99.ಯಾರೋ ಕರೆದಂತೆ..!!

ಯಾರೋ ಕರೆದಂತೆ..!!

ಯಾರೋ ಕರೆದಂತೆ ಒಮ್ಮೊಮ್ಮೆ
ನಿದ್ದೆಯಲೂ ಬಡಿದೆಬ್ಬಿಸಿದಂತೆ
ಕಿವಿಯಲೇನೋ ಉಸುರಿ ಕರೆದಂತೆ
ಅಸ್ಪಷ್ಟ ಅಗೋಚರದ ಕರೆ

ನಾನು ನಾನಲ್ಲದಂತಹ ಭಾವ
ಸುಪ್ತಮನದಲ್ಲೇನೋ ಅಭಾವ
ಭ್ರಮೆಯೊ ಮಾಯೆಯೋ ಅರಿಯೆ
ಒಳಮನದಿ ಗೊಂದಲದ ಗೂಡು ತೆರೆಯೇ

ನೀನು ನೀನಲ್ಲ ಇದು ನಾನು ನಾನು
ನಿನ್ನ ಕಾಯದೊಳಿಹ ಆತ್ಮ ನಾನು
ನಿನ್ನದೆನ್ನುವ ಭಾವ ಅನುಭೂತಿ ಮಿಥ್ಯ
ಅಂತರಾತ್ಮದಲ್ಲಡಗಿಹ ನಾನು ಸತ್ಯ

ಎಚ್ಚರಾಗು ಏಳು ಎದ್ದೇಳು
ನಿನ್ನದಲ್ಲವೀ ಬದುಕು ಅರಿತು ಬಾಳು
ಹೂತು ಹೋಗಿಹೆ ಆಳ ಸಂಸಾರದಲ್ಲಿ
ನೀನಾರೆಂಬುದ ತಿಳಿ ಸತ್ಯ ಹುಡುಕುತಲಿ

ಬೇಕಿತ್ತೇ ನಿನಗೀ ಸಂಸಾರದ ಸಾರ
ನನ್ನೊಡಲ ಕರೆಕೇಳು ಆಗುವೆ ಅಮರ
ಅಂತರಾಳದಿ ಯಾರದೋ ಅಸ್ಪಷ್ಟ ಧ್ವನಿ
ಗುಯ್ಗುಟ್ಟಿ ಪಸರಿಸುತ್ತಿದೆ ಧಮನಿ ಧಮನಿ

ಅಂತರಂಗದಲೇನೋ ಕಸಿವಿಸಿ ತಳಮಳ
ಏನೋ ಕಳೆದುಕೊಂಡಂತೆ ಕಳವಳ
ನನ್ನದೆನ್ನುವ ಭಾವ ಮಾಯವಾಗಿ
ಕರೆಯುತಿದೆ ಯಾವುದೋ ಧ್ವನಿ ಕೂಗಿ ಕೂಗಿ...

           ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ