187. -🌹ಅರಳುವ ಹೂಗಳು🌹


ಶೀರ್ಷಿಕೆ :--
🌹ಅರಳುವ ಹೂಗಳು🌹
**********************

ಮುದ್ದಾದ ಎಳೆ ಮೊಗ್ಗುಗಳು
ಘಮ್ಮನೆಂದು ಬಿರಿಯುವುವು
ಅರಳಿ ಮೆಲ್ಲನೆ ಸೆಳೆದು
ಕಣ್ಮನವ ತಣಿಸುವುವು

ನಿಷ್ಕಲ್ಮಶ ವಾದ ಮನವು
ಮುಗ್ಧ  -  ಸ್ನಿಗ್ಧ ಚೆಲುವು
ಬೆರಗು ಕಂಗಳ ನೋಟ
ಸೆಳೆದೆಳೆವ ಚೆಲುವ ಮಾಟ

ಬೆಳೆಯುವ ಸಿರಿಯ ಪೈರು
ನಾಳಿನ ಭರವಸೆಯ ತೇರು
ಕಲಿಕೆಗಿಲ್ಲಿ ಅದಮ್ಯ ಮಿಡಿತ
ಸ್ನೇಹ ಹಂಚುವಲ್ಲಿ ತುಡಿತ

ಶುಭ್ರಾಕಾಶದಂತೆ ಹೃದಯ
ಹಂಸ ಕ್ಷೀರದಂತೆ ನ್ಯಾಯ
ತುಂಟಾಟದಲಿ ಗಾಂಭೀರ್ಯ
ಕಾಡದಿರಲಿ ಜಗದ ಕ್ರೌರ್ಯ

ಅರಳುವ ಹೂಗಳು ನೀವು
ಭವ್ಯ ಭಾರತದ ಪ್ರಜೆಗಳು
ಇರಲಿ ಧೈರ್ಯ ಶೌರ್ಯ ಕೀರ್ತಿ
ನೀವಾಗಿರೆಲ್ಲರಿಗೂ ಸ್ಪೂರ್ತಿ

ಆ ದೇವನ ಸುಂದರ ಸೃಷ್ಟಿ
ಬೀಳದಿರಲಿ ಕರಾಳ ದೃಷ್ಟಿ
ಮನೆಮನ ಬೆಳಗುವ ಪ್ರಣತಿ
ಮಂತ್ರವಾಗಿರಲಿ ಸ್ನೇಹಪ್ರೀತಿ

ನಡೆವ ಹಾದಿಯಲ್ಲಿರಲಿ ಧರ್ಮ
ದಯೆಯೇ ಧರ್ಮದ ಮೂಲ ಮರ್ಮ
ತೆರೆದಪುಸ್ತಕದಂತಿರಲಿ ನಡೆ
ಇರಲಿ ಪಾಪ - ಪುಣ್ಯದ ಭಿಡೆ

ಬೆಳೆದು ಬೆಳಗಿ ಹಿಮಾಲಯದೆತ್ತರ
ಏರಲಿ ಕೀರ್ತಿ ಪತಾಕೆಯ ಶಿಖರ
ನೀವಾಗಿ ಬೆಳಗಿ ಜ್ಞಾನದೀವಿಗೆ
ಅನುಸರಿಸಲಿ ಮುಂದಿನ ಪೀಳಿಗೆ

ಮನವಿರಲಿ ಶುದ್ಧ ಹಾಲ ನೊರೆಯಂತೆ
ಪ್ರೀತಿ ಹರಿಯಲಿ ತುಂಬಿ ತೊರೆಯಂತೆ
ನಭದಿ ಮಿನುಗೋ ನಕ್ಷತ್ರದ್ಹೊಳಪು
ನೀವಾಗಿ  ಸದಾ ಶುಭ್ರಶುದ್ಧ ಬಿಳುಪು

             ಶೈಲೂ........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ