257 ವಚನ

ವಚನ
*****

ವಚನವೆಂದರೆ ಭಾವುಕತೆಯಲಿ
ನುಡಿದ ನಲ್ಮೆಯ ನುಡಿಯಲ್ಲ
ಆಸ್ಥೆಯಿಂದ ಜತನ ಮಾಡುವ
ಒಪ್ಪಂದದಲಿ  ಕೊಟ್ಟಮಾತು...

ವಚನವೆಂದರೆ ಉಡಾಫೆಯಲಿ
ಮನಬಂದಂತೆ ಉಲಿಯುವುದಲ್ಲ
ಅಂತರಾಳದಿಂದುಕ್ಕಿಬರುವ
ಆಣೆ ಪ್ರಮಾಣದಲಿ ಕೊಟ್ಟಮಾತು..

ವಚನವೆಂದರೆ ಸುಮ್ಮನೆ ಬರಿದೇ
ನುಡಿವ ಸರಳ ನುಡಿಗಟ್ಟಲ್ಲ
ಆಡಿದಂತೆಯೇ ನಡೆಯಲು
ಅಭಿಮಾನದಲಿ ಕೊಟ್ಟ ಮಾತು..

ವಚನವೆಂದರೆ  ತೋರಿಕೆಯ
ಒಣ ಜಂಭದ ಮಾತಲ್ಲ
ನಮ್ಮದೇ ನುಡಿಯ ಮೇಲಣ
ನಮಗಿರುವ ಅಕ್ಕರಾಸ್ಥೆ...

ವಚನವೆಂದರೆ ತುಟಿಯಂಚಲಿ
ಹೊರಬಿದ್ದ ಜಾಳು ಮಾತಲ್ಲ
ಜಗಮೆಚ್ಚುವಂತೆ ನಿಷ್ಠೆಯಲಿ
ಪಾಲಿಸುವ ತಲೆದೂಗುವ ಮಾತು..

ವಚನವೆಂದರೆ ಮಾತಿನ ಮೇಲಿನ
ಹೊಣೆಗಾರಿಕೆಯ ಹಿಡಿತ
ಶ್ರೇಷ್ಠ ಚಿಂತನೆಗಳಡಿಯಲ್ಲಿ ಬರುವ
ಜವಾಬ್ದಾರಿಯುತ ದಿಟ್ಟ ಮಾತು..

ಅಂದು ಹಿಡಿದಿಟ್ಟಿದ್ದರು ಆಸ್ಥೆಯಲಿ
ಸಂತ ಶಿವ ಶರಣರು ವಚನ ರೂಪಿನಲಿ
ತಮ್ಮಂತರಂಗದ ದಿವ್ಯಾನುಭವಗಳ
ಅನನ್ಯ ಅನುಭವೋಕ್ತಿಗಳ ಸೂಕ್ತಿ..

ಹೊರಹೊಮ್ಮಿತ್ತಂದು ವಚನದಲಿ
ಸಾಮಾಜಿಕ ಕಳಕಳಿಯಡಿಯಲ್ಲಿ
ಲಿಂಗಜಂಗಮ ಸಂವಾದ ರೂಪಿ
ಮನೋಜ್ಞ ವಾಙ್ಮಯ ಜ್ಞಾನಧಾರೆ..

ನಾವಲ್ಲ ಶರಣ ಸಂತ ದಾಸರು
ಸುರಿಸಲು ವಚನ ದಿವ್ಯಾಮೃತ
ಹಿಡಿತವಿದ್ದರಷ್ಟೇ ಸಾಕು ಮಾತಿನಲಿ
ಸ್ಪುರಿಸಲಿ ಪ್ರೀತಿ ಅದುವೇ ವಚನಾಮೃತ..

           ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ