202 ಬದುಕು ಬವಣೆ

ಬದುಕು - ಬವಣೆ
     ****************

ಅಲೆಮಾರಿಗಳು ನಾವು
ಬದುಕು ಕಟ್ಟಲು
ಗುಳೆ ಎದ್ದು ಬಂದಿಹೆವು  !!

ನಿಮಗೆ ಒಂದೇ ಊರಾದರೆ
ನಮಗೆ  ಹಲವಾರು
ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು !!

ಇಲ್ಲಿ  ಹಿರಿಯರಿಲ್ಲ, ಕಿರಿಯರಿಲ್ಲ
ಎಲ್ಲರೂ  ದುಡಿವವರೆ
ಸಾಗಬೇಕಿದೆ ಜೀವನ ಯಾನ !!

ಬೇಕಲ್ಲ .....  ಬದುಕಲು
ದುಡಿಮೆಯರಸಲು
ಸಾಗುತ್ತಿದೆ ಪ್ರಯಾಣ !!

ದುಡಿತಕ್ಕೆ ಬರವಿಲ್ಲ
ವಂಚನೆಯ ವೇತನ
ಒಗ್ಗಿ ಹೋಗಿಹೆವು  ನಾವು !!

ಹೊಡೆತಕ್ಕೂ, ಬಡಿತಕ್ಕೂ
ಕಟುನುಡಿಯ ಬೈಗುಳಕ್ಕೂ
ಬಗ್ಗಿ ಹೋಗಿದ್ದೇವೆ ನಾವು !!

ಅಳುವ ಕೂಸಿಗೂ
ಹಾಲುಣಿಸಲು ಸಮಯವಿಲ್ಲ
ಕೆಲಸದಲ್ಲೇ  ನಾವು ಮಗ್ನ !!

ಎಷ್ಟು ದುಡಿದರೂ
ಹೊಟ್ಟೆ ತುಂಬುವುದಿಲ್ಲ
ಭವಿಷ್ಯವಾಗಿದೆ  ದಗ್ದ  !!

ಸುಂದರ ಸೌಧಗಳ
ನಿರ್ಮಾತೃಗಳು ನಾವು
ತಲೆಯಮೇಲೊಂದು  ಸೂರು ಇಲ್ಲ !!

ಭೂಮಿಯೇ  ಹಾಸಿಗೆ ಗಗನವೇ ಹೊದಿಕೆ
ಹೊಂದಿಕೊಂಡಿದ್ದೇವೆ ನಾವು
ಯಾರನ್ನು  ದೂರುತ್ತಿಲ್ಲ !!

ಸುಂದರ ಭವನ,  
ನಗರ  ನಿರ್ಮಾಣಕೆ
ನಾವುಗಳು  ಬೇಕೇ ಬೇಕು !!

ಸೂರಿಲ್ಲದ, ಊರಿಲ್ಲದ
ನಮ್ಮ ಈ  ಪರಿ ಪಾಡು
ನಾವ್ಯಾರಿಗೆಳಬೇಕು !!

ಸೌಲಭ್ಯ ಸವಲತ್ತುಗಳ
ಗೊಡವೆ ನಮಗಿಲ್ಲ
ಅದೆಲ್ಲ ಸಿರಿವಂತರಾ ಪಾಲು !!

ಮೂಲಭೂತ ಸೌಕರ್ಯ
ಒಂದೇಸಾಕು
ನೀಡಿರೆಮಗೆ  ಒಳ್ಳೆ ಬಾಳು !!

ಬದುಕು ಅರಸಿ
ಬಂದಿದ್ದೇವೆ ನಾವು
ಹೊಟ್ಟೆ ತುಂಬಿದರಷ್ಟೇ ಸಾಕು !!

ಎತ್ತಿಡುವ , ಕೂಡಿಡುವ
ಗೋಜು ನಮಗಿಲ್ಲ
ನಾಳೆ ಗೊಡವೆ  ಯಾಕೆ ಬೇಕು !!

ಜೀವಕ್ಕೆ,  ಜೀವನಕ್ಕೆ
ಭದ್ರತೆಯೇ ನಮಗಿಲ್ಲ
ದುಡಿವುದೊಂದೆ  ನಮ್ಮ ಕರ್ಮ  !!

ಬದುಕಿಸಿರಿ ನಮ್ಮ
ಬದುಕಲು  ಬಿಡಿ
ಇದೊಂದೇ ಮಾನವತೆಯ ಧರ್ಮ !!

          ಶೈಲೂ........

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು