280 ತಂಗಾಳಿಯ_ತಂಪಿನಲಿ_ಸಿಹಿಗನಸು_ಕಾಣುತಲಿ

#ಚಿತ್ರಕಾವ್ಯ_ಅಭಿಯಾನ_೨೮

#ತಂಗಾಳಿಯ_ತಂಪಿನಲಿ_ಸಿಹಿಗನಸು_ಕಾಣುತಲಿ

ಇಳಿ ಸಂಜೆಯ ಈ ತಂಪಿನಾ ಸಮಯ
ಮನದಲಿ ನಿಂತ ನಿನ್ನ ನೆನೆಯುತಿರುವೆ ಇನಿಯ
ನೆನೆದೊಡನೆ ಏನೋ ಸುಖ ತನುವಲ್ಲಿ ಕಂಪನ
ಹೊಸಬಗೆಯ ಅನುಬಂಧ ತಂದ ರೋಮಾಂಚನ

ಆಹ್ಲಾದಕರ ಈ ಮುಸ್ಸಂಜೆ ನಿನ್ನೊಲವ ಗಾನ
ಅನುರಣಿಸಿ ಎಲ್ಲೆಡೆ ನುಡಿಸಿದೆ ತೋ0ತನನ
ಮನಸೆಳೆವ ಆ ಮೋಹಕ ನಗೆಯ ನೆನಪಲ್ಲಿ
ತಂಗಾಳಿಯ ತಂಪಿನಲಿ ಸಿಹಿಗನಸು ಕಾಣುತಲಿ

ಆಗಸದ ಬೆಳ್ಮುಗಿಲಲ್ಲಿ ತೇಲಿ ಹೋದಂತೆ ಭಾಸ
ಕೈಗೆಟುಕಿದಂತೆ ಕಂಡೆ ಚಂದ್ರಮನ ಮಂದಹಾಸ
ಕಂಡ ಕನಸನೆಲ್ಲ ನನಸಾಗಿಸುವ ಬಯಕೆಯೀಗ
ನೀನಿಲ್ಲದೇ ಸಗ್ಗದಲೂ ಸೊಗವಿಲ್ಲ ಬಾರೋ ಬೇಗ

ಉಕ್ಕಿ ಹತಿಯುತ್ತಿದೆ ಮನದಲ್ಲಿ ಪ್ರೀತಿ ಚಿಲುಮೆ
ಅನುರಾಗದಾನಂದ ಹೊತ್ತು ತಂದ ನಿನ್ನೊಲುಮೆ
ಜುಳುಜುಳನೆ ಹರಿದಿದೆ ನದಿಯಂತೆ ನಿನ್ನೆಡೆಗೆ
ನಿನ್ನೊಡಲ ಮಡಿಲಲ್ಲಿ ಲೀನವಾಗುವ ಬಯಕೆಗೆ

        ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ