244 ನಾಚಿಕೆ

ನಾಚಿಕೆ
******
ಅಂದು ಮುಂಜಾವಿನಲಿ
ನಾನಿನ್ನ ಕಂಡಾಗ, ಅರಳಿತ್ತು
ಎದೆಯಲ್ಲಿ  ಹೊಂದಾವರೆ...

ನಿನ್ನ ನೋಡುತ ನಿಂತೆ
ಅತ್ತಿತ್ತಲುಗದಂತೆ , ಮನದ
ಹೂದೋಟದಲಿ  ಭಾವಸಂತೆ...

ಎಲ್ಲೆಲ್ಲೂ ಮೌನ,
ನೀರವತೆಯ  ನಿಶ್ಯಬ್ದ,
ಉಸಿರ ಏರಿಳಿತದ ಭಾರಿ ಸದ್ದು...

ಮನದ ವೀಣೆಯು ಮಿಡಿದು
ಸುಪ್ತರಾಗವ ಹಾಡಿ
ಮೌನವಾವರಿಸಿತ್ತು ಲಜ್ಜೆ ಹೊದ್ದು...

ಮೌನವದು ಕಾಲ್ಕಿತ್ತು
ನಿನ್ನೊಡಲ ದನಿಯು ಉಲಿದಿತ್ತು
ಇಂಪಾದ ವೀಣಾ ನಾದದಂತೆ...

ತುಟಿಯಂಚಲಿ ಹೊಳೆದ
ಕಿರುನಗೆಯ ದೀವಟಿಗೆ
ಬೆಳಗಿತ್ತು ಬಾಳ ಜ್ಯೋತಿಯಂತೆ....

ಹೌದು.. ನಾ ಕಂಡೆ ನಿನ್ನ
ಕಣ್ಣಲಿ ಕಾಂತಿ, ನೀಲಾಕಾಶದಿ
ಹೊಳೆವ ನಕ್ಷತ್ರ ಮಾಲೆಯಂತೆ....

ಆ ಕಾಂತಿ ಪ್ರಭೆಯಲ್ಲಿ
ಲೋಕವೇ ಮಂಕಾಯ್ತು
ಬೆಚ್ಚಿ ನಿಂತೆ , ಭಾವವಿಗ್ರಹದಂತೆ...

ನಿನ್ನ ತುಂಟ ನಗೆಯ ನೋಟ
ನನ್ನೆಡೆಗೆಸೆವಾಗ, ಕಂಪಿಸಿತ್ತೆನ್ನೆದೆ
ನಾಚಿಕೆಯಿಂದೋಡಿದೆ ಹರಿಣಿಯಂತೆ...

           ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು