77.ಶಿಲ್ಪಕಲೆ
ಶಿಲ್ಪಕಲೆ
*******
ಕಾಡ ದಾರಿಯಲ್ಲೆಲ್ಲೋ
ಬಿದ್ದಿದ್ದ ಕಗ್ಗಲ್ಲ ಶಿಲೆ
ಉಳಿ ಪೆಟ್ಟಿಗೆದೆಯೊಡ್ಡಿ
ಶಿಲೆಯಾಯ್ತು ಕಲೆಯಬಲೆ
ಕೊರೆದು ನೀಡಿದನದಕೆ ಶಿಲ್ಪಿ
ಸೆಳೆದೆಳೆವ ಮೂರ್ತರೂಪ
ಶಿಲೆಯೊಳಗೆ ಕಲೆಯರಳಿಸಿ
ಕಡೆದು ತುಂಬಿದ ಜೀವಸ್ವರೂಪ
ಮಸ್ತಕದಲಿಹ ಕಲ್ಪನೆಯಚಿತ್ರ
ಮೂಡಿ ಅರಳುವ ವರೆಗೂ
ವಿರಾಮವಿಲ್ಲದ ಕಾಯಕ
ತಲ್ಲೀನ ಶಿಲೆ ಅರಳುವವರೆಗೂ
ಕಲ್ಪನೆಯ ಕನಸಿಗೊಂದಾಕಾರ
ಮೂಡಿಸಿ,ನಲಿವುದವನ ವಿಚಾರ
ತುಂಬಿಸಿ ಶಿಲೆಯೊಳಗೊಂದು ಜೀವ
ಶಿಲೆಯರಳಿ ನಕ್ಕಾಗ ಸಂತೃಪ್ತ ಭಾವ
ಶಿಲ್ಪವಾಗುವುದಿಲ್ಲಿ ತಾ ವಸ್ತುವಿಶೇಷ
ಕಾವ್ಯಚಿಂತನಾ ಬರಹಗಳಿಗೆ ಪ್ರಕಾಶ
ಒಂದೊಂದು ಶಿಲ್ಪವೂ ಸೇರಿ ಇತಿಹಾಸ
ಕೊರೆದ ಶಿಲ್ಪಿಗದುವೆ ಪೂರ್ಣ ಮಂದಹಾಸ
ತರುಲತೆ ಫಲಪುಷ್ಪ ಖಗ ಮೃಗ
ಲಲನಾಂಗನೆ ಸ್ತ್ರೀಪುರುಷ ದೈವ
ಶಿಲಾಬಾಲಿಕೆ ಶೃಂಗಾರ ಕಾವ್ಯ
ಎಂದೆಂದಿಗೂ ಕಳೆಗುಂದದ ನವ್ಯದಿವ್ಯ
ಸಾಟಿಯಿಹುದೇ ಶಿಲ್ಪಿ
ನಿನ್ನ ಕಲಾ ನೈಪುಣ್ಯತೆ
ಶಿಲೆಯಲ್ಲಿ ಕಲೆಯರಳಿಸುವ
ದೈವದತ್ತ ಪ್ರತಿಭೆಗೆ
ಶೈಲೂ.......
ಚಿತ್ರ ಕೃಪೆ: ಲತಾ ( ವಿಶಾಲಿ) ವಿಶ್ವನಾಥ್ ಅವರ ವಾಲ್ನಿಂದ ತೆಗೆದುಕೊಂಡಿದ್ದು...
Comments
Post a Comment