ಸಾಕಿನ್ನು ಜೀವನ


ಸಾಕಿನ್ನು ಜೀವನ
***************
ನೀನಲ್ಲವೇ ಕೃಷ್ಣ ಎನ್ನಾತ್ಮ ಬಂಧು
ಕೈಹಿಡಿದು ನಡೆಸೆನ್ನ ಕಾರುಣ್ಯ ಸಿಂಧು
ಸದಾನಿನ್ನ ಧ್ಯಾನ ನಿನ್ನೊಳು ಮನ ಲೀನ
ಕರೆದೊಯ್ಯೋ ತಂದೆ ಸಾಕಿನ್ನು ಇಹ ಜೀವನ

ಇಹಪರಕೆ ಗತಿ ನೀನೆಂದು ನಂಬಿದೆ
ಯಾರಿಲ್ಲ ತಂದೆ ಈ ಇಹ ಜೀವನದೆ
ಜೀವನ ಮುಸ್ಸಂಜೆಯಲಿ ಒಂಟಿ ನಾ ಇಲ್ಲಿ
ಸಾಕಾಗಿದೆ ಬದುಕು ಸಹಜ ಅಂತ್ಯ ಬರಲಿ

ಕರುಳಕುಡಿಗಳ ನಂಟು ಆಯ್ತೀಗ ಕಗ್ಗಂಟು
ಹಂಬಲಿಸಿ ಹೆತ್ತಿದ್ದೆ ಅತೀವ ನೋವನುಂಡು
ನೂರೆಂಟು ಬವಣೆಯಲೂ ಚಂದದ ಬದುಕಿತ್ತು
ವಯಸಾದದ್ದೇ ಕಾರಣ ಮಕ್ಕಳಿಗೆ ಬೇಡವಾಯ್ತು

ದೂರಾದರೂ ಸರಿ ಮಕ್ಕಳು ಇರಲಿ ಸುಖವಾಗಿ
ಮುರುಕು ಮನೆಯಾದರೇನು ಇರುವೆ ಸುಖವಾಗಿ
ಇಂದೋ ನಾಳೆಯೋ ದಿನವ ಎಣಿಸುತ್ತಿರುವ ಜೀವ
ನೆಮ್ಮದಿಯಾಗಿಟ್ಟಿರು ಅವರ ನೀಡದೆ ನೋವ

ಬಾಳ ಮುಸ್ಸಂಜೆಯಲಿ ಸದಾ ನಿನ್ನ ಧ್ಯಾನ
ನಿನ್ನಡಿದಾವರೆಯಲಿ ನೆಲೆಸಲೆನ್ನ ಮನ
ಬೆಂದು ಬಳಲಿದ ಜೀವ ಸಾಕು ಮಾಡಿನ್ನ
ಉಡುಗಿಹೋಗುವ ಮುನ್ನ ತೆಗೆದುಕೊ ಪ್ರಾಣ

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ