177.ಕಣ್ಣಲ್ಲೇ ಕರೆದೆ ಎದೆಯಲ್ಲಿ ಕಾಲೂರಿದೆ


ಕಣ್ಣಲ್ಲೇ ಕರೆದೆ ಎದೆಯಲ್ಲಿ ಕಾಲೂರಿದೆ
*******************************

ಮನವು ಹಾತೊರೆಯುತ್ತಿತ್ತು ಸನ್ಯಾಸದೆಡೆ
ಸಂಸಾರ ಸಾಗರದಿಂದ ಬಯಸಿ ಹಿನ್ನೆಡೆ
ವೈರಾಗ್ಯದ ಬದುಕು ಕೂಗಿ ಕರೆದಿತ್ತು
ಧ್ಯಾನ, ಜಪ, ತಪಕ್ಕೆ ಮನ ಒಗ್ಗಿಬಿಟ್ಟಿತ್ತು

ಇಂಬುಕೊಟ್ಟಿತ್ತದಕೆ ಶ್ರೀಗುರುದೇವನ ವಚನ
ಸದಾ ಬಯಸುತ್ತಿತ್ತು ಮನ ಭಜನೆ ಪ್ರವಚನ
ಜ್ಞಾನಭಕ್ತಿಮಾರ್ಗ ತೋರಿತ್ತು ಶ್ರೀಗುರುವಿನಾಶ್ರಮ
ವಿವೇಕ ವೈರಾಗ್ಯ ಗಳಿಸಲಿಕ್ಕಿತ್ತು ಪರಿಶ್ರಮ

ಅದೆಲ್ಲಿದ್ದೆ? ಅದೆಲ್ಲಿಂದ ಬಂದೆ ನೀ ಗೆಳೆಯ
ತಲೆಕೆಳಗಾಗಿಸಿ ನನ್ನೆಲ್ಲಾ ಯೋಜನೆಯ
ಹುಸಿ ನಗೆಯ ಬೀರಿ ಮನವನ್ನೇಕೆ ಸೆಳೆದೆ?
ಕಣ್ಣಲ್ಲೇ ಕರೆದೆ ಎದೆಯಲ್ಲಿ ಕಾಲೂರಿದೆ..!!

ಶಿಶಿರದ ಬೋಳು ಮರದಂತಿದ್ದ ಭಾವನೆಯ
ವಸಂತದ ಎಳೆ ಚಿಗುರಂತೆ ಪಲ್ಲವಿಸಿದೆ
ಬರಡು ಭಾವವ ಬಡಿದೆಬ್ಬಿಸಿ ನಲಿಸಿ
ತಳಿರುಂಡ ಕೋಕಿಲದ ಗಾನವಾಗಿಸಿದೆ

ನಿನ್ನ ಮೋಹಕ ನಗೆಯ ಮಾಯಾಜಾಲ
ಕದಡಿ ಹರಡಿದೆ ನನ್ನೆದೆ ಕಡಲ
ಮುತ್ತಿನಚಿಪ್ಪಲ್ಲಿ ಅವಿತಿದ್ದ ಮನದ ಮೀನು
ಸಿಕ್ಕಿ ಬಿದ್ದಿತಲ್ಲೋ ನೀ ಹಾಕಿದ ಗಾಳಕೆ ತಾನು

ನೋಡೀಗ, ಮನ ಜೀವನವೆಲ್ಲ ನಿನ್ನಂಗೈಯಲ್ಲಿ
ನಾ ನಲಿದೆ ನೀ ಸುರಿಸಿದ ಒಲವ ಮಳೆಯಲ್ಲಿ
ಸುಳಿಯದೆಂದೆಂದಿಗೂ ನಮ್ಮಿಬ್ಬರಲ್ಲಿ ಕೋಪ ತಾಪ
ಗೆಳೆಯ ನೀನಾದೆ ನನ್ನ ಬಾಳಿನ ನಂದಾದೀಪ

             ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು