ಕಂಡೆ ನಿನ್ನ ರೂಪ

ಕಂಡೆ ನಿನ್ನ ರೂಪ
**************

ಹೀಗೆ ಕಾಡುತಿರಲೆಂತು?
ಸರಿಯಬಾರದೆ ಕೊಂಚ
ಬೇಡವೇನೆನಗೆ ಏಕಾಂತ
ಬರುವೆ ನಡೆ ಕಾಂತ...!!!

ನೀನೆದುರಿಗಿದ್ದರೆ ಹೀಗೆ
ಸಿಂಗರಗೊಳ್ಳಲಿ ಹೇಗೆ?
ನಾಚದೇನು ತನುಮನ?
ಹೋಗು ಹೊರಗೆ ಮದನ

ಮುಕುರದಲ್ಲಿ ನೀ ಪ್ರಖರ
ಕಾಣಲ್ಹೇಗೆನ್ನ ಮೊಗ ಪೂರಾ
ಕೃಷ್ಣ ನಿಲ್ಲುನೀ ಬದಿ ಸರಿದು 
ಕಾಣಲಿದೆಯೆನ್ನ ಕಣ್ಣ ಮೆರುಗು

ಜರಿಯ ಸೀರೆ ಉಡಬೇಕಲ್ಲ
ಹೊರಳಿ ನೋಡದಿರು ಮೆಲ್ಲ
ಸಿಂಗರಿಸಿ ಬರುವೆ ನಿನ್ನಂಗಳಕೆ
ಕೊಂಚ ಅದುಮಿಡು ಬಯಕೆ

ಬಳಸಿ ಹಿಡಿದರೇಗೆನ್ನ ಕೊರಳು
ಹೆಣೆಯಬೇಕಲ್ಲ ನೀಳ ಹೆರಳು
ಮೊಲ್ಲೆ ಮೊಗ್ಗು ಹೆಕ್ಕಿ ತರುವೆ
ಮುಡಿಸಲೆನಗೆ ನಿನ್ನೇ ಕರೆವೆ

ಧರಿಸಬೇಕಿದೆ ರತ್ನದೊಡ್ಯಾಣ
ಬಳಸಿದ ನಡುವ ಬಿಡೋ ಜಾಣ
ಕೊರಳ ಮಾಲೆಯಂತಿರಲು ಕರ
ಧರಿಸಲ್ಹೇಗೇಳು ಮಣಿಹಾರ

ನಾಚಿದೆ ತುಂಟಾಟಕೆ ಮನವು
ಸೋತು ಶರಣಾಗಿದೆ ತನುವು
ನಿನ್ನೊಡನಾಟ ತಂದಿದೆ ಸುಖ
ಬಾಳೆಲ್ಲ ಸವಿ ಜೇನಾಯ್ತೋ ಸಖ

ಓಹ್..!! ಇದೇನಿದು ಮರುಳೇ?
ಕಂಡದ್ದೆಲ್ಲ ಸವಿಗನಸ ತಿರುಳೇ?
ಸದಾ ನಿನ್ನ ಧ್ಯಾನವೇ ಮದನ
ಕಂಡೀತೇನದಕೆ ದರ್ಪಣದೆ ವದನ

ನಾ ಏನ ಹೇಳಲಿ ಗೋಪಾಲ
ಬೀಸಿರುವೆ ನೀ ಪ್ರೇಮದಜಾಲ
ಮನದ ಒಳ ಹೊರಗೂ ನೀನೇ
ಕಾಣುವೆ ನಾ ಎಲ್ಲೆಡೆ ನಿನ್ನನ್ನೇ

            ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ