275. ಕಣ್ಮುಚ್ಚಿ ಕುಳಿತರೆ ಸಾಧುವೇ?

#ಚಿತ್ರಕಾವ್ಯ_ಅಭಿಯಾನ_೩೫

#ಕಣ್ಮುಚ್ಚಿ_ಕುಳಿತರೆ_ಸಾಧುವೇ?

ಮಾಯಾ ಮೋಹ ಮನವ ಬೆಸೆದಿರಲು
ಕಾಮ ಕ್ರೋಧ ಮದದ ಬೆಳೆ ಹುಲುಸಾಗಿ
ತನು ಮನದಲ್ಲೆಲ್ಲ ಬೆಳೆದು ನಿಂತಿರಲು
ಮನುಜ, ನೀನಾಗಲಹುದೇ ಹೇಳು ತ್ಯಾಗಿ?

ಆಸೆಯ ಬಳ್ಳಿ ಹಬ್ಬಿ ನಡೆಗೆ ತೊಡಕಾಗಿ
ನಾನುನಾನೆಂಬ  ಅಹಮಿನ ಹೆಮ್ಮರದಲಿ
ಸ್ವಾರ್ಥಸೂಯೆಗಳ ಫಲ ಸಂವೃದ್ಧಿಯಿರೆ
ನೀನಾಗಲಹುದೇ ಮನುಜ ಸಜ್ಜನ ಶರಣ

ಕಣ್ಮುಚ್ಚಿ ಕುಳಿತರೆ ಸಾಧುವಾಗಲಾರೆ.!
ಲಿಂಗ ಧರಿಸಿದರೇನು ಜಂಗಮನಾಗಲಾರೆ.!
ರುದ್ರಾಕ್ಷಿ ಧರಿಸಿದರೆ ಶಿವಸ್ವರೂಪಿಯೇ?
ಬಾಹ್ಯಾಡಂಬರದಲ್ಲಿಲ್ಲ ಸಾಧುತ್ವ ಕೇಳು ದೊರೆ

ಹದಗೊಳಿಸು ಮನವ ನಿತ್ಯಸತ್ಯದಲಿ
ಬಿತ್ತಿ ಶ್ರೀನಾಮವ ಶಿವನ ನೆನೆಯುತಲಿ
ಆಷಾಢಭೂತಿತನ ಬಿಟ್ಟು ವಿಭೂತಿ ಧರಿಸು.!
ಸದಾ ಶ್ರೀ ಶುಭನಾಮವನು ಸ್ಮರಿಸು

ಚಿತ್ತವಿರಿಸು ಅವನಲ್ಲಿ ಭಕ್ತಿ ಮಾರ್ಗದಲಿ
ಸ್ಥಾಪಿಸವನನ್ನು ನಿನ್ನ ಹೃದಯದಾಸನದಲಿ
ಬಯಕೆಗಳ ಬಿಸುಟು ಬಾಚಿ ತಬ್ಬಿದರವನ
ಕೈಹಿಡಿದೆತ್ತನೇ ದೇವ ಶ್ರೀಶೈಲನಾಥ ನಿನ್ನ

   ಡಾ: B.N.ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ