102 ವೇಷ

ವೇಷ

ಜಗನ್ನಾಟಕದ ಬೃಹತ್ ಪರದೆಯಲಿ
ಒಬ್ಬೊಬ್ಬರದೊಂದೊಂದು ವೇಷ
ಸಹಜತೆಯ ಮುಚ್ಚಿಟ್ಟು ಅಭಿನಯಿಸುತಿಹರು
ಚಪ್ಪಾಳೆ ಗಿಟ್ಟಿಸಲು ವಿಕೃತ ಮನದ ವೇಷ

ಒಳಗೆ ಅರಿಷಡ್ವರ್ಗಗಳ ದಾಸಾನುದಾಸ
ಆಹಾ.. ಮೇಲೆನಿತು ಸಭ್ಯತೆಯ ವೇಷ.!!
ಇದಿರಲಿದ್ದವರ ಕಾಲ ತುಳಿತದಲಿ ಹೊಸಕಿ
ವಿಜೃಂಭಿಸುತಿಹುದು ಪ್ರಾಮಾಣಿಕತೆಯ ವೇಷ

ತುತ್ತನ್ನ, ಗೇಣು ಬಟ್ಟೆಗಾಗಿ ಧರಿಸುತ್ತ ಮನುಜ
ಕಪಟ ನಾಟಕದ ವರ್ಣರಂಜಿತ ವೇಷ
ವ್ಯಾಘ್ರನಂತೆ ಹೀರುತ್ತಾ ಬಡವರ ನೆತ್ತರ
ಮೇಲ್ನೋಟಕ್ಕೆ ಸಾಧು ಪುಣ್ಯಕೋಟಿಯ ವೇಷ

ನಗುಮೊಗದ ಹಿಂದಿಹುದು ವಿಷವಿಕ್ಕುವ ಗುಣ
ಮಾನವತೆಗೆಲ್ಲಿದೆ ಬೆಲೆ? ಮೆರೆದಿದೆ ಹಣ
ಸುಳ್ಳು ಮೊಸದಾರ್ಭಟಕೆ ಜಗವೆಲ್ಲ ಮರೆಯಲು
ಸತ್ಯ ಮುಸುಕೊದ್ದು ಮಲಗಿದೆ ಹೆದರಿ ಹೊರಬರಲು

ಎಷ್ಟು ದಿನ ಈ ಕಪಟ? ಕಳಚಲಾರದೆ ವೇಷ?
ಗೆದ್ದೇ ಗೆಲ್ಲುವುದೊಮ್ಮೆ ತಲೆಎತ್ತಿ ನಿತ್ಯ ಸತ್ಯ
ವೇಷ ಕಳಚಿದ ಮೇಲೆ ವಾಸ್ತವದನಾವರಣ
ಕಾಲ ಮರೆಸುವುದು ಹಾಗೇ ನೀನಿದ್ದುದೇ ಮಿಥ್ಯ

ಅರಿಯಬೇಕು ಮನುಜ ವಾಸ್ತವತೆಯನೊಪ್ಪಿ
ಕಪಟವಿಲ್ಲದ ಶುದ್ಧ ನಡೆನುಡಿಯನಪ್ಪಿ
ಇಂದೋ ನಾಳೆಯೋ ಮಣ್ಣನಪ್ಪುವ ಈ ಜೀವ
ಸಾರ್ಥಕ್ಯದಲಿ ಬದುಕಿದರೆ ಆ ದೇವ ಕಾವ

              ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು