ಬೋಳು ಮರದ ಸ್ವಗತ😊

ಸಹೋದರ ಚಂದ್ರಕಾಂತ್ ಜಿಡ್ಡಿಯವರು ಕೊಟ್ಟ  ಈ  ಚಿತ್ರಕ್ಕೆ ನನ್ನದೊಂದು ಕವನ😊

ಬೋಳು ಮರದ ಸ್ವಗತ😊

ಇದೆಂಥಾ ಬಂಧ.!!
***************
ಬದುಕು ಸಾಕಾಯಿತಿನ್ನೆಂದು
ಒಣಗಿ ಕೊರಡಾಗಿ ನಿಂತೆ
ಬೀಳಲೂ ಬಿಡರಲ್ಲವಿಲ್ಲಿ
ಬಂಧಿಸಿರುವ ಬಳ್ಳಿಗಳು..!

ಬೆಳೆದು ನಿಂತಿದ್ದೆ ಅಂದು
ಗಗನವನೆ ಚುಂಬಿಸುವಂತೆ
ಬಳಲಿದವರಿಗಾಶ್ರಯವಾಗಿ
ಮೈತುಂಬ ಹಸಿರು ಹೊದ್ದು.!

ಅದೆಷ್ಟೋ ಪಕ್ಷಿ ಸಂಕುಲದ
ಸಂತಸದ ಕಲರವದ ನಿನಾದ
ಗೂಡುಕಟ್ಟಿ ಹಾಡಿದ್ದ ಜೋಗುಳದ
ದ್ವನಿಗೆ ಕಿವಿಯಾಗಿದ್ದೆ ನಾನು.!

ಹಸಿದು ದಣಿದು ಬಂದಿದ್ದ ಅದೆಷ್ಟು
ಜೀವ ಸಂಕುಲಕ್ಕೆ ನೆಳಲನಿತ್ತು
ನನ್ನೊಡಲಲ್ಲಿ ಮೊಳೆತ ಹಣ್ಣುಗಳ
ಅಕ್ಕರೆಯಲಿ ಉಣಬಡಿಸಿದ್ದೆ ನಾನು.!

ಒಂಟಿಯಾಗಿ ನಿಲ್ಲಲಾರದ ಬಳ್ಳಿಗೆ
ತಬ್ಬಿ ಹಬ್ಬಲು ಆಶ್ರಯವ ನೀಡಿದ್ದೆ
ಪ್ರಾಣಿಸಂಕುಲಕೂ ಹಚ್ಚ ಹಸಿರ
ಎಲೆಯನುಣಿನಸಿ  ತಾಯಾಗಿದ್ದೆ ನಾನು.!

ನಿಷ್ಕರುಣೆಯಲಿ ಕೊಡಲಿ ಮಚ್ಚನೆತ್ತಿ
ಕೊಚ್ಚಿದವರೆಷ್ಟೋ ಮಂದಿ ನನ್ನೆದೆಗೆ
ಅವರನ್ನೂ ಹರಸಿ ಉರುವಲಾಗಿ
ಉರಿದು ಸಹಾಯಹಸ್ತ ನೀಡಿದ್ದೆ ನಾನು.!

ಕೊಚ್ಚಿ ಕೊಂಡವರನೂ ಕರುಣೆಯಲಿ
ಮನೆಯ ಬಾಗಿಲಾಗಿ ಕಾಯ್ದಿದ್ದೆ ನಾನು
ಮನೆಮಂದಿಗೆಲ್ಲ ನೆರಳಾಗಿರಬಯಸಿ
ಮನೆಯ ಮಾಡಲ್ಲಿ ನಿಂತಿದ್ದೆ ನಾನು.!

ಹೀನ ಮಾನವನ ಪ್ರತಿಷ್ಠೆಯ
ಮೆರವಣಿಗೆಗೆ ನಾನೇ.ಬೇಕು
ಪೀಠೋಪಕರಣಗಳ ಒನಪಿನಲ್ಲಿ
ಅಲ್ಲಿಯೂ ಕುಳಿತವಗೆ ಆಧಾರ ನಾನು.!

ಕಷ್ಟಗಳನೆ ಮೈತುಂಬಿಕೊಂಡರೂ
ಸಂತೃಪ್ತಿಯ ಸಾರ್ಥಕತೆಯ ಬಾಳು.!
ಅಸನವಸನವಿತ್ತು  ಕಾಪಿಟ್ಟರೂ 
ಮನುಜ ನಿಲ್ಲಲಿಲ್ಲವೇಕೋ ನಿನ್ನ ಗೋಳು.!

ನಾ ಮಣ್ಣಲ್ಲಿ ಮಣ್ಣಾದರೂ ಗೆಲ್ಲುವೆ
ಗೊಬ್ಬರವಾಗಿಯಾದರೂ ನೆರವಾಗುವೆ
ನಿನ್ನ ಕುಲವನುದ್ಧರಿಸಲೋಸುಗ
ನನ್ನನೇ ಪಣವಿತ್ತು ಜೀವ ತೇಯುವೆ.!

ನನ್ನ ತ್ಯಾಗವ ನೀನರಿಯದಿದ್ದರೂ
ಅರಿತಿವೆ ನೋಡು ಈ ಲತೆಗಳು
ತಬ್ಬಿ ಹಬ್ಬಿ ಉರುಳದಂತೆ ತಡೆದಿವೆ..
ನಲ್ಮೆಯಲಿ.... ಇದೆಂಥಾ ಬಂಧಗಳು.!

              ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ