306 ಅಡಿಗಡಿಗೆ ಕಾಡುವ ನೆನಪುಗಳೇ



ಶೀರ್ಷಿಕೆ : 

ಅಡಿಗಡಿಗೆ ಕಾಡುವ ನೆನಪುಗಳೇ
***************************

ಅಡಿಗಡಿಗೆ ಕಾಡುವ ನೆನಪುಗಳೇ
ವಿರಮಿಸಿ ಸ್ವಲ್ಪ ಸಮಯ
ನೆನಪಿನ ಬೇಗೆಯಲಿ ಬೆಂದಿರುವೆ
ಸಾವರಿಸಿಕೊಳ್ಳುವೆ ಭ್ರಮೆಯ

ಚಂದಿರನ ಕಂಡ ಅಲೆಗಳಂತೆ
ಅಪ್ಪಳಿಸುವಿರೇಕೆ ಮನದ ದಡಕೆ?
ದೂರದಲ್ಲೆಲ್ಲೋ ಇರುವನವನು
ಹೊಯ್ದಾಟದ ಭ್ರಾಂತಿಯೇಕೆ.?

ಬಿಕೋ ಎನುತಿದೆ ಮನದ ಮನೆಯು
ಬಣಗುಟ್ಟುತ್ತಿದೆ ಮೌನ ತುಂಬಿದೆದೆಯು
ನೆನಪ ಮೂಟೆ ಹೊತ್ತು ತಂದು
ಕಾಡುವಿರಿ ಏಕೆ ಹೀಗೆ ಮನವನಿಂದು

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ತಾಕಿತೇಕೆ ಪ್ರೇಮ ಸುಧೆಯು..?
ಬತ್ತಿದ ಕನಸು ಕಂಗಳಲ್ಲಿ
ಬಿತ್ತಿದಿರೇಕೆ ನೆನಪ ಬೆಳೆಯು

ಭಾವ ಬದುಕಿಗೆ ಬೆಂಕಿಯಿಟ್ಟು
ಸುಡುವಿರೇಕೆ ಮನದ ಶಾಂತಿ
ಸುಕ್ಕುಗಟ್ಟಿದೀ ಬರಡು ಬದುಕ
ಹಿಂಡುವಿರೇಕೆ ಮನವ ಹೊಕ್ಕಿ

ತಾಳಿ ನಿಲ್ಲಿ ಅಲ್ಲೇ ದೂರ ದೂರ
ಮರೆಯಬೇಕಿದೆ ಎಲ್ಲವನ್ನೂ
ನಸುನಗೆಯಲೇ ಮೋಡಿ ಹಾಕಿ
ಮನದಲಿ ಮಡುವುಗಟ್ಟಿದ ನೋವನು

ಮನದ ಮೂಲೆಯಲಿ ಬೀಡುಬಿಟ್ಟು
ಸವಿನೆನಪಿನ ಮುಖವಾಡ ಹೊತ್ತು
ಕನಸಿಗೇ ಲಗ್ಗೆ ಇಟ್ಟು ನೆನಪಾಗಿ ಕಾಡುವೆ
ಇರು ಒಂದರೆಗಳಿಗೆ ಮರೆತೆಲ್ಲ ಬದುಕುವೆ

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ