318 ಹೀಗೇಕೆ ಮೌನ


#ಮೌನ_ಮೃದಂಗ

ಹೀಗೇಕೆ  ಮೌನ

ಮನಸು ಮನಸುಗಳ ನಡುವೆ
ಅದೆಲ್ಲಿಂದ ತೂರಿ ಬರುವುದೋ
ಸಹಿಸಲಾರದ ಮೌನದ ನೀರವತೆ

ಅದಾವ ಮುಲಾಜೂ ಇಲ್ಲದಕೆ
ಬೇಕಿಲ್ಲ ಯಾವ ಮಾತಿನ ಗೊಡವೆ
ಹ್ಞೂಕರಿಸಿ ಕೂತಿದೆ ಮಾತು ಮರೆತಂತೆ

ನಲ್ನುಡಿಯ ನುಡಿಸಲು ಕಹಿ ನೆನಪ
ಬಿಸುಡಲು ಕಾತರಿಸಿದ್ದ ಬಾಯಿ
ಕೇಳಲು ಆತುರಿಸಿದ್ದ ಕಿವಿಗೆ ಮಂಕು ಬಡಿದಿದೆ

ಬೆಳಗುವ ಹಣತೆಯನು ಬಲಿ
ತೆಗೆದಂತೆ ದುರುಳ ಭೀಕರ ಗಾಳಿ
ಮನದ ಮಾತನು ಅಪೋಷಣಗೈದಿದೆ ನೀರವ ಮೌನ

ಮನದ ಚೀತ್ಕಾರವದು ಲೀನವಾಯ್ತು ಗಗನದಿ
ದೈನ್ಯತೆಯ ಮೂರ್ತವೆತ್ತ ಮಾತಿನ ಪ್ರಾಣಪಕ್ಷಿ
ಲೀನವಾಗಿದೆ  ಮೌನದಲೇ

ಬಾರಿಸುತ್ತಿದೆ ಆರ್ದತೆಯಲಿ
ಅತಿಘೋರ ಮೌನಮೃದಂಗ
ಸಹಿಸಲಾರದ ಬೇನೆಯಿದು
ಅಲ್ಲೋಲಕಲ್ಲೋಲ ಅಂತರಂಗ

ಮಾತಿಗೂ  ಮೌನಕೂ ಹೀಗೇಕೆ ಅಂತರ
ಸೂತ್ರ ಧಾರನ ಕೈಯೊಳಾಡುವ
ಮನದ ಭಾವಾಂತರಾಳವನರಿಯಲು
ಇರಬೇಕಿತ್ತು ಮೌನಕೆ  ಅಂತಃಕರಣ

              ಶೈಲೂ.......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ