205 ನೀತಂದ ಕಾಣಿಕೆ ಅನುರಾಗ ಮಾಲಿಕೆ

ನೀತಂದ ಕಾಣಿಕೆ ಅನುರಾಗ ಮಾಲಿಕೆ
******************************

ನವಿರು ಭಾವನೆಗಳಿಲ್ಲದ ಬರಡು ಬದುಕಿತ್ತು
ಸಂಸಾರ ಜೀವನವ ಮನವು ನಿರಾಕರಿಸಿತ್ತು
ಸನ್ಯಾಸದೆಡೆಗೆನಗೇಕೋ ಅದಮ್ಯ ಸೆಳೆತ..!!
ಮನದ ಸುಮವು ಮಾಧವನಡಿಗಳಲ್ಲಿ ಮಿಳಿತ

ನಿರಾಸಕ್ತಿಯಿತ್ತು ಏಕೋ ವಿವಾಹ ಜೀವನಕೆ
ಮಾಧವನಡಿದಾವರೆಯಲ್ಲಿ ಲೀನವಾಗುವ ಬಯಕೆ
ತೊರೆದು ಹೊರಟಿದ್ದೆ ಅರಸಿ ವೈರಾಗ್ಯ ಜೀವನ..!!
ಕಂಡೇ ಕಾಣುವೆನೆಂದರಿತ್ಹೊರಟೆ ಮಾಧವನಾ

ಪುಷ್ಟಿಯಿತ್ತಿತ್ತೇನಗೆ ಗುರುವರ್ಯರ ಹಿತವಚನ
ಭವಸಾಗರವ ದಾಟಿದೊಡೆ ಜನ್ಮ ಪಾವನ
ಅವನಿತ್ತ ಬದುಕಿದು ಅವನಿಗೆ ಸಮರ್ಪಿಸಲು..!!
ಬಯಕೆ ಆಧ್ಯಾತ್ಮಿಕತೆಯಲ್ಲಿ ಜೀವ ಸವೆಸಲು

ಅದೆಲ್ಲಿಂದ ಬಂದೆ ಗೆಳೆಯ ನನ್ನೀಮನವ ಹೊಕ್ಕಿ
ಬರಡು ಭಾವನೆಯ ಬಡಿದೆಬ್ಬಿಸಿ ಕೆಣಕಿ
ವೈರಾಗ್ಯ ಮರೆಸಿ ತಂದಿಟ್ಟೆ ಸಂಸಾರದ ಬಯಕೆ..!!
ಮಾಧವನೊಡನಾಟದಂತೆಯೇ ಅನಿಸಿತ್ತು ಮನಕೆ

ನೀ ತಂದ ಕಾಣಿಕೆ ಅನುರಾಗ ಮಾಲಿಕೆ
ಬಣ್ಣನೆಗೆ ಸಿಗದ ಸೊಗ ಅದಕಿಲ್ಲ ಹೋಲಿಕೆ
ಬರಡಾದ ಬದುಕಿಗೆ ನೀ ಬಂದೆ ಬೆಳಕಾಗಿ..!!
ಅನುಸರಿಸಿ ನಡೆವೆ ಸದಾ ನಾ ನಿನ್ನ ನೆರಳಾಗಿ

            ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ