259 ಜೋಕೆ ಮನಸೇ

ಶ್ರೀಮಾನ್ ರಮೇಶ್ ಗುಬ್ಬಿ ಅವರ ಜೋಕೆ ಮನಸೇ ಕವನದಿಂದ ಪ್ರೇರಿತ

ಥ್ಯಾಂಕ್ಸ್ ರಮೇಶ್ ಸರ್🙏🙏

 ಜೋಕೆ... ಮನಸೇ..!!
******************

ಅಭಿಮಾನವುಕ್ಕಿಸುವ
ಆತ್ಮಗೌರವವಿರಬೇಕೆ..ಹೊರತು
ಅದಃಪತನಕ್ಕೆ ತಳ್ಳುವ
ಅಹಂಕಾರ ವಿರಬಾರದು

ಎಲ್ಲ ಮೆಚ್ಚುವ ತೆರದಿ
ತಗ್ಗಿನಡೆವ ವಿಧೇಯತೆಬೇಕೆ ಹೊರತು
ತುಳಿಸಿಕೊಂಡು ಮರುಗುವ
ಶೋಷಿತರಾಗಬಾರದು

ಕಾರ್ಯ ಕಾರಣದಲಿ
ಉತ್ಸಾಹಿಯಾಗಿರಬೇಕೆ ಹೊರತು
ಆಪತ್ತು ವಿಪತ್ತೊ ಡ್ಡುವ
ಉನ್ಮತ್ತನಾಗಬಾರದು

ತೀರದ ಪ್ರೀತಿಯ
ಹಂಬಲವಿರಬೇಕೆ ಹೊರತು
ಪರದಾಸ್ಯಕ್ಕೆಡೆಕೊಡುವ
ಕುರುಡು ಪ್ರೇಮವಿರಬಾರದು

ಭರವಸೆಯ ಬಾಳಿನ
ಕನಸು ಕಾಣಬೇಕೆ ಹೊರತು
ಬಾಳಿನ ಭರವಸೆಯೇ
ಕನಸಾಗಬಾರದು

ಪ್ರೀತಿಯಲಿ ಜಗವ ಗೆಲ್ಲುವೆನೆಂಬ
ದಿಟ್ಟ ಭರವಸೆಯಿರಬೇಕೇ ಹೊರತು
ಜಗವೇ ನನ್ನದೆಂಬ ಕುರುಡು
ಭ್ರಮೆಯಲ್ಲಿ ಮುಳುಗಬಾರದು

ಆರೋಗ್ಯಕರ ಹಿತ
ಕೋಪವಿರಬೇಕೇ ಹೊರತು
ಅಂತರಂಗವನ್ನೇ ದಹಿಸುವ
ಜ್ವಾಲಾಮುಖಿ ಯಾಗಬಾರದು

ದಯಾ ಪ್ರೇಮಪೂರಿತ
ಆರಾಧನೆಯಿರಬೇಕೇ ಹೊರತು
ವಿವೇಕ ಶೂನ್ಯತೆಯಲಿ
ಅಂಧರಾಗಬಾರದು

ಬಾಳ ಬೆಳಗಿಸಲು
ಜ್ಯೋತಿಯಾಗಬೇಕೇ ಹೊರತು
ಉನ್ಮತ್ತತೆಯಲಿ ಮೆರೆದು
ದಹಿಸುವ ಜ್ವಾಲೆಯಾಗಬಾರದು

ಮನವರಳಿಸುವ ನಲಿವಿನ
ಮಧುರ ನೆನೆಪಾಗಬೇಕೇ ಹೊರತು
ಮನಹಿಂಡುವ ನೋವಿನ
ವ್ಯಥೆಯ ಕಥೆಯಾಗಬಾರದು

          ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು