ನಮ್ಮೂರ ಜಾತ್ರೆ

🌹ನಮ್ಮೂರ ಜಾತ್ರೆ🌹
********************
 ಬನ್ನಿ ಗೆಳೆಯರೇ ನಮ್ಮೂರ ಜಾತ್ರೆಗೆ
ನಕ್ಕು ನಲಿಯುವ ಅಮೃತದ ಪಾತ್ರೆಗೆ
ಮಾಘಮಾಸದ ರಥಸಪ್ತಮಿಯ ವಿಶೇಷ
ಅದ್ದೂರಿ ಜಾತ್ರೆಗೆ ಬರಲೇಕೆ ಮೀನಾಮೇಷ?

ಎಲ್ಲೆಲ್ಲೂ ಅಂದು ಜನಜಂಗುಳಿಯ ಜಾತ್ರೆ
ಬಣ್ಣಬಣ್ಣದ ದಿರಿಸಿದ ವೈಭವದ ಯಾತ್ರೆ
ಅಬಾಲವೃದ್ಧರೆಲ್ಲರೂ ಹರುಷದಿ ನಲಿಯುತ
ಇಲ್ಲಿ ಪೂಜಿಪ ದೇವನವನೆ ಹನುಮಂತ.!!

ದೇವ ದರುಷನಕೆ ಸಾಲಾಗಿ ಸಾಗುವ
ಶಿಸ್ತು ತಪ್ಪಿದರೆ ಪೊಲೀಸು ಬೈಯ್ಯುವ
ಅತ್ಯದ್ಭುತ ಅಲಂಕಾರ ಹನುಮನಿಗೆ
ಭಕ್ತಿಯಲಿ ನಮಿಸೆ ವರವೀಯುವನೆಮಗೆ

ದರ್ಶನವ ಮುಗಿಸಿ ಹಾಗೇ ಬಂದರಾಯ್ತು
ಘಮ್ಮೆನ್ನುವ ಭೂರಿ ಭೋಜನದ ಗಮ್ಮತ್ತು
ತೃಪ್ತಿಯಾಗುವಷ್ಟೂ ಸವಿಯಬಹುದು
ತಿಂದುಂಡು ಚೆಲ್ಲಬೇಡಿ ಪ್ರಸಾದವಹುದು

ಹಾಗೇ ಪರಿಷೆಯೊಳಗೊಂದು ಸುತ್ತು
ವಿವಿಧ ಬಗೆ ಆಟೋಟಗಳ ಕಸರತ್ತು
ಅಂಗಡಿಗಳಲ್ಲಿ ತರಾವರಿ ತಿಂಡಿ ತಿನಿಸು
ಓಡಿಹೋಗುವುದು ಸಂಗಾತಿಯ ಮುನಿಸು

ಏನೆಲ್ಲಾ ಮನಸೆಳೆವ ಆಟಿಕೆಗಳ ಬ್ರಾಂಡು
ತೆರೆದಂಗಡಿಯ ಸುತ್ತ ಮಕ್ಕಳ ದಂಡು
ಕರ್ಕಶಪೀಪಿ ಡಮರು ಡೋಲು ಬಲೂನು
ಮಕ್ಕಳೊಂದಿಗೆ ಮಕ್ಕಳಾಗುವರು ಹಿರಿಯರೂನು

ಹೆಂಗಳೆಯರ ಮನವ  ಸೆಳೆಯುವ
ತರ ತರಾವರಿ ಶೃಂಗಾರ ಸಾಧನ
ಬಣ್ಣಬಣ್ಣದ ಬಳೆ, ಸ್ಟಿಕ್ಕರ್ರು, ರಿಬ್ಬನ್ನು
ವ್ಯಾನಿಟಿಬ್ಯಾಗು ಪರ್ಸು ಇನ್ನೂ ಬೇಕೇನೇನೂ?

ಕೊನೆಗೆ ಮಂಡಕ್ಕಿ ಚರುಮುರಿ ಬತ್ತಾಸು
 ಮಿರ್ಚಿ, ಸೇವು, ಐಸ್ಕ್ರೀಮು ಮೈಸೂರ್ಪಾಕು
ಗೃಹೋಪಯೋಗಿ ಸಾಮಾನು ಸರಂಜಾಮು
ಅಲ್ಲಿಗೆ ಮುಗಿದಿತ್ತು ಜೇಬಿನೊಳಗಿದ್ದ ಕಾಸು

ಏನಾದರಾಗಲಿ ಬೇಕೊಂದು ಜಾತ್ರೆ
ಮೈಮರೆತು ನಲಿಯುವ ಸಂಭ್ರಮದ ಯಾತ್ರೆ
ಬಂಧು ಬಳಗದೊಂದಿಗೊಂದು ಸುತ್ತು
ದುಃಖದುಮ್ಮಾನ ಬದಿಗಿರಿಸಿ ಮನವು ನಲಿದೀತು

            ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ