237 ಬಿಡುಗಡೆ

ಬಿಡುಗಡೆ
********
ಸೆರೆಯಾಗಿದೇ ಮನದ ಪಂಜರದೊಳಗೆ
ನೂರಾರು ಭಾವಗಳ ಹೇಳಲಾರದ ಮಾತು
ತೊರೆಯಾಗಿ ಹರಿದು ಬರುವುದೆಂದೋ?
ಬಿಡುಗಡೆಯ ಬಯಸಿ ಪದಪುಂಜದಲಿ ಕುಳಿತು

ಹೇಳಲಿದೆ ಮನದ ಮಾತುಗಳನ್ನೆಲ್ಲಾ
ತಡೆದಿದೆ ಬಂಧಿಸಿ ಯಾವುದೋ ಅವ್ಯಕ್ತ ಶಕ್ತಿ
ಮಿಡುಕುತಿದೆ ಪದಮಾಲೆಯಾಗಲು ಮನದ ಸಾರ
ಅರಿಯಲಾರದಾದೆ ನಾ ಹೊರಗೆಡುಹುವ ಯುಕ್ತಿ

ಕಟ್ಟಿಬಿಟ್ಟಿದೆ ಎದೆಯಲ್ಲಿ ಆಸೆಗಳ ಶರಪಂಜರ
ಬಂಧಿಯಾಗಿದೆ ಮನವಲ್ಲೇ ನೋವುನಲಿವಲ್ಲಿ ತತ್ತರ
ಬಯಸಿದರೂ ಬಾರದಲ್ಲ ಬಿಡುಗಡೆಯ ಭಾಗ್ಯಗಳು
ಅರಸುತ್ತಿದ್ದೇನೆ ಭಾವಬಿಂಬಿಸುವ ಯೋಗ್ಯ ಪದಗಳು

ಕಾಣುತ್ತಿದೆ ಅಲ್ಲೆಲ್ಲೋ ಭರವಸೆಯ ಬೆಳಕು
ಸಿಗಬಹುದು ಪದಪುಂಜ ಸೂಕ್ತ ಭಾವಗಳ ಹೊಳಹು
ನಿಲುಕದ್ದೇನಲ್ಲ ಅಕ್ಷರಗಳ ಸಂಸರ್ಗ ಸಾಲು ಸಾಲು
ಬಿಡುಗಡೆಯ ಭಾಗ್ಯವಿರಬೇಕಷ್ಠೆ ಭಾವಕ್ಕೆ ದಕ್ಕಿದ್ದಷ್ಟೇ ನನ್ನ ಪಾಲು

          ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು