181 ಸ್ನೇಹದ ಕಡಲಲ್ಲಿ

ಸ್ನೇಹದ ಕಡಲಲ್ಲಿ ಮುಸ್ಸಂಜೆ ಹೊತ್ತಲ್ಲಿ
*******************************

ಹಿತವಾದ ತಂಗಾಳಿ ಬೀಸುವ
ಈ ಮುಸ್ಸಂಜೆಯ ಹೊತ್ತಲ್ಲಿ
ಜಾರಿತೇಕೋ ಮನಸು ಬಾಲ್ಯದೆಡೆಗೆ
ನಾವಾಡಿದ ಆ ತುಂಟಾಟದೆಡೆಗೆ

ನೆನಪಿದೆಯೇನೆ ಗೆಳತಿ ಸುಮಲತಾ
ಮನೆಯ ಹಿಂದಿದ್ದ ಮರಳರಾಶಿಯ
ಬಗೆದು ಬಗೆದು ಗುಬ್ಬಿಗೂಡು ಕಟ್ಟಿದ್ದು
ಅದರಲ್ಲಿ ಅಣ್ಣನ ಚೆಂಡು ಮುಚ್ಚಿಟ್ಟದ್ದು

ಮನೆಯ ಮುಂದಿದ್ದ ಪೇರಳೆಯ
ತೋಟಕ್ಕೆ ಗೂಳಿಯಂತೆ ನುಗ್ಗಿದ್ದು
ಮರವೇರಿ ಪೇರಳೆ ಹಣ್ಣು ಕದ್ದದ್ದು
ಅಪ್ಪನ ಹೆಸರೇಳಿ ತಪ್ಪಿಸಿಕೊಂಡದ್ದು

ಊರ ಮುಂದಿನ ಅರಳೀಮರದಲ್ಲಿ
ಗೆಳೆಯರು ಕಟ್ಟಿದ್ದ ಜೋಕಾಲಿಯಲ್ಲಿ
ಕದ್ದು ಮುಚ್ಚಿ ಇಬ್ಬರೂ ಜೀಕಿದ್ದು
ಜೋಲಿ ಮಣೆಯ ಒಡೆದಿಟ್ಟದ್ದು

ಶುಲ್ಕ ಪಾವತಿಸಲಾರದೆ ಶಾಲೆಯಿಂದ
ಹೊರಗುಳಿದಿದ್ದ ಸ್ನೇಹಿತರಿಗೆ ನಮ್ಮ
ಶುಲ್ಕದ ಹಣವ ಕಟ್ಟಿ ಕರೆತಂದದ್ದು
ಹಣ ಕಳೆದುಕೊಂಡಂತೆ ಅಪ್ಪನಿಗೆ ಕಥೆಹೇಳಿದ್ದು

ಅದೆಷ್ಟೇ ತುಂಟಾಟವಿದ್ದರೂ ಸರಿ
ನಾಮುಂದು ತಾಮುಂದೆಂದು ಕಲಿತು
ಶಾಲೆಗೇ ಪ್ರಥಮ ಸ್ಥಾನ ಬರುತ್ತಿದ್ದದ್ದು
ಶಾಲೆಯ ಘನತೆಯ ಎತ್ತಿ ಹಿಡಿದದ್ದು

ಸ್ನೇಹದ ಕಡಲಲ್ಲಿ ಮುಸ್ಸಂಜೆ ಹೊತ್ತಲ್ಲಿ
ನಾವಾಡುತ್ತಿದ್ದ ಅಳಗುಳಿ ಮನೆಯಾಟ
ನಿನಗೋ ನನ್ನ ಸೋಲಿಸುವುದೇ ಪರಿಪಾಠ
ನನಗೆಂದೂ ಬರಲೇಯಿಲ್ಲ ಮೋಸದಾಟ

ಇಂದೇಕೋ ಕಾಡುತ್ತಿದೆ ಬಾಲ್ಯದ ನೆನಪು
ನಾವಿಬ್ಬರೂ ಕೂಡಿ ಆಡುತ್ತಿದ್ದ ಒನಪು
ಬಿಟ್ಟಿರಲಾರೆ ಒಬ್ಬರನ್ನೇ ಕೈಹಿಡಿಯೋಣ ಅನ್ನುತ್ತಿದ್ದೆ
ಮರೆಯಾಯ್ತೆಲ್ಲಿ ಸ್ನೇಹ ನೀ ಎಲ್ಲಿ ಕಳೆದ್ಹೋದೆ😔

             ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು