190. ಶ್ರೀ ರಾಮಕೃಷ್ಣ
ಶ್ರೀ ರಾಮಕೃಷ್ಣ
*************
ನೀ ರಾಮ ನೀ ಕೃಷ್ಣ ಶ್ರೀ ರಾಮಕೃಷ್ಣ
ಪ್ರೇಮದಲಿ ಸಲಹಯ್ಯ ಪ್ರಭು ರಾಮಕೃಷ್ಣ
ಸರ್ವರಲಿ ಸಮದೃಷ್ಟಿ ಸಕಲ ಮತವೊಂದೇ
ಗುರಿಸೇರುವುದಕೆ ಹಲವು ದಾರಿಯಿದೆ ಎಂದೇ
ಕಾಮಕಾಂಚನ ಮುಕ್ತಿಮಾರ್ಗಕೆ ಬಂಧನ
ದೈವಸಾಕ್ಷಾತ್ಕಾರಕೆ ಭಕ್ತಿಯೇ ಲಾಂಛನ
ಶುದ್ಧ ಹೃದಯದ ಕರೆಗೆ ನೀ ಓಡಿ ಬರುವೆ
ತ್ಯಾಗಪಥದ ಸ್ಫೂರ್ತಿ ನೀ ಕಲ್ಪತರುವೇ
ಎಷ್ಟು ಮತವಿಹುದೋ ಅಷ್ಟು ಪಥವಿಹುದು
ಶ್ರದ್ಧೆಯಿದ್ದರೆ ಸಾಕು ಗುರಿ ಸೇರಬಹುದು
ಎಲ್ಲದಾರಿಯ ಗುರಿ ಆತ್ಮದರ್ಶನವೇ
ಸರ್ವಧರ್ಮದ ಅನುಭೂತಿ ಪಡೆದ ಗುರುವೇ
ಹಗಲಿರುಳು ಜಪಿಸುತ ತಾಯ ಶುಭ ನಾಮ
ದಕ್ಷಿಣೇಶ್ವರವಾಯ್ತು ಭಕ್ತಿಯ ಸಂಗಮ
ಭವತಾರಿಣೀ ತನಯ ಭವ ಹರಿಸು ಗದಾಧರ
ಪ್ರಭು ರಾಮಕೃಷ್ಣ ನೀ ಸರ್ವಧರ್ಮದ ಸಾರ
ಶೈಲೂ.....
Comments
Post a Comment