282 #ಯಶೋಧರೆಯ_ಮನದಳಲು

#ಚಿತ್ರಕಾವ್ಯ_ಅಭಿಯಾನ_೨೭ ಕ್ಕೆ ನನ್ನ ಇನ್ನೊಂದು ಕವನ😊

#ಯಶೋಧರೆಯ_ಮನದಳಲು

ನಡುರಾತ್ರಿಯಲ್ಲೆದ್ದು ನಡೆದೆಯೆಲ್ಲಿಗೆ ದೊರೆ.?
ನಾನಾಗಿದ್ದೇನೇನು ನಿನಗೆ ಹೊರಲಾರದ ಹೊರೆ.?
ನೀ ಎದ್ದು ಹೊರಟಾಗ ನೆನಪಾಗಲಿಲ್ಲವೇ ನಾನು.?
ಮುದ್ದುಕಂದನ ನಗುಮೊಗವು ಮರೆತೆಯೇನು.?

ನಡುದಾರಿಯಲ್ಲಿ ಸಾವು ಕಂಡು ಖಿನ್ನನಾದವಗೆ
ಕಾಣಲಿಲ್ಲವೇ ನನ್ನ ಮನದ ಸಾವಿನ ಬಗೆ?
ಬಂಧುಬಾಂಧವ, ಸುಖಸಂಪತ್ತಿನಿಂದ ದೂರಾದರೆ
ದೂರಾದೀತೇ ಸಾವುನೋವಿನಳಲು ಹೇಳು ದೊರೆ?

ನೀ ಕರುಣಾಮೂರ್ತಿಯೆಂದು ನನಗೆ ಗೊತ್ತು
ಆ ಕರುಣೆಯ ಕಡಲಿಗೆ ನಾನಾದೆನೇ ತೊತ್ತು?
ಅನ್ಯರ ಹಂಗಿಲ್ಲದಂತೆ ನೀನೇನೋ ಹೊರಟೆ
ಅರಮನೆಯ ಹಂಗಿನ ತೊತ್ತಾಗಿ ನನ್ನೇಕೆ ಬಿಟ್ಟೆ?

ಸಹಜವಲ್ಲವೇ ವೃದ್ಧಾಪ್ಯ ನಿತ್ಯ ಸುಖ ದುಃಖ
ರೋಗ ರುಜಿನ ಮರಣಗಳು ಆ ದೇವನ ಲೆಕ್ಕ.!
ಜಯಿಸಿದೆಯೇನು ದುಃಖ ಸಂತಾಪಗಳ ಗೊಡವೆ.?
ತಂದೆಯೇನು  ಸಾವಿಲ್ಲದ ಮನೆಯ ಸಾಸಿವೆ.?

ಸಮಚಿತ್ತವಿರಬೇಕು ಕೇಳು ಸಾಧನೆಯ ಹಾದಿಗೆ
ಸನ್ಯಾಸವೇ ಉತ್ತರವಲ್ಲ ಮೂಡಿ ಬರುವ ಪ್ರಶ್ನೆಗೆ.!
ನೀನಿಲ್ಲಿದ್ದೂ ಎಲ್ಲಕ್ಕೂ ಮಿಗಿಲಾಗಿ ಸಾಧಿಸಬಹುದಿತ್ತು
ನಿನ್ನ ಸಾಧನೆಗೆ ಪೂರಕವಾಗಿ ನನ್ನ ನೆರವಿರುತ್ತಿತ್ತು.!

ಇರಬಹುದಿತ್ತೊಟ್ಟಿಗೆ  ವಿರಕ್ತಿಯ ಪಥದಲ್ಲಿ
ಬರುತ್ತಿದ್ದೆ ನಾನೂ ನಿನ್ನೊಟ್ಟಿಗೇ ಸಾಧನೆಯಲ್ಲಿ
ಅಶಕ್ತರ ಸೇವೆಗೈಯ್ಯಲು ನಾನೂ ನೆರವಾಗುತ್ತಿದ್ದೆ
ನಿನ್ನ ಬಾಳ ದಾರಿಗೆ ಬೆಳಕೀವ ಹಣತೆಯಾಗುತ್ತಿದ್ದೆ.!

ಮುಕ್ತವಾಗಿಸಬಹುದಿತ್ತು ಸಂಸಾರದಲ್ಲಿದ್ದೇ ದುಃಖವನು
ಇಲ್ಲಿದ್ದೇ ತೋರಿಸಬೇಕಿತ್ತು ನೀ ಸತ್ಯ ಮಾರ್ಗವನು
ಸಂಸಾರದಲ್ಲಿಲ್ಲವೇ ಮಾಯೆಯ ಜಯಿಸುವ ಬಗೆ.?
ಇಲ್ಲವೆಂದು ಎಲ್ಲರೂ ಸನ್ಯಾಸಿಯಾದರೆ ಹೇಗೆ.?

ನಿಜ ದೊರೆ ...ಆಸೆಯೇ ದುಃಖಕ್ಕೆ ಮೂಲ
ಕತ್ತರಿಸಬೇಕು ಆವರಿಸಿರುವ ಮಾಯೆಯ ಜಾಲ
ಸಾಂಸಾರಿಕರ ಬವಣೆಗೆಲ್ಲ ಮದ್ದು ಬೇಕಿತ್ತು
ರಾಜನಾಗಿಯೇ ನೀನಿವರನ್ನೆಲ್ಲ ಸಲಹಬಹುದಿತ್ತು

ಜಗವನುದ್ಧರಿಸಲೆಂದು ಬರಿದೇ ಸುಮ್ಮನ್ಹೊರಟೆ
ನೀನನಗಿತ್ತ ವಚನಬದ್ಧ ಪ್ರಮಾಣವ  ಮರೆತೆ
ನಿನ್ನಂತೆಯೇ ನಾನೂ ಶಾಂತಿಯನರಸಿ ಬರಬಹುದಿತ್ತು
ಹೇಳು..ನಿನ್ನನಾಶ್ರಯಿಸಿದವರ ಪಾಡೇನಾಗುತ್ತಿತ್ತು?

ನೀನೇನೋ ಆಸೆಗೆದ್ದು ಬುದ್ಧನಾದೆ..ಪ್ರಬುದ್ಧನಾದೆ.!
ನೀ ತಂದಿತ್ತ ಅನಂತ ನೋವಲ್ಲೇ ನಾ ಬಂಧಿಯಾದೆ
ಜಗವೆಲ್ಲ ಜ್ಞಾನಿಯೆಂದು ನಿನಗೊಂದಿಸಿದರೂ...
ಮನನೊಂದ ಈ ಯಶೋಧರೆ ನಿನ್ನ ನಿಂದಿಸುವಳು..😔

       ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ