146 ದುಡಿಮೆಯೇ ದೇವರು

ಚಿತ್ರಕ್ಕೊಂದು ಕವನ
ದುಡಿಮೆಯೇ ದೇವರು 
******************
ವಯಸ್ಸಾದರೇನಂತೆ ಕೈಯ್ಯಲಿನ್ನು ಕಸುವಿದೆ
ಪ್ರಾಯಮಾಗಿದರೇನಂತೆ ದುಡಿಮೆಯಲ್ಲಿ ಮನಸ್ಸಿದೆ
ಏನೆಲ್ಲಾ ಕೆಲಸ ಮಾಡಿ ದಣಿದು ಹಣ್ಣಾದ ಜೀವ
ಬಣ್ಣದೆಳೆಯಲಿ ಹಗ್ಗ ಹೊಸೆಯಲೇನು ನೋವಾ?

ಅಂದಿತ್ತು ದುಡಿಮೆ ಮಣ್ಣೊಳು ಮೈಮುರಿವ ಕೆಲಸ
ನಿಷ್ಠೆಯಿಂದ ಮಾಡಿದ್ದೆ ಇತ್ತು ಅದರಲೇ ಮನಸ
 ಕೈಹಿಡಿದು ನಡೆಸಿದ್ದಳು ಭೂತಾಯಿ ನಲುಗದಂತೆ
ಮನೆಯಿದೆ ಮಾಡಿದೆ ಮಡದಿ ಮಕ್ಕಳಿಗಿಲ್ಲ ಚಿಂತೆ

ಹಿಂದೆಲ್ಲಾ ಹೊಸೆಯುತ್ತಿದ್ದೆ ಹುಲ್ಲಿನ ಗರಿಗಳನ್ನು ಸೇರಿಸಿ
ಒಂದರಿಂದೊಂದು ಉದ್ದುದ್ದದ ತೆಂಗಿನ ನಾರನ್ನು ಕೂಡಿಸಿ
ಬೇಕಿತ್ತಲ್ಲ ಆಗ ದನಕರುಗಳ ಕೊರಳಿಗೆ ಕಟ್ಟಲು
ಹೊತ್ತು ತರುತ್ತಿದ್ದ ದನಗಳ ಮೇವಿನ ಹೊರೆಗೆ ಸುತ್ತಲು

ಇಂದೆಲ್ಲಾ ನಗರವಾಸ ಇಲ್ಲೆಲ್ಲಿದೆ ದುಡಿಮೆಯ ಕಸುವು
ಐಷಾರಾಮಿ ಜೀವನವಿದೆ ಆದರೂ ಒಪ್ಪಲೊಲ್ಲದು ಮನವು
ಬಿಡುವಿಲ್ಲದೆ ದುಡಿದ ಜೀವಕೆ ಕುಳಿತುಣ್ಣುವುದು ಶಾಪ
ಇದೆಲ್ಲಾ ಮಕ್ಕಳಿಗೆ ಅರ್ಥವೆಲ್ಲಾಗುವುದು ಪಾಪ

ವಯಸ್ಸಾಯ್ತು ಮುದಿಜೀವ ಸಮಯ ಕಳೆಯುವುದು ಕಷ್ಟ
ಏನಾದರೊಂದು ಕೈಗೆ ಸಿಕ್ಕ ಕೆಲಸ ಮಾಡುವುದು ಇಷ್ಟ
ಮೊಮ್ಮಗಳು ಉಟ್ಟು ಬಿಸುಟಿದ್ದ ಲಂಗವ ದಾರದಂತೆ ಹರಿದೆ
ಒಂದಕ್ಕೊಂದೊಂದು ಸೇರಿಸಿ ಬಣ್ಣಬಣ್ಣದ ಹಗ್ಗವ ಹೊಸೆದೆ

ಬೇಕಾಗಬಹುದು ಮೊಮ್ಮಗಳ ಜೋಕಾಲಿಗೆ ಕಟ್ಟಲು
ಅದಕ್ಕೂ ಅಲ್ಲದಿದ್ದರೆ ನೆರವಾಗಬಹುದು ಬಟ್ಟೆ ಹರವಲು
ಹರಿದ ಲಂಗದಿಂದ ಹೆಣೆದ ಚಂದನೆಯ ಹಗ್ಗವ
ಕಂಡು ನಲಿಯಬಹುದು ಕಂದ ಹಿರಿ ಹಿರಿ ಹಿಗ್ಗುತ

           ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ