ದೇವಕಿಯ ಅಳಲು
ದೇವಕಿಯ ಅಳಲು
****************
ಬರಿದಾದ ಮಡಿಲು ಹೆತ್ತೊಟ್ಟೆಯ ಅಳಲು
ಯಾರಿಗ್ಹೇಳಲಿ ಸಂಕಟ ಬರೀ ನೋವೇ ಅಕಟಕಟಾ!
ಹೇಳಲಷ್ಟೇ ಅಷ್ಟಪುತ್ರವತಿ.! ಮಾಡಿಲಲ್ಲಾಡದ ದುರ್ಗತಿ.!
ಯಾರಿಗೂ ಬರದಿರಲಿಂಥ ನೋವು ಇದಕ್ಕಿಂತ ಮಿಗಿಲು ಸಾವು
ನನ್ನದೇನಪರಾಧವಿತ್ತು? ವಸುದೇವನ ಮಾಡದಿಯಾದದ್ದು
ವಿಜೃಂಭಣೆಯಿಂದ ನಡೆಸಿದನಣ್ಣ ವಿವಾಹ
ರಾಜಬೀದಿಯಲ್ಲಿ ಮೆರವಣಿಗೆ ಮೇಳೈಸಿತ್ತು ದೇವಲೋಕ ಧರೆಗೆ
ಕಾದಿತ್ತು ವಿಷಾದ..!! ಅಶರೀರವಾಣಿಯದ್ದೇ ಪ್ರಮಾದ.!
ಎನ್ನಷ್ಟಮ ಗರ್ಭಸಂಜಾತ ಅನ್ನ ಕಂಸನ ವಧಾನಿಮಿತ್ತ
ಧರೆಗಿಳಿದು ಬರುವನಂತೆ ಅದೇ ಎನ್ನಣ್ಣಗೆ ಚಿಂತೆ..!!
ಅದಾವ ದೈವದ ಶಾಪ ಕಾಡಿತ್ತೀಗೆಮ್ಮನು ಪಾಪ..!!
ನವವಿವಾಹಿತ ವಧು ನಾನು ಸೆರೆಯಲ್ಲಿಟ್ಟನಣ್ಣ ತಾನು
ಹೆತ್ತ ಒಂದೊಂದೂ ಮಕ್ಕಳನ್ನು ಕೊಂದುಬಿಟ್ಟ ಕಂಸ ತಾನು
ಹೆತ್ತೊಟ್ಟೆಗೆ ಕಿಚ್ಚನಿಟ್ಟು ಮೆರೆದಿದ್ದನವ ಸಂಭ್ರಮಪಟ್ಟು
ಕರುಳಬಳ್ಳಿಯ ಕಡಿದು ಹೇಗಿರಲಿ ನಾ ಉಸಿರ್ಹಿಡಿದು
ಕಾಡಿಬೇಡಿದರೂ ಕೇಳದಾದ ಅಹಂಕಾರದಲಿ ಕುರುಡಾದ
ಮತ್ತೆ ಹೊತ್ತಿದ್ದೆ ಬಸಿರು ಭವಿಷ್ಯವ ನೆನೆದು ನಿಟ್ಟುಸಿರು
ರಾಜಾ ಕಂಸನಿಗೆ ದುಃಸ್ವಪ್ನವಾದ ನನ್ನ ಅಷ್ಟಮಗರ್ಭ
ಭಯವಿಹ್ವಲ.! ಮುಂದೆಂತೊದಗುವುದೋ ಸಂದರ್ಭ
ಮೊರೆಯಿಟ್ಟೆ ದೈವಕೆ ಇದನ್ಹೇಗಾದರೂ ಉಳಿಸು ದೇವ
ಕಿವಿಗೊಟ್ಟನೆನ್ನ ಮೊರೆಗೆ ಅವತರಿಸಿ ಬಂದ ಧರೆಗೆ
ದೇವನಾಣತಿಗೆಲ್ಲ ಸ್ಥಬ್ದ ಬಂಧೀಕಾನೆ ನಿಶ್ಯಬ್ದ..!!
ಆವರಿಸೆಲ್ಲೆಲ್ಲೂ ಮಾಯೆ ಗಾಢ ನಿದಿರೆಯ ಛಾಯೆ.!
ಆ ದೇವ ಕರುಣೆಯ ಕಡಲು ತುಂಬಿತ್ತೆನ್ನ ತಾಯ್ಮಡಿಲು..!!
ಆದರೇನು ಎಲ್ಲವೂ ಕ್ಷಣಿಕ ಕಂದನ ಕೊಂದಾನೆಂಬ ನಡುಕ
ಮಣಿದು ಆ ದೇವನಾಣತಿಗೆ ಕಂದನನ್ನಿಟ್ಟಾಯ್ತು ಯಶೋಧೆ ಮಡಿಲಿಗೆ
ಮಡಿಲಲಿ ಕಂದನಿಲ್ಲದೇ ಮೌನ ಸುರಕ್ಷೆಯಲಿಹನೆಂಬ ಸಮಾಧಾನ
ಅಷ್ಟಪುತ್ರರನ್ನಡೆದ ಪುಣ್ಯವತಿ ಕಣ್ಣೆದುರಿಗಿಲ್ಲ ಸಂತತಿ
ಹೇಗಿರಬಹುದೋ ಕಂದ ಚಂದವಿರಬಹುದು ಮುಖಾರವಿಂದ
ಅಳುತ್ತಿರಬಹುದೇನೋ ಹಸಿದು! ಎಂದರಿತು ಮನ ಮುದುಡುತ್ತದೆ ಮಿಡಿದು
ಜೋಗುಳವಾಡುವ ಭಾಗ್ಯ ಇಲ್ಲವಾಯ್ತೆನಗೆಂತಹ ದೌರ್ಭಾಗ್ಯ.!
ಕಂದನ ಬಾಲಲೀಲೆಯ ಸೊಬಗು ಕಾಣಲಾಗಳಿಲ್ಲೆಂಬ ಕೊರಗು.!
ಮಾಡಿಲೊಳಿತ್ತು ಮಲಗಿಸಿ ಸವಿಲಾಲಿ ಹಾಡ ಕೇಳಿಸಿ
ಬಾನಂಗಳದ ಚಂದಿರನ್ನ ತೋರಿಸಿ ಮುದ್ದು ಮಾಡಿ ಉಣಿಸಿ
ತೊಡರಿ ಬೀಳುವ ಅಂಬೆಗಾಲ ನಡಿಗೆ
ಕಣ್ತುಂಬಿಕೊಳ್ಳುವ ಆ ರಸಘಳಿಗೆ ಇಲ್ಲವಾಯ್ತೆನ್ನ ಪಾಲಿಗೆ
ಹದವಾದ ಬಿಸಿನೀರೆರೆದು ಮಜ್ಜನವ ಮಾಡಿಸಿ
ಜರತಾರಿ ಪೀತಾಂಬರವ ನಡುವಿಗುಡಿಸಿ
ಹೊಳೆವ ಚಂದಾದಾಭರಣಗಳಿಂದಲಂಕರಿಸಿ
ದೃಷ್ಟಿ ತಾಕದಿರಲೆಂದು ಬೊಟ್ಟನಿರಿಸಿ
ಮಮತೆಯ ವಾತ್ಸಲ್ಯಾಮೃತ ಪಾನ ಜೊತೆಗೆ ಸವಿಗಾನ
ತುತ್ತಿಗೊಂದೊಂದು ಕಥನ ಮರೆತು ಮೈಮನ
ತೊದಲ್ನುಡಿಯ ಅಮ್ಮಾ ಎಂಬ ಕರೆಗೆ, ಬೆರಗಾಗಿ ನಿಲ್ಲುವ ಪರಿಗೆ
ವಂಚನೆಯೆಕಾಯ್ತೋ ಅದುಷ್ಟವಿಲ್ಲವೆನಗೆ..!!
ಹೇ ಯಶೋಧೆ ನೀನೆಂತಹ ಭಾಗ್ಯವಂತೆ..!!
ಜಗದೊದ್ಧಾರಕನನ್ನೇ ಲಾಲಿಸುವ ಪುಣ್ಯವಂತೆ.!!
ನನಗಿಲ್ಲದ ಮಾತೃವಾತ್ಸಲ್ಯದ ಸೌಭಾಗ್ಯ ನಿನಗೆ.!
ಈ ಪರಿಯ ಭಾಗ್ಯವೆಂದೋದಗುವುದೋ ಎನಗೆ.
ಶೈಲೂ.....
Comments
Post a Comment