117 ನೀನಿದ್ದಾಗ - ನೀನಿಲ್ಲದಿದ್ದಾಗ
***********************
ನೀ ಜೊತೆಯಿದ್ದ ಆ ದಿನಗಳು
ತಂಗಾಳಿಯ ತಂಪೆರಲಿನಂತೆ
ಚಂದಿರನಿಲ್ಲದ ರಾತ್ರಿಯಲೂ
ಬೆಳದಿಂಗಳು ಫಕ್ಕನೆ ನಕ್ಕಂತೆ
ನೀ ಜೊತೆಯಿದ್ದ ಆ ದಿನಗಳು
ಅಂತರಂಗದಲಿ ಸಂತಸದ
ಅಲೆಗಳು ಹುಚ್ಚೆದ್ದು ಕುಣಿದಂತೆ
ನನ್ನೆದೆಯಲಿ ದೀಪ ಹಚ್ಚಿಟ್ಟಂತೆ
ನೀ ಜೊತೆಯಿದ್ದ ಆ ದಿನಗಳು
ಬಿರುಬಿಸಿಲೂ ಬೆಳದಿಂಗಳಂತೆ
ಕಿರುನಗೆಯ ಆ ಚೆಲುವ ಮುಖ
ಚಂದ್ರಮನನೂ ನಾಚಿಸಿದಂತೆ
ಆದರೇಕಿಂದು ಹೀಗೆ ತಲ್ಲಣ
ಅರಿಯೇ ನೀನಿಲ್ಲದ ಈ ಕ್ಷಣಗಳು
ರೆಕ್ಕೆ ಮುರಿದ ಹಕ್ಕಿಯಂತಾಗಿದೆ
ಹಾರಾಟವಿಲ್ಲದೆ ಇನ್ನೆಲ್ಲಿದೆ ಬದುಕು
ನೀನಿಲ್ಲದ ಈ ಕ್ಷಣಗಳು, ದೋಚಿದೆ
ಜೀವನದ ಸಂತಸದ ಕ್ಷಣಗಳನ್ನ
ಕಾಡುವ ನಿನ್ನ ನೆನಪುಗಳು ನಿಂತು
ಮನದಾಳದಲಿ ಕದಡಿದೆ ಶಾಂತಿಯನ್ನ
ನಿರೀಕ್ಷೆ ಇಲ್ಲದ ಬದುಕು ಈಗ
ಭರವಸೆಯೇ ಇಲ್ಲದ ಬಾಳು
ಸಂಭ್ರಮವೇ ಭ್ರಮೆಯಾದಂತಾಯ್ತು
ನೀನಿಲ್ಲದ ಈ ಕ್ಷಣ ತಟಸ್ಥವಾಗಿದೆ ಕಾಲ
ಶೈಲೂ.....
Comments
Post a Comment