231 ಕೈಗನ್ನಡಿ
#ಕೈಗನ್ನಡಿ
ನಮ್ಮದೇ ಹಸ್ತದಲಿ ಬೆರಳುಗಳು ಸಮವಿಲ್ಲ
ಆದರೆಲ್ಲವೂ ಒಂದುಗೂಡೆ ಗಟ್ಟಿ ಮುಷ್ಠಿ
ನಮ್ಮದೇ ಮನೆಯ ವ್ಯಕ್ತಿಗಳಲಿ ಹೊಂದಿಕೆಯಿಲ್ಲ
ಎಲ್ಲರೊಂದಾದರಲ್ಲವೇ ಚಂದ ಈ ಸಮಷ್ಟಿ
ಹಸ್ತದಲ್ಲಡಗಿದೆ ಮನುಜನ ಭವಿತವ್ಯ
ಹಸ್ತಸಾಮುದ್ರಿಕಾ ಶಾಸ್ತ್ರವೆಲ್ಲ ಹೇಳುವುದು
ಹಸ್ತದಿಂದಲೇ ತಾನೇ ಸಕಲ ಕಾರ್ಯಗಳ ಮೇಳ
ಕೈಗೆ ಕೈ ಜೋಡಿಸಿದಾಗ ಬಾಳು ಬೆಳಗುವುದು
ಅಂಗೈಲಿಹ ಹುಣ್ಣಿಗೆ ಕನ್ನಡಿ ಬೇಕೇತಕೆ
ಕಣ್ಣೇ ಹೇಳುತ್ತವೆ ನಡೆನುಡಿಗಳನ್ನೆಲ್ಲ
ಕೈ ಕೇಸರಾದರೆ ತಾನೇ ಬಾಯಿಗೆ ಮೊಸರು
ದಣಿದು ದುಡಿದರೆ ತಾನೇ ಬಾಳು ಸಿಹಿಬೆಲ್ಲ
ಬೆರಳು ತೋರಿದರೆ ಹಸ್ತ ನುಂಗುವ ಜಾಣ್ಮೆ
ಅಳೆಯುವುದು ನಮ್ಮ ಬುದ್ಧಿಮತ್ತೆಯನು
ಕೈಗೆ ಕೈ ಬೆಸೆದು ದುಡಿತದಲ್ಲಿದ್ದರೆ ತಾಳ್ಮೆ
ಕಷ್ಟ ಕಳೆದು ಪಡೆಯಬಹುದು ಸುಖವನು
ಅಂಗೈಲಿಟ್ಟು ಬೆಣ್ಣೆ ತುಪ್ಪ ಹುದುಕಲೇಕೆ?
ನಮ್ಮಲ್ಲೇ ಇದೆ ಅದ್ಭುತ ಯೋಚನಾಶಕ್ತಿ
ಆ ಶಕ್ತಿಸಂಚಯವನು ಯುಕ್ತಿಯಲಿ ಬಳಸಿದರೆ
ಎತ್ತರಕ್ಕೇರಬಹುದು ಇತ್ತು ಕಷ್ಟಕ್ಕೆ ಮುಕ್ತಿ
ಡಾ: B.N. ಶೈಲಜಾ ರಮೇಶ್
Comments
Post a Comment