ಮಾತೆಯ.ಮುದ್ದು ಕಂದ

ಮಾತೆಯ.ಮುದ್ದು ಕಂದ
********************

ಹಾಯಾಗಿ ಮಲಗಿದೆಯ ಹೇ ಬಾಲ ಗೋಪಾಲ
ದಣಿವಾಯಿತೇ ಸಲಹಿ ಮೂಜಗದ ಪಾಲ
ಹೇಗರಿಯಲಿ ಹೇಳು ನಿನ್ನ ಮಾಯದ ಜಾಲ
ನೀನಲ್ಲವೇ ಯಶೋದೆಯ ಮುದ್ದು ಕಂದ ಬಾಲ

ಯೋಗನಿದ್ರೆಯಲಿ ಅರಿಯುತಿರಬಹುದೇ ಜಗದಳಲು
ನಿದಿರೆಯಲೂ ಕನವರಿಕೆ ಮನುಜನ ಸಂಕಷ್ಟಗಳು
ತಲ್ಲಣಿಸಸಿರು ಕಂದಾ ಜಗದನೀತಿಯೇ ಹೀಗಿರಲು
ಭೋಗ ಮೋಹದ ಪರಾಕಾಷ್ಠೆಯಲಿ ಜನರಿರಲು

ಬಿಡು ಬಿಡು ಗೋಪಾಲ ಈ ಜನರ ಗೊಡವೆಯನು
ಕಾಣಲು ಕಾದಿರುವೆ ಕಂದಾ ನಿನ್ನ ಬಾಲ ಲೀಲೆಯನು
ಕಡೆದಿಟ್ಟಿರುವೆ ಉಣಲೇಳು ನೆಲುವ ತುಂಬ ಬೆಣ್ಣೆಯನು
ಕಾಯಿಸಿ ಅಣಿ ಮಾಡಿಟ್ಟಿರುವೆ ಧೇನುವಿನ ನೊರೆ ಹಾಲನ್ನು

ಹೊರಗಲ್ಲಿ ಕಾದಿಹರು ನಿನ್ನೊಡನಾಡಲು ಗೋಪರು
ಹಾಲು ತುಂಬಿದ ಕೊಡವ ಹೊತ್ತು ನಿಂತ ಗೋಪಿಕೆಯರು
ಕಾಯುತಿವೇ ಗೋವುಗಳು ನಿನ್ನೊಡನಾಟದ ಸುಖಕೆ
ಏಳೋ ಕೃಷ್ಣಯ್ಯ ಅಲಂಕರಿಸುವೆ ನಿನ್ನ ಮುಖಕೆ

ಯಮುನಾ ತೀರದಲ್ಲಿ ಕಾಯುತಿಹಳಂತೆ  ರಾಧೇ
ಮೊಗೆಮೊಗೆದು ಅರ್ಪಿಸಲು  ಅಮೃತಮಯ ಒಲವ ಸುಧೆ
ನೀನಿಲ್ಲದೇ ನವಿಲು ನಿಂತಿಹುದಂತೆ ನರ್ತಿಸದೆ..!!
ಸಕಲರಿಗೆ ಬದುಕೀಯಲು ಕೃಷ್ಣಾ ನೀನೆದ್ದು ಬರಬಾರದೆ?

ಎಷ್ಟೊತ್ತು ಮಲಗುವೆ ಕಂದ ಸೊಗವಿಲ್ಲ ನಿನ್ನಿರುವಿಲ್ಲದೆ
ಝಣಝಣದ ನೂಪುರದ ಜೊತೆಗೆ ನಿನ್ನ ಮುದ್ದುಮಾತಿಲ್ಲದೆ
ಕಂದ ನೀನಾಡುತಿರೇ ಒಳ ಹೊರಗು ಹಾಲ್ಬೆಳಕ ತಂಪಿನಂತೆ 
ನಿನ್ನೀ ಮೊಗದ ಅಂದ ರವಿಕಾಂತಿಯ ಪ್ರಭೇಯಂತೆ

ನಿದಿರೆಯ ತೆಕ್ಕೆಯಲೂ ಆಹಾ... ಏನಿಂತು ಮಂದಹಾಸ
ಮೈಮರೆತು ನಿಂತಿರುವೆ ಮಗೂ ಸವಿಯುತ ಆ ಮುಗ್ಧ ಹಾಸ
ಅದೆಷ್ಟು ತಾಕಿತೋ ದೃಷ್ಟಿ... ಛೇ.. ಹಾಳಾಗಲೀ ಕಣ್ಣು
ಅದೆಷ್ಟು ಸಿಹಿರುಚಿಯೋ ಕಾಣೆ ನೀ ತಿನ್ನಲಾರದ ಹಣ್ಣು

ಸಾಕು ಮಾಡಿನ್ನು ಈ ಯೋಗನಿದ್ರೆಯ ಸಹವಾಸ
ಏಳು ಏಳಯ್ಯ ಕಂದಾ ತೋರು ನಿನ್ನ ಮಂದಹಾಸ
ನೀ ಜಗದೊಡೆಯನಾದರೂ ಬೇಕಿಲ್ಲ ಅದರ ಗೊಡವೆ
ಈ  ಅಮ್ಮ ಯಶೋಧೆಯ ಮುದ್ದು ಕಂದಾ ನೀ ಮಗುವೇ

          ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ