301ಕರೆಯದೇ ಬರುವ ಬಂಧುವೀ ಪ್ರೀತಿ

ಸಾಲಿಗೊಂದು ಕವನ ##
ಕರೆಯದೇ ಬರುವ ಬಂಧುವೀ ಪ್ರೀತಿ
******************************

ನಾನೇನೂ ಬಯಸಿರಲಿಲ್ಲ
ಕನಸುಮನಸಲೂ ಎಣಿಸರಲಿಲ್ಲ
ಅದ್ಹೇಗೆ ಹುಟ್ಟಿತೋ ಒಲವು
ನಿನ್ನನುರಾಗವೇ ನನಗೆ ಬಲವು

ನಿನ್ನಂದ ಚಂದ ಕಂಡಿರಲಿಲ್ಲ
ಸಿರಿತನ ಬಡತನದರಿವಿರಲಿಲ್ಲ
ಅದ್ಹೇಗೆ ಬಂದಿತೋ ಪ್ರೀತಿ
ಅರಗಳಿಗೆಯೂ ಬಿಟ್ಟಿರದ ರೀತಿ

ಜಾತಿ ಮತದ ಅರಿವಿರಲಿಲ್ಲ
ಕುಲಗೋತ್ರ ಗಣನೆಗೆ ಇಲ್ಲ
ಅದ್ಹೇಗೆ ಅರಳಿತೋ ಪ್ರೇಮ
ನಮ್ಮೊಲವಲಿಹುದು ನಿಷ್ಕಾಮ

ಸರಿದ ಸಮಯದ ಅರಿವಿಲ್ಲ
ನಿನ್ನೊಡನಾಟವೇ ಸಿಹಿ ಬೆಲ್ಲ
ಅದ್ಹೇಗೆ ಕಳೆಯಿತೋ ವರುಷ
ಮರೆಯಲಾಗದ ರಸನಿಮಿಷ

ಕರೆಯದೇ ಬರುವ ಬಂಧುವೀ ಪ್ರೀತಿ
ಕುರುಡಲ್ಲವಿದು ನಿಜದೊಲವ ರೀತಿ
ಹಂಚಿದಷ್ಟೂ ವಿಸ್ತಾರ ಬಾನಗಲದಂತೆ
ಮನವೊಪ್ಪಿರೆ ಸ್ವರ್ಗ ಧರೆಗಿಳಿದಂತೆ

ಮೊಗೆದಷ್ಟೂ ಬತ್ತದ ಪ್ರೀತಿಯೊರತೆ
ಬರದಿರಲೆಂದಿಗೂ ಒಲವಿಗೆ ಕೊರತೆ
ನೀ ನನಗಾಗಿ, ನಾನೆಂದಿಗೂ ನಿನಗೆಂದೇ
ತನ್ನವರೆಲ್ಲರ ತೊರೆದು ನಾ ಬಳಿಬಂದೆ

ಇರಲೆಂದಿಗೂ ಗೆಳೆಯ ಹೀಗೇ ಪ್ರೀತಿ
ದೇಹದೊಳು ಉಸಿರು ಬೆರೆತ ರೀತಿ
ಉಕ್ಕಿ ಹರಿಯಲಿ ನಿತ್ಯ ಸ್ನೇಹ ಸಿಂಧು
ಬಾಳ ದೋಣಿ ಆಗ ಸರಾಗ ಸಾಗುವುದು

              ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ