264...ನನ್ನ ಬರಹಗಳು..(ನನ್ನ ಜೀವನ ನನ್ನ ಕಥೆ)

ನನ್ನ ಜೀವನ ನನ್ನ ಕಥೆ##

ಜೀವನ ಸಂಗಾತಿಯ ಆಯ್ಕೆ ಸಂದರ್ಭ
*****************************

          ಎಲ್ಲಾ ಹೆಣ್ಣು ಮಕ್ಕಳಿಗೂ ಮದುವೆ ಅಂದರೆ  ನವಿರುಭಾವ, ಕನಸು, ನಾಚಿಕೆ, ನಿರೀಕ್ಷೆ, ಆತಂಕ, ಇರುತ್ತೆ.    ನನ್ನ ಕಥೆಯೋ ವಿಚಿತ್ರ.... ಅಸಲಿ ನನಗೆ ಮದುವೆ ಆಗೋ ಆಸಕ್ತಿ,  ಆಸೆಯೇ ಇರಲಿಲ್ಲ,  ಮದುವೆ ಅಂದ್ರೆ ಮಾರು ದೂರ ಹಾರ್ತಾಇದ್ದೆ.  ನಾನು ಮನೆಯ ಕೊನೆಯ ಮಗಳಾದ್ದರಿಂದ, ಅಲ್ಲದೇ  ನನ್ನ ಅಣ್ಣಂದಿರು, ಅಕ್ಕನೊಂದಿಗೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದದ್ದರಿಂದ  ಅವರುಗಳ ಮದುವೆ ನಾನು ತುಂಬಾ ಚಿಕ್ಕವಳಿದ್ದಾಗಲೇ ಆಗಿತ್ತು . ಅವರುಗಳ ನೋವು ನಲಿವು , ಜಂಜಾಟ,  ಎಲ್ಲಾ ನೋಡಿ ನನಗೆ ಮದುವೆ ಅಂದ್ರೆ ಹೇಸಿಗೆ ಬರೋಷ್ಟು ಬೇಸರ ತರಿಸಿತ್ತು.  ಜೊತೆಗೆ ನನ್ನ ಸೋದರತ್ತೆಯoದಿರ ಮಕ್ಕಳುಗಳು ನನ್ನನ್ನು ಮದುವೆಯಾಗಲು ನಡೆಸುತ್ತಿದ್ದ ಸರ್ಕಸ್..  ಅಸಹ್ಯ ಮೂಡಿಸುತ್ತಿತ್ತು.   ಅಲ್ಲದೇ ಬಾಲ್ಯದಿಂದಲೂ ಶ್ರೀ ರಾಮಕೃಷ್ಣಾಶ್ರಮದ ಒಡನಾಟ,  ಸಾಧುಸಂತರ ಸಂಗ ನನಗೆ ವೈರಾಗ್ಯ ಮೂಡಿಸುತ್ತಿತ್ತು.
ಅಲ್ಲದೆ ಚಿಕ್ಕಂದಿನಿಂದಲೂ ಅಮ್ಮ ಅಪ್ಪ ಹೇಳುತ್ತಿದ್ದ ಈಶ್ವರನ, ಕೃಷ್ಣನ ಕಥೆಗಳು, ನಾನೇ ಪಾರಾಯಣ ಮಾಡುತ್ತಿದ್ದ ರಾಮಾಯಣ, ಮಾಹಾಭಾರತ  ಕಥೆಗಳು ಅಧ್ಯಾತ್ಮದೆಡೆಗೆ ನನ್ನನ್ನ ಒಯ್ಯುತ್ಗಿದ್ದವು,  ರಾಮಕೃಷ್ಣಾಶ್ರಮದ ಒಡನಾಟ ಬಂದಮೇಲಂತೂ,  ಪ್ರತಿದಿನ ಎರಡು ಬಾರಿ ಆಶ್ರಮಕ್ಕೆ ಭೇಟಿ, ಪೂಜ್ಯ ಗುರುಗಳ ಪ್ರವಚನ, ಶ್ರೀರಾಮಕೃಷ್ಣ ಪರಮಹಂಸರ,.ಶ್ರೀಮಾತೆ ಶಾರದಾದೇವಿಯವರ ಜೀವನ ಚರಿತ್ರೆ ನನ್ನನ್ನು ಮತ್ತಷ್ಟು ವೈರಾಗ್ಯದೆಡೆ ನೂಕಿದವು... ಹಾಗಾಗಿ ಮದುವೆಯಲ್ಲಿ ಆಸಕ್ತಿ ಕಳೆದುಕೊಂಡೆ... ಆದ್ರೆ ಮನೆಯವರು ಸುಮ್ಮನಿರಬೇಕಲ್ಲ... ಅವರಿಗೆ ಇಷ್ಟವಾದ ಹುಡುಗರ ಸಂಬಂದ ತರೋದು ಮನಸ್ಸಿಗೂ ಬೇಜಾರು ಮಾಡೋದು ಅವರೂ ಬೇಜಾರು ಮಾಡ್ಕೊಳ್ಳೋದು... ಅಂತೂ ಹೀಗೇ ಸುಮಾರು ವರ್ಷಗಳನ್ನ ಮುಂದಕ್ಕೆ ದೂಡಿದೆ.  ಅಮ್ಮ ಯಾವಾದ್ರೂ ಮದುವೆಗಳಿಗೆ ಹೋಗಿ ಬಂದರಂತೂ .. ಮಂಕಾಗಿಬಿಡ್ತಿದ್ರು .ಎಲ್ಲರ ಮನೇಲಿ ಮದುವೆ ಆಗ್ತಿದೆ,  ಎಲ್ರೂ ಚನ್ನಾಗಿ ಸಂಸಾರ ಮಾಡ್ಕೊಂಡು ಸುಖವಾಗಿದ್ದಾರೆ,  ನಿನಗೇನಾಗಿದೆ.. ನೀನ್ಯಾಕೆ ಮದುವೆ ಆಗಲ್ಲ,  ಎಲ್ರೂ ಮಗಳ ಮದುವೆ ಯಾವಾಗ ಅಂತ ಕೇಳ್ತಾರೆ.. ಎಲ್ರಿಗೂ ನಾನೇನು ಉತ್ತರ ಹೇಳ್ಬೇಕು? ಅಂತ ಪೇಚಾಡ್ತಿದ್ರು.. ಮತ್ತೆ ಗಂಡುಗಳ ಬೇಟೆ..!!   ಆದ್ರೆ ಒಂದಂತೂ ನನಗೆ ಆಶ್ಚರ್ಯ ಕಣ್ರೀ...!!  ನನಗಾಗಿ ಬಂದ ಎಲ್ಲಾ ಗಂಡುಗಳನ್ನ ನಾನೇ ತಿರಸ್ಕರಿಸಿದ್ದು..!! ಪುಣ್ಯಾತ್ಮರು ಒಬ್ಬರಾದ್ರೂ ಈ ಹುಡುಗಿ ಇಷ್ಠ  ಇಲ್ಲ ಅಂತ ಹೇಳಿದವರೆ ಇಲ್ಲ... !!.  ಒಮ್ಮೆ ನನ್ನ ಅಣ್ಣ...ಕೋಪಿಸಿಕೊಂಡು ...  ನೀನೇನು. ತ್ರಿಪುರಸುಂದರಿ ಅಂದ್ಕೊಂಡ್ಯಾ....  ಬಂದ ಹುಡುಗರೆಲ್ಲಾ ನಿನ್ನನ್ನ ಒಪ್ಪಿದ್ರೂ ನೀನು ಮಾತ್ರ ಯಾರನ್ನೂ ಓಕೆ ಮಾಡಲಿಲ್ಲ... ಈ ಕಪ್ಪು ಹುಡುಗಿಯನ್ನ ಅವರು ಒಪ್ಪೋದೇ ಕಷ್ಟ,  ನೀನೇನು ಹೈ ಪ್ರೊಫೈಲ್ ಹುಡುಗೀನಾ?  ಏನು ಲಕ್ಷಾಂತರ ದುಡೀತಿದ್ದೀಯಾ? ಅಥವಾ ತುಂಬಾ ಶ್ರೀಮಂತರಾ? ಅಥವಾ ರೂಪ ಇದೆಯಾ? ಏನೂ ಇಲ್ಲದ ನಿನ್ನನ್ನ ಅವರುಗಳು ಒಪ್ಪಿದ್ದಾರೆ ಅಂದ್ರೆ... ಎಲ್ಲಾ ಇರೋರನ್ನ ನೀನ್ಯಾಕೆ ಒಪ್ಕೋಬಾರ್ದು ಅಂತ  ಜಗಳನೇ ಮಾಡಿಬಿಟ್ಟರು... ಕೊನೆಗೆ ನನ್ನ ಕಾರಣಕ್ಕಾಗಿ ಅಮ್ಮನಿಗೆ ಹಾರ್ಟ್ ಅಟ್ಯಾಕ್ ಆಯ್ತು...  ಎಲ್ಲರೂ ನನ್ನನ್ನೇ ಚುಚ್ಚಿ ಚುಚ್ಚಿ ಮಾತಾಡೋಕ್ಕೆ ಶುರು ಮಾಡಿದ್ರು,  ಅಮ್ಮನಿಗೆ ಏನಾದ್ರೂ ಆದ್ರೆ ನೀನೇ ಅದಕ್ಕೆ ಹೊಣೆ ಅಂತ.
       ಅಮ್ಮ ಇನ್ನೂ ಹಾಸ್ಪಿಟಲ್ ನಲ್ಲಿ ಇದ್ದಾದ... ನನ್ನ ಪಪ್ಪ,  ನನ್ನ ಪಕ್ಕ ಕೂತು ತಲೆ ನೇವರಿಸ್ತಾ ... ಮಗೂ....  ಮನುಷ್ಯನಾಗಿ ಹುಟ್ಟಿದ ಮೇಲೆ... ಅದರಲ್ಲೂ ಹೆಣ್ಣಾಗಿ ಹುಟ್ಟಿದ ಮೇಲೆ ಯಾವುದಾದ್ರೂ ಆಸರೆ ಇರಬೇಕು...  ನೀನಂತೂ ಸನ್ಯಾಸಿನಿ ಆಗೋಕ್ಕಾಗಲ್ಲ... ನಿನ್ನಮ್ಮನ ಪರಿಸ್ಥಿತಿ ನೋಡು, ಹಾರ್ಟ್ ಪ್ರಾಬ್ಲೆಮ್ ಸ್ಟಾರ್ಟ್ ಆಗಿದೆ... ಯಾವಾಗ ಏನು ಬೇಕಾದ್ರೂ ಆಗಬಹುದು...  ನಾನು ಇನ್ನೆಷ್ಟು ದಿನ ಇರೊಕ್ಕಾಗುತ್ತೆ,  ನನಗೂ ವಯಸ್ಸಾಯ್ತು ಅಲ್ವಾ?  ನಮ್ಮಿಬ್ಬರ ನಂತರ ನಿನ್ನನ್ನ ಇನ್ನೊಬ್ಬರ ಆಶ್ರಯದಲ್ಲಿ ಬಿಟ್ಟು ಹೋಗೊಕ್ಕೆ ಮನಸ್ಸಿಲ್ಲಮ್ಮ... ನಿನ್ನದೇ ಒಂದು ಸಂಸಾರ ಆಗಬೇಕು,  ಮಕ್ಕಳು ಮರಿ.. ಮನೆ.. ನಿನ್ನ ಸಂತೋಷ ನೋಡಿ ನಾವು ಕಣ್ಮುಚ್ಚಿದರೆ... ನಮ್ಮ ಆತ್ಮಕ್ಕೂ ನೆಮ್ಮದಿ ಅಲ್ವಾ?  ಅಣ್ಣ ಅತ್ತಿಗೆಯರು ಎಷ್ಟು ದಿನ ನೋಡ್ತಾರೆ?  ನೀನು ದುಡಿಯಬಹುದು... ಆದರೆ  ಆಸರೆ ಬೇಕಲ್ಲಮ್ಮ...  ನೀನು ಮದುವೆಗೆ ಒಪ್ಪಿದರೆ ನಿಮ್ಮಮ್ಮ ಹುಷಾರಾಗ್ತಾಳೆ... ಇಲ್ಲಾಂದ್ರೆ ಹೇಗೋ ಏನೋ.. ನೋಡು ನಿನ್ನಿಷ್ಟ.... ನಿನಗೂ ವಯಸ್ಸಾಗ್ತಾ ಇದೆ ನೆನಪಿರಲಿ... ಅಂತ ಕಣ್ಣು ತುಂಬಿಕೊಂಡು,  ಹೊರಟೆ ಹೋದರು....  ಆಗ ನಾನೂ ಯೋಚನೆ ಮಾಡಿ...  ನನ್ನ ತಾಯಿ ತಂದೆಗೆ ನೋವು ಕೊಡಬಾರದು... ಈ ಬಾರಿ ಯಾವುದೇ ಗಂಡು ಬಂದರೂ...  ಹೇಗೆ ಇದ್ದರೂ... ಅವರ ಪರಿಸ್ಥಿತಿ ಏನೇ  ಆಗಿದ್ದರೂ ಒಪ್ಪಿಕೊಂಡು, ಮದುವೆ ಮಾಡ್ಕೊಂಡು ಅವರಿಗೆ ನೆಮ್ಮದಿ.ಕೊಡಬೇಕು..  ಅಂತ ಡಿಸೈಡ್ ಮಾಡ್ದೆ...  ಅದಾದ ಒಂದು ವಾರಕ್ಕೆ ಮನೆಗೆ ಬಂದವರೇ ನನ್ನ ರಮೇಶ್... ಅವತ್ತೂ ಕೂಡ ಅಣ್ಣ ಮನೇಲಿ ಇರಲಿಲ್ಲ...  ಇವತ್ತು ಯಾರೋ ನಿನ್ನ ನೋಡೋಕ್ಕೆ ಬರ್ತಾರೆ... ನಾನಂತೂ ಮನೇಲಿ ಇರಲ್ಲ... ನೀನುಂಟು.. ನಿನ್ನ ಅಪ್ಪ ಅಮ್ಮ ಉಂಟು... ಇನ್ನು ನಿನ್ನ ವಿಷಯಕ್ಕೆ ನಾನು ಬರೋಲ್ಲ ಅಂತ ಹೇಳಿ ಕೆಲಸಕ್ಕೆ ಹೋಗಿಬಿಟ್ರು... ನಾನು ಮೊದಲೇ ನಿಶ್ಚಯಿಸಿದ್ದಂತೆ...  ಈ ಸಂಬಂದವನ್ನ ಒಪ್ಪಿ.. ಅಣ್ಣ ಕೇಳಿದ್ರೆ.. ಓಕೆ ಅಂತ ಹೇಳಿಬಿಡ್ಬೇಕು ಅಂತ ಅಂದ್ಕೊಂಡಿದ್ದೆ..  ಇವರುಗಳು ಬಂದು ಹೋಗಿ ಮೂರು ದಿನವಾದ್ರೂ ಅಣ್ಣ  ಆ ವಿಚಾರ ಮಾತಾಡಲೇ ಇಲ್ಲ...  ಅವರ ಮೌನ ಸಹಿಸಲಾರದೆ ನಾನೇ ಅಣ್ಣನ ಹತ್ತಿರ ಮೊನ್ನೆ ಬಂದಿದ್ದ ಸಂಬಂಧವನ್ನು ನಿಷ್ಕರ್ಷೆ ಮಾಡಿಬಿಡಿ ಅಂತ ಹೇಳ್ದೆ...  ಆಗ ಮನೆಯವರಿಗಾದ ಸಂತಸ ಅಷ್ಟಿಷ್ಟಲ್ಲ...  ನನ್ನಮ್ಮ ನಂತೂ ಕುಣಿದಾಡಿದ್ದರು.... ಅಪ್ಪನ ಕಣ್ಣಲ್ಲಿ ಆನಂದಭಾಷ್ಪ... ಅಣ್ಣನಿಗಂತೂ.ಸ್ವರ್ಗ ಮೂರೇ ಗೇಣು...  ಅವರುಗಳ ಸಂತಸದಲ್ಲಿ ನಾನು ಭಾಗಿಯಾದೆ... ರಮೇಶ್ ರನ್ನು ಕಣ್ಣೆತ್ತಿ ನೋಡದೆಯೇ ಒಪ್ಪಿಕೊಂಡಿದ್ದೆ...   ಆಮೇಲೆ ಅದದ್ದೆಲ್ಲಾ ಸುಖಾಂತ... 
ಈಗ ಅನ್ನಿಸುತ್ತೆ...  ಒಂದು ವೇಳೆ ನಾನು ನನ್ನ ರಮೇಶ್ರನ್ನು ಮಿಸ್ ಮಾಡ್ಕೊಂಡಿದ್ರೆ... ಇಂತಹ ಅಮೂಲ್ಯ ಜೀವನ ಕಳ್ಕೊತಾಯಿದ್ದೆ.. ಅಂತ...  ನನ್ನೆಲ್ಲಾ ಆಸೆಗಳನ್ನ,  ನಗುನಗುತ್ತಲೇ ಪೂರೈಸುವ,  ಚಿಕ್ಕ ಮಗುವನ್ನು ನೋಡಿಕೊಳ್ಳುವಂತೆ ಜವಾಬ್ದಾರಿಯಿಂದ ನೋಡಿಕೊಳ್ಳುವ,  ನನ್ನೆಲ್ಲಾ ಸಾಧನೆಗೆ ಸ್ಪೂರ್ತಿ ಯಾಗಿರುವ ಬಂಗಾರದ ಮನುಷ್ಯನನ್ನು  ಮಿಸ್ ಮಾಡ್ಕೊಂಡುಬಿಡ್ತಿದ್ದೆ... ..  ನಾನು ಇಂಥಾ ಸುಂದರ ಜೀವನವನ್ನು ಪಡೆಯೋಕ್ಕೆ.. ಪಾಪ ಅಮ್ಮನಿಗೆ ಹಾರ್ಟ್ ಪ್ರಾಬ್ಲೆಮ್ ಬರಬೇಕಾಯ್ತೆ  ಅನ್ನೋ ಬೇಸರ ಕೂಡ ಇದೆ...  ಅವತ್ತು ಪಪ್ಪ ಅಷ್ಟು ಹಿತನುಡಿಗಳನ್ನ ಹೇಳಲಿಲ್ಲ ಅಂದಿದ್ರೆ... ನನಗೇ ಸುಂದರ ಬದುಕು ಸಿಗ್ತಾ ಇರಲಿಲ್ಲವೇನೋ...!!  ನಾನೂ ಸಹ ಒಮ್ಮೊಮ್ಮೆ ನುಗ್ಗಿ ಬರುವ ವೈರಾಗ್ಯವನ್ನು ಹಿಮ್ಮೆಟ್ಟಿಸಿ,  ನಗು ನಗುತ್ತಾ ತುಂಬು ಸಂಸಾರದಲ್ಲಿ ನಗುನಗುತ್ತಾ ಜೀವನ ನಡೆಸ್ತಿದ್ದೀನಿ... ನನ್ನ ಸುಖೀ ಸಂಸಾರ ನೋಡಿ ನನ್ನ ತಂದೆತಾಯಿಗಂತೂ ಅತೀವ ಹೆಮ್ಮೆ... ಅಪ್ಪ ಒಮ್ಮೊಮ್ಮೆ ಹೇಳ್ತಾಇರೋರು... ಹಾಲು ಕಾಯ್ದಷ್ಟೂ ರುಚಿ ಅಂತ...  ನಮ್ಮ ಶೈಲೂ ಜೀವನ ಕೂಡ.. ಅಷ್ಟೇ ಚಂದವಿದೆ ಅಂತ ಹೆಮ್ಮೆ ಪಡ್ತಾಯಿದ್ರು..... 😊 
ನನಗೆ ಇಂಥಾ ಸುಂದರ ಜೀವನವಿತ್ತ ನನ್ನಪ್ಪ...  ನಮ್ಮನ್ನ ಆಗಲಿ ಇಂದಿಗೆ 21 ದಿನಗಳಾಯ್ತು😢  ನನ್ನ ತಂದೆಯನ್ನು ಕಳೆದುಕೊಂಡ ಬೇಸರ ಒಂದು ಬಿಟ್ರೆ... ನಾನು ಜೀವನದಲ್ಲಿ ಪರಮಸುಖಿ😌
I miss you ಅಪ್ಪಾ...  ಮತ್ತೆ ನನ್ನ ಮನೆಯಲ್ಲೇ ಹುಟ್ಟಿಬನ್ನಿ😔😔🙏

        ಶೈಲೂ......

ನನ್ನ ಜೀವನ ## ನನ್ನ ಕಥೆ##
ಮುಖಪುಸ್ತಕದಲ್ಲಿನ  ಗೆಳೆಯ / ಗೆಳತಿಯರ ಭೇಟಿ :--

           ಆ ದಿನ ಮರೆಯಲಾಗದ್ದು,  ಅಂದಿನ ದಿನದ ಭಾವೋದ್ವೇಗ, ಪುಳಕ, ಸಂತಸ, ಒಂಥರಾ ಮೈ ನಡುಕ.....  ಇವುಗಳನ್ನು ಪದಗಳಲ್ಲಿ ಬಂಧಿಸಿಡಲಾಗದು.  ನನ್ನ  ಕೃಷ್ಣನ ಮಧುರ ನಾಮವಾದ " ಮಾಧವ "  ನಮ್ಮ ಮನೆಗೆ ಬರುತ್ತೇನೆಂದಾಗ ಆದ  ಸಂತಸ ಬಣ್ಣಿಸಲಾಗದು...  ನನಗೂ, ನಮ್ಮವರಿಗೂ, ಇಬ್ಬರಿಗೂ fb ಫ್ರೆಂಡ್ ಮಾಧವ್.  ನಿರರ್ಗಳ ಮಾತು,  ಸವಿನಯ ಭಾವ,  ಸಹೃದಯಿ, ಸರಳ ವ್ಯಕ್ತಿತ್ವ, ಹೆಂಗರಳು ಹೊತ್ತ ಧೀಮಂತ ಗಂಡು,  ಸ್ನೇಹಮಯಿ ಮಾಧವ್ ನನಗೆ ಪರಿಚಯವಾದದ್ದೇ ಒಂದು ಸಂತಸದ ವಿಷಯ.            ಸುಮಾರು ಫ್ರೆಂಡ್ ರಿಕ್ವೆಷ್ಟ್  ಬಂದಿತ್ತು,  ಸಾಮಾನ್ಯವಾಗಿ ನಾನು ಯಾರನ್ನೂ ಫ್ರೆಂಡ್ ಮಾಡಿಕೊಳ್ಳಲ್ಲ, 4 - 5 ವರ್ಷಗಳ ಹಿಂದೆ ಬಂದಿದ್ದ ರಿಕ್ವೆಷ್ಟ್ ಗಳನ್ನು ಈಗಲೂ ಅಕ್ಸೆಪ್ಟ್ ಮಾಡಿಲ್ಲ.  ಅಂದೊಮ್ಮೆ ನನ್ನ ಮಗ ನನ್ನ ಫೇಸ್ಬುಕ್ ನೋಡ್ತಾ ... ಅಮ್ಮ ಅದೆಷ್ಟು ಫ್ರೆಂಡ್ ರಿಕ್ವೆಷ್ಟ್ ಬಂದಿದೆ ನೀವು ನೋಡೇ ಇಲ್ಲ... ಸಾವಿರದ ಹತ್ತಿರ ಇದೆ ನೋಡಿ,  ಇಷ್ಟವಾದರೆ ಅಕ್ಸೆಪ್ಟ್ ಮಾಡಿ .. ಇಲ್ಲಾಂದ್ರೆ ಡಿಲೀಟ್ ಮಾಡಿ  ಅಂದಾಗಷ್ಟೇ ನಾನು ರಿಕ್ವೆಷ್ಟ್ ಗಳನ್ನ ನೋಡ್ತಾ ಬಂದದ್ದು.  ಯಾವ ಹೊಸ ಫ್ರೆಂಡೂ ಬೇಡ,  ಇರೋರಷ್ಟೇ ಸಾಕು ಅಂತ ಮೊಬೈಲ್ ಎತ್ತಿಡುವಾಗ ಕಾಣಿಸಿದ್ದು  ಆ ಹೆಸರು.  ಮಾಧವ್...  ನನ್ನ ಕೃಷ್ಣನ ಇನ್ನೊಂದು ಹೆಸರು... ನನ್ನ ಅರಿವಿಲ್ಲದೆಯೇ ರಿಕ್ವೆಷ್ಟ್ ಅಕ್ಸೆಪ್ಟ್ ಮಾಡಿದ್ದೆ... ಅದೂ ಅವರ ಪ್ರೊಫೈಲ್ ನೋಡದೆಯೇ.!!  ನಂತರ ,  ಸಂಜೆಯೇ ಮೆಸೆಂಜರ್ ನಲ್ಲಿ ಮೆಸೇಜ್,  ಕೋಪ ಬಂತು,  ಛೇ ಫ್ರೆಂಡ್ಶಿಪ್ ಅಕ್ಸೆಪ್ಟ್ ಮಾಡಿದ ತಕ್ಷಣವೇ ಮೆಸೇಜಾ... ಛೇ  ಎಂಥಾ ಜನ...  ಗುಡ್ಮಾರ್ನಿಗ್ , ಗುಡ್ ನೈಟ್ ಮೆಸೇಜ್ ಮಾಡೋಕ್ಕೆ ಫ್ರೆಂಡ್ ಆಗ್ಬೇಕಾ...ಡಿಲೀಟ್ ಮಾಡ್ಬೇಕು ಅಂತ ಮೆಸೇಜ್ ನೋಡಿದಾಗ...  ಅವರ ಭಾಷಾ ಪಾಂಡಿತ್ಯ, ಗೌರವ ಮೂಡುವ ಅವರ ಬರವಣಿಗೆ ನೋಡಿ ಇಷ್ಟ ಆಯ್ತು...  ಮೊದಲೆಲ್ಲಾ ಸರ್.... ಮೇಡಂ...  ಅನ್ನುವ.ಸಂಭಾಷಣೆ  ಬ್ರೋ... ಸಿಸ್... ಹಂತಕ್ಕೆ ಬರುವಷ್ಟರಲ್ಲಿ ತುಂಬಾ ಆತ್ಮೀಯರಾಗಿಬಿಟ್ವಿ.  ಅವರ ಕೇರಿಂಗ್, ತುಂಬು ವಿಶ್ವಾಸ ನನ್ನ ಅಣ್ಣನನ್ನು ನೆನಪಿಸುತ್ತಿತ್ತು... ನನ್ನ ತುಂಟಾಟ... ಕೀಟಲೆಯ ಮಾತುಗಳು, ವಿಚಾರ ವಿನಿಮಯ ಅವರ ಚಿಕ್ಕ ತಂಗಿಯನ್ನು ನೆನಪಿಸುತ್ತಿತ್ತಂತೆ..  ಹಾಗಾಗಿ ಸ್ನೇಹದ ಜೊತೆಜೊತೆಗೆ.. ವಾತ್ಸಲ್ಯವೂ  ಬೆಳೆದುಬಂತು
ಜೊತೆಗೆ ನನ್ನವರಿಗೂ ಫ್ರೆಂಡ್ ಆಗಿದ್ದರಿಂದ ಫೋನ್ ಮೂಲಕ ಸಂಭಾಷಣೆಯೂ  ನಡೀತಿತ್ತು... ನನ್ನ ಮೇಲೆ ಇಲ್ಲದ್ದನ್ನೆಲ್ಲ ಹೇಳಿ ನನ್ನವರಿಗೆ ತಮಾಷೆ ಮಾಡೋದು.  ಅವರ ಬಗ್ಗೆ ಕೀಟಲೆ ಮಾಡಿ ನನಗೆ ತಮಾಷೆ ಮಾಡೋದು. ಜೊತೆಗೆ ಮನೆ ಜನರ ಪರಿಚಯ ಮಾಡಿಕೊಂಡು ಫ್ಯಾಮಿಲಿ ಫ್ರಂಡ್ಸ್ ಆಗ್ಬಿಟ್ವಿ.  ಅಮ್ಮ, ಅತ್ತಿಗೆ,  ಮಕ್ಕಳ ಜೊತೆಯೆಲ್ಲಾ ಹರಟೆ( ಮಾಧವ್ ರ ಅಮ್ಮ,  ಹೆಂಡತಿ - ರಜನಿ,  ಮಕ್ಕಳು  ನೇಹಾ, ನವ್ಯ ) ಹೊಡೆದದ್ದೂ ಆಯ್ತು,  ಫೇಸ್ಬುಕ್ ಫ್ರೆಂಡ್ ಆಗಿ ಇಷ್ಟೆಲ್ಲಾ ಆತ್ಮೀಯರಾಗಬಹುದಾ ಅನ್ನುವ ಮಟ್ಟಿಗೆ ನಮ್ಮ ಕುಟುಂಬಗಳ ಸ್ನೇಹ ಬೆಳೆಯಿತು.  ಅವರು ದೂರದ ಹೊಸಪೇಟೆಯಲ್ಲಿ..!! ನಾವು ಬೆಂಗಳೂರಿನಲ್ಲಿ ..!! ಒಮ್ಮೆಯೂ ಮುಖತಃ ಭೇಟಿಯಾಗದಿದ್ದರೂ  ನಮ್ಮ ಮಧುರ ಬಾಂಧವ್ಯ ಸಂಬಂಧ ಬೆಳೆಸುವವರೆಗೂ ಮಾತಾಗಿತ್ತು... ನಾನೊಮ್ಮೆ ಮಾಧವ್ ರನ್ನು ನನ್ನ ಮಗನಿಗೆ ಅವಳ ಮಗಳನ್ನು ತಂದುಕೊಳ್ಳುವ ವಿಚಾರ ಕೂಡ ಮಾತಾಡಿದ್ದೆ...!!
         ಇಂತಹ ಮಾಧವ್ ಕುಟುಂಬ ಸಮೇತರಾಗಿ ನನ್ನ ಮನೆಗೆ ಬರ್ತಾರೆ ಅಂದಾಕ್ಷಣ ನನಗೆ ಖುಷಿಯಿಂದ ಮಾತೇ ಹೊರಟಿರಲಿಲ್ಲ... ಬೆಂಗಳೂರಿನ ಸಂಬಂಧಿಕರ ಮದುವೆಗೆ ಬಂದವರು ನಿಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತೇವೆ ಅಂದಾಗ ಸ್ವರ್ಗ ಕೈಗೆಟುಕುವಂತೆಯೇ ಅನ್ನಿಸಿತ್ತು ನನಗೆ.   ಕಾರಣಾಂತರಗಳಿಂದ ಅತ್ತಿಗೆ, ಮಕ್ಕಳು, ಅಮ್ಮ ಬರಲಾಗಲಿಲ್ಲ.  ಮಾಧವ್ ಒಬ್ಬರನ್ನೇ ಎದುರುಗೊಳ್ಳಲು ನನ್ನವರು ಬಸ್ಟಾಪಿಗೆ ಹೋದರು,  ಅವರುಗಳೆಲ್ಲಾ ಬಂದಾಗ ಏನೇನು ಮಾಡಬೇಕು, ಅವರಿಗೆ ಏನಿಷ್ಟವಾಗಬಹುದು, ಅನ್ನುವ ಜಿಜ್ಞಾಸೆ ಯಲ್ಲಿಯೇ ... ಕೈಕಾಲು ಕೂಡ ಆಡಲಾರದಂತ ಎಗ್ಸೈಟ್ಮೆಂಟ್.

ಫೋನಲ್ಲಿ, ಚಾಟಿಂಗ್ನಲ್ಲಿ ಅಷ್ಟು ಮಾತಾಡುತ್ತಿದ್ದ ನಾನು  ಮಾಧವ್ ಎದುರು ನಿಂತಾಗ... ಏನೂ ಮಾತಾಡಲು ತೋಚದೆ ತಬ್ಬಿಬ್ಬಾಗಿದ್ದೆ,  ಮಾತೇ ಹೊರಡದೆ ಮೌನಕ್ಕೆ ಶರಣಾಗಿದ್ದೆ.  ನನಗಿಷ್ಟವಾದ ಮೈಸೂರ್ಪಾಕ್ ಮುಂದಿಡಿದು ಏನೇನೋ ತರಬೇಕು ಅಂದ್ಕೊಂಡೆ...  ಕೊನೆಗೆ ಏನೂ ತರಲಾಗಲಿಲ್ಲ...  ನಿಮಗಿಷ್ಟ ಅಲ್ವಾ ಶೈಲೂ... ಹಾಗಾಗಿ ಇದನ್ನ ತಂದೆ ಅಂತ  ನನ್ನವರ ಕೈಯಿಂದ ಸ್ವೀಟ್ ಬಾಯಿಗಿಡಿಸಿದಾಗ  ಕಣ್ತುಂಬಿಬಂತು..  ಆ ದಿನವೆಲ್ಲಾ ಏನೋ ಸಡಗರ ಸಂಭ್ರಮ...  ಪ್ರಯಾಣದ ಆಯಾಸದಲ್ಲಿದ್ದರೂ... ವಿಶ್ರಾಂತಿಯೂ ತೆಗೆದುಕೊಳ್ಳದೆ ಆತ್ಮೀಯವಾಗಿ ಹರಟುತ್ತಿದ್ದ ಮಾಧವ್,  ನನಗೆ ಶ್ರೀ ಕೃಷ್ಣನಂತೆಯೇ ಕಂಡದ್ದು ಸುಳ್ಳಲ್ಲ...
       ಅವರು ಹೊರಟು ನಿಂತಾಗ, ಎಲ್ಲರಲ್ಲೂ ಏನೋ ಕಳೆದುಕೊಂಡ  ಅನುಭವ,  ಕಣ್ಣಲ್ಲಿ ನೀರು, ನನಗಂತೂ ಮೊದಲಬಾರಿಗೆ ತವರಿನವರು ಬಂದು ಅತ್ತೆಯ ಮನೆಯಲ್ಲಿ ನನ್ನನ್ನು ಬಿಟ್ಟು ಹೊರಟಾಗ  ಆಗಿದ್ದ ನೋವಿಗಿಂತ ಹೆಚ್ಚು ನೋವಾಗಿತ್ತು.  ತಲೆನೇವರಿಸಿ ಹೋಗಿ ಬರುತ್ತೇನೆ ಶೈಲೂ ಎಂದಾಗಂತೂ ಉಕ್ಕಿ ಬರುವ ಅಳುವನ್ನು ತಡೆದು ಮನದಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದೆ.  ತುಂಬಿ ಬಂದ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಾ ಮಗನ ಬೈಕಿನ ಹಿಂದೆ ಕುಳಿತು ಹಿಂತಿರುಗಿ ನೋಡು ನೋಡುತ್ತಾ  ಬಸ್ಟಾಪಿಗೆ ಹೊರಟ ಮಾಧವ್ ರ ಚಿತ್ರವನ್ನು  ಮರೆಯಲೇ ಸಾಧ್ಯವಿಲ್ಲ.  ಆ ಸಮಯದಲ್ಲಿ ನನ್ನ ರಮೇಶ್ ತನ್ನೆದೆಗೊರಗಿಸಿಕೊಂಡು ಸಮಾಧಾನ ಮಾಡಿದ್ದರು ನನಗೆ.
       ಮುಖಪುಸ್ತಕದಲ್ಲಿ ಪರಿಚಯವಾದ ಒಂದು ಸ್ನೇಹದ ಬಂಧ ಇಷ್ಟು ಸೆಳೆಯುತ್ತೆ ಅಂದ್ರೆ... ಅದು ಜನ್ಮಾಂತರದ  ಅನುಬಂಧವೇ ಇರಬೇಕು..!!!
 
    We miss you Madhav😔
            ಶೈಲೂ......


ನನ್ನ ಜೀವನ  ನನ್ನ ಕಥೆ###

ಅರಿಯದೇ ಬೆಳೆದುಬಂದ ಬಂಧ
***************************

          ನಾನು ಒಮ್ಮೊಮ್ಮೆ ಮೂಡಿ,  ಒಮ್ಮೊಮ್ಮೆ ವಾಚಾಳಿ, ಒಮ್ಮೊಮ್ಮೆ ತೀರಾ ಮೌನ,  ಒಮ್ಮೊಮ್ಮೆ ಮಗುವಿನ ಮನ.... ಒಮ್ಮೊಮ್ಮೆ ನನಗೆ ನಾನೇ ಅರ್ಥವಾಗುವುದಿಲ್ಲ.  ತೀರಾ ಪರಿಚಯ ಆಗೋವರೆವಿಗೂ ಯಾರೊಂದಿಗೂ ಹೆಚ್ಚು ಮಾತಾಡುವವಳಲ್ಲ.... ತೀರಾ ಆಪ್ತರ ಹತ್ತಿರವೇ ಮನದ ಮಾತನ್ನು ಆಡುವವಳು..... ಹೀಗಿದ್ದ ನನ್ನ..  ನನ್ನ ಮನದೊಳಗಿನ ಮಾತುಗಳನ್ನು ಲೀಲಾಜಾಲವಾಗಿ  ಕವನದ ಮೂಲಕ ಹೇಳುತ್ತಿದ್ದೇನೆಂದರೆ ಅದಕ್ಕೆ ಕಾರಣ ಈ ಮುಖಪುಸ್ತಕವೆಂಬ  ಮಾಯಾಜಾಲ.   ಮುಖಪುಸ್ತಕಕ್ಕೆ ಬಂದು ತುಂಬಾ.ವರುಷಗಳಾದರೂ ನನ್ನ ಬರಹ, ಬರೀ ಅಧ್ಯಾತ್ಮ, ಜ್ಯೋತಿಷ್ಯ ಕ್ಕೆ ಸಂಬಂಧಿತವಾಗಿತ್ತು ಅಷ್ಟೇ,  ನನ್ನೊಳಗೊಬ್ಬ ಕವಿತೆ ಇದ್ದರೂ ಮನಬಿಚ್ಚಿ ತೆರೆದುಕೊಂಡಿರಲಿಲ್ಲ.  ಯಾವುದಾದ್ರೂ ಪುಸ್ತಕದ ಮೇಲೋ.... ಹಾಳೆಯ ಮೇಲೋ,  ದಿನಪತ್ರಿಕೆಯ ಅಂಚಿನಲೋ... ಅನಿಸಿದ್ದನ್ನ ಬರೆದು ತೃಪ್ತಿ ಪಟ್ಟುಕೊಳ್ಳುತ್ತಿದ್ದೆ.   ಒಮ್ಮೆ ಮುಖಪುಸ್ತಕದಲ್ಲಿ ಹಿರಿಯ ಪತ್ರಕರ್ತ, ಶ್ರೀಮಾನ್ ಗಣೇಶ ಪ್ರಸಾದ ಪಾಂಡೆಲು ಸರ್  ಅವರ ಯಾವುದೋ ಕವನ ( ನೆನಪಿಲ್ಲ ) ತುಂಬಾ ಸೆಳೆಯಿತು,  ಅದಕ್ಕೊಪ್ಪುವಂತೆ  ಕಮೆಂಟ್ ನಲ್ಲಿ ನಾನೊಂದು ಕವನ ಬರೆದೆ... ಅದು ಪಾಂಡೆಲು ಸರ್ಗೆ ತುಂಬಾ.ಇಷ್ಟವಾಯ್ತು ಅನ್ನಿಸುತ್ತೆ.... ನಿಮ್ಮೊಳಗೊಬ್ಬ ಕವಯಿತ್ರಿ ಇದ್ದಾಳೆ.. ನೀವ್ಯಾಕೆ ಬರೆಯಬಾರದು ಅಂತ ಧೈರ್ಯ ತುಂಬಿ ಪ್ರೋತ್ಸಾಹಿಸಿ,  ಬರವಣಿಗೆಗೆ ಮುನ್ನುಡಿ ಬರೆದೇ ಬಿಟ್ಟರು.  ಪ್ರತಿದಿನ ವಿಷಯ ಕೊಟ್ಟು ಅದರಬಗ್ಗೆ ಬರೆಯಲು ಹೇಳಿ.. ಬರೆಯಿಸಿ..  ಗುರುಸ್ಥಾನದಲ್ಲಿ ನಿಂತು... ತಪ್ಪೋಪ್ಪುಗಳನ್ನ ತಿದ್ದಿ ತೀಡಿ...  ಒಬ್ಬ ಕವಯಿತ್ರಿ ಯನ್ನು ಹುಟ್ಟುಹಾಕಿದರು....  ನನ್ನೆಲ್ಲ ಕವನಗಳಿಗೆ ಸ್ಫೂರ್ತಿಯಾಗಿ ನಿಂತು ಎಷ್ಟೋ ಕವನಗಳನ್ನ ಬರೆಯಿಸಿ ಗುರುವಾದರು.  ಮುಖಪುಸ್ತಕದಲ್ಲಿ ಬಯಸದೇ ಬಂದ ಬಂಧ... ಆತ್ಮೀಯ ಬಂಧುವಾಗಿ ಇಂದಿಗೂ ಪ್ರೋತ್ಸಾಹಿಸಿ ಮುನ್ನಡೆಸುತ್ತಿರುವ ಸಹೃದಯಿ ಪಾಂಡೆಲು ಸರ್ ನನ್ನ ಮೊತ್ತ ಮೊದಲ ಆತ್ಮೀಯ ಬಂದು.. ಅವರಬಗ್ಗೆ ಎಷ್ಟು ಬರೆದರೂ ಕಡಿಮೆಯೇ.

ಈ ಮುಖಪುಸ್ತಕ ನನಗೆ ಹಲವಾರು ಆತ್ಮೀಯರನ್ನು ಕೊಟ್ಟಿದೆ,  ಅದರಲ್ಲಿ ಮುಖ್ಯವಾಗಿ  ಪ್ರೀತಿಯ ಮಗಳೇ ಅಂತ ಕರೆಯುವ,  ನನ್ನ ತಂದೆಯಂತೆಯೇ ಪ್ರೀತಿ, ವಾತ್ಸಲ್ಯವನ್ನಿತ್ತು ಅಡಿಗಡಿಗೆ ಹರಸಿ ಕಾಪಿಡುವ  ನನ್ನ ಪಪ್ಪ... ಶ್ರೀಮಾನ್ ಮೋಹನ್ ಪ್ರಸಾದ್ ಪಪ್ಪ. ಅವರ ವಾತ್ಸಲ್ಯಾಮೃತ ಧಾರೆಯಲ್ಲಿ ಮಿಂದು ನಾನು ಪಾವನಳಾಗಿದ್ದೇನೆ.

 ಇನ್ನು ನಾಗೇಶ್ ಸರ್ ಉತ್ತಮ ಕವನಗಳಿಗೆ ಸ್ಪೂರ್ತಿ ಯಾಗಿ ನಿಂತವರು..   ಕನಸು ಮನಸಲ್ಲೂ ಎಣಿಸದ  ಕವನ ಸಂಕಲನದ ರೂವಾರಿ... ಅವರ ಅದಮ್ಯ ಪ್ರೋತ್ಸಾಹ ದಿಂದಲೇ ನನ್ನೊಂದು ಕವನ ಸಂಕಲನ ಬಿಡುಗಡೆ ಆಯ್ತು.  ಅವರ ಪ್ರೋತ್ಸಾಹ ದ ಜೊತೆ ಜೊತೆಗೆ ಅಪಾರ ಸ್ನೇಹಿತವರ್ಗದ  ಪ್ರೋತ್ಸಾಹ ವೂ ನನ್ನ ಕವನ ಸಂಕಲನಕ್ಕೆ ಕಾರಣವಾಯ್ತು.  ಇದೆಲ್ಲಾ  ಅರಿವಾಗದೇ ಬಂದು ಅಪ್ಪಿ ಒಪ್ಪಿದ ಬಂಧಗಳು.... ಇದಷ್ಟನ್ನೇ ಹೇಳಿ ಸುಮ್ಮನಾದರೆ  ನನ್ನಂತ ಮಿತ್ರದ್ರೋಹಿ ಇನ್ನೊಬ್ಬರಿಲ್ಲ ಅಂತಾಗುತ್ತೆ...  ಯಾಕಂದ್ರೆ  ಇನ್ನೊಬ್ಬ ಮುಖ್ಯವಾದ ವ್ಯಕ್ತಿಯ ಬಗ್ಗೆ ನಾ ಹೇಳಲೇಬೇಕು..    ಅವರೇ ಮಾಧವ್.  ಸ್ನೇಹ ಅಂದ್ರೆ .. ಎದುರಾದಾಗ  ನಕ್ಕು ಮಾತನಾಡಿ.. ಕೆಲವೊಂದು ವಿಚಾರ ವಿನಿಮಯ ಮಾಡಿ... ಮತ್ತೆ ಎದುರಾದಾಗಷ್ಟೇ ನೆನಪಾಗುವುದು ಅಂತ ಅಂದ್ಕೊಂಡಿದ್ದೆ...  ಅದನ್ನ ಸುಳ್ಳು ಮಾಡಿದವರು ಮಾಧವ್.  ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ( ಜೇಲರ್) ದೂರದ ಹೊಸಪೇಟೆಯಲ್ಲಿದ್ದರೂ ಸದಾ ಜೊತೆಗೆ ಇದ್ದಂತೆ ಅನಿಸುವ, ನಿರಹಂಕಾರಿ.. ನಗುಮೊಗದ..ಸಜ್ಜನ... ಶುದ್ಧಾತ್ಮ.
ತಂದೆಯಂತೆ  ವಾತ್ಸಲ್ಯ, ಅಣ್ಣನಂತೆ ಕೇರಿಂಗ್,  ಅಮ್ಮನಂತೆ ಪ್ರೀತಿಧಾರೆ ಹರಿಸುವ, ಗುರುವಿನಂತೆ ಬೈದು ಬುದ್ದಿಹೇಳುವ,  ಸ್ನೇಹಿತನಂತೆ ಸಹಕಾರ ನೀಡುವ, ನೋವಿನಲ್ಲಿ ಧೈರ್ಯ ತುಂಬಿ, ಕಷ್ಟದಲ್ಲಿ ಕಾಪಾಡುವ  ಇವರನ್ನ ಏನಂತ ಹೆಸರಿಸಬೇಕು ಅಂತ ನನಗೆ ಅರ್ಥಆಗ್ಲಿಲ್ಲ....  ನನ್ನ ಕವನದ ಮೊದಲ ಅಭಿಮಾನಿ...  ಬೇಸರದಲ್ಲಿ ಬರೆಯದೇ ಇದ್ದಾಗ... ಹಠ ಮಾಡಿಯಾದರೂ,  ಬೈದಾದರೂ... ಮುದ್ದಿಸಿಯಾದರೂ ನನ್ನಿಂದ ಬರೆಸುವ ಇವರ ಅದಮ್ಯ ಪ್ರೀತಿಯ ಪ್ರೋತ್ಸಾಹ ಇಲ್ಲದಿದ್ದರೆ ನಾನು ಇಷ್ಟು ಬರೆಯುತ್ತಿರಲಿಲ್ಲವೇನೋ..ಇದು ಯಾವುದೋ ಜನ್ಮದ ಬಂದ ಅಂತ  ನಾ ಹೇಳಿದ್ರೆ...  ಇಲ್ಲ ಇದು ಈ ಜನ್ಮದ್ದೇ...  ಯಾಕೆ ಒಡಹುಟ್ಟಿದರಷ್ಟೇ ಬಂಧುವೇನು? ಅನ್ನುವ  ಅವರ ಮಾತಿಗೆ ನಾನು ಪ್ರತಿ ಏನೂ ಹೇಳಲಾಗುವುದಿಲ್ಲ...
ಫೇಸ್ಬುಕ್ನಲ್ಲಿ ನಡೆದ ಕೆಲವು ಅಹಿತಕರ ಘಟನೆಗೆ ತಾವೇ ಮುಂದೆ ನಿಂತು ಅದನ್ನ ಸಾಲ್ವ್ ಮಾಡಿ,  ಯಾರ್ಯಾರ ಜೊತೆ ಹೇಗೆ ವರ್ತಿಸಬೇಕು ಅಂತ ಹೇಳಿಕೊಟ್ಟವರೂ ಅವರೇ.. ದೂರದಲ್ಲಿದ್ದೇ ಇಷ್ಟು ಆತ್ಮೀಯತೆ ಹೇಗೆ ಬೆಳೆಯಿತು ಅನ್ನುವುದೇ ಆಶ್ಚರ್ಯ.   ನನ್ನವರನ್ನು ಪ್ರೀತಿಯಿಂದ ಭಾವ ಅಂತ ಕರೀವಾಗ.. ಅವರ ಆ ದ್ವನಿಯಲ್ಲಿಯ ಆಪ್ಯಾಯಮಾನತೆ ತುಂಬಾ ಇಷ್ಟವಾಗುತ್ತೆ...  ನನನ್ನು ಶೈಲೂ...... ಅಂತ ಕರೀವಾಗ ನನ್ನಣ್ಣನೇ ನನ್ನ ಕಣ್ಣಮುಂದೆ ಬಂದಹಾಗಾಗುತ್ತೆ...  ಇನ್ನೊಂದು ಗೊತ್ತಾ...  ನಾವಿಬ್ಬರೂ ಜಗಳ ಆಡಿದ್ದೇ ಜಾಸ್ತಿ... ಪ್ರತಿಯೊಂದಕ್ಕೂ ಜಗಳ,  ವಾರದಲ್ಲಿ ನಾಲ್ಕು ದಿನವಾದರೂ ಜಗಳ ಆಡಲೇಬೇಕು...  ಯಾವುದೇ ವಿಚಾರ ಆದ್ರೂ ಜಗಳದಲ್ಲೇ ಮುಕ್ತಾಯ...  ಇದೂ ಒಂಥರಾ ಚೆನ್ನಾಗಿರುತ್ತೆ😊.  ಸೀರಿಯಸ್ಸಾಗಿ ಜಗಳವಾಡಿ ಮಾತುಬಿಟ್ಟದ್ದೂ ಇದೆ...  ಅಂದಿನ ನನ್ನ ಮನಸ್ಥಿತಿ ಗಮನಿಸಿ... ನನ್ನವರು.. ಏನು ಇವತ್ತು ಮಾಧವ್ ಜೊತೆ ಜಗಳ ಮಾಡ್ಕೊಂಡಿಯಾ ಅಂತ ಕೇಳಿ..  ನಮ್ಮಿಬ್ಬನ್ನೂ ರಾಜಿ ಮಾಡಿಸ್ತಾರೆ.. ಅಷ್ಟರ ಮಟ್ಟಿಗೆ ಆತ್ಮೀಯತೆ ನಮ್ಮಲ್ಲಿ.

ಇಂಥ ಸಹೃದಯಿ ಸ್ನೇಹಿತರನ್ನ ಕೊಟ್ಟು ಈ ಬಂಧ ಚಿರಸ್ಥಾಯಿಯಾಗಿ ನಿಲ್ಲುವಂತೆ ಮಾಡಿದ್ದು ಮುಖಪುಸ್ತಕ....
ಥ್ಯಾಂಕ್ಯೂ ಫೇಸ್ಬುಕ್🙏🙏

         ಶೈಲೂ.....


ನನ್ನ ಜೀವನ ನನ್ನಕಥೆ##

ವಿಫಲವಾದ ನನ್ನ ಪ್ರಯತ್ನ##


        ನಂಗ್ಯಾಕೋ ಮೊದಲಿಂದಲೂ ವೈರಾಗ್ಯದ ಕಡೆಗೇ ಗಮನ,  ನಮ್ಮ ಸುಖ ಸಂಸಾರದ ಬಗ್ಗೆ ಅತೀವ ಅಭಿಮಾನವಿತ್ತಾದರೂ ಮನದಲ್ಲಿ ಇದಕ್ಕಿಂತಲೂ ಮೀರಿ ಬೇರೆ ಏನೋ ಇದೆ.. ಅದನ್ನ ಪಡೆಯುವ ಯತ್ನ ಮಾಡ್ಬೇಕು ಅನ್ನೋ ಅತೀವ ಆಸೆ,  ಹಾಗಾಗಿ ಬಾಲ್ಯದಿಂದಲೇ ಪುರಾಣ ಪುಣ್ಯ ಕಥೆಗಳ ಬಗೆಗೆ ಒಲವು.  ರಾಮಾಯಣ, ಮಹಾಭಾರತ  ಗ್ರಂಥದ ಪಾರಾಯಣ ಪ್ರತಿನಿತ್ಯ ಮಾಡ್ತಾಇದ್ದೆ..  ರಾಮಾಯಣದ ಮಾತಾ ಸೀತಾದೇವಿಯ ಪಾತ್ರ, ಮಂಡೋದರಿಯ ಪಾತ್ರ ಹಾಗೂ, ಮಾಹಾಭಾರತದ ಕುಂತಿಯ ಪಾತ್ರ ನನ್ನನ್ನು ಚಿಂತನೆಗೆ ಒರೆಗೆ ಹಚ್ಚಿದಂಥವು.  ಮಹಾಭಾರತದ  ಕೃಷ್ಣಲೀಲಾದಲ್ಲಿ ಬರುವ ರಾಧೆಯ ಪಾತ್ರವಂತೂ ಇಂದಿಗೂ ನನ್ನ ಕಾಡುವಂಥಹದು.   ಅವಳ ಅತೀವ ಪ್ರೇಮಭಕ್ತಿ, ಕೃಷ್ಣನ ಹೊರತಾಗಿ ಬೇರೆಲ್ಲಾ ವಿಷಯದಲ್ಲಿ ಅವಳ ನಿರ್ಲಿಪ್ತತೆ,.ಸಂಸಾರದಲ್ಲಿದ್ದೂ... ಇರದಂತಹ ಸ್ಥಿತಪ್ರಜ್ಞತೆ, ನನ್ನ ಮನಸ್ಸಿನಲ್ಲಿ ಏನೋ ಒಂತರಾ ವೈರಾಗ್ಯಭಾವ ಮೂಡಿಸಿಬಿಡ್ತು..  ಅದರಲ್ಲೂ ಶ್ರೀ ರಾಮಕೃಷ್ಣಾಶ್ರಮದ ಒಡನಾಟ ಬಂದ ಮೇಲಂತೂ ನಾನು ಸನ್ಯಾಸಿನಿ ಆಗಬೇಕು ಅನ್ನೋ ಆಸೆ ತೀವ್ರವಾಗುತ್ತಾ ಹೋಯ್ತು.. ಇದರ ಜೊತೆಜೊತೆಗೇ ವಿದ್ಯಾಭ್ಯಾಸ,  ಕಾಲೇಜು ಮುಗಿದ ತಕ್ಷಣವೇ ಆಶ್ರಮದ ಒಡನಾಟ, ಪ್ರತಿದಿನ ಅನೇಕ ಸದ್ವಿಚಾರಗಳ ಬಗ್ಗೆ ಪ್ರವಚನ ಕೇಳುತ್ತಾ, ಆಶ್ರಮದ ಹಿರಿಯ ಸನ್ಯಾಸಿಗಳಾದ ಶ್ರೀಮದ್ ಸ್ವಾಮಿ ಹರ್ಷಾನಂದಜಿ  ಮಹರಾಜ್, ಹಾಗೂ ಶ್ರೀಮದ್ ಸ್ವಾಮಿ ಪುರುಷೋತ್ತಮಾನಂದಜಿ ಮಹರಾಜ್  ರವರ ಕಿನ್ನರ ಕಂಠದಲ್ಲಿ  ಶ್ರೀ ಗುರುದೇವರ ಚರಿತ್ರೆಯ ಗಾಯನವನ್ನು ಕೇಳ್ತಾ ಅತೀವ ಸಂತೋಷದಿಂದ ಕಾಲ ಕಳೀತಾ ಇದ್ದೆ, ಧ್ಯಾನ ಜಪಾನುಷ್ಠಾನಕ್ಕಾಗಿ  ಶ್ರೀ ಮಠದಿಂದ ಮಂತ್ರೋಪದೇಶವನ್ನೂ ಪಡೆದು ಸದಾ ಧ್ಯಾನ ಜಪತಪದಲ್ಲಿ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡುತ್ತಿರುವಾಗಲೇ ಸಂಸಾರವನ್ನು ತೊರೆದು ಸನ್ಯಾಸಿನಿ ಆಗಬೇಕು ಅನ್ನೋ ಆಸೆ ತೀವ್ರವಾಗಿ ಸ್ವಾಮೀಜಿಯವರಲ್ಲಿ ಭಿನ್ನವಿಸಿದಾಗ,  ನಕ್ಕು ಸುಮ್ಮನಾದರು,ಯಾಕೆ ನನ್ನ ಆಸೆಯನ್ನ ಹೀಗೆ ಚಿವುಟುತ್ತೀರಿ..ಅಂತ ಬಲವಾಗಿ ಕೇಳ್ದೆ... ಆಸೆ ಇದ್ದರಷ್ಟೇ ಸಾಲದು, ಯೋಗಬೇಕು, ನಿನಗೆ ಆ ಭಾಗ್ಯವಿಲ್ಲ ಮಗು, ಪರಮಾತ್ಮನ ಸೇವೆಗೆ ಸನ್ಯಾಸಕ್ಕಿಂತ ಸಂಸಾರವೇ ಮೇಲು, ಜವಾಬ್ದಾರಿಗಲನ್ನ ಸಮರ್ಥವಾಗಿ ನಿರ್ವಹಿಸು, ಅದೇ ಈಶ ಸೇವೆ ಅಂತ ಹೇಳಿ ಸಂಸಾರದ ಕಡೆಗೆ ಹೊರಳುವಂತೆ ಮಾಡಿದರು...  ಇನ್ನೂ ಹಲವಾರು ಕಾರಣಗಳು ನನ್ನ ಸನ್ಯಾಸಿನಿ ಆಕಾಂಕ್ಷೆ ಗೆ ತಣ್ಣೀರೆರೆಚಿತು😔... ಇದು ನನ್ನ ಜೀವನದ ಅತ್ಯಂತ ಮೊದಲ, ಹಾಗೂ ಎಂದೆಂದಿಗೂ ಸರಿಪಡಿಸಲಾರದ ಸೋಲು. ವೈರಾಗ್ಯ ಜೀವನಡೆದೆಗೆ ಸಾಗಬೇಕೆಂದಿದ್ದ ನನ್ನ ಪ್ರಯತ್ನ ವಿಫಲವಾದದ್ದು ಹೀಗೆ😢
             ಶೈಲೂ.....



ನನ್ನ ಜೀವನ ನನ್ನ ಕಥೆ##

ದಾರಿ ತಪ್ಪಿ ಹೋಗಿದ್ದ ನೆನಪು##

        ನನಗೆ ಸುಮಾರು  5-6  ವರ್ಷಗಳ ವಯಸ್ಸಿದ್ದಾಗ ನಡೆದ ಕಥೆ...
        ನನ್ನ ತಾತನವರ ಮನೆದೇವರು ದೇವರಾಯನ ದುರ್ಗದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ.  ಪ್ರತಿ ವರ್ಷದ ರಥೋತ್ಸವಕ್ಕೆ ( ಫಾಲ್ಗುಣ ಹುಣ್ಣಿಮೆ)  ತಾತನವರು ಅಲ್ಲಿ ಮೂರು ದಿನದ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ತಾ ಇದ್ರು...  ಅವರಿದ್ದದ್ದು ದೊಡ್ಡಬಳ್ಳಾಪುರದ ಹತ್ತಿರದ ಭೂಚನಹಳ್ಳಿ  ಅನ್ನೋ ಒಂದು ಸಣ್ಣ ಹಳ್ಳಿಯಲ್ಲಿ... ಆಗ ಬಸ್ಗಳ ವ್ಯವಸ್ಥೆಯೂ ಸರಿ ಇರಲಿಲ್ಲ..  ದೇವರಾಯನ ದುರ್ಗಕ್ಕೆ ಹೋಗಬೇಕಂದ್ರೆ..  ನಮ್ಮೂರಾದ ಬೆಳವಂಗಳಕ್ಕೆ ಬರಬೇಕು.. ಅಲ್ಲಿಂದ ಊರ್ಡಿಗೆರೆ ಊರಿಗೆ... ಅಲ್ಲಿಂದ ಬೆಟ್ಟಕ್ಕೆ... ಹೀಗೆ ನಾಲ್ಕೈದು ಬಸಗಳನ್ನ ಬದಲಾಯಿಸಿ ಹೋಗಬೇಕಿತ್ತು.  ಅಲ್ಲದೆ ಮೂರು ದಿನದ ಸಾವಿರಾರು ಜನರ ಊಟದ ವ್ಯವಸ್ಥೆಗೆ ದಿನಸಿ..ತರಕಾರಿಗಳ ಲಗ್ಗೇಜ್  ಬೇರೆ...  ಇನ್ಟೈಂ ಗೆ ಬಸ್ಸು ಸಿಗಲಿಲ್ಲಾ ಅಂದ್ರೆ ವಿಪರೀತ ತೊಂದ್ರೆ. ...ಹಾಗಾಗಿ.. ಎತ್ತಿನ ಗಾಡಿಯಲ್ಲಿ  ದಿನಸಿ ಪದಾರ್ಥಗಳನ್ನು ಹಾಕ್ಕೊಂಡು ಒಂದಿಬ್ಬರು ಕಾಲುದಾರಿಯಲ್ಲಿ ಹೋಗ್ತಾಯಿದ್ರು... ಉಳಿದವರೆಲ್ಲಾ ಬಸ್ಸಲ್ಲಿ ಹೋಗ್ತಾಇದ್ವಿ.. 
          ರಥೋತ್ಸವ ದ ಸಮಯಕ್ಕೆ ಎಗ್ಸಾಂಸ್ ಎಲ್ಲಾ ಮುಗಿದಿರುತ್ತಿದ್ದಿದ್ದರಿಂದ ನಮಗೆ ಅಲ್ಲಿಗೆ ಹೋಗೊಕ್ಕೆ ಸಂಭ್ರಮವೋ ಸಂಭ್ರಮ... ಹೀಗಾಗಿ ನಾನೂ ಸಹ ಅಪ್ಪ.ಅಮ್ಮ ಅಣ್ಣ ಅಕ್ಕನ ಜೊತೆ ಪ್ರತಿವರ್ಷವೂ ಹಾಜರ್...  
      ರಥೋತ್ಸವ ಹುಣ್ಣಿಮೆ ದಿನ ಇದ್ರೂ ಸಹ..  ಅಲ್ಲಿ ಒಂದು ವಾರಕ್ಕೆ ಮುಂಚೆನಿಂದಲೇ ಸಂಭ್ರಮ ಇರ್ತಿತ್ತು... ಊಟದ ವ್ಯವಸ್ಥೆಗೆ .. ಜಾಗ... ಶಾಮಿಯಾನ.. ಇವೆಲ್ಲದರ ಬಗ್ಗೆ ಗಮನ ಹರಿಸಲು,  ತಾತ, ಮಾವಂದ್ರು, ನನ್ನ ಅಣ್ಣಂದಿರು  ಮೂರ್ನಾಲ್ಕು ದಿನ ಮುಂಚಿತವಾಗಿ ಹೋಗಿ ವ್ಯವಸ್ಥೆ ಮಾಡ್ತಾಯಿದ್ರು...  ಒಂಥರಾ ಹಬ್ಬದ ವಾತಾವರಣ.   ನನಗಂತೂ ಇದನ್ನೆಲ್ಲಾ ಮಿಸ್ ಮಾಡ್ಕೊಳ್ಳೊಕ್ಕೆ ಇಷ್ಟ ಇಲ್ಲ..  ಮುದ್ದು ಮಾತುಗಳನ್ನಾಡ್ತಾ  ನಾನೂ ಅವರ ಜೊತೆ ಮುಂಚೆನೇ ಹೋಗ್ಬಿಡ್ತಿದ್ದೆ....  ಅಂದೂ  ಹಾಗೇ ಆಗಿತ್ತು... ಮನೆಯವರೆಲ್ಲರ ಜೊತೆ ನಾಲ್ಕುದಿನ ಮುಂಚಿತವಾಗಿಯೇ ಹೋಗಿದ್ದೆ...  ರಥೋತ್ಸವ ದ ದಿನಕ್ಕೆ ಅಡುಗೆಯವರು ಬರ್ತಾಯಿದ್ರು... ಉಳಿದಂತೆ...  ನಾವು ವಾಪಸ್ ಬರೋವರೆವಿಗೂ ಅಮ್ಮ, ಅಜ್ಜಿ, ಅತ್ತೆಯಂದಿರು ಸೇರಿ  50 - 60 ಜನಕ್ಕಾಗುವಷ್ಟು ಅಡುಗೆ ಮಾಡ್ತಾಇರ್ತಿದ್ರು..  
       ಅಲ್ಲಿಗೆ  ತುಮಕೂರಿನಿಂದ ಮತ್ತೊಂದು ಫ್ಯಾಮಿಲಿ ರಥೋತ್ಸವಕ್ಕೆ ಅನ್ನದಾನ ಮಾಡೋಕ್ಕೆ ಬರ್ತಾಯಿದ್ರು ( ಸುಮಾರು.. ಅನ್ನದಾನಗಳು ನಡೆಯುತವೇ..  ಇವರು ...  ನಮಗೆ ತುಂಬಾ ಪರಿಚಿತರಾಗಿದ್ರು)  ನಂದಿನಿ ಆಂಟಿ ( ಅಂಕಲ್ ಹೆಸರು ನೆನಪು ಬರ್ತಾಇಲ್ಲ )  ಅವರು  ನಮ್ಮ  ತಾತನವರ ಕೊಪ್ಪಲಲ್ಲೇ.. ( ಅಲ್ಲಿ ಅಡುಗೆ ಮಾಡಿಸುವುದಕ್ಕೆ ಕೊಪ್ಪಲು ಅಂತಾರೆ)  ರಥೋತ್ಸವ ದ ದಿನದ ವರೆಗೂ ಊಟ ಮಾಡ್ತಾಯಿದ್ರು...  ಇದು ಪ್ರತಿ ವರ್ಷದ  ನಿಯಮ..  ಅವರಿಗೆ ಮಕ್ಕಳಿಲ್ಲದ ಕಾರಣ...  ನನ್ನನ್ನ ತುಂಬಾ ಹಚ್ಚಿಕೊಂಡಿದ್ರು,  ಜಾತ್ರೆಯಲ್ಲೆಲ್ಲಾ ಎತ್ಕೊಂಡು ಓಡಾಡಿಸೋದು.. ಆಟದ ಸಾಮಾನುಗಳನ್ನ ಕೊಡಿಸೋದು,  ತಿಂಡಿಗಳನ್ನು ಕೊಡಿಸೋದು ಮಾಡ್ತಾಯಿದ್ರು.. ಅಷ್ಟು ಪ್ರೀತಿ ನನ್ನ ಮೇಲೆ ಅವರಿಗೆ...
         ಆ ವರ್ಷವೂ ಮೂರ್ನಾಲ್ಕು ದಿನಗಳ ಮುಂಚಿತವಾಗಿ ದೇವರಾಯನ ದುರ್ಗಕ್ಕೆ  ಹೊಡಿದ್ವಿ.. ಎರಡು ಮೂರು ದಿನಗಳಾದ್ರೂ  ನಂದಿನಿ ಆಂಟಿ ಅವರು ಕಾಣಲೇ ಇಲ್ಲ..  ಎಲ್ಲಿ ಹುದುಕಿದ್ರೂ  ಅವರ ಸುಳಿವಿಲ್ಲ... ಪ್ರತಿ ರಥೋತ್ಸವಕ್ಕೆ ನಮ್ಮ  ಕೊಪ್ಪಲಿನ ಪಕ್ಕದಲ್ಲೇ ಅವರೂ ಕೊಪ್ಪಲು ಹಾಕ್ತಾ ಇದ್ದವರು.. ಎಲ್ಲೂ ಕಾಣಲೇ ಇಲ್ಲ...ಎಲ್ಲರಿಗೂ ಅವರ ಯೋಚನೆಯೇ ಆಯ್ತು.. ಫೋನ್ ಗಳ ಕಾಲವೂ ಅಲ್ಲ... ವಿಷಯ ತಿಳಿಯಲು... ಏನಾಯ್ತೋ ಏನೋ ಅವರಿಗೆ ಅನ್ನೋ ದುಃಖ, ಗಾಬರಿ ಎಲ್ಲಾ ಆಗ್ತಾಯಿತ್ತು ನಮಗೆ.
        ರಥೋತ್ಸವ ದಿನವೂ ಬಂತು..  ಅಂದು ನಮ್ಮ ಅಜ್ಜಿ ತಾತ  ಮಾವನವರು ಬೇಗ ದೇವರ ದರ್ಶನ ಮುಗಿಸಿ.. ಊಟ ತಿಂಡಿಯ ವ್ಯವಸ್ಥೆ.. ಮೇಲ್ವಿಚಾರಣೆಗೆ ನಿಲ್ತಾಯಿದ್ರು.. ನಂತರ ನಮ್ಮ ಸರದಿ ದೇವರ ದರ್ಶನಕ್ಕೆ.  ಆ ಜನ ಜಂಗುಳಿಯಲ್ಲಿ.. ದರ್ಶನ.. ಪೂಜೆ  ಒಂದು ಪ್ರಯಾಸವೇ ಸರಿ..  ನಂತರ ರಥ ಎಳೆಯುವ ಕಾರ್ಯಕ್ರಮ,  ಸಾವಿರಾರು ಜನ ರಥಕ್ಕೆ ಕಟ್ಟಿದ್ದ ದೊಡ್ಡದಾದ ಹಗ್ಗವನ್ನು ಹಿಡಿದು ಗರುಡ, ಸ್ವಾಮಿಯ ರಥಕ್ಕೆ ಮೂರು ಪ್ರದಕ್ಷಿಣೆ ಹಾಕುವುದನ್ನೇ ಕಾಯ್ತಾಇರ್ತಾರೆ.. ಗರುಡ ದೇವರ ಪ್ರದಕ್ಷಿಣೆ ನಂತರ  ಜೈ ಕಾರ ಹಾಕ್ತಾ ರಥ  ಎಳೀತಾರೆ.   ನಾವೂ ಆ ರಥದ ಹಗ್ಗಕ್ಕೆ ಕೈ ಹಾಕಿ  ಎಳೆಯೋ ಸಾಹಸ ಮಾಡ್ತಾಇದ್ವಿ...   ಆ  ಜನಸಾಗರದ ಮಧ್ಯೆ  ನುಸುಳಿ... ಹಿಂದೂ ಮುಂದೂ ನೋಡದೆ ನುಗ್ಗುತ್ತಿದ್ದ  ಜನರ ಮಧ್ಯೆ ರಥದ ಹಗ್ಗವನ್ನು ಹಿಡಿಯಲು ಹೆಣಗಾಡುತ್ತಿದ್ದ ನನಗೆ ಆ ಕಡೆ ಬದಿಯಲ್ಲಿ  ಅಂಕಲ್ ಕಾಣಸಿದ್ರು,.   ಆಗೋ ಅಲ್ಲಿ ಅಂಕಲ್.. ಅಂತ  ಅಮ್ಮನ ಕೈ ಬಿಡಿಸಿಕೊಂಡು  ಆ ಬದಿಗೆ ಓಡಿದ್ದೆ.. ಜನರ ಮಧ್ಯೆ ನುಸುಳಿ ಹೋಗೋ ಅಷ್ಟರಲ್ಲಿ ಅವರು ನಾಪತ್ತೆ...   ಆ ಜನಸಾಗರದಲ್ಲಿ ಎಲ್ಲಿ ಲೀನವಾದ್ರೋ ಗೊತ್ತೇ ಆಗಲಿಲ್ಲ...  ಅವರನ್ನ  ಅಂಕಲ್ ಅಂಕಲ್ ಅಂತ ಕೂಗ್ತಾ ಇಡೀ  ರಥ ಬೀದಿಯಲ್ಲೆಲ್ಲಾ  ಓಡಾಡ್ತಾಇದ್ದೀನಿ..  ಅಮ್ಮ ನನ್ನನ್ನು ಹುಡುಕ್ತಾ ಓಡಾಡ್ತಿದ್ದಾರೆ.  ನನಗೆ ಅಂಕಲ್ ಸಿಗಲಿಲ್ಲ...  ಅಮ್ಮನಿಗೆ ನಾನು ಸಿಗಲಿಲ್ಲ...  ಆ ಬಿರು ಬಿಸಿಲಲ್ಲಿ... ಚಪ್ಪಲಿಯಿಲ್ಲದ  ಎಳೆ ಕಾಲಲ್ಲಿ  ಅವರನ್ನ ಹುಡುಕ್ತಾ ಎಲ್ಲಿಗೆ ಹೋಗಿದ್ದೇನೋ ಗೊತ್ತೇ ಆಗಲಿಲ್ಲ...  ಕಾಲು ಬೊಬ್ಬೆ ಬಂದು ನಡೆಯೋಕ್ಕೆ ಆಗದೆ... ವಾಪಸ್ ಹೋಗಲು ದಾರಿ ಗೊತ್ತಾಗದೆ... ಅಳು ಬಂದಿತ್ತು..  ಆದರೂ ಅಳೋಕ್ಕೆ ಇಷ್ಟಇಲ್ಲ... ನುಗ್ಗಿ ಬರ್ತಾಇದ್ದ ಅಳುವನ್ನು ತಡೆದುಕೊಳ್ತಾ...  ಎಲ್ಲಾದರೂ  ಪೊಲೀಸ್ ನವರು ಕಾಣತಾರಾ ಅಂತ ಹುಡುಕುತ್ತಿದ್ದೆ..  ಕಣ್ಣಿಗೆ ಬಿದ್ದ ಪೊಲೀಸ್ ನವರ ಜೊತೆ ನಡೆದ ಸಮಾಚಾರವನ್ನೆಲ್ಲಾ ತಿಳಿಸಿ .. ನಮ್ಮ ಕೊಪ್ಪಲಿಗೆ ಬಂದು ಸೇರೋಷ್ಟರಲ್ಲಿ...  ಅಮ್ಮ ಅಪ್ಪ ಅಣ್ಣಂದಿರು ಮಾವಂದಿರು  ಎಲ್ಲಾ ನನ್ನನ್ನ ಹುಡುಕೊದಕ್ಕೆ ದಿಕ್ಕಾಪಾಲಾಗಿ ಹೋಗಿದ್ರು.. ಪೊಲೀಸ್ ಅನೌನ್ಸ್ಮೆಂಟ್  ಕೇಳಿ ಸಿಕ್ಕಿದ್ದಾಳೆ ಅಂತ ಕೊಪ್ಪಲಿನ ಹತ್ತಿರ ಬಂದು  ಅವರುಗಳು ಮೊದಲು ಮಾಡಿದ ಕೆಲ್ಸ ಅಂದ್ರೆ..  ನನ್ನ ಕೆನ್ನೆಗೆ ಫಟಾರನೇ ಬಿಗಿದದ್ದು... ಅದೂ  ಸಾಮೂಹಿಕವಾಗಿ
       ನಂತರ ಪೋಲಿಸಿನವರೆ ಅವರನ್ನೆಲ್ಲಾ ತಡೆದು..  ನನ್ನ ದಿಟ್ಟತನವನ್ನು ಅವರಿಗೆ  ಹೇಳಿ..  ಚಾಕೊಲೇಟ್ ಕೊಡಿಸಿ,,, ಆಟದ ಸಾಮಾನುಗಳನ್ನ ಕೊಡಿಸಿ,  ನಮ್ಮ ಕೊಪ್ಪಲಲ್ಲೇ  ಊಟ ಮಾಡಿ ಹೋದರು... 
ಈಗಲೂ... ದೇವರಾಯನ ದುರ್ಗದ ರಥೋತ್ಸವ ಬಂದ್ರೆ...  ಈ ಘಟನೆ ನೆನಪಾಗುತ್ತೆ..😊
ಒಂದಂತೂ ಬೇಜಾರು... ಪಾಪ ಆ ನಂದಿನಿ ಆಂಟಿ, ಅಂಕಲ್ ಕೊನೆಗೂ ಸಿಗಲೇ ಇಲ್ಲ...  ಇದ್ದಾರೋ .. ಇಲ್ಲವೋ.. ಅದೂ ಗೊತ್ತಿಲ್ಲ.😔

        ಶೈಲಜಾ ರಮೇಶ್


ನನ್ನ ಜೀವನ ನನ್ನ ಕಥೆ##

ಮಳೆ ತಂದ ಅವಾಂತರ##
***********************

          ಪ್ರತಿ ವರ್ಷ  ನನ್ನ ಮಗನ ರಜೆಯ ಸಮಯದಲ್ಲಿ ಎಲ್ಲಿಯಾದರೂ 4 - 5 ದಿನಗಳು ಟ್ರಿಪ್ ಹೋಗುವ ಅಭ್ಯಾಸ. ಅದೂ ಜಾಸ್ತಿ , ಮಲೆನಾಡು, ಸಮುದ್ರತೀರ ಅಂತ ಕಡೆಗೇ ಜಾಸ್ತಿ ಹೋಗೋದು... ತುಂಬಾ ದೂರ ಡ್ರೈವಿಂಗ್ ಕಷ್ಟ ಆಗುತ್ತೆ ಅಂತ ಕಾರಲ್ಲಿ ಪ್ರಯಾಣ ಮಾಡಲ್ಲ...ಜಾಸ್ತಿ ಬಸ್ಸಲ್ಲೇ ಹೋಗೋದು.  ಇಲ್ಲಿಂದಲೇ ಹೋಗುವ ಕಡೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ನಂತರ ಹೊರಡೋದು.. ಮನೆಗೆ ಬರೋ ವರೆಗೂ ಯಾವುದೇ ತೊಂದರೆ ಆಗಬಾರದು ಅಂತ.
        ಅಂದೂ ಹಾಗೇ.. ಸುಮಾರು 6 - 7 ವರ್ಷಗಳ ಕೆಳಗೆ..  ಮುರ್ಡೇಶ್ವರ,  ಗೋಕರ್ಣ,  ಇಡಗುಂಜಿ ಹೋಗಿ ಬರೋಣ ಅಂತ ಎಲ್ಲಾ ವ್ಯವಸ್ಥೆ ಮಾಡಿ ಹೊರಟ್ವಿ.
         ಮೊದಲಿಗೆ ಮುರ್ಡೇಶ್ವರ ಕ್ಕೆ  ರಾಜಹಂಸ ಬಸ್ಸಲ್ಲಿ ರಾತ್ರಿ 8 ಗಂಟೆಗೆ ಬೆಂಗಳೂರು ಬಿಟ್ಟು ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ತಲುಪಿ, ಬುಕ್ ಮಾಡಿಸಿದ್ದ ರೂಮಲ್ಲಿ ಲಗ್ಗೇಜ್ ಇಟ್ಟು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಟೆವು..  ನಾನು .. ಇಷ್ಟು ದೂರ ಬಂದಿದ್ದೀವಿ.. ಸಮುದ್ರ ಸ್ನಾನ ಮಾಡಬಹುದಿತ್ತು.. ಹೋಟೆಲ್ ರೂಮನಲ್ಲೇ ಸ್ನಾನ ಮಾಡಬೇಕಿತ್ತಾ ಅಂತ ಗೊಣಗಿಕೊಂಡು ಹೊರಟೆ... ಬೇಡದ್ದೆಲ್ಲಾ ಹೇಳ್ತೀಯಾ ಉಪ್ಪು ನೀರಲ್ಲಿ ಸ್ನಾನ ಮಾಡೋಕ್ಕಾಗಲ್ಲ.. ಅಲ್ಲದೆ ಅಲ್ಲಿ ಆಟ ಆಡ್ಕೊಂಡು ಕೂತ್ರೆ ಮುಂದೆ ಹೋಗೋಕ್ಕಾಗಲ್ಲ.. ಸುಮ್ನೆ ನಡಿ ಅಂತ ಬೈಕೊಂಡೇ ನಡೀತಿದ್ರು...   ಕೇಳಿದ್ದನ್ನೆಲ್ಲಾ.. ಇಲ್ಲ ಅನ್ನೋಲ್ಲ.. ದೊಡ್ಡ ದೊಡ್ಡ ಆಸೆಗಳನ್ನೆಲ್ಲಾ ಪೂರೈಸ್ತೀರಾ... ಸಣ್ಣ ಪುಟ್ಟ ಆಸೆಗಳಿಗೆ ತಣ್ಣೀರೆರಿಚ್ತೀರಾ ಅಂತ  ನಾನು ಮುಖ ಊದಿಸಿಕೊಂಡೇ ಜೊತೆಗೆ ಹೆಜ್ಜೆ ಹಾಕಿದ್ದೆ... ನನಗೆ ಸಿಟ್ಟು ಬಂದಿತ್ತು ಅಂತ ಪಾಪ ವರುಣದೇವ ಕೂಡ ಸಿಟ್ಟು ಮಾಡ್ಕೊಂಡು ಮಳೆ ಸುರಿಸಿದ್ದೇ ಸುರಿಸಿದ್ದು.. ಅಂತೂ ಮಳೆಯಲ್ಲಿ ನೆನೆದುಕೊಂಡೇ  ದೇವರ ದರ್ಶನ ಪೂಜೆ ಊಟ ಎಲ್ಲಾ ಮುಗಿಸಿ.. ಅಲ್ಲಿಂದ ಗೋಕರ್ಣ ಕ್ಕೆ ಬಂದು ಅಲ್ಲಿಯೂ ಪೂಜೆ ಮುಗಿಸ್ಕೊಂಡು ಮುಂದಿನ ಪ್ರಯಾಣಕ್ಕೆ ಅಂತ ಬಸ್ಸ್ಟ್ಯಾoಡ್ ಹತ್ರ ಬಂದ್ವಿ..  ನಮ್ಮೆಜಮಾನರಿಗೆ ಯಾರೋ ಫ್ರೆಂಡ್ ಕಾಲ್ ಮಾಡಿದ್ರು ಅಂತ ಮಾತಾಡ್ತಾ   ಒಂದರ್ಧ ಗಂಟೆ ಟೈಮ್ ಪಾಸ್ ಆಯ್ತು.. ಅಷ್ಟರಲ್ಲಿ ಇಡುಗುಂಜಿ ಬಸ್ ಹೊರಟಾಯ್ತು... ಸಂಜೆ 5 -30, 6 ರ ಸಮಯ... ಬಸ್ ತಪ್ಪಿತು ಮತ್ತೆಲ್ಲಿ ಹೋಗೋದು ಅಂತ ವಿಚಾರ ಮಾಡ್ತಾ ಅಲ್ಲಿರುವವರನ್ನ ವಿಚಾರಿಸಿದಾಗ  ಈಗ ಇಲ್ಲಿಂದ ಭಟ್ಕಳ ಕ್ಕೆ ಬಸ್ಸಿದೆ.. ಅಲ್ಲಿಂದ ನೀವು ಉಡುಪಿಗೆ ಹೋಗಬಹುದು.. ಮೂರ್ನಾಲ್ಕು ಗಂಟೆಗಳ ಪ್ರಯಾಣ.. 9- 30 ಗೆಲ್ಲಾ ನೀವು ಉಡುಪಿ ತಲುಪಬಹುದು ಅಂತ ಹೇಳಿದಾಕ್ಷಣ.. ನನಗೋ ಎಲ್ಲಿಲ್ಲದ ಖುಷಿ.. ಈ ಬಾರಿಯ ಟ್ರಿಪ್ ನಲ್ಲಿ ಉಡುಪಿ ಪ್ಲಾನ್ ಇರಲಿಲ್ಲ.. ಆದ್ರೂ ಅಲ್ಲಿ ಉಡುಪಿ ಪ್ರಸ್ತಾಪ ಬಂದಾಗಂತೂ ನನಗೆ ಸ್ವರ್ಗ ಮೂರೇ ಗೇಣು ಅನ್ನಿಸ್ಟ್ದೆ ಇರ್ಲಿಲ್ಲ...  ನಮ್ಮವರಿಗೆ ನೋಡಿದ್ರಾ... ನನ್ನ ಕೃಷ್ಣನಿಗೆ ನನ್ನ ನೋಡ್ದೆ ಇರೊಕ್ಕಾಗಲ್ಲ.. ಪ್ಲಾನ್ ಮಾಡ್ದೆ ಇದ್ರೂ ಅವನೇ ಪ್ಲಾನ್ ಮಾಡಿ ಕರಿಸ್ಕೊತಾ ಇದ್ದಾನೆ ಅಂತ ರೇಗಿಸ್ದೇ..  ಹೂಮ್ಮಾ... ನಿನ್ನ ಲವ್ವರ್ ( ಕೃಷ್ಣನನ್ನ ನಮ್ಮವರು ನನ್ನ ಲವ್ವರ್  ಅಂತಾರೆ) ಕಳ್ಳಾ... ಏನೋ ನೆಪ ಮಾಡಿ ಎಲ್ಲೋ ಹೋಗಬೇಕಿದ್ದ ಬಸ್ ತಪ್ಪಿಸಿ ಅವನತ್ರ ಕರಿಸ್ಕೊತಾ ಇದ್ದಾನೆ... ಎಂಥಾ ಲವ್ ನಿಮ್ಮಿಬ್ಬರದ್ದು ಅಂತ ಛೇಡಿಸಿ  ಭಟ್ಕಳ ಬಸ್ ಹಿಡಿದು ಹೊರಟ್ವಿ...ಅದೆಲ್ಲಿತ್ತೋ ಮಳೆ ಹಿಡಿದದ್ದು ಭಟ್ಕಳ ತಲುಪುವರೆಗೂ ನಿಲ್ಲಲೇ ಇಲ್ಲ... ಅಲ್ಲಿಂದ  ಮಂಗಳೂರಿಗೆ ಹೋಗುವ  ಐರಾವತ ಬಸ್ ಹಿಡಿದು  ಉಡುಪಿ ಕಡೆ ಹೊರಟ್ವಿ..  ಆಕಾಶ ಭೂಮಿ ಒಂದಾಗೋತರಹ ಒಂದೇ ಸಮನೆ ಮಳೆ..  ಅಷ್ಟು ಜೋರು ಮಳೆಯಲ್ಲಿ ಡ್ರೈವಿಂಗ್ ಕೂಡ ಕಷ್ಟದ ಕೆಲಸವೇ , ಪಾಪ ಬಸ್ ಡ್ರೈವರ್ಗೆ  ಡ್ರೈವ್ ಮಾಡೋಕ್ಕಾಗದೆ ಒಂದೆಡೆ ನಿಲ್ಲಿಸೇ ಬಿಟ್ಟ .. ಸುಮಾರು ಒಂದು ಗಂಟೆ ಕಳೆದರೂ ಹೊರಡೋ ಮುನ್ಸೂಚನೆಯೇ ಇಲ್ಲ... ಅಷ್ಟು ಜೋರು ಮಳೆಗೆ ಹೆದ್ದಾರಿಯ ಪಕ್ಕದಲ್ಲಿ ಮರ ಬಿದ್ದು ರಸ್ತೆ ತೆರವು ಅಂತ ಇನ್ನೂ ಒಂದು ಗಂಟೆ ಲೇಟ್..  ಸರ್ ಈ ಮಳೆಯಲ್ಲಿ ಉಡುಪಿ ತಲುಪೋದಕ್ಕೆ  12 ಗಂಟೆ ಆಗೇ ಆಗುತ್ತೆ ಅಂತ ಹೇಳ್ದಾಗ ಭಯವೇ ಆಯ್ತು... ಯಾಕಂದ್ರೆ ಉಳಿದುಕೊಳ್ಳುವ ಯಾವ ವ್ಯವಸ್ಥೆಯನ್ನೂ ಮಾಡ್ಕೊಂಡಿರ್ಲಿಲ್ಲ, ಹೇಗಪ್ಪಾ ಆ  ಅಪರ ರಾತ್ರಿಯಲ್ಲಿ ಹೋಟೆಲ್ ರೂಮ್ ಹುದುಕೊದು.. ಅಂತ ನನ್ನವರ ಯೋಚನೆ ಆದ್ರೆ.. ನನ್ನ ಮಗ ಹಸಿವೆಯಿಂದ ತತ್ತರಿಸ್ತಾಇದ್ದಾನೆ.. ಬ್ಯಾಗಲ್ಲಿದ್ದ ಬಿಸ್ಕೆಟ್ ಕೊಟ್ಟೆ .. ತಿಂದು ನಿದ್ದೆ ಮಾಡ್ದ...  ಅಂತೂ ಇಂತೂ ಉಡುಪಿ ಬಸ್ಸ್ಟಾಪ್ ತಲುಪುವಸ್ತರಲ್ಲಿ 12 ಗಂಟೆ ಆಗೇ ಹೋಯ್ತು..  ಬಸ್ಟಾಪ್ ನಿಂದ ದೇವಸ್ಥಾನಕ್ಕೆ ಸುಮಾರು ಒಂದೂವರೆ ಎರಡು ಕಿಲೋಮೀಟರ್ ಗಳ ದೂರ.. ಜೊತೆಗೆ ಕುಂಭದ್ರೋಣ ಮಳೆ.. ಲಗ್ಗೇಜ್ ಸಮ್ಮೇತ ನಾವೆಲ್ಲಾ ನೆಂದು ಮುದ್ದೆ... ಆ ಮಳೆಯಲ್ಲೇ  ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸಿಗುವ ಎಲ್ಲಾ ಹೋಟೆಲ್ ರೂಮ್ಗಳಲ್ಲೂ ವಿಚಾರಿಸಿ ದ್ರೂ ಎಲ್ಲೂ ಒಂದು ರೂಮ್ ಸಿಗಲಿಲ್ಲ.. ನಡೆದೇ ಎಲ್ಲಾ ಕಡೆ ವಿಚಾರಿಸಿ ನನ್ನವರಿಗೋ  ಸಹನೆ ಮೀರಿತು..  ನಿದ್ದೆಗಣ್ಣಿನಲ್ಲಿದ್ದ ನನ್ನ ಮಗ ... ಏನಮ್ಮ ನಿಮ್ ಕೃಷ್ಣ .. ಎಲ್ಲೋ ಹೋಗೋರನ್ನ ಕರಿಸ್ಕೊಂಡು ಒಂದು ರೂಮ್ ಕೂಡ ಸಿಗದಹಾಗೆ ಮಾಡಿ ಈ ಮಳೆಯಲ್ಲಿ ಸ್ನಾನ ಮಾಡಿಸ್ತಾಇದ್ದಾನೆ ಅಂತ ಗೋಣಗಾಟ. ಯಾವ ಆಟೋ ಕೂಡ ಇಲ್ಲ.. ಒಂದೇ ಸಮನೆ ಮಳೆಗೆ ನೆನೆದು ಬಟ್ಟೆಯೆಲ್ಲಾ ಮೈಗಂಟಿಕೊಂಡು ನಡೆಯಲೂ ಆಗದ ಪರಿಸ್ಥಿತಿ... ಮೊದಲೇ ಶೀತ ಶರೀರದ ಮಗನಿಗೆ ಇಷ್ಟು ಮಳೆಯಲ್ಲಿ ನೆನೆದ್ರೆ ಏನಾಗುತ್ತೋ ಅನ್ನೋ ಭಯ.  ಅಲ್ಲಿ ಯಾರೋ ತೆರೆದಿದ್ದ ಟೀ ಅಂಗಡಿಯಲ್ಲಿ ನಡುಗುವ ಮೈಯನ್ನು ಹುರುಪು ಗೊಳ್ಳಿ ಸಲೋಸುಗ ಒಂದೊಂದು ಕಪ್ ಟೀ ಕುಡಿದು.. ಅವನನ್ನ ವಿಚಾರಿಸಿದಾಗ  ಇಷ್ಟು ಸಮಯದಲ್ಲಿ ಯಾವ ಹೋಟೆಲ್ ರೂಮ್ ಕೂಡ ಸಿಗಲ್ಲ.. ಅಲ್ಲದೆ ಸಿಕ್ಕರೂ ಈ ಮಳೆಯಲ್ಲಿ  ನಿಮ್ಮ ಅಸಹಾಯಕ ತೇನ ದುರ್ಬಳಕೆ ಮಾಡ್ಕೊಳ್ಳೊ ಜನರೇ ಜಾಸ್ತಿ ಇರೋದು.. ಯಾವುದೇ ಆಟೋ ಸಿಕ್ಕರೂ ಹತ್ತಬೇಡಿ.. ಇನ್ನೊಂದು ಹದಿನೈದು ನಿಮಿಷ ನಡೆದ್ರೆ  ದೇವಸ್ಥಾನ ಸಿಗುತ್ತೆ,  ದೇವಸ್ಥಾನದ ಸಭಾಂಗಣ ಇದೆ, ಅಲ್ಲಿ ಹೋಗಿ,  ಇಲ್ವಾ ಯಾವುದಾದ್ರೂ ಮಠಗಳಲ್ಲಿ ಅಂತೂ ಜಾಗ ಸಿಕ್ಕೇ ಸಿಗುತ್ತೆ.. ಇನ್ನು ಯಾವ ಹೊಟೇಲಕಡೆಗೂ ಹೋಗಬೇಡಿ ಅಂತ ಹೇಳಿದ ಆತನ ಸಲಹೆಯ ಮೇರೆಗೆ ದೇವಸ್ಥಾನದಕಡೆಗೆ ಹೊರಟ್ವಿ...  ಧೋ ಎಂದು ಸುರಿವ ಮಳೆ... ಕೈಯ್ಯಲ್ಲಿ ಎರಡು ಮೂರು ಲಗ್ಗೇಜ್,  ಜೊತೆಗೆ ಮಳೆಯಲ್ಲಿ ನೆನೆದು, ಹಸಿವೆಯಿಂದ ಬಳಲಿ ಜೋಲುವ ನಿದ್ದೆಯೊಂದಿಗೆ ಆಯಾಸಗೊಂಡಿದ್ದ  ನನ್ನ ಮಗ... ಹೇಗೋ ನಡೆದು ದೇವಸ್ಥಾನದ ಆವರಣ.. ರಥ ಬೀದಿಗೆ ಬಂದಾಯ್ತು..  ಮೊಣಕಾಲ ವರೆಗೆ ಬರುತ್ತಿದ್ದ ಮಳೆಯ ನೀರಲ್ಲಿ ನೆಡೆಯುತ್ತಾ  ರಥ ಬೀದಿಯನ್ನ 2 ಸುತ್ತು ಹಾಕಿದ್ರೂ ಯಾವ ಮಠವೂ ತೆರೆದಿರಲಿಲ್ಲ... ಕೃಷ್ಣಾ... ಯಾಕಿಷ್ಟು ಕಷ್ಟ ಕೊಡ್ತಾಇದ್ದೀಯಾ   ಗೀತಾಚಾರ್ಯ ನಿನ್ನ ಕ್ಷೇತ್ರದಲ್ಲಿ ಅನಾಥರಂತೆ ಬೀದಿಯಲ್ಲಿ ಅಲೆಯೋ ಪರಿಸ್ಥಿತಿ ಯಾಕೆಕೊಟ್ಟೆ ಅಂತ ಮನಸ್ಸಿನಲ್ಲೇ ಪ್ರಾರ್ಥನೆ ಮಾಡ್ತಿದ್ದೆ..  ಮಳೆಯಿಂದ ರಕ್ಷಣೆ ಪಡೆಯಲು ಎಲ್ಲಿಯೋ ನಿಲ್ಲಲು ತಾವಿಲ್ಲ... ನಿನ್ನ ನಾಡಿನಲ್ಲಿ ವಸತಿಗೆ ಇಷ್ಟು ಕೊರತೆಯೇ? ಅಂತ ಪೇಚಾಡುವಸ್ಥರಲ್ಲಿ  ಎದುರಿಗೆ ATM  ಕಾಣಿಸ್ತು ಮುಂದೆ  ಸ್ವಲ್ಪ ಚಪ್ಪರದಂತೆ , ಕೂಡಲು ಬೆಂಚ್ ಕಾನಿಸ್ತು..  ಮಹಾಪ್ರಸಾದ  ಅಂತ ಅಲ್ಲಿ ಬಂದ್ರೆ... ಐದಾರು  ಹಸುಗಳು ಅಲ್ಲಿ ಮಲಗಿದ್ವು.. ಅಯ್ಯೋ ಇಲ್ಲೂ ನಿಲ್ಲಲು ಜಾಗವಿಲ್ಲದಾಯ್ತಾ..  ಕೃಷ್ಣಾ  ಯಾಕಿಂತ ಪರೀಕ್ಷೆ.?  ನೀನು ಇಲ್ಲಿ ಕಡಗೋಲು ಹಿಡಿದ ಮುದ್ದು ಕಂದ... ನಿನಗೆ ಚಳಿ, ಮಳೆ ಗಾಳಿ ಸೋಕದಂತೆ ಅಂಥ ಚಂದನೆಯ ದೇವಾಲಯ... ನನ್ನ ಕಂದ ಏನು ಮಾಡಿದ್ದಾ... ಈ ರೀತಿ ಬೀದಿ ಅಲೆಯೋ ಪರಿಸ್ಥಿತಿ... ನಿನ್ನ ನಂಬಿದ್ದಕ್ಕೆ ಇಷ್ಟೇನಾ.. ನೀ ಕೊಡುವ ವರ  ಅಂತ ಮನಸ್ಸಿನಲ್ಲೇ ಬೈಕೊಳ್ಳಿಕ್ಕೆ ಶುರು ಮಾಡ್ದೆ... ಪವಾಡವೆಂಬಂತೆ ಅಲ್ಲಿ ಮಲಗಿದ್ದ ಹಸುಗಳೆಲ್ಲಾ ಎದ್ದು ಹೋಗಿ ನಮಗೆ ಜಾಗ ಮಾಡಿಕೊಟ್ಟವು.. ಸದ್ಯ ಸ್ವಲ್ಪ ಕೂತ್ಕೊಲೋಕ್ಕಾದ್ರೂ ಜಾಗ ಸಿಗ್ತಲ್ಲಾ ಅಂತ ಸಮಾಧಾನ ಆಯ್ತು.. ನನ್ನ ಮಗನನ್ನ  ಹೆಗಲಿಗೆ ಒರಗಿಸಿಕೊಂಡು  ನೆನೆದಿದ್ದ ದುಪ್ಪಟ್ಟಾವನ್ನೇ ಹೊದ್ದಿಸಿದೆ.. ಏನಮ್ಮಾ ನಿಮ್ ಕೃಷ್ಣ ಈತರ... ಅಂತ  ಅವನು... ಏನು  ನಿನ್ನ ಲವ್ವರ್ ಕರಿಸ್ಕೊಂಡು ನಡು ರಾತ್ರೀಲಿ.. ನಡು ನೀರಲ್ಲಿ ಕೈಬಿಟ್ಟಾ..  ಹುಂ.. ಇನ್ನೂ ಅವನ ಭಜನೆ.. ಧ್ಯಾನ ಮಾಡು ಅಂತ ವ್ಯಂಗ್ಯದ ಮಾತಾಡಿದ್ರು...  ಇಲ್ಲ  ಸುಮ್ಮನಿರೀ.. ಏನೋ ಒಂದು ವ್ಯವಸ್ಥೆ ಆಗುತ್ತೆ... ಮಾಡ್ತಾನೆ ಅವನು  ಅಂತ ಸಮಾಧಾನ ಮಾಡೋಸ್ಥರಲ್ಲಿ...  ದೇವಸ್ಥಾನದ  ಹಿಂದಿನಿಂದ  ಬಂದ ಯಾರೋ ವಾಚ್ಮನ್  .. ಇಲ್ಲಿ ಬನ್ನಿ... ಈ ಮಳೆಲಿ...  ಈ ರಾತ್ರಿ ಲಿ ಇಲ್ಲ್ಯಾಕೆ ಕೂತಿದ್ದೀರಾ ಅಂತ  ಬಂದು ಕರ್ಕೊಂಡು ಹೋಗಿ.. ದೇವಸ್ಥಾನದ ಹಿಂದಿದ್ದ   ದೊಡ್ಡ ಸಭಾ ಮಂಟಪದಲ್ಲಿ.. ಇಲ್ಲಿ ನೀವು ಮಲಗಬಹುದು.. ಯಾವುದೇ ತೊಂದರೆ ಇಲ್ಲ... ಯಾವ ಭಯವೂ ಇಲ್ಲ.. ಅಂತ ಹೇಳಿದ್ರು... ಸುತ್ತಲೂ ಒಮ್ಮೆ ಕಣ್ಣಾಡಿಸ್ಟ್ದೆ... ಯಾರೋ ಒಂದಿಬ್ಬರು ಗಂಡಸರು ಮಲಗಿದ್ರು..  ಇಷ್ಟು  ದೊಡ್ಡ ಪ್ರಾಂಗಣ..  ದೇವಸ್ಥಾನದ ಹಿಂಬಡಿಯೇ ಆದ್ರಿಂದ ಭಯವಿಲ್ಲ... ಆದ್ರೆ ಇಲ್ಲ್ಯಾರೊ ಇದ್ದಾರೆ..  ಹೇಗಪ್ಪಾ ಅಂತ ಯೋಚಿಸ್ತಿರುವಾಗಲೇ... ಅಲ್ಲೊಂದು ರೂಮ್... ಮೋಸ್ಟ್ಲಿ... ಅಲ್ಲಿನ ಕೆಲಸಗಾರರದ್ದು ಅನ್ನಿಸುತ್ತೆ... ಅವರನ್ನು ಎಬ್ಬಿಸಿ ಕರೆತಂದ ವಾಚ್ಮನ್... ನೋಡಪ್ಪ... ಹೆಂಗಸರು ಮಕ್ಕಳು ಇದ್ದಾರೆ... ಪಾಪ ಈ ಮಳೆಯಲ್ಲಿ ಎಲ್ಲೂ ರೂಮ್ ಸಿಗದೆ ನೆಂದು ಮುದ್ದೆಯಾಗಿ ATM ಹತ್ರ ನಿಂತಿದ್ರು.... ಇಲ್ಲಿ ಹೇಗೆ ಮಲಗ್ತ್ರಾರೆ... ಅಲ್ಲದೆ ಬಟ್ಟೆ ಬದಲಿಸಬೇಕು  ನೋಡು ಎಷ್ಟು ನೆನೆದಿದ್ದಾರೆ, ನಿನ್ನ ರೂಮ್ ಇವರಿಗೆ ಬಿಟ್ಟಕೊಡು... ಅಂತ ಹೇಳಿದ್ರು... ದೇವರಂತ ಆ ಮನುಷ್ಯ.. ಒಪ್ಪಿ  ತನ್ನ ರೂಮ್ ಕೊಟ್ಟು... ಒಂದು ದೊಡ್ಡ ಚಾಪೆ ಕೊಟ್ಟು.. ನಮ್ಮನ್ನು ಅಲ್ಲಿ ಮಲಗಲು ಹೇಳಿ... ತಾನು ಹೊರಗೆ ಪ್ರಾಂಗಣದಲ್ಲಿ ಮಲಗಿದ..  ಆ ಅಪ ರಾತ್ರಿಯಲ್ಲಿ  ಶ್ರೀ ಕೃಷ್ಣ ನೇ ಇವರ ರೂಪದಲ್ಲಿ ಬಂದು ನಮಗೆ ಸಹಾಯ ಮಾಡಿದ್ದ...  ಆಯಾಸದಿಂದ ನನ್ನ ಮಗ, ನನ್ನವರು ಮಲಗಿದರೂ....  ನನಗೆ ಮಾತ್ರ ನಿದ್ದೆ ಹತ್ತಲೇ ಇಲ್ಲ... ಏನೋ ಪವಾಡದಂತೆ ಇಷ್ಟೆಲ್ಲಾ ನಡೆದಿದ್ದನ್ನು  ನೆನೆದು ಕಣ್ಣೀರು ಸುರಿಸಿದ್ದೇ ಆಯ್ತು..  ಏನೋ ಮಾಯೆ ಆವರಿಸಿದಂತೆ.... ಕಣ್ಣು ಜೊಂಪಾದಾಗ ಗೋವರ್ಧನ ಗಿರಿಧಾರಿ ಯಂತೆ ಕಂಡ ನನ್ನ ಕೃಷ್ಣ... ಧೋ ಎಂದು ಸುರಿವ  ಆ ಮಳೆಗೆ ಇಡೀ ಭೂಮಿಯನ್ನೇ ರಕ್ಷಿಸುವ ಸಲುವಾಗಿ  ಗೋವರ್ಧನ ವನ್ನೇತ್ತುವಂತೆ.. ಆ ಗಿರಿಯಡಿಯಲ್ಲಿ.. ತನ್ನ ಕದಂಬ ಬಾಹುಗಳಲ್ಲಿ ನನ್ನ ಕೃಷ್ಣ ನಮ್ಮೆಲ್ಲರನ್ನೂ ತಬ್ಬಿ ಕಾಪಾಡುವಂತ ದೃಶ್ಯ ಕಾಣಿಸ್ತು...  ಅವನಪ್ಪುಗೆಯಲ್ಲಿ ಮಗುವಂತೆ ಮಲಗಿದ್ದೆ...
ಆ  ಕುಂಭದ್ರೋಣ ಮಳೆ ಎಷ್ಟೆಲ್ಲಾ ತೊಂದರೆ ಅವಾಂತರ ಸೃಷ್ಟಿಸಿ ದರೂ .. ಕೊನೆಗೆ ನನ್ನ ಕೃಷ್ಣನ ತೆಕ್ಕೆಯಲ್ಲಿ ಮಲಾಗುವಂಥಾ ಸೌಭಾಗ್ಯ ಕೊಟ್ಟಿತ್ತು.....
ಈಗಲೂ ಜೋರು ಮಳೆ ಬಂದ್ರೆ ಉಡುಪಿಯೇ ನೆನಪಾಗುತ್ತೆ... ಅಂದಿನ ದೃಶ್ಯ ಕಣ್ಮುಂದೆ ಬಂದು ಮನ ತುಂಬಿಬರುತ್ತೆ...  ಮಳೆಯ
ಬಗ್ಗೆ ಪ್ರೀತಿ ಹೆಚ್ಚಾಗುತ್ತೆ.

✍ ಡಾ :  ಶೈಲಜಾ ರಮೇಶ್


ನನ್ನ ಜೀವನ ನನ್ನ ಕಥೆ##

ಮರೆಯಲಾರದ ಪ್ರವಾಸ
*********************

ನಾವು ಪ್ರತಿವರ್ಷ ಎಲ್ಲಾದರೂ  ಟ್ರಿಪ್ ಹೋಗುವ ಅಭ್ಯಾಸ.. ಜಾಸ್ತಿ ಮಲೆನಾಡಿನ  ಪ್ರವಾಸವೆ ಕೈಗೊಳ್ಳುವುದು.     ದೂರದೂರುಗಳಿಗೆ ,  ಅದರಲ್ಲೂ  ಮಲೆನಾಡಿನ ಕಡೆ ಅಂದ್ರೆ ಬಸ್ಸಲ್ಲೇ ಹೋಗೋದು ಆ ಕಿರಿದಾದ ಹಾದಿ , ಆ  ಘಾಟ್ ಸೆಕ್ಷನ್ ನ್ನಲ್ಲಿ ಡ್ರೈವ್  ಮಾಡೋಕ್ಕೆ ನನ್ನ ಮಗನಿಗೆ ತುಂಬಾ ಇಷ್ಟವಾದ್ರೂ  ನನಗೆ ಭಯವಿರುವ ಕಾರಣ ಬಸ್ನ ಸೇಫ್ಟಿ ಜರ್ನಿಯೇ ಉತ್ತಮ ಅಂತ ತೀರ್ಮಾನಿಸಿ ಬಸ್ಸಲ್ಲೇ ಓಡಾಡ್ತೀವಿ.
        ಹಾಗೆಯೇ  ಕಳೆದ ಮೂರು ವರ್ಷಗಳ ಕೆಳಗೆ  ಕಟೀಲು,  ಉಡುಪಿ,  ಮಂಗಳೂರು, ಮಲ್ಪೆ, ಶೃಂಗೇರಿ, ಹೊರನಾಡು  ದೇವಾಲಯಗಳಿಗೆ ಹೋಗಿದ್ವಿ...  ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದು ಉಡುಪಿಯ  ಶ್ರೀಕೃಷ್ಣನನ್ನು ಕಣ್ತುಂಬಿಸಿಕೊಂಡು ಮಲ್ಪೆ ಬೀಚ್ನಲ್ಲಿ  ಆಟವಾಡಿ ಖುಷಿಪಟ್ಟು  ಮತ್ತೆ ಉಡುಪಿಗೆ  ಬಂದು ಮತ್ತೊಮ್ಮೆ  ಕೃಷ್ಣನ ದರ್ಶನ , ಪ್ರಾರ್ಥನೆ( ಸ್ವಲ್ಪ ಪ್ರೈವೇಟ್ ಮಾತುಕತೆ 😉 ) ರಾತ್ರಿ ಊಟ ಅಲ್ಲೇ ಮುಗಿಸಿ  ರಾತ್ರಿ ಅಲ್ಲೇ ಹೋಟೆಲ್ನಲ್ಲಿ ತಂಗಿದ್ದು.. ಬೆಳಿಗ್ಗೆ ಮತ್ತೆ ಸ್ನಾನ ... ಮತ್ತೆ ಕೃಷ್ಣನ ದರ್ಶನ ಪಡೆದು.. ಶೃಂಗೇರಿಕಡೆ ಹೊರಟೆವು.  ಬೆಳಿಗ್ಗೆ 8 ರಿಂದ 8 - 30 ರ ಒಳಗೆ ಹೊರಡುವ ಲೋಕಲ್ ಟ್ರಾವೆಲ್ಸ್ ನಲ್ಲಿ  ಶೃಂಗೇರಿ ಕಡೆ ಹೊರಟೆವು...  ಆಗುಂಬೆಯ ಮಾರ್ಗವಾಗಿ  ಶೃಂಗೇರಿಗೆ ಹೋಗುವ ಆ ಹಾದಿಯ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂಥರಾ ಖುಷಿ,  ನಾನಂತೂ ಕಿಟಿಕಿಯ ಪಕ್ಕ ಕುಳಿತು ಎವೆಯಿಕ್ಕದೆ  ಆ ಸೌಂದರ್ಯ ವನ್ನು ಆಸ್ವಾದಿಸುತ್ತೇನೆ...  ವವತ್ತೂ ಹಾಗೆಯೇ  ಹೋಗುತ್ತಿರುವಾಗ  ಆ ಹಾದಿಯ ರೋಡ್ ರಿಪೇರಿ ಕಾರ್ಯ ನಡೀತಾ ಇತ್ತು..  ಮಳೆ ಜಾಸ್ತಿ ಆಗಿ ಭೂ ಕುಸಿತ ಆಗಿ ..  ರೋಡೆಲ್ಲಾ ಹಾಳಾಗಿದ್ದಿದ್ದರಿಂದ  ಡಾಂಬರೀಕರಣ ನಡೀತಾ ಇತ್ತು.  ಮೊದಲೇ ಕಿರಿದಾದ ದಾರಿ ಅದರಲ್ಲಿ ಬೇರೆ ರಿಪೇರಿ ಕೆಲಸ..  ಒಂದು ವಾಹನ ಹೋಗೋದಕ್ಕೇ ಹರಸಾಹಸ  ಪಡುವಂತಿರುವಾಗ  ಎದುರು ಇನ್ನೊಂದು ವಾಹನ  ಬಂದ್ರೆ  ಏನು ಗತಿ?  ಆದರೂ ಅವರವರ   ಡೆಸ್ಟಿನಿ ತಲುಪಲೇ ಬೇಕಲ್ಲ... ತುಂಬಾ ಸಾಹಸ ಮಾಡಿ ನಾವಿದ್ದ ಬಸ್ನ ಡ್ರೈವರ್ ಹುಷಾರಾಗಿ  ಡ್ರೈವ  ಮಾಡ್ತಿದ್ರು..ಒಂದಿಂಚಿನಷ್ಟು ಗ್ಯಾಪ್ನಲ್ಲಿ ಎದುರಿದ್ದ ಬಸ್ನ ದಾಟಿ ಮುಂದೆ ಹೋಗುತ್ತಿದ್ದ  ಎಡಗಡೆ ಅರ್ಧ ಅಡಿಯಷ್ಟೇ ಜಾಗ ಕೆಳಗಿನ ಪ್ರತಾಪಕ್ಕೂ ರೊಡ್ಗೂ...
.ಬಲಗಡೆ ಸವರಿ ಉಜ್ಜಿಕೊಂಡೇ ಹೋಗುವ ತರಹದಿ ಎದುರಿನ ವಾಹನಗಳು.  ಒಂಥರಾ ಕತ್ತಿಯ ಅಲುಗಿನ  ಮೇಲೆ  ನಡುಡುವಂತ ಸಾಹಸ  ಡ್ರೈವರ್ ದಾದರೆ... ಜೀವವನ್ನು ಕೈಲಿ ಹಿಡಿದು ಪ್ರಯಾಣಿಸಬೇಕಾದ ಪರಿಸ್ಥಿತಿ ನಮ್ಮದು.   ಕೆಳಗಿನ ಕಂದಕ ನೋಡಿ ಹೆಚ್ಚು ಕಮ್ಮಿ ಕಿರುಚೆ ಬಿಟ್ಟಿದ್ದೆ ನಾನು.  ಭಯದಿಂದ  ಜೀವ ಬಾಯಿಗೆ ಬಂದಂತಾಗಿತ್ತು... ನಮ್ಮನೆಯವರು  ನೀನಿಲ್ಲೇ ಕೂತಿದ್ರೆ  ತಲೆತಿರುಗುತ್ತೆ.. ಕಿಟಕಿ ಸೈಡ್ ಬಿಟ್ಟು ಈ ಕಡೆ ಬಾ ಅಂತ ತಾವು ಅಲ್ಲಿ ಕೂತು.. ನನ್ನನ್ನ ಸೀಟಿನ ಇನ್ನೊಂದು ತುದಿಗೆ ಕೂರಿಸಿದ್ರು...   ಮುಂದೆ ಕಾಣುವ  ನಿಸರ್ಗ ಸೊಬಗನ್ನು ಕಾಣತಾ  ... ಅಷ್ಟು ಇಕ್ಕಟ್ಟು ಹಾದಿಯಲ್ಲೂ ಲೀಲಾಜಾಲವಾಗಿ ಡ್ರೈವ್ ಮಾಡುತ್ತಿದ್ದ  ಡ್ರೈವರ್ ನನ್ನೊಮ್ಮೆ ಹೆಮ್ಮೆಯಿಂದ ಎದುರು ಕಾಣುವ ಮಿರರ್ನಲ್ಲಿ ನೋಡಿದೆ.. ಎಡಗಿವಿಗೆ ಫೋನ್ ಆನಿಸಿ ಮೈಮರೆತು ಮಾತಾಡ್ತಾ ಒಂದೇ ಕೈಯ್ಯಲ್ಲಿ ಸ್ಟೇರಿಂಗ್ ತಿರುಗಿಸ್ತಾ  ಬಾಯಲ್ಲಿ ಜಗಿಯುತ್ತಿರುವ ಪಾನ ಬೀಡಾವನ್ನ ಬಾಗಿ ಬಾಗಿ ಕಿಟಕಿಯಲ್ಲಿ ಉಗಿಯುತ್ತಾ ಎದುರು ಬರುವ ವಾಹನಗಳನ್ನೂ ಸಾವರಿಸಿ ಮುಂದೆ ಹೋಗುತ್ತಿರುವ  ಆ ಡ್ರೈವರ್  ನನಗೆ ದೇವದೂತನಂತೆ( ಯಮದೂತನಂತೆಯೂ ) ಕಾಣಿಸಿದ್ದು ಸುಳ್ಳಲ್ಲ..  ಶಾರದಾಂಬೆಯನ್ನು... ತಾಯೇ ನಿನ್ನ ದರ್ಶನ ಭಾಗ್ಯ ಕರುಣಿಸು.. ಶೃಂಗೇರಿಗೇ ಬಂದು ನಿನ್ನನ್ನು ನೋಡುವ ಭಾಗ್ಯ ಕರುಣಿಸು ಅಂತ ಜಪ ಮಾಡ್ಕೊಂಡು ಕಣ್ಣು ಮುಚ್ಚಿದ್ದೆ....  ಮತ್ತೆ ಕಣ್ತೆರೆದು ಮಿರರ್ನಲ್ಲಿ ಕಾಣುತ್ತಿದ್ದ ಆ ದೇವ ಪುರುಷನನ್ನೊಮ್ಮೆ ನೋಡಿದಾಗ  ಕಣ್ತೂಗುತ್ತಿದ್ದ...  ಹೋ... ಇವತ್ತಿಗೆ ನಮ್ಮ ಕಥೆ ಮುಗೀತು... ಶಾರದಾಂಬೆ ದರ್ಶನವೂ ಇಲ್ಲ... ಬೆಂಗಳೂರಿನ ದರ್ಶನವೂ ಇಲ್ಲ.. ಇವತ್ತೇ ಕೊನೇ ದಿನ ಅನಿಸಿದ್ದು.ಸುಳ್ಳಲ್ಲ... ನಂತರ ನಮ್ಮನೆಯವರು ಡ್ರೈವರ್ ಸೀಟಿನ ಎಡಬಾಗದಲ್ಲಿ ಸೀಟಿಗಳಿರುತ್ತಲ್ಲಾ ಅಲ್ಲಿ ಹೋಗಿ ಕುಳಿತು ಅವರನ್ನ ಮಾತಿಗೆಳೆದು... ಬರುತ್ತಿದ್ದ ನಿದ್ರೆಯಿಂದ ಪಾರುಮಾಡಿದ್ರು...  ಅಂತೂ .. ಇಂತೂ... ಆಗುಂಬೆ ತಲುಪಿ ಆ ರಮಣೀಯ ದೃಶ್ಯ ಕಾಣುತ್ತಿದ್ದ ಹಾಗೆಯೇ... ಇಲ್ಲಿವರೆವಿಗೂ ಇದ್ದ ಭಯ ಮರೆತಂತೆಯೇ ಆಯ್ತು...
        ಆಗ ಸತ್ಯದರ್ಶನ ಆಯ್ತು...  ಕೂಡಲೆಳೆಯ ಅಂತರ ನಮಗೂ  ಸಾವಿಗೂ.. ಯಾವಾಗ ನಮ್ಮನ್ನು ಸವರಿಕೊಂಡು ಹೋಗುತ್ತೋ... ಅಲ್ವಾ?
ಇದು ನನ್ನ ಮರೆಯಲಾರದ ಅತ್ಯಂತ ಸುಂದರ, ರೋಚಕ, ಭಯಾನಕ... ಮರೆಯಲಾರದ ಪ್ರವಾಸ ಕಥನ😊😊

ಡಾ: ಶೈಲಜಾ ರಮೇಶ್


ನನ್ನ ಜೀವನ ## ನನ್ನ ಕಥೆ

ಶೀರ್ಷಿಕೆ :  ನಾನಾಡಿದ ಮೊದಲ ಜಗಳ

        ಇದು ಸ್ಪಲ್ಪ ನನಗೆ ಅಪವಾದ..  ಯಾಕಂದ್ರೆ  ನಾನು ಜಾಸ್ತಿ ಜಗಳ ಆಡೋದೆ ಇಲ್ಲ..  ಎಂಥ  ಸಮಯದಲ್ಲೂ  ಅನುಸರಿಸಿಕೊಂಡೇ ನಡೆಯುತ್ತೇನೆ.  ಯಾರೊಬ್ಬರಿಂದ ನನಗೆ ನೋವಾದರೂ.. ಅಥವಾ ಅವರಿಂದ ತೊಂದರೆಯಾದರೂ.. ತೀರಾ ಜಗಳವಾಡುವ ಸನ್ನಿವೇಶ ಬಂದರೂ ... ಆದಷ್ಟೂ ಸೌಮ್ಯವಾಗಿಯೇ ಇರ್ತೀನಿ... ಆಡಿದ್ರೆ ಒಂದೆರಡು ಮಾತು.. ಇಲ್ಲಾ ಮೌನಕ್ಕೆ ಶರಣಾಗಿಬಿಡ್ತೀನಿ.... ಆದ್ರೂ ಯಾಕೋ ನನಗೆ ಜಗಳಗಂಟಿ ಪಟ್ಟ..... ಯಾಕೋ ವೈರಿಗಳು ಜಾಸ್ತಿ...  ಬಹುಶಃ  ನನ್ನ ಮೌನ ಯಾರಿಗೂ ಸಹ್ಯವಾಗಲ್ವೇನೋ... ಕಾಣೆ😔
ಚಿಕ್ಕಂದಿನಲ್ಲಿ...  ಶಾಲಾದಿನಗಳಲ್ಲಿ ಗೆಳತಿಯರೊಡನೆ  ಸಣ್ಣ ಪುಟ್ಟದ್ದಕ್ಕೆ ಜಗಳವಾದಿರಬಹುದು... ಅಷ್ಟೇನು ನೆನಪಿಲ್ಲ....  ಮನೆಯಲ್ಲಂತೂ ಜಗಳವಾಡುವ ಪ್ರಮೇಯವೇ ಬಂದಿರಲಿಲ್ಲ.. ಯಾಕಂದ್ರೆ ನಾನು ಎಲ್ಲರಿಗಿಂತ ಚಿಕ್ಕವಳು..  ಬೇಕೆನಿಸಿದ್ದೆಲ್ಲಾ  ತಕ್ಷಣವೇ ಸಿಗುತ್ತಿದ್ದರಿಂದ ಕೋಪತಾಪವಾಗಲೀ.. ಜಗಳವಾಗಲೀ ಇಲ್ಲವೇ ಇಲ್ಲ..  ಇನ್ನು ವಾರಗೆ ಗೆಳತಿಯರ ಜೊತೆ... ಎಲ್ರೂ ನಾ ಹೇಳಿದ್ದನ್ನೇ ಕೇಳೋರು... ಹಾಗಾಗಿ  ಜಗಳದ ಮಾತೇ ಇಲ್ಲ.

          ನನ್ನ ಬಾಲ್ಯದ 10 -11 ವರ್ಷಗಳು ಕಳೆದದ್ದು ನನ್ನ ತಂದೆಯ ಊರಾದ ದೊಡ್ಡಬಳ್ಳಾಪುರದ ಹತ್ತಿರದ ಬೆಳವಂಗಲದಲ್ಲಿ... ನನ್ನ ತಂದೆ ಕನ್ನಡ ಪ್ರೇಮಿ.. ಅಲ್ಲದೆ ಬಾಲ್ಯದ.ಶಿಕ್ಷಣ ಮಾತೃಭಾಷೆ ಯಲ್ಲೇ ಆಗಬೇಕು ಅನ್ನೋ ಹಠ ಬೇರೆ .. ಹಾಗಾಗಿ 7ನೇ ತರಗತಿಯವರೆಗೂ ಕನ್ನಡ ಮೀಡಿಯಮ್ನಲ್ಲಿ ಊರಲ್ಲೇ ವಿದ್ಯಾಭ್ಯಾಸ( ಆ ಕಾಲದಲ್ಲಿ ಆ ಊರಲ್ಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇರಲಿಲ್ಲ ಅನ್ನಿ).  ನನ್ನಕ್ಕ  ಅಣ್ಣಂದಿರೆಲ್ಲಾ ಬೆಂಗಳೂರಿನಲ್ಲಿ ಇದ್ರು.. ಆಗ ಅಕ್ಕ ಕಾಲೇಜ್ನಲ್ಲಿ.. ಅಣ್ಣಂದಿರಿಬ್ರೂ ವರ್ಕ್ ಮಾಡ್ತಿದ್ರು.  ನಾನು ಅಮ್ಮ ಅಪ್ಪ ಮೂವರು ಊರಲ್ಲಿ.  ನಾನಾಗ 7ನೇ ತರಗತಿಯಲ್ಲಿ ಓದ್ತಾ ಇದ್ದೆ.  ಆಗ ಆಡಿದ ಒಂದು ಸಣ್ಣ ಜಗಳದ ಕಥೆ😊

          ಬೆಳವಂಗಲದಲ್ಲಿ  ಜಾಸ್ತಿ  ಗೌಡರು, ಲಿಂಗಾಯತರು 90%  ಇನ್ನುಳಿದ 10%  ಇನ್ನಿತರ ಜನಾಂಗದವರು.  ಅಲ್ಲಿ ಬ್ರಾಹ್ಮಣರ ಕುಟುಂಬ ಅಂದ್ರೆ ನಮ್ಮನೇ ಮಾತ್ರವೇ ಇದ್ದದ್ದು(  ನಮ್ಮ ಕುಟುಂಬ ಪಾಲಾಗಿ ಇಬ್ಬರು ಚಿಕ್ಕಪ್ಪಂದಿರ ಮನೆಯೂ ಇತ್ತು).   ನಮ್ಮ ತಂದೆ ಜ್ಯೋತಿಷಿಯೂ ಆದ್ದರಿಂದ,  ಅಲ್ಲದೆ ಅತೀ ಉತ್ತಮ ಮಾನವೀಯತೆಯ ಗುಣವೂ ಇದ್ದಿದ್ದರಿಂದ  ಸುತ್ತಮುತ್ತಲೆಲ್ಲಾ  ನನ್ನ ತಂದೆಗೆ ಒಳ್ಳೆ ಹೆಸರು. ನಮ್ಮ ಊರೂ ಸೇರಿದಂತೆ ಸುತ್ತ ಮುತ್ತ ಊರಿನ ಜನರೆಲ್ಲಾ  ತುಂಬಾ ಗೌರವ ಕೊಡ್ತಾಯಿದ್ರು. ಊರಿನ  ಯಾವುದೇ ವಿಷಯಕ್ಕೂ ನನ್ನ ತಂದೆಯಿಂದ ಸಲಹೆಯನ್ನು ಪಡೆಯುವಷ್ಟು... ಯಾವುದಾದ್ರೂ  ಗಲಾಟೆ ಸಂದರ್ಭಗಳಲ್ಲಿ ಮಧ್ಯಸ್ಥಿಕೆ ವಹಿಸುವಷ್ಟು  ಗೌರವ ನನ್ನಪ್ಪನಿಗಿತ್ತು...  ಹಾಗಾಗಿ ಅಲ್ಲಿ ನನಗೂ ಗೌರವವೇ..!!  ಸ್ಕೂಲಲ್ಲಿ.. ನಾನೇ ಲೀಡರ್.. ಎಲ್ರೂ ನನ್ನ ಮಾತು ಕೇಳ್ತಾಇದ್ದದ್ದು... ಹಾಗೆಯೇ ವಿದ್ಯಾಭ್ಯಾಸ ಮೊದಲ್ಗೊಂಡು ಎಲ್ಲಾ  ಚಟುವಟಿಕೆಗಳಲ್ಲೂ ಮುಂದಿದ್ದ ಕಾರಣ ಹಾಗೂ  ಯಾವುದೇ ತಂಟೆ ತಕರಾರಿಗೆ ಹೋಗದೆ.. ನಾನಾಯ್ತು... ನನ್ನ ಓದಾಯ್ತು.. ಅಂತ ಇದ್ದ ಕಾರಣ ನಾನೂ ಅಪ್ಪನಂತೆಯೇ ಸ್ವಲ್ಪ ಹೆಸರುವಾಸಿ..   ಅದನ್ನ ಸಹಿಸದವರೂ ಇದ್ರು,   ಅದರಲ್ಲೂ  ಆ ಊರಿನ ಪ್ರತಿಷ್ಠಿತ ರ ಮಕ್ಕಳು, ಶ್ರೀಮಂತರ ಮಕ್ಕಳು ನನ್ನ ಕ್ಲಾಸ್ ಮೆಟ್  ಗಳೇ ಅಸೂಯೆ ಪಡ್ತಾಯಿದ್ರು.. ಅಲ್ಲದೆ ಇಡೀ ಸ್ಕೂಲ್ಗೆ ನಾನೊಬ್ಬಳೇ ಬ್ರಾಹ್ಮಣ ವಿದ್ಯಾರ್ಥಿ,  ಉಳಿದೆಲ್ಲರೂ ಗೌಡರು .. ಹಾಗೂ  ಲಿಂಗಾಯತರು ( ಏಳನೇ ತರಗತಿಯವರೆಗೂ ಯಾರಲ್ಲೂ ಜಾತಿಯ ಭಾವನೆಯೇ ಮೂಡಿರಲಿಲ್ಲ, )  ಆ ಶಾಲೆಗೆ ಹೊಸದಾಗಿ ಬಂದಿದ್ದ ಲಿಂಗಾಯತರ ಹುಡುಗನಿಂದ ಅಲ್ಲಿ ಒಡಕು ಮೂಡಿತ್ತು.. ಅವನೂ ತುಂಬಾ ಚೆನ್ನಾಗಿ ಓದ್ತಾ ಇದ್ದ.. ಇಬ್ಬರ ಅಂಕಗಳೂ ಸರಿಸಮ ಬರ್ತಾಯಿತ್ತು.. ಯಾರಿಗೆ ಯಾರೂ ಸೋಲದಂತೆ ಅಂಕಗಳನ್ನ ತೆಗೀತಾಇದ್ವಿ.. ಸಂಗೀತ, ಹಾಡು, ಡ್ಯಾನ್ಸ್ ಗಲ್ಲಿ ನಾನು ಮುಂದು ಚರ್ಚಾಸ್ಪರ್ಧೆಯಲ್ಲಿ ಅವನು ಮುಂದು( ಅಲ್ಲಿಯವರೆಗೂ ಚರ್ಚಾಸ್ಪರ್ಧೆಯ ಅರಿವಿರಲಿಲ್ಲ.. ಯಾಕೆಂದರೆ ಶಾಲೆಯಲ್ಲಿ ಅಂತಹ ವಾತಾವರಣವೇ ಇರಲಿಲ್ಲ.. ಆ ಹುಡುಗ ಬಂದ ಮೇಲೆಯೇ ಅವನ ಸಲಹೆಯ ಮೇರೆಗೆ ಚರ್ಚಾಸ್ಪರ್ಧೆ ಆಯೋಜನೆ ಗೊಂಡದ್ದು).  ಅದರಲ್ಲಿ ಅವನಿಗೆ ಬಹುಮಾನ ಬರ್ತಾಯಿತ್ತು..  ಆ ಅಹಂ ಅವನ ನೆಟ್ಟಿಗೇರಿತ್ತು ಅನ್ನಿಸುತ್ತೆ..  ನನಗೆ ಹೀಯಾಳಿಸೋಕ್ಕೆ ಶುರು ಮಾಡಿದ..  ಬರೀ ಪುಸ್ತಕದ ಬದನೆಕಾಯಿ ಅಲ್ಲಮ್ಮಾ... ಮೈಕೈ ಕುಣಿಸಿ ಕುಣಿದರೆ ಅಲ್ಲಮ್ಮಾ...  ಕತ್ತೆ ಹಾಡಿದಾಗೆ  ಹಾದಿದ್ರೆ ಅಲ್ಲಮ್ಮಾ...  ಚರ್ಚಾಸ್ಪರ್ಧೆಯಲ್ಲಿ ತೋರ್ಸು ನಿನ್ನ ಗತ್ತು ಅಂತ  ಹೀಯಾಳಿಸ್ತಿದ್ದ,..  ನನ್ನ ಕರ್ಮಕ್ಕೆ ಸ್ಟೇಜ್ ಮೇಲೆ ನಿಂತು ವಿಷಯಗಳ ಬಗ್ಗೆ ಸುಂದರವಾಗಿ ಮಂಡಿಸೋಕ್ಕೆ ಬರ್ತಾಇರಲಿಲ್ಲ..  ಯಾವತ್ತೂ ಪ್ರಥಮ ಸ್ಥಾನ ಪಡೆದೇ ಇಲ್ಲ ಚರ್ಚಾಸ್ಪರ್ಧೆಯಲ್ಲಿ.. ಅವನೇ ಫಸ್ಟ್..  ನಾನು  ಎರಡನೇ ಸ್ಥಾನ😢 .  ಪ್ರೈಸ್ ತೊಗೊಳ್ಳುವಾಗ ವ್ಯಂಗ್ಯವಾಗಿ ನೋಡ್ತಿದ್ದ,  ಕುಹಕ ನಗು.. ನನಗೆ ಹಿಂಸೆ ಅನ್ನಿಸ್ತಿತ್ತು.. ಅಲ್ಲದೆ .ಬೊಮ್ಮನ್, ,,  ಭ್ರಾಹ್ಮಣಂ ಭೋಜನ ಪ್ರಿಯಂ ಅಂತ ಹಂಗಿಸ್ತಾಇದ್ದ..  ಸುಮಾರು ದಿನ ಸಹಿಸಕೊಂಡೇ..  ಒಂದಿನ  ತಿರುಗಿಬಿದ್ದೆ... ರಾಮಾಯಣ ..ಮಹಾಭಾರತಗಳನ್ನ ಪಾರಾಯಣ ಮಾಡುತ್ತಿದ್ದ ನನಗೆ ಶ್ಲೋಕಗಳು ಲೀಲಾಜಾಲವಾಗಿ ಬರ್ತಾಯಿತ್ತು... ಅಣುಕಿಸುತ್ತಿದ್ದ  ಅವನಿಗೆ  ಭಗವದ್ಗೀತೆಯ ಒಂದು ಶ್ಲೋಕ ಹೇಳಿ ಇದಕ್ಕೆ ಅರ್ಥ ಹೇಳು ನೋಡೋಣ, ಸಂಗೀತದ ಸ್ವರಗಳ ಬಗ್ಗೆ ಹೇಳು ನೋಡೋಣ( ಸಂಗೀತ ಕಲಿತಿಲ್ಲವಾದರೂ ಅಪ್ಪ ಸಂಗೀತಗಾರರೂ ಆದ್ದರಿಂದ ಅವರು ಹಾಡುತ್ತಿದ್ದ ಜಂಟಿವರಸೆ ಬರ್ತಾಯಿತ್ತು ಆಗ), ಸರಿ ಒಂದು ವಿಷಯ ಕೊಡ್ತೀನಿ  ಕವನ ಬರೀ ನೋಡೋಣ( ಆಗ ಸಣ್ಣ ಸಣ್ಣ ಕೆಲವು ಕವನಗಳನ್ನ ಬರೆದಿದ್ದೆ)..  ಇದ್ರಲ್ಲಿ  ನೀನು ಗೆದ್ರೆ...  ನಾನು ಸೋತೆ ಅಂದ್ಕೊತೀನಿ.... ಯಾರೋ ಬರೆದುಕೊಟ್ಟ  ಒಂದೆರಡು ಪೇಜ್ ಬರಹ ನ ಹೇಳ್ಬಿಟ್ರೆ ನೀ ದೊಡ್ಡೋನಾ....?  ಇಷ್ಟೆಲ್ಲಾ ಸಂಸ್ಕಾರ ಕಳಿಸಿಕೊಡ್ತಾರಾದ್ದರಿಂದ , ಯಾರಿಗೂ ಅನಾವಶ್ಯಕ ಉಪಟಳ ಕೊಡೋಲ್ಲವಾದ್ದರಿಂದ  ಬ್ರಾಹ್ಮಣಂ ಬಹುಜನ ಪ್ರಿಯಂ ಅಂತಾಗಿದ್ದು  ಅದನ್ನ ನೆಟ್ಟಗೆ ಹೇಳೋಕೂ ಬರದೆ ಭೋಜನ ಪ್ರಿಯಂ ಅಂತೀಯಾ...?  ನಾವು ಕಸದಿಂದ ರಸ ಮಾಡಿ ತಿಂತೀವಿ... ನೀವು...?  ಅಂತ ಒಂದೇ ಸಮನೆ ಬಡಬಡಿಸಿದ್ದೆ.. ಕ್ಲಾಸನಲ್ಲಿ ನಮ್ಮ ಮಾಸ್ಟರ್ ಬಂದು ನಿಂದದ್ದೂ ಅರಿವಿರದೆ ಮಾತಾಡಿದ್ದೆ...  ಸರ್ ಬಂದು ತಲೆ ನೇವರಿಸಿ ಏನಾಯ್ತು.. ಯಾಕೀ ದುರ್ಗಾವೇಶ ಅಂದಾಗಲೇ.... ಪರಿಸ್ಥಿತಿ ಯ ಅರಿವಾದದ್ದು... ನಡೆದಿದ್ದೆಲ್ಲವನ್ನೂ ಸರ್ಗೆ ಹೇಳಿ ಬಿಕ್ಕಿ ಅತ್ತಿದ್ದೆ.. ಇದೇ ನನ್ನ ಮೊದಲ ಸೀರಿಯಸ್ ಜಗಳ.. 
ನಂತರ 7ನೇ ತರಗತಿ ಮುಗಿಸಿ ನಾನು  ಬೆಂಗಳೂರಿಗೆ ಬಂದೆ...  ಅವನು ಏನಾದನೋ ಗೊತ್ತಿಲ್ಲ.. ಅಂದ್ಹಾಗೆ ಅವನ ಹೆಸರು ಶಿವಕುಮಾರ.. ಹೈಸ್ಕೂಲ್ ಮಾಸ್ಟರ್ ಕನ್ನಡ ಪಂಡಿತರ ಮಗ. ಅವರ ತಂದೆ ದೊಡ್ಡಬಳ್ಳಾಪುರದ ಹೈಸ್ಕೂಲ್ನಲ್ಲಿ ಮಾಸ್ತರರಾಗಿದ್ರು.

ನಿಮ್ಮ ಈ ಥೀಮ್ ನಿಂದ ನನ್ನ ಶಾಲಾದಿನಗಳು ನೆನಪಾದವು..  ಅಂದು ಜಗಳವಾಡಿ ಬೈದಿದ್ದ ಆ ಶಿವಕುಮಾರ ಈಗ ಎಲ್ಲಿದ್ದಾನೋ... ಹೇಗಿದ್ದಾನೋ

           ಶೈಲೂ...

ನನ್ನ ಜೀವನ  ನನ್ನ ಕಥೆ##

ಅಜ್ಜಿ ಮನೆಯಲ್ಲಿ ಕಳೆದ ರಾಜಾದ ಮಜ
*******************************
            ಥ್ಯಾಂಕ್ಯೂ  ಸಾಹಿತ್ಯೋತ್ಸವ.   ತುಂಬಾ ಒಳ್ಳೆಯ ಥೀಮ್.  ನನಗೆ ಇಷ್ಟವಾದದ್ದು,  ತುಂಬಾ.ಮಧುರಾನುಭವ ಕೊಡುವಂತ ವಿಷಯ ಇದು.

          ನಮ್ಮಜ್ಜಿ ಮನೆ ಇಲ್ಲೇ... ಹತ್ತಿರದಲ್ಲೇ ದೊಡ್ಡಬಳ್ಳಾಪುರದ  ಸಮೀಪ .. ಭೂಚನಹಳ್ಳಿ ಅನ್ನುವ ಒಂದು ಸಣ್ಣ ಹಳ್ಳಿ,   ಆಗ ಅಲ್ಲಿ  ಇದ್ದುದೇ ಒಂದು ನೂರು ಅಥವಾ ಅದಕ್ಕಿಂತ ಕಡಿಮೆ ಮನೆಗಳು.. ಸ್ವಲ್ಪವೂ ಆಧುನಿಕಥೆಯಿಲ್ಲದ ಜನ . ಕೃಷಿಯೇ ಜೀವಾಳವಾಗಿದ್ದ  ಆ  ಊರಿಗೆ  ಕೆರೆಯ ಆಶ್ರಯದಿಂದ ಹುಲುಸಾದ ಬೆಳೆ...  ಪಕ್ಕದಲ್ಲೇ ಹುಲುಕಡಿ ಬೆಟ್ಟ ವಿದ್ದಿದ್ದರಿಂದ  ಜಾನುವಾರುಗಳಿಗೆ ಮೇವಿನ ನೀರಿನ ತೊಂದರೆಯಿಲ್ಲ.. ಹಾಗಾಗಿ ಹೈನುಗಾರಿಕೆಯಲ್ಲೂ ಮುಂದು ಆ ಊರು...  (ಇಂದು ಆ ಊರಿನ  ಚಿತ್ರಣವೇ ಬೇರೆ.. ಬಿಡಿ.) ಒಟ್ಟಿನಲ್ಲಿ ಸಂವೃದ್ಧಿ ತಾಂಡವವಾಡುವ ಊರು.

          ಆ ಊರಿನಲ್ಲಿ ನಾಲ್ಕು ಬ್ರಾಹ್ಮಣ ಮನೆಗಳು (  ಒಂದೇ ಮನೆ ನಾಲ್ಕು ಹೋಳಾಗಿದ್ದಿದ್ದು)  ನಮ್ಮ ತಾತನವರ ಅಣ್ಣಂದಿರು ಮೂರು ಹಾಗೂ  ತಾತನ ಮನೆ.  ತಾತನ ಅಣ್ಣಂದಿರು ಎಲ್ಲಾ ಸ್ವರ್ಗವಾಸಿಗಳು.. ಅವರ ಮಕ್ಕಳು ಮಾತ್ರ ಇದ್ದದ್ದು.    ನನ್ನ ತಾತ 1920 ರಲ್ಲಿ ಇಂಗ್ಲೀಷ್ ಮೀಡಿಯಂ ನಲ್ಲಿ BA  ಮಾಡಿದ್ದ  ಆ ಊರಿಗೆ... ಏಕೆ ಸುತ್ತ ಮುತ್ತ  ಹತ್ತಾರು ಊರಿಗೆಲ್ಲಾ ಅತೀವ ವಿದ್ಯಾವಂತರು..ಸುತ್ತ ಮುತ್ತೆಲ್ಲ  ನಮ್ಮ ತಾತನವರನ್ನ ಕಂಡರೆ  ಅತೀವ ಗೌರವ,   ಅವರು ಬೀದಿಲಿ  ನಡೆದು ಬರುವಾಗ  ಎಲ್ಲರೂ ನಮಸ್ಕಾರ ಮಾಡ್ತಾಯಿದ್ರು..  ಅಂಥಾ  ಗೌರವಸ್ಥರು ನನ್ನ ತಾತ..  ನನ್ನಜ್ಜಿ ಸಾದ್ವೀಮಣಿ..  ಆ  ಊರಿನ ಸುತ್ತ ಮುತ್ತ  ಸುಮಾರು  ಹತ್ತಾರು ಹಳ್ಳಿಯ ಸರೌಂಡಿಂಗ್ ನಲ್ಲಿ  ನನ್ನಜಿಯ ಕೈಯ  ಊಟ ಮಾಡದವರು  ಪಾಪಾತ್ಮರು..!  ಅಷ್ಟು ಮಟ್ಟಿಗೆ ಅನ್ನದಾನ ಮಾಡ್ತಾಯಿದ್ರು ನನ್ನಜ್ಜಿ.   ಯಾರೇ ಆ ಊರಿಗೆ  ಹೊಸದಾಗಿ ಬಂದರೂ ನನ್ನ ತಾತನವರನ್ನ ನೋಡಿ,  ಮಾತಾಡಿ,  ನನ್ನಜ್ಜಿ ಮಾಡಿ ಬಡಿಸುತ್ತಿದ್ದ ಊಟ ಮಾಡಿ  ಹೋಗೋದು ಪದ್ದತಿ.  

           ನನ್ನಜ್ಜಿಯ ಹದಿನಾರು ಮಕ್ಕಳಲ್ಲಿ ಉಳಿದದ್ದು  ಬರೀ ಆರು ಜನರು ಮಾತ್ರ.  ಅದರಲ್ಲಿ ನನ್ನಮ್ಮ, ಹಾಗೂ  ಚಿಕ್ಕಮ್ಮ... ಉಳಿದವರು ಮಾವಂದ್ರು ನಾಲ್ಕು ಜನ.   ದೊಡ್ಡ ಕಲ್ಲಿನ0ಕಣದ  ಮನೆ ,  ತಾತನಿಗೆ ಒಂದು ಆಫೀಸ್ ರೂಮ್  ಎಲ್ಲಾ ಮಾವಂದ್ರಿಗೂ  ದೊಡ್ಡ ದೊಡ್ಡದಾದ ರೂಂಗಳು..  ಅತಿಥಿಗಳಿಗೆ  ಒಂದು ರೂಮ್...  ದೊಡ್ಡ ಹಜಾರ.  ಅಡಿಗೆ ಮನೆಯೇ.. ಇಂದಿನ ನಮ್ಮ ಮನೆಯಷ್ಟು ದೊಡ್ಡದು..  ದನಕರುಗಳಿಗೆ  ದೊಡ್ಡ ಕೊಟ್ಟಿಗೆ..  ಮನೆಗೆ ಭಾವಿ(  ಬಚ್ಚಲು ಮನೆಗೆ ಹೊಂದಿಕೊಂಡಂತೆ )  ಒಟ್ಟಿನಲ್ಲಿ  ಎಲ್ಲರೂ ಬಂದು ನೋಡಲು ಹಾತೊರೆಯುವಂತಹ ನನ್ನಜ್ಜಿ ಕೈರುಚಿಯ ಸವಿಯಲು ಕಾತರಿಸುವ ಮನೆ.

         ನನಗೆ  ತುಂಬಾ ಖುಷಿ.. ಅಜ್ಜಿ ಮನೆಗೆ ಹೋಗೋದಕ್ಕೆ..  ಮಾವಂದಿರ ಮಕ್ಕಳು.. ಅಲ್ಲದೆ ಅಲ್ಲಿದ್ದ  ( ದೊಡ್ಡ ತಾತನವರ ಮೊಮ್ಮಕ್ಕಳು ) ದೊಡ್ಡ ಮಾವನವರ ಮನೆಯ  ಮಕ್ಕಳು  ಎಲ್ಲಾ ಸೇರಿದ್ರೆ  ನನ್ನ ಓರಗೆಯವರೆ  ಸುಮಾರು 20 ಜನ ಮಕ್ಕಳು..  ಎಲ್ಲರೊಡನೆ ಕೂಡಿ  ಆಡೋದು..ಹರಟೆ,  ಕಥೆ, ಕವನ, ಭಜನೆ, ಅವರೊಡನೆ ಬೆಟ್ಟ ಹತ್ತಿ ಇಳಿಯೋದು,  ಕೆರೆ ನೀರಲ್ಲಿ ಆಡೋದು,  ತುಂಬಾ ಮಜಾ ಕೊಡ್ತಿತ್ತು..  ಅದಕ್ಕಿಂತ ಹೆಚ್ಚಾಗಿ ಅಲ್ಲಿ ನಮಗೆ ಸಿಗುತ್ತಿದ್ದ ಗೌರವ.. ಹೆಚ್ಚು ಖುಷಿಯನ್ನು ಕೊಡ್ತಿತ್ತು.

ನನ್ನ ತಾತನಿಗೆ ಉಳಿದ ಎಲ್ಲಾ ಮೊಮ್ಮಕ್ಕಳಿಗಿಂತ ನಮ್ಮನ್ನು ಕಂಡ್ರೆ ( ನಾನು, ನನ್ನ ಅಣ್ಣಂದ್ರು ಹಾಗೂ ನನ್ನ ಅಕ್ಕ ) ತುಂಬಾನೇ ಇಷ್ಟ ಅದ್ರಲ್ಲೂ ನನ್ನ ದೊಡ್ಡಣ್ಣ ಹಾಗೂ  ನಾನೂ ಅಂದ್ರೆ ಪಂಚಪ್ರಾಣ...  ಹೊರಗಡೆ ಹೋಗುವಾಗಳೆಲ್ಲಾ... ನಾವು ಜೊತೆಗಿರ್ಬೇಕು... ಎಲ್ಲರ ಮುಂದೆ ನಮ್ಮನ್ನ ಹೋಗಳಬೇಕು ಅಂದ್ರೆ ನಮ್ಮ ತಾತನಿಗೆ ಒಂಥರಾ ಖುಷಿ...  ಪ್ರತಿ ಬೇಸಿಗೆ ರಜೆಯಲ್ಲೂ  ಊರಿನವರಿಗೆಲ್ಲಾ  ರಾಮಾಯಣ  ಮಹಾಭಾರತ ಕಾವ್ಯಗಳ ಪಾರಾಯಣ ಮಾಡಿಸ್ತಾಯಿದ್ರು.. ಸಂಜೆ ವೇಳೆ  ಎತ್ತರದ  ಪೀಠದ ಮೇಲೆ.. ಮಡಿಯುಟ್ಟು,  ಮರದ ಡೆಸ್ಕ್ ಮೇಲೆ ಗ್ರಂಥಗಳನ್ನಿಟ್ಟು  ಬದಿಯಲ್ಲಿ ಪೆಟ್ರೋಮಾಕ್ಸ್ ದೀಪ ಹಚ್ಚಿಟ್ಟು  ಓದಲು ಶುರು ಮಾಡುದ್ರು ಅಂದ್ರೆ ಎಲ್ಲರೂ ಮಂತ್ರಮುಗ್ಧರಂತೆ ಕುಳಿತುಬಿಡ್ತಿದ್ರು... ತಾತನಿಗೆ ವಯಸಾದಂತೆ ಅಣ್ಣ ಪಾರಾಯಣ ಮಾಡ್ತಾಯಿದ್ರು... ನಾನಿನ್ನೂ ಚಿಕ್ಕವಳು ಆಗ .. ಸುಮಾರು 6 - 7 ವರ್ಷ ಇರಬಹುದು..  ಅಣ್ಣ ಅಜ್ಜನ ಮನೆಗೆ ಬಂದಿರಲಿಲ್ಲ( ಆಗ ಅಣ್ಣ  ದೊಡ್ಡವರು.  ನನಗಿಂತ 17 ವರ್ಷ ದೊಡ್ಡವರು ನನ್ನಣ್ಣ )  ತಾತ  ಜಾಸ್ತಿ ಹೊತ್ತು ಕೂರೊಕ್ಕಾಗಲ್ಲ ಅನ್ನೋ ಕಾರಣಕ್ಕೆ  ನನ್ನ ದೊಡ್ಡ ಮಾವನ ಮಗನಿಗೆ ಪಾರಾಯಣ ಮಾಡೋಕ್ಕೆ ಹೇಳಿದ್ರು... ಅವನು... ಸರಿಯಾಗಿ ಅರ್ಥ ವಿವರಿಸಲಾಗದಿದ್ದಾಗ  ನಾನು  ಮುಂದುವರಿಸಿದ್ದೆ...  ಅಂದಿನಿಂದ... ರಾಮಾಯಣ  ನಾನು  ಓದೋದು... ಮಹಾಭಾರತ ನನ್ನ ತಾತ ಓದೋದು...  
ಮದ್ಯೆ ಜನರು ಕೇಳೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕೊಡುತ್ತಿದ್ದ ನನ್ನನ್ನ ಕಂಡ್ರೆ  ತಾತನಿಗೆ, ಅಜ್ಜಿಗೆ ಏನೋ ಹೆಮ್ಮೆ... ವಿಶೇಷ ಕಾಳಜಿ,  ತಾತ  ತನ್ನ  ಮೊಮ್ಮಕ್ಕಳಿಗೆಲ್ಲಾ  ನಮ್ಮ  ಶೈಲೂ ಮುಂದೆ ಯಾರೂ ಇಲ್ಲ.. ನೀವೆಲ್ಲಾ ಯಾವಾಗ ಅವಳೆಂತಾಗೋದು  ಯಾರಿಗೆ ಯಾರೂ ಕಡಿಮೆ ಇರಬಾರ್ದು..  ನೀವೂ ಚನ್ನಾಗಿ ಓದಿ.. ಮುಂದೆ ಬರಬೇಕು  ಅನ್ನುವಾಗ  ನಾನು  ಹೆಮ್ಮೆಯಿಂದ  ಬೀಗುತ್ತಿದ್ದೆ,  ಆದ್ರೆ  ಆಗ ಅರಿವಾಗಲಿಲ್ಲ.. ಮುಂದೊಂದು ದಿನ ಇದು ಹಗೆತನಕ್ಕೆ ಕಾರಣ ಆಗುತ್ತೆ ಅಂತ.😢

ಇಷ್ಟೆಲ್ಲಾ  ಮೊಮ್ಮಕ್ಕಳ ಮುಂದೆ  ವಿಶೇಷ   ಅಡುಗೆ ಮಾಡಬೇಕು ಅಂದ್ರೆ...  ನಾವೆಲ್ಲಾ  ಹೊರಗೆ ಹೋಗ್ಬೇಕು... ಇಲ್ಲಾ ನಾವೆಲ್ಲಾ ಮಲಗಿರ್ಬೇಕು..  ಮಲಗಬೇಕು ಅಂದ್ರೆ ಅದು ರಾತ್ರೀನೇ ಆಗ್ಬೇಕು..   ನಮಗೆಲ್ಲಾ  ಊಟ ಮಾಡಿಸಿ,  ಹಜಾರದಲ್ಲಿ  ಎಲ್ಲರಿಗೂ (30  ಜನ ಮೊಮ್ಮಕ್ಕಳಿಗೆ)  ಹಾಸಿಗೆ ಹಾಸಿ ಕಥೆ ಹೇಳ್ತಾ  ಮಲಗಿಸೋದ್ರಲ್ಲಿ ನಮ್ಮ ತಾತ ಹೈರಾಣಾಗೋರು.      ಅಷ್ಟರಲ್ಲಿ  ನಮ್ಮಜ್ಜಿ, ನಮ್ಮ ದೊಡ್ಡ ಅತ್ತೆ ಇಬ್ರೂ ಸೇರಿ  ಕೋಡುಬಳೆ  ಮಾಡೋಕ್ಕೆ  ಶುರು ಮಾಡಿದ್ರೆ  ಮಧ್ಯರಾತ್ರಿ ಆದ್ರೂ  ಮುಗೀತಾಇರ್ಲಿಲ್ಲ...  ನನಗೋ  ಆ ಘಮ್ಮೆನ್ನುವ  ವಾಸನೆಗೆ ನಿದ್ದೇನೆ ಬರ್ತಿರ್ಲಿಲ್ಲ...  ಎಲ್ಲ ಮಲಗಿದ ಮೇಲೆ ಮೆಲ್ಲನೆ  ಅಡುಗೆ ಮನೆಗೆ ಹೋಗಿ  ರುಚಿ ನೋಡಿ ಬರ್ತಿದ್ದೆ...  ಎಲ್ರೂ ಮಲಗಿದ್ದಾರೆ ನಿನಗೇನು ಮಲಗೊಕ್ಕೆ ಅಂತ ಅತ್ತೆಯಿಂದ ಬೈಸಿಕೊಂಡು... ಅತ್ತೆಗೆ ಕಾಣದಂತೆ  ಅಜ್ಜಿ ಮುಚ್ಚಿ ಕೊಡುತ್ತಿದ್ದ ಕೋಡುಬಳೆ ತಿಂದು ಮಲಗ್ತಾಇದ್ದೆ..
    ಇನ್ನು  ರಜೆ ಮುಗಿದು  ನಾವು ಊರಿಗೆ ಹೊರದೋ ದಿನವಂತ್ತೂ.   ಒಂದು ಬಂಡಿ ತುಂಬಾ  ತಿಂಡಿಗಳ  ಪೊಟ್ಟಣಗಳು..  ಬಸ್ಟಾಪ್ ಗೂ  ಆ ಊರಿಗೂ  3 ಮೈಲಿಗಳ ದೂರ.. ಬಂಡಿಯಲ್ಲೇ ಬಸ್ಟಾಪ್  ವರೆಗೂ ಬರ್ತಾಇದ್ದದ್ದು.... ಜೊತೆಗೆ ಅಜ್ಜಿ ತಾತನವರೂ  ಬಂಡಿಯಲ್ಲಿ ಬಂದು ನಮ್ಮನ್ನ ಬಸ್ ಹತ್ತಿಸಿ  ಅದೇ ಬಂಡಿಯಲ್ಲೇ ಮನೆಗೆ ಹೋಗ್ತಾಯಿದ್ದದ್ದು...  ತಾತ ಜೇಬಿನಿಂದ  10 ರೂ ನ ನೋಟ್(  ಆಗ  ಅದೇ ದೊಡ್ಡ ಅಮೌಂಟ್ 😊) ಕೊಡ್ತಾಯಿದ್ರು...  ತಾತನಿಗೆ ಕಾಣದಂತೆ ಅಜ್ಜಿ ಸೆರಗಿನ ತುದಿಯಲ್ಲಿ  ಕಟ್ಟಿದ್ದ ಸುತ್ತಿ ಸುತ್ತಿ  ಬಣ್ಣ ಕಳೆದುಕೊಂಡ 10 ರೂನ ನೋಟ್ ಕೊಡ್ತಾಯಿದ್ರು.  ಇಬ್ಬರಿಗೂ ಕಣ್ಣಂಚಿನಲ್ಲಿ ನೀರು... ಮತ್ತೆ ಯಾವಾಗ ಬರ್ತೀರಿ ಮಕ್ಳ  ಅಂದು ತಬ್ಬಿಕೊಂಡಾಗ... ಛೇ  ಸ್ಕೂಲ್ಗೆ  ಯಾವಾಗ್ಲೂ ರಜೆ ಇರಬಾರದಿತ್ತಾ  ಅನ್ನಿಸ್ತಿತ್ತು... 
ಒಂದಷ್ಟು ಮಧುರ ನೆನಪನ್ನು ಹೊತ್ತು ಮನೆಗೆ ಬಂದು ಮತ್ತೆ ಯಾವಾಗ ರಜೆ ಬರುತ್ತೋ ಅಂತಾ ಕಾತರ ದಿಂದ ಕಾಯ್ತಾ ಇದ್ವಿ.  ಆ ಸಮಯ  ನೆನೆಸ್ಕೊಂಡ್ರೆ  ಈಗಲೂ   ನನ್ನಜ್ಜಿ.. ಅಜ್ಜನ ಮಡಿಲಲ್ಲೇ ಇದ್ದ ಹಾಗನ್ನಿಸುತ್ತೆ... ನೀನು ಒಬ್ಬ ಕವಯಿತ್ರಿ ಆಗಬೇಕು ಪುಟ್ಟಾ...  ಏನಾದ್ರೂ ಸಾಧನೆ ಮಾಡಬೇಕು.. ಇದು ನಿನ್ನಜ್ಜನ ಆಸೆ ಅಂತ  ಹೇಳ್ತಾಯಿದ್ರು ತಾತ....
     ಒಮ್ಮೊಮ್ಮೆ  ನನ್ನ ಕೈಯಲ್ಲಿ ಏನೂ ಆಗುವುದಿಲ್ಲ  ಅಂತಾದಾಗ ನನ್ನಜ್ಜನ ಸ್ಪೂರ್ತಿ ಯ ಮಾತುಗಳು ನೆನಪಾಗುತ್ತೆ.    ಆಗ  ಏನೋ ಒಂದು ಕವಿತೆ ಉಗಮ ಆಗುತ್ತೆ... 
ಆಗ ತಾತನನ್ನು  ನೆನೆಸ್ಕೊಂಡು  ಹೇಳ್ತೀನಿ...   ಏನೂ  ಸಾಧಿಸಲಾಗಲಿಲ್ಲ ತಾತ..ಇದಿಷ್ಟೇ ಬರೆದದ್ದು.. ಇದೆಲ್ಲಾ ನಿಮಗೇ ಅರ್ಪಿತ ಅಂತ..
ಸ್ವರ್ಗದಲ್ಲಿರುವ ನನ್ನಜ್ಜ ಅಜ್ಜಿಗೆ ಇದು ಕೇಳಿಸಿರುತ್ತೆ ಅಂತ ಸಮಾಧಾನ ಮಾಡ್ಕೋತೀನಿ.
 I  Miss you ತಾತ

           ಶೈಲಜಾ ರಮೇಶ್


## ನನ್ನ ಜೀವನ .. ನನ್ನ ಕಥೆ ##

ಮೊದಲಸಲ ನನ್ನವರನ್ನ ಬಿಟ್ಟು ನಾನು ಊರಿಗೆ ಹೋದ.ಘಳಿಗೆ
**************************************

      ನಮ್ಮ ಮದುವೆ ಆದದ್ದು ಜೇಷ್ಠ ಮಾಸದಲ್ಲಿ,    ಮದುವೆಗೆ ಅಂತ ನನ್ನವರು ಒಂದು ತಿಂಗಳ ರಜೆ ತೊಗೊಂಡಿದ್ರು...  ಮದುವೆ ಶಾಸ್ತ್ರಗಳೆಲ್ಲ ಮುಗಿದ ಮೇಲೆ  ಗಂಡನ ಮನೆಗೆ ಬಂದಮೇಲೆ...  ಹನಿಮೂನ್,  ನೆಂಟರಿಷ್ಟರ ಮನೆ,  ಫಿಲ್ಮ್ , ಪಾರ್ಕ್ ಅಂತ ಸುತ್ತಿದ್ದೇ ಸುತ್ತಿದ್ದು,  ಬೆಳಿಗ್ಗೆ ಅಮ್ಮನಿಗೆ ( ನಮ್ಮತ್ತೆ, ನಮ್ಮೆಜಮಾನರ ತಾಯಿ )  ಮನೆಗೆಲಸದಲ್ಲಿ ಸಹಾಯ ಮಾಡಿ,  ಸ್ನಾನ, ಪೂಜೆ, ತಿಂಡಿ,  ಮಧ್ಯಾಹ್ನದ.ಅಡುಗೆ ಎಲ್ಲ ಮುಗಿಸಿ  ಹೊರಗೆ ನನ್ನವರ ಜೊತೆ ಹೊರಟರೆ ಮತ್ತೆ ರಾತ್ರಿಯೇ ಮನೆಗೆ ಬರುತ್ತಿದ್ದದ್ದು.    ಎಷ್ಟೆಲ್ಲಾ ತಿರುಗಾಟ,  ಕೈಹಿಡಿದು  ಓಡಾಡಿದ್ದೇ ಓಡಾಡಿದ್ದು... ಜೀವನ ಎಂಥಾ ಸುಖಮಯ,  ಒಲಿದ ಹೃದಯ ಜೊತೆಯಲಿರೆ ಸ್ವರ್ಗವೂ ಕೂಡ ನೀರಸ ಅನ್ನಿಸದೆ ಇರಲಿಲ್ಲ.. ಒಂದೊಂದು ದಿನ ಒಂದೊಂದು ಪ್ಲೇಸ್ ...ಜೋಡಿ ಹಕ್ಕಿಗಳಾಗಿ ಮೆರೆದದ್ದೇ ಮೆರೆದದ್ದು..  

ಅಂದೂ ಹೀಗೆ ಸುತ್ತಾಡಿ. ಮನೆಗೆ ಬಂದಾಗ ನನ್ನಪ್ಪ, ನನ್ನಮ್ಮ, ಅಣ್ಣ ಮೂವರೂ ಬಂದಿದ್ರು...  ನೋಡಿದೊಡನೆಯೇ...  ಸಂತೋಷ, ಆಶ್ಚರ್ಯ,  ಒತ್ತಿ ಬರುತ್ತಿದ್ದ ದುಃಖ  ಎಲ್ಲಾ ಸೇರಿ ಓಡೋಡಿ ಅಮ್ಮನ ತೆಕ್ಕೆ ಸೇರಿ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದೆ....
ನನ್ನವರಿಗೋ.ಗಾಬರಿ... ಇದುವರೆಗೂ ನಗುತ್ತಾ ಇದ್ದವಳು  ಹೀಗೇಕೆ... ಏನಾಯ್ತು  ಅಂತ...

ಬೆಂಗಳೂರು ಸಿಟಿಯಲ್ಲಿದ್ದ ನನಗೆ  ಬೆಂಗಳೂರಿನ ಹೊರವಲಯದಲ್ಲಿದ್ದ  ಹಳ್ಳಿಯಂತಿದ್ದ  ನನ್ನವರ ಊರಿಗೆ  ಬೇಗ ಹೊಂದಿಕೊಳ್ಳಲಾಗದಿದ್ದರೂ... ಹೊಂದಿಕೊಂಡಿದ್ದೆ ಅಂದ್ರೆ ಅದಕ್ಕೆ ನನ್ನವರ  ಪ್ರೀತಿಯೇ ಕಾರಣ.  ಮೂಲಭೂತ ಸೌಕರ್ಯಗಳ  ಕೊರತೆ ಎತ್ತಿ ಕಾಣುತ್ತಿದ್ದರೂ ನನ್ನವರ ಪ್ರೀತಿ ಅದನ್ನೆಲ್ಲಾ ಮರೆಸಿತ್ತು, ಆದ್ರೂ ಒಮ್ಮೊಮ್ಮೆ  ಆ ಹಳ್ಳಿ ತುಂಬಾ ಬೋರ್ ಅನ್ನಿಸುತ್ತಿತ್ತು.  ಮದುವೆಗೆ ಬಂದಿರದ ನನ್ನವರ ಸ್ನೇಹಿತರೊಬ್ಬರು ನಮ್ಮನ್ನ ವಿಶ್ ಮಾಡಲು ನಮ್ಮ ಮನೆಗೆ.ಬಂದಾಗ ಎಲ್ಲರೊಡನೆ ಹೊಂದಿಕೊಂಡು, ಆ ಹಳ್ಳಿಯ ಕೆಲಸಗಳನ್ನು ಮಾಡ್ತಾ,  ಹಳ್ಳಿ ಜನರ ಭಾಷೆಯ ಬದಲಾವಣೆಗೆ ಸಹಾಯಮಾಡ್ತಾ, ಮನೆಗೆ ಬಂದವರನ್ನ ಉಪಚರಿಸುತ್ತಿದ್ದ ನನ್ನನ್ನು  ನೋಡಿದ  ನನ್ನವರ ಫ್ರೆಂಡ್ ತಂದೆ  ಏನೇ ಆಗಲಿ ರಮೇಶ್... ಪಾಪ ಆ ಹುಡುಗಿಯನ್ನ ಈ ಹಳ್ಳಿಗೆ ತಂದು ಅವಳಿಗೆ ಮೋಸ ಮಾಡಿಬಿಟ್ಟೆ ನೀನು..  ಇಲ್ಲಿರಬೇಕಾದ ಹುಡುಗಿ ಅಲ್ಲ,  ಇಲ್ಲಿ ಅವಳ ಬೆಳವಣಿಗೆಗೆ ಅವಕಾಶ ಇಲ್ಲ,  ಪಾಪ  ಯಾವ ಕೆಲಸ ಗೊತ್ತಿಲ್ಲದ ಹುಡುಗಿ ಕಷ್ಟಪಟ್ಟು  ಆದ್ರೂ ನಗುನಗುತ್ತಾ ಮಾಡ್ತಾಇದ್ದಾಳೆ.. ಅಯ್ಯೋ ಅನ್ನಿಸ್ತಿದೆ ನನಗೆ.. ಮದುವೆಗೆ ಮುಂಚೆ ಒಮ್ಮೆ ಈ ಊರನ್ನ ತೋರಿಸಬೇಕಾಗಿತ್ತು... ಮೊಸಮಾಡ್ಬಿಟ್ರ ನೀವೆಲ್ಲಾ ಅಂತ ಹೇಳ್ತಿದ್ದಿದ್ದನ್ನ ನಾನೂ ಕೇಳಿಸಿಕೊಂಡಿದ್ದೆ... ಆಗ ಕಣ್ಣಲ್ಲಿ ನೀರು ಜಿನುಗಿದರೂ ನನ್ನವರಿಗಾಗಿ ಎಲ್ಲ ಮರೆತು ಹೊಂದಿಕೊಳ್ಳುವ ಪ್ರಯತ್ನ ಮಾಡ್ತಿದ್ದೆ.

ಅಪ್ಪ ಅಮ್ಮನನ್ನ ನೋಡಿದ ಕೂಡಲೇ ಇವೆಲ್ಲಾ ನೆನಪಾಗಿ  ಮಗು ತರಹ ಅತ್ತುಬಿಟ್ಟಿದ್ದೆ.   ಅಮ್ಮಾ ನಾನು ಒಂದೆರಡು ದಿನ ಮನೆಗೆ ಬರ್ತೀನಿ.. ಪ್ಲೀಸ್ ಕರ್ಕೊಂಡ್ ಹೋಗಿ ಅಂತ ಬಿಕ್ಕಳಿಸುತ್ತಿದ್ದ ನನ್ನ ತಲೆ ನೇವರಿಸ್ತಾ... ಹೂಮ್ಮ್ ಬಂಗಾರಿ ಅದಕ್ಕೇ ಬಂದದ್ದು... ನಾಳಿದ್ದಿರಿಂದ  ಆಷಾಢ ಬರ್ತಾಇದೆ ಅಲ್ವಾ... ಆಷಾದಕ್ಕೆ ತವರು ಮನೆಗೆ ಕರ್ಕೊಂಡು ಹೋಗ್ಬೇಕಲ್ವಾ , ಒಂದೆರಡು ದಿನ ಏನು ಒಂದು ತಿಂಗಳು ಇರ್ಬೇಕು ಗೊತ್ತಾಯ್ತಾ... ಆಮೇಲೆ ಶ್ರಾವಣ ಮಾಸ , ಮಂಗಳಗೌರಿ ಪೂಜೆ, ನಿಮ್ಮಅತ್ತೆ ನಿಮ್ಮನೆಲೆ ಮಾಡ್ಸಿ ಅಂತ ಹೇಳಿದ್ದಾರೆ  ಎಲ್ಲಾ ಮುಗಿಸಿಕೊಂಡು ಬರುವೆಯಂತೆ ,  ನಾಳೆ ಬೆಳಿಗ್ಗೆ ಹೊರಡೋಣ... ರೆಡಿ ಆಗು  ಅಂದಾಕ್ಷಣ ಖುಷಿನೋ ಖುಷಿ.. ಸರಿ ಅಂತ ರೂಮಿಗೆ ಬಂದ್ರೆ... ನನ್ನವರು ಮುಖ ಊದಿಸಿಕೊಂಡು ಕೂತಿದ್ದನ್ನ ನೋಡಿ ಒಂದ್ರೀತಿ  ಬೇಸರ ಆಯ್ತು.  ಮಾತಾಡಿಸಿದ್ರೂ  ಮಾತಿಲ್ಲ ಕಥೆ ಇಲ್ಲ,  ನನ್ನನ್ನ ಬಿಟ್ಟು ಹೋಗ್ತೀಯಾ...  ಯಾವ ಆಷಾಡನೂ ಬೇಡ,  ನಿನ್ನನ್ನ ಕಳ್ಸಲ್ಲ,  ಬೇಕಂದ್ರೆ  ಎರಡು.ದಿನ ಹೋಗಿ ಬಾ.. ಜೊತೆಗೆ ನಾನೂ ಬರ್ತೀನಿ,  ನಿನ್ನೊಬ್ಬಳನ್ನೇ ಕಳ್ಸಲ್ಲ ಅಂತ  ಅವರ ಹಠ.

             ಅಮ್ಮ ಇನ್ನೂ ಒಂದ್ವಾರ ರಜೆ ಇದೆ,  ನಾನೇ ಕರ್ಕೊಂಡು ಹೋಗಿ  ಇದ್ದು ಬರ್ತೀನಿ ಅಂತ ಅವರೂ ಹೊರಟು ನಿಂತಾಗ,  ನಮ್ಮ ಭಾವಂದಿರು, ಓರಗಿತ್ತಿಯರು ಎಲ್ಲಾ ಛೇಡಿಸಿದ್ದೆ ಛೇಡಿಸುದ್ದು..  ಈಗ  ಆ ಸನ್ನಿವೇಶ ನೆನೆದರೂ ನಾಚಿಕೆ ಆಗುತ್ತೆ☺   ನಮ್ಮತ್ತೆ.. ಅತ್ತೆ ಮನೆಯಲ್ಲಿ ಆಷಾಢದಲ್ಲಿ ಸೊಸೆ ಹೇಗೆ ಇರಬಾರದೋ .. ಅಳಿಯ ಕೂಡ ಅತ್ತೆ ಮನೆಗೆ ಹೋಗಬಾರದು ಅಂತ  ತಾಕೀತು ಮಾಡಿದ್ರು..  ಯಾವುದಕ್ಕೂ ಒಪ್ಪದ ನನ್ನವರು  ಸರಿ.. ಹಾಗಾದ್ರೆ,  ಅಮ್ಮ ಶೈಲೂ ನಿಮ್ಮನೆಗೆ ಬರೋದು ಬೇಡ ( ನಮ್ಮ ಅಮ್ಮನನ್ನು ಅವರೂ ಕೂಡ ಅಮ್ಮ ಅಂತಲೇ ಕರೀತಾರೆ )  ರಮೇಷಣ್ಣನ ಮನೆಗೆ ಹೋಗ್ಲಿ ( ನನ್ನ ಚಿಕ್ಕಣ್ಣ )  ಅದು ಅತ್ತೆ ಮನೆ ಆಗಲ್ವಲ್ಲ.. ಭಾವನ ಮನೆ ತಾನೇ ..  ಅಲ್ಲೀಗೆ  ನಾನು ಹೋಗಬಹುದಲ್ವಾ.. ಅಂತ ಸಜೇಶನ್ ಕೊಟ್ರು..  ಕೊನೆಗೂ ಅವರ ಮಾತೇ ಗೆಲ್ತು..  ಆಷಾಡಕ್ಕೆ ಅಂತ ನಾನು ನನ್ನ ಚಿಕ್ಕಣ್ಣನ ಮನೆಗೆ ಹೋದದ್ದಾಯ್ತು.. ಒಂದೆರಡು ದಿನ ಅವರೂ ಅಲ್ಲೇ ಇದ್ರು.  ಯಾಕೋ  ನನಗೆ ಮುಜುಗರ ಆಗೊಕ್ಕೆ ಶುರು ಆಯ್ತು..  ಎಷ್ಟೇ ಆಗಲಿ  ಅಣ್ಣ,  ಅತ್ತಿಗೆ ಮನೆ ಅದು.. ಅವ್ರು ಏನೂ ಅಂದ್ಕೊಲ್ದೆ ಇದ್ರೂ... ಅವರ ಅಕ್ಕಪಕ್ಕದ ಮನೆಯವರು..  ಆಷಾಡಕ್ಕೆ  ಅಳಿಯನನ್ನೂ ಕರ್ಕೊಂಡು ಬಂದಿದ್ದೀರಾ ಅಂತ ಕಿಸಕ್ಕನೆ ನಗುತ್ತಿದ್ದಾಗ  ಮುಜುಗರ ಅನ್ನಿಸೋದು.  ನನ್ನವರಿಗೋ  ಬೇಜಾರಾಯ್ತೇನೋ  ಸರಿ.. ಬರ್ತೀನಿ ಅಂತ ಹೊರಟು ನಿಂತರು.  ಈ ಕಡೆ ಬಂದಾಗ ಬರ್ತೀನಿ,  ಭಾನುವಾರ ಬರ್ತೀನಿ,  ನಿಮ್ಮ ಅಭ್ಯಂತರ ಏನಾದ್ರೂ ಇದೆಯಾ ಅಂತ ನನ್ನಣ್ಣನ ಹತ್ತಿರ ನೆರವಾಗೇ ಕೆಳ್ದಾಗ  ಅಣ್ಣನಿಗೂ ಒಂಥರಾ ಇರುಸು ಮುರುಸು..  ಅಯ್ಯೋ  ಅಕ್ಕಪಕ್ಕದವರ ಮಾತಿಗೆಲ್ಲಾ ಯಾಕಪ್ಪಾ ಇಷ್ಟು ಬೇಸರ,  ಇದು ನಿಮ್ಮ ಭಾವನ ಮನೆ,  ನಿಮ್ಮ ಹೆಂಡತಿ ಇಲ್ಲಿದ್ದಾಳೆ... ನೀವು  ಯಾವಾಗ ಬೇಕಾದ್ರೂ  ಬರಬಹುದು,  ಬೇರೆಯವರ ಮಾತಿಗೆಲ್ಲಾ ಗಮನ ಕೊಡಬೇಡಿ ಅಂತ ಹೇಳಿ ಕಳಿಸಿದ್ರು..  

ಒಂದೆರಡು ದಿನ ನನಗೂ ಏನೂ ಅನ್ನಿಸಲಿಲ್ಲ.. ಅಣ್ಣನ.ಮಕ್ಕಳೊಂದಿಗೆ  ಆಟ ಆಡ್ಕೊಂಡು..  ಅತ್ತಿಗೆ ಮಾಡಿ ಹಾಕಿದ್ದನ್ನ ತಿಂದ್ಕೊಂಡು  ಆರಾಮಾಗಿದ್ದೆ,   ಎರಡು ದಿನ  ಆದ್ಮೇಲೆ.. ಬೇಸರ ಆಗೊಕ್ಕೆ ಶುರು ಆಯ್ತು,  ಈ ಟೈಮ್ ಗೆ ಆಫೀಸ್ಗೆ ಹೊರಡ್ತಾಇರ್ತಾರೆ,  ಟಿಫಿನ್ ಮಾಡಿದ್ರೋ ಇಲ್ವೋ...  ಈಗ ಮನೆಗೆ ಬರೋ ಟೈಮ್..  ಈ ಟ್ರಾಫಿಕ್ ನಲ್ಲಿ  ಹುಷಾರಾಗಿ ಮನೆಗೆ ತಲುಪಿದ್ರಾ.. ಹೇಗೋ.. ಏನೋ..ಅನ್ನೋ ಯೋಚ್ನೆ,  ಯಾರೇ ಶೈಲೂ ಅಂದ್ರೂ ಅವರೇ ಕರೆದಂಗಾಗ್ತಿತ್ತು, ಸ್ವಲ್ಪ ಎತ್ತರದ ನಿಲುವಿನವರನ್ನ ನೋಡಿದ್ರೆ... ಅವರೇ ಏನೋ ಅನ್ನಿಸೋದು.. ನಿಂತಲ್ಲಿ ನಿಲ್ಲೋಕ್ಕಾಗದೆ,  ಕುಳಿತಲ್ಲಿ ಕೂರೋಕ್ಕಾಗದೆ  ಚಡಪಡಿಸುವಂತಾಯ್ತು... ಹಾಳಾದ ವಿರಹ ಅನ್ನೋದು ಇದೇ ಏನೋ ಅನ್ನಿಸದೆ ಇರಲಿಲ್ಲ.. ಮೊಬೈಲ್ಗಳ ಕಾಲವಲ್ಲ..  ಲ್ಯಾಂಡ್ಲೈನ್ ಫೋನ್ ಕೂಡ ಗತಿ ಇಲ್ಲ... ಕಾಗದ ಬರೆಯೋಣ ಅಂದ್ರೆ.. ಎಲ್ಲಿಗೆ ಬರೆಯೋದು.?  ಮನೆ ಅಡ್ರೆಸ್ಗೆ ಬರೆದ್ರೆ ಇವರಿಲ್ಲದೆ ಇದ್ದಾಗ ಪೋಸ್ಟ್ ಹೋಗಿ .. ಯಾರಾದ್ರೂ ಓದಿದ್ರೆ ಅನ್ನೋ ಭಯ,  ಆಫೀಸ್ ಅಡ್ರೆಸ್ ಗೆ ಬರೆಯೋಕ್ಕಾಗಲ್ಲ... ಛೇ...

ಆ ಹಳ್ಳಿಯ ಅಸೌಕರ್ಯ ನೆನೆಸಿಕೊಂಡರೆ  ಅಲ್ಲಿರೋಕ್ಕಾಗಲ್ಲ  ಒಂದ್ ತಿಂಗಳಾದ್ರೂ ಸಿಟಿಯಲ್ಲಿ ಇರಬಹುದು ಅಂತ ಖುಷಿಯಿಂದ ಬಂದ ನನಗೆ... ಈ ವಾತಾವರಣ ಕೂಡ ಬೇಸರ ಅನ್ನಿಸೋಕ್ಕೆ ಶುರುವಾಯ್ತು....  ಈ ಸಾರಿ  ಅವ್ರು ಬಂದಾಗ ನಾನೂ ಬರ್ತೀನಿ ಅಂತ ಹೇಳ್ಬಿಡ್ಬೇಕು.. ಅವರ ಜೊತೆ.ಹೊರಟು ನಿಲ್ಬೇಕು ಅಂತ ಯೋಚ್ನೆ ಮಾಡ್ತಾ ಕೂತವಳಿಗೆ... ಹಿಂದಿನಿಂದ ಬಂದ ಕೈಯ್ಯೊ0ದು ಕೆನ್ನೆ ತಟ್ಟಿದಾಗಲೇ ಎಚ್ಚರಾಗಿದ್ದು... ಕಣ್ಣರಲಿತ್ತು.... ನಗು ಮೂಡಿತು...  ಯಾಕಂದ್ರೆ ನನ್ನವರು ನಗುತ್ತಾ ಮೈಸೂರ್ಪಾಕು  ಹಿಡಿದು ನಿಂತಿದ್ರು...ಆ ಕ್ಷಣಕ್ಕೆ  ಸ್ವರ್ಗ ಸಿಕ್ಕಂತಾಗಿತ್ತು... 

ಮನೆಗೆ ಫೋನ್ (ಲ್ಯಾನ್ಡ್ಲೈನ್) ಗೆ ಅಪ್ಲೈ  ಮಾಡಿದ್ದೀನಿ... ಇನ್ನೊಂದು ವಾರದಲ್ಲಿ ಫೋನ್ ಬರುತ್ತೆ... ಆಮೇಲೆ ಆಟಲೀಸ್ಟ್ ಮಾತದ್ರೂ ಆಡಬಹುದು ಅಂತ ಖುಷಿಯಿಂದ ಹೇಳಿದ್ರು,  ಮನೆ ಒಳಗೆ ನೀರು ಬರೋತರ ಕೊಳಾಯಿ ಹಾಕ್ಸೋಕ್ಕೆ ಹೇಳಿದ್ದೀನಿ, ಒಂದೆರಡು ದಿನದಲ್ಲಿ  ಶೌಚಾಲಯ ಆಗಿರುತ್ತೆ,  ನೀನು ಬರೋ ಅಷ್ಟರಲ್ಲಿ ಎಲ್ಲಾ ಸೌಲಭ್ಯ ಆಗಿರುತ್ತೆ.. ಅಂತ ಅವರು ಖುಷಿಯಿಂದ ಹೇಳಿದ್ದು ಕೇಳಿ... ನನ್ನವರಿಗೆ  ನನ್ನ ಮೇಲಿದ್ದ.ಪ್ರೀತಿ ಕಾಳಜಿ ನೋಡಿ ಸಂತೋಷದಿಂದ ಕಣ್ತುಂಬಿ ಬಂತು.    

ರೇಡಿಯೋದಲ್ಲಿ ತೇಲಿ ಬರುತ್ತಿದ್ದ " ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚಂದ ನಿನಗಾವುದೆಂದು... ನಮ್ಮೂರು ಚಂದವೋ ನಿಮ್ಮೂರು.ಚಂದವೋ ಎಂದೆನ್ನ ಕೇಳಲೆಕೆ... ಎನ್ನರಸ ಸುಮ್ಮನಿರೀ ಎಂದಳಾಕೆ"  ಹಾಡು ಎಷ್ಟು ಅರ್ಥಪೂರ್ಣ ಅನ್ನಿಸ್ತು...  ಹೌದು ರೀ...  ನೀವು ಜೊತೇಲಿ ಇರೋ ಕಾಡು ಆದ್ರೂ ಅದು ನನಗೆ ಚಂದವೇ.. ಅಲ್ಲಿ ಸಂತೋಷದಿಂದ ಇರ್ತೀನಿ..
ನೀವಿಲ್ಲದ ಸ್ವರ್ಗ ಕೂಡ ನನಗೆ ಬೇಡ ಅಂತ ಅವತ್ತಿನಿಂದ... ಇವತ್ತಿನವರೆಗೂ  ಹೇಳ್ತಾನೆ ಇದ್ದೀನಿ.  
        
ಒಂದು ತಿಂಗಳ ಆಷಾಢದಲ್ಲಿ 15 ದಿನಕ್ಕಿಂತ ಹೆಚ್ಚು  ನನ್ನವರು ನನ್ನ ಜೊತೆಯಲ್ಲೇ ಇದ್ರು...  ವಾರಕ್ಕೆರಡು ಬಾರಿ ಬಂದು ಒಂದೆರಡು.ದಿನ ಇರೋದು...  ಏ... ಇಲ್ಲೇ ಬಂದಿದ್ದೆ... ಸ್ವಲ್ಪ ಕೆಲ್ಸ ಇತ್ತು... ಇಷ್ಟು ಹತ್ತಿರ ಬಂದಿದ್ದೀನಲ್ಲ ಅಂತ ಹಾಗೇ ಬಂದೆ ಅಂತ ಹೇಳ್ತಾಇದ್ದಿದ್ದು...  4..5  ದಿನ ರಜೆ ಸಿಕ್ಕಿದೆ..  ಹೊರಗೆ ಹೋಗಿ ಬರೋಣ ಅಂತ ಊರೂರು ಸುತ್ತಿದ್ದು...  ಎಲ್ಲಾ ನೆನೆಸ್ಕೊಂಡ್ರೆ... ಸಂತೋಷ,  ನಾಚಿಕೆ  ಎಲ್ಲಾ ಆಗುತ್ತೆ...  ಪುಣ್ಯಾತ್ಮರು..  ಬಾಣಂತನಕ್ಕೂ ಕೂಡ.ಮೂರೇ ತಿಂಗಳು ಅಮ್ಮನ ಮನೇಲಿ ಬಿಟ್ಟಿದ್ದಿದ್ದು...  ಆ ಮೂರು ತಿಂಗಳಲ್ಲೂ 2 ತಿಂಗಳಷ್ಟು  ದಿನಗಳು ಅವರೂ ನನ್ನ ಜೊತೇಲಿ ಇದ್ದದ್ದು...  

23 ವರ್ಷದ.ದಾಂಪತ್ಯ ದಲ್ಲಿ  ಜಾಸ್ತಿ  ಅಂದ್ರೆ... ಎಲ್ಲಾ ಸೇರಿ.. ಬಾಣಂತನ,  ಆಷಾಢ,  ಇನ್ನಿತರ ಕಾರ್ಯಕ್ರಮ ಕ್ಕೆ ಹೋದಾಗ ಇದ್ದದ್ದು ಎಲ್ಲಾ ಸೇರಿಸಿದ್ರೂ 6 - 7 ತಿಂಗಳಷ್ಟೂ ಕೂಡ ನಾವು ದೂರ ಇಲ್ಲ.  ಆ ನನ್ನ ಕೃಷ್ಣ  ನಮ್ಮಿಬ್ಬರಲ್ಲಿ ಅತೀವ ಪ್ರೀತಿಯನ್ನು ತುಂಬಿಟ್ಟಿದ್ದಾನೆ...  ಪಾಪ ಅವನು ರಾಧೆಯ ವಿರಹದಲ್ಲಿ ಬೆಂದರೂ  ನಮ್ಮನ್ನು ವಿರಹದಲ್ಲಿ ಬೇಯಲು ಬಿಟ್ಟಿಲ್ಲ...
ಇಷ್ಟು ಸಂತೋಷ ಜೀವನವನ್ನು ಕೊಟ್ಟ  ಆ ನನ್ನ ದೈವ ಕೃಷ್ಣನಿಗೆ  ನಾನೆಷ್ಟು ಅಭಾರಿಯಾದರೂ ಕಡಿಮೆಯೇ..☺🙏

        ಡಾ : B.N.ಶೈಲಜಾ ರಮೇಶ್


ನನ್ನ ಜೀವನ ನನ್ನ ಕಥೆ##

ಆಧಾರ್ ಕಾರ್ಡ್ ನಲ್ಲಿ ನನ್ನ ಚಿತ್ರ ನೋಡಿದಾಗ :

       ಭಾರತ ಸರ್ಕಾರದ  ಬಹೂಪಯೋಗಿ  ಆಧಾರ್ ಕಾರ್ಡ್ ಅಭಿಯಾನ ಕಾರ್ಯಕ್ರಮ ಶುರುವಾದಾಗಿನಿಂದ   ನಮ್ಮವರು ಕಾರ್ಡ್ ಮಾಡಿಸಬೇಕು... ಮಾಡಿಸಲೇ ಬೇಕಂತೆ.. ಯಾವಾಗ ಹೋಗೋಣ ಅಂತ ಕೇಳ್ತಾನೆ ಇದ್ರು...  ಆದ್ರೆ ಅವ್ರಿಗೆ  ಬಿಡುವಾದಾಗ  ನನ್ನ ಮಗನಿಗೆ ಸಮಯವಿಲ್ಲ,  ಮಗನಿಗೆ ಫ್ರೀ ಇದ್ದಾಗ ಅವ್ರಿಗೆ ರಜ ಇಲ್ಲ.
ಎಲ್ಲೇ ಹೋದ್ರು ನಾವೆಲ್ಲಾ ಒಟ್ಟಿಗೇ ಹೋಗಿ ಅಭ್ಯಾಸ..  ಹೇಗೋ ಸಮಯ ಹೊಂದಿಸ್ಕೊಂಡು ಮೂರೂ ಜನ ಹತ್ತಿರದ ಯಾವುದೋ ಸ್ಕೂಲ್ನಲ್ಲಿ  ಆಧಾರ್ ಕಾರ್ಡ್ ಮಾಡೋವ್ರು ಬಂದಿದ್ದಾರೆ ಅಂತ ಪಕ್ಕದ ಮನೆಯವರು ಹೇಳಿದ್ರು ಅಂತ ಹೊರಟ್ವಿ... ನಮ್ಮನೆಯವರು ಹಾಫ್ಡೇ ರಜ ಹಾಕಿ ಬೇಗ ಮುಗಿಸ್ಕೊಂಡು ನಾ ಡ್ಯೂಟಿಗೆ ಹೋಗ್ತೀನಿ.. ಸ್ಮರಣ್... ಒಂದೆರಡು ಪೀರಿಯೆಡ್ ಮಿಸ್ಸಾದ್ರೂ ಪರ್ವಾಗಿಲ್ಲ ನೀನೂ ಕಾಲೇಜ್ಗೆ ಹೋಗ್ಬಿಡು ಅಂತ ಹೇಳಿದ್ದೇ ಹೇಳಿದ್ದು..  2 km. ದೂರದ ಸ್ಕೂಲ್(ಅದೇ ಹತ್ತಿರದ್ದು) ಹತ್ರ ಹೋದ್ರೆ ಗುಂಪು ಗುಂಪು ಜನ..!    ನಮ್ಮನೆಯವರು ಯಾವ್ದೋ ಸಾವಾಗಿರ್ಬೇಕು ಅದಕ್ಕೇ ಇಷ್ಟೊಂದ್ ಜನ ಅಂತ...  ನಾನು ಇಲ್ಲ ರೀ... ಆಧಾರ್ ಮಾಡಿಸೋಕ್ಕೆ ಬಂದಿರೋವರು ಇವ್ರೆಲ್ಲಾ ಅಂತ... ಕೊನೆಗೂ ಇದು ಆಧಾರ್ ಮಹತ್ವ ಅಂತ ಅರಿತುಕೊಂಡು ಮುಂದೆ ಹೋದ್ರೆ....  ಹನುಮಂತನ ಬಾಲ...  ಸಾವಿರಾರು ಜನ... ಹೋ  ಇದು ಇವತ್ತಿಗಾಗದ ಕೆಲಸ .. ನಾಳೆ ಬೆಳಿಗ್ಗೆನೇ ಬಂದ್ಬಿಡೋಣ ನಡಿ ಅಂತ ಮನೆಗೆ ಹೊರಡಿಸ್ಕೊಂಡು ಬಂದ್ರು...
ನೆಕ್ಸ್ಟ್  ಡೇ  ಬೇಗ ಎಲ್ಲ ಕೆಲ್ಸ ಮುಗ್ಸಿ.. ಒಂಚೂರು ತಿಂಡಿ ತಿನ್ನೋ ಶಾಸ್ತ್ರ ಮಾಡಿ 7 .30 ಗೆಲ್ಲಾ  ಸ್ಕೂಲ್ ಹತ್ರ ಬಂದ್ರೆ  ... ಆಗಲೂ ಕೂಡ ನೂರಾರು ಮಂದಿ ಕ್ಯೂನಲ್ಲಿ ನಿಂತಿದ್ದಾರೆ...  ನಾವೇನೂ ಬೇಗ ಬಂದಿದ್ದೀವಿ .. ಬೇಗ ಕೆಲ್ಸ ಮುಗಿಯುತ್ತೆ  ಅಂದ್ಕೊಂಡ್ರೆ... ಆ ಕ್ಯೂ ನೋಡಿದ್ರೆ  ಇವತ್ತೂ ಆಗುತ್ತೋ ಇಲ್ವೋ ಅನ್ನೋ ಅನುಮಾನ ಬಂತು..   ಆದ್ರೂ ಕ್ಯೂ ನಲ್ಲಿ 6..7.. ಗಂಟೆಗಳ ಕಾಲ ನಿಂತು ನಮ್ಮ ಸರದಿ ಇನ್ನೇನು  10 - 15 ನಿಮಿಷಗಳಲ್ಲಿ ಬರುತ್ತೆ ಅನ್ನೋ ಸಮಯಕ್ಕೆ... ಸರ್ವರ್ ಡೌನ್.. ..!!   ಕಂಪ್ಯೂಟರ್ ವರ್ಕ್ ಆಗ್ತಾಯಿಲ್ಲ..  ಅಂತ ಮತ್ತೆರಡು ಗಂಟೆ ಲೇಟ್...  ಮೊದಲೇ ಸಹನೇಯಿಲ್ಲದ  ನನ್ನ ಮಗ... ನನಗೆ ಇನ್ನೂ ನಿಲ್ಲೋಕ್ಕಾಗಲ್ಲ... ಈ ಬಿಸಿಲು... ಅಕ್ಕಪಕ್ಕದವರ ಬೆವರು ವಾಸನೆ... ಜೊತೆಗೆ ಹಸಿವು...  ನಾ ಹೊರಟೆ...  ಇಂಮೊಮ್ಮೆ ಬರೋಣ ನೀವೂ ಬನ್ನಿ ಅಂತ ಹೊರಟೆ ಬಿಟ್ಟ..  ಹೊಟ್ಟೆ ಬೇರೆ ಚುರುಕ್ ಅಂತಿದ್ದರಿಂದ ವಿಧಿಯಿಲ್ಲದೆ ನಾವೂ ವಾಪಸ್ ಬಂದಾಯ್ತು...  
ಎಲ್ರೂ ಮಾಡಿಸಿದ್ದಾದ ಮೇಲೆ ಇಷ್ಟು ರಶ್ ಇರಲ್ಲ... ಇನ್ನೂ ಸ್ವಲ್ಪ ದಿನ ಬಿಟ್ಟಾದಮೇಲೆ ಮಾಡ್ಸೋಣ ಅಂತ ಸುಮ್ಮನಾದ್ವಿ.
ಒಂದು ತಿಂಗಳು ಕಳೀತು.. ಹತ್ತಿರದ ಸ್ಕೂಲ್ನಲ್ಲಿ  ಮಾಡ್ತಿದ್ದ ಆಧಾರ್ ಇನ್ನೆಲ್ಲೋ ಶಿಫ್ಟ್ ಆಯ್ತು.. ಮಾಡಿಸೋಕ್ಕಾಗ್ಲಿಲ್ವೆ ಅಂತ ಬೇಜಾರ್ ಆಯ್ತು..  ಕೊನೆಗೆ  ಸಾಫ್ಟ್ವೇರ್ ಕಂಪನಿ.. ಮತ್ತಿತರ ಕಂಪನಿಯವರು ಅವರ ಆಫೀಸ್ನಲ್ಲೇಆಧಾರ್ ಕಾರ್ಡ್  ಮಾಡ್ಸೋ ವಿಷಯ ಗೊತ್ತಾದ ಮೇಲೆ ಒಂಥರಾ ಸಮಾಧಾನ..  ನಮ್ಮವರ ಕಂಪೆನಿನಲ್ಲೂ ಈ ಆಧಾರ್ ಅಭಿಯಾನ ಸ್ಟಾರ್ಟ್ ಆಯ್ತು.    ನಮ್ಮವರ ಫ್ರೆಂಡ್ಸ್ಗಳೆಲ್ಲಾ ( H.R - HOD - ಮ್ಯಾನೇಜರ್ಸ್,  ಅಕೌಂಟ್ ಡಿಪಾರ್ಟ್ಮೆಂಟ್ನ ಹೆಡ್ಸ್, ಇವರ ಫ್ಯಾಮಿಲಿಗಳೆಗೆಲ್ಲಾ) ಒಂದು ದಿನ ಅಂತ ನಿಗದಿ ಮಾಡಿ ಅಂದು ಎಲ್ರೂ ಮೀಟ್ ಮಾಡಿ , ಆಧಾರ್ ಕಾರ್ಡ್ ಫೋಟೋ ತೆಗೆಸ್ಕೊಳ್ಳೋದು ಅಂತ ಫಿಕ್ಸ್ ಆಯ್ತು.
       ನನಗೋ....  ಅವರ ಫ್ರೆಂಡ್ಸ್ ಹೆಂಡತಿಯರೆಲ್ಲಾ... ತುಂಬಾ  ಮಾಡ್... ತುಂಬಾ.ಚನ್ನಾಗಿರ್ತಾರೆ..  ನಾನೋ... ಈ ಅವತಾರ ಇದ್ದೀನಿ... ಹೇಗಪ್ಪಾ ಅವರಿಗೆಲ್ಲ ಮುಖ ತೋರಿಸೋದು...  ನಮ್ಮನೆಯವರಿಗೆ  ಅವಮಾನ ಆಗುತ್ತೇನೋ...  ಆಮೇಲೆ,  ನನ್ನನ್ನ.ನಿಕೃಷ್ಟ ವಾಗಿ ಕಾಣತಾರೆನೋ ಅನ್ನೋ ಭಯ.ಸ್ಟಾರ್ಟ್ ಆಯ್ತು.  ಮಗನಹತ್ರ ಹೇಳ್ದೆಕೂಡ...   ಅಮ್ಮಾ ನೀವು ಕಪ್ಪಾಗಿದ್ರೂ ಲಕ್ಷಣವಾಗಿದ್ದೀರಮ್ಮಾ..  ಯಾಕೆ ಇಲ್ಲದ್ದೆಲ್ಲಾ ಯೋಚ್ನೆ ಮಾಡ್ತೀರಿ.. ಗ್ರಾಂಡ್ ಡ್ರೆಸ್ ಮಾಡ್ಕೊಳ್ಳಿ.. ಎಲ್ರಿಗಿಂತ ನೀವೇ ಚಂದ ಕಾಣ್ತೀರಾ  ಅಂದ್ಮೇಲೆ  ಸ್ವಲ್ಪ ಧೈರ್ಯ ಬಂತು...
         ಚಂದದ ಸೆಲ್ವಾರ್,  ತುಸು ಜಾಸ್ತಿ ಅನಿಸುವ ಮೇಕಪ್,  ಜಡೆ ಹೆಣೆಯದೆ ಇಳಿಬಿಟ್ಟ ಕೂದಲು...ಹೀಲ್ಡ್ ಚಪ್ಪಲಿ ಮೆಟ್ಟು ಹೊರಬಂದ ನನ್ನನ್ನ ನೋಡಿ ... ಮಾರಾಯ್ತಿ... ಆಧಾರ್ ಕಾರ್ಡ್ ಮಾಡ್ಸೋಕ್ಕೆ ಹೋಗ್ತಿರೋದು... ಪಾರ್ಟಿಗಲ್ಲ  ಅಂದ್ರೂ ಕೇಳ್ದೆ...  AC ಆದ್ರೆ ಮೂಗು ಮುರೀತಿದ್ದ ನಾನು  AC ಆನ್ ಮಾಡು ಸ್ಮರಣ್.... ಅಂದದ್ದಕ್ಕೆ    ಹುಂ... ಮಾಡಪ್ಪ... ಬೆವರಿಗೆ ಮೇಕಪ್ ಕರಗಿ ಹೋದಾತು ಅಂತ ನನ್ನವರ ಕುಹಕ....  ಅಂತೂ  ಇವರ ಆಫೀಸ್ ಗೆ ಹೋಗೋಷ್ಟರಲ್ಲಿ  ಎಲ್ಲಾ ಮಹಿಳಾಮಣಿಗಳ ಕಲರವ... ಒಬ್ಬರಿಗೊಬ್ಬರು  ಹೆಚ್ಚೇ ಅನಿಸುವಂತ ಮೇಕಪ್...  ಎಲ್ಲಾ  ಹಿಂದಿಯವರೆ... ಹರಕು ಮುರುಕು ಹಿಂದಿಯಲ್ಲಿ ಮಾತಾಡಿ ಪರಿಚಯ ಮಾಡ್ಕೊಂಡು ಫೋಟೋ ತೆಗೆಸೋಕ್ಕೆ ಹೋದಾಗ...  ಅಲ್ಲಿರುವವರೆಲ್ಲಾ ಬಿದ್ದುಬಿದ್ದು ನಗ್ತಾಯಿದ್ದಾರೆ...  ಅಲ್ಲೊಬ್ಬ ... ಯಾವ್ದಾದ್ರೂ ಫಂಕ್ಷನ್ಗೆ ಬಂದಿದ್ರಾ ಅಂದಾಗ... ಇಲ್ಲಾ ಆಧಾರ್ ಮಾಡ್ಸೋಕ್ಕೆ ಬಂದದ್ದು ಅಂದೆ....   ಮತ್ತೂ ನಕ್ಕ ಅವರು. ಆಯ್ತು ನಿಮ್ಮ ಮೇಕಪ್ ಸ್ವಲ್ಪವೂ ಕೆಡದಂತೆ ತೆಗೀತೀವಿ ಬಿಡಿ..ಅಂದದ್ದಕ್ಕೆ.. ನಿಜವೇನೋ ಅನ್ನೋ ಭ್ರಮೆಯಲ್ಲಿ... ಹ..  ಸ್ವಲ್ಪ ಚನ್ನಾಗೇ ಬರಲಿ.. ಹುಬ್ಬಿನ ಹತ್ರ ಗಾಯದ ಗುರುತಿದೆ ಅದನ್ನ ಕಾಣದಹಾಗೆ ತೆಗೀರಿ ಅಂತ ಹೇಳಿದ್ದೆ..😊😊
     ಒಂದ್ ತಿಂಗಳಾದ ಮೇಲೆ ಬಂದ  ಆಧಾರ್ ಕಾರ್ಡ್ ನೋಡಿದ್ಮೇಲೆ  ಶಾಕ್...!!! 
ಇದು ಖಂಡಿತ ನಮ್ಮದಲ್ಲ... ಯಾರದ್ದೋ ಬೈ ಮಿಷ್ಟೇಕ್ ಬಂದಿದೆ.... ಅಂತ ನಾನು... ಅದ್ರಲ್ಲಿದ್ದ ವಿವರಗಳನ್ನೆಲ್ಲಾ  ನೋಡಿ.. ಅಮ್ಮಾ ಇದು ನಮ್ಮದೇನೆ ಅಂತ ನನ್ನ ಮಗ ಹೇಳ್ದಾಗ ಬೆಚ್ಚಿಬಿದ್ದಿದ್ದೆ..... ಯಪ್ಪಾ  ಇಷ್ಟು ಕೆಟ್ಟದ್ದಾಗಿದ್ದೀನಾ ನಾನು ಅಂತ ಕನ್ನಡಿ.ಮುಂದೆ ನಿಂತು ನೋಡಿದ್ದೂ.ನೋಡಿದ್ದೆ... ನನ್ನವರು ಮೇಕಪ್ ಕಡಿಮೆ ಆಗಿತ್ತು .. ಇನ್ನೂ ಸ್ವಲ್ಪ ಮಾಡಕೋಬೇಕಿತ್ತು  ಅಂತ ಛೇಡಿಸಿದ್ದೆ ಛೇಡಿಸಿದ್ದು.. ನನಗೋ ಅಳು... ಅವತ್ತು ಅವ್ನು ಚನ್ನಾಗಿ ತೆಗೀತೀನಿ ಮೇಡಂ ಅಂದಿದ್ದಾ ಗೊತ್ತಾ... ಛೇ ಹೀಗೆ ತೆಗೆದಿದ್ದಾನೆ...  ನಾನು ಅನ್ನೋದೇ ಗೊತ್ತಾಗಲ್ವಲ್ಲ...  ಎಲ್ಲದ್ದಕ್ಕೂ ಆಧಾರ್ ಮರ್ಜ್  ಮಾಡಿದಾಗ ನಾವು ಅಂತ  ಹೇಗೆ ಐಡೆಂಟಿಫೈ ಮಾಡ್ತಾರೆ.. ಅನ್ನೋ ನನ್ನ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ... ಎಲ್ಲೇ ಹೋದ್ರೂ... ಆಧಾರನೊಮ್ಮೆ... ಮುಖವನ್ನೊಮ್ಮೆ ಪರೀಕ್ಷಾತ್ಮಕವಾಗಿ ನೋಡಿದಾಗ  , ಇದು ನೀವೇನಾ ಅಂತ ಕೆಳ್ದಾಗ  ...  ನೋಡಿ... ಹೇಗೆ ತೆಗೆದಿದ್ದಾರೆ... ಅನ್ನೋದು ನನ್ನ ಉತ್ತರ😊😊

            ಶೈಲಜಾ ರಮೇಶ್

ನನ್ನ ಜೀವನ ನನ್ನ ಕಥೆ##
ಇಂದಿನ ಥೀಮ್... 

ನನ್ನ ಜೀವನಕ್ಕೆ ಸರಿ ಹೊಂದುವ ಗಾದೆ ##


           ಹಾಗೆ ನೋಡೋಕ್ಕೊದ್ರೆ  ಎಲ್ಲಾ ಗಾಧೆಗಳು  ನನಗೆ ಸರಿ ಹೊಂದುತ್ತೇ..  ಹಾಗಂತ ಎಲ್ಲದರ ಬಗ್ಗೆನೂ  ಬರೆಯೋಕ್ಕಾಗಲ್ಲ...  
ಇವತ್ತಿಗೆ ಒಂದು ಗಾದೆಯನ್ನ ಆರಿಸ್ಕೊತೀನಿ...
1,  ತಾಳಿದವನು ಬಾಳಿಯಾನು

         ನನ್ನ ತವರಿನದು ಯಾವುದೇ ಸಮಸ್ಯೆ, ತೊಂದರೆಗಳಿಲ್ಲದ ನೆಮ್ಮದಿಯ ತುಂಬು ಕುಟುಂಬ ಆಗಿತ್ತು,  ಯಾವುದೇ ಸಮಸ್ಯೆಗಳ ಅರಿವಿರಲಿಲ್ಲ,  ಇದ್ದಿದ್ದರೂ.. ನನ್ನ ವರೆಗೂ ಯಾವ ಸಮಸ್ಯೆ ಕಾಣುವುದಕ್ಕೆ ಬಿಟ್ಟಿರಲಿಲ್ಲ  ನನ್ನಪ್ಪ.  ಅಲ್ಲಿಂದ ಮದುವೆಯಾಗಿ ಬಂದದ್ದು ತುಂಬು ಕುಟುಂಬಕ್ಕೆ.. 5 ಜನ ಭಾವಂದಿರು  ಅವರ ಹೆಂಡತಿ ಮಕ್ಕಳು.. ಅತ್ತೆ ಮಾವ,  ಒಬ್ಬರು ಅತ್ತಿಗೆ ( ನನ್ನವರ ಅಕ್ಕ ) .  ಮೇಲ್ನೋಟಕ್ಕೆ  ತುಂಬು ಕುಟುಂಬವಾದರೂ  ಎಲ್ಲರೂ.. ಬೇರೆ ಬೇರೆ ಏರಿಯಾದಲ್ಲಿ ಸಪರೇಟ್ ಆಗಿದ್ದವರು,  ನಾನು, ನನ್ನ ಪತಿ, ನನ್ನತ್ತೆ ಮಾವ ಹಾಗೂ,  ನನ್ನ ನಾಲ್ಕನೆಯ ಭಾವ ಅವರ ಹೆಂಡತಿ ಮತ್ತೆ ಮಗು ಜೊತೆಗಿದ್ದದ್ದು ಅದೂ  ಒಂದೆರಡು ವರ್ಷಗಳವರೆಗೆ ಮಾತ್ರ...  ಆದ್ರೆ  ಎಲ್ಲರೂ ಎಲ್ಲಾ ಹಬ್ಬಗಳಿಗೂ ನಮ್ಮ ಮನೆಯಲ್ಲೇ ಸೇರಿ ಒಟ್ಟಿಗೆ ಆಚರಿಸ್ತಾಇದ್ವಿ. ನನ್ನ ಮದುವೆಯಾದ ಹೊಸತು,  ಅವರ ರೀತಿ ನೀತಿ ಏನೂ ಗೊತ್ತಿಲ್ಲ.. ಅದೂ ಅಲ್ಲದೆ, ನಮ್ಮಮ್ಮ ನನಗೆ ಭೋದಿಸ್ತಾ ಇದ್ದದ್ದು,  ಅತ್ತೆ ಮನೆಯ ಯಾವುದೇ ವಿಚಾರ ತವರು ಮನೆಯಲ್ಲಿ ಹೇಳಬಾರ್ದು.. ತವರಿನ ಯಾವುದೇ ವಿಚಾರ ಅತ್ತೆ ಮನೆಯಲ್ಲಿ ಹೇಳಬಾರ್ದು.. ಅವರು ಕೊಟ್ಟ  ಟೈಮ್ ಗೆ ತಿನ್ನಬೇಕು,  ಎಲ್ಲರ ಅಚ್ಚುಮೆಚ್ಚಿನ ಸೊಸೆಯಾಗಿರ್ಬೇಕು..
   ಹುಂ. ಸರಿ ಹಾಗೆ ಇದ್ದೀನಿ ಇದುವರೆವಿಗೂ...  ಆದ್ರೆ ಅದಕ್ಕಾಗಿ ನಾನು ಕಳ್ಕೊಂಡಿದ್ದು ತುಂಬಾ...
ಹುಂ... ಬಿಡಿ  ಆ ವಿಷ್ಯ.. ನಮ್ಮನೇ ವಿಚಾರ ಕೇಳಿ...  ಹಬ್ಬಗಳು ಬಂತಂದ್ರೆ  ಎಲ್ಲರೂ  ಒಟ್ಟಿಗೇ ಸೇರೋದು  ನಮ್ಮನೆಯಲ್ಲೇ ಆಚರಣೆ ಮಾಡೋದು ಇದು ಅಭ್ಯಾಸ..  ಸರಿ  ಎಲ್ರೂ  ಬರ್ತಾರೆ ಅಂತ  ಮನೆ ಎಲ್ಲ ಒಪ್ಪ ಓರಣ ಮಾಡೋದು ಯಾರಿಗೆ ಯಾವ ರೂಮ್ ಬೇಕು ಅದನ್ನ ರೆಡಿ ಮಾಡಿಡೋದು,  ಹಬ್ಬದ ತಾಯರಿಗೆ ಅತ್ತೆ ಜೊತೆ ಸಹಾಯಕ್ಕೆ ಹೋಗೋದು, ಇದು ನನ್ನತ್ತೆ ನನಗೆ ಕೊಟ್ಟ ಕೆಲಸ,  ನನ್ನ ಒರಗಿತ್ತಿ, ಎರಡು ವರ್ಷದ ಮಗುವಿನ ತಾಯಿ, ಅದೂ ಅಲ್ಲದೆ ಅವಳ ಗಂಡ ಗೌರ್ನಮೆಂಟ್ ಎಂಪ್ಲಾಯ್,  ಹಾಗಾಗಿ ಅವಳಿಗೆ ವಿಶೇಷ ಗೌರವ,  ಹೆಚ್ಚು ಕಮ್ಮಿ 80% ಕೆಲ್ಸ ನನ್ನದೇ..  ಇನ್ನು ಎಲ್ರೂ ಬಂದ್ರೂಂದ್ರೆ, ಇನ್ನಷ್ಟು ಮತ್ತಷ್ಟು ಕೆಲ್ಸ, ನಾನೂ ಹೊಸಬಳು, ಯಾರ ಮರ್ಜಿಯೂ ಗೊತ್ತಾಗ್ತಾಇರ್ಲಿಲ್ಲ, ಒಬ್ಬಿಬ್ಬರಾಗಿ ಓಂದೊಂದು ಕೆಲ್ಸ ನನಗೇ ಹೇಳೋದು,  ನಿಮ್ಮನೆಯಲ್ಲಿ ದೇವರಪೂಜೆಗೆ ನೀನೇ ಅಣಿ ಮಾಡ್ತಿದ್ದೆಯಂತೆ.. ನಿಮ್ಮಮ್ಮ ಹೇಳ್ತಾಯಿದ್ರು. ಹೌದಾ... ನೋೀಡೋಣ ಮಾಡು ಹೇಗೆ ಮಾಡ್ತೀಯೋ.. ಅಂತ ಮೃದುವಾಗಿ ಹೇಳೋದು.. ತುಂಬಾ ಚೆನ್ನಾಗಿ ಹೋಳಿಗೆ ಮಾಡ್ತಿಯಂತೆ ಶೈಲಾ  ಹೌದಾ... ಎಲ್ಲಿ ಹೇಗೆ ಮಾಡೋದು ನೀನು  ಮಾಡು... ಹೇ  ಹೌದಲ್ಲಾ  ಎಷ್ಟು ಚಂದ ಮಾಡ್ತೀಯಾ.. ವೇರಿಗುಡ್..ನೋಡು ಇಷ್ಟು ವಯಸ್ಸಾಯ್ತು ನಮಗೆ ಅಷ್ಟು ಚಂದ ಬರೋದೇ ಇಲ್ಲ.. ಅಂತ 3 - 4 kg ಬೇಳೆ ಹೋಳಿಗೆ ಮಾಡೋಕ್ಕೆ ನನ್ನೊಬ್ಬಳನ್ನೇ ಬಿಡ್ತಿದ್ರು..  ತುಂಬಾ  ಚಂದ  ರಂಗೋಲಿ ಹಾಕ್ತೀಯಲ್ಲ ಶೈಲಾ.. ಅವತ್ತು ನಿಮ್ಮನೆನಲ್ಲಿ  ನೋಡಿದ್ದೆ.. ವಾವ್ ಎಷ್ಟು ಚಂದಿತ್ತು..  ಬಾ ಹಬ್ಬಕ್ಕೆ  ದೊಡ್ಡದಾದ ರಂಗೋಲಿ ಹಾಕು.. ಎಲ್ಲರ ಕಣ್ಣು ನಮ್ಮ ಮನೆ ಮೇಲಿರ್ಲಿ ಅಂತ ಉಬ್ಬಿಸ್ತಾ ಇದ್ರು.. ಹೇ ಅದೇನು ಮೋಡಿ  ಮಾಡಿದ್ದಿ ನೀನು .. ನೋಡು ಮಕ್ಕಳೆಲ್ಲಾ ನಿನ್ಹತ್ರ ನೇ ಸ್ನಾನ ಮಾಡಿಸ್ಕೊಬೇಕಂತೆ... ಹೇ  ಹೋಗಿ ಮಕ್ಳ  ಶೈಲ ಚಿಕ್ಕಿ ಸ್ನಾನ ಮಾಡಿಸ್ತಾರೆ.. ಅಂತ ಸದ್ದಿಲ್ಲದೆ ನನ್ಹತ್ರ ಬಿಟ್ಟು  ಹೊರಡೋದು...  ನಿಮ್ಮನೆ ತುಂಬಾ ಸಂಪ್ರದಾಯಸ್ಥ ಕುಟುಂಬ ಅಲ್ವಾ ಶೈಲ.. ಹಬ್ಬ ಹರಿದಿನ ಉಪವಾಸ ವನವಾಸ ಎಲ್ಲಾ ತುಂಬಾ ಚೆನ್ನಾಗಿ ಮಾಡ್ತೀರಲ್ಲ.. ನಿನಗೂ ಅಭ್ಯಾಸ ಇದೆ ಅಲ್ವಾ... ಸೊ ನಮಗೆ ಗ್ಯಾಸ್ ಪ್ರಾಬ್ಲೆಮ್  ಉಪವಾಸ ಇರೋಕ್ಕಾಗಲ್ಲ..  ನೀನು  ಮಾಡ್ತೀಯಾ... ಅತ್ತೆ ಜೊತೆ ನೀನಿದ್ದು  ಎಲ್ರಿಗೂ ಊಟಕ್ಕೆ ಬಡಿಸ್ಬಿಡು.. ಹೀಗೆ.. ಒಂದೊಂದೇ ಕೆಲ್ಸ ಅಂತ  ಎಲ್ಲಾ ಕೆಲಸಗಳೂ  ನನ್ನ ತಲೆ ಮೇಲೇ ಬೀಳ್ತಿತ್ತು.. ಅವರೆಲ್ಲಾ ಹಬ್ಬ ಅಂತ  ಹೊಸಬಟ್ಟೆ , ಒಡವೆಗಳನ್ನ ಹಾಕ್ಕೊಂಡು ಮೇರೀತಿದ್ರೆ,  ನಾನು  ಮಡಿ ಸೀರೆ ಉಟ್ಕೊಂಡು, 35  ಜನರ ಅಡುಗೆ ಮಾಡ್ತಾ.. ಪೂಜೆ,  ವ್ರತಕ್ಕೆ ಅಣಿ ಮಾಡ್ತಾ ಇಡೀ ದಿನ... ಅಷ್ಟೇಕೆ.. ಅವರುಗಳೆಲ್ಲಾ  ಹೋಗೋವರೆವಿಗೂ..ಉಸಿರಾಡೋಕ್ಕೂ ಪುರುಸೊತ್ತಿಲ್ಲದೆ ಕೆಲ್ಸ ಮಾಡಬೇಕಿತ್ತು
 ಜೊತೆಗೆ ಎಲ್ಲರ ಊಟ ಮುಗಿಯುವ ವರೆಗೂ  ಉಪವಾಸ,  ಕಾಪಿ, ಟೀ ಅಭ್ಯಾಸ ಇಲ್ಲದ ನನಗೆ ಆಟಲೀಸ್ಟ್ ಒಂಚೂರು ಹಾಲಾದ್ರೂ ಕುಡಿಯೋಣ ಅಂದ್ರೆ... ಇಷ್ಟು ಜನರ ಕಾಫಿಗೆ ಹಾಲು ಬೇಕು.. ನೀನೇ ಹಾಲು ಕುಡ್ಕೊಂಡ್ರೆ ಹೇಗೆ.. ಅದೂ ಅಲ್ಲದೆ ಹಾಲು ಕುಡುದ್ರೆ ಗ್ಯಾಸ ಆಗುತ್ತೆ  ಅಂತ ಅತ್ತೆಯ  ಅಂಬೋಣ.....  ಒಮ್ಮೊಮ್ಮೆ ಕಿರುಚಬೇಕೆನಿಸಿದ್ರೂ...  ಅಮ್ಮನ ಕಿವಿಮಾತು ನೆನಪಿಗೆ  ಬರೋದು.. ತಾಳ್ಮೆ ಇರ್ಲಿ ಪುಟ್ಟಾ.. "ತಾಳಿದವನು  ಬಾಳಿಯಾನು"  ಅಂತೂ  ಸಹಿಸ್ಕೊಂಡು ಬಂದೆ...   ಇದು ಬರೀ ಒಂದೆರಡು ಉದಾಹರಣೆಯಷ್ಟೇ..  ಆ ಕಿರಿ ಕಿರಿ,  ಹಿಂಸೆ ಬರೀತಾ ಹೋದ್ರೆ ಒಂದು ದಿದ್ದ  ಕಾದಂಬರಿಯೇ ಆದೀತು.. ಇನ್ನು..  ನಾವುಗಳೇ ಇದ್ದಾಗಂತೂ  ಬೇರೆ ತರಹದ ಕಿರಿಕಿರಿ,  ಎಲ್ಲಾ ಕೆಲ್ಸ ನಾನೇ ಮಾಡಿದ್ರೂ.. ಪ್ರತಿ ದಿನದ  ಅಡುಗೆ ಅತ್ತೇನೆ ಮಾಡೋರು.. ಯಾಕಂದ್ರೆ ನಾನಿನ್ನೂ ಹೊಸಬಳು .. ಹಾಗಾಗಿ,  ನಮ್ಮ ಮಾವನವರಿಗೆ  ಮುದ್ದೆ ಬೇಕು.. ಅತ್ತೆಯವರೆ  ಮಧ್ಯಾಹ್ನಕ್ಕೆ  ನಾಲ್ಕು ಮುದ್ದೆ ಮಾಡ್ತಾಯಿದ್ರು.. ಆಟ ಮಾವ, ನಾನು ನನ್ನ ಒರಗಿತ್ತಿ  ಅಷ್ಟೇ ಮಧ್ಯಾಹ್ನದ ಊಟಕ್ಕೆ,  ಮುದ್ದೆ ಮಾಡಿ  ಇಂದು ಮುದ್ದೆಗೆ ಅವರ ಬೆರಳಿನಿಂದ ಒಂದು ತೂತು ಮಾಡಿರ್ತಿದ್ರು..  ಆ ಮುದ್ದೆ  ನನಗೆ ಬಡಿಸ್ತಾಯಿದ್ರು..  ನನ್ನಪ್ಪನ ಮನೆಲೆ ಮುದ್ದೆ ಅಪರೂಪ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ .. ಹಾಗಾಗಿ ನನಗೆ ಮುದ್ದೆ ಸೆರ್ತಿರ್ಲಿಲ್ಲ .. ಹೇಗೋ  ಸಹಿಸ್ಕೊಂಡು ತಿನ್ನೋಣ ಅಂದ್ರೆ...  ಆ ತೂತಿನ ಮುದ್ದೆ  ಬರೀ... ಪಾತ್ರೆಯ ತಳ ಕೆರೆದ,  ಸೀದು ಹಾಳಾದ  ಹಿಟ್ಟಲ್ಲಿ ಮುದ್ದೆ ಮಾಡಿರ್ತೀದ್ದದ್ದು.. . ಪಕ್ಕದಲ್ಲೇ ಊಟಕ್ಕೆ ಕುಳಿತ.. ನನ್ನ ಒರಗಿತ್ತಿ ಗೆ ಮೃದುವಾದ ಮುದ್ದೆ.. ನನಗೆ ತಲಹತ್ತಿದ ಸೀಕು ಪಾಕುಗಳನ್ನ ಸೇರಿಸಿದ ಮುದ್ದೆ....  ಕಣ್ಣಲ್ಲಿ ನೀರು ಸುರೀತಿತ್ತು.. ಆದ್ರೂ  ಯಾರಿಗೂ  ಹೇಳೋ ಹಾಗಿಲ್ಲ... 
ಇಂದು ಆ ಕಷ್ಟ ಇಲ್ಲ ಬಿಡಿ..   ಅತ್ತೆಯವರು ತುಂಬಾ ಚೆನ್ನಾಗಿ ನೋಡಿಕೊಂಡ ಮಕ್ಕಳು ಸೊಸೆಯರು ಇಂದು ಅವರನ್ನ ಕ್ಯಾರೆ ಅನ್ನಲ್ಲ..  ಈಗ ಅವರಿಗೆ ಜ್ಞಾನೋದಯ ಆಗಿದೆ..  ಸಾರೀಮ್ಮ... ಆಗ ನಾನೆಷ್ಟು ಕಷ್ಟ ಕೊಟ್ಟೆ ನಿನಗೆ..  ಆದ್ರೂ ನೀ ಯಾವುದೂ ಮನಸ್ಸಿಗೆ ತೊಗೊಳ್ಳದೆ ತಾಯಿ ತರ ನೋಡ್ತೀಯಾ.. ನೀ ಚನ್ನಾಗಿರಮ್ಮ  ಅಂತಾರೆ.. ನಿನ್ನನ್ನ ಹೆತ್ತ ನಿನ್ನ ತಾಯಿಗೆ ನಮಸ್ಕಾರ ಅನ್ನೋವಾಗ ಕಣ್ತುಂಬಿ ಬರುತ್ತೆ.
ಇನ್ನು.. ನನ್ನ  ಭಾವಂದಿರು.. ಎಲ್ಲರೂ ಅವರವರ ಮನೆಲೆ  ಹಬ್ಬ ಮಾಡ್ಕೋತಾರೆ.. ಎಲ್ಲ ಒಂದೆಡೆ ಒಟ್ಟಿಗೆ ಸೇರೋದೆ ಕಷ್ಟ ಆಗಿದೆ. ಸತತ 10 ವರ್ಷಗಳ ನನ್ನ ಆ ಕಷ್ಟಕ್ಕೆ..  ಇಂದು ಯಾರ ಜೊತೆ ಯಾರೂ ಮಾತಾಡದೇ ಇದ್ರೂ...ನನ್ನನ್ನ  ಎಲ್ಲರೂ  ತುಂಬಾ ಚೆನ್ನಾಗಿ ಮಾತಾಡಿಸ್ತಾರೆ..ಅಂದು  ನಾನು ಸ್ನಾನ ಮಾಡ್ಸಿ, ಅಲಂಕಾರ ಮಾಡ್ತಿದ್ದ ಮಕ್ಕಳೆಲ್ಲಾ ಈಗ ಬೆಳೆದು  ಮದುವೆ ಮಕ್ಕಳು ಮಾಡಿಕೊಂಡಿದ್ದಾರೆ..  ಅವರವರ ಸಂಗಾತಿಗಳಿಗೆ ಅವರು ಹೆಮ್ಮೆಯಿಂದ ಹೇಳ್ತಾರೆ.. ಇವರು ನನ್ನ ಪ್ರೀತಿಯ ಚಿಕ್ಕಮ್ಮ,  ಅಮ್ಮನಿಗಿಂತ ಹೆಚ್ಚು,  ಸ್ವಲ್ಪ ಹುಷಾರು ತಪ್ಪಿದ್ರೂ  ಚಿಕ್ಕಮ್ಮನ ಮನೆಗೆ ಬಂದ್ಬಿಡ್ತಿದ್ವಿ..  ಅವರ ಆರೈಕೆಯಿಂದ ಬೇಗ ಹುಷಾರಾಗ್ತಾಇದ್ವಿ  ಅಂತ,  ಅವರು ಹಾಗೆ
ಹೇಳೋವಾಗ  ಮನಸ್ಸು ಕಣ್ಣು ತುಂಬಿ ಬರುತ್ತೆ..  ಎಲ್ಲರಿಗೂ ಅಕ್ಕರೆಯ ಚಿಕ್ಕಮ್ಮ ಆಗಿದ್ದೀನಿ..
ಅಂದು ನಾನು ತಾಳ್ಮೆಗೆಟ್ಟು ಅವರುಗಳಂತೆಯೇ ಕೂಗಾಡಿದ್ರೆ ಇಂದು ಈ ಮಟ್ಟಿನ ಪ್ರೀತಿ ಗೌರವ ಸಿಗ್ತಾ ಇರ್ಲಿಲ್ಲ  ಅನ್ನಿಸುತ್ತೆ...  
    ನೀವೇನಂತೀರಿ..?
             ಶೈಲೂ



ಥೀಮ್ ಬರಹ

ನನ್ನ ಜೀವನ.. ನನ್ನ ಕಥೆ
********************

        ನಾನು  puc ಓದುತ್ತಿದ್ದ ಸಮಯ,  ಅಪ್ಪ ಅಮ್ಮ ದೊಡ್ಡಬಳ್ಳಾಪುರದ ಹತ್ತಿರದ ಹತ್ತಿರದ ಹಳ್ಳಿಯಲ್ಲಿ,  ನಾವು ನಾಲ್ಕುಜನ ಮಕ್ಕಳು...  ನಾನು ಅಕ್ಕ,  ಇಬ್ಬರು ಅಣ್ಣಂದಿರು  ಯಶವಂತಪುರದಲ್ಲಿ...  ಒಂದು ಸಣ್ಣ ರೂಮ್ , ಸಣ್ಣ ಹಾಲ್, ಅಡುಗೆ ಮನೆ, ಪುಟ್ಟ ಬಚ್ಚಲು  ಇರುವ ಒಂದು ಪುಟ್ಟ ಮನೆಯಲ್ಲಿ ಇದ್ವಿ.... ಅದು ಹತ್ತಾರು ಮನೆಗಳಿರುವ ವಠಾರ. ಎಲ್ಲಾ ಭಾಷೆಯ ಜನ ಇದ್ದ  ಆ ವಠಾರದಲ್ಲಿ  ನಮ್ಮ ಮನೆ.  ದೊಡ್ಡಣ್ಣ ಪ್ರಕಾಶಣ್ಣ, ksrtc ನಲ್ಲಿ ಕೆಲಸವಾದ್ರೆ,  ಚಿಕ್ಕಣ್ಣ ರಮೇಷಣ್ಣನದು ಪೊಲೀಸ್ ಕೆಲಸ,  ಅಕ್ಕ ಅನ್ನಪೂರ್ಣ ಒಂದು ಸಣ್ಣ ಸ್ಕೂಲ್ನಲ್ಲಿ ಟೀಚರ್ ಆಗಿ ವರ್ಕ್ ಮಾಡ್ತಿದ್ರು,  ನಾನು ವಾಣಿವಿಲಾಸ ವುಮನ್ಸ್ ಕಾಲೇಜಿಗೆ ಪ್ರಥಮ ವರ್ಷದ puc ಗೆ ಸೇರಿದ್ದೆ.  
          ಆ ವಠಾರದಲ್ಲಿ ಎಲ್ಲಾ ಭಾಷೆಯ ಜನ,  ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ,  ಉತ್ತರ ಕರ್ನಾಟಕದ  ಕೆಲವು ಮಂದಿ... ಒಂಥರಾ ಸರ್ವಭಾಷಾ ಸಮ್ಮೇಳನ ಆ ವಠಾರದಲ್ಲಿತ್ತು.
          ನಮ್ಮ ಪಕ್ಕದ ಮನೆಯಲ್ಲಿ ಮಳೆಯಾಳಿಗಳ ಮನೆ ಇತ್ತು  ಜಯರಾಮ್ ರತ್ನ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಇನ್ನೂ ಪುಟ್ಟವರು,  ಜಯರಾಮ್ ಅವರ ದೊಡ್ಡ ಹೆಂಡತಿಯ ಮಗ  ವಿಜಯ್(ಅವರಮ್ಮ ಸತ್ತೋಗಿದ್ರಂತೆ),  ಚಿಕ್ಕಮ್ಮ ರತ್ನ ಪಾಪ  ತುಂಬಾ ಗೋಳುಹೊಯ್ಕೋತಾಇದ್ಳು  ವಿಜಿನ,  ಅವನು ನನ್ನ ವಯಸ್ಸಿನ ವನೇ,  ಸರಿಯಾಗಿ ಸ್ಕೂಲ್ಗೆ ಹೋಗಿದ್ರೆ ಅವನೂ puc ನಲ್ಲಿರಬೇಕಿತ್ತು... ಪಾಪ  ಊಟ ತಿಂಡಿನೆ ಸರಿಯಾಗಿ ಕೊಡ್ತಿರ್ಲಿಲ್ಲ, ಇನ್ನು ಸ್ಕೂಲ್ ಮಾತೆಲ್ಲಿ.?.. ಸಾಲದ್ದಕ್ಕೆ  ಅವನನ್ನ ಕೆಟ್ಟವನು ಅಂತ  ಜನರಮುಂದೆ ಬಿಂಬಿಸ್ತಾಇದ್ಳು ರತ್ನ ಆಂಟಿ.  ಯಾರ ಜೊತೇನೂ ಮಾತಾಡೋಕ್ಕೆ ಬಿಡ್ತಿರ್ಲಿಲ್ಲ,  ಯಾವಾಗ್ಲೂ ಏನೋ ಒಂದು ಕೆಲಸ ಹೇಳೋದು.. ಮಾಡಿದ್ರೂ ಸರಿಯಿಲ್ಲ ಅಂತ ಬೈಯೋದು.. ಒಮ್ಮೊಮ್ಮೆ ಹೊಡೆಯೋದು ಮಾಡ್ತಿದ್ರು ಆಂಟಿ.  ಒಮ್ಮೆ ಹೀಗೇ ಏನೋ ವಿಚಾರಕ್ಕೆ ಅವನನ್ನ ಹೊಡೆಯೋ ಟೈಮ್ ಗೆ ಸರಿಯಾಗಿ ಅವರ ಮನೆಗೆ ಹೋದೆ,  ಪಾಪ  ಅವನ ಗೋಳು ನೋಡೋಕ್ಕಾಗದೆ ಅವನನ್ನ ಬಿಡಿಸಿ, ಆಂಟಿನ ಸಮಾಧಾನ ಪಡಿಸಿ ಅವನಿಗೆ ಕುಡಿಯೋಕ್ಕೆ ನೀರು ಕೊಟ್ಟು ನಮ್ಮನೆಗೆ ಕರ್ಕೊಂಡು ಬಂದೆ.  ಅಣ್ಣ ಅವನಿಗೆ ಸಮಾಧಾನ ಮಾಡಿ ನಿಮ್ ಚಿಕ್ಕಮ್ಮಂಗೆ ಎದುರು ವಾಡಿಸ್ಬೇದ ಸುಮ್ನೆ ಹೊಡೆತ ತಿಂತೀಯಾ.. ಪಕ್ಕದಲ್ಲೇ ಇರೋದ್ರಿಂದ ನಮಗೂ ನೋಡೋಕ್ಕಾಗಲ್ಲ, ನೀನೂ ಚನ್ನಾಗಿ ಓದಿ ಕಾಲೇಜಿಗೆ ಹೋಗಿ ನಿನ್ನ ಕಾಲಮೇಲೆ ನಿಂತ್ಕೋ ಅಂತ ಬರ್ತಿದ್ದ ಹರುಕು ಮುರುಕು ಮಲೆಯಾಳಂನಲ್ಲಿ ಹೇಳಿದ್ರು.  ಆಮೇಲೆ ಅಣ್ಣನೇ ಯಾವ್ದೋ ಗೌರ್ನಮೆಂಟ್ ಸ್ಕೂಲಿಗೆ ಸೇರ್ಸಿ ಪ್ರತಿದಿನ  ಬಾ ಪಾಠ ಹೇಳ್ಕೊಡ್ತೀನಿ ಅಂತ ಹೇಳಿ ಕಳಿಸಿದ್ರು.   ಪಾಪ ಅವ್ನು ಅಣ್ಣ ಹೇಳಿದ್ದನ್ನ ಕಡೆಗಣಿಸದೆ ಪಾಲಿಸ್ಕೊಂಡು ಬರ್ತಾಇದ್ದ,  ಸಮಸ್ಯೆ ಏನೂಂದ್ರೆ ಅವನಿಗೆ ಕನ್ನಡ ಕಲಿಸೋದು... ಅಬ್ಬಾ,  ಸಾಕಪ್ಪ  ಅನ್ನಿಸ್ತಿತ್ತು.  ಬೇರೆಲ್ಲಾ ಸಬ್ಜೆಕ್ಟ್ ನಲ್ಲಿ ಎಕ್ಸ್ಲೆಂಟ್,  ಕನ್ನಡ ದಲ್ಲಿ ಮಾತ್ರ ಸೊನ್ನೆ.  ಇಂಗ್ಲಿಷ್ ನಲ್ಲಿ ಕನ್ನಡ ಪದಗಳ ಅರ್ಥ ಹೇಳ್ತಾ ಅವನಿಗೆ ಕನ್ನಡ ಕಲಿಸಬೇಕಾಗಿತ್ತು.

         ಹೀಗೇ ಪ್ರತಿದಿನ ಬರ್ತಿದ್ದ , ಅಣ್ಣಂದ್ರು ಇಬ್ರೂ ಕೆಲಸಕ್ಕೆ ಹೋಗಿದ್ರೆ ಅಕ್ಕ , ನಾನು ಅವನಿಗೆ ಹೇಳ್ಕೊಡ್ತಾಇದ್ವಿ.  ಒಂದಿನ  ಅಣ್ಣo ದ್ರು  ಇಬ್ರೂ ಇಲ್ಲ.. ಅಪ್ಪ ಬಂದಿದ್ರು , ಅಕ್ಕ ಅಡುಗೆ ಮಾಡೋದ್ರಲ್ಲಿ ಬ್ಯುಸಿ,  ನಾನು  ನನ್ನ ಬುಕ್ಸ್ ಒದ್ಕೋತಾ ಇದ್ದೆ.   ಅಕ್ಕ ಬನ್ನಿ ಹೇಳ್ಕೊಡಿ ಅಂತ ಅಕ್ಕನ್ನ ಕರೆದ.. ಅಕ್ಕ ಇವತ್ತು ಆಗಲ್ಲ ನಂಗೆ ಕೆಲ್ಸಇದೆ,  ಬೇಕಾದ್ರೆ ಶೈಲೂ ಹತ್ರ ಹೇಳಿಸ್ಕೊ ಅಂದ್ರು,  ನಾನು ಪ್ರತಿದಿನ ಅವನಿಗೆ ಕನ್ನಡದ ಪದಗಳ ಪರಿಚಯ ಮಾಡಿಕೊಡ್ತಾಇದ್ದೆ.. ಕಲಿತು ಪಾಪ ತಪ್ಪದೇ ಒಪ್ಪಿಸ್ತಿದ್ದ.  ಇವತ್ತೂ ಬಂದ,  ಪ್ಲೀಸ್ ಹೇಳ್ಕೊಡು ಶೈಲೂ ಅಂದ... ನನಗೆ ನನ್ನದೇ ಓದೋದು ಬೇಕಾದಷ್ಟಿತ್ತು.. ಹೋಗೋ ಇವತ್ತಾಗಲ್ಲ ಅಂದೆ... ಪಾಪ ಹಾಗೇ ನಿಂತಿದ್ದವನನ್ನ ನನ್ನಪ್ಪ...  ಇವತ್ತು ಯಾರಿಗೂ ಪುರುಸೊತ್ತಿಲ್ಲ..ನಾಳೆ ಹೇಳಿಸ್ಕೊ ಹೋಗು ಅಂತ ಹೇಳಿ ಕಳಿಸಿದ್ರೂ ಮತ್ತೆ ಬಂದ.  ಶೈಲೂ  ಅಪ್ಪ ಏನೋ ಹೇಳಿದ್ರಲ್ಲ ಅದೇನು ಅಂತ ಇಂಗ್ಲೀಷ್ ನಲ್ಲಿ ಕೇಳ್ದ..  ನಾನು ಕನ್ನಡದಲ್ಲೇ  ಇವತ್ತು ಪುರುಸೊತ್ತಿಲ್ಲ ಹೋಗು ಅಂದ್ರು ಆಂದದ್ದು... ಯಾಕೆ ಅರ್ಥ ಆಗ್ಲಿಲ್ಲ್ವಾ ಅಂತ ರೇಗಿದೆ.  ಪುರುಸೊತ್ತು  ಅಂದ್ರೆ ಏನು ಅಂತ ಅವನ ಪ್ರಶ್ನೆ... ಅಯ್ಯೋ ಮಾರಾಯ ಪುರುಸೊತ್ತು ಅಂದ್ರೆ ಟೈಮ್ ಅಂತ ಹೋಗು ಅಂತ್ ಹೇಳಿ ಕಳಿಸ್ದೆ.  ಅವನ್ಗೆ  ಒಂದು ಹೊಸ ಕನ್ನಡದ ಪದ ಕಲ್ತೆ ಅನ್ನೋ ಸಂತೋಷ.

         ಮಾರನೇದಿನ  ನಾನು ಕಾಲೇಜಿಗೆ ಬೇಗ ಹೋಗಬೇಕಿತ್ತು,  ಎಕ್ಸಾಮ್ ಹತ್ರ ಬರ್ತಿದ್ದಂಗೆ ಎಕ್ಸ್ಟ್ರಾ ಕ್ಲಾಸ್ ತೊಗೊಳೋರು  ಹಾಗಾಗಿ  ನಾನು ಬೇಗ ಹೊರಟಿದ್ದೆ.   ನಾನು ಹೊರಟದ್ದು  ನೋಡಿ ವಿಜಿ ತನಗೂ ಸ್ಕೂಲ್ಗೆ ಟೈಮ್ ಆಯ್ತೇನೋ ಅಂತ  ಅವರ ಮನೆ ಕ್ಲಾಕ್ ನೋಡಿದ್ದಾನೆ,  ಟೈಮ್ ಇನ್ನೂ 7 ಗಂಟೆ.. ದಿನಾ ನಾನು 8 ಗಂಟೆಗೆ ಹೊರಡ್ತಾಇದ್ದೆ, ಅವನೂ ಜೊತೇಲಿ ಬಸ್ಟಾಪ್ ವರೆಗೂ ಬರ್ತಿದ್ದ,  ಪಾಪ ಟೈಮ್  ಗೊಂದಲ ಆಗಿ ನಮ್ಮನೆಗೆ ಬಂದು  ಈಗ ಪುರುಸೊತ್ತು ಎಷ್ಟು,  ಇನ್ನೂ 7 ಅಷ್ಟೇ, ನೀನ್ಯಾಕೆ ಈ ಪುರುಸೊತ್ತಿಗೆ ಹೊರಡ್ತಾಇದ್ದೀಯಾ  ಅಂದಾಗ  ನಮಗೆಲ್ಲಾ ತಬ್ಬಿಬ್ಬು..  ಅವನ ಕನ್ನಡ... ಅದೂ  ಆ ಪುರುಸೊತ್ತು  ಅರ್ಥ ಮಾಡ್ಕೊಳ್ಳೊಷ್ಟರಲ್ಲಿ  ನಾನು  ಬೇಸ್ತು...  ನಂತರ ಎಲ್ರಿಗೂ ನಗು ತಡೆಯಲಾಗಲಿಲ್ಲ.  ಅವನಿಗೆ ಪುರುಸೊತ್ತು ಪದವನ್ನ ಯಾವ ಸಮಯದಲ್ಲಿ ಬಳಕೆ ಮಾಡಬೇಕು ಅಂತ ಹೆಳ್ಕೊಡೋದ್ರಲ್ಲಿ  ಸಾಕಾಗಿ ಹೋಗಿತ್ತು...
       ನಾನು ಈಗ್ಲೂ ಪುರುಸೊತ್ತು ಪದ  ಬಳಸಿದಾಗಳೆಲ್ಲ  ವಿಜಿನ ನೆನೆಸ್ಕೊಂಡು ನಗ್ತಾ ಇರ್ತೀನಿ..  ಪಾಪ ಈಗ ಎಲ್ಲಿದ್ದಾನೋ.. ಹೇಗಿದ್ದಾನೋ... ಅವನ  ಅವತ್ತಿನ  ಆ ಪರಿಸ್ಥಿತಿ ನೆನೆಸಿಕೊಂಡರೆ ಈಗ್ಲೂ ಕಣ್ಣಾಲಿ ತುಂಬುತ್ತೆ.

               ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ