283 ನಾನಾಗಲಾರೆ_ಬುದ್ಧ

#ಚಿತ್ರಕಾವ್ಯ_ಅಭಿಯಾನ_೨೭

#ನಾನಾಗಲಾರೆ_ಬುದ್ಧ

ಮಧ್ಯರಾತ್ರಿಯಲೆದ್ದು
ಮಡದಿಮಕ್ಕಳ ಬಿಟ್ಟು
ರಾಜಭೋಗವ ತೊರೆದು
ಹೊರಟನಂತೆ ಸಿದ್ಧಾರ್ಥ.!
ಅವನಿಗೇನಿತ್ತೋ ಹಾಗೆ
ಜೀವನದಲ್ಲಿ ಅನಾದರ.!
ಕಾಷಾಯ ಧರಿಸಿದ ಮಾತ್ರಕ್ಕೆ
ಬದಲಾದೀತೆ ಪ್ರಪಂಚ.?
ಪ್ರತಿದಿನವೂ ಯುದ್ಧವೇ
ಹೆಣ್ಣು ಹೊನ್ನು ಮಣ್ಣಿಗಾಗಿ.!
ಬುದ್ಧನೊಬ್ಬ ತೊರೆದೆದ್ದರೆ
ನಿಂತೀತೇ... ಕದನ?
ಜಗವೆಲ್ಲವೂ ದ್ವೇಷ _
ಅಸೂಯೆಗಳ ಸದನ.!
ತಿದ್ದಿ ತೀಡಲೆದ್ದು ಹೊರಟ
ಬುದ್ಧ ಉಪದೇಶಿಸಿದ ಶಾಂತಿಮಂತ್ರ!
#ಆಸೆಯೇ_ದುಃಖಕ್ಕೆ_ಮೂಲ
ಅವನೊಬ್ಬ ತೊರೆದರಾದೀತೆ ಆಸೆ?
ಮತ್ತದೇ ಅತಿಯಾಸೆಯ ಸುತ್ತ
ಗಿರಕಿ ಹೊಡೆಯುತ್ತಿದೆ ಜಗ.!
ಅರಿಷಡ್ವರ್ಗಗಳ ಅವನೊಬ್ಬ ಗೆದ್ದ.!
ಜಗವೇನನ್ನೂ ಗೆಲ್ಲಲಿಲ್ಲ.!
ರಾಜಭೋಗದ ನಡುವೆಯೂ
ಮಾಡಬಹುದಿತ್ತಲ್ಲವೇ ಜನಸೇವೆ.!
ಉಪದೇಶಿಸಬಹುದಿತ್ತು ಸದ್ಭುದ್ಧಿ.!
ಸಂಸಾರದಲ್ಲಿದ್ದೆ ಗೆಲ್ಲಬಹುದು ಮನವ.!
ಮಾಯೆಯ ತೆರೆ ಸರಿಸಬಹುದು.!
ಇದ ತೋರಿಸಿದವರಿಹರು ಹಲವಾರು.!
ನನ್ನದೂ ಅವರಂತೆಯೇ ನಡೆ.!
ಸಂಸಾರಸಾಗರದಲಿ ಈಸಲು ಸಿದ್ಧ.!
ಹಾಗಾಗಿ... ನಾನಾಗಲಾರೆ ಬುದ್ಧ.!!

      ಡಾ: B.N. ಶೈಲಜಾ ರಮೇಶ್ 

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ