ನನ್ನ ಕವನಗಳು


[8/6/2020, 8:45 am] Dr. B. N. Shylaja Ramesh: ಇಂದು ನನ್ನ ಜೀವನದಲ್ಲಿ ಮರೆಯಲಾಗದ  ದಿನ
ಸ್ವಾತಿ ಮತ್ತೊಂದನ್ನು ಪಡೆದ ಸುಂದರ ದಿನ
ಹೊಸಬಾಳಿಗೆ ಕಾಲಿಟ್ಟ ಸುದಿನ
ನಿಮ್ಮೆಲ್ಲರ ಹಾರೈಕೆಯಿರಲಿ ಈ ದಿನ🙏🙏

ಆಗಮನ
*********

ಇಪ್ಪತ್ತೆರಡು  ವರ್ಷತುಂಬಿತು
ಅವ  ನನ್ನ  ಜೀವನದಿ ಕಾಲಿಟ್ಟು
ಈಗಲೂ  ಕೇಳುತ್ತಿದೆ
ಆ ಮಂಗಳದ ನಾದ
ಅವನದೇ  ನೆನಪಿನ
ಆ  ಮಧುರ  ನಿನಾದ
ನೆನಪಿದೆ ಇನ್ನೂ  ಅವ
ಬದುಕಲಿ  ಬಂದದ್ದು
ಸವಿ ಕನಸುಗಳ ಬಿತ್ತಿದ್ದು
ಮಧುರ ನೆನಪ
ಹೆಕ್ಕಿ  ತಂದದ್ದು
ಅವ ಬಂದದ್ದೇ ಬಂದದ್ದು
ಮರೆಯಾಯ್ತು ಅಂದೇ
ಕಹಿನೆನಪ ಭಾವ
ಉದಿಸಿ ನಲ್ಮೆಯಾ  ಬೆಳಕು
ಮೇರೆ ಇಲ್ಲದೇ ಮೆರೆಯುತ್ತಿದೆ
ಎದೆಯಲ್ಲಿ  ಅನುರಾಗ
ಎಂದಿಗೂ  ಊಹಿಸಲಾರೆ
ಅವನಿಲ್ಲದ  ಜೀವನ
ಉಸಿರುಸಿರಿನಲ್ಲೂ
ಅನುರಣಿಸುತ್ತಿದೇ
ಅವನದೇ  ಧ್ಯಾನ
ಅಬ್ಭಾ!!!!.....
ಹೀಗೇಕೆ  ಉರುಳುತ್ತಿದೆ ಕಾಲ
ನೆನ್ನೆ ಮೊನ್ನೆಯ  ಪ್ರೀತಿಗೆ
ಆಗಲೇ  ಇಪ್ಪತ್ಮೂರು
 ವರ್ಷಗಳಾಯ್ತಲ್ಲ
ಆ  ದೇವನಾ  ದಯವಿರಲಿ
ಒಲವ  ಜೀವನ  ಹೀಗೆಯೇ
ಸಾಗಲಿ  ಮೆಲ್ಲ...

            ಶೈಲೂ......
[8/6/2020, 8:45 am] Dr. B. N. Shylaja Ramesh: ನೀ  ಬಂದ ದಿನ
*************

ಅಂದು ನೀ  ಬಂದ ದಿನ
ಹೃದಯದಲಿ ರಾಗಗಳ ತನನ
ಮಾತಿಲ್ಲ ಬರೀ ಮೌನ
ಕಣ್ಸನ್ನೆಯಲೇ  ಶುಭಮಿಲನ

ಹೃದಯದಲಿ ಚಿಲಿಪಿಲಿ
ಅನುರಾಗದೋಕುಳಿ
ಹರಿಸಿ ಪ್ರೀತಿಯ ಸುಧೆಯ
ಸೆಳೆದೆ  ಸವಿ ಮಾತಲಿ

ಬರೆದು ಒಲವ ಮುನ್ನುಡಿ
ಇಟ್ಟು ಹೊಸಬಾಳಿಗೆ  ಅಡಿ
ತುಳಿದು ನಗುತ  ಸಪ್ತಪದಿ
ಆದೆವು ನವಜೋಡಿ

ಹೊತ್ತು ನೂರಾಸೆಯ ಕನಸು
ಕೊಟ್ಟೆ ನಿಷ್ಕಲ್ಮಶ ಮನಸು
ಕೈಹಿಡಿದು ನಡೆದೇ ಜೊತೆಜೊತೆ
ನನಸಾಗಿಸಿದೆ ನನ್ನೆಲ್ಲ ಕನಸು

ಹೇಗೆ ಉರುಳಿತೋ ಕಾಲ
ಸಮಯ ಸರಿದದ್ದೇ ಅರಿವಿಲ್ಲ
ಇಂದಿಗಾಯ್ತು ಇಪ್ಪತ್ತೆರಡು ವರ್ಷ
ಅಂದಿನಂತೆಯೇ ಇಂದಿಗೂ ಹರ್ಷ

ಬಂದಿದೆ ವಾರ್ಷಿಕೋತ್ಸವದ ದಿನ
ಮತ್ತೆ ನೆನೆವ ಸಾಂಗತ್ಯದ ಶುಭದಿನ
ಅಕ್ಷಯವಾಗಲಿ ಪ್ರೀತಿ ಅನುದಿನ
ಇದೇ ಜೀವನಕೆ ರಮ್ಯ ಸೋಪಾನ

          ಶೈಲೂ.....
[8/6/2020, 1:31 pm] Dr. B. N. Shylaja Ramesh: #ಬಾಳ_ಪಥದ_ಜೊತೆಗಾರ

ನಿನ್ನೆ ಮೊನ್ನೆಯಷ್ಟೇ ಸಪ್ತಪದಿ ತುಳಿದಂತೆ ಭಾಸ
ಎಲ್ಲವನೂ ಮರೆಸಿಬಿಟ್ಟಿತಲ್ಲ ನಿಮ್ಮ ಸಹವಾಸ
ಆಗಲೇ ಆಗಿಹೋಯ್ತಲ್ಲ ಇಪ್ಪತ್ಮೂರು ವರುಷ
ಸಂತಸದಿ ಮಿಂದು ಯುಗವಾದಂತೆ ನಿಮಿಷ

ಹೊರಳಿ ನೋಡಿದರೆ ನಡೆದು ಬಂದ ದಾರಿ
ಬರೀ ಹುಣ್ಣಿಮೆ ಬೆಳದಿಂಗಳೇ ಸುರಿದಂತ ಪರಿ
ಅಲ್ಲಲ್ಲಿ ಕಿಂಚಿತ್ತು ಏಳುಬೀಳುಗಳ ಕಂಡರೂ
ತೃಣದಂತಷ್ಟೇ..ಉಳಿದೆಲ್ಲವೂ ಸಂತಸದ ಮೇರು

ಬಾಳ ಪಥದಲ್ಲಿ ಜೊತೆಯಾಗಿ ಬಂದ ನಲ್ಲ
ನಿಮ್ಮಿಂದಲೇ ನನಸಾಯ್ತು ನನ್ನ ಕನಸೆಲ್ಲಾ
ವಸಂತನಂತೆ ಮೆಲ್ಲ ಬಂದಿರೆನ್ನ ಬಾಳಿಗೆ
ಬಂದ ದಿನದಿಂದ ಬದುಕಾಯ್ತು ಸಿಹಿ ಹೋಳಿಗೆ

ಇಂದು ಸಂತಸದ ವಿವಾಹ ವಾರ್ಷಿಕೋತ್ಸವ
ನಮ್ಮೀ ಪ್ರೀತಿ ಸಂಸಾರಕೆ ದಿನವೂ ನಿತ್ಯೋತ್ಸವ
ಹೃದಯೇಶನೇ ನಿಮಗೆ ಸಂಭ್ರಮದ ಶುಭಾಶಯ
ಪ್ರತಿಜನ್ಮಕೂ ಪತಿ ನೀವಾಗಿರಲೆಂಬುದೇ ಆಶಯ

     ಶೈಲಜಾ ರಮೇಶ್
[8/6/2020, 1:57 pm] Dr. B. N. Shylaja Ramesh: ಅರಿವಿರಲಿಲ್ಲ...
************

ಅರಿವಿರಲಿಲ್ಲ ನೀ ಬರುವವರೆಗೆ
ಪ್ರೀತಿಯಾಳ ಎಷ್ಟೆಂದು
ಅದರಲ್ಲೇ ನಾ
 ಮುಳುಗಬಹುದೆಂದು

ಅರಿವಿರಲಿಲ್ಲ ನೀ ಬರುವವರೆಗೆ
ಒಲವೆಂದರೆ ಏನೆಂದು
ಅದರಿಂದಲೇ  ಬಾಳು
ಬೆಳಗುವುದೆಂದು

ಅರಿವಿರಲಿಲ್ಲ ನೀ ಬರುವವರೆಗೆ
ಪ್ರೀತಿ ಜೀವಜಲದಂತೆಂದು
ಒಣಗಿದ ಕೊರಡಲೂ ಹಸಿರು
ಮೂಡಿಸಬಹುದೆಂದು

ಅರಿವಿರಲಿಲ್ಲ  ನೀ  ಬರುವವರೆಗೆ
ಪ್ರೀತಿ  ಚೇತನವೆಂದು
ಚೈತನ್ಯವಿರದೊಡಲಿಗೆ
ಉಸಿರಾಗಬಹುದೆಂದು

ಅರಿವಿರಲಿಲ್ಲ ನೀ  ಬರುವವರೆಗೆ
ಪ್ರೀತಿ  ಸಿಹಿ ಜೇನೆಂದು
ಅದರ ಸವಿಯಿಂದ ಬಾಳಿಗೆ
ಸಿಹಿ ತುಂಬಬಹುದೆಂದು

ಕಮರಿದ್ದ ಬಾಳಿಗೆ ಒಲವ
ರಸಧಾರೆಯೆರೆದು
 ಜೀವಕಳೆ ತರಬಹುದೆಂದು
ಬಾಳು ಬದಲಾಗಬಹುದೆಂದು

ಅರಿವಾಯ್ತು ಒಲವೇ
ನೀ ಬಂದಮೇಲೆಯೇ ಅರಿತೆ
ಬದುಕು ಸುಂದರ ಹೂದೋಟವೆಂದು
ಪಡೆದೆ ಸಾರ್ಥಕತೆಯ ನಿನ್ನೊಲುಮೆಯಲಿ ಮಿಂದು

       ಶೈಲೂ.......
[8/6/2020, 2:06 pm] Dr. B. N. Shylaja Ramesh: ಹೋಲಿಕೆ ಇಹುದೇನು..??
**********************

ನಿನ್ನ ಪ್ರೀತಿಗೆ ಅದರ ರೀತಿಗೆ
ಯಾವುದಿದೆ ಹೇಳು ಹೋಲಿಕೆ.?
ನೀಲಿ ಬಾನಂಗಳ ಚುಕ್ಕಿ ಚಂದ್ರಮ
ಆಗುವುದೇನು ತಾಳಿಕೆ..??

ನಿನ್ನ ಪ್ರೀತಿಗೆ ಅದರ ರೀತಿಗೆ
ಸುಮದ ಕೋಮಲತೆಯೇ ಹೋಲಿಕೆ.?
ಬಿರಿದು ಅರಳಿ ಗಮನ ಸೆಳೆದ
ಘಮಲಿಗೂ ಇಲ್ಲ  ತಾಳಿಕೆ..!!

ನಿನ್ನ ಪ್ರೀತಿಗೆ ಅದರ ರೀತಿಗೆ
ಮಧುರ ಗಾನವೇ ಹೋಲಿಕೆ.?
ತಂತಿ ಮೀಟಿ ಭಾವ ಸ್ಪುರಿಸುವ
ವೀಣೆಗೂ ಇಲ್ಲ ತಾಳಿಕೆ..!!

ನಿನ್ನ ಪ್ರೀತಿಗೆ ಅದರ ರೀತಿಗೆ
ಪ್ರಕೃತಿಯಲಿಹುದೇ ಹೋಲಿಕೆ.?
ಇಳೆಯ ತಣಿಸುವ ಮಳೆಯ
ಹನಿ ಹನಿಗೂ ಇರದು ತಾಳಿಕೆ..!!

ನಿನ್ನ ಗಾಂಭೀರ್ಯದ ಭಾವಾಂತರಂಗಕೆ
ಸರಿ ಸಾಟಿಯೇನು ಆ ನೀಲಿ ಬಾನು.?
ಮಧುರ ನುಡಿಗಳ ಸವಿಮಾತಿನಂದಕೆ
ಸಾಟಿಯೇನು ಆ ಸಿಹಿಜೇನು.?

ನಗುವ ನಿನ್ನ ಮುಖದ ಚೆಲುವಿಗೆ
ಯಾವುದಿದೆ ಹೇಳು ಹೋಲಿಕೆ.?
ತಿಳಿ ಬಾನಲಿ ನಗುವ ಬಾಲರವಿಯ
ಕಿರಣ ಕಾಂತಿಯೇ ಹೋಲಿಕೆ..!!

ನಿನ್ನ ಪ್ರೀತಿಗೆ ಅದರ ರೀತಿಗೆ
ನಾನೇನು ನೀಡಲಿ ಕಾಣಿಕೆ.?
ಹೆಜ್ಜೆಜಾಡದು ಅನುಸರಿಸಿ ನಡೆಯುವೆ
ಮನತುಂಬಿ ನಕ್ಕ ಕ್ಷಣವದೇ ಹೋಲಿಕೆ..!!

         ಶೈಲೂ......
[10/6/2020, 12:49 pm] Dr. B. N. Shylaja Ramesh: #ಅಪ್ಪ

ಜೀವನದ ಗಾಡಿಗೆ ಒಂಟಿ ಎತ್ತಾಗಿ ದುಡಿದವರು
ಕಷ್ಟನೋವುಗಳನ್ನೆಲ್ಲ ಒಳಗೊಳಗೇ ನುಂಗಿದವರು
ಕುಟುಂಬದ ನೆಮ್ಮದಿಗೆ ಹಗಲಿರುಳು ಶ್ರಮಿಸಿದವರು
ಕಷ್ಟಸೋಕದೆಂತೆಮ್ಮ ಬೆನ್ನೆಲುಬಾಗಿ ಕಾಯ್ದ ಅಪ್ಪ ತಾನೇ ದೇವರು

        ಶೈಲಜಾ ರಮೇಶ್
[10/6/2020, 4:07 pm] Dr. B. N. Shylaja Ramesh: #ವ್ಯಾಕರಣ_ಕವನ

ಭಾವಗಳ ಬಿಂಬಿಸಲು ಭಾಷೆ ಬೇಕು
ಅರ್ಥವತ್ತಾಗಿರಲು ವ್ಯಾಕರಣ ಇರಬೇಕು
ಭಾಷೆಗಳಿಗೆ ಮೂಲ ಸೆಲೆ ಅಕ್ಷರಗಳಂತೆ
ಚಂದದಿ ಪೋಣಿಸಿದರೆ ಪದಗಳ ಭಾವಸಂತೆ

ಪದಪದಗಳನಷ್ಟೇ ಜೋಡಿಸಿದರೆ ಸಾಕೇನು?
ಪ್ರತ್ಯಯದ ಬಳಕೆಯಿಂದಲೇ ಪದದರ್ಥ ಗೊತ್ತೇನು?
ಪದದ ಕೊನೆಗೆ ಸೇರುವ ಅಕ್ಷರಗಳ ಗುಂಪು
ಅದರಿಂದಲೇ ಪದಗಳ ಅರ್ಥಕೆ ಸೊಂಪು

ಪ್ರಥಮಾ ವಿಭಕ್ತಿ #ಉ ಕ್ರಿಯೆಯನ್ನು ಹೆಸರಿಪ ಪದ
ನಾಮಪದಗಳಿಗೆ ಕ್ರಿಯಾಪದದ ನಂಟಿನ ಕದ
#ರಾಮ ನಾಮಪದಕೆ #ಉ ಕ್ರಿಯಾಪದ ಬೆಸೆದು ಆಯ್ತು
#ರಾಮನು ..#ಕೃಷ್ಣನು

ದ್ವಿತೀಯ ವಿಭಕ್ತಿ #ಅನ್ನು ಒತ್ತಿ ಹೆಸರಿಸುವ ಪದ
#ರಾಮನನ್ನು... #ಕೃಷ್ಣನನ್ನು
ತೃತೀಯಾ ವಿಭಕ್ತಿ #ಇಂದ ಕ್ರಿಯೆಯ ಉದ್ದೀಪಿಸುವ ಪದ
#ರಾಮನಿಂದ... ಕೃಷ್ಣನಿಂದ

ಚತುರ್ಥಿ ವಿಭಕ್ತಿ #ಗೆ_ಇಗೆ_ಕೆ ಕ್ರಿಯೆಯನ್ನು ನಡೆಸುವ ಪದ
#ರಾಮನಿಗೆ....ಕೃಷ್ಣನಿಗೆ...
ಷಷ್ಠಿ ವಿಭಕ್ತಿ #ಅ ನಂಟನ್ನು ಬೆಸೆವ ಪದ
#ರಾಮನ.... ಕೃಷ್ಣನ...

ಸಪ್ತಮಿ ವಿಭಕ್ತಿ #ಅಲ್ಲಿ  ಕ್ರಿಯೆಯನ್ನು ನಡೆಸುವ ಪದ
#ರಾಮನಲ್ಲಿ...#ಕೃಷ್ಣನಲ್ಲಿ
ವ್ಯಾಕರಣದ ವಿಭಕ್ತಿ ಪ್ರತ್ಯಯದಲ್ಲಿ
 ಭಾಷೆಯ ಒಳಾರ್ಥವೇ ತುಂಬಿಹುದಿಲ್ಲಿ

ಭಾಷೆಯಲ್ಲಿ ಭಾವವ ಬೆಸೆಯುವ ಕೊಂಡಿ
ವ್ಯಾಕರಣವೇ ಭಾಷೆಯ ಕಲಿಕೆಯ ಬಂಡಿ
ಭಾಷೆಯದು ಯಾವುದಾದರೂ ಶ್ರೀಮಂತ
ಕಲಿತು, ಕಳಿಸಿ, ಬೆಳೆಸುವವನವ ಧೀಮಂತ

   ಡಾ : B.N. ಶೈಲಜಾ ರಮೇಶ್
[10/6/2020, 7:42 pm] Dr. B. N. Shylaja Ramesh: ಆಡಿ ಕುಣಿವ ವಯಸ್ಸಲ್ಲಿ ಇದೆಂಥ ಕರ್ಮ
ದುಡಿದು ತಿನ್ನಬೇಕೆಂಬುದೇ ಬಾಳಿನ ಮರ್ಮ
ಆದರಿನ್ನೂ ಪಾಪ ಚಿಕ್ಕ ಪ್ರಾಯದ ಮಕ್ಕಳು
ದುಡಿಮಿಯೇ ಅನ್ನಕ್ಕೆ ದಾರಿ ಎನ್ನುವ ಒಕ್ಕಲು

ಕಣ್ಣಲ್ಲಿ ಇರಬಹುದು ಸಾವಿರಾರು ಕನಸು
ತೀರಿಸಲಾಗದ ಬಾಳ ಭವಣೆಯ ಮುನಿಸು
ಓದು ಬರಹವಾಯ್ತು ಅವರಿಗೆ ಮರೀಚಿಕೆ
ಚಿಕ್ಕಂದಿನಿಂದಲೇ ಒಗ್ಗಿಬಿಟ್ಟರಲ್ಲ ದುಡಿತಕೆ

ಹೆತ್ತವರ ಆಸರೆ ಇದ್ದಿದ್ದರೆ ಸಲೀಸು
ಕಂಡ ಕನಸೆಲ್ಲಾ ಆಗುತ್ತಿತ್ತೇನೋ ನನಸು
ಕುಡಿತದ  ಚಟಕ್ಕೆ ಬಿದ್ದ ತಾಯ್ತಂದೆಯ ಜೊತೆಗೆ
ಹೆಗಲು ಕೊಟ್ಟರಲ್ಲ ಪಾಪ ಸಂಸಾರದ ನೊಗಕೆ

ದುಡಿತದ ವಯಸ್ಸಲ್ಲದಿದ್ದರೂ ದುಡಿಯಬೇಕು
ಹಸಿದ ಹೊಟ್ಟೆಯ ತುಂಬಿಸಲೊಂದು ಕೆಲಸಬೇಕು
ಶ್ರಮಕ್ಕೆ ತಕ್ಕ ಬೆಲೆ ಅರಿಯದ ಅಮಾಯಕರು
ಕೊಟ್ಟಷ್ಟರಲ್ಲೇ ತೃಪ್ತಿ ಪಡುವ ಬಾಲಕಾರ್ಮಿಕರು

ಶೋಷಣೆಯಲ್ಲಿ ಸಿಕ್ಕಿ ಬಡಕಲಾದ ಜೀವ
ಯಾರೂ ಅರಿಯದಾದರಲ್ಲ ಈ ಮಕ್ಕಳ ನೋವ
ವಿದ್ಯೆಗಳಿಸಿದ್ದಿದ್ದರೆ ಉನ್ನತಪದವಿಗೇರಬಹುದಿತ್ತು
ಎಂಥಾ ಸ್ಥಿತಿಗಿಳಿಸಿವೆ ನೋಡಿ  ಹೊಟ್ಟೆ ತುಂಬಿಸುವ ತುತ್ತು

ಬಾಲ ಕಾರ್ಮಿಕ ಪದ್ಧತಿಗಿದೆ ಸರ್ಕಾರದ ನಿಷೇಧ
ಮಾಲೀಕರೇ ಮಾಡಬೇಡಿರಿ ಈ ಮಕ್ಕಳಲಿ ಬೇಧ
ಸರ್ಕಾರದ ಹಲವಾರು ಯೋಜನೆಗಳಿವೆ ಇವರ ಉನ್ನತಿಗೆ
ಎಲ್ಲರೂ ಕೈಜೋಡಿಸಬೇಕಿದೆ ಈ ಪದ್ಧತಿಯ ನಿರ್ಮೂಲನೆಗೆ

     ಶೈಲಜಾ ರಮೇಶ್
[11/6/2020, 11:24 am] Dr. B. N. Shylaja Ramesh: ತಂಗಾಳಿಯಲಿ ತೇಲಿ ಬಂತು ನೋಡು ನನ್ನ ಹೂ ನಗು
ಅದಕ್ಕೊಪ್ಪುವ ಸವಿರಾಗವ ನೀ ಹಾಡಿಬಿಡು
[12/6/2020, 12:01 pm] Dr. B. N. Shylaja Ramesh: #ಸ್ವರಚಿತ_ಕವನವಾಚನ_ಸ್ಪರ್ಧೆ

#ಶೀರ್ಷಿಕೆ

#ದೇಶಕ್ಕೆ_ಬಂದ_ಆಪತ್ತು_ಬೀದಿಗೆ_ಬಂದ_ಬದುಕು

ಅದೆಲ್ಲಿದ್ದಳೋ ಕೊರೊನಾ ಮಾರಿ
ಕುಳಿತೇ ಬಿಟ್ಟಳಲ್ಲ ತಳವೂರಿ
ಮುಕ್ತಿಯೆಂದಿಗೆ ಇವಳಿಂದ.?
ಕತ್ತರಿಸುತ್ತಿದ್ದಾಳಲ್ಲ ಕರುಳ ಸಂಬಂಧ

ಜನ ಜೀವನವೆಲ್ಲ ಅಸ್ತವ್ಯಸ್ತ
ಸ್ವಲ್ಪ ಕಡೆಗಣಿಸಿದರೂ ಅಸ್ವಸ್ಥ
ತಂದಳಲ್ಲ ನಮ್ಮನಮ್ಮಲ್ಲೇ ಅಂತರ.!!
ಆದರೂ ಹರಡುವಿಕೆ ಭಯಂಕರ.!!

ಪ್ರಪಂಚವೇ ಕೊರೊನಾ ಮುಷ್ಠಿಯಲಿ
ಶೀಘ್ರವಾಗಿ ಪಸರಿಸುತಿಹಳು ಸಮಷ್ಟಿಯಲಿ
ಸಾಮಾನ್ಯಜ್ವರ ಶೀತ ಬಂದರೂ ಭಯ
ಕಾಪಾಡು ಓ ದೇವಾ ನೀಡಿ ಅಭಯ

ದುಡಿತವಿಲ್ಲದೆ ಬಿತ್ತು ಆರ್ಥಿಕ ಸ್ಥಿತಿ
ಹೀಗೇ ಇದ್ದರೆ ಜೀವನ ಅಧೋಗತಿ
ದೇಶಕ್ಕೆ ಬಂದ ಈ ಆಪತ್ತು ತೊಲಗುವುದೆಂದು?
ಬೀದಿಗೆ ಬಂದ ಬದುಕು ಬೆಳಗುವುದೆಂದು?

    ಡಾ: B.N. ಶೈಲಜಾ ರಮೇಶ್
[12/6/2020, 12:40 pm] Dr. B. N. Shylaja Ramesh: #ನಡೆ_ಶಾಲೆಗೆ

ವಿದ್ಯೆ ಕಲಿಯಬೇಕು ಜಾಣೆ ನಡೆ ಶಾಲೆಗೆ
ಕಲಿತು, ಬೆಳೆದು ಬೆಳಕಾಗಬೇಕು  ಬಾಳಿಗೆ
ವಿದ್ಯೆಯೊಂದೇ ಯಾರೂ ಕದಿಯಲಾರದ ಸಂಪತ್ತು
ಕಲಿಕೆಯಿಲ್ಲದ ಬಾಳು ತರುವುದು ದೌರ್ಭಾಗ್ಯ ಆಪತ್ತು

ಇಂದಿನ ಕಲಿಕೆ ನಾಳಿನ ಬಾಳಿಗೆ ಬೆಳಕು
ಅಜ್ಞಾನ ತೊಡೆವ ವಿಜ್ಞಾನ ಬೇಕೇ ಬೇಕು
ಅಕ್ಷರ ಜ್ಞಾನವಿದ್ದರೇ ಗೌರವ ಈ ಸಮಾಜದಲಿ
ನಿರಕ್ಷರ ಕುಕ್ಷಿಗಳು ಮಿಂದೇಳುವರು ಅವಮಾನದಲಿ

ಸಾಕ ನಾವು ಬಳಲಿದ್ದು ವಿದ್ಯೆ ಕಲಿಯದೆ
ನಿತ್ಯಸೋಲು ಸಾಮಾನ್ಯಜ್ಞಾನದ ಅರಿವಿಲ್ಲದೆ
ನೀನೂ ನಮ್ಮಂತಾಗುವುದು ಬೇಡ ಮಗಳೇ
ವಿದ್ಯೆಯಿಲ್ಲದ ಬಾಳು ಶುನಕನಂತೆ ನಿತ್ಯ ರಗಳೆ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ
ಅಜ್ಞಾನವ ತೊಲಗಿ ಜ್ಞಾನದ ಬೆಳಕು ಹರಿದಂತೆ
ಸಮಯೋಚಿತ ನಿರ್ಧಾರಕ್ಕೆ ಬುದ್ಧಿಯಿರಬೇಕು
ವಿದ್ಯೆಯೇ ಸಾಧನೆಗೆ ಪೂರಕ ಬೆಳಗುವುದು ಬದುಕು

ನಡೆ ಮಗಳೇ ಶಾಲೆಗೆ ಬಿಟ್ಟು ಬರುವೆ
ಕಲಿತು ಗಳಿಸು ನೀನು ಸುಜ್ಞಾನವೆಂಬ ಒಡವೆ
ಅಲ್ಲಿಲ್ಲ ಜಾತಿಮತ ಮೇಲುಕೀಳಿನ ಅಂತರ
ಶಾಲೆ ದೇವಮಂದಿರದಂತೆ ಮಾಡು ನಮಸ್ಕಾರ

ಡಾ: B.N. ಶೈಲಜಾ ರಮೇಶ್
[13/6/2020, 8:19 pm] Dr. B. N. Shylaja Ramesh: ಮದುವೆ ದಿನದ ಶುಭಾಶಯಗಳು

ಮೃದು ಮನದ ಸುಸ್ವರದ ವೀಣಾ
ನೀ ಉಮೇಶರ  ಹೃದಯದರಸಿ
ಅದೆಂಥ ಅನುಬಂಧ ಅಕ್ಕ..ನೀ ನನ್ನ ಪ್ರಾಣ
ನೀ ಯುಗಾದಿ ಬಳಗದ ಚೆಲುವರಸಿ

ತುಂಬು ಹೃದಯದ ಹಾರೈಕೆಯಿದು ಅಕ್ಕಾ
ನೀ ಹೊಸಬಾಳಿಗಡಿಯಿಟ್ಟ ದಿನಕೆ
ನೀ ನಗುತ್ತಿದ್ದರೆ ಬೆಳದಿಂಗಳೇ...ಪಕ್ಕಾ👍
ದಿನವೂ ಹುಣ್ಣಿಮೆಯಿರಲೆಂದು ಹಾರೈಕೆ

ಕಳೆದ ವರ್ಷಗಳು ಎಷ್ಟಾದರೇನು.?
ಮಾಸದ ಸಂಬಂಧವಿರಲಿ ಸದಾ
ಕೈಹಿಡಿದ ದಿನ ಮರೆಯಲು ಸಾಧ್ಯವೇನು?
ಮನದಿ ನವಿರು ಭಾವವಿರಲಿ ಅವಿರತ

ಸಂತಸವಿರಲಿ ಅನುದಿನ ಸಾಂಗತ್ಯದಲಿ
ನನ್ನೊಡೆಯ ಕೃಷ್ಣನ ಆಶೀರ್ವಾದವಿರಲಿ
ಕಾಲ ಉರುಳಿದಷ್ಟೂ ಒಲುಮೆ ಹೆಚ್ಚಾಗಲಿ
ಸಂತಸದ ಈ ದಿನದ ಹರುಷ ದುಪ್ಪಟ್ಟಾಗಲಿ

ಅಂತರಾಳದ ಬಯಕೆಯಿದು ಅಕ್ಕಾ
ಎಲ್ಲ ಸಂತಸ ನಿನ್ನ ಕಾಲಡಿ ಬರಲಿ
ನೂರು ವಸಂತಗಳ ಸಾಂಗತ್ಯವಿರಲಿ ಅಕ್ಕಾ
ಬಯಸುವೆ ಶುಭವ ಈ ವಾರ್ಷಿಕೋತ್ಸವದಲಿ

ವೀಣಕ್ಕಾ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐💐💐💐
[13/6/2020, 9:30 pm] Dr. B. N. Shylaja Ramesh: ಮೃದು ಮನದ ಸುಸ್ವರದ ವೀಣಾ
ನೀ ಉಮೇಶರ  ಹೃದಯದರಸಿ
ಅದೆಂಥ ಅನುಬಂಧ ಅಕ್ಕ..ನೀ ನನ್ನ ಪ್ರಾಣ
ನೀ ಯುಗಾದಿ ಬಳಗದ ಚೆಲುವರಸಿ

ತುಂಬು ಹೃದಯದ ಹಾರೈಕೆಯಿದು ಅಕ್ಕಾ
ನೀ ಹೊಸಬಾಳಿಗಡಿಯಿಟ್ಟ ದಿನಕೆ
ನೀ ನಗುತ್ತಿದ್ದರೆ ಬೆಳದಿಂಗಳೇ...ಪಕ್ಕಾ👍
ದಿನವೂ ಹುಣ್ಣಿಮೆಯಿರಲೆಂದು ಹಾರೈಕೆ

ಕಳೆದ ವರ್ಷಗಳು ಎಷ್ಟಾದರೇನು.?
ಮಾಸದ ಸಂಬಂಧವಿರಲಿ ಸದಾ
ಕೈಹಿಡಿದ ದಿನ ಮರೆಯಲು ಸಾಧ್ಯವೇನು?
ಮನದಿ ನವಿರು ಭಾವವಿರಲಿ ಅವಿರತ
[13/6/2020, 9:30 pm] Dr. B. N. Shylaja Ramesh: ಸಂತಸವಿರಲಿ ಅನುದಿನ ಸಾಂಗತ್ಯದಲಿ
ನನ್ನೊಡೆಯ ಕೃಷ್ಣನ ಆಶೀರ್ವಾದವಿರಲಿ
ಕಾಲ ಉರುಳಿದಷ್ಟೂ ಒಲುಮೆ ಹೆಚ್ಚಾಗಲಿ
ಸಂತಸದ ಈ ದಿನದ ಹರುಷ ದುಪ್ಪಟ್ಟಾಗಲಿ

ಅಂತರಾಳದ ಬಯಕೆಯಿದು ಅಕ್ಕಾ
ಎಲ್ಲ ಸಂತಸ ನಿನ್ನ ಕಾಲಡಿ ಬರಲಿ
ನೂರು ವಸಂತಗಳ ಸಾಂಗತ್ಯವಿರಲಿ ಅಕ್ಕಾ
ಬಯಸುವೆ ಶುಭವ ಈ ವಾರ್ಷಿಕೋತ್ಸವದಲಿ

ವೀಣಕ್ಕಾ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐💐💐💐
[13/6/2020, 10:14 pm] Dr. B. N. Shylaja Ramesh: ಮೂಡಣದಿ ಮೂಡುತಿಹ ಭಾಸ್ಕರ
ಚೆಲ್ಲುತ್ತಿದ್ದಾನೆ ಹೊಂಬೆಳಕ ಹೊನಲು
ಪೂರ್ಣಿಮೆಯ ಬೆಳದಿಂಗಳಿಗೆ ಶುಭ
ಜನ್ಮದಿನದ ಶುಭಾಶಯ ಕೋರಲು
ಮಾವಿನ ತಳಿರಲಿ ಅಡಗಿಹ ಕೋಕಿಲ
ನಲ್ಮೆಯಲಿ ಹಾಡುತ್ತಿದೆ ಗೆಳತಿಗೆ
ಜನ್ಮದಿನಕೆ ಶುಭ ಶುಭಾಶಯ
ಆ ತರುವಿಗೆ ಹಬ್ಬಿದ ಲತೆಯಲಿ ಹೂವು
ಅರಳುತ ಮೆಲ್ಲನೆ ಪಸರಿಸಿ ಘಮಲು
ಹೇಳುತಿದೆ ಜನ್ಮದಿನದ ಶುಭಾಶಯ
ಮೆಚ್ಚಿನ ಗೆಳತಿಗೆ ಕವಿತೆಯ ಕೊಡುಗೆ
ಶತವರ್ಷ ದಾಟಲೀ ಬದುಕಿನ ನಡಿಗೆ
ಯಶಸ್ಸಿನ ಪಥದಲ್ಲಿ ನಿನಗಿರಲೆಂದು ಗೆಲುವು
ಹಾರೈಸುವೇ ಗೆಳತಿ ಜನ್ಮದಿನಕೆ ಶುಭಾಶಯ

         ಶೈಲೂ.....
[15/6/2020, 8:09 pm] Dr. B. N. Shylaja Ramesh: ಅನುಮಾನವೇ ಇಲ್ಲ
ಆ ದಿನ ಕನಸಲ್ಲಿ ಬಂದವ ನೀನೇ
ಇಂಚಿಂಚಾಗಿ ಮಾನವ ಹೊಕ್ಕು
ಈಚೆ ಬರಲಾರದಂತೆನ್ನ ಬಂಧಿಸಿದೆ
ಉಳಿದುಬಿಟ್ಟೆ ಏಕೆ ನೀ ಮನದಲ್ಲಿ
ಊರಿಬಿಟ್ಟೆ ತಳ ಎನ್ನ ಹೃನ್ಮ0ದಿರದಿ
[18/6/2020, 5:05 pm] Dr. B. N. Shylaja Ramesh: ಪ್ರೇಮ ವಾರಿಧಿಯ ಅಲೆಗಳು ಸೆಳೆದಿದೆ ಸಖ
ನಿನ್ನಾಲಿಂಗನದಲಲಿ ಮನವು ಅರಳಿದೇ ಸಖ

ಹೊಂಬಣ್ಣದ ಈ ಮುಸ್ಸಂಜೆಯಲಿ ಕಲ್ಪನೆಯ ಕನಸು
ಗರಿಗೆದರಿ ಆಗಸದಲಿ ಸಂತಸದಲಿ ತೇಲುತಿದೆ ಸಖ

ಬಾಳ ಪಥದಲಿರುವ ದುಃಖದ ಮುಳ್ಳುಗಳ ಸರಿಸಿ
ಪ್ರೀತಿಯ ಹೂಗಳ ಅಡಿಗಡಿಗೆ ಹಾಸಬೇಕಿದೆ ಸಖ

ಸವಿ ನೆನಪುಗಳ ಸಾಂಗತ್ಯದಲಿ  ನೋವೆಲ್ಲ ಮರೆತು
ಎದೆಯ ಗುಡಿಯಲೊಂದು ನಿನ್ನಡಿ ಇಡಬೇಕಿದೆ ಸಖ

ಶೈಲದಂತಿರುವ ಕಷ್ಟವೆಲ್ಲ ಕರಗುವ ಕಾಲ ಬಂದಿದೆ
ಬದುಕ ಸುಂದರ ಕ್ಷಣಗಳ ಸಿಹಿಜೇನ ಸವಿಯಬೇಕಿದೆ ಸಖ

          ಶೈಲೂ.....
[21/6/2020, 4:21 pm] Dr. B. N. Shylaja Ramesh: #ಅಪ್ಪ

ಹೊಣೆಗಾರಿಕೆಯ ಭಾರ ಹೊತ್ತ ಜೀವ
ಪಾಪ, ಸಹಿಸಬೇಕಲ್ಲ ತರತರದ ನೋವ
ಚಿವುಟಿ ಮನದಲುದಿಸಿದ ಆಸೆಗಳನ್ನ
ಸಲಹುವ ಭಾರವ ಹೊತ್ತವರನ್ನ
ಕರೆಯಲಾದೀತೇ ಬರೀ ಅಪ್ಪನೆಂದು?
ಮನಗಾಣಬೇಕು.. ಅವ ತನ್ನೆಲ್ಲಾ ಆಸೆಗಳನ್ನ 
ಮರೆತ ತ್ಯಾಗಿಯೆಂದು.!
ಅವ ಸಂಸಾರದ ಬಂಡಿಯ ನೊಗಕೆ 
ಕಟ್ಟಿದ ಬಡಕಲು ಹೋರಿ..!!
ಹೆಣಗಿ ಹೆಣಗಿ ಸವೆಸಿದರು ಬಾಳದಾರಿ..!!

          ಶೈಲೂ.....
[22/6/2020, 8:01 am] Dr. B. N. Shylaja Ramesh: ಭಾವನೆಗಳ ಭೋರ್ಗರೆತ
********************
ಜುಳುಜುಳು ಹರಿವ
ನೀರ ಮೊರೆತದೊಂದಿಗೆ
ಮನದ ಭಾವನೆಗಳ
ಭಾರೀ ಭೋರ್ಗರೆತ. !!

ಬಗೆಹರಿಯದ ಗೊಂದಲ
ಎದೆಯ ತಳಮಳಕೇ
ಪೂರ್ಣ ವಿರಾಮವಿತ್ತು
ಆಗಬೇಕಿದೆ ಪ್ರಶಾಂತ..!!

ಮೇಲಿದೆ  ಅಗಣಿತ ತಾರಾ
ಮಂಡಲಗಳ ನೀಲಾಕಾಶ
ಮನದಲಿದೆ  ಅಗಣಿತ
ನೋವುಗಳ ಭಾರೀ ಕೊರೆತ

ನಿಲ್ಲಬೇಕಿದೆ ಕುಗ್ಗಿಕರಗದೆ
ಸಿಡಿಲಹೊಡೆತಕ್ಕೂ ಬಗ್ಗದೆ
ಸಹಸ್ತ್ರಮಾನಕ್ಕೂ ಪ್ರತಿನಿಧಿ
ಭಾರೀ ಬಂಡೆ ಕಲ್ಲಂತೆ

ಮರೆಯ ಬೇಕಿದೆ ದುಗುಡ
ಕಣ್ಣೀರಿಗೂ ಎಡೆಕೊಡದೆ
ಸುರಿ ಮಳೆಗೂ ನೆನೆಯದ
 ಜಗ್ಗದ ಹೆಬ್ಬಂಡೆಯಂತೆ

ಸುತ್ತಲಿನ ಹಸಿರು ಪರಿಸರ
ಮುದನೀಡಲಿ ಮಂಕಾದ ಮನಕೆ
ಚೇತನವೀವ ನಿಸರ್ಗಮಾತೆ
ನೀಡಲಿ ಆಹ್ಲಾದ ರವಿಮೂಡಿದಂತೆ

              ಶೈಲೂ.....
ಚಿತ್ರ : ಮುನಿರಾಜು ಸರ್ ವಾಲ್ನಿಂದ ತೊಗೊಂಡಿದ್ದು

ಥ್ಯಾಂಕ್ಯೂ ಮುನಿರಾಜ್ ಸರ್🙏🙏
[23/6/2020, 10:09 pm] Dr. B. N. Shylaja Ramesh: ಕಲ್ಪನಾಲೋಕದಲ್ಲಿ
****************

ಬಾನಲ್ಲಿ ತೇಲುವ
ತಿಳಿಮೊಡದಂತೆ ಮನವು
ಸೋಕಲು ಸ್ಪೂರ್ತಿಯ ತಂಗಾಳಿ
ಸುರಿವುದು ಮಳೆಯಂತೆ ಕವನವು..

ಸೋನೆ ಮಳೆಯ ತೆರದಿ
ಭಾವ ಉದಿಸುವುದು ಅಕ್ಷರದಿ
ಸ್ವಾತಿ ಮಳೆಯ ಹನಿಯಂತೆ ಪ್ರಾಸ
ಮುತ್ತಾಗಿ ಹೊಳೆದಂತೆ ಭಾಸ..

ಜುಳುಜುಳು ಹರಿದಂತೆ.ಭಾವ
ಮಧ್ಯೆ ಅಲಂಕಾರದ ಪ್ರಭಾವ
ಮಿಂಚಿನಂತೆ ಒಳದನಿಯ ಕವಿತೆ
ಮೆಲುದನಿಯಲಿ ಗುನುಗುವುದಂತೆ..

ತೇಲುವ ಬೆಳ್ಮೋಡದ ತೆರದಿ
ಮನವು ಉಲ್ಲಾಸದಿ ತೇಲಿ
ಬಾನಲಿ ಕಂಡ ಮಳೆನಿಲ್ಲಿನಂತೆ
ಎದೆಯೊಳಗೆ ಹೊಸ ಕವಿತೆಗಳ  ಸಂತೆ..

         ಶೈಲೂ...
[25/6/2020, 1:00 pm] Dr. B. N. Shylaja Ramesh: 🙏 *ಶ್ರೀ ಗುರುಭ್ಯೋನಮಃ* 🙏

 *ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ* 
 *ಚಕ್ಷುರುನ್ಮೀಲಿತಂಯೇನ ತಸ್ಮೈ ಶ್ರೀ ಗುರುವೇನಮಃ* 

          ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನ ಹರಿಸುವ ವ್ಯಕ್ತಿಯೇ ಗುರು, ಅಂತಹ ಗುರುವಿಗೆ ನಮಸ್ಕಾರ ಎನ್ನುತ್ತದೆ ವೇದಮಂತ್ರಗಳು.
    ಕಲಿಯುವವನಿಗೆ ಸತ್ಯ ದರ್ಶನ ಮಾಡಿಸುವ, ಸನ್ಮಾರ್ಗವನ್ನು ತೋರಿಸುವ ಪೂಜ್ಯ ಸ್ಥಾನದಲ್ಲಿರುವ ವ್ಯಕ್ತಿಯೇ ಗುರು.

         ಗುರು' ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. "ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ" ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ.
ಜಗತ್ತಿನಲ್ಲಿ ಯಾವುದೇ ವಿಷಯವನ್ನು ಕಲಿಯಬೇಕಾದರೆ ಗುರುವಿನ ಸಾನ್ನಿಧ್ಯ ಬೇಕು. ಭಾರತೀಯ ಪರಂಪರೆಯಲ್ಲಿ ಶಿಷ್ಯ ಮತ್ತು ಗುರುವಿಗೆ ಮಹತ್ತರ ಸಂಬಂಧವಿದೆ. ವ್ಯಕ್ತಿಯು ಭಗವಂತನ ಕಡೆಗೆ ಹೋಗಲು ಆಧ್ಯಾತ್ಮಿಕ ಶಕ್ತಿ, ಧ್ಯಾನ, ದೀಕ್ಷೆ, ಅಗತ್ಯ ಮಂತ್ರವನ್ನು ಹೇಳಿಕೊಟ್ಟು ಮಾರ್ಗದರ್ಶನ ಮಾಡುವುದು ಗುರುವಿನ ಕೆಲಸ . ಅಲ್ಲದೆ ಹಿಂದಿನಿಂದಲೂ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ.
    *ಗುರು ಬ್ರಹ್ಮ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ* 
 *ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ*
ಎಂದು ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾರೆ.
 ಗುರು ಸೃಷ್ಟಿ ಸ್ಥಿತಿ ಮತ್ತು ಲಯಕಾರಕಾನೂ ಹೌದಲ್ಲವೇ? ಶಿಕ್ಷಕ ಭೌತಿಕವಾಗಿ ಏನನ್ನೂ ಸೃಷ್ಟಿಸದಿರಬಹುದು, ಆದರೆ ಮಕ್ಕಳ / ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು, ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯವನ್ನು, ವಿದ್ಯಾರ್ಥಿಗಳ ಮನಸಲ್ಲಿ ಸೃಷ್ಟಿ ಮಾಡುವವನು, ಅವು ಪಕ್ವವಾಗಿ ಬೆಳೆಯುವಂತೆ ವಿವಿಧ ತತ್ವಗಳನ್ನು ತಲೆಯಲ್ಲಿ ತುಂಬುವವನು ಮತ್ತು ದಾರಿತಪ್ಪುವ ವಿದ್ಯಾರ್ಥಿಗಳ ನಡೆ ನುಡಿಗಳನ್ನು, ವಿದ್ಯಾರ್ಥಿಗಳಲ್ಲಿನ ಕೆಟ್ಟ ಯೋಚನೆಗಳನ್ನು ನಾಶಮಾಡಿ ಸರಿಯಾದ ದಾರಿಯನ್ನು ತೋರುವವನು ಗುರುವೇ ಆಗಿದ್ದಾನೆ.

       ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಕ್ರಮೇಣ ತನ್ನ ಸುತ್ತಮುತ್ತಲಿನವ ಭಾಷೆಯನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ನಿಧಾನವಾಗಿ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಜನರು, ವಸ್ತುಗಳಿಂದ ಅನೇಕ ವಿಷಯಗಳನ್ನು ಕಲಿಯುತ್ತದೆ. ಆದರೆ ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ. ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ಅದರ ವೇಗ ಎರಡೂ ಬದಲಾಗುತ್ತಾ ಹೋಗುತ್ತದೆ. ಇದು ಬಹಳ ಮನುಷ್ಯನ ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ. ಮನೆಯಲ್ಲಿ ತಾಯಿ ತಂದೆ ಅಜ್ಜ ಅಜ್ಜಿಯರು, ಬಂಧು ಬಳಗದವರು ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನೂ, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು. ‘ *ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’* ಎಂದು ದಾಸವಾಣಿ ಇದೆ, ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ದಿಗಳ ಜೀವನದ ವಿವಿಧ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜೊತೆಗಿದ್ದನೆಂದು ತಿಳಿಯುತ್ತದೆ. ಮನಸ್ಸು ಎಲ್ಲ ಕಡೆಗೂ ಓಡುತ್ತಿರುತ್ತದೆ. ಆದರೆ ಅಂತಹ ಮನಸ್ಸಿಗೆ ಸರಿಯಾದ ದಾರಿ ತೋರುವ, ಬುದ್ದಿಯನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವ ಮಾರ್ಗದರ್ಶನ ತೋರಿಸುವ ಶಕ್ತಿಯಿರುವುದು ಕೇವಲ ಗುರುವಿನಲ್ಲಿ ಮಾತ್ರ.
ಹಾಗಾಗಿಯೇ ಗುರು ಒಬ್ಬ ಆದರ್ಶ ವ್ಯಕ್ತಿ, ತ್ರಿಮೂರ್ತಿ ಗಳಿಗೆ ಸಮನಾದವರು.  ಇಂತಹ ಗುರುವಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

         ಈ ಗುರುವಂದನಾ.ಅಭಿಯಾನದ ಸಂದರ್ಭದಲ್ಲಿ ನನ್ನನ್ನು ತಿದ್ದಿ ತೀಡಿದ ಅನೇಕರನನ್ನು ಗೌರವದಿಂದ ನೆನೆಯುತ್ತೇನೆ🙏
ಮೊದಲಿಗೆ ನನ್ನ ತಾಯಿ,  ತುಂಬು ಸಂಸಾರದ ಒಡತಿ, ಕ್ಷಣಮಾತ್ರವೂ ಬಿಡುವಿಲ್ಲದ ಜೀವನ ಶೈಲಿಯಲ್ಲೂ ಹೆಜ್ಜೆಜ್ಜೆಗೂ ಅಕ್ಷರಜ್ಞಾನವನ್ನು ಕೊಟ್ಟು, ಕಥೆಗಳ ಮೂಲಕವೇ ಶಿಕ್ಷಣ ವನ್ನು ಕೊಟ್ಟಾಕೆ. ಸರಳ ಉದಾಹರಣೆಗಳ  ಮೂಲಕವೇ ಗಣಿತವನ್ನು ಕಲಿಸಿದಾಕೆ. ನನ್ನಮ್ಮ, ನನ್ನ ಅಪ್ಪನ ಮಾರ್ಗದರ್ಶನ ದಿಂದ ಶಾಲೆಗೆ ಸೇರುವ ಮೊದಲೇ  ಪುಸ್ತಕ ವನ್ನು ಓದಲು ಕಲಿತಿದ್ದೆ.

        ನನ್ನ ಅಣ್ಣಂದಿರು, ಅಕ್ಕ, ನಾನು ಮತ್ತೂ ಕಲಿತು ಮತ್ತೊಬ್ಬರಿಗೆ ಕಲಿಸುವಷ್ಟು ಜ್ಞಾನ ಕೊಟ್ಟ ಗುರುಗಳು.
ಇನ್ನು ನನ್ನ ಪ್ರಾಥಮಿಕ ಶಾಲಾ ದಿನಗಳ ನನ್ನ ಅಚ್ಚುಮೆಚ್ಚಿನ , ನಂಜಯ್ಯ ಮಾಸ್ಟರ್, ರಾಮಕೃಷ್ಣಯ್ಯ ಮಾಸ್ಟರ್, ಮಾಧೂರಾವ್ ಮಾಸ್ಟರ್, ಚಂಪಕವಲ್ಲಿ ಮೇಡಂ... ಇವರ ಗರಡಿಯಲ್ಲಿ, ಅಚ್ಚುಮೆಚ್ಚಿನ ಶಿಷ್ಯಳಾಗಿ,  ಶಾಲೆಗೇ ಪ್ರಥಮ ಸ್ಥಾನ ಗಳಿಸುವಲ್ಲಿ ಸಹಕಾರಿಯಾಯ್ತು,

         ನನ್ನೆಲ್ಲಾ ಯಶಸ್ಸಿಗೆ ಬೆನ್ತಟ್ಟಿ ಪ್ರೋತ್ಸಾಹಿಸುತ್ತಾ ಮತ್ತೂ ಕಲಿಕೆಗೆ ಆಸ್ಥೆ ತುಂಬಿದವರು ನನ್ನಜ್ಜ ಶ್ರೀಮೆಂಕಟರಾಮಯ್ಯ ನವರು.
       ಹೈಸ್ಕೂಲ್ ನಲ್ಲಿದ್ದದ್ದು ಎಲ್ಲಾ ನನ್ನ ಮೆಚ್ಚಿನ ಗುರುಗಳೇ...ASN ಸರ್, CV ಸರ್, CGS ಸರ್ ಕನ್ನಡ ಮಾಸ್ಟರ್ ಶಿವಶಂಕರ್, PT ಮಾಸ್ಟರ್ ,  ಸದಾ ಬಿಗುಮುಖದಲ್ಲೇ ಇದ್ದರೂ, ಕಲಿಸುವುದರಲ್ಲಿ ನಿಸ್ಸೀಮರಾದ ಮ್ಯಾತ್ಸ್ ಮಾಸ್ಟರ್ GS, ಇವರೆಲ್ಲರ ಪ್ರೀತಿಯ ಆಶೀರ್ವಾದ ನನ್ನ ಮೇಲಿದೆ. ಈ ಗುರುಗಳನ್ನ ಅದೆಷ್ಟು ಸ್ಮರಿಸಿದರೂ ಕಡಿಮೆಯೇ..
ಇನ್ನು PU ಕಾಲೇಜ್ನ  ರುದ್ರಾಣಿ ಮಿಸ್, ವೈಜಯಂತಿ ಮಿಸ್, ಲಲಿತ ಮಿಸ್ ಇವರ ಆದರಣೆ ವಿಶ್ವಾಸವನ್ನಂತೂ ಹೇಳತೀರದು.
ಡಿಗ್ರಿ ಕಾಲೇಜಿನ ನನ್ನ ಅಚ್ಚುಮೆಚ್ಚಿನ ಗುರುಗಳಾದ ಬಚ್ಚನ್ ಮಾಸ್ಟರ್( ತುಂಬಾ ಉದ್ದ ಇದ್ದಿದ್ರಿಂದ ಹಾಗೆ ಕರೀತಾ ಇದ್ದದ್ದು ನಾನು😊ಅವರ ಹೆಸರು ಶಿವರಾಮ ರೆಡ್ಡಿ) ಜಯ ಮೇಡಂ ಇವರೆಲ್ಲರ, ಉದಾರ ಮನಸ್ಸಿನ , ನಿಸ್ವಾರ್ಥ ಕಲಿಸುವಿಕೆಯ ಕಾರಣದಿಂದಾಗಿ ನನ್ನ ವ್ಯಕ್ತಿತ್ವವನ್ನ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಯ್ತು🙏ಇವರೆಲ್ಲರಿಗೂ ನಾನು ಋಣಿ.

        ನನ್ನ ಆಧ್ಯಾತ್ಮ ಗುರುಗಳು ಶ್ರೀರಾಮಕೃಷ್ಣಾಶ್ರಮದ  ಶ್ರೀಮತ್ ಸ್ವಾಮಿ  ಪುರುಷೋತ್ತಮಾನಂದಜಿ ಮಹಾರಾಜ್, ಶ್ರೀಮತ್ ಸ್ವಾಮಿ ಹರ್ಷಾನಂದಜಿ ಮಹಾರಾಜ್, ಶ್ರೀಮತ್ ಸ್ವಾಮಿ  ತಪತ್ಸ್ಯಾನಂದಜಿ ಮಹಾರಾಜ್ ಇವರುಗಳ  ನಿಷ್ಕಾಮ, ನಿಸ್ವಾರ್ಥ, ಸಪ್ರೇಮ ಮಾರ್ಗದರ್ಶನ ದಲ್ಲಿ ನನ್ನ ಸ್ವಚ್ಛ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವೀಯಾದೆ.  ಇದು ನನ್ನ ದೈವ ಶ್ರೀಕೃಷ್ಣ ಕಲ್ಪಿಸಿದ ಅಹೋಭಾಗ್ಯ🙏 ನನ್ನಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಗಳನ್ನು ಉದ್ದೀಪಿಸುವಲ್ಲಿ ಶ್ರೀರಾಮಕೃಷ್ಣ ಆಶ್ರಮದ ಪಾತ್ರ ಮಹತ್ವವಾದದ್ದು. ಆ ಮಹೋನ್ನತ ಭಾಗ್ಯವನ್ನಿತ್ತ ನನ್ನ ಆಧ್ಯಾತ್ಮಿಕ ಗುರುಗಳಿಗೇ ನಾನು ಚಿರಋಣಿ🙏🙏
      ಇನ್ನು ಜ್ಯೋತಿಷ್ಯ ಕಲಿಕೆಗೆ ಓಂನಾಮ ಹಾಡಿದ್ದು  ನನ್ನ ತಂದೆ ಹಾಗೂ ನನ್ನ ಅಣ್ಣ ಆದ್ರೂ.... ಶಾಸ್ತ್ರೀಯವಾಗಿ ಕಲಿತದ್ದು  ದಿವ್ಯಜ್ಯೋತಿ ಕಾಲೇಜ್ ಆಫ್ ಅಸ್ತ್ರಾಲಜಿ ಯಲ್ಲಿ ಅಲ್ಲಿನ  ಗುರುಗಳಾದ ಶ್ರೀಮಾನ್, ಚಂದ್ರಶೇಖರ್, ಸರ್, ಸುಧೀಂದ್ರ ಸರ್, ಬದ್ರೀನಾಥ ಸರ್, ರಾಮಮೂರ್ತಿ ಸರ್, ವಿಶೇಷವಾಗಿ G.V.ಮೂರ್ತಿ ಸರ್, ಜ್ಯೋತಿ ಪ್ರಕಾಶ್ ಸರ್, ಸುರೇಶ್ ಸರ್.. ಇವರೆಲ್ಲರ ಮಾರ್ಗದರ್ಶನ ದಿಂದ ಇಂದು ಜ್ಯೋತಿಷ್ಯ ದಲ್ಲಿ ಸಂಶೋಧನೆ ಮಾಡಿ.ಡಾಕ್ಟರೇಟ್ ಪಡೆಯುವಲ್ಲಿ ಸಹಕಾರಿಯಾಯ್ತು.  ನನ್ನೆಲ್ಲಾ ಜ್ಯೋತಿಷ್ಯ ಗುರುಗಳ ಸಲಹೆ, ಸಹಕಾರ, ಆಶೀರ್ವಾದದ ಪ್ರತಿಫಲ ಇಂದು ನಾನೊಬ್ಬ ಉತ್ತಮ ಜ್ಯೋತಿಷಿ. ಹಾಗೂ " *ನಕ್ಷತ್ರ ಮಾಲಿಕೆ"* ಅನ್ನುವ ಜ್ಯೋತಿಷ್ಯ ಪುಸ್ತಕ ಬರೆಯಲು ಪ್ರೇರೇಪಿಸಿತು. ನನ್ನ ಜ್ಯೋತಿಷ್ಯ ದ ಸರ್ವ.ಗುರುಗಳಿಗೂ ನಾನು ಅಭಾರಿ🙏🙏
ಇನ್ನು ಸಾಹಿತ್ಯ ವಿಷಯಕ್ಕೆ ಬಂದರೆ..  ಚಿಕ್ಕಂದಿನಿಂದಲೂ ಬರೆಯುವ ತುಡಿತ ಇದ್ದದ್ದು ನಿಜವೇ ಆದರೂ...ಅದನ್ನ ಸಮರ್ಪಕವಾಗಿ ಬಳಸಿಕೊಂಡದ್ದು ನನ್ನ ಮುದ್ದು ಮಗ ಚಿಕ್ಕ ಹುಡುಗನಾಗಿದ್ದಾಗ  ಅವನಲ್ಲಿ  ಬಾಲಭಾಷೆಯ ಸಾಹಿತ್ಯ ಮೊಳೆತಾಗ..!!!  8ರ ಹರೆಯದ ಪೋರ ತನ್ನ ಅನಿಸಿಕೆಗಳನ್ನು ಪದಗಳಲ್ಲಿ ಹಿಡಿದಿಡುವ ಸಾಹಸ ಮಾಡುತ್ತಿದ್ದಾಗ..!!
ಆಗಲೇ ನನ್ನಲ್ಲಿ ಸುಪ್ತವಾಗಿದ್ದ ಕವಯತ್ರಿ ತಲೆಯೆತ್ತಿದ್ದು. ನನಗೆ ಸ್ಫೂರ್ತಿಯಾಗಿ ನಿಂತದ್ದು ನನ್ನ ಮುದ್ದುಮಗ.  ಆನಂತರ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನ ತಿದ್ದಿ ತೀಡಿದ್ದು  *ಶ್ರೀಮಾನ್ ಗಣೇಶ್ ಪ್ರಸಾದ ಪಾಂಡೇಲು* ಗುರುಗಳು, ಅವರ ಮಾರ್ಗದರ್ಶನದಲ್ಲಿ ಸಾಹಿತ್ಯ ಅಭಿಯಾನ ನಿರಾತಂಕವಾಗಿ ಸಾಗಿದೆ. ಅವರ ನಂತರದ ಸ್ಥಾನ *ನಾಗೇಶ್ Mn* ಅವರದ್ದು .
ನನ್ನೆಲ್ಲಾ ತಪ್ಪು ಒಪ್ಪುಗಳನ್ನು ತಿಳಿಸಿ ತಿದ್ದಿ ತೀಡಿದ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ಗುರುಸಮಾನರು🙏 ಎಲ್ಲರಿಂದ ಬೆಳೆದಿದ್ದೇನೆ, ಬೆಳೆಯುತ್ತಿದ್ದೇನೆ.
        ಬಾಲ್ಯದಿಂದ ಇಂದಿನವರೆಗೂ... ಪ್ರತಿಹಂತದಲ್ಲೂ ನನ್ನ ಬೆಳವಣಿಗೆಗೆ ಮಾರ್ಗದರ್ಶಕರಾಗಿ, ಸಹಕಾರವಿತ್ತ ನನ್ನೆಲ್ಲ ಗುರುಗಳಿಗೂ, ಗುರು ಸಮಾನರಿಗೂ.... ಬದುಕಿನ ಅನೇಕ ಪಾಠಗಳನ್ನು ಕಲಿಯಲು ಸಹಕಾರರಾದ ನನ್ನೆಲ್ಲಾ ಸ್ನೇಹಿತವರ್ಗವನ್ನೂ, ನೋವು ಕೊಟ್ಟು, ಮಹತ್ತರ ಪಾಠ ಕಲಿಸಿದ, ಎಲ್ಲರನ್ನೂ ಗುರುವೆಂದು ನೆನೆಯುತ್ತಾ, ನಮಿಸುತ್ತಾ.... ಈ ಗುರುವಂದನಾ ಕಾರ್ಯಕ್ರಮ ದ ಅಭಿಯಾನಕ್ಕೆ ನನ್ನನ್ನು ಆಹ್ವಾನಿಸಿದ ಪ್ರೀತಿಯ ಗೆಳತಿ, ಸಹೋದರಿ, ಶ್ರೀಮತಿ ಸುಮಾ ಹೆಗಡೆಯವರಿಗೆ ಧನ್ಯವಾದಗಳನ್ನು ತಿಳಿಸುತ್ತಾ ನನ್ನ ಬರಹವನ್ನು ಮುಗಿಸುತ್ತಿದ್ದೇನೆ🙏
ನಾನು ಯಾರನ್ನೂ ಈ ಅಭಿಯಾನವನ್ನು ಮುಂದುವರೆಸಲು ಆಹ್ವಾನಿಸಿಲ್ಲ,  ಆಸಕ್ತರು ಆಹ್ವಾನವೆಂದು ಮನ್ನಿಸಿ... ಈ ಸುಂದರ ಕಾರ್ಯಕ್ರಮ ವನ್ನು ಮುಂದುವರೆಸಬೇಕೆಂದು ಕೋರುತ್ತೇನೆ🙏🙏
ಈ ಮೂಲಕವಾಗಿಯಾದರೂ ಎಲ್ಲಾ ಹಂತದಲ್ಲೂ ನಮ್ಮನ್ನು ತಿದ್ದಿತೀಡಿ ಕೈಹಿಡಿದು ನಡೆಸಿದ ನಡೆಸುತ್ತಿರುವ ಎಲ್ಲ ಗುರುಗಳಿಗೂ ಧನ್ಯವಾದಗಳನ್ನು ಅರ್ಪಿಸುವ ಈ ಕಾರ್ಯ ಸಂಪನ್ನವಾಗಲಿ🙏
    ಜೈ ಗುರುದೇವ 🙏🙏
ಸರ್ವಂ ಇದಂ ಶ್ರೀರಾಮಕೃಷ್ಣಾರ್ಪಣ ಮಸ್ತು🙏🙏

✍️ಡಾ: B.N. ಶೈಲಜಾ ರಮೇಶ್
[25/6/2020, 2:51 pm] Dr. B. N. Shylaja Ramesh: ಮೂಢನಂಬಿಕೆ
*************

ತನ್ನದೇ ನೆರಳಿಗೂ ಹೆದರುವ
ಪುಕ್ಕುಲು ಸ್ವಭಾವದ ಮನ
ನಿರಂತರ ಅವ್ಯಕ್ತ ಭಯಭೀತ
ತನ್ನವನತಿಗೆ ತಾನೇ ಕಾರಣ

ಬೀಸುಗಾಳಿಗೆ ದೀಪವಾರಿದರೂ ಸರಿ
ಬಾಳೇ ಕತ್ತಲಾದೀತೆಂಬ ಮೂಢಭಯ
ದಾರಿಗಡ್ಡ ಬಂದರಾಯ್ತು ಬೆಕ್ಕು
ಅಪಶಕುನ, ನಿಸ್ತೇಜ ಬದುಕು

ಮಾತಿನ ಮಧ್ಯದಲ್ಲೊಂದು ಸೀನು
ಕಾರ್ಯವಿಳಂಬದ ಗೋಣು
ಎದುರಾದರಾಯ್ತು ಖಾಲಿ ಕೊಡ
ಅಪಶಕುನವಂತೆ ಕಾರ್ಯ ಜಡ

ಹಲ್ಲಿ ನುಡಿಯಲು ಶಕುನ
ಕಣ್ಣದುರಿದರೆ ಸ್ಥಬ್ದ ಸಂಚಲನ
ಎಲ್ಲಕ್ಕೊಂದೊಂದು ಕಿಡುನುಡಿ
ಮೂಢಾಚಾರಣೆಗೆ ಮುನ್ನುಡಿ

ಮನಹೊಕ್ಕು ಸುಮ್ಮನೆ ಕೊರೆತ
ಕಾರ್ಯವಾದರೆ ಅಹಿತ
ಸರಿ ತಪ್ಪುಗಳಲಿ ಅನುಮಾನ
ಮೌಢ್ಯ ಆಚರಣೆಯಲ್ಲಿ ಮನ

ಸರಳ ನಿವಾರಣೆ ಮಂತ್ರ
ಮೆಣಸು ನಿಂಬೆಯ ಪಾತ್ರ
ಮಾಂತ್ರಿಕ ಸಲಹಾ ಸೂತ್ರ
ದೃಷ್ಟಿ ಗೊಂಬೆ ಮಹತ್ತರ ಗಾತ್ರ

ಸರಿತಪ್ಪುಗಳರಿವಿಲ್ಲ 
ಮೌಢ್ಯಕ್ಕೆ ಮಿತಿಯಿಲ್ಲ
ಆಚರಣೆಯಲೂ ಗೋಜಲು
ಬಗೆಹರಿದೀತೆ ಮನದಳಲು

ಜ್ಞಾನವೋ ಅಜ್ಞಾನವೋ ನಂಬಿಕೆ
ಸರಿತಪ್ಪುಗಳ ಜಿಜ್ಞಾಸೆ ಮನಕೆ
ಅನಿಸಿಕೆಗನುಸಾರ ನಡೆಯಲಿ ಬಿಡಿ
ಸಂಕಷ್ಟವರಿದು ಸಿಕ್ಕರಷ್ಟೇ ಸಾಕು ನೆಮ್ಮದಿ

                 ಶೈಲೂ......
[26/6/2020, 12:40 pm] Dr. B. N. Shylaja Ramesh: #ತರಹಿ_ಗಝಲ್

ಚುಕ್ಕಿ ಇಟ್ಟರೂ ಗೆರೆ ಎಳೆದರೂ ರಂಗೋಲಿಯಾಗದ ಸಂಸಾರ
ಅಂದವಿದ್ದರೂ ಚಂದವಿದ್ದರೂ ಬಂಧವಿಲ್ಲದಿರೆ ಅದೆಂಥ ಸಂಸಾರ?

ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ತರತರದಿ ರೇಖೆ ಎಳೆದರಾಯ್ತು
ಸಿಕ್ಕಲ್ಲವೇ ಜೀವನ ; ಬದುಕು ಸರಾಗವಿಲ್ಲದಿರೆ ಇನ್ನೆಂಥಾ ಸಂಸಾರ?

ಸುಂದರ ಚಿತ್ತಾರದಲ್ಲಿ ಕಣ್ಮನ ಸೆಳೆದರಾಯಿತೆ ರಂಗವಲ್ಲಿ?
ಒಂದೇ ದಿನದ ಬಾಳದಕೆ; ದೀರ್ಘ ಆಯುಷ್ಯವಿಲ್ಲದಿರೆ ಅದೆಂಥ ಸಂಸಾರ?

ಶೃಂಗಾರಕ್ಕಿಂತಲೂ ಮಹತ್ತರ ಹೊಂದಾಣಿಕೆಯಲ್ಲವೇ ಹೇಳಿ?
ದಾಂಪತ್ಯದಲ್ಲಿ ನವಿರಾದ ಪ್ರೇಮವಿಲ್ಲದಿರೆ ಅದೆಂಥ ಸಂಸಾರ?

ಕಷ್ಟ ಶೈಲವ ತರಿದು; ಅಂಗಳದಲ್ಲರಲಿ ಶುಭ ಪದ್ಮ ರಂಗಾವಳಿ
ಒಲವ ಸಾಂಗತ್ಯದಲಿ ಕಹಿ ನೋವಿಲ್ಲದಿರೆ ಸುಖಾಂತ ಸಂಸಾರ

         ಶೈಲೂ......
[26/6/2020, 2:06 pm] Dr. B. N. Shylaja Ramesh: ಗೌರವಾದರಗಳ ಬಿಸುಟು ಬಹುದೂರ
ತೋರಿಕೆಗಿದ್ದರಾಯ್ತೇ ಶಿಷ್ಟಾಚಾರ?
ಗುರು ಹಿರಿಯ ಕಿರಿಯರೆನ್ನದೆ ಎಲ್ಲ ಮರೆತು
ಶಿಷ್ಟತೆ ಮಾಯವಾಯ್ತು ಅಹಮಿನಲಿ ಬೆರೆತು

          ಶೈಲೂ.....
[28/6/2020, 6:40 am] Dr. B. N. Shylaja Ramesh: #ಅವಳು

ಅವಳು ನಕ್ಕರೆ
ಹಗಲು....
ಮುನಿದರೆ
ಕಾರ್ಗತ್ತಲ
ಇರುಳು...

#ಚರ್ಚೆ

ಸಕಾರ ನುಡಿಗಳ
ವೇದಿಕೆ..!!
ವಿವಾದಾತ್ಮಕವಾಗಿ
ಕೊನೆಗೊಂಡರದು
ಚರ್ಚೆ..!!

#ಕನ್ನಡ

ಕನ್ನಡ ಎಂದರೆ
ಒಂದು ಭಾಷೆ
ಅಷ್ಟೇ ಅಲ್ಲ...
ಅದೊಂದು
ಸದ್ಭಾವ..!!

#ನಗು

ನಗುವೊಂದು
ನಗ..!!
ನಿಷ್ಕಲ್ಮಶ ನಗುವಲ್ಲಿ
ಮರೆಯಬಹುದು
ಜಗ..!!

#ದೇವರು

ಸಂಕಷ್ಟಗಳ
ಸರಮಾಲೆ ತೊಡಿಸಿ
ಸೃಷ್ಟಿಸಿದ
ದೇವರು..!!
ಒದ್ದಾಡುತ್ತಿದ್ದಾರೆ
ಜನರು..!!

ಡಾ: B.N. ಶೈಲಜಾ ರಮೇಶ್
[28/6/2020, 12:35 pm] Dr. B. N. Shylaja Ramesh: #ಕನ್ನಡಾಂಬೆ_ನಿನ್ನ_ಚರಣದಾಸರು_ನಾವು

ಕನ್ನಡಾಂಬೆ ನಿನ್ನ ಚರಣ ದಾಸರು ನಾವು
ಸಾಹಿತ್ಯ ಕಿರುಸೇವೆಯಲಿ ತೊಡಗಿಕೊಂಡಿವು
ತಪ್ಪುಒಪ್ಪುಗಳನ್ನೆಲ್ಲ ನಿನ್ನ ಚರಣದಡಿಯಿಟ್ಟು
ನಮಿಸಿ ನಿಂತೆವು ತಾಯೇ ಕರಜೋಡಿಸಿಟ್ಟು

ಅದೆಷ್ಟೋ ಕವಿರತ್ನಗಳು ಹಾಡಿ ಕೊಂಡಾಡಿದವರು
#ಕನ್ನಡ ಎಂದಾಕ್ಷಣ ಕಿವಿ ನಿಮಿರಿಸಿ ನಿಂತವರು
ತಾಯೇ ನಿನ್ನ ಸೇವೆಗಾಗಿ ಪಣತೊಟ್ಟು ನಿಂತು
ನೆತ್ತರು  ಹರಿಸಿದವರೆಲ್ಲ ಕಡಲಾಳದ ಮುತ್ತು

ಕನ್ನಡಾಂಬೆ, ನೀ ತಾಯಿ ಭಾರತಿಯ ಗರ್ಭ ಸಂಜಾತೆ
ನಿನ್ನ ಸವಿ ಸಿರಿನುಡಿಯ ಕಲಿತು ನಲಿದೆವು ಮಾತೇ
ಅಕ್ಷರಕ್ಕೊಂದಕ್ಷರವ ಜತನದಿಂದ ಪೋಣಿಸಿ
ನಲಿವೆವು ಮಾತೇ ಕಾವ್ಯಮಾಲೆ ತೊಡಿಸಿ

ರಸಋಷಿಗಳೆಲ್ಲ ಹೊಗಳಿ ನಲಿವರು ನಿನ್ನ
ಸಿರಿಸಗ್ಗದಂತೊಪ್ಪುವ ನಿನ್ನ ಭವ್ಯ ನೆಲವನ್ನ
ಸಂಗೀತಸಾಹಿತ್ಯ ಶಿಲ್ಪಕಲೆ ತವರೂರು ನಿನ್ನೊಡಲು
ಪಸರಿಸಿದೆ ಶ್ರೀಗಂಧದ ಸೌಗಂಧ ನಿನ್ನ ಮಡಿಲು

ಎಂತು ಪೊಗಳಲಿ ತಾಯೇ ನಿನ್ನ ತೇಜದ ಮಹಿಮೆ
ಯುಗಯುಗಗಳಿಂದ ಹರಡಿದ ನಿನ್ನ ಹಿರಿಮೆ
ಅಂಬೆಗಾಲಿಟ್ಟು ನಾ ನಿನ್ನ ಮಡಿಲೊಳಾಡುವ ಕಂದ 
ಕರುಣಿಸು ನಿನ್ನನರಿತು ಪೊಗಳುವ ಜಾಣ್ಮೆ ಮುದದಿಂದ

ಡಾ: B.N. ಶೈಲಜಾ ರಮೇಶ್
[28/6/2020, 1:40 pm] Dr. B. N. Shylaja Ramesh: ನಗುವೊಂದು ನಗ, ಸದಾ ಝಗಮಗಿಸಬೇಕು ಮೊಗ
ಬಡತನವೆಂದು ನೋವಲಿ ಬಡಬಡಿಸಿದಾರಾಯ್ತೇನು?
ವಿಶ್ವಾಸವಿರಬೇಕು ನಾಳೆಗೆ
ಸಿಹಿ ನಗುವ ತುಂಬಲು
ಬದುಕ ಭವಣೆಯ ಮೀರಿ ಮೊಗದಿ ನಗುವ ಕಾಣಲು

ಹೇಳು ಯಾರಿಗಿಲ್ಲ ನೋವು ಅದಾರಿಗಿಲ್ಲ ಸಾವು
ಜನಿಸಿದೊಡನೆಯೇ ಬಂದು ಕಾಡುವುದು ಹಸಿವು
ಕನಸು ಕಾಣಬೇಕು ಜೀವದ ಹಸಿವೆ ತೀರಿಸುವೆಡೆಗೆ
ಮನಸು ಮಾಡಬೇಕು ಬದುಕು ಬೆಳಗಿಸುವ ಕಡೆಗೆ

ಬಡತನವೊಂದು ಶಾಪ;ಅಂತೆಯೇ ಬಿಡುವುದು ಪಾಪ
ತುಡಿತವಿರಬೇಕು ಬದುಕು ಅರಳಿಸುವ ಬಗೆಗೆ
ಕೈಲಾಗದೆಂದು ಕಡೆಗಣಿಸದೆ ದಿಟ್ಟ ಹೆಜ್ಜೆಯಿಡಬೇಕು
ಕನಸರಳಿಸಿ, ಛಲದಿ ಮುನ್ನುಗ್ಗಿ ಗುರಿಮುಟ್ಟಬೇಕು

ಡಾ: B.N. ಶೈಲಜಾ ರಮೇಶ್
[28/6/2020, 4:31 pm] Dr. B. N. Shylaja Ramesh: ಕಳಚಿಬಿದ್ದಿತೇ ಮುಖವಾಡ

ಕಳಚಿಬಿದ್ದಿತೇ ತೊಟ್ಟ ಮುಖವಾಡ
ಈ ಜಗದ ಸಂತೆ ಬಯಲಿನಲಿ
ಅದೆಷ್ಟು ಅಹಂಕಾರದ ತೆವಲಿತ್ತು
ದೇಹದ ಈ ಕಂತೆ ಬೊಂತೆಯಲಿ

ಸಜ್ಜನಿಕೆಯ ಸೋಗು ಎಷ್ಟು ದಿನವಿದ್ದೀತು?
ಅಪ್ರಮಾಣಿಕತೆ ಹೊರಬರಲೇಬೇಕು
ನೈಜತೆಯ ಮುಚ್ಚಿಟ್ಟು ಬದುಕಲಾದೀತೆ?
ಒಂದು ದಿನ ಬಣ್ಣ ಬಯಲಾಗಬೇಕು

ಮರುಳು ಮಾಡುತ್ತೆಲ್ಲರನು
ಸತ್ಯ ಮುಚ್ಚಿಡಲಾದೀತೆ ಹೇಳು
ಕೊನೆಗೆ ಎಲ್ಲವೂ ಬಯಲಾಯ್ತು
ತಿಳಿ ಮೂರು ದಿನವೀ ಬಾಳು

ವಿಧವಿಧದ ವೇಷವ ಧರಿಸಲಾದೀತೆ?
ಜಗದೊಡೆಯ ಮೇಲಿಹನು ನೋಡುತ
ವಧಿ ಬರಹವನ್ನು ಬದಲಿಸಲಾದೀತೇ?
ಸೃಜಿಸಿದವನ ಆಜ್ಞೆಯನು ಮೀರುತಾ

ಇನ್ನಾದರೂ ತಿಳಿ ಮನುಜ ನೀತಿ ನಿಯಮ
ಭುವಿಗೆ ಬಂದದ್ದು ಆ ದೇವನ ಅರಿಯಲು
ಸತ್ಯಮಾರ್ಗದಲಿ ನಡೆವುದೇ ಧರ್ಮ
ಆಗಲೇ ಸೇರಲಾದೀತು ಅವನ ಮಡಿಲು

ಮುಖವಾಡ ತರವಲ್ಲ ಜೀವ ಶಾಶ್ವತವಲ್ಲ 
ನೀರ ಮೇಲಿನ ಗುಳ್ಳೆಯಂತೆ ಬದುಕು
ಅವನ ಕರೆ ಬಂದೊಡನೆಯೇ ಪಯಣ
ಇದ್ದಷ್ಟು ದಿನ ನಮ್ಮ ಜಗಮೆಚ್ಚಬೇಕು

     ಡಾ: B.N.ಶೈಲಜಾ ರಮೇಶ್
[1/7/2020, 1:39 pm] Dr. B. N. Shylaja Ramesh: ಹೀಗೇಕೆ  ಮೌನ
**************

ಮನಸು ಮನಸುಗಳ ನಡುವೆ
ಅದೆಲ್ಲಿಂದ ತೂರಿ ಬರುವುದೋ
ಸಹಿಸಲಾರದ ಮೌನದ ನೀರವತೆ

ಅದಾವ ಮುಲಾಜೂ ಇಲ್ಲದಕೆ
ಬೇಕಿಲ್ಲ ಯಾವ ಮಾತಿನ ಗೊಡವೆ
ಹ್ಞೂಕರಿಸಿ ಕೂತಿದೆ ಮಾತು ಮರೆತಂತೆ

ನಲ್ನುಡಿಯ ನುಡಿಸಲು ಕಹಿ ನೆನಪ
ಬಿಸುಡಲು ಕಾತರಿಸಿದ್ದ ಬಾಯಿ
ಕೇಳಲು ಆತುರಿಸಿದ್ದ ಕಿವಿಗೆ ಮಂಕು ಬಡಿದಿದೆ

ಬೆಳಗುವ ಹಣತೆಯನು ಬಲಿ
ತೆಗೆದಂತೆ ದುರುಳ ಭೀಕರ ಗಾಳಿ
ಮನದ ಮಾತನು ಅಪೋಷಣಗೈದಿದೆ ನೀರವ ಮೌನ

ಮನದ ಚೀತ್ಕಾರವದು ಲೀನವಾಯ್ತು ಗಗನದಿ
ದೈನ್ಯತೆಯ ಮೂರ್ತವೆತ್ತ ಮಾತಿನ ಪ್ರಾಣಪಕ್ಷಿ
ಲೀನವಾಗಿದೆ  ಮೌನದಲೇ

ಬಾರಿಸುತ್ತಿದೆ ಆರ್ದತೆಯಲಿ
ಅತಿಘೋರ ಮೌನಮೃದಂಗ
ಸಹಿಸಲಾರದ ಬೇನೆಯಿದು
ಅಲ್ಲೋಲಕಲ್ಲೋಲ ಅಂತರಂಗ


ಮಾತಿಗೂ  ಮೌನಕೂ ಹೀಗೇಕೆ ಅಂತರ
ಸೂತ್ರ ಧಾರನ ಕೈಯೊಳಾಡುವ
ಮನದ ಭಾವಾಂತರಾಳವನರಿಯಲು
ಇರಬೇಕಿತ್ತು ಮೌನಕೆ  ಅಂತಃಕರಣ

              ಶೈಲೂ.......
[1/7/2020, 7:34 pm] Dr. B. N. Shylaja Ramesh: #ಚಂದ್ರನ_ಬಳಗ

ಸುರಿಸುತಿಹನು ಚಂದ್ರಮಾ ಬೆಳದಿಂಗಳ ಹಾಲ್ನೊರೆ
ಸಂಭ್ರಮದಿ ಮಿಂದೇಳುತ್ತಿದೆ ಸಾಗರದ ಆ ತೆರೆ
ತೆರೆಯುಕ್ಕಿ ಚಿಮ್ಮಿ ಭೋರ್ಗರೆಯುತ್ತಿದೆ ಕಡಲು
ಸಾಗರೋತ್ಕರ್ಷದಿ  ಮೆರೆದು ಆ ಚಂದ್ರಮನ ಸೆಳೆಯಲು

ಸುತ್ತೆಲ್ಲ ಚುಕ್ಕಿಚಿತ್ತಾರ ನಡುವೆ ಹೊಳೆವ ಚಂದ್ರಮಾ
ಮೋಡಗಳು ಮುತ್ತಿಕ್ಕಿ ಸವಿಯುತ್ತಿವೆ ನೆಳಲುಬೆಳಕ ಸಂಭ್ರಮ
ಕಣ್ಣಾಮುಚ್ಚಾಲೆ ಆಡುತಿಹವನ ಮೇಘಮಾಲೆಯಲ್ಲಡಗಿ
ಮೆಲ್ಲನಿಣುಕಿ ನೋಡಿ ನಗುತಿಹ ಅರಳಿದಂತೆ ಸುರಗಿ

ಇರುಳ ಬಾನ ತುಂಬೆಲ್ಲ ಅವನದೇ ಬಳಗ
ಚುಕ್ಕಿ - ತಾರೆಗಳ ನಡುವೆ ಚೆದುರಿದ ಮೇಘ
ಬೀಸುತಿಹ ತಂಗಾಳಿ ಲಾಲಿ ಜೋಗುಳವ ಹಾಡಿ
ಸವಿನಿದಿರೆಯ ತೆಕ್ಕೆಗೆಳೆಯುತ ಮಾಡುತಿವೆ ಮೋಡಿ

           ಶೈಲೂ......
[2/7/2020, 12:33 pm] Dr. B. N. Shylaja Ramesh: ಭಸ್ಮವಿಲೇಪಿತ ಚಂದ್ರಮುಕುಟ ಹರ
ತ್ರಿಶೂಲ ಢಮರುಗಧಾರಿ ಸದಾಶಿವ
ಬಿಲ್ವದಳಪ್ರಿಯ ಜಟಾಜೂಟಧರ
ನಾಗಾಭರಣ ಗೌರೀಪ್ರಿಯ ವಲ್ಲಭ
ಓಂಕಾರ ಪ್ರಾಣವ ಮಂತ್ರದಿ  ಧ್ಯಾನಿಪೆ ನಿನ್ನನು
ಕಾಯೋ ಎಮ್ಮನು ಗಂಗಾಧರಶಿವ

         ಶೈಲೂ.....
[3/7/2020, 11:37 am] Dr. B. N. Shylaja Ramesh: #ಜಡೆಕವನ

#ಒಂಟಿಮನೆ_ಒಂಟಿಮನಸ್ಸು

ಆಹಾ.... ಅದ್ಭುತವೀ ಪ್ರಕೃತಿ
ಪ್ರಕೃತಿಯು ವಿಸ್ಮಯಗಳ ತಾಣ
ತಾಣವಿದು ಹಸಿರು ಶೃಂಗಗಳ ಮಧ್ಯೆ
ಮದ್ಯೆ ಮರಗಿಡಗಳು ಬಾನೆತ್ತರಕ್ಕೆ ಬೆಳೆದು
ಬೆಳೆದ ತರುಲತೆಗಳ ಒನಪು ನೋಡು
ನೋಡು ಚಂದವೀ ಪ್ರಕೃತಿ ಮಡಿಲು
ಮಡಿಲಲ್ಲಿ ಅಲ್ಲೊಂದು ಪುಟ್ಟ ಮನೆ
ಮನೆಗೆ ಮುಸುಕಿದೆ ಬಳ್ಳಿಗಳ ಹಂದರ
ಹಂದರದೀ ಚಪ್ಪರ ನೋಡಲು ಸುಂದರ
ಸುಂದರ ಈ ನಿಸರ್ಗ ಭುವಿಗಿಳಿದಂತೆ ಸಗ್ಗ
ಸಗ್ಗದ ಸೊಬಗೆಲ್ಲ ಮಲೆನಾಡಲ್ಲಿ ತುಂಬಿ
ತುಂಬಿ ಚೆಲುವ ಎರಕಹೊಯ್ದನೇನೋ ಆ ದೇವ
ಆ ದೇವನಗರಿಯಲೊಂದು ಒಂಟಿ ಮನೆ
ಒಂಟಿಮನೆಯಲ್ಲಿರಬಹುದೇನೋ ಒಂಟಿಮನಸ್ಸು
ಒಂಟಿ ಮನವು ಮಾಡುತ್ತಿರಹುದು ತಪಸ್ಸು
ತಪದ ಪುಣ್ಯವೆಲ್ಲ ಸಿಗಲಿ ಈ ಧರೆಗೆ
ಧರೆಯ ದೊರೆಯರನ್ನೆಲ್ಲ ಹಚ್ಚಿ ಒರೆಗೆ
ಒರೆಗ್ಹಚ್ಚಿದ ಚಿನ್ನದಂತಿರಲಿ ಬದುಕು

        ಶೈಲಜಾ ರಮೇಶ್
[3/7/2020, 12:31 pm] Dr. B. N. Shylaja Ramesh: #ಸ್ವರಚಿತ_ಕವನ_ವಾಚನ

#ವಿಷಯ

#ನಾನು_ಕಂಡ_ಕನಸು

ಕನಸುಗಳ ಕಂಡಿದ್ದೆ ನೂರಾರು
ಅಡೆತಡೆಗಳಿದ್ದವು ಹಲವಾರು
ನನಸಾಗುಸುವ ಮಾರ್ಗವರಿಯದೆ
ಹರಿದು ಕಡಲಾಗಿತ್ತು ಕಣ್ಣೀರು

ಏನೆಲ್ಲ ಪ್ರಯತ್ನಗಳತ್ತ ನಡೆ
ಯಾವುದಕ್ಕೂ ಜಗ್ಗದ ಅಡೆತಡೆ
ಹಣೆಬರಹದಲ್ಲಿದೆಯೋ ಇಲ್ಲವೋ
ಎಂಬ ನೋವೇ ತಂದಿತ್ತು ಭಿಡೆ

ಬಂದನೊಬ್ಬ ಅದೃಷ್ಟವಂತ ಬಾಳಿಗೆ
ಬದುಕುವ ಭರವಸೆಯಿತ್ತ ನಾಳೆಗೆ
ನನ್ನೆಲ್ಲ ಕನಸ ನನಸಾಗಿಸುವತ್ತ
ಜೀವ ಸವೆಸಿ ಉಸಿರುತ್ತ ಬದುಕಿಗೆ

ಅಧ್ಯಯನದಿ ಕಂಡಿದ್ದ ಕನಸು ನನಸಾಯ್ತು
ಬರವಣಿಗೆಯೇ ಬದುಕ ಬಗೆಯಾಯ್ತು
ಸಹೃದಯಿ ಪತಿ ನೀಡಿದ ನೆರವಿಗೆ
ನನ್ನ ಬದುಕೇ ಬಂಗಾರವಾಯ್ತು😊

ಡಾ: B.N.ಶೈಲಜಾ ರಮೇಶ್
[3/7/2020, 1:33 pm] Dr. B. N. Shylaja Ramesh: #ನಾನಾಗಲಾರೆ_ಬುದ್ಧ

ಮಧ್ಯರಾತ್ರಿಯಲೆದ್ದು
ಮಾಡದಿಮಕ್ಕಳ ಬಿಟ್ಟು
ರಾಜಭೋಗವ ತೊರೆದು
ಹೊರಟನಂತೆ ಸಿದ್ಧಾರ್ಥ.!
ಅವನಿಗೇನಿತ್ತೋ ಹಾಗೆ
ಜೀವನದಲ್ಲಿ ಅನಾದರ.!
ಕಾಷಾಯ ಧರಿಸಿದ ಮಾತ್ರಕ್ಕೆ
ಬದಲಾದೀತೆ ಪ್ರಪಂಚ.?
ಪ್ರತಿದಿನವೂ ಯುದ್ಧವೇ
ಹೆಣ್ಣು ಹೊನ್ನು ಮಣ್ಣಿಗಾಗಿ.!
ಬುದ್ಧನೊಬ್ಬ ತೊರೆದೆದ್ದರೆ
ನಿಂತೀತೇ... ಕದನ?
ಜಗವೆಲ್ಲವೂ ದ್ವೇಷ _
ಅಸೂಯೆಗಳ ಸದನ.!
ತಿದ್ದಿ ತೀದಲೆದ್ದು ಹೊರಟ
ಬುದ್ಧ ಉಪದೇಶಿಸಿದ ಶಾಂತಿಮಂತ್ರ!
#ಆಸೆಯೇ_ದುಃಖಕ್ಕೆ_ಮೂಲ
ಅವನೊಬ್ಬ ತೊರೆದರಾದೀತೆ ಆಸೆ?
ಮತ್ತದೇ ಅತಿಯಾಸೆಯ ಸುತ್ತ
ಗಿರಕಿ ಹೊಡೆಯುತ್ತಿದೆ ಜಗ.!
ಅರಿಷಡ್ವರ್ಗಗಳ ಅವನೊಬ್ಬ ಗೆದ್ದ.!
ಜಗವೇನನ್ನೂ ಗೆಲ್ಲಲಿಲ್ಲ.!
ರಾಜಭೋಗದ ನಡುವೆಯೂ
ಮಾಡಬಹುದಿತ್ತಲ್ಲವೇ ಜನಸೇವೆ.!
ಉಪದೇಶಿಸಬಹುದಿತ್ತು ಸದ್ಭುದ್ಧಿ.!
ಸಂಸಾರದಲ್ಲಿದ್ದೆ ಗೆಲ್ಲಬಹುದು ಮನವ.!
ಮಾಯೆಯ ತೆರೆ ಸರಿಸಬಹುದು.!
ಇದ ತೋರಿಸಿದವರಿಹರು ಹಲವಾರು.!
ನನ್ನದೂ ಅವರಂತೆಯೇ ನಡೆ.!
ಸಂಸಾರಸಾಗರದಲಿ ಈಸಲು ಸಿದ್ಧ.!
ಹಾಗಾಗಿ... ನಾನಾಗಲಾರೆ ಬುದ್ಧ.!!

      ಡಾ: B.N. ಶೈಲಜಾ ರಮೇಶ್
[3/7/2020, 2:46 pm] Dr. B. N. Shylaja Ramesh: #ಯಶೋಧರೆಯ_ಮನದಳಲು

ನಡುರಾತ್ರಿಯಲ್ಲೆದ್ದು ನಡೆದೆಯೆಲ್ಲಿಗೆ ದೊರೆ.?
ನಾನಾಗಿದ್ದೇನೇನು ನಿನಗೆ ಹೊರಲಾರದ ಹೊರೆ.?
ನೀ ಎದ್ದು ಹೊರಟಾಗ ನೆನಪಾಗಲಿಲ್ಲವೇ ನಾನು.?
ಮುದ್ದುಕಂದನ ನಗುಮೊಗವು ಮರೆತೆಯೇನು.?

ನಡುದಾರಿಯಲ್ಲಿ ಸಾವು ಕಂಡು ಖಿನ್ನನಾದವಗೆ
ಕಾಣಲಿಲ್ಲವೇ ನನ್ನ ಮನದ ಸಾವಿನ ಬಗೆ?
ಬಂಧುಬಾಂಧವ, ಸುಖಸಂಪತ್ತಿನಿಂದ ದೂರಾದರೆ
ದೂರಾದೀತೇ ಸಾವುನೋವಿನಳಲು ಹೇಳು ದೊರೆ?

ನೀ ಕರುಣಾಮೂರ್ತಿಯೆಂದು ನನಗೆ ಗೊತ್ತು
ಆ ಕರುಣೆಯ ಕಡಲಿಗೆ ನಾನಾದೆನೇ ತೊತ್ತು?
[3/7/2020, 3:41 pm] Dr. B. N. Shylaja Ramesh: ರುಬಾಯಿ ಸ್ಪರ್ಧೆಯಲ್ಲಿ ಬರಹ
ಚಿಕ್ಕದಾದ ಚುಟುಕಿನ ತರಹ
ಚೊಕ್ಕವಾಗಿ ಭಾವನೆಗಳ ತುಂಬಿದಾಗ
ಬೆಲೆಯದಕೆ ಸಾವಿರಾರು ವರಹ

            ಶೈಲೂ....
[3/7/2020, 3:42 pm] Dr. B. N. Shylaja Ramesh: ಏನೆಲ್ಲಾ ಸಾಹಿತ್ಯ ಪ್ರಕಾರ
ಬರೆಲಿದೆ ಸಾವಿರಾರು ತರ
ಪದಕ್ಕೊಂದು ಪದ ಬೆಸೆದು
ಬರೆದವ ಜ್ಞಾನದಿ ಸಾಹುಕಾರ

        ಶೈಲಜಾ ರಮೇಶ್
[3/7/2020, 3:42 pm] Dr. B. N. Shylaja Ramesh: ರುಬಾಯಿ ಸಾಹಿತ್ಯ ಪರ್ಶಿಯನ್ನರದ್ದು
ನಾಲ್ಕು ಸಾಲುಗಳೇ ಬರಹಕ್ಕೆ ಸರಹದ್ದು
ಮೂರನೇ ಸಾಲಿಲಿ ತುಂಬಿ ಕವಿತೆಗೆ ಜೀವ
ಅಂತ್ಯಪ್ರಾಸದ ನಿಯಮ ಈ ಕವನದ್ದು

        ಶೈಲಜಾ ರಮೇಶ್
[3/7/2020, 4:00 pm] Dr. B. N. Shylaja Ramesh: #ಯಶೋಧರೆಯ_ಮನದಳಲು

ನಡುರಾತ್ರಿಯಲ್ಲೆದ್ದು ನಡೆದೆಯೆಲ್ಲಿಗೆ ದೊರೆ.?
ನಾನಾಗಿದ್ದೇನೇನು ನಿನಗೆ ಹೊರಲಾರದ ಹೊರೆ.?
ನೀ ಎದ್ದು ಹೊರಟಾಗ ನೆನಪಾಗಲಿಲ್ಲವೇ ನಾನು.?
ಮುದ್ದುಕಂದನ ನಗುಮೊಗವು ಮರೆತೆಯೇನು.?

ನಡುದಾರಿಯಲ್ಲಿ ಸಾವು ಕಂಡು ಖಿನ್ನನಾದವಗೆ
ಕಾಣಲಿಲ್ಲವೇ ನನ್ನ ಮನದ ಸಾವಿನ ಬಗೆ?
ಬಂಧುಬಾಂಧವ, ಸುಖಸಂಪತ್ತಿನಿಂದ ದೂರಾದರೆ
ದೂರಾದೀತೇ ಸಾವುನೋವಿನಳಲು ಹೇಳು ದೊರೆ?

ನೀ ಕರುಣಾಮೂರ್ತಿಯೆಂದು ನನಗೆ ಗೊತ್ತು
ಆ ಕರುಣೆಯ ಕಡಲಿಗೆ ನಾನಾದೆನೇ ತೊತ್ತು?
ಅನ್ಯರ ಹಂಗಿಲ್ಲದಂತೆ ನೀನೇನೋ ಹೊರಟೆ
ಅರಮನೆಯ ಹಂಗಿನ ತೊತ್ತಾಗಿ ನನ್ನೇಕೆ ಬಿಟ್ಟೆ?

ಸಹಜವಲ್ಲವೇ ವೃದ್ಧಾಪ್ಯ ನಿತ್ಯ ಸುಖ ದುಃಖ
ರೋಗ ರುಜಿನ ಮರಣಗಳು ಆ ದೇವನ ಲೆಕ್ಕ.!
ಜಯಿಸಿದೆಯೇನು ದುಃಖ ಸಂತಾಪಗಳ ಗೊಡವೆ.?
ತಂದೆಯೇನು  ಸಾವಿಲ್ಲದ ಮನೆಯ ಸಾಸಿವೆ.?

ಸಮಚಿತ್ತವಿರಬೇಕು ಕೇಳು ಸಾಧನೆಯ ಹಾದಿಗೆ
ಸನ್ಯಾಸವೇ ಉತ್ತರವಲ್ಲ ಮೂಡಿ ಬರುವ ಪ್ರಶ್ನೆಗೆ.!
ನೀನಿಲ್ಲಿದ್ದೂ ಎಲ್ಲಕ್ಕೂ ಮಿಗಿಲಾಗಿ ಸಾಧಿಸಬಹುದಿತ್ತು
ನಿನ್ನ ಸಾಧನೆಗೆ ಪೂರಕವಾಗಿ ನನ್ನ ನೆರವಿರುತ್ತಿತ್ತು.!

ಇರಬಹುದಿತ್ತೊಟ್ಟಿಗೆ  ವಿರಕ್ತಿಯ ಪಥದಲ್ಲಿ
ಬರುತ್ತಿದ್ದೆ ನಾನೂ ನಿನ್ನೊಟ್ಟಿಗೇ ಸಾಧನೆಯಲ್ಲಿ
ಅಶಕ್ತರ ಸೇವೆಗೈಯ್ಯಲು ನಾನೂ ನೆರವಾಗುತ್ತಿದ್ದೆ
ನಿನ್ನ ಬಾಳ ದಾರಿಗೆ ಬೆಳಕೀವ ಹಣತೆಯಾಗುತ್ತಿದ್ದೆ.!

ಮುಕ್ತವಾಗಿಸಬಹುದಿತ್ತು ಸಂಸಾರದಲ್ಲಿದ್ದೇ ದುಃಖವನು
ಇಲ್ಲಿದ್ದೇ ತೋರಿಸಬೇಕಿತ್ತು ನೀ ಸತ್ಯ ಮಾರ್ಗವನು
ಸಂಸಾರದಲ್ಲಿವೇ ಮಾಯೆಯ ಜಯಿಸುವ ಬಗೆ.?
ಇಲ್ಲವೆಂದು ಎಲ್ಲರೂ ಸನ್ಯಾಸಿಯಾದರೆ ಹೇಗೆ.?

ನಿಜ ದೊರೆ ...ಆಸೆಯೇ ದುಃಖಕ್ಕೆ ಮೂಲ
ಕತ್ತರಿಸಬೇಕು ಆವರಿಸಿರುವ ಮಾಯೆಯ ಜಾಲ
ಸಾಂಸಾರಿಕರ ಬವಣೆಗೆಲ್ಲ ಮದ್ದು ಬೇಕಿತ್ತು
ರಾಜನಾಗಿಯೇ ನೀನಿವರನ್ನೆಲ್ಲ ಸಲಹಬಹುದಿತ್ತು

ಜಗವನುದ್ಧರಿಸಲೆಂದು ಬರಿದೇ ಸುಮ್ಮನ್ಹೊರಟೆ
ನೀನನಗಿತ್ತ ವಚನಬದ್ಧ ಪ್ರಮಾಣವ  ಮರೆತೆ
ನಿನ್ನಂತೆಯೇ ನಾನೂ ಶಾಂತಿಯನರಸಿ ಬರಬಹುದಿತ್ತು
ಹೇಳು..ನಿನ್ನನಾಶ್ರಯಿಸಿದವರ ಪಾಡೇನಾಗುತ್ತಿತ್ತು?

ನೀನೇನೋ ಆಸೆಗೆದ್ದು ಬುದ್ಧನಾದೆ..ಪ್ರಬುದ್ಧನಾದೆ.!
ನೀ ತಂದಿತ್ತ ಅನಂತ ನೋವಲ್ಲೇ ನಾ ಬಂಧಿಯಾದೆ
ಜಗವೆಲ್ಲ ಜ್ಞಾನಿಯೆಂದು ನಿನಗೊಂದಿಸಿದರೂ...
ಮನನೊಂದ ಈ ಯಶೋಧರೆ ನಿನ್ನ ನಿಂದಿಸುವಳು

       ಡಾ: B.N. ಶೈಲಜಾ ರಮೇಶ್
[3/7/2020, 6:55 pm] Dr. B. N. Shylaja Ramesh: ವಿಷಯ ಗಾದೆ ವಿಸ್ತರಣೆ

#ಗಾದೆ
#ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ

#ಪೀಠಿಕೆ

        "ವೇದ ಸುಳ್ಳಾದರೂ ಗಾದೆ ಸುಳ್ಳಾಗದು " ಎಂಬುದು ಅತೀ ಜನಜನಿತ ಗಾದೆ. ಗಾದೆಯು ಅನುಭವದ ಸಾರಾಮೃತ. ಎಂದೆಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಅರ್ಥಪೂರ್ಣ ವಾಕ್ಯಗಳು ಇವು.

#ವಿವರಣೆ....
     
#ಮಾತು_ಬಲ್ಲವನಿಗೆ_ಜಗಳವಿಲ್ಲ_ಊಟ_ಬಲ್ಲವಗೆ_ರೋಗವಿಲ್ಲ...

        ಈ ಗಾದೆಯು ಪ್ರಸ್ತುತ ಕಾಲಮಾನಕ್ಕೆ ಅತೀ ತಕ್ಕುದಾಗಿದೆ.
           ವಿಷಮ ಪರಿಸ್ಥಿತಿಯಲ್ಲಿ.... ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಸಂದರ್ಭ ಬಂದಾಗ ನಾಜೂಕಾದ ಮಾತಿನಿಂದ ಪರಿಸ್ಥಿತಿಯನ್ನು ತಹಬಂದಿಗೆ ತರಬಹುದು. ಸಂಘರ್ಷದ ಮಾತುಗಲಿಲ್ಲದೆ ವೈರಿಗಳನ್ನೂ ಕೂಡ ಜಗಳವಿಲ್ಲದೆ ಸಮಾಧಾನದಿಂದ ನಿಭಾಯಿಸಬಹುದು.

       ಊಟದ  ಮಹತ್ವ ಅರಿತವರು, ಅತಿಯಾದ ಅನಾರೋಗ್ಯಕರ ಆಹಾರ ಸೇವಿಸದೇ,ತಮ್ಮ ತಮ್ಮ ಆರೋಗ್ಯಕ್ಕೆ ತಕ್ಕಂತ ಆಹಾರ ಸೇವನೆಯಿಂದ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಬಹುದು.

#ಉಪಸಂಹಾರ...
    ಇದರಿಂದ ತಿಳಿಯಬೇಕಾದದ್ದು,  ಯಾರೊಡನೆ ಯಾವರೀತಿಯಲ್ಲಿ ವ್ಯವಹರಿಸಿದರೆ ಉತ್ತಮ.  ಹಾಗೂ ಋತುಗನುಗುಣವಾದ, ಹಿತಮಿತವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅತೀ ಸಾಮಾನ್ಯ ಮಾತುಗಳಿಂದಲೇ ಅಸಾಮಾನ್ಯ ಅರ್ಥದ ಗಾದೆಗಳ ಮೂಲಕ ನಮ್ಮ ಜನಪದರು ತಿಳಿಸಿದ್ದಾರೆ

       ಶೈಲಜಾ ರಮೇಶ್
[4/7/2020, 2:00 pm] Dr. B. N. Shylaja Ramesh: #ಲೇಖನ

#ಬರಗಾಲದಲ್ಲಿ_ಬರಡಾ_ಬದುಕು

           #ದುರ್ಭಿಕ್ಷದಲ್ಲಿ_ಅಧಿಕಾಮಾಸ ಅನ್ನೋದು ನಾಳ್ನುಡಿ.  ಮೊದಲೇ... ಮಳೆ ಬೆಳೆ ಇಲ್ಲದೆ, ಊಟಕ್ಕೂ ಇಲ್ಲದೆ ತಲ್ಲಣಿಸಿ ಹೆಗಪ್ಪಾ ಜೀವನ  ಸಾಗಿಸೋದು ಅನ್ನುವ ಪರಿಸ್ಥಿತಿಯಲ್ಲಿ , ಅಧಿಕಾಮಾಸ ಬೇರೆ ಬಂದ್ರೆ ಹೇಗಿರುತ್ತೆ ಆ ಸಮಯದ ಮನಸ್ಥಿತಿ ಅನ್ನುವ ಅರ್ಥ ಇರಬಹುದು ಈ ನಾಳ್ನುಡಿಗೆ.
        ನಿಜ ಅಲ್ವಾ.?.. ಪ್ರತಿದಿನ ದಿನ ದೂಡೋದೇ ಕಷ್ಟ ಅನ್ನಿಸ್ತಿರುವಾಗ... ಧುತ್ತ0ತ... ಮತ್ತೊಂದು ತಿಂಗಳು ಎದುರು ನಿಂತರೆ.. ಹೇಗಪ್ಪ ನಿಭಾಯಿಸೋದು?      ಆಗ ಈ ಚಿಂತನೆ ತಪ್ಪು ಅನ್ನಿಸಲ್ಲ.  
        ಇನ್ನೊಂದು ರೀತಿ ವಿಶ್ಲೇಷಿಸಿದರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಧಿಕ ಮಾಸಕ್ಕೆ ವಿಶೇಷ ಪ್ರಾಮುಖ್ಯತೆ. ಅಧಿಕಮಾಸದಲ್ಲಿ ಧಾರ್ಮಿಕ ಕಾರ್ಯಗಳು, ದಾನಧರ್ಮಗಳನ್ನ ಮಾಡಿದರೆ ಅಧಿಕಫಲ.  ಜಪತಪ ಹೋಮ ಹವನಗಳನ್ನ ಮಾಡಿದರೆ ದುಪ್ಪಟ್ಟು ಪುಣ್ಯಪ್ರಾಪ್ತಿ ಅಂತ ಹೇಳ್ತಾರೆ ನಮ್ಮ ಹಿರಿಯರು. ಅಲ್ಲದೆ ಇದನ್ನ ಅವರುಗಳು ಚಾಚೂ ತಪ್ಪದೆ ಪಾಲಿಸ್ಕೊಂಡು ಬಂದಿದ್ದಾರೆ ಕೂಡ.. ಮೊದಲೇ ತಿನ್ನೋದಕ್ಕೂ ಇಲ್ಲದೆ ದುರ್ಭಿಕ್ಷ, ಅದರಲ್ಲಿ ಇಂತಹ ಅಧಿಕಮಾಸ ಬಂದ್ರೆ,  ಈ ಧಾರ್ಮಿಕ ವಿಧಿವಿಧಾನಗಳನ್ನ ಹೇಗೆ ಆಚರಿಸೋದು? ಅದರ ಖರ್ಚು ನಿಭಾಯಿಸುವುದು ಹೇಗೆ?... ಆಗಲೇ ಈ ನಾಳ್ನುಡಿ ಹುಟ್ಟಿರಬೇಕು.! ಈಗಲೂ  ಕಷ್ಟವಿದ್ದಾಗ ಏನಾದರೂ ಖರ್ಚುವೆಚ್ಚಗಳು ದಿಢೀರ್ ಅಂತ ಬಂದಾಗ ಥಟ್ಟನೆ ನೆನಪಾಗೋದು ಈ ನಾಳ್ನುಡಿಯೇ😊

            ಈಗಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಮೊದಲೇ... ಅತಿವೃಷ್ಟಿ - ಅನಾವೃಷ್ಠಿ ಯಿಂದ, ಪ್ರಾಕೃತಿಕ ಸಮಸ್ಯೆಯಿಂದ ಜನಜೀವನ ಅಸ್ತವ್ಯಸ್ತವಾಗಿರುವ ಈ ಸಮಯದಲ್ಲಿ ಕೊರೊನಾ ಮಹಾಮಾರಿಯ ಅಟ್ಯಾಕ್ ನಮ್ಮೆಲ್ಲರ ಧೃತಿಗೆಡಿಸಿದೆ.  ಒಂದಷ್ಟು ತಿಂಗಳು ಲಾಕ್ಡೌನ್ ನಿಂದ ಮನೆಯಲ್ಲೇ ಇದ್ದದ್ದಾಯ್ತು, ಈ ಸಮಯ ಒಂದು ವರ್ಗದ ಜನರಿಗೆ ಯಾವುದೇ ವ್ಯತ್ಯಾಸ ಕಾಣದಿದ್ದರೂ... ತುಂಬಾ ಹೊಡೆತ ಬಿದ್ದದ್ದು ಬಡವರಿಗೆ, ದಿನಗೂಲಿಕಾರ್ಮಿಕರಿಗೆ, ಸಣ್ಣ ವ್ಯಾಪಾರಿಗಳಿಗೆ, ಜೊತೆಗೆ ಬೃಹತ್ ಉದ್ಯಮಕ್ಕೂ ಕೂಡ, ಆ ಉದ್ಯಮಗಳನ್ನ ನಂಬಿ ಜೀವನ ನಡೆಸುತ್ತಿದ್ದ ಜನತೆ ಕೂಡ.  ಬೃಹತ್ ಜನಸಂಖ್ಯೆ ಹೊಂದಿರುವ ಇಷ್ಟು ದೊಡ್ಡ ದೇಶಕ್ಕೆ ಸರ್ಕಾರ ತಾನೇ ಎಷ್ಟು ದಿನ ಅಂತ ಸಹಾಯ ಮಾಡಲಾದೀತು? ಒಂದಷ್ಟು ದಿನ ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ದು ನಿಜ.  ಸೋಂಕಿತರ ದುಬಾರಿ ವೈದ್ಯಕೀಯ ವೆಚ್ಚ ಭರಿಸಲು, ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆ ಮಾಡಲು ಸರ್ಕಾರಕ್ಕೂ ಕಷ್ಟವಾಗಿರಬಹುದು.  ಬಿದ್ದುಹೋದ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ... ಜನಜೀವನವೇ ಆಗಲಿ, ಸರ್ಕಾರವೇ ಆಗಲಿ ಎಚ್ಚೆತ್ತುಕೊಳ್ಳುವುದು ಕಷ್ಟವೇ ಸರಿ.  ಈಗೀಗಂತೂ ಸುಧಾರಿಸುವತ್ತ ಹೆಜ್ಜೆಯಿಟ್ಟು ತಂತಮ್ಮ ಕೆಲಸಕಾರ್ಯಗಳಲ್ಲಿ ಭಾಗಿಯಾದಷ್ಟೂ... ಕೋವಿಡ್ ಜನಸಮೂದಾಯದಲ್ಲಿ ಹರಡಿ ಅಲ್ಲೋಲಕಲ್ಲೋಲ ಉಂಟುಮಾಡಿದೆ.  ಅದೆಷ್ಟು ವ್ಯಾಪಾರ ವ್ಯವಹಾರಗಳು ನಷ್ಟ.!😔  ಮುಖ್ಯವಾಗಿ ಅತೀ ಹೆಚ್ಚು ಹೊಡೆತ ಬಿದ್ದದ್ದು ರೈತರಿಗೆ, ಕೂಲಿ ಕಾರ್ಮಿಕರಿಗೆ, ಹೋಟೆಲ್ ಉದ್ಯಮದವರಿಗೆ, ಹಾಗೂ ಇವುಗಳಿಗೆ ಪೂರಕವಾಗಿ ಕೆಲಸಮಾಡುತ್ತಿದ್ದ ಜನರಿಗೆ.

        ಉತ್ತಮ ಫಸಲು ಕಂಡರೂ, ಸಮರ್ಪಕವಾಗಿ ವಿತರಣೆ ಸಾಧ್ಯವಾಗದೇ, ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾನೆ ರೈತ.  ಜೊತೆಗೆ ದಲ್ಲಾಳಿಗಳ ಹಾವಳಿಯಿಂದಾಗಿ ಫಲಕ್ಕೆ ಸರಿಯಾದ ಪ್ರತಿಫಲವನ್ನು ಕಾಣದೆ ಕಂಗಾಲಾಗಿದ್ದಾನೆ.  ಇನ್ನು ದುಪ್ಪಟ್ಟು ಬೆಲೆ ಕೊಟ್ಟು ಅಗತ್ಯವಸ್ತುಗಳನ್ನು ಖರೀದಿ ಮಾಡಲು ಸಾಮಾನ್ಯಜನ ಒದ್ದಾಡುತ್ತಿದ್ದಾರೆ. ಇನ್ನು ಕೂಲಿ ಕಾರ್ಮಿಕರು, ಕೊರೊನಾ ಹಾವಳಿಯಿಂದಾಗಿ ಕೆಲಸ ಕಾರ್ಯಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಕೆಲಸವೇ ಇಲ್ಲದೆ ಉದ್ಯೋಗಸ್ಥರಿಲ್ಲ.. ಜನರಿಲ್ಲದೆ ಹೋಟೆಲ್ ಇಲ್ಲ ಅನ್ನುವ ಪರಿಸ್ಥಿತಿಯಲ್ಲಿ ಹೋಟೆಲ್ ಉದ್ಯಮವೂ ಸೊರಗಿದೆ.  ಇನ್ನು ತುಂಬಾ ಜನ ಸೇರುವ ಫ್ಯಾಕ್ಟರಿ, ಮಳಿಗೆಗಳಂತೂ ಹೆಚ್ಚುಕಡಿಮೆ ಮುಚ್ಛೇ ಬಿಟ್ಟಿದೆ.  ಜೀವನವೇ ದುಸ್ತರವಾಗಿರುವ ಈ ಸಮಯದಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರಿದೆ. ಪ್ರತಿದಿನವೂ ಸಾವಿರಾರು ಜನ ಸೋಂಕಿತರ ಹೆಚ್ಚಳ, ಹಾಗೆಯೇ ಚಿಕಿತ್ಸೆ ಫಲಕಾರಿಯಾಗದೆ, ಸಮರ್ಪಕ ಚಿಕಿತ್ಸೆ ದೊರೆಯದೆ ಸಾವಿನ ಹೆಚ್ಚಳ, ಇದರ ಮದ್ಯೆ ವ್ಯವಸ್ಥಿತ ವೈದ್ಯಕೀಯ ವ್ಯವಸ್ಥೆಯ ವಿಫಲ, ಜನಜೀವನವನ್ನು ಮತ್ತಷ್ಟು ಕಂಗೆಡಿಸಿದೆ.
#ಮನೆಯಲ್ಲೇ_ಇದ್ದರೆ_ಜೀವನವಿಲ್ಲ_ದುಡಿಯಲು_ಹೊರಗೆ_ಹೋದರೆ_ಜೀವವಿಲ್ಲ ಅನ್ನುವ ಪರಿಸ್ಥಿತಿಯಲ್ಲಿ ಜನಸಮೂದಾಯವಿದೆ. ಹೊರಗೆ ದುಡಿಯಲು ಹೋಗಬೇಕಾದರೆ ಅಗತ್ಯ ಜೀವರಕ್ಷಕ ಸಾಧನಗಳು ಬೇಕೇಬೇಕು. ಕೈಗವಸು, ಮುಖಗವಸು, ಗಂಟೆಗೊಮ್ಮೆ ಕೈತೊಳೆಯಲು ಸೋಪು,ನೀರು.  ಸ್ವಲ್ಪ ಅನುಕೂಲಸ್ಥರಾದರೆ ಸ್ಯಾನಿಟೈಸರ್, PPE ಕಿಟ್, ಹೀಗೇ...  ಕೆಲವು ಖಾಸಗಿ ಕಂಪೆನಿಗಳಲ್ಲಂತೂ  ಅರ್ಧ ಸಂಬಳಕ್ಕೆ  9 ರಿಂದ 10 ಗಂಟೆ ದುಡಿವ ಪರಿಸ್ಥಿತಿ ಜನರದ್ದು.  ಇಂತಹ ವಿಷಮ  ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳಿಗೆ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳುವ ದೌರ್ಭಾಗ್ಯ ನಮ್ಮದು😔  ಇದೊಂಥರಾ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವ ಗಾದೆಯನ್ನು ನೆನಪಿಸುತ್ತೆ. 
ಇದು ಇಂದಿನ ಬರಗಾಲದಲ್ಲಿ ಬರಡಾದ ಬದುಕು... ಇದರಿಂದ ಎಂದಿಗೆ ಮುಕ್ತಿಯೋ ಕಾಣೆ.!😔 
ಇಂತಹ ಸನ್ನಿವೇಶದಲ್ಲಿ ತುತ್ತನ್ನಕ್ಕೂ ಹೋರಾಟ ಮಾಡುತ್ತಿರುವ ತೀರಾ ಬಡವರ ಪಾಡೇನು.?
     ಅಂಥವರನ್ನ ನೆನೆದು, ಚಿತ್ರಕ್ಕೆ ಪೂರಕವಾಗುವ ಆಧುನಿಕ ವಚನ..... ನಿಮಗಾಗಿ😊

ಉಳ್ಳವರು ಉತ್ತಮ ಮಾಸ್ಕ್ ಧರಿಸುವರು
ನಾನೇನು ಧರಿಸಲಯ್ಯಾ ಬಡವನು.!
ಎನಗೆ ಎಲೆಯೇ ಮಾಸ್ಕ್
ನಾರೇ ಅದ ಕಟ್ಟಲು ದಾರ
ಒಲೆಯ ಬೂದಿಯೇ..
 ಕೈತೊಳೆವ ಸ್ಯಾನಿಟೈಸರ್ ಅಯ್ಯಾ.!
ನೀವಿತ್ತ ತುತ್ತೇ ಮೃಷ್ಟಾನ್ನ.!
ಊರಾಚೆಯ ಮಂಟಪದಲೇ ಅಸನವಸನ.!
ದಾನಿಗಳ ನೆರವಿಂದಲೇ ಕಾರ್ಯಸಾಧನ
ದೇವಾ ನೀನಿಟ್ಟಂತೆ ನಾನಿರುವೆನಯ್ಯಾ... ಶ್ರೀಶೈಲನಾಥೇಶ್ವರ...

       ✍️ಡಾ: B.N. ಶೈಲಜಾ ರಮೇಶ್
[5/7/2020, 12:09 pm] Dr. B. N. Shylaja Ramesh: #ಗಝಲ್

#ವಿಷಯ

#ಲಜ್ಜೆಯೇ_ಮನದ_ಭಾಷೆ

ಆ ನಿನ್ನ ಹುಸಿನಗುವೇ ಎನ್ನ ಸೆಳೆದಿದೆ ಗೆಳೆಯ
ಹೃದಯ ಭಾಷೆಯ ಬಿಚ್ಚಿಟ್ಟು ತಿಳಿಸಿದೆ ಗೆಳೆಯಾ

ಒಲವ ನೋಟದೊಳೆನ್ನ ಇಂಚಿಂಚಾಗಿ ಹೊಕ್ಕೆ
ಪ್ರೇಮದ ಹೊಳೆಯ ಹೊನಲಾಗಿ ಹರಿಸಿದೆ ಗೆಳೆಯಾ

ಬಿತ್ತಿದೆ ಹೊಸ ಆಸೆಯ ಬದುಕು ಹಸನಾಗಿಸಲು
ಭರವಸೆಯಿತ್ತು ಬಾಳಿಗೆ ಬೆಳಕು ಹಾಯಿಸಿದೆ ಗೆಳೆಯಾ

ಸೋತೆ ನವಿರಾದ ಪ್ರೀತಿಯ ವಚನವನು ಮನ್ನಿಸಿ
ಮನವ ಮೆಚ್ಚಿದೆನೆಂದು ಅರುಹಿದೆ ಗೆಳೆಯಾ

ಲಜ್ಜೆಯೇ ನನ್ನ ಮನಸ್ಸಿನ ಮಾತು ಅರ್ಥವಾಯಿತೆ?
ಶೈಲ ನಿನಗೊಲಿದಳೆಂದು ನಸುನಾಚಿದೆ ಗೆಳೆಯಾ

ಡಾ: B.N. ಶೈಲಜಾ ರಮೇಶ್
[5/7/2020, 1:02 pm] Dr. B. N. Shylaja Ramesh: #ಚಕ್ಚೌಕ_ಸುನೀತಾ_ಕಾವ್ಯಸ್ಪರ್ಧೆ

#ಶೀರ್ಷಿಕೆ

#ಕಣ್ಣ_ಕನ್ನಡಿಯಲ್ಲಿ_ನಿನ್ನ_ಬಿಂಬ

ಕಣ್ಣ ಕನ್ನಡಿಯಲ್ಲಿ ನಿನ್ನದೇ ಪ್ರತಿಬಿಂಬ
ನೆನಪಿನ ಮೆರವಣಿಗೆ ಮನದ ತುಂಬಾ
ನೀ ನೀಡಿದ ಕಹಿನೆನಪ ಬಿಸುಟಲೆಕೋ
ಒಪ್ಪದಾಯ್ತು, ನೀನಿಲ್ಲದೇ ಮನವಾಯ್ತು ಬಿಕೋ

ಭಾವನೆಯ ಸಂಘರ್ಷದಲ್ಲಿ ಬದುಕ ಬಳ್ಳಿ
ಸೊರಗಿದೆ ಪ್ರೇಮವಿಲ್ಲದೇ, ನೀನಿಟ್ಟೆ ಕೊಳ್ಳಿ.!
ಒಲವ ಲತೆಯಲಿ ಅರಳದು ಪ್ರೀತಿ ಹೂ
ಬಾಡಿಹೋಯಿತು ಮನ ಸಹಿಸಲಾರೆ ನೋವು

ಬಾಳ ಬಂಡಿಯಲೀಗ ಎನ್ನ ಒಂಟಿ ಪಯಣ
ನೊಂದು ಅಶ್ರುಧಾರೆ ಸುರಿಸುತಿದೆ ನಯನ
ತೆರೆಯದೇ ಭಾಗ್ಯದ ಬಾಗಿಲು ಬದುಕಲಿ.?
ಬರಲಾರೆಯಾ ಒಲವೇ ನೀ ಎನ್ನ ಬಾಳಲಿ.?

ತೆರೆದು ಹೃದಯದ ಕದ ಕಾಯ್ವೇ ನಿನಗೆ
ಬಾ ಒಲವೇ ಎಂದಾದರೊಮ್ಮೆ ಎನ್ನ ಬಳಿಗೆ

ಡಾ: B.N. ಶೈಲಜಾ ರಮೇಶ್
[5/7/2020, 2:52 pm] Dr. B. N. Shylaja Ramesh: #ಕವನಸ್ಪರ್ಧೆ

#ಶೀರ್ಷಿಕೆ

#ಮಾಯಾಮೋಹದ_ಕಹಿನೆನಪಲ್ಲಿ_ಬದುಕಿನ_ಹೆಜ್ಜೆಗುರುತು

ನಿನ್ನಕಂದಾಕ್ಷಣ ಕಂಡಿದ್ದೆ ಕಣ್ಣಲಿ ಸಾವಿರ ಕನಸು
ತುಂಬಿ ಭರವಸೆಯ ಬಾಳಲ್ಲಿ ನನಸಾಗುವುದೆಂಬ ಮನಸು
ಬಿತ್ತಿದ್ದೆ ಆಸೆಯ ಬೀಜ ಹದವಾಗಿದ್ದ ಎನ್ನೆದೆಗೆ
ಬೀರಿದ್ದೆ ನಲ್ಮೆಯ ನೋಟ ನಾ ಒಲಿದು ಬಂದಿದ್ದೆ ನಿನ್ನೆಡೆಗೆ

ಕನಸು ಮನಸಲೂ ನೀನೇ ಪ್ರತಿಕ್ಷಣವೂ ನಿನ್ನ ಧ್ಯಾನ
ನಿನ್ನ ಸವಿ ನೆನಪಿನಲೆಯಲ್ಲೇ ಸಾವಿರದ ಆಲಾಪನಾ
ಹುಸಿಮುನಿಸು ಪಿಸುಮಾತು ದಿನನಿತ್ಯದ ಕಾರ್ಯಕ್ರಮ
ನಸುನಗುವ ಮೂಡಿಸಲು ನೀ ತೋರುತ್ತಿದ್ದೆ ಪರಾಕ್ರಮ

ಅಪ್ಪಿ ಒಪ್ಪಿದ್ದೆ ನಾ ನಿನ್ನ ಪ್ರೇಮದ ಮಾಯೆಯಲಿ
ಕೆಡವಿ ಕುಣಿಸಿದ್ದೆ ನೀ ನನ್ನ ಮೋಹದ ಪ್ರೀತಿ ಜಾಲದಲಿ
ಅದಾರ ದೃಷ್ಟಿ ತಾಕಿತೋ ಒಡಕು ಮೂಡಿ ಬದುಕು
ಬಾಳೇ ಕಾರ್ಗತ್ತಲಾದಂತಾಯ್ತು ಕಾಣದೇ ಪ್ರೀತಿ ಬೆಳಕು

ಜೀವ ಸವೆಸಲು ಹೆಣಗುತ್ತಿದ್ದೇನೆ ಗೆಳೆಯ ನಿನ್ನನು ಮರೆತು
ಮಾಯಾಮೋಹದ ನೆನಪಲ್ಲಿ ಬದುಕಿನ ಹೆಜ್ಜೆ ಗುರುತು
ಒಳ ಮನದಲೊಂದಾಸೆ ಎಂದಾದರೂ ನೀ ಬರುವೆಯೆಂದು
ಕಾದಿರುವೆ ಅದೇ ಆಸೆಯಲೇ ಬದುಕು ಬೆಳಗಬಹುದೆಂದು

ಡಾ: B.N. ಶೈಲಜಾ ರಮೇಶ್
[5/7/2020, 3:24 pm] Dr. B. N. Shylaja Ramesh: #ಚಿತ್ರಕಾವ್ಯ_ಅಭಿಯಾನ_೨೮

#ಹೀಗೇಕೆ?

ಚಿಗುರಿಸಿ ಆಸೆಯ ಬಳ್ಳಿಯನು
ಮರೆತು ಹೊರಟಳೆಲ್ಲಿಗೆ.?
ಹನಿಸದೆ ಪ್ರೀತಿ ಧಾರೆಯನು
ತೊರೆದು ನಡೆದಳೆ ಮೆಲ್ಲಗೆ.?

ಬರೆದಿದ್ದಳು ಕಣ್ಣೋಟದಲ್ಲೇ
ಒಲವ ಬಾಳಿಗೆ ಮುನ್ನುಡಿ
ಜಾರಿ ಹೋದಳು ಕೈಗೆ ಸಿಗದೆ
ತೋರಿ ಬಾಳಪುಟಕೆ ಬೆನ್ನುಡಿ

ಮೋಡಿ ಮಾಡಿತ್ತೆನಗವಳ
ತೂಗುವ ಮುಂಗುರಳ ಲಾಸ್ಯ
ಬರೆದಳೇ ಕೇಶದಲ್ಲೆ ಕೊನೆಗೆ
ವಿರಹದುರಿಗೆ ಭಾಷ್ಯ

ಓರೆ ನೋಟದಲ್ಲೆ ಕರೆದು
ಹಾಡಿದ್ದಳು ಸವಿ ರಾಗವ
ಕೋರೆ ಮಾತಲ್ಲೆ ಕೆಣಕಿ
ಜರಿದಳು ಅನುರಾಗವ

ಜೇನೆಂದು ಭ್ರಮಿಸಿದ್ದೆ ನಿನ್ನ
ಪ್ರೇಮದಕ್ಕರೆ ನುಡಿಯ
ಹಾವಂತೆ ವಿಷವುಣಿಸಿ
ಇರಿದೆಯೇಕೆನ್ನೆದೆಯಾ.?

ಡಾ: B.N. ಶೈಲಜಾ ರಮೇಶ್
[6/7/2020, 5:00 pm] Dr. B. N. Shylaja Ramesh: #ಮುದ್ದುಕಂದನ_ಗೆಜ್ಜೆಸದ್ದು

ಅಂಗಳದೊಳಾಡುವ ಕಂದಾ
ನಿನ್ನ ನಗೆಯೇ ಮನಕಾನಂದ
ಆ ದೇವ ಕರುಣಿಸಿದ ವಾರ ನೀನು
ನಿನ್ನ ತೊದಲು ನುಡಿಯೇ ಸವಿಜೇನು

ಮೆಲ್ಲನಡಿಯಿಟ್ಟು ಅಂಬೆಗಾಲಿನಲಿ
ಘಲಿರು ನಾದ ಪುಟ್ಟ ಗೆಜ್ಜೆಕಾಲ್ಗಳಲಿ
ಮುಗ್ಧನೋಟದಲಿ ಮನಸೆಳೆಯುತ
ಕಿಲಕಿಲ ನಗುವಲ್ಲಿ ಮನೆ ಬೆಳಗುತ

ನಿನ್ನಾ ಮುದ್ದು ನಗೆಯ ಹೊನಲು
ಮದ್ದೆನಗೆ ನೋವ ಮರೆಯಲು
ನೀ ಒಳಹೊರಗಾಡಿದರೆ ಸೊಗಸು
ಉಲ್ಲಾಸ ಮನೆಮಂದಿಯ ಮನಸು

ನೀ ಅತ್ತರೆ ಸುಸ್ವರದ ಸಂಗೀತ
ನಕ್ಕರೆ ಹುಣ್ಣಿಮೆ ಬೆಳದಿಂಗಳು
ಪುಟಪುಟನೆ ನಡೆವ ಗೆಜ್ಜೆಕಾಲ್ಗಳ 
ಸದ್ದೇ ಈ ಮನೆಗೆ ಮಂಗಳನಾದವು

     ಡಾ: B.N ಶೈಲಜಾ ರಮೇಶ್
[7/7/2020, 2:42 pm] Dr. B. N. Shylaja Ramesh: #ಚುಟುಕು

#ಗಜರಾಜನಿಗೆ_ಕೇಶಾಲಂಕಾರ

ಸಾಕ್ಬಿಡೋ ಮಾರಾಯ ಇನ್ನೆಷ್ಟೂಂತ ಬಾಚ್ತೀಯಾ
ಇರೋದ್ನಾಲ್ಕ್ ಕೂದ್ಲನ್ನುದ್ರುಸಿ ಬೋಡನ್ಮಾಡ್ತೀಯಾ
ಇನ್ನೇನ್ಬರುತ್ತಲ್ಲ ತಾಳು ಶರನ್ನವರಾತ್ರಿ ದಸರಾ
ಆಗ್ಮಾಡುವಂತೆ ಬಿಡು ಗಜರಾಜಂಗೆ ಕೇಶಾಲಂಕಾರ

     ✍️ಡಾ: B.N. ಶೈಲಜಾ ರಮೇಶ್
[7/7/2020, 4:35 pm] Dr. B. N. Shylaja Ramesh: ಆಗಸಕೆ ಕೈಚಾಚಿದರೆ ನಿಲುಕೀತೇ ಗಗನ
ಕೈಗೆಟುಕಬೇಕೆಂದರೆ ಶತ ಪ್ರಯತ್ನ ಬೇಕಣ್ಣ
ನಿಂತಲ್ಲಿಂದಲೇ ಎಲ್ಲ ಬೇಕೆಂದು ಕೈಚಾಚಲು
ಅದೇನು ತೊತ್ತೇ ಕೇಳಲು ನಿನ್ನ ಅಹವಾಲು

ಪ್ರಯತ್ನವಿದ್ದರೇ ತಾನೇ ಸುಖ ಭೋಗಗಳು ಸ್ವಂತ
ತೀವ್ರತರ ಪರಿಶ್ರಮವಿರೇ ಅಂಗೈಲೇ ದಿಗಂತ
ಬರೆದೇ ಕನಸು ಕಂಡರಾಗದು ಎದ್ದೇಳು ಮರುಳ
ಕುಳಿತುಂಡವರು ಬಾಳಿ ಬದುಕಿ ಹೆಸರಾದದ್ದು ವಿರಳ

ಹೆಜ್ಜೆಯಿಡು ನನಸಾಗುವೆಡೆಗೆ ನೇಯ್ದ ಕನಸನು
ಶ್ರದ್ಧೆಯಿಡು ಮಾಳ್ಪ ಕಾರ್ಯದಲಿ ಊರಿ ಮನಸನು
ಸಂಘ ಜೀವನ ನಮ್ಮದು ಅತಿಶ್ರೇಷ್ಠ ಮಾಡು ಸತ್ಸಂಗ
ನಾನೇಹೆಚ್ಚೆಂಬ ಗರ್ವ ಭಾವದಲಿರೆ ಅಭಿಮಾನ ಭಂಗ

ಎಸೆ ಕಾಮಕ್ರೋಧ  ಮತ್ಸರ ಅರಿಷಡ್ವರ್ಗದ ಕಸವ
ಬಿತ್ತಿ ಬೆಳೆ ಕರುಣೆ ಪ್ರೇಮ ಮಮತೆ ವಾತ್ಸಲ್ಯದ ವನವ
ಸಚ್ಚಾರಿತ್ರ್ಯವೇ ಸತ್ಫಲ ನೀಡುವ ಕಲ್ಪವೃಕ್ಷ ಕಾಣೋ
ಸನ್ನಡತೆಯೇ ಆ  ದೇವನೊಲಿಸುವ ಪರಿ ಮಾಣೋ

✍️ ಡಾ: B.N. ಶೈಲಜಾ ರಮೇಶ್
[9/7/2020, 7:53 pm] Dr. B. N. Shylaja Ramesh: #ಜಾನಪದ_ಕವನ

#ನಲ್ಲನಲ್ಲೆಯರ_ಸಂವಾದ

ಅಂಗ್ಯಾಕ್ ನೋಡ್ತೀ ಜಾಣಾ
ನಂಗೊತ್ತು ನಾನೇ ನಿನ್ಪ್ರಾಣಾ
ನೀ ಹಿಂಗಾ ನೋಡಿದ್ರೆ ಹೆಂಗೋ
ನಾಚಿ ನೀರಾಗ್ತೀನ್ನಾನು ಕಾಣಾ

ನನ್ಹೆಂಡ್ರನ್ ನೋಡಿದ್ರೆ ತಪ್ಪಾ?
ಯಾಕ್ ಮಾಡ್ತೀ ಹಂಗ ಕ್ವಾಪ
ಚೆಂದುಳ್ಳಿ ಚೆಲುವೆ ನನ್ ಹೆಂಡ್ತಿ
ಕಣ್ಮುಚ್ಕೊಂಡಿರೋಕ್ಕ್ ನಾ ಏನ್ ಬೆಪ್ಪಾ?

ಮಂದಿ ನೋಡ್ತಾರ್ ಸುಮ್ಕಿರು
ನುತ್ತಲೂ ನಿಂತಾರಾ ಹುಡ್ಗರು
ಎಲ್ರ ಮುಂದೆ ಬೇಡ ಸರಸ
ನೀ ಹೀಂದಾಡ್ತಿದ್ದರೆ ಬರ್ತದ ಕಣ್ಣೀರು

ನೋಡ್ಕೊಳ್ಳಿ ಬಿಡೇ ಚೆನ್ನೇ
ನಾ ಏನ್ ಹೊತ್ಕೊಂಡು ಬಂದಿದ್ನೆ?
ಕೊಳ್ಳಾಗಿನ್ ತಾಳಿ ಹೇಳ್ತಾಡ್ ಬಿಡು
ನೀನನ್ನ ಮೆಚ್ಚಿನ ಹೆಂಡರೇನೇ

ಸಾಕ್ಮಾಡು, ನಿನ್ ಪುರಾಣ
ನಡೀ ಮನೆಕಡೆ ಹೋಗೋಣ
ನಡುಬೀದಿಲೆಂಥಾ ಸರಸ
ಹೇಳ್ಬೇಡ ಐನೂ ಕಾರಣ
  ✍️ B.N. ಶೈಲಜಾ ರಮೇಶ್
[13/7/2020, 9:04 am] Dr. B. N. Shylaja Ramesh: ಏನೋ ಕಳೆದುಕೊಂಡಂತೆ
ಮನ ಭಾಧಿಸುತ್ತಿದೆ ಇಂದು
ಚಟಪಡಿಕೆ  ತಹತಹಿಕೆ
ಒಡಲೊಳಗೆ ಬೆಂಕಿ ಬಿದ್ದಂತೆ......

ಪ್ರಿಯ ಮಾಧವನ  ಸ್ನೇಹ
ದೂರಾಯ್ತೇನಗೆ,  ಎಲ್ಲಿ
ಮರೆತನೊ ಎನ್ನ, ರಾಜಕಾರ್ಯದಲಿ
ಈ ರಾಧೆ ಇಲ್ಲವೇಕೆ ಅವನ ಮನದಲಿ.......

ನಿನ್ನೊಡ ನೊಡನಾಟ ನಾ ಹೇಗೆ
ಮರೆಯಲೀ ಮಾಧವ
ನೀನಿಲ್ಲದೇ ನಾ ಹೇಗೆ
ಹಿಡಿಯಲೀ ಈ ಜೀವ.......

ಕಣ್ಮುಚ್ಚಿದರೆ ನಿನ್ನ ರೂಪ
ಕಣ್ಮುಂದೆ 
ಅರಿಯಲಾರೆಯೇನೋ
ಈ ರಾಧೆಯಾ ಚಿಂತೆ.......

ನಿನ್ನ ಮುರಳೀ ಗಾನ
ಸೆಳೆಯುತಿದೆ  ಎನ್ನ
ಮರೆಯಲಾರೆನೋ ದೇವ ನಿನ್ನ
ಇರಲಾರೆನಾ  ನೀ  ಮರೆತರೆನ್ನಾ.......

ಬಂದು ಬಿಡು  ಮಾಧವಾ
ಎಲ್ಲಿರುವೆ  ನೀನು
ಈ  ಜೀವ  ಕಾಯುತಿದೆ
ಅರಿವಿಲ್ಲವೇನು  ???...........
                                       .... ಶೈಲೂ.......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ