235 ಮನೋಮಂಥನ
#ಶೀರ್ಷಿಕೆ:--
#ಮನೋಮಂಥನ
ಮಾಯೆಯಾವರಿಸಿ ಮನಸಿಗೆ
ಮನದ ಸ್ಥಿತಿ ಬದಲಾಗಿದೆ
ಮತ್ತೇರಿದಂತೆ ಬುದ್ಧಿಭ್ರಮಣೆ
ಮತ್ತದೇ ಚಿತ್ತ ಚಂಚಲತೆ
ನಾನೇ ಉತ್ತಮನೆಂಬ ಭಾವ
ನನ್ನದೇ ಎಲ್ಲೆಡೆಯೂ ಪ್ರಭಾವ
ನೆತ್ತಿಗೇರಿದಂತೆ ಅಹಂಕಾರದಬ್ಬರ
ನೆಮ್ಮದಿಯೇ ಇಲ್ಲದೆ ತತ್ತರ
ಒಮ್ಮೊಮ್ಮೆ ಒಂದೊಂದು ಭಾವ
ಒಮ್ಮೆಗೇ ಮೆರೆಯುತ್ತ ಜೀವ
ಒಂದೊಂದು ವೇಷದೊಳಾವೃತ ಮನ
ಒಬ್ಬಂಟಿಯಂತೆ ಕೊನೆಗೆ ಜೀವನ
ಭಾವಾಂತರಂಗದಲಿ ಏನೋ ವಿಚಿತ್ರ
ಬಹುವೇಷದೊಳು ಮನ ಸಚಿತ್ರ
ಬಂಧಿಯಾಗಿಹುದು ಕೆಳಸ್ತರದಲಿ ಮನ
ಭಾವವುದ್ದೀಪಿಸಿ ಏನೋ ತಲ್ಲಣ
ವಿಕೃತ ಮನದ ನಾನಾ ಸ್ತರ
ವೇಷದೊಳು ಲೀನ ಮಹತ್ತರ
ವೇದಿಕೆಯಾಯ್ತೆಕೆ ಚಿಂತನೆಗೆ
ವಿಶ್ವಾಸವಿಡು ಮನೋ ಮಂಥನಕೆ
ನಾನು ನಾನೆಂಬುದನಳಿಸಿ
ನನ್ನಲಿಹ ಕಲ್ಮಶವ ಬಿಡಿಸಿ
ನೀನೇ ಪ್ರಭುವೆಂಬುದ ಬೆಳೆಸಿ
ನಿನ್ನಡಿಯಲಿಡಬೇಕು ಶಿರ ಮಣಿಸಿ
ತೊಡೆ ಈ ವಿಕೃತ ಮನದ ತಾಪ
ತಡೆ ಮನದ ಸಹಜ ಬಹುರೂಪ
ತೊರೆದೆಲ್ಲ ಅಟ್ಟಹಾಸದ ಬದುಕು
ತಮವ ತೊಡೆವ ಬೆಳಕಾಗಬೇಕು..
ಡಾ: B.N. ಶೈಲಜಾ ರಮೇಶ್
Comments
Post a Comment