76. ವಿಸ್ಮಯ

ವಿಸ್ಮಯ
********

ವಿಚಿತ್ರ ವಿಸ್ಮಯ ಗಳ ಆಗರ ಈ ಜಗತ್ತು
ಒಂದೆಡೆ ಬೆಳಕಿದ್ದರೆ ಮತ್ತೊಂದೆಡೆ ಕತ್ತಲು
ತಂಪಸುರಿವ ಚಂದ್ರಮನ ಬೆಡಗು
ಭಯಾನಕ ಕಾರ್ಗತ್ತಲ ನಡುಕ

ಒಂದೆಡೆ ಕಾರ್ಮೋಡಗಳ ಛಾಯೆ
ಧೋ ಎಂದು ಸುರಿದು ಕಾಡುವ ಮಳೆ
ಮತ್ತೊಂದೆಡೆ ಬರದ ನಾಡು
ನೀರ ಪಸೆಯೇ ಇಲ್ಲದೆ ಸೊರಗಿದ ಬೀಡು

ಒಂದೆಡೆ ಹಸಿರು ತುಂಬಿದ ಭೂರಮೆಯ ಸೊಬಗು
ಮತ್ತೊಂದೆಡೆ ಹಸಿರೇ ಕಾಣದ ಮರಳುಗಾಡು
ಒಂದೆಡೆ ನೆತ್ತಿ ಬಿರಿವ ಸುಡು ಸುಡು ಬಿಸಿಲು
ಮತ್ತೊಂದೆಡೆ ರವಿಕಿರಣವೂ ತಲುಪದ ಮಂಜಿನ ಒಡಲು

ಒಂದೆಡೆ ಮುಗಿಲೆತ್ತರ ಮರಗಿಡಗಳ ಕಾಡು
ಮತ್ತೊಂದೆಡೆ ನೀರೂ ಗತಿಯಿಲ್ಲದ ಮರುಭೂಮಿಯ ನಾಡು
ತುಂಬಿದೊಡಲಿಂದ ಹರಿವ ನದಿಯೊಂದೆಡೆ
ಜೀವಾಮೃತಕ್ಕೂ ತತ್ತರಿಸುವ ನಾಡೋಂದೆಡೆ

ಬೆಟ್ಟ ಗಿರಿಶಿಖರಗಳಿಂದ ಕಂಗೊಳಿಪ ಸಹ್ಯಾದ್ರಿಯ ಜೊತೆಗೆ
ಕಲ್ಲು ಮುಳ್ಳುಗಿಡಗಂಟಿಗಳ ಬಯಲು ಸೀಮೆ
ಸಮೃದ್ಧ ಫಸಲ ತುಂಬಿದೊಡಲ ಭೂರಮೆಯ ಜೊತೆ
ಒಡಲೊಳಗೆ ತುಡಿತ ಕಾಣದ ಬಂಜರು ಭೂಮಿ

ಬಗೆಬಗೆಯ ಲೋಹಗಳ ಹೊತ್ತ ಸಿರಿ ಬಸಿರು ಒಂದೆಡೆಯಾದರೆ
ಬಡಬಾಗ್ನಿ ಯನ್ನುಗುಳುವ ಜ್ವಾಲಾಮುಖಿ ಯೊಂದೆಡೆ
ಒಂದೊಮ್ಮೆ ನಗುವು ಮತ್ತೊಮ್ಮೆ ದುಃಖ
ಒಂದೊಮ್ಮೆ ಹುಟ್ಟು ಮತ್ತೊಮ್ಮೆ ಸಾವು

ಜಯ ಜಯ ಹರ್ಷೋದ್ಗಾರ ಒಂದೆಡೆ
ಕಷ್ಟ ನಷ್ಟಗಳ ಚೀತ್ಕಾರ ಎಲ್ಲೆಡೆ
ನವೋಲ್ಲಾಸದ ಜೀವನ ಜಾತ್ರೆಯೊಂದಾದರೆ
ಬದುಕು ಮುಗಿಸಿ ಹೊರಟ ಅಂತಿಮ ಯಾತ್ರೆಯೊಂದು

ನಗೆಬೆಳದಿಂಗಳು ಹರಿವ  ಚೆಲುವಿನ ಚಿತ್ತಾರ
ದುಃಖದುಮ್ಮಾನ ಚೀತ್ಕಾರಗಳ ಆಗರ
ಅಮಿತೋತ್ಸಾಹದ ಜೀವನದ ನಡೆಯೊಂದೆಡೆಯಾದರೆ
ಬಾಳಬಂಡಿ ದೂಡಲೂ ಹೆಣಗುವವರ ಪಾಡೋಂದೆಡೆ

ಹೇ ಪ್ರಕೃತಿ ನಿನ್ನೊಡಲೇ ಒಂದು ವಿಸ್ಮಯಗಳ ಲೋಕ
ಬಳಸುವ ನಡೆ ಸರಿಯಿದ್ದರದುವೆ ನಾಕ
ವಿಚಿತ್ರ ವಿಸ್ಮಯಗಳ  ನಡೆ ನಿನ್ನದು  ನಿಗೂಢ
ನಿನ್ನನರಿತು ಬಾಳದಾ ಈ  ಮನುಜ ಮೂಢ

        ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ