265. ನನ್ನ ಬರಹಗಳು (ಸಂಕ್ರಾಂತಿ)

ಹರಿಃ ಓಂ

ಸಂಕ್ರಾಂತಿ

         ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ. "ಹಬ್ಬಗಳು". ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು "ಸಂಕ್ರಾಂತಿ" ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು.

          ಸಂಕ್ರಾಂತಿ ಹಬ್ಬ ದೇಶದಾದ್ಯಂತ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ.     ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹೀಗಾಗಿ ನಮ್ಮ ದೇಶಗಳಲ್ಲಿ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.

         ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ. ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷ ಪಡುವ ಸಡಗರ. ಮನೆಯನ್ನು ಶುದ್ಧಿಗೊಳಿಸುವುದು, ಮನೆ ಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು ಧರಿಸುವುದು, ಮೂರನೆಯ ದಿನ ಹೊಸ ಫಸಲನ್ನು ಉಂಡು ಸಂತೋಷಪಡಲು ಎಲ್ಲಾ ಸನ್ನದ್ಧತೆ ನಡೆಸುತ್ತಾರೆ. ಮನೆಯ ಮುಂದೆ ವಿವಿಧ ರೀತಿಯಲ್ಲಿ ಬಣ್ಣ ಬಣ್ಣದ ರಂಗೋಲಿಯಿಂದ ಅಲಂಕಾರ ಮಾಡುತ್ತಾರೆ.

        ಸಂಕ್ರಾಂತಿ ಮುಖ್ಯವಾಗಿ ಸುಗ್ಗಿಯ ಹಬ್ಬ,. ದವಸ ಧಾನ್ಯಗಳನ್ನು ಬೆಳೆಯಲು ಸಹಾಯಕವಾದ ರೈತನ ಸ್ನೇಹಿತ ದನಕರುಗಳಿಗೂ ಆ ದಿನ ರೈತರು ಕೃತಜ್ಞಯನ್ನು ಸಲ್ಲಿಸುತ್ತಾರೆ, ದನಕರುಗಳನ್ನು ವಿಶೇಷವಾಗಿ ಸಿಂಗರಿ ಸುತ್ತಾರೆ.  ಕೊಂಬುಗಳನ್ನು ಬಣ್ಣಗಳಿಂದ ಅಲಂಕರಿಸುತ್ತಾರೆ. ಕಬ್ಬು ಬೆಲ್ಲ, ಬಾಳೆಹಣ್ಣು ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ತಿನ್ನಿಸುತ್ತಾರೆ.  ವೈಭವದ  ಮೆರವಣಿಗೆಯಲ್ಲಿ ಊರೆಲ್ಲಾ ಮೆರವಣಿಗೆ,  ಹಾಗೂ ಕಿಚ್ಚು ಹಾಯಿಸುವುದು ಮಾಡುತ್ತಾರೆ. ವರ್ಷವಿಡೀ ದುಡಿದ ಪ್ರಾಣಿಗಳಿಗೆ  ಗೌರವ ಕೊಡುತ್ತಾರೆ.  ಹೀಗೆ ಸಂಕ್ರಾಂತಿ ಯ  ಸಂಭ್ರಮ ನಾಡಿನ ಎಲ್ಲಾ ಭಾಗಗಳಲ್ಲಿ ಕಾಣಬಹುದು.

ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆ

          ಎಲ್ಲಾ ಚಟುವಟಿಕೆಗಳಿಗು ಆಧಾರಪ್ರಾಯವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು "ಸಂಕ್ರಮಣ ಅಥವಾ ಸಂಕ್ರಾಂತಿ" ಎಂದು ಜ್ಯೋತಿಷ್ಯಾಧಾರದ ಮೇಲೆ ಪರಿಗಣಿಸಲಾಗುವುದು. ಸಂಕ್ರಾಂತಿಯು ಒಂದು ವಿಧದಲ್ಲಿ ಸೂರ್ಯನ ಆರಾಧನೆಯಾಗಿದ್ದು, ಉತ್ತರಾಯಣ ದಕ್ಷಿಯಾಣಗಳ ಪ್ರಾರಂಭದ ದಿನವಾದ್ದರಿಂದ ಹೆಚ್ಚಿನ ಮಹತ್ವವನ್ನು ಪಡೆದಿದೆ. ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬವು ಭಾರತೀಯ ಕಾಲಮಾನ ’ಪುಷ್ಯಮಾಸದಲ್ಲಿ’ ಬರುವುದು. ಉತ್ತರಾಯಣದ 
ಪುಣ್ಯಕಾಲವೆಂತಲೂ ಕರೆಯಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ಪುಣ್ಯ ನದಿಗಳಲ್ಲಿ ಸ್ನಾನ ಮಾಡುವರು. ಸೂರ್ಯ ಈ ವರೆಗೆ  ದಕ್ಷಿಣದತ್ತ ವಾಲಿ ಸಂಚರಿಸುತ್ತಿದ್ದು,  ಸಂಕ್ರಾಂತಿಯ ದಿನದಿಂದ  ಉತ್ತರದ ಕಡೆ ಪಥ ಬದಲಾಯಿಸುತ್ತಾನೆ.  ಈ ರೀತಿ ಸೂರ್ಯನ ಪಥ ಬದಲಾವಣೆಯಿಂದ ಕೊರೆಯುವ.ಚಳಿ  ಕಡಿಮೆಯಾಗುತ್ತದೆ.
.
         ಸೂರ್ಯನು ಮಕರ ಸಂಕ್ರಾಂತಿಯಂದು ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಮಕರ ಸಂಕ್ರಾಂತಿಯೆಂದು ಹೆಸರು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಈ ದೇಶಗಳಲ್ಲಿಯೂ ಇದನ್ನು ಹೆಚ್ಚಾಗಿ ಮಕರ ಸಂಕ್ರಾಂತಿಯೆಂದೇ ಆಚರಿಸುತ್ತಾರೆ. ಆ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ. ಕರ್ನಾಟಕದಲ್ಲಿ ಮುಖ್ಯವಾಗಿ ಎಳ್ಳು, ಬೆಲ್ಲ ಮುಂತಾದವುಗಳನ್ನು ಮಿಶ್ರ ಮಾಡಿ ಊರಿನಲ್ಲೆಲ್ಲಾ ಹಂಚುವುದು. ಇದರೊಂದಿಗೆ ಹೊಸ ಬೆಳೆ, ಕಬ್ಬು, ಎಲಚಿಕಾಯಿ ಮುಂತಾದವುಗಳನ್ನು ಸೇರಿಸಿ ಎಲ್ಲರಿಗೂ ನೀಡಿ ಸಂತೋಷಪಡುವುದು.

         ಎಳ್ಳು ಬೆಲ್ಲವನ್ನು ಆಕರ್ಷಣೀಯವಾಗಿ ತಯಾರಿಸಿ ಹಂಚುವ ರೂಢಿ ಇದೀಗ ಎಲ್ಲೆಲ್ಲೂ ಹೆಚ್ಚು ಪ್ರಚಲಿತವಿದೆ.

           ಜನವರಿ 15 ರಂದು, ಎಳ್ಳು - ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ. 
         ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿಧ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು. 

        ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಅದಕ್ಕಾಗಿಯೇ ಭೀಷ್ಮ ಪಿತಾಮಹರು ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣವು ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. 

         , ಜನವರಿ 15ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. ಜನವರಿ 15 ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ, ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನಕ್ಕೆ ಜನ್ಮ ಜನ್ಮದಲ್ಲೂ ಸದಾ ನಮಗೆ ಫಲ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು. 

         ಎಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. 'ಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡು' ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.

 ✍ ಡಾ: ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ