ಸಾಗಿದೆ_ಬದುಕು_ನಿನ್ನ_ಹುಡುಕುತ್ತಾ

#ಸಾಗಿದೆ_ಬದುಕು_ನಿನ್ನ_ಹುಡುಕುತ್ತಾ
********************************

ಹಸಿರು ಬನಸಿರಿಯ ನಡುವೆ
ನಾ ಹುಡುಕುತ್ತ ಸಾಗುತ್ತಿರುವೆ
ಎಲ್ಲಡಗಿ ಕುಳಿತಿರುವೆ ಮಾಧವ
ಏಕೆ ಹೀಗೆ ಕಾಡಿಸುವೆ ಮನವ..!!

ನಾ ನಿನ್ನ ಕಾಣದೇ ಅರೆಕ್ಷಣ
ಮನ ನಿಲ್ಲದು ಏನೋ ತಲ್ಲಣ
ದರುಷನವ ನೀಡು ಪ್ರಭುವೇ
ನಾ ನಿನ್ನನ್ನೇ ನಂಬಿರುವೆ..!!

ಜೊತೆಗೆ ಹೆಜ್ಜೆ ಹಾಕಿದ ಸಮಯ
ನೆನಪು ಬಾರದೇನೋ ಇನಿಯ
ಸುತ್ತಿದ್ದೆವಲ್ಲ ಈ ಗಿರಿ ಕಾನನ
ಮರೆಯಾದೆ ಎಲ್ಲೀಗ ಕೃಷ್ಣಾ..!!

ಒರಗಿ ನಿಂತಿದ್ದೆಯಲ್ಲ ಈ ಮರಕೆ
ಕೊಳಲೂದುತ್ತಾ ಕರೆದು ಸರಸಕೆ
ಸನಿಹ ಬಂದೊಡನೇ ಆಲಂಗಿಸಿ
ಇತ್ತಿದ್ದೆಯಲ್ಲ ಪ್ರೇಮ ಜಗವ ಮರೆಸಿ..!!

ಅದೇ ಬಳ್ಳಿಯಲ್ಲಿದ್ದ ಮಲ್ಲಿಗೆ
ಮುಡಿಸಿದ್ದೆಯಲ್ಲ ನನ್ನ ಮುಡಿಗೆ
ಕೈ ಕೈ ಹಿಡಿದು ಕರೆದು ತಾನು
ಅಲೆದಿದ್ದೆವಲ್ಲ  ಈ ಕಾನು..!!!

ಇದೇ ದಾರಿಯಲ್ಲೇ ಹೂ ಹಾಸಿ
ಕಾದಿದ್ದೆ ನಿನ್ನ ಬರುವ ಬಯಸಿ
ಹದವಾಗಿ ಕಾಯಿಸಿದ ನೊರೆಹಾಲು
ನಿನಗರ್ಪಿಸಿ ಒತ್ತುತ್ತುದ್ದೆ ಕಾಲು..!!

ಸಾರಿ ಹೇಳುತ್ತಿದೆ ನೋಡು ಕಾನನ
ನಮ್ಮೊಲವಿನ ಸವಿ ಪ್ರೇಮಕಥನ
ತರುಲತೆ ಗಿಳಿ ನವಿಲು ಕೋಕಿಲ
ಸಾಕ್ಷಿಯಿದೆ ನಮ್ಮ ಪ್ರೇಮಕೆ ಸಕಲ..!!

ಎಲ್ಲ ಮರೆತು ನೀ ಹೊರಟೆಯೆಲ್ಲಿಗೆ?
ಸದಾ ನಿನ್ನದೇ ಕನವರಿಕೆಯೆನಗೆ
ಮತ್ತದೇ ದಾರಿಯಲಿ ಹೆಜ್ಜೆ ಹಾಕುತ್ತ
ಸಾಗಿದೆ ಬದುಕು ನಿನ್ನ ಹುಡುಕುತ್ತ

              ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು