಕಮಾಸ ಬಂದ್ರೆ,  ಈ ಧಾರ್ಮಿಕ ವಿಧಿವಿಧಾನಗಳನ್ನ ಹೇಗೆ ಆಚರಿಸೋದು? ಅದರ ಖರ್ಚು ನಿಭಾಯಿಸುವುದು ಹೇಗೆ?... ಆಗಲೇ ಈ ನಾಳ್ನುಡಿ ಹುಟ್ಟಿರಬೇಕು.! ಈಗಲೂ  ಕಷ್ಟವಿದ್ದಾಗ ಏನಾದರೂ ಖರ್ಚುವೆಚ್ಚಗಳು ದಿಢೀರ್ ಅಂತ ಬಂದಾಗ ಥಟ್ಟನೆ ನೆನಪಾಗೋದು ಈ ನಾಳ್ನುಡಿಯೇ😊

            ಈಗಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಮೊದಲೇ... ಅತಿವೃಷ್ಟಿ - ಅನಾವೃಷ್ಠಿಯಿಂದ, ಪ್ರಾಕೃತಿಕ ಸಮಸ್ಯೆಯಿಂದ ಜನಜೀವನ ಅಸ್ತವ್ಯಸ್ತವಾಗಿರುವ ಈ ಸಮಯದಲ್ಲಿ ಕೊರೊನಾ ಮಹಾಮಾರಿಯ ಅಟ್ಯಾಕ್ ನಮ್ಮೆಲ್ಲರ ಧೃತಿಗೆಡಿಸಿದೆ.  ಒಂದಷ್ಟು ತಿಂಗಳು ಲಾಕ್ಡೌನ್ ನಿಂದ ಮನೆಯಲ್ಲೇ ಇದ್ದದ್ದಾಯ್ತು, ಈ ಸಮಯ ಒಂದು ವರ್ಗದ ಜನರಿಗೆ ಯಾವುದೇ ವ್ಯತ್ಯಾಸ ಕಾಣದಿದ್ದರೂ... ತುಂಬಾ ಹೊಡೆತ ಬಿದ್ದದ್ದು ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ, ಸಣ್ಣ ವ್ಯಾಪಾರಿಗಳಿಗೆ, ಜೊತೆಗೆ ಬೃಹತ್ ಉದ್ಯಮಕ್ಕೂ ಕೂಡ, ಆ ಉದ್ಯಮಗಳನ್ನ ನಂಬಿ ಜೀವನ ನಡೆಸುತ್ತಿದ್ದ ಜನತೆ ಕೂಡ.  ಬೃಹತ್ ಜನಸಂಖ್ಯೆ ಹೊಂದಿರುವ ಇಷ್ಟು ದೊಡ್ಡ ದೇಶಕ್ಕೆ, ಸರ್ಕಾರ ತಾನೇ ಎಷ್ಟು ದಿನ ಅಂತ ಸಹಾಯ ಮಾಡಲಾದೀತು? ಒಂದಷ್ಟು ದಿನ ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ದು ನಿಜ.  ಸೋಂಕಿತರ ದುಬಾರಿ ವೈದ್ಯಕೀಯ ವೆಚ್ಚ ಭರಿಸಲು, ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆ ಮಾಡಲು ಸರ್ಕಾರಕ್ಕೂ ಕಷ್ಟವಾಗಿರಬಹುದು.  ಬಿದ್ದುಹೋದ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ... ಜನಜೀವನವೇ ಆಗಲಿ, ಸರ್ಕಾರವೇ ಆಗಲಿ ಎಚ್ಚೆತ್ತುಕೊಳ್ಳುವುದು ಕಷ್ಟವೇ ಸರಿ.  ಈಗೀಗಂತೂ ಸುಧಾರಿಸುವತ್ತ ಹೆಜ್ಜೆಯಿಟ್ಟು ತಂತಮ್ಮ ಕೆಲಸಕಾರ್ಯಗಳಲ್ಲಿ ಭಾಗಿಯಾದಷ್ಟೂ... ಕೋವಿಡ್ ಜನಸಮೂದಾಯದಲ್ಲಿ ಹರಡಿ ಅಲ್ಲೋಲಕಲ್ಲೋಲ ಉಂಟುಮಾಡಿದೆ.  ಅದೆಷ್ಟು ವ್ಯಾಪಾರ ವ್ಯವಹಾರಗಳು ನಷ್ಟ.!😔  ಮುಖ್ಯವಾಗಿ ಅತೀ ಹೆಚ್ಚು ಹೊಡೆತ ಬಿದ್ದದ್ದು ರೈತರಿಗೆ, ಕೂಲಿ ಕಾರ್ಮಿಕರಿಗೆ, ಹೋಟೆಲ್ ಉದ್ಯಮದವರಿಗೆ, ಹಾಗೂ ಇವುಗಳಿಗೆ ಪೂರಕವಾಗಿ ಕೆಲಸಮಾಡುತ್ತಿದ್ದ ಜನರಿಗೆ.

        ಉತ್ತಮ ಫಸಲು ಕಂಡರೂ, ಸಮರ್ಪಕವಾಗಿ ವಿತರಣೆ ಸಾಧ್ಯವಾಗದೇ, ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾನೆ ರೈತ.  ಜೊತೆಗೆ ದಲ್ಲಾಳಿಗಳ ಹಾವಳಿಯಿಂದಾಗಿ ಫಲಕ್ಕೆ ಸರಿಯಾದ ಪ್ರತಿಫಲವನ್ನು ಕಾಣದೆ ಕಂಗಾಲಾಗಿದ್ದಾನೆ.  ಇನ್ನು ದುಪ್ಪಟ್ಟು ಬೆಲೆ ಕೊಟ್ಟು ಅಗತ್ಯವಸ್ತುಗಳನ್ನು ಖರೀದಿ ಮಾಡಲು ಸಾಮಾನ್ಯಜನ ಒದ್ದಾಡುತ್ತಿದ್ದಾರೆ. ಇನ್ನು ಕೂಲಿ ಕಾರ್ಮಿಕರು, ಕೊರೊನಾ ಹಾವಳಿಯಿಂದಾಗಿ ಕೆಲಸ ಕಾರ್ಯಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಕೆಲಸವೇ ಇಲ್ಲದೆ ಉದ್ಯೋಗಸ್ಥರಿಲ್ಲ.. ಜನರಿಲ್ಲದೆ ಹೋಟೆಲ್ ಇಲ್ಲ ಅನ್ನುವ ಪರಿಸ್ಥಿತಿಯಲ್ಲಿ ಹೋಟೆಲ್ ಉದ್ಯಮವೂ ಸೊರಗಿದೆ.  ಇನ್ನು ತುಂಬಾ ಜನ ಸೇರುವ ಫ್ಯಾಕ್ಟರಿ, ಮಳಿಗೆಗಳಂತೂ ಹೆಚ್ಚುಕಡಿಮೆ ಮುಚ್ಛೇ ಬಿಟ್ಟಿದೆ.  ಜೀವನವೇ ದುಸ್ತರವಾಗಿರುವ ಈ ಸಮಯದಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರಿದೆ. ಪ್ರತಿದಿನವೂ ಸಾವಿರಾರು ಜನ ಸೋಂಕಿತರ ಹೆಚ್ಚಳ, ಹಾಗೆಯೇ ಚಿಕಿತ್ಸೆ ಫಲಕಾರಿಯಾಗದೆ, ಸಮರ್ಪಕ ಚಿಕಿತ್ಸೆ ದೊರೆಯದೆ ಸಾವಿನ ಹೆಚ್ಚಳ, ಇದರ ಮದ್ಯೆ ವ್ಯವಸ್ಥಿತ ವೈದ್ಯಕೀಯ ವ್ಯವಸ್ಥೆಯ ವಿಫಲ, ಜನಜೀವನವನ್ನು ಮತ್ತಷ್ಟು ಕಂಗೆಡಿಸಿದೆ.

#ಮನೆಯಲ್ಲೇ_ಇದ್ದರೆ_ಜೀವನವಿಲ್ಲ_ದುಡಿಯಲು_ಹೊರಗೆ_ಹೋದರೆ_ಜೀವವಿಲ್ಲ ಅನ್ನುವ ಪರಿಸ್ಥಿತಿಯಲ್ಲಿ ಜನಸಮೂದಾಯವಿದೆ. ಹೊರಗೆ ದುಡಿಯಲು ಹೋಗಬೇಕಾದರೆ ಅಗತ್ಯ ಜೀವರಕ್ಷಕ ಸಾಧನಗಳು ಬೇಕೇಬೇಕು. ಕೈಗವಸು, ಮುಖಗವಸು, ಗಂಟೆಗೊಮ್ಮೆ ಕೈತೊಳೆಯಲು ಸೋಪು,ನೀರು.  ಸ್ವಲ್ಪ ಅನುಕೂಲಸ್ಥರಾದರೆ ಸ್ಯಾನಿಟೈಸರ್, PPE ಕಿಟ್, ಹೀಗೇ...  ಕೆಲವು ಖಾಸಗಿ ಕಂಪೆನಿಗಳಲ್ಲಂತೂ  ಅರ್ಧ ಸಂಬಳಕ್ಕೆ  9 ರಿಂದ 10 ಗಂಟೆ ದುಡಿವ ಪರಿಸ್ಥಿತಿ ಜನರದ್ದು.  ಇಂತಹ ವಿಷಮ  ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳಿಗೆ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ದೌರ್ಭಾಗ್ಯ ನಮ್ಮದು😔  ಇದೊಂಥರಾ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವ ಗಾದೆಯನ್ನು ನೆನಪಿಸುತ್ತೆ. 
ಇದು ಇಂದಿನ ಬರಗಾಲದಲ್ಲಿ ಬರಡಾದ ಬದುಕು... ಇದರಿಂದ ಎಂದಿಗೆ ಮುಕ್ತಿಯೋ ಕಾಣೆ.!😔 
ಇಂತಹ ಸನ್ನಿವೇಶದಲ್ಲಿ ತುತ್ತನ್ನಕ್ಕೂ ಹೋರಾಟ ಮಾಡುತ್ತಿರುವ ತೀರಾ ಬಡವರ ಪಾಡೇನು.?
     ಅಂಥವರನ್ನ ನೆನೆದು, ಚಿತ್ರಕ್ಕೆ ಪೂರಕವಾಗುವ ಆಧುನಿಕ ವಚನ..... ನಿಮಗಾಗಿ😊

ಉಳ್ಳವರು ಉತ್ತಮ ಮಾಸ್ಕ್ ಧರಿಸುವರು
ನಾನೇನು ಧರಿಸಲಯ್ಯಾ ಬಡವನು.!
ಎನಗೆ ಎಲೆಯೇ ಮಾಸ್ಕ್
ನಾರೇ ಅದ ಕಟ್ಟಲು ದಾರ
ಒಲೆಯ ಬೂದಿಯೇ..
 ಕೈತೊಳೆವ ಸ್ಯಾನಿಟೈಸರ್ ಅಯ್ಯಾ.!
ನೀವಿತ್ತ ತುತ್ತೇ ಮೃಷ್ಟಾನ್ನ.!
ಊರಾಚೆಯ ಮಂಟಪದಲೇ ಅಸನವಸನ.!
ದಾನಿಗಳ ನೆರವಿಂದಲೇ ಕಾರ್ಯಸಾಧನ
ದೇವಾ ನೀನಿಟ್ಟಂತೆ ನಾನಿರುವೆನಯ್ಯಾ... ಶ್ರೀಶೈಲನಾಥೇಶ್ವರ...

       ✍️ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ