142. ಅಯೋಮಯ

ನಾಗೇಶ್ ಮೈಸೂರು ಅವರ "ಅಯೋಮಯ" ಕವಿತೆಯಿಂದ ಪ್ರೇರಿತ.😊

ಅಯೋಮಯ
*************

ಕೊಡ ಬಿದ್ದರೂ ಆಕಡೆಗೆ ಗಮನವಿಲ್ಲ
ಮನದಲ್ಲಿ ನೆನಪ ಸಂತೆ ಸದಾ ನಿನದೇ ನಲ್ಲ
ಅಲೆಯುತ್ತಿದೆ ಮನ ನಿನ್ನ ಬೆನ್ನಟ್ಟಿ
ತೋಚಲಿಲ್ಲ ಏನೂ ನಿಂತೆ ಕೈಕಟ್ಟಿ

ಕೊಡ ಜಾರಿ ಬಿದ್ದದ್ದೇಕೋ ಕಾಣೆ
ಬಳುಕುವ ನಡುವ ಭಾರ ಹೆಚ್ಚಾಯಿತೇ
ಮನ ಸಡಲಿ ತನು ಬಿದ್ದರೇನು ಗತಿ?
ಪ್ರಾಯ ಮಾಗಿ ತನುಮನ ಹಣ್ಣಾಯಿತೇ?

ಮನವಾವರಿಸಿದ್ದ ನಿನ್ನ ಮೂರ್ತ ರೂಪ
ಹೀಗೇಕೆ ಕಾಡುತಿದೆ ನಿತ್ಯ ಅನವರತ
ಬಿಟ್ಟೆಲ್ಲ ಕೆಲಸಗಳ ಮಂಕಾಗಿ ನಾ ನಿಂತೆ
ಕಾಣಿಸದೇಕೋ ಕಾಣೆ ನನ್ನ ಸ್ವಗತ

ದಾರಿಕಾಯುತ ನಿಂತೆ ನಿನ್ನ ಬರುವಿಗಾಗಿ
ಮನದ ಚಡಪಡಿಕೆ ತಳಮಳ ಕಾಣದೇನು?
ನಿಂತಲ್ಲೇ ಕಲ್ಲಾದೆ ನಿನ್ನ ಕಾಣಲಾರದೇ
ದಹಿಸುತ್ತಿದೆ ವಿರಹಾಗ್ನಿ ಬಲ್ಲೆಯೇನು?

ಜಾರಿಬಿದ್ದ ಕೊಡದಂತೆಯೇ ಜಾರಿತೀ ಮನಸು
ಸೆಳೆದೆಳೆವ ನಿನ್ನ ನವಿರು ಪ್ರೇಮದೊಳಗೆ
ಅಲೆದಾಡುತಿರುವ ಮನವ ನಿಲ್ಲಿಸು ಬಾ
ತಲ್ಲೀನವಾಗುವಾಸೆ ನಿನ್ನ ಪ್ರೀತಿಯೊಳಗೆ...
                     ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು