ನಿನ್ನೊಡನೆಯೇ ಎನ್ನ ಜೀವನಯಾನ

ನಿನ್ನೊಡನೆಯೇ ಎನ್ನ ಜೀವನಯಾನ
*****************************

ನೀ ಎನ್ನ ಹೃದಯದ ಬಂಧು
ಮಾಧವಾ ನೀನೇ ಎನ್ನಾತ್ಮ ಸಿಂಧು
ಸದಾ ನಿನ್ನ ನಾಮದ ಧ್ಯಾನ
ನಿನ್ನೊಡನೆಯೇ ಎನ್ನ ಜೀವನಯಾನ

ಇರುತಿರೆ ತೀರದ ಅನಂತ ಸಂಸಾರ
ನಿನ್ನೊಡನಾಟವೇ ಜೀವನಸಾರ
ನಿನ್ನಡಿದಾವರೆಯಲ್ಲೇ ಎನ್ನ ಮನ
ನಿನ್ನೊಡನೆಯೇ ಎನ್ನ ಜೀವನಯಾನ

ನೀ ದೇವೋತ್ತಮ ಪರಮಪುರುಷ
ಸಮ್ಮೋಹಕ ಕೊಳಲಗಾನ ಪ್ರತಿನಿಮಿಷ
ಮೃದುಮಧುರಪ್ರೇಮದನುಸಂಧಾನ
ನಿನ್ನೊಡನೆಯೇ ಎನ್ನ ಜೀವನಯಾನ

ಕರೆಯುತಿಹೆ ಎನ್ನ ದನಿ ಕೇಳದೇ
ಕೃಷ್ಣಾ ನೀನೊಲಿದು ಬರಬಾರದೇ
ಬಳಲಿದೆ ನೀನಿಲ್ಲದೇ ಈ ಜೀವ
ನಿನ್ನೊಡನೆ ಎನ್ನ ಜೀವನಯಾನ ದೇವ

ಅರಿಯದಿಹೆಯೇಕೆ ರಾಧಾ0ತರಂಗ
ಹರಿಯುತಿದೆ ನಿನ್ನೆಡೆಗೆ ಪ್ರೇಮಗಂಗಾ
ಎಲ್ಲೆಲ್ಲೂ ಶ್ಯಾಮನಾಮದನುರುಣಿತ
ಜನ್ಮಾಂತರಕ್ಕೂ ನೀನೇ ನನ್ನ ಭವಿತ

ಬಿಡು ಜೊತೆಯಿರದಿದ್ದರೇನಂತೆ
ನೀ ಎನ್ನಂತರಂಗದೊಳಗವಿತೆ
ಕ್ಷಣಾಕ್ಷಣವೂ ನೆನೆಸುತ ನಿನ್ನನ್ನೇ
ಸವೆಸಿಬಿಡುವೆ ಈ ಜೀವನಯಾನವನೆ

            ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ