300 ಭಾಷೆಗೂ ನಿಲುಕದ ಭಾವನೆಯ ಹೊನಲು

ಥೀಮ್ :-  ಸಾಲಿಗೊಂದು ಕವನ
ಶೀರ್ಷಿಕೆ :--

ಭಾಷೆಗೂ ನಿಲುಕದ ಭಾವನೆಯ ಹೊನಲು
*********************************

ಎಲ್ಲಿರುವೆ ನಾನು ಎಂದೆನ್ನ ಕೇಳದಿರು
ಮನದಲ್ಲಿ ನೆಲೆಯಾಗಿದೆ ನಿನ್ನ ರೂಪ
ಅಂತರಂಗದ ವೀಣೆ ಹಿತವಾಗಿ ಮೀಟುತಿರು
ಹೃದಯದಲಿ ಸೆರೆಯಾಗಿದೆ ನಿನ್ನ ರೂಪ

ಹರಿದಿದೆ ನಿನ್ನ ಪ್ರೀತಿಯ ಸಾಗರದೆಡೆಗೆ ಎನ್ನ
ಭೋರ್ಗರೆವ ಮನದ ಭಾವಗಳ ಹೊನಲು
ಕಣ್ಣಂಚಿನ ಭಾಷೆಗೆ ಬರೆಯಲಾರದು ಭಾಷ್ಯ
ಭಾಷೆಗೂ ನಿಲುಕದ ಭಾವನೆಯ ಹೊನಲು

ಭಾವಾಂತರಂಗದಲಿ ಏನೋ ಕೋಲಾಹಲ
ಮನಸುಮನಸುಗಳ ನಡುವೆ ಮಾತು ಸ್ಥಬ್ದ
ಪ್ರೀತಿಯ ಭಾಷೆಯಲ್ಲಿ ಏಕೋ ಕುತೂಹಲ
ಉತ್ಕರ್ಷಿಸುವ ಭಾವನೆಗಳಿಗೆ ನಾನು ಬದ್ಧ

ನಿನ್ನೊಲವ ತೇರಿನಲಿ ಮೌನ ಮೆರವಣಿಗೆ
ಆರ್ದ್ರತೆಯ ಪ್ರೀತಿಯಲ್ಲಿ ಪ್ರೇಮೋತ್ಸವ
ಪುಟಿದೇಳುವ ಆಸೆಯಲಿ ಕಾವ್ಯ ಬರವಣಿಗೆ
ಅನೂಹ್ಯ ಅನುಬಂಧದ ನವರಾಗಪಲ್ಲವ

ನಿನ್ನೊಡನಾಟದ ನೆನಪುಗಳು ವರ್ಣನಾತೀತ
ನಿತ್ಯ ಭೋರ್ಗರೆವ ಸಾಗರ ಸಂಗಮ
ನಿತ್ಯಹರಿದ್ವರ್ಣದಂತೆ ರಮ್ಯ ನಮ್ಮೊಲವು
ಕೋಕಿಲದ ಸಖೀಗೀತದಂತೆ ಹೃದಯಂಗಮ

             ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು