276 #ಎಷ್ಟು_ಬದಲಾಗಿದೆ_ಕಾಲ..!!

#ಚಿತ್ರಕಾವ್ಯ_ಅಭಿಯಾನ_೩೪

#ಎಷ್ಟು_ಬದಲಾಗಿದೆ_ಕಾಲ..!!

ಎಷ್ಟು ಬದಲಾಗಿದೆ ಕಾಲ
ಮೊದಲಿನ ತರಹ ಏನೂ ಇಲ್ಲ
ಬರೀ ತೋರಿಕೆ ದೇಶಭಕ್ತಿ.!
ಅಂತರಾಳದಲ್ಲಿ ಬರೀ ಕಶ್ಮಲ.!

ಬರಿದೆ ಶಾಂತಿಯ ಮುಖವಾಡ
ಒಡಲು ದ್ವೇಷಾಸೂಯೆಯ ಅಖಾಡ.!!
ತೂರಿಬಿಟ್ಟರೇ ನನ್ನ ಶಾಂತಿಮಂತ್ರ.?
ಭಾರತಿಯ ರಕ್ಷಣೆ ಯಾರಿಗೂ ಬೇಡ.!

ಹೆಸರಿಗಷ್ಟೇ ಸೀಮಿತ ಗಾಂಧಿ
ವರ್ಷಕ್ಕೊಮ್ಮೆ ನೆನೆವ ಪ್ರವಾದಿ.!
ಅನುಸರಿಸುವರಾರಿಲ್ಲ ಪಥವ
ಕಷ್ಟವಿಲ್ಲದೆ ಏರಲ್ಹವಣಿಕೆ ಗಾದಿ..!!

ಎಲ್ಲಿ ಹೋಯಿತು ಸತ್ಯ.?
ಮೆರೆದಾಡುತ್ತಿದೆ ಅಸತ್ಯ.!
ಆಡುವ ಮಾತಿನ ಮೇಲಿಲ್ಲ ನಿಗಾ...
ಕೇಡೆಣಿಸುವುದೇ ಪ್ರತಿನಿತ್ಯ..!!

ದೇಶದ ಸಂಪತ್ತು ತಿಂದು ತೇಗಿದರು
ಬಡವರು ಬಡವರಾಗೇ ಉಳಿದರು
ಸುವ್ಯವಸ್ಥೆಯ ನೀಡಲಾಗದೇ
ಲೂಟಿ ಹೊಡೆವ ಲಂಪಟರು..!!

ಕಂಡಿದ್ದೆ ರಾಮರಾಜ್ಯದ ಕನಸು
ಮಾಡಲಾಗಲಿಲ್ಲವೆನಗೆ ನನಸು
ರಾಮಾಯಣದ ರಾವಣನಂತೆಲ್ಲರು.!!
ಎಂದಿಗೂ ಆಗಲಾರದೇನೋ ನನಸು.!

ಇದು ನಾ ಕಟ್ಟಿದ ಹಿಂದೂಸ್ಥಾನವೇ.?
ನೋಡಲಾಗದೆನಗೆ ಓ ಪ್ರಭುವೇ.!
ಭಾರತಿಯ ಕಣ್ತುಂಬಿಕೊಳ್ಳಲು ಬಂದಿದ್ದೆ
ಸಹಿಸಲಾರೆನಕಟಾ ನಾನಿನ್ನು  ನಡೆವೆ..!!

ಡಾ: B.N.ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ